ನವ ದೆಹಲಿ: ಹೋಮ್‌ವರ್ಕ್ ಮಾಡದ ಮಗಳನ್ನು ಆಕೆಯ ತಾಯಿ ಬಿಸಿಲಿನಿಂದ ಸುಡುವ ಟೆರೇಸ್‌ನಲ್ಲಿ ಕಟ್ಟಿಹಾಕಿದ ಅಮಾನವೀಯ ಘಟನೆ ಈಶಾನ್ಯ ದೆಹಲಿಯಲ್ಲಿ ನಡೆದಿದೆ. ಆಸುಪಾಸಿನವರು ಈ ಘಟನೆಯನ್ನು ವಿಡಿಯೋ ಚಿತ್ರೀಕರಣ ಮಾಡಿಕೊಂಡಿದ್ದು, ಪೊಲೀಸರು ಈ ಕುರಿತು ವಿಚಾರಣೆ ಆರಂಭಿಸಿದ್ದಾರೆ.
ಬುಧವಾರ ಬೆಳಗ್ಗೆ ಈಶಾನ್ಯ ದೆಹಲಿಯಲ್ಲಿ ಈ ಘಟನೆ ನಡೆದಿದೆ. ಹೋಮ್‌ವರ್ಕ್ ಮಾಡದಿದ್ದ ಐದು ವರ್ಷದ ಬಾಲಕಿಯನ್ನು ಆಕೆಯ ತಾಯಿ ಕಟ್ಟಿಹಾಕಿ ಮನೆಯ ಛಾವಣಿಯ ಮೇಲೆ ಬಿಟ್ಟಿದ್ದಳು. ಹುಡುಗಿಯ ಕೈ ಮತ್ತು ಕಾಲುಗಳನ್ನು ಹಗ್ಗದಿಂದ ಕಟ್ಟಲಾಗಿತ್ತು. ಬಿಸಿಲಿನಿಂದ ಕಾದು ಸುಡುತ್ತಿದ್ದ ಟೆರೇಸ್‌ನಲ್ಲಿ ಆಕೆ ಬಿಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಳು ಹಾಗೂ ಬಿಸಿ ತಡೆಯದೆ ನರಳುತ್ತಿದ್ದಳು. ಇದನ್ನು ಸ್ಥಳೀಯರು ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಂಡಿದ್ದರು.
ಈ ವಿಡಿಯೋ ಪೊಲೀಸರನ್ನು ತಲುಪಿದ್ದು, ಪೊಲೀಸರು ಈ ಕುಟುಂಬವನ್ನು ಪತ್ತೆಹಚ್ಚಿ ಪೋಷಕರ ವಿರುದ್ಧ ವಿಚಾರಣೆಯನ್ನು ಪ್ರಾರಂಭಿಸಿದ್ದಾರೆ.
ಶಾಲೆಯ ಹೋಮ್‌ವರ್ಕ್ ಮಾಡದಿದ್ದಕ್ಕಾಗಿ ಶಿಕ್ಷೆಯ ಭಾಗವಾಗಿ ಬಾಲಕಿಯನ್ನು ಟೆರೇಸ್ ಮೇಲೆ ಕಟ್ಟಿ ಹಾಕಲಾಗಿತ್ತು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಈಶಾನ್ಯ ದೆಹಲಿ ಡಿಸಿಪಿ ಸಂಜಯ್ ಸೈನ್ ತಿಳಿಸಿದ್ದಾರೆ. ವಿಡಿಯೋ ವೈರಲ್ ಆಗುತ್ತಿರುವುದನ್ನು ತಿಳಿದುಕೊಂಡ ಪೊಲೀಸರು ಖಜೂರಿ ಖಾಸ್ ಮತ್ತು ಕರವಾಲ್ ನಗರಗಳಿಗೆ ತಂಡ ಕಳಿಸಿ ಬಾಲಕಿಯನ್ನು ಪತ್ತೆ ಹಚ್ಚಿದ್ದರು.
ಬಾಲಕಿಯ ತಂದೆ ಟೈಲರ್ ಕೆಲಸ ಮಾಡುತ್ತಿದ್ದು, ಘಟನೆ ನಡೆದಾಗ ಮನೆಯಲ್ಲಿ ಇರಲಿಲ್ಲ. ಬಾಲಕಿಯ ತಾಯಿ ಗೃಹಿಣಿ. ಪ್ರಕರಣ ದಾಖಲಿಸಿಕೊಂಡಿದ್ದು, ಯಾರನ್ನೂ ಬಂಧಿಸಿಲ್ಲ.
ಇದನ್ನೂ ಓದಿ: ಕೋತಿಗಳ ಮುಂದೆ ಮಂಗಾಟ ಮಾಡುವ ಮುನ್ನ ಈ ವೈರಲ್ ವಿಡಿಯೋ ನೋಡಿ