Site icon Vistara News

ವಿಸ್ತಾರ Explainer | PFI BANNED | ಪಿಎಫ್‌ಐ ಹುಟ್ಟಿದ್ದು ಏಕೆ ? ಭಯೋತ್ಪಾದಕ ಕೃತ್ಯಗಳಿಗೆ ಹಣಕಾಸು ಹೇಗೆ?

pfi ban

ಕೊನೆಗೂ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ ಇಂದು ನಿಷೇಧಕ್ಕೀಡಾಗಿದೆ. ಕೇಂದ್ರ ಗೃಹ ಸಚಿವಾಲಯ ತನ್ನ ಅಧಿಸೂಚನೆಯಲ್ಲಿ ಹೇಳಿರುವಂತೆ. ಹಲವಾರು ರಾಜ್ಯಗಳಲ್ಲಿ ಭಯೋತ್ಪಾದನೆ ಕೃತ್ಯಗಳಲ್ಲಿ ತೊಡಗಿಸಿಕೊಂಡಿದ್ದ, ಭಯೋತ್ಪಾದನೆಗೆ ಹಣಕಾಸು ಪೂರೈಕೆ ಮಾಡುತ್ತಿದ್ದ ಕರಾಳ ಸಂಘಟನೆಯ ಕಥೆ ಮುಗಿದಿದೆ. ಸಚಿವಾಲಯದ ಅಧಿಸೂಚನೆಯ ಪ್ರಕಾರ 2016ರಿಂದೀಚೆಗೆ ಕೇರಳ ಮತ್ತು ಕರ್ನಾಟಕದಲ್ಲಿ ನಡೆದ ಸಂಜಿತ್‌, ವಿ ರಾಮಲಿಂಗಮ್‌, ನಂದು, ಅಭಿಮನ್ಯು, ಬಿಬಿನ್‌, ಶರತ್‌, ಆರ್.‌ ರುದ್ರೇಶ್‌, ಪ್ರವೀಣ್‌ ಪೂಜಾರಿ, ಶಶಿಕುಮಾರ್‌, ಪ್ರವೀಣ್‌ ನೆಟ್ಟಾರು ಅವರ ಬರ್ಬರ ಹತ್ಯೆಯಲ್ಲಿ ಪಿಎಫ್‌ಐ ಕಾರ್ಯಕರ್ತರು ಷಾಮೀಲಾಗಿದ್ದಾರೆ. ಹಾಗಾದರೆ ಪಿಎಫ್‌ಐ ಹುಟ್ಟಿದ್ದು ಹೇಗೆ? ಇದರ ಕರಾಳ ಇತಿಹಾಸ ಏನು? ಇದಕ್ಕೆ ಹಣಕಾಸು ವ್ಯವಸ್ಥೆ ಹೇಗೆ ಆಯಿತು? ಇಲ್ಲಿದೆ ವಿವರ.

ನಿಷೇಧಕ್ಕೀಡಾದ ಸಂಘಟನೆಗಳು: ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ ( PFI), ರಿಹಾಬ್‌ ಇಂಡಿಯಾ ಫೌಂಡೇಷನ್‌, ಕ್ಯಾಂಪಸ್‌ ಫ್ರಂಟ್‌ ಆಫ್‌ ಇಂಡಿಯಾ, ಆಲ್‌ ಇಂಡಿಯಾ ಇಮಾಮ್ಸ್‌ ಕೌನ್ಸಿಲ್‌, ನ್ಯಾಶನಲ್‌ ಕಾನ್ಫಡರೇಷನ್‌ ಆಫ್‌ ಹ್ಯೂಮನ್‌ ರೈಟ್ಸ್‌ ಆರ್ಗನೈಸೇಶನ್‌, ನ್ಯಾಶನಲ್‌ ವುಮೆನ್ಸ್ ಫ್ರಂಟ್‌,‌ ಜ್ಯೂನಿಯರ್‌ ಫ್ರಂಟ್‌, ಎಂಪವರ್‌ ಇಂಡಿಯಾ ಫೌಂಡೇಷನ್‌, ರಿಹಾಬ್‌ ಫೌಂಡೇಷನ್‌ (ಕೇರಳ). ಹೀಗೆ ಪಿಎಫ್‌ಐ ಮತ್ತು ಅದರ 8 ಸಹ ಸಂಘಟನೆಗಳನ್ನು 2022 ಸೆಪ್ಟೆಂಬರ್‌ 27ರಂದು ನಿಷೇಧಿಸಲಾಗಿದೆ. ಉತ್ತರ ಪ್ರದೇಶ, ಕರ್ನಾಟಕ, ಗುಜರಾತ್ ರಾಜ್ಯ ಸರ್ಕಾರಗಳು ಪಿಎಫ್‌ಐ ನಿಷೇಧಿಸಲು ಗೃಹ ಸಚಿವಾಲಯಕ್ಕೆ ಶಿಫಾರಸು ಮಾಡಿತ್ತು.

ಪಿಎಫ್‌ಐ ಭಯೋತ್ಪಾದನೆಗೆ ದೇಶ-ವಿದೇಶಗಳಿಂದ ಹಣಕಾಸು

ಪಿಎಫ್‌ಐ ಮತ್ತು ಅದರ ಕಾರ್ಯಕರ್ತರು ಮತ್ತು ಬೆಂಬಲಿಗರಿಗೆ ದೇಶ-ವಿದೇಶಗಳಿಂದ ಹಣಕಾಸು ನೆರವು ಲಭಿಸುತ್ತಿತ್ತು ಎಂಬ ಆಘಾತಕಾರಿ ಅಂಶ ಬಯಲಾಗಿದೆ. ಭಾರತದಲ್ಲೂ ಹಣ ಸಿಗುತ್ತಿತ್ತು. ಕ್ರಿಮಿನಲ್‌ ಸಂಚುಗಳಿಗೆ ದೇಣಿಗೆಯಿಂದ ಹವಾಲಾ ತನಕ ಹಲವು ಮೂಲಗಳಿಂದ ಫಂಡ್‌ ಸಂಗ್ರಹಿಸಲಾಗುತ್ತಿತ್ತು. ಹಲವಾರು ಖಾತೆಗಳಲ್ಲಿ ಈ ನಿಧಿಯನ್ನು ಸಂಗ್ರಹಿಸಿ ವರ್ಗಾಯಿಸಲಾಗುತ್ತಿತ್ತು. ಹಾಗೂ ನ್ಯಾಯಬದ್ಧವಾಗಿ ಸಂಪಾದಿಸಿದ ಹಣ ಎಂಬಂತೆ ಬಿಂಬಿಸಲಾಗುತ್ತಿತ್ತು. ಆದರೆ ಭಾರತದಲ್ಲಿ ವಿಧ್ವಂಸಕ ಹಾಗೂ ಭಯೋತ್ಪಾದಕ ಕೃತ್ಯಗಳಿಗೆ ಬಳಸಿಕೊಳ್ಳಲಾಗುತ್ತಿತ್ತು.

ಕೊಲ್ಲಿ ರಾಷ್ಟ್ರಗಳಲ್ಲಿ ಪಿಎಫ್‌ಐ ಸಂಪರ್ಕದ ಬಗ್ಗೆ ತನಿಖೆ: ಪಿಎಫ್‌ಐ ಕೊಲ್ಲಿ ರಾಷ್ಟ್ರಗಳಲ್ಲಿ ನಡೆಸುತ್ತಿದ್ದ ಕಾರ್ಯಾಚರಣೆಗಳ ಬಗ್ಗೆ ತನಿಖೆ ನಡೆಯುತ್ತಿದೆ. ಗುಪ್ತಚರ ಮೂಲಗಳ ಪ್ರಕಾರ, ಪಿಎಫ್‌ಐ ಕೊಲ್ಲಿ ರಾಷ್ಟ್ರಗಳಲ್ಲಿ ಸಂಘಟನೆ ಮಾಡಿತ್ತು. ಇಂಡಿಯಾ ಫ್ರಟರ್ನಿಟಿ ಫೋರಮ್‌, ಇಂಡಿಯನ್‌ ಸೋಶಿಯಲ್‌ ಫೋರಮ್‌, ರಿಹಾಬ್‌ ಇಂಡಿಯನ್‌ ಫೌಂಡೇಷನ್‌ ಕೊಲ್ಲಿ ರಾಷ್ಟ್ರಗಳಲ್ಲಿ ಕಾರ್ಯನಿರ್ವಹಿಸುತ್ತಿತ್ತು.

ವಿದೇಶಗಳಲ್ಲಿರುವ ಪಿಎಫ್‌ಐ ಸದಸ್ಯರು ಭಾರತದಲ್ಲಿರುವ ತಮ್ಮ ಎನ್ನಾರೈ ಅಕೌಂಟ್‌ಗಳಿಗೆ ಹಣವನ್ನು ವರ್ಗಾವಣೆ ಮಾಡುತ್ತಿದ್ದರು. ಸ್ಥಳೀಯ ಪಿಎಫ್‌ಐ ನಾಯಕರು ಅದನ್ನು ಬಳಸುತ್ತಿದ್ದರು. ಗುಪ್ತಚರ ಮೂಲಗಳ ಪ್ರಕಾರ ಪಿಎಫ್‌ಐ ಕೊಲ್ಲಿ ರಾಷ್ಟ್ರಗಳಲ್ಲಿ ಸಕ್ರಿಯವಾಗಿತ್ತು. ಯುಎಇ, ಒಮಾನ್‌, ಕತಾರ್‌, ಟರ್ಕಿ, ಪಾಕಿಸ್ತಾನ, ಬಾಂಗ್ಲಾದೇಶದಲ್ಲೂ ಸಕ್ರಿಯವಾಗಿತ್ತು.

ಹಲವಾರು ಖಾತೆಗಳಲ್ಲಿ ಹಣ, ಆದರೆ ಆದಾಯಕ್ಕೆ ಮೂಲ? ಪಿಎಫ್‌ಐ ಹಲವಾರು ಬ್ಯಾಂಕ್‌ ಖಾತೆಗಳಲ್ಲಿ ಹಣವನ್ನು ಠೇವಣಿಯಾಗಿ ಇಟ್ಟಿತ್ತು. ಆದರೆ ಯಾವುದರಲ್ಲೂ ಖಾತೆದಾರರ ಹಣದ ಮೂಲ ಗೊತ್ತಾಗುತ್ತಿರಲಿಲ್ಲ. ಆದಾಯ ತೆರಿಗೆ ಇಲಾಖೆ ಈ ಬಗ್ಗೆ ವ್ಯಾಪಕ ತನಿಖೆಯನ್ನು ನಡಸಿತ್ತು ಎಂದು ಗೆಜೆಟ್‌ ಅಧಿಸೂಚನೆ ತಿಳಿಸಿದೆ.

ಪಿಎಫ್‌ಐ 2006ರಲ್ಲಿ ಹುಟ್ಟಿದ್ದು ಹೇಗೆ?

ಕೇಂದ್ರ ಸರ್ಕಾರ 2001ರಲ್ಲಿ ಸ್ಟೂಡೆಂಟ್ಸ್‌ ಇಸ್ಲಾಮಿಕ್‌ ಮೂವ್‌ಮೆಂಟ್‌ ಆಫ್‌ ಇಂಡಿಯಾ ( ಸಿಮಿ-SIMI) ಸಂಘಟನೆಯನ್ನು ನಿಷೇಧಿಸಿತ್ತು. ಇದಾದ ಬಳಿಕ, ಸಿಮಿಯ ನಾಯಕರು ಹೊಸತನ್ನು ಹುಟ್ಟು ಹಾಕಲು ತೀರ್ಮಾನಿಸಿದ್ದರು. ೨೦೦೬ರಲ್ಲಿ ಕರ್ನಾಟಕ ಮೂಲದ ಕರ್ನಾಟಕ ಫೋರಮ್‌ ಫಾರ್‌ ಡಿಗ್ನಿಟಿ ( KFD), ಕೇರಳ ಮೂಲದ ನ್ಯಾಶನಲ್‌ ಡೆವಲಪ್‌ಮೆಂಟ್‌ ಫ್ರಂಟ್‌ (NDF) ಮತ್ತು ತಮಿಳುನಾಡಿನ ಮನಿತಾ ನೀತಿ ಪಸರಾಯಿ (MNP) ವಿಲೀನವಾಗಿ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ (PFI) ಕೇರಳದಲ್ಲಿ ಹುಟ್ಟಿಕೊಂಡಿತ್ತು.

ಸ್ಟೂಡೆಂಟ್ಸ್‌ ಇಸ್ಲಾಮಿಕ್‌ ಮೂವ್‌ಮೆಂಟ್‌ ಆಫ್‌ ಇಂಡಿಯಾ ( ಸಿಮಿ-SIMI) ನಿಷೇಧಕ್ಕೀಡಾದ ಬಳಿಕ, ಅದರ ನಾಯಕರು ಈ ತೀರ್ಮಾನಕ್ಕೆ ಬಂದಿದ್ದರು. ಹೀಗಾಗಿ ಪಿಎಫ್‌ಐನಲ್ಲಿರುವ ಹಲವು ಲೀಡರ್‌ಗಳು ಸಿಮಿಯಲ್ಲೂ ಇದ್ದರು.

ದಕ್ಷಿಣ ಭಾರತದ ರಾಜ್ಯಗಳಲ್ಲಿ ತಮ್ಮ ‌ವಿಧ್ವಂಸಕ ಚಟುವಟಿಕೆಗಳನ್ನು ನಡೆಸುವುದು ಇದರ ಉದ್ದೇಶವಾಗಿತ್ತು. ಸಮಾಜಘಾತುಕ ಚಟುವಟಿಕೆಗಳನ್ನು ದುರ್ಬಲ ಜನರ ಸಾಮಾಜಿಕ ನ್ಯಾಯ, ಸ್ವಾತಂತ್ರ್ಯ ಮತ್ತು ಭದ್ರತೆಯ ಹಿತಾಸಕ್ತಿ ಕುರಿತ ಆಂದೋಲನ ಎಂದು ಹೇಳಿಕೊಂಡಿದ್ದರು. ಪಿಎಫ್‌ಐ ಚುನಾವಣೆಗಳಲ್ಲಿ ನೇರವಾಗಿ ಭಾಗವಹಿಸುವುದಿಲ್ಲ. ಆದರೆ ಮುಸ್ಲಿಂ ಸಮುದಾಯದ ನಡುವೆ ಸಾಮಾಜಿಕ, ಮತೀಯ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿತ್ತು. 2009ರಲ್ಲಿ ಪಿಎಫ್‌ಐನ ರಾಜಕೀಯ ಚಟುವಟಿಕೆಗಳನ್ನು ನಡೆಸುವ ಸೋಶಿಯಲ್‌ ಡೆಮಾಕ್ರಟಿಕ್‌ ಪಾರ್ಟಿ ಆಫ್‌ ಇಂಡಿಯಾ (ಎಸ್‌ಡಿಪಿಐ-SDPI) ಅಸ್ತಿತ್ವಕ್ಕೆ ಬಂದಿತು. ಎಸ್‌ಡಿಪಿಐಗೆ ಅವಶ್ಯವಿರುವ ಕಾರ್ಯಕರ್ತರ ಬೆಂಬಲವನ್ನು ಪಿಎಫ್‌ಐ ಒದಗಿಸುತ್ತಿತ್ತು. ಹಲವಾರು ರಾಜ್ಯಗಳಲ್ಲಿ ಪಿಎಫ್‌ಐ ಸಕ್ರಿಯವಾಗಿತ್ತು.

ಕೇರಳ-ಕರ್ನಾಟಕದಲ್ಲಿ ಹಿಂಸಾಚಾರ

2015ರಿಂದೀಚೆಗೆ, ಅಂದರೆ ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಅಸ್ತಿತ್ವಕ್ಕೆ ಬಂದ ಒಂದು ವರ್ಷದ ಬಳಿಕ ಕೇರಳ ಮತ್ತು ಕರ್ನಾಟಕದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘಟನೆಯ (ಆರೆಸ್ಸೆಸ್)‌ ಜತೆಗೆ ಪಿಎಫ್‌ಐ ಹಿಂಸಾತ್ಮಕ ಸಂಘರ್ಷಕ್ಕಿಳಿಯಿತು.

2012ರಲ್ಲಿ ಅಕ್ರಮ ಚಟುವಟಿಕೆ (ತಡೆ) ಕಾಯಿದೆಯನ್ನು ಪಿಎಫ್‌ಐ ವಿರೋಧಿಸಿ ಪ್ರತಿಭಟಿಸಿತ್ತು. ಪಿಎಫ್‌ಐ ಹಲವಾರು ದೇಶ ವಿರೋಧಿ ಚಟುವಟಿಕೆಗಳನ್ನು ನಡೆಸಿದೆ. ಹಾಗೂ ನಿಷೇಧಿತ ಸಿಮಿ ಸಂಘಟನೆ ಜತೆ ಸಂಪರ್ಕ ಹೊಂದಿದೆ ಎಂದು ಕೇರಳ ಸರ್ಕಾರ 2012ರಲ್ಲಿ ಹೇಳಿತ್ತು. ಹಲವು ರಾಜ್ಯಗಳಲ್ಲಿ ಹಿಂಸಾತ್ಮಕ ಹಾಗೂ ಭಯೋತ್ಪಾದಕ ಕೃತ್ಯಗಳ ಮೂಲಕ ಸಾಮಾಜಿಕ ಶಾಂತಿಯನ್ನು ಪಿಎಫ್‌ಐ ಕದಡಿದೆ ಎಂದು ಗೃಹ ಸಚಿವಾಲಯ ತಿಳಿಸಿದೆ.‌

2015ರಲ್ಲಿ ಶಿವಮೊಗ್ಗದಲ್ಲಿ ಸಂಭವಿಸಿದ ಕೋಮುಗಲಭೆಯಲ್ಲಿ ವಿಶ್ವನಾಥ್‌ ಶೆಟ್ಟಿ ಎಂಬುವರ ಹತ್ಯೆಯಾಗಿತ್ತು. ಈ ಗಲಭೆಯಲ್ಲಿ ಪಿಎಫ್‌ಐ ಕೈವಾಡವನ್ನು ಶಂಕಿಸಲಾಗಿತ್ತು. ಪಿಎಫ್‌ಐ ಕಾರ್ಯಕರ್ತರ ಬಳಿಯಿಂದ ಮಾರಕಾಸ್ತ್ರಗಳು, ಗನ್‌ ಪೌಡರ್‌ ಪತ್ತೆಯಾಗಿತ್ತು. ಇದಾದ ಬಳಿಕ ಇತ್ತೀಚಿನವರೆಗೆ ನಡೆದಿರುವ ಹಲವು ಹತ್ಯೆಗಳಲ್ಲಿ ಪಿಎಫ್‌ಐ ಪಾತ್ರದ ಬಗ್ಗೆ ಗೃಹ ಸಚಿವಾಲಯದ ಅಧಿಸೂಚನೆ ಆಘಾತಕಾರಿ ಅಂಶಗಳನ್ನು ಬಹಿರಂಗಪಡಿಸಿದೆ. 2011ರ ಮುಂಬಯಿ ಬಾಂಬ್‌ ದಾಳಿ, 2012ರ ಪುಣೆ ಬಾಂಬ್‌ ದಾಳಿ, 2013ರ ಹೈದರಾಬಾದ್‌ ಸ್ಫೋಟ ಪ್ರಕರಣಗಳಲ್ಲಿ ಪಿಎಫ್‌ಐ ಸಂಚಿನ ಬಗ್ಗೆ ಭಾರತೀಯ ಗುಪ್ತಚರ ಸಂಸ್ಥೆಗಳು ವರದಿ ಮಾಡಿದ್ದವು.

ಪಿಎಫ್‌ಐ ಕಾರ್ಯತಂತ್ರ ಹೇಗಿತ್ತು? ಪಿಎಫ್‌ಐ ಯುವಕರು, ವಿದ್ಯಾರ್ಥಿಗಳು, ಮಹಿಳೆಯರು, ಇಮಾಮರು, ದುರ್ಬಲ ವರ್ಗದ ಜನರ ಕಲ್ಯಾಣದ ನೆಪದಲ್ಲಿ ಹಲವಾರು ಸಹ ಸಂಘಟನೆಗಳನ್ನು ಸ್ಥಾಪಿಸಿತ್ತು. ಅವುಗಳ ಮೂಲಕ ನಾನಾ ವರ್ಗದ ಜನರ ಮೇಲೆ ಪ್ರಭಾವ ಬೀರಿ ತನ್ನ ಕೃತ್ಯಗಳಿಗೆ ಬೆಂಬಲ ಗಳಿಸುತ್ತಿತ್ತು. ಸದಸ್ಯತ್ವ ಅಭಿಯಾನ, ನಿಧಿ ಸಂಗ್ರಹವನ್ನು ಮುಂದುವರಿಸುತ್ತಿತ್ತು. ಬಳಿಕ ಸಮಾಜ ವಿದ್ರೋಹಿ ಕೃತ್ಯಗಳಿಗೆ ಬಳಸುತ್ತಿತ್ತು.

ಪಿಎಫ್‌ಐ ರಾಜಾರೋಷವಾಗಿ ತನ್ನ ವೇದಿಕೆಗಳ ಮೂಲಕ ಸಾಮಾಜಿಕ-ಶೈಕ್ಷಣಿಕ, ರಾಜಕೀಯ ನೆಲೆಯಲ್ಲಿ ಪ್ರಭಾವ ಬೀರಲು ಯತ್ನಿಸುತ್ತಿತ್ತು. ಆದರೆ ರಹಸ್ಯವಾಗಿ ಉಗ್ರವಾದವನ್ನು ಬಿತ್ತುತ್ತಿತ್ತು. ಹೀಗೆ ಸಮಾಜ ಸುಧಾರಣೆಯ ಮುಖವಾಡವನ್ನು ಹಾಕಿಕೊಂಡಿತ್ತು.

ಪ್ರೊ.ಟಿ. ಜೆ. ಜೋಸೆಫ್‌ ಕೈ ಕತ್ತರಿಸಿ ಹಲ್ಲೆ

ಕೇರಳದ ಎರ್ನಾಕುಳಂನಲ್ಲಿ ಪ್ರೊಫೆಸರ್‌ ಆಗಿದ್ದ ಟಿ.ಜೆ. ಜೋಸೆಫ್‌ ಎಂಬುವರ ಮೇಲೆ ಪಿಎಫ್‌ಐ ಕಾರ್ಯಕರ್ತರು 2010 ರಲ್ಲಿ ಹಲ್ಲೆ ನಡೆಸಿ ಬಲಗೈಯನ್ನು ಕತ್ತರಿಸಿದ್ದರು. ಜೋಸೆಫ್‌ ಅವರು ಸಿದ್ಧಪಡಿಸಿದ ಪ್ರಶ್ನೆಪತ್ರಿಕೆಯಲ್ಲಿ ಪ್ರವಾದಿಯ ನಿಂದನೆ ಆಗಿದೆ ಎಂದು ಆರೋಪಿಸಿ ಭೀಕರ ಹಲ್ಲೆ ನಡೆಸಲಾಗಿತ್ತು. ಈ ರೀತಿ ತಾಲಿಬಾನ್‌ ಮಾದರಿಯ ಹಿಂಸಾಚಾರವನ್ನು ದಶಕದ ಹಿಂದೆಯೇ ಶುರು ಮಾಡಿತ್ತು. ಈ ಹಲ್ಲೆಯ ಬಳಿಕ ಪ್ರೊಫಸರ್‌ ಜೋಸೆಫ್‌ ಉದ್ಯೋಗ ಕಳೆದುಕೊಂಡರು. ಘಟನೆಯಿಂದ ನೊಂದುಕೊಂಡಯ ಖಿನ್ನತೆಗೆ ಜಾರಿದ ಅವರ ಪತ್ನಿ 2014ರಲ್ಲಿ ಆತ್ಮಹತ್ಯೆ ಮಾಡಿಕೊಂಡರು. 2015ರಲ್ಲಿ ಪಿಎಫ್‌ಐನ ೧೩ ಸದಸ್ಯರನ್ನು ಈ ಕೇಸ್‌ನಲ್ಲಿ ಸೆರೆವಾಸದ ಶಿಕ್ಷೆಗೆ ಒಳಪಡಿಸಲಾಯಿತು.

2010ರಿಂದೀಚೆಗೆ ಪ್ರೊ. ಜೋಸೆಫ್ ನಾಲ್ಕು ಪುಸ್ತಕಗಳನ್ನು ಎಡಗೈಯಲ್ಲಿಯೇ ಬರೆದು ಪ್ರಕಟಿಸಿದ್ದಾರೆ. ರಾಷ್ಟ್ರೀಯ ತನಿಖಾ ದಳದ ಪ್ರಕಾರ ಕಳೆದ ದಶಕದಲ್ಲಿ ಪಿಎಫ್‌ಐ ಹಲವು ರಾಜ್ಯಗಳಲ್ಲಿ ಕ್ರಿಮಿನಲ್‌ ಕೃತ್ಯಗಳನ್ನು ಎಸಗಿದೆ. ಭಿನ್ನ ನಂಬಿಕೆಯ ಜನರನ್ನು ಪಿಎಫ್‌ಐ ಕಾರ್ಯಕರ್ತರು ಕಗ್ಗೊಲೆ ಮಾಡಿದ್ದಾರೆ. ಸಾರ್ವಜನಿಕ ಆಸ್ತಿಗಳಿಗೆ ಹಾನಿ ಮಾಡಿದ್ದಾರೆ.

ಸಿಮಿಯ ಮತ್ತೊಂದು ರೂಪ ಪಿಎಫ್‌ಐ ಎಂದಿದ್ದ ಕೇರಳ ಸರ್ಕಾರ

ಕೇರಳದಲ್ಲಿ ಪಿಎಫ್‌ಐ ವಿರುದ್ಧ ನೂರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. 2012ರಲ್ಲಿ ಕೇರಳ ಸರ್ಕಾರ ಹೈಕೋರ್ಟ್‌ಗೆ ಸಲ್ಲಿಸಿದ್ದ ಪ್ರಮಾಣಪತ್ರದಲ್ಲಿ, ಪಿಎಫ್‌ಐ ಸಿಮಿಯ ಮತ್ತೊಂದು ರೂಪ ಎಂದು ತಿಳಿಸಿತ್ತು. ಆ ವೇಳೆಗೆ ಪಿಎಫ್‌ಐ ಕಾರ್ಯಕರ್ತರ ವಿರುದ್ಧ 27 ಕೊಲೆ ಕೇಸ್‌ಗಳು ದಾಖಲಾಗಿತ್ತು. ಅದರಲ್ಲಿ ಆರೆಸ್ಸೆಸ್‌ ಮತ್ತು ಸಿಪಿಎಂ ಕಾರ್ಯಕರ್ತರ ಕೊಲೆ ಪ್ರಕರಣಗಳಿದ್ದವು. ಎರಡು ವರ್ಷಗಳ ಬಳಿಕ ಮತ್ತೊಂದು ಅಫಿಡವಿಟ್‌ನಲ್ಲಿ ಕೇರಳ ಸರ್ಕಾರ, ಪಿಎಫ್‌ಐನ ಗುರಿಗಳಲ್ಲಿ ಸಮಾಜದ ಇಸ್ಲಾಮೀಕರಣ, ಬಲವಂತದ ಮತಾಂತರ, ಕೋಮುಗಲಭೆ ಸೃಷ್ಟಿ, ಹಿಂಸಾಚಾರ ಸೇರಿದೆ ಎಂದಿತ್ತು.

ದಕ್ಷಿಣ ಭಾರತ ಮಾತ್ರವಲ್ಲದೆ ಇತರ ಕಡೆಗಳ ರಾಜ್ಯಗಳಲ್ಲೂ ಪಿಎಫ್‌ಐ ಸ್ಥಳೀಯ ಸಂಘಟನೆಗಳ ಜತೆ ನಂಟು ಹೊಂದಿದೆ. ಪಶ್ಚಿಮ ಬಂಗಾಳ, ಮಣಿಪುರವನ್ನು ಉದಹರಿಸಬಹುದು. ದಾಖಲೆಗಳ ಪ್ರಕಾರ ಪಿಎಫ್‌ಐಗೆ ಭಾರತದಲ್ಲಿ ಕಳೆದು ಹೋಗಿರುವ ಇಸ್ಲಾಮಿಕ್‌ ಆಡಳಿತವನ್ನು 2047ರೊಳಗೆ ತರುವ ಕನಸಿತ್ತು.

ಪಿಎಫ್‌ಐ ಅಪರಾಧ ಕೃತ್ಯಗಳು: ೨೦೧೮ರಲ್ಲಿ ಕಣ್ಣೂರಿನಲ್ಲಿ ಎಬಿವಿಪಿ ಕಾರ್ಯಕರ್ತನ ಹತ್ಯೆಗೆ ಸಂಬಂಧಿಸಿ ಪಿಎಫ್‌ಐನ 6 ಸದಸ್ಯರನ್ನು ಅರೆಸ್ಟ್‌ ಮಾಡಲಾಯಿತು. 2019ರಲ್ಲಿ ಎಸ್‌ಎಫ್‌ಐ ಕಾರ್ಯಕರ್ತನ ಕೊಲೆಗೆ ಸಂಬಂಧಿಸಿ 9 ಪಿಎಫ್‌ಐ ಸದಸ್ಯರನ್ನು ಬಂಧಿಸಲಾಯಿತು. ಗುಪ್ತಚರ ವರದಿಗಳ ಪ್ರಕಾರ 2020ರಲ್ಲಿ ದಿಲ್ಲಿಯಲ್ಲಿ ಸಂಭವಿಸಿದ ಗಲಭೆಯಲ್ಲಿ ಪಿಎಫ್‌ಐ ಪಾತ್ರ ಇದೆ. ಉತ್ತರಪ್ರದೇಶದ ಹತ್ರಾಸ್‌ ಜಿಲ್ಲೆಯಲ್ಲಿ ನಡೆದ ಮಹಿಳೆಯ ಅತ್ಯಾಚಾರ ಮತ್ತು ಕೊಲೆಯ ಬಳಿಕ ಉಂಟಾದ ಗಲಭೆಗೆ ಪಿಎಫ್‌ಐ ಕುಮ್ಮಕ್ಕು ಇತ್ತು. 2013ರಲ್ಲಿ ಕೇರಳ ಸರ್ಕಾರ ರಾಜ್ಯದಲ್ಲಿನ ಪಿಎಫ್‌ಐ ತಾಣಗಳಿಗೆ ದಾಳಿ ನಡೆಸಿತ್ತು. ತರಬೇತಿ ಶಿಬಿರ, ವಿದೇಶಿ ಕರೆನ್ಸಿ, ಮಾರಕಾಸ್ತ್ರಗಳ ಬಳಕೆ ಪತ್ತೆಯಾಗಿತ್ತು.

ಹಿಜಾಬ್‌ ವಿವಾದದ ಹಿಂದೆ ಪಿಎಫ್‌ಐ?

ಇತ್ತೀಚಿನ ಹಿಜಾಬ್‌ ವಿವಾದದಲ್ಲೂ ವಿದ್ಯಾರ್ಥಿಗಳ ಮೇಲೆ ಪ್ರಭಾವ ಬೀರಿದ, ಮತೀಯತೆಗೆ ಕುಮ್ಮಕ್ಕು ನೀಡಿದ ಆರೋಪವನ್ನು ಪಿಎಫ್‌ಐ ಎದುರಿಸುತ್ತಿದೆ. ” ಹಿಜಾಬ್‌ ವಿವಾದ ಕೆಲ ಮಕ್ಕಳಿಂದ ಏಕಾಏಕಿ ಉಂಟಾಗಿದ್ದಲ್ಲ, ಇದು ದೊಡ್ಡ ಸಂಚಿನ ಭಾಗವಾಗಿದೆ. ಹಿಜಾಬ್‌ ಅನ್ನು ಧರಿಸುವುದರ ಬಗ್ಗೆ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶ ರವಾನಿಸುತ್ತಿತ್ತುʼʼ ಎಂದು ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಅವರು ಸುಪ್ರೀಂಕೋರ್ಟ್‌ಗೆ ಪ್ರಕರಣದ ವಿಚಾರಣೆ ವೇಳೆ ತಿಳಿಸಿದ್ದರು.

Exit mobile version