ಹೊಸದಿಲ್ಲಿ: ಮಾಜಿ ಸಚಿವ ಎಚ್‌ಡಿ ರೇವಣ್ಣ (HD Revanna) ಪತ್ನಿ ಭವಾನಿ ರೇವಣ್ಣ (Bhavani Revanna) ಅವರಿಗೆ ಮತ್ತೆ ಸಂಕಷ್ಟ ಶುರುವಾಗಿದೆ. ಭವಾನಿ ಅವರ ನಿರೀಕ್ಷಣಾ ಜಾಮೀನು (Anticipatory Bail) ಕುರಿತ ಅರ್ಜಿ ಇಂದು ಸುಪ್ರೀಂ ಕೋರ್ಟ್ (Supreme Court) ಮುಂದೆ ವಿಚಾರಣೆಗೆ ಬರಲಿದೆ.
ಕಿಡ್ನಾಪ್ ಪ್ರಕರಣದಲ್ಲಿ ಭವಾನಿ ರೇವಣ್ಣ ಹೈಕೋರ್ಟ್‌ನಿಂದ ಷರತ್ತುಬದ್ಧ ನಿರೀಕ್ಷಣಾ ಜಾಮೀನು ಪಡೆದಿದ್ದರು. ನಿರೀಕ್ಷಣಾ ಜಾಮೀನು ರದ್ದುಗೊಳಿಸಲು ಕೋರಿ ಎಸ್‌ಐಟಿ ಸುಪ್ರೀಂ ಕೋರ್ಟ್‌ಗೆ ಬಂದಿದೆ. ಇಂದು ಸುಪ್ರೀಂ ಕೋರ್ಟ್‌ನಲ್ಲಿ ಈ ಅರ್ಜಿ ವಿಚಾರಣೆ ನಡೆಯಲಿದೆ.
ನ್ಯಾ.ಸೂರ್ಯಕಾಂತ್ ನೇತೃತ್ವದ ದ್ವಿಸದಸ್ಯ ಪೀಠದ ಮುಂದೆ ಅರ್ಜಿ ವಿಚಾರಣೆಗೆ ಬರಲಿದೆ. ಎಸ್ಐಟಿ ತಂಡ ದೆಹಲಿಯಲ್ಲಿ ಬೀಡು ಬಿಟ್ಟಿದ್ದು, ಜಾಮೀನು ರದ್ದುಗೊಳಿಸಲು ಹಾಗೂ ರದ್ದಾದರೆ ಕೂಡಲೇ ಭವಾನಿ ಅವರನ್ನು ಬಂಧಿಸಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದೆ. ನಿರೀಕ್ಷಣಾ ಜಾಮೀನು ರದ್ದಾದರೆ ಭವಾನಿ ರೇವಣ್ಣ ಅವರನ್ನು ಪೊಲೀಸರು ಕೂಡಲೇ ವಶಕ್ಕೆ ಪಡೆಯುವ ಸಾಧ್ಯತೆ ಇದೆ.
ಈಗಾಗಲೇ ಭವಾನಿ ರೇವಣ್ಣ ಅವರ ಇಬ್ಬರು ಮಕ್ಕಳು ಜೈಲಿನಲ್ಲಿದ್ದಾರೆ. ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ (Prajwal Revanna Case) ಪ್ರಕರಣದಲ್ಲಿ ಹಾಗೂ ಸೂರಜ್ ರೇವಣ್ಣ (Suraj Revanna Case) ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಜೈಲುಪಾಲಾಗಿದ್ದು, ಇಬ್ಬರಿಗೂ ಜಾಮೀನು ಸಿಕ್ಕಿಲ್ಲ.
ಮೂರು ವಾರಗಳ ಹಿಂದೆ ಹೈಕೋರ್ಟ್ ಪೀಠ ಭವಾನಿ ಅವರಿಗೆ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರ ಪೀಠ ನಿರೀಕ್ಷಣಾ ಜಾಮೀನು ನೀಡಿತ್ತು. “ಪೊಲೀಸರು ಮುಂದಿಟ್ಟ 85 ಪ್ರಶ್ನೆಗಳಿಗೆ ಭವಾನಿ ರೇವಣ್ಣ ಉತ್ತರಿಸಿದ್ದಾರೆ. ಹೀಗಾಗಿ ತನಿಖೆಗೆ ಸಹಕರಿಸಿಲ್ಲ ಎಂಬ ವಾದ ಒಪ್ಪಲಾಗುವುದಿಲ್ಲ. ಪೊಲೀಸರಿಗೆ ಬೇಕಾದಂತಹ ಉತ್ತರವನ್ನೇ ಕೊಡಬೇಕೆಂದಿಲ್ಲ” ಎಂದು ಕೋರ್ಟ್ ಪೀಠ ಹೇಳಿತ್ತು. “ಸಂತ್ರಸ್ತೆಗೆ ಭವಾನಿ ಊಟ, ಬಟ್ಟೆ ಕೊಟ್ಟಿಲ್ಲವೆಂಬ ವಾದವನ್ನೂ ಒಪ್ಪಲಾಗುವುದಿಲ್ಲ. ಅಕ್ಕ ಬಟ್ಟೆ ಊಟ ಕಳುಹಿಸಿದ್ದರೆಂದು ಸಂತ್ರಸ್ತೆ ಹೇಳಿಕೆಯಿದೆ” ಎಂದೂ ಕೋರ್ಟ್ ಗಮನಿಸಿತ್ತು.
ಆದರೆ, ಭವಾನಿ ರೇವಣ್ಣ ಅವರು ಮೈಸೂರು ಮತ್ತು ಹಾಸನ ಜಿಲ್ಲೆ ಪ್ರವೇಶಿಸುವಂತಿಲ್ಲ ಎಂಬ ಷರತ್ತನ್ನು ಹೈಕೋರ್ಟ್ ವಿಧಿಸಿತ್ತು. ತನಿಖೆಗೆ ಎಸ್‌ಐಟಿಗೆ ಸಹಕರಿಸಬೇಕು ಎಂದು ಆದೇಶಿಸಿತ್ತು. ಮಾಜಿ ಸಚಿವ ರೇವಣ್ಣ ಅವರಿಗೂ ದೇಶ ಬಿಟ್ಟು ಹೊರಹೋಗಬಾರದು ಎಂಬ ಆದೇಶ ವಿಧಿಸಲಾಗಿತ್ತು.
ಇದಕ್ಕೂ ಮುನ್ನ ಹೈಕೋರ್ಟ್ ಒಂದು ವಾರದ ಕಾಲ ಷರತ್ತುಬದ್ಧ ಮಧ್ಯಂತರ ಜಾಮೀನು ನೀಡಿದ ಬೆನ್ನಲ್ಲೇ ಎಸ್‌ಐಟಿ ವಿಚಾರಣೆಗೆ ಭವಾನಿ ಹಾಜರಾಗಿದ್ದರು. ಅಲ್ಲಿಯವರೆಗೂ ಭವಾನಿ ತಲೆಮರೆಸಿಕೊಂಡಿದ್ದರು. ಪ್ರಕರಣಕ್ಕೆ ಸಂಬಂಧಿಸಿ ನಿಯಮದ 41a ಅಡಿ ಭವಾನಿ ರೇವಣ್ಣಗೆ ಎಸ್ಐಟಿ ಕಚೇರಿಗೆ ವಿಚಾರಣೆಗೆ ಹಾಜರಾಗುವಂತೆ ನೊಟೀಸ್ ನೀಡಲಾಗಿತ್ತು. ತಾವು ಹೊಳೆನರಸೀಪುರದ ಮನೆಯಲ್ಲಿ ಸಿಗುವುದಾಗಿ ಭವಾನಿ ತಿಳಿಸಿದ್ದರು. ಇದಕ್ಕಾಗಿ ಎಸ್‌ಐಟಿ ಟೀಮ್ ಅಲ್ಲಿಗೆ ತೆರಳಿದಾಗ, ಭವಾನಿ ಅಲ್ಲಿರದೆ ಕಣ್ಮರೆಯಾಗಿದ್ದರು. ಹೀಗಾಗಿ ಭವಾನಿ ಬಂಧನಕ್ಕಾಗಿ ಆರೆಸ್ಟ್ ವಾರೆಂಟ್ ಜಾರಿ ಮಾಡಲಾಗಿತ್ತು.
ʼʼಸಂತ್ರಸ್ತೆ ನಮ್ಮ ಮನೆಯಲ್ಲಿ ಕೆಲಸ ಮಾಡುತ್ತಿದ್ದರು. ನಾನು ಅವರನ್ನು ಅಪಹರಣ ಮಾಡಿಸಿಲ್ಲ. ಆ ಪ್ರಕರಣಕ್ಕೂ ನನಗೂ ಸಂಬಂಧವಿಲ್ಲ. ನನ್ನನ್ನು ರಾಜಕೀಯವಾಗಿ ಮುಗಿಸಲು ಯಾರೋ ಸಂಚು ರೂಪಿಸಿದ್ದು, ಇದರ ಭಾಗವಾಗಿ ಈ ಆರೋಪ ಹೊರಿಸಲಾಗುತ್ತಿದೆʼʼ ಎಂದು ಭವಾನಿ ರೇವಣ್ಣ ಎಸ್‌ಐಟಿ ಅಧಿಕಾರಿಗಳ ಮುಂದೆ ಹೇಳಿದ್ದಾರೆ.
ಇದನ್ನೂ ಓದಿ: Suraj Revanna Case: ಸೂರಜ್ ರೇವಣ್ಣಗೇ ʼಹಿಂದಿನಿಂದ ಇರಿದವರುʼ ಯಾರು?