ಬೆಂಗಳೂರು: ಕೋಲ್ಕತ್ತಾದಲ್ಲಿ ಸಿಕ್ಕಿಬಿದ್ದಿರುವ ಬೆಂಗಳೂರಿನ ವೈಟ್‌ಫೀಲ್ಡ್‌ನ (Blast in Bengaluru) ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್‌ನ (Rameshwaram cafe Blast) ರೂವಾರಿಗಳಿಂದ ಒಂದೊಂದೇ ಮಾಹಿತಿಯನ್ನು ಎನ್‌ಐಎ (NIA) ಹೊರತೆಗೆಯುತ್ತಿದೆ. ಅದರ ಪ್ರಕಾರ, ಕೆಫೆ ಸ್ಫೋಟ ಕೇವಲ ಟ್ರಯಲ್ ಆಗಿತ್ತು, ಇನ್ನಷ್ಟು ಭೀಕರ ಸ್ಫೋಟಗಳಿಗೆ ಉಗ್ರರು ತಯಾರಿ ಮಾಡಿಕೊಂಡಿದ್ದರು ಎಂದು ಗೊತ್ತಾಗಿದೆ.
ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ಇನ್ನೂ ಹಲವು ರಾಜ್ಯಗಳಲ್ಲಿ ಮತ್ತಷ್ಟು ಬಾಂಬ್ ಸ್ಫೋಟಿಸುವ ಯೋಜನೆಯನ್ನು ಉಗ್ರರು ಹೆಣೆದಿದ್ದರು. ಬಾಂಬ್ ತಯಾರಿಕೆ ಬಗ್ಗೆ ಟ್ರೇನಿಂಗ್, ತಪ್ಪಿಸಿಕೊಳ್ಳುವ ಪ್ಲಾನ್, ಟ್ರ್ಯಾವೆಲ್ ಮ್ಯಾಪ್ ಮೊದಲೇ ಫಿಕ್ಸ್ ಮಾಡಿಕೊಂಡಿದ್ದರು. ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಪೋಟಿಸಿ ರಾಜ್ಯದಿಂದ ರಾಜ್ಯಕ್ಕೆ ಎಸ್ಕೇಪ್ ಆಗುತ್ತಾ 43 ದಿನ ತಲೆ ತಪ್ಪಿಸಿಕೊಂಡ ಖತರ್‌ನಾಕ್ ಉಗ್ರರು, ಮತ್ತೊಂದು ಸ್ಫೋಟಕ್ಕೆ ಪ್ಲಾನ್ ಮಾಡಿದ್ದರು ಎಂಬ ಮಾಹಿತಿಯೂ ಲಭ್ಯವಾಗಿದೆ.
ಶಂಕಿತ ಉಗ್ರರು ಬಾಂಬ್ ತಯಾರಿಸಿದ ಸ್ಥಳ ಯಾವುದು, ಸಹಾಯ ಮಾಡಿದವರು ಯಾರು, ರಾಮೇಶ್ವರಂ ಕೆಫೆಯನ್ನೇ ಯಾಕೆ ಆಯ್ಕೆ ಮಾಡಿಕೊಳ್ಳಲಾಗಿತ್ತು, ಇನ್ನಷ್ಟು ಸ್ಫೋಟಗಳನ್ನು ಎಲ್ಲಿ ಮಾಡಲು ಉದ್ದೇಶಿಸಲಾಗಿತ್ತು, ಎಷ್ಟು ತೀವ್ರತೆಯ ಸ್ಫೋಟಕ ಎಂಬ ಅಂಶಗಳನ್ನು ಎನ್‌ಐಎ ಬಯಲಿಗೆ ಎಳೆಯಲು ಮುಂದಾಗಿದ್ದಾರೆ.
ಪಶ್ಚಿಮ ಬಂಗಾಳದಲ್ಲೇ ಯಾಕೆ?
ಸ್ಫೋಟ ನಡೆಸಿದ ಉಗ್ರರಿಬ್ಬರೂ ಪಶ್ಚಿಮ ಬಂಗಾಳದಲ್ಲಿ ತಲೆ ಮರೆಸಿಕೊಂಡಿದ್ದರು. ಚೆನ್ನೈಯಲ್ಲಿ ವಿಘ್ನೇಶ್, ಕೋಲ್ಕತ್ತಾದಲ್ಲಿ ಅನ್ಮೂಲ್ ಕುಲಕರ್ಣಿ ಮುಂತಾದ ನಕಲಿ ಹೆಸರುಗಳಿಂದ ಮೋಸ್ಟ್ ವಾಂಟೆಡ್ ಅಬ್ದುಲ್ ಮತೀನ್ ತಾಹ (Abdul Matheen Taha)ತಲೆ ಮರೆಸಿಕೊಂಡಿದ್ದ. ಇನ್ನು ಬಾಂಬ್ ಇಟ್ಟ ಮುಸಾವೀರ್ ಹುಸೇನ್ ಶಾಜೀಬ್ (Mussavir Hussain Shazeb), ಚೆನ್ನೈಯಲ್ಲಿ ಮಹಮ್ಮದ್ ಜುನೈದ್ ಸೈಯದ್, ಕೋಲ್ಕತ್ತಾದಲ್ಲಿ ಯುಶು ಶಹನವಾಜ್ ಪಾಟೀಲ್ ಇತ್ಯಾದಿ ಹೆಸರುಗಳನ್ನಿಟ್ಟುಕೊಂಡು ಓಡಾಡುತ್ತಿದ್ದ. ಹೀಗೆ ಹೀಗೆ ಒಂದೊಂದು ಕಡೆ ಒಂದೊಂದು ಹೆಸರಲ್ಲಿ ಆರೋಪಿಗಳು ಓಡಾಡುತ್ತಿದ್ದರು.
ತಮ್ಮ ಗುರುತು ಮರೆಮಾಚಲು ಇವರು ನಕಲಿ ಅಧಾರ್ ಕಾರ್ಡ್ ಬಳಕೆ ಮಾಡುತ್ತಿದ್ದರು. ಕೊನೆಗೂ ಈ ನಕಲಿ ಕಾರ್ಡ್ ಬಳಕೆಯೇ ಆರೋಪಿಗಳ ಬಂಧನದ ಮುಖ್ಯ ಕಾರಣಗಳಲ್ಲಿ ಒಂದಾಗಿದೆ. ಪಶ್ಚಿಮ ಬಂಗಾಳದಲ್ಲಿ ನಕಲಿ ಆಧಾರ್ ಕಾರ್ಡ್ ಬಳಕೆದಾರರ ಸಂಖ್ಯೆ ಹೆಚ್ಚಿದೆ. ಒಡಿಶಾ ಹಾಗೂ ಪಶ್ಚಿಮ ಬಂಗಾಳದಲ್ಲಿರುವ ಅಕ್ರಮ ಬಾಂಗ್ಲಾ ವಲಸಿಗರು ಹೆಚ್ಚಾಗಿ ನಕಲಿ ಆಧಾರ್ ಕಾರ್ಡ್ ಬಳಸುತ್ತಿದ್ದು, ಇದು ವ್ಯಾಪಕವಾಗಿದೆ. ಹೀಗಾಗಿ ಇವರು ಇದೇ ಭಾಗಗಳಲ್ಲಿ ಇರಬಹುದು ಎನ್ನುವ ಶಂಕೆ ಇತ್ತು. ಇದೇ ಶಂಕೆಯ ಆಧಾರದಲ್ಲಿ ಎನ್‌ಐಎ ಕಾರ್ಯಾಚರಣೆ ಮುಂದುವರಸಿತ್ತು.
ಹಲವು ಲಾಡ್ಜ್‌ಗಳಲ್ಲಿ ವಾಸ
ಕಳೆದ 12 ದಿನಗಳಿಂದ ಕೋಲ್ಕತ್ತಾದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಗಳು, ಅಲ್ಲೂ ಒಂದೇ ಕಡೆ ಇರದೆ ಲಾಡ್ಜ್‌ಗಳನ್ನು ಬದಲಿಸುತ್ತಿದ್ದರು. ಕೋಲ್ಕತ್ತಾದ ಮಿಧಿನಾಪುರದ ಹಲವು ಲಾಡ್ಜ್‌ಗಳಲ್ಲಿ ತಂಗಿದ್ದ ಆರೋಪಿಗಳು ಪ್ರತಿ ಎರಡು ಮೂರು ದಿನಗಳಿಗೊಮ್ಮೆ ವಾಸ್ತವ್ಯ ಬದಲಿಸುತ್ತಿದ್ದರು. ಎರಡು ದಿನಗಳ ಹಿಂದೆಯಷ್ಟೆ ಮಿದ್ನಾಪುರ ದೀಘಾ ಬಳಿ ಲಾಡ್ಜ್ ಬದಲಾಯಿಸಿದ್ದ ಆರೋಪಿಗಳು ಕೋಲ್ಕತ್ತಾದ ಹೊಟೇಲ್ ಪ್ಯಾರಡೈಸ್, ಲೇನಿನ್ ಸೇರಾನಿ ಸೇರಿ ಹಲವು ಹೊಟೇಲ್‌ಗಳಲ್ಲಿ ತಂಗಿದ್ದರು.
ಸಂಜಯ್ ಅಗರವಾಲ್, ಉದಯ್ ದಾಸ್, ಯಶು ಪಟೇಲ್, ವಿಘ್ನೇಶ ಹೀಗೆ ನಾನಾ ನಕಲಿ ಹೆಸರುಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಮುಸಾವೀರ್ ಹುಸೇನ್ ಮಹಾರಾಷ್ಟದ ಪಾಲ್ಘಾರ್ ಜಿಲ್ಲೆಯ ನಕಲಿ ಆಧಾರ್ ಕಾರ್ಡ್ ನೀಡಿದ್ದ. ಕರ್ನಾಟಕದ ವಿಘ್ನೇಶ್ ಹಾಗೂ ಅಮೋಲ್ ಕುಲಕರ್ಣಿಣಿ ಹೆಸರಿನಲ್ಲಿ ಮತೀನ್ ತಾಹ ನಕಲಿ ದಾಖಲಾತಿ ನೀಡಿದ್ದ. ಹೊಟೇಲ್ ಸಿಬ್ಬಂದಿ ಬಳಿ ತಮ್ಮ ಹೆಸರುಗಳು ಸಂಜಯ್ ಅಗರ್‌ವಾಲ್ ಹಾಗು ಉದಯ್ ದಾಸ್ ಎಂದು, ತಾವು ಜಾರ್ಖಂಡ್ ಹಾಗು ತ್ರಿಪುರಾ ಮೂಲದವರು ಎಂದು ಹೇಳಿಕೊಂಡಿದ್ದರು.
ಬಾಂಬ್ ತಯಾರಿಸಿದವನು ತಾಹಾ
ರಾಮೇಶ್ವರಂ ಕೆಫೆ ಬಾಂಬ್ ತಯಾರಿಸಿದ್ದು ಅಬ್ದುಲ್ ಮತೀನ್ ತಾಹಾ ಎಂಬುದು ಗೊತ್ತಾಗಿದೆ. ಎಂಜಿನಿಯರಿಂಗ್ ಪದವೀಧರನಾಗಿದ್ದ ಅಬ್ದುಲ್ ತಾಹಾ, ಬಾಂಬ್ ತಯಾರಿಕೆ ಮಾಹಿತಿ ಹೊಂದಿದ್ದ. ಈತ ಇತರರಿಗೂ ಈ ವಿಷಯದಲ್ಲಿ ಟ್ರೇನಿಂಗ್ ನೀಡುತ್ತಿದ್ದ. ತಾಹಾ ತಯಾರಿ ಮಾಡಿಕೊಟ್ಟ ಬಾಂಬನ್ನೇ ರಾಮೇಶ್ವರಂ ಕೆಫೆಯಲ್ಲಿ ಮುಸಾವೀರ್ ಇಟ್ಟಿದ್ದ ಎಂದು ಗೊತ್ತಾಗಿದೆ. ಮುಸಾವೀರ್ ಹಾಗೂ ಅಬ್ದುಲ್ ತಾಹಾ ಇಬ್ಬರು ತೀರ್ಥಹಳ್ಳಿಯವರು.
ತೀರ್ಥಹಳ್ಳಿಯ ಮುಸಾವೀರ್ ಹುಸೇನ್ ಶಾಜೀಬ್
ಬಾಂಬ್ ಇಟ್ಟ ಮುಸಾವೀರ್ ಹುಸೇನ್ ಶಾಜೀಬ್ ತೀರ್ಥಹಳ್ಳಿಯ ಮಧ್ಯಮವರ್ಗದ ಕುಟುಂಬದವನಾಗಿದ್ದಾನೆ. ತೀರ್ಥಹಳ್ಳಿಯಲ್ಲಿ ತಾಯಿ ಮಾತ್ರ ವಾಸವಾಗಿದ್ದು, ಮನೆ ಬಾಡಿಗೆಯೇ ಮುಸಾವೀರ್ ಕುಟುಂಬಕ್ಕೆ ಆಧಾರವಾಗಿದೆ. ಈತ ಸಾಂಪ್ರದಾಯಿಕ ಉದ್ದನೆಯ ಬಿಳಿ ನಿಲುವಂಗಿಯಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದ. ಈತ ಸ್ಥಳೀಯರ ಜೊತೆ ಹೆಚ್ಚು ಬೆರೆಯುತ್ತಿರಲಿಲ್ಲ. ಸ್ಥಳೀಯರಿಗೆ ಹೆಚ್ಚು ಪರಿಚಯವಿಲ್ಲದ ಈತ ತನ್ನ ಸಮುದಾಯದವರು ಇರುವ ಒಂದೆರಡು ಸ್ಥಳಗಳಲ್ಲಿ ಮಾತ್ರ ಓಡಾಡುತ್ತಿದ್ದ.
ಮತೀನ್ ತಾಹನೇ ಮಾಸ್ಟರ್ ಮೈಂಡ್
ಕೆಫೆ ಬ್ಲಾಸ್ಟ್ ಮಾಸ್ಟರ್ ಮೈಂಡ್ ಆಗಿರುವ ಅಬ್ದುಲ್ ಮತೀನ್ ತಾಹಾನ ತಂದೆ ದೇಶಕ್ಕಾಗಿ ಹೋರಾಡಿದ ಯೋಧರಾಗಿದ್ದವರು. ವರ್ಷದ ಹಿಂದೆ ಅವರು ಮೃತಪಟ್ಟಿದ್ದಾರೆ. ತಾಹ ಅತ್ಯಂತ ಚುರುಕಾದ ಎಂಜಿನಿಯರಿಂಗ್ ಪದವೀಧರನಾಗಿದ್ದು, ತೀರ್ಥಹಳ್ಳಿಯಲ್ಲಿ ಪ್ರೌಡಶಾಲೆ ಮುಗಿಸಿ ಬೆಂಗಳೂರಲ್ಲಿ ಎಂಜಿನಿಯರಿಂಗ್ ಪದವಿ ಪಡೆದಿದ್ದ. ಬೆಂಗಳೂರಿಗೆ ಬಂದ ವೇಳೆ ಉಗ್ರರ ಸಂಪರ್ಕಕ್ಕೆ ಬಂದಿದ್ದ. ಪೋಷಕರಿಗೆ ಒಬ್ಬನೇ ಮಗನಾಗಿರುವ ಈತ ಐಇಡಿ ಬಾಂಬ್ ತಯಾರಿಕೆಯ ಎಕ್ಸ್‌ಪರ್ಟ್ ಆಗಿದ್ದ.
ಮಂಗಳೂರು ಕುಕ್ಕರ್ ಬ್ಲಾಸ್ಟ್, ಶಿವಮೊಗ್ಗ ಟ್ರಯಲ್ ಬ್ಲಾಸ್ಟ್‌ಗಳ ಮಾಸ್ಟರ್ ಮೈಂಡ್ ಕೂಡ ಆಗಿರುವ ಮತೀನ್ ತಾಹ ಕಳೆದ ನಾಲ್ಕು ವರ್ಷಗಳಿಂದ ನಾಪತ್ತೆಯಾಗಿದ್ದ. ಈ ಹಿಂದೆ ಎನ್ಐಎ ತಾಹನ ಪತ್ತೆಗೆ ಮೂರು ಲಕ್ಷ ರಿವಾರ್ಡ್ ಘೋಷಿಸಿತ್ತು. ರಾಮೇಶ್ವರಂ ಕೆಫೆ ಬ್ಲಾಸ್ಟ್ ನಂತರ ಹತ್ತು ಲಕ್ಷ ರಿವಾರ್ಡ್ ಘೋಷಿಸಲಾಗಿತ್ತು. ಇದೀಗ ಮುಸಾವೀರ್ ಜೊತೆಗೆ ಸಿಕ್ಕಿಬಿದ್ದಿದ್ದಾನೆ.
ಇದನ್ನೂ ಓದಿ: Rameshwaram Cafe Blast: ಬೆಂಗಳೂರಿಗೆ ಬಂದಿಳಿದ ರಾಮೇಶ್ವರಂ ಕೆಫೆ ಬಾಂಬರ್‌ಗಳು; ಮುಂದೇನು?