ಸುಪ್ರೀಂ ಕೋರ್ಟ್ ತನ್ನ ವಿಶೇಷಾಧಿಕಾರ, ಸಂವಿಧಾನದ ಆರ್ಟಿಕಲ್ 142 ಬಳಸಿ ರಾಜೀವ್ ಗಾಂಧಿ ಹತ್ಯೆ ಆರೋಪಿ ಪೆರಾರಿವೇಲನ್‌ನನ್ನು ಬಿಡುಗಡೆ ಮಾಡಿದೆ. ಈಗ, ಜೈಲಿನಲ್ಲಿರುವ ಇನ್ನೂ ಆರು ಮಂದಿ ಅಪರಾಧಿಗಳೂ ಹೀಗೇ ಬಿಡುಗಡೆ ಆಗ್ತಾರಾ ಎಂಬ ಚರ್ಚೆ ಎದ್ದಿದೆ.
ಯಾವುದು ಆ ವಿಶೇಷ ಅಧಿಕಾರ?
ಸಂವಿಧಾನದ 142ನೇ ಆರ್ಟಿಕಲ್ ಪ್ರಕಾರ ಸುಪ್ರೀಂ ಕೋರ್ಟ್‌ಗೆ ಒಂದು ವಿಶೇಷ ಅಧಿಕಾರ ಪ್ರಾಪ್ತವಾಗಿದೆ. ತನ್ನ ಮುಂದಿರುವ ಯಾವುದೇ ಕೇಸ್‌ಗೆ ಸಂಬಂಧಿಸಿದಂತೆ, ಅದಕ್ಕೆ ಸಂಪೂರ್ಣ ನ್ಯಾಯ ಒದಗಿಸಲು, ಈಗ ಇರುವ ಯಾವುದೇ ಕಾನೂನಿನಿಂದಲೂ ಸಾಧ್ಯವಾಗದೇ ಹೋದರೆ, ಈ ಅಧಿಕಾರವನ್ನು ಕೋರ್ಟ್ ಬಳಸಬಹುದು. ಕ್ಷಮಾದಾನದ ಕುರಿತ ಅರ್ಜಿಯ ಬಗ್ಗೆ ನಿರ್ಧಾರ ತೆಗೆದುಕೊಳ್ಳೋಕೆ ರಾಜ್ಯಪಾಲರು ತುಂಬಾ ಸಮಯ ತೆಗೆದುಕೊಂಡಿದ್ದಾರೆ. ಈಗಾಗಲೇ ಪೆರಾರಿವೇಲನ್ 30 ವರ್ಷಗಳನ್ನು ಜೈಲಿನಲ್ಲಿ ವಿನಾಕಾರಣ ಕಳೆದಿದ್ದಾನೆ. ಇನ್ನಷ್ಟು ಸಮಯ ಇದೊಂದೇ ಪ್ರಕರಣದಲ್ಲಿ ತೆಗೆದುಕೊಳ್ಳಲು ಸಾಧ್ಯವಿಲ್ಲ. ಇನ್ನೆಷ್ಟು ವರ್ಷ ಜಾಮೀನು ನೀಡುತ್ತಾ ಇರಲು ಸಾಧ್ಯ- ಎಂದು ಕೋರ್ಟ್ ಪ್ರಶ್ನಿಸಿದೆ. ಈ ಹಿಂದೆಯೂ ಈ ವಿಶೇಷ ಅಧಿಕಾರವನ್ನು ಸುಪ್ರೀಂ ಕೋರ್ಟ್ ಬಳಸಿದ ಉದಾಹರಣೆ ಇದೆ. ಉದಾಹರಣೆಗೆ ಅಯೋಧ್ಯೆ ಶ್ರೀರಾಮಜನ್ಮಭೂಮಿ ಪ್ರಕರಣದಲ್ಲಿ ಕೋರ್ಟ್ ಇದನ್ನು ಬಳಸಿತ್ತು.
ನಳಿನಿ ಕೂಡ ಜೈಲಿನಿಂದ ಮುಕ್ತಿ ಪಡೆಯಬಹುದಾ?
ಕಾನೂನು ತಜ್ಞರು, ನ್ಯಾಯವಾದಿಗಳು ಮತ್ತಿತರರು ಈ ನಿಟ್ಟಿನಲ್ಲಿ ಈಗ ಯೋಚನೆ ಮಾಡ್ತಿದಾರೆ. ಪೆರಾರಿವೇಲನ್‌ಗೆ ಅನ್ವಯ ಆಗಿರುವ ನ್ಯಾಯ ಇತರರಿಗೂ ಅನ್ವಯ ಆಗಬೇಕಲ್ವೇ? ಎಲ್ಲರಲ್ಲೂ ಸಾಮಾನ್ಯವಾಗಿ ಇರುವ ಅಂಶ ಎಂದರೆ ಎಲ್ಲರೂ ಮೂವತ್ತು ವರ್ಷಕ್ಕೂ ಹೆಚ್ಚು ಕಾಲದಿಂದ ಜೈಲಿನಲ್ಲಿ ಇದ್ದಾರೆ.
ಇದನ್ನೂ ಓದಿ : Explainer: ರಾಜೀವ್ ಗಾಂಧಿ ಹತ್ಯೆ ಆರೋಪಿ ಪೆರಾರಿವೇಲನ್ ಜೈಲಿನಿಂದ ಬಿಡುಗಡೆ ಆಗಿದ್ದು ಯಾಕೆ?
ಪೆರಾರಿವೇಲನ್ ಜೊತೆಗೆ ಇನ್ನೂ ಐವರು ಜೀವಾವಧಿ ಶಿಕ್ಷೆಗೆ ಒಳಗಾಗಿ ಇನ್ನೂ ಜೈಲಿನಲ್ಲಿ ಇದ್ದಾರೆ. ನಳಿನಿ, ಆಕೆಯ ಗಂಡ ಮುರುಗನ್, ಸಂತಾನ್, ರವಿಚಂದ್ರನ್, ಜಯಕುಮಾರ್ ಮತ್ತು ರಾಬರ್ಟ್ ಪ್ಯಾಸ್. ಇವರೆಲ್ಲರಿಗೂ ನೀಡಲಾಗಿದ್ದ ಮರಣದಂಡನೆ ಶಿಕ್ಷೆಯನ್ನು 2014ರಲ್ಲಿ ಸುಪ್ರೀಂ ಕೋರ್ಟ್ ಜೀವಾವಧಿ ಶಿಕ್ಷೆಗೆ ಇಳಿಸಿತ್ತು. ಇದಕ್ಕೂ ಮೊದಲು, 2000ನೇ ಇಸವೀಲಿ ರಾಜೀವ್ ಗಾಂಧಿ ಪತ್ನಿ ಸೋನಿಯಾ ಗಾಂಧಿ ಅವರು, ನಳಿನಿಗೆ ಕ್ಷಮಾದಾನ ನೀಡುವಂತೆ ಕೋರ್ಟ್‌ಗೆ ಮನವಿ ಮಾಡಿಕೊಂಡಿದ್ದರು.
ನಳಿನಿ ವಿರುದ್ಧ ಸಾಕ್ಷ್ಯಗಳು ಬಲವಾಗಿವೆ. ಹತ್ಯೆಯ ಸಂದರ್ಭದಲ್ಲಿ ಸ್ಥಳದಲ್ಲಿ ಸಿಕ್ಕಿದ ಹರಿಬಾಬು ಕ್ಯಾಮೆರಾದಲ್ಲಿ ಶಿವರಾಸನ್, ಶುಭಾ, ಧನು ಜೊತೆಗೆ ನಳಿನಿಯ ಫೋಟೋ ಕೂಡ ಇದೆ. ಇದಕ್ಕೂ ಮೊದಲು ಯತಿರಾಜನ್ ಕಾಲೇಜಿನಲ್ಲಿ ಈಕೆ ಇಂಗ್ಲಿಷ್ ಲಿಟರೇಚರ್ ಕಲಿಸೋ ಶಿಕ್ಷಕಿ ಆಗಿದ್ದಳು. 1991ರಲ್ಲಿ ಗಂಡ ಮುರುಗನ್ ಜೊತೆಗೆ ಬಂಧನಕ್ಕೆ ಒಳಗಾದಾಗಲೇ ನಳಿನಿ ಗರ್ಭವತಿಯಾಗಿದ್ದಳು. ನಂತರ ಜೈಲಿನಲ್ಲೇ ಆಕೆಗೆ ಹೆರಿಗೆಯಾಗಿತ್ತು. ಮಗುವಿಗೆ ಹರಿತ್ರಾ ಎಂದು ಹೆಸರಿಡಲಾಗಿದ್ದು, ಈಕೆ ಬಾಲ್ಯದ ನಾಲ್ಕು ವರ್ಷಗಳನ್ನು ಜೈಲಿನಲ್ಲೇ ಕಳೆದಿದ್ದಳು. ಮುಂದೆ ಹರಿತ್ರಾ ಕೊಯಮತ್ತೂರಿನಲ್ಲಿ ಶಿಕ್ಷಣ ಪಡೆದು, ಲಂಡನ್‌ಗೆ ತೆರಳಿದ್ದಳು. ಈಗ ವೈದ್ಯಕೀಯ ಶಿಕ್ಷಣ ಮುಗಿಸಿ ಡಾಕ್ಟರ್ ಆಗಿ ಲಂಡನ್‌ನಲ್ಲೇ ನೆಲೆಸಿದ್ದಾಳೆ. ಆದ್ರೆ ಆಕೆಯ ತಾಯಿ ನಳಿನಿ ಮಾತ್ರ ಜೈಲಿನಲ್ಲೇ ಕೊಳೆಯುತ್ತಿದ್ದಾಳೆ.
ನಳಿನಿಯ ಗಂಡ ಮುರುಗನ್ ಶ್ರೀಲಂಕಾದ ಪ್ರಜೆ. ವೆಲ್ಲೂರಿನ ಜೈಲಿನಲ್ಲಿರೋ ಈತ ಹದಿನೈದು ದಿನಕ್ಕೊಮ್ಮೆ ನಳಿನಿಯನ್ನು ಭೇಟಿಯಾಗಲು ಅವಕಾಶವಿದೆ. ಕಳೆದ ಮೂವತ್ತು ವರ್ಷಗಳಿಂದ ಜೈಲಿನಲ್ಲಿರೋ ನಳಿನಿಗೆ ಎರಡು ಬಾರಿ ಮಾತ್ರ ಹೊರಗೆ ಬರೋಕೆ ಪೆರೋಲ್ ಸಿಕ್ಕಿದ್ದು, ಈಕೆ ಭಾರತದ ಅತಿ ದೀರ್ಘ ಕಾಲ ಜೈಲಿನಲ್ಲಿರುವ ಮಹಿಳಾ ಕೈದಿ ಎಂಬ ಕುಖ್ಯಾತಿ ಪಡೆದಿದ್ದಾಳೆ. ಇತ್ತೀಚೆಗೆ ತಮಗೆ ದಯಾಮರಣ ಕೊಡಿ ಎಂದು ಆಗ್ರಹಿಸಿ ಗಂಡ ಹೆಂಡತಿ ಇಬ್ಬರೂ ಪ್ರಧಾನಿಗಳಿಗೆ ಪತ್ರ ಬರೆದಿದ್ದರು.
ಇದನ್ನೂ ಓದಿ: ರಾಜೀವ್ ಹತ್ಯೆ: ಬ್ಯಾಟರಿ ತಂದುಕೊಟ್ಟಿದ್ದ ಪೆರಾರಿವಾಲನ್ 32 ವರ್ಷ ಬಳಿಕ ಬಂಧಮುಕ್ತ
2008ರಲ್ಲಿ ಪ್ರಿಯಾಂಕ ಗಾಂಧಿ ಅವರು ನಳಿನಿಯನ್ನು ಜೈಲಿನಲ್ಲಿ ಭೇಟಿಯಾಗಿದ್ದರು. ‘ʼನನ್ನ ತಂದೆಯನ್ನು ನೀವು ಕೊಂದದ್ದೇಕೆ? ನಿಮ್ಮ ಹಿಂದೆ ಯಾರಿದ್ದಾರೆ ಎಂದು ಪ್ರಿಯಾಂಕ ಪದೇ ಪದೇ ಕೇಳುತ್ತಿದ್ದರು. ನಾನು ಅಮಾಯಕಿ ಎಂದುದನ್ನು ಕೇಳಿಸಿಕೊಳ್ಳಲು ಅವರು ಸಿದ್ಧರಿರಲಿಲ್ಲʼʼ ಎಂದು ನಳಿನಿ ಹೇಳಿಕೊಂಡಿದ್ದಾರೆ. ತನ್ನ ತಂದೆಯ ಕೊಲೆಗಾರರನ್ನು ತಾವು ಕ್ಷಮಿಸಿದ್ದೇವೆ ಎಂದು ಈ ಹಿಂದೆ ರಾಹುಲ್ ಗಾಂಧಿ ಅವರು ಹೇಳಿದ್ದರು. ನಳಿನಿ ಆತ್ಮಕತೆ ಬರೆದಿದ್ದಾಳೆ. ಪೆರಾರಿವೇಲನ್ ಕೂಡ ಆತ್ಮಕತೆ ಬರೆದಿದ್ದಾನೆ. ಇವರಿಬ್ಬರೂ ತಾವು ಅಮಾಯಕರು, ತಮಗೂ ಹತ್ಯೆ ಸಂಚಿಗೂ ಸಂಬಂಧವಿಲ್ಲ ಎಂದು ಬರೆದುಕೊಂಡಿದ್ದಾರೆ. ಸ್ವತಃ ನಳಿನಿ ಒಳ್ಳೇ ಉದ್ಯೋಗದಲ್ಲಿ ಶಿಕ್ಷಕಿಯಾಗಿದ್ದಳು. ಆದ್ರೆ ಈ ಹತ್ಯೆ ಸಂಚಿನಲ್ಲಿ ಸಿಕ್ಕುಹಾಕಿಕೊಂಡು ಮೂರು ದಶಕಗಳಿಂದ ಜೈಲಿನಲ್ಲಿದ್ದಾಳೆ.
ಪೆರಾರಿವೇಲನ್‌ಗೆ ಅಪ್ಲೈ ಆಗಿರೋ ಆರ್ಟಿಕಲ್ 142 ನಳಿನಿಗೆ, ಇತರರಿಗೆ ಅನ್ವಯ ಆಗುತ್ತಾ? ಪೆರಾರಿವೇಲನ್ ವಿಚಾರದಲ್ಲಿ ಪೊಲೀಸ್ ಅಧಿಕಾರಿ ನೀಡಿದ ಹೇಳಿಕೆಯಿಂದಾಗಿ ಸುಪ್ರೀಂ ಕೋರ್ಟಿಗೆ ಆತನ ಬಗ್ಗೆ ಕರುಣೆ ಮೂಡಿರಬಹುದು. ಆದರೆ ಇತರರ ವಿಷಯದಲ್ಲಿ ಹಾಗೆ ಆಗೋಕೆ ಚಾನ್ಸೇ ಇಲ್ಲ. ಹೀಗಾಗಿ ಉಳಿದವರ ರಿಲೀಸ್ ಆಗೋಕೆ ಸಾಧ್ಯವಿಲ್ಲ ಅಂತಾನೂ ಹೇಳಲಾಗುತ್ತೆ. ಮುಂದೇನಾಗುತ್ತೆ ಅನ್ನೋದನ್ನು ಕಾದು ನೋಡಬೇಕಿದೆ.