ಬೆಂಗಳೂರು: ಶಾಸಕ ಅರವಿಂದ ಲಿಂಬಾವಳಿ ಅವರ ಪುತ್ರಿ ಪೊಲೀಸರ ಜತೆ ಮಾತಿನ ಚಕಮಕಿ ನಡೆಸಿರುವ ವಿಡಿಯೊ ವೈರಲ್ ಆಗಿದೆ. ಈ ಪ್ರಕರಣ ಬೆಂಗಳೂರಿನ ಕ್ಯಾಪಿಟಲ್ ಹೋಟೆಲ್ ಬಳಿ ನಡೆದಿದೆ.
ಸೀಟ್ ಬೆಲ್ಟ್ ಧರಿಸದೆ ಅತಿವೇಗದ ಚಾಲನೆ ಮಾಡಿದ್ದು ಹಾಗೂ ಸಿಗ್ನಲ್ ಜಂಪ್ ಮಾಡಿದ್ದಕ್ಕಾಗಿ ಟ್ರಾಫಿಕ್ ಪೋಲಿಸರು ಈಕೆಯನ್ನು ತಡೆದು ದಂಡ ವಿಧಿಸಿದ್ದರು. ಸೀಟ್ ಬೆಲ್ಟ್ ಧರಿಸದೆ ಚಲಾಯಿಸಿಕೊಂಡು ಬರುತ್ತಿದ್ದಾಗ ಕಾರನ್ನು ತಡೆಯಲಾಗಿತ್ತು. ಆದರೆ ಕಾರನ್ನು ನಿಲ್ಲಿಸದೆ ಮುಂದೆ ಚಲಾಯಿಸಿ ಸಿಗ್ನಲ್ ಜಂಪ್ ಕೂಡ ಮಾಡಿದ್ದರು. ನಂತರ ಪೊಲೀಸರು ಕಾರನ್ನು ಮುಂದಿನ ಹಂತದಲ್ಲಿ ತಡೆದು ದಂಡ ಹಾಕಿದ್ದರು. ಆದರೆ ಅವರು ಅದನ್ನು ಒಪ್ಪದೆ ಪೊಲೀಸರ ಜತೆ ಜೋರಾಗಿ ವಾಗ್ಯುದ್ಧ ನಡೆಸಿದರು.
ʼಇದು ಎಂಎಲ್‌ಎ ಗಾಡಿ, ನಾನು ಶಾಸಕ ಅರವಿಂದ ಲಿಂಬಾವಳಿ ಪುತ್ರಿ ಗೊತ್ತಾ..ʼ ಎಂದು ಅವರು ಪೊಲೀಸರಿಗೆ ಆವಾಜ್ ಹಾಕಿದರು. ಪೊಲೀಸರು ತಡೆದರೂ ತಮ್ಮ ಕಾರನ್ನು ಚಲಾಯಿಸಿಕೊಂಡು ಹೋಗಲು ಪ್ರಯತ್ನಿಸಿದರು. ಈ ಸಂದರ್ಭದಲ್ಲಿ ಚಿತ್ರೀಕರಣ ನಡೆಸುತ್ತಿದ್ದ ಮಾಧ್ಯಮ ಪ್ರತಿನಿಧಿಗಳ ಜತೆಗೂ ಅವರು ಕಿರಿಕ್ ಮಾಡಿಕೊಂಡದ್ದು ಕಂಡುಬಂತು.
ಆದರೆ ಪೊಲೀಸರು ಯಾವುದೇ ರಾಜಿ ಮಾಡಿಕೊಳ್ಳದೆ ಲಿಂಬಾವಳಿ ಪುತ್ರಿಯಿಂದ 10,000 ರೂ. ದಂಡ ವಸೂಲಿ ಮಾಡಿದ್ದಾರೆ. ಈ ಹಿಂದಿನ ದಂಡದ ಮೊತ್ತ 9000 ರೂ. ಹಾಗೂ ಈ ಸಲದ ದಂಡ 1000 ರೂ ಸೇರಿಸಿ ಹತ್ತು ಸಾವಿರ ರೂ. ಆಗಿದೆ.
ಈ ನಡುವೆ ಪ್ರಕರಣದ ಮಾಹಿತಿ ಪಡೆದ ಶಾಸಕ ಅರವಿಂದ ಲಿಂಬಾವಳಿ ಅವರು, ಪುತ್ರಿಯ ವರ್ತನೆಗಾಗಿ ಕ್ಷಮೆ ಯಾಚಿಸಿದ್ದಾರೆ. ಪುತ್ರಿ ಜತೆಗೆ ಇದ್ದ ಸ್ನೇಹಿತ ತರುಣ್ ಅಜಾಗರೂಕತೆಯಿಂದ ಕಾರು ಚಲಾಯಿಸಿದ್ದು, ಇದಕ್ಕೆ ಸಂಬಂಧಿಸಿ ದಂಡ ಕಟ್ಟಲಾಗಿದೆ ಎಂದಿದ್ದಾರೆ.
ಇದನ್ನೂ ಓದಿ: ಮಲತಂದೆಯಿಂದ ರೇಪ್, ತಾಯಿಯಿಂದ ಮಗಳ ಅಂಡ ಮಾರಾಟ: ತಮಿಳುನಾಡಿನಲ್ಲಿ ರಾಕ್ಷಸೀ ಕೃತ್ಯ