Site icon Vistara News

HD Revanna Case Jailed: ಎಚ್‌.ಡಿ ರೇವಣ್ಣ ಪರ ಸುದ್ದಿಗೋಷ್ಠಿ ನಡೆಸಿದ ನಾಲ್ವರ ಬಂಧನ; ಕಾರ್ತಿಕ್‌ ಬಂಧನಕ್ಕೂ ಕ್ಷಣಗಣನೆ

hd revanna jailed prajwal revanna case

ಮೈಸೂರು: ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರಿಂದ ಸಂತ್ರಸ್ತ ಮಹಿಳೆಯನ್ನು ಕಿಡ್ನಾಪ್‌ (Kidnap case) ಮಾಡಿಸಲಾಗಿದೆ ಎನ್ನಲಾದ ಪ್ರಕರಣದಲ್ಲಿ ಮತ್ತೆ ನಾಲ್ವರನ್ನು ಎಸ್ಐಟಿ (SIT) ಪೊಲೀಸರು ಬಂಧಿಸಿದ್ದಾರೆ. ಈಗಾಗಲೇ ಈ ಪ್ರಕರಣದಲ್ಲಿ ರೇವಣ್ಣ ಬಂಧಿತರಾಗಿ ವಿಚಾರಣಾಧೀನ ಕೈದಿಯಾಗಿ (HD Revanna Case Jailed) ಜೈಲಿನಲ್ಲಿದ್ದಾರೆ.

ಯುವ ಜನತಾದಳ‌ ಮಾಜಿ ಅಧ್ಯಕ್ಷ ಎಚ್.ಕೆ.ಸುಜಯ್, ಕಪ್ಪಡಿ‌ ಗ್ರಾಮದ ಮಧು, ಹೆಬ್ಬಾಳು ಗ್ರಾಮ ಪಂಚಾಯತ್ ಸದಸ್ಯ ಮನು,‌ ವಕೀಲ‌ ತಿಮ್ಮಪ್ಪ ಎಂಬವರನ್ನು ಬಂಧಿಸಲಾಗಿದೆ. ಇವರು ಸಂತ್ರಸ್ತ ಮಹಿಳೆಯ ಕಿಡ್ನಾಪ್‌ಗೆ ಸಹಕರಿಸಿದ್ದರು ಎಂದು ಆರೋಪಿಸಲಾಗಿದೆ. ಕೆ.ಆರ್.ನಗರ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ನಾಲ್ವರೂ ನಿನ್ನೆ ಎಚ್‌.ಡಿ ರೇವಣ್ಣ ಪರ ಸುದ್ದಿಗೋಷ್ಠಿ ನಡೆಸಿ ಪೊಲೀಸರು ತಾರತಮ್ಯ ಎಸಗುತ್ತಿರುವ ಕುರಿತು ಆರೋಪಿಸಿದ್ದರು.

ಕಾರ್ತಿಕ್‌ ಬಂಧನಕ್ಕೆ ಬಲೆ ಬೀಸಿದ ಪೊಲೀಸರು

ಹಾಸನ ಸಂಸದ ಪ್ರಜ್ವಲ್ ರೇವಣ್ಣರದ್ದು (Hassan MP Prajwal revanna case) ಎನ್ನಲಾದ ಅಶ್ಲೀಲ ವೀಡಿಯೋ ವೈರಲ್ (viral video) ಆರೋಪ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಅರ್ಜಿ ವಜಾ ಬಳಿಕ ಪ್ರಜ್ವಲ್ ಮಾಜಿ ಕಾರು ಚಾಲಕ ಕಾರ್ತಿಕ್‌ಗೆ ಬಂಧನ ಭೀತಿ ಎದುರಾಗಿದೆ. ಕಾರ್ತಿಕ್, ಪುಟ್ಟಿ ಅಲಿಯಾಸ್ ಪುಟ್ಟರಾಜ್, ನವೀನ್ ಗೌಡ ಹಾಗು ಚೇತನ್ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ಏಪ್ರಿಲ್ 23ರಂದು ಹಾಸನ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿತ್ತು. ಎಡಿಟ್ ಮಾಡಿ ಸಂಸದ ಪ್ರಜ್ವಲ್ ಅವರ ಅಶ್ಲೀಲ ಫೋಟೋ ವೀಡಿಯೋ ಸೃಷ್ಟಿ ಮಾಡಿ ಪೆನ್ ಡ್ರೈವ್ ಮೂಲಕ ಹಂಚಿಕೊಂಡ ಆರೋಪವಿದೆ. ಕಾರ್ತಿಕ್, ಪುಟ್ಟರಾಜ್, ನವೀನ್ ಗೌಡ, ಶರತ್ ಆಲಿಯಾಸ್ ಕ್ವಾಲಿಟಿ ಬಾರ್ ಶರತ್ ವಿರುದ್ಧ ಜೆಡಿಎಸ್‌ ದೂರು ಕೊಟ್ಟಿತ್ತು.

ನವೀನ್ ಗೌಡ ಮತ್ತು ಇತರರು ಎಂದು ಸೆನ್ ಠಾಣೆ ಪೊಲೀಸರು ಎಫ್‌ಐಆರ್ ದಾಖಲು ಮಾಡಿದ್ದರು. ನ್ಯಾಯಾಲಯಕ್ಕೆ ರಿಮೈಂಡರ್ ಅರ್ಜಿ ಮೂಲಕ ಕಾರ್ತಿಕ್, ಪುಟ್ಟರಾಜು ಹಾಗೂ ಚೇತನ್ ಎಂಬ ಹೆಸರು ಉಲ್ಲೇಖಿಸಿ ಮಾಹಿತಿ ರವಾನಿಸಿದ್ದರು. ತಮ್ಮ ವಿರುದ್ಧ ಕೇಸ್ ದಾಖಲಾಗುತ್ತಲೆ ಆರೋಪಿಗಳು ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ನಿನ್ನೆ ಹಾಸನದ ಮೂರನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಿಂದ ಅರ್ಜಿ ವಜಾ ಆಗಿದೆ.

ಅರ್ಜಿ ವಜಾ ಬೆನ್ನಲ್ಲೇ ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಪೆನ್ ಡ್ರೈವ್ ವೈರಲ್ ಆರೋಪ ಪ್ರಕರಣ ಇನ್ನೂ ಎಸ್ಐಟಿಗೆ ಹಸ್ತಾಂತರ ಆಗಿಲ್ಲ. ಈ ಹಿನ್ನೆಲೆಯಲ್ಲಿ ಹಾಸನ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಇಂದು ರೇವಣ್ಣ ಮತ್ತೊಂದು ಜಾಮೀನು ಅರ್ಜಿ ವಿಚಾರಣೆ

ಮಹಿಳೆ ಅಪಹರಣ (kidnap) ಕೇಸ್‌ನಲ್ಲಿ ಬಂಧನಕ್ಕೊಳಗಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಮಾಜಿ ಸಚಿವ ಹೆಚ್. ಡಿ ರೇವಣ್ಣ ಅವರ ಇನ್ನೊಂದು ಜಾಮೀನು ಅರ್ಜಿ ಇಂದು ಜನಪ್ರತಿನಿಧಿ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆಗೆ ಒಳಗಾಗಲಿದೆ. ಮಗ, ಹಾಸನ ಸಂಸದ (Hassan MP) ಪ್ರಜ್ವಲ್‌ ರೇವಣ್ಣ ಲೈಂಗಿಕ ದೌರ್ಜನ್ಯ (Prajwal Revanna Case) ಪ್ರಕರಣದಲ್ಲಿಯೂ ಆರೋಪಿಯಾಗಿರುವ ರೇವಣ್ಣ ಅವರಿಗೆ ನಿನ್ನೆಯ ವಿಚಾರಣೆಯಲ್ಲಿ ಬೇಲ್‌ ಸಿಕ್ಕಿಲ್ಲ.

ಬೆಳಗ್ಗೆ ಹನ್ನೊಂದು ಗಂಟೆ ನಂತರ ಜನಪ್ರತಿನಿಧಿ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ. ಹೆಚ್.ಡಿ ರೇವಣ್ಣ ಪರ ಹಿರಿಯ ವಕೀಲ ಸಿ.ವಿ ನಾಗೇಶ್ ವಾದ ಮಂಡಿಸಲಿದ್ದಾರೆ. 65 ವರ್ಷದವರಾಗಿರುವ ಹೆಚ್.ಡಿ ರೇವಣ್ಣ ಈಗಾಗಲೇ ಪ್ರಕರಣ, ಮಗನ ಮೇಲಿನ ಆರೋಪದಿಂದ ಮಾನಸಿಕವಾಗಿ ನೊಂದಿದ್ದಾರೆ. ನಾಲ್ಕು ದಿನಗಳ ಕಾಲ ಕಸ್ಟಡಿಯಲ್ಲಿದ್ದು ವಿಚಾರಣೆ ಎದುರಿಸಿದ್ದಾರೆ. ಕಸ್ಟಡಿ ವೇಳೆ ಅನಾರೋಗ್ಯದ ಸಮಸ್ಯೆ ಎದುರಿಸಿದ್ದಾರೆ ಎಂಬ ಮಾಹಿತಿಯಿದೆ. ಹೊಟ್ಟೆ ಉರಿ ಸಮಸ್ಯೆ ಎಂದು ನ್ಯಾಯಾಧೀಶರ ಮುಂದೆ ಅಳಲು ತೋಡಿಕೊಂಡಿದ್ದರು. ಇಂದು ಇದೇ ವಿಚಾರವನ್ನು ಮತ್ತೆ ಜನಪ್ರತಿನಿಧಿ ನ್ಯಾಯಾಲಯದಲ್ಲಿ ವಕೀಲರು ಉಲ್ಲೇಖ ಮಾಡಲಿದ್ದಾರೆ. ಹಲವಾರು ವರ್ಷ ರಾಜ್ಯ ಸಚಿವರಾಗಿದ್ದು ಸೇವೆ ಸಲ್ಲಿಸಿರುವ ರೇವಣ್ಣ, ಪ್ರಕರಣದ ಗುರುತ್ವ ಅರಿತು ತನಿಕೆಗೆ ಸಹಕಾರ ಒದಗಿಸುತ್ತಿದ್ದಾರೆ. ಈ ಎಲ್ಲ ವಿಚಾರಗಳಿಂದ ಹೆಚ್.ಡಿ ರೇವಣ್ಣಗೆ ಬೇಲ್ ಸಿಗಬೇಕು ಎಂದು ವಾದಿಸುವ ಸಾಧ್ಯತೆ ಇದೆ.

ಎಸ್ಐಟಿ ಮತ್ತೆ ಈ ಬಗ್ಗೆ ಆಕ್ಷೇಪಣೆ ಸಲ್ಲಿಸಲಿದೆ. ಈಗಾಗಲೇ ರೇವಣ್ಣ ತನಿಖೆ ಸರಿಯಾಗಿ ಸಹಕರಿಸಿಲ್ಲ ಎಂದು ಎಸ್‌ಐಟಿ ಹೇಳಿದೆ. ಸಮರ್ಪಕವಾಗಿ ವಿಚಾರಣೆ ಆಗಿಲ್ಲ. ಮತ್ತೊಂದು ಕಡೆ ಹೆಚ್. ಡಿ ರೇವಣ್ಣ ಮಾಜಿ ಸಚಿವ, ಶಾಸಕ ಹಾಗೂ ಪ್ರಭಾವ ಉಳ್ಳ ವ್ಯಕ್ತಿಯಾಗಿದ್ದಾರೆ. ಹೊರ ಬಂದ ಮೇಲೆ ತಮ್ಮ ಪ್ರಭಾವ ಬಳಸಿ ಸಾಕ್ಷ್ಯ ನಾಶ ಮಾಡುವ, ಸಂತ್ರಸ್ತೆಯರನ್ನು ಕಾಂಟ್ಯಾಕ್ಟ್ ಮಾಡುವ ಸಾಧ್ಯತೆ ಇದೆ. ಈ ಅಂಶಗಳ ಹಿನ್ನೆಲೆಯಲ್ಲಿ ಜಾಮೀನು ನೀಡಬಾರದು ಎಂದು ಸರ್ಕಾರದ ಪರ ವಕೀಲರು ಆಕ್ಷೇಪಣೆ ಸಲ್ಲಿಸಲಿದ್ದಾರೆ.

ಇದನ್ನೂ ಓದಿ: HD Revanna Jailed: ಇಂದು ಜನಪ್ರತಿನಿಧಿ ನ್ಯಾಯಾಲಯದಲ್ಲಿ ಹೆಚ್.ಡಿ ರೇವಣ್ಣ ಭವಿಷ್ಯ ನಿರ್ಧಾರ

Exit mobile version