ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ದಾರುಣವಾಗಿ (Hubli Murder Case) ಕೊಲೆಯಾದ ನೇಹಾ ಹಿರೇಮಠ (Neha Murder Case) ಅವರನ್ನು ತನಗೆ ಮದುವೆ ಮಾಡಿಕೊಡುವಂತೆ ಕೊಲೆಪಾತಕಿ ಫಯಾಜ್ (Fayaz) ಬಹು ದಿನಗಳಿಂದ ಆಕೆಯ ಹೆತ್ತವರನ್ನು ಪೀಡಿಸುತ್ತಿದ್ದ ಎಂಬ ವಿಚಾರ ಬಯಲಾಗಿದೆ. ನೇಹಾ ಹೆತ್ತವರು ನೀಡಿರುವ ದೂರಿನ ಕಾಪಿಯಲ್ಲಿ ಇದು ಉಲ್ಲೇಖವಾಗಿದೆ.
ಖುದ್ದು ಪೋಷಕರು ನೀಡಿರುವ ದೂರಿನಲ್ಲಿ ಈ ವಿಷಯ ಬಹಿರಂಗವಾಗಿದೆ. ನೇಹಾಳನ್ನು ಪ್ರೀತಿ ಮಾಡುತ್ತಿದ್ದೇನೆ. ತನಗೆ ಮದುವೆ ಮಾಡಿ ಕೊಡುವಂತೆ ನೇಹಾಳ ಪೋಷಕರಿಗೆ ಫಯಾಜ್ ಬೆನ್ನು ಬಿದ್ದಿದ್ದ. ನಾಲ್ಕೈದು ತಿಂಗಳಿಂದಲೂ ಮದುವೆಗಾಗಿ ಈತ ಪೀಡಿಸುತ್ತಿದ್ದ ಎಂದು ಗೊತ್ತಾಗಿದೆ.
ನಮ್ಮ ಮಗಳು ನಿನ್ನನ್ನು ಇಷ್ಟಪಟ್ಟಿಲ್ಲ ಎಂದು ಪೋಷಕರು ಹೇಳಿದ್ದರು. ಇನ್ನೂ ಹೆಚ್ಚಿನ ವ್ಯಾಸಂಗ ಮಾಡುವುದಿದೆ ಎಂದು ಫಯಾಜ್‌ನ ತಂದೆ, ತಾಯಿಗೆ ದೂರವಾಣಿ ಕರೆ ಮಾಡಿ ನೇಹಾ ಪೋಷಕರು ಹೇಳಿದ್ದರು. ಇಬ್ಬರ ಮತವೂ ಬೇರೆ ಆಗಿರುವುದರಿಂದಲೂ ಸಮಸ್ಯೆ ಉಂಟಾಗಬಹುದು ಎಂಬುದನ್ನು ಕೂಡ ಅವರ ಅರಿವಿಗೆ ತರಲಾಗಿತ್ತು. ಎಫ್‌ಐಆರ್‌ನಲ್ಲಿ ಈ ಬಗ್ಗೆ ವಿವರವಾದ ಉಲ್ಲೇಖವನ್ನು ನೇಹಾಳ ತಾಯಿ ಗೀತಾ ನೀಡಿದ್ದಾರೆ.
ಇಷ್ಟಾದರೂ ನಮ್ಮ ಮಗಳ ಬೆನ್ನು ಬಿದ್ದಿದ್ದ ಫಯಾಜ್, ನಾಲ್ಕೈದು ಬಾರಿ ಬೆದರಿಕೆ ಹಾಕಿದ್ದ. ಮದುವೆಯಾಗದಿದ್ದರೆ ನಿನ್ನನ್ನು ಜೀವಂತವಾಗಿ ಬಿಡುವುದಿಲ್ಲ ಎಂದು ಬೆದರಿಕೆ ಹಾಕುತ್ತಿದ್ದ ಎಂದು ನೇಹಾ ತಮ್ಮ ಗಮನಕ್ಕೆ ತಂದಿದ್ದಳು ಎಂದು ನೇಹಾಳ ಪೋಷಕರು ತಿಳಿಸಿದ್ದಾರೆ. ಆಗಲೇ ಬಹುಶಃ ಇದನ್ನು ಪೊಲೀಸರ ಗಮನಕ್ಕೆ ತಂದಿದ್ದರೆ ನೇಹಾ ಜೀವ ಉಳಿಯುತ್ತಿತ್ತೋ ಏನೋ ಎಂದು ಹೇಳಲಾಗುತ್ತಿದೆ.
“ತಪ್ಪು ಆಕೆಯಲ್ಲೂ ಇದೆ” ಎಂದ ಫಯಾಜ್ ತಾಯಿ
ಈ ನಡುವೆ, “ತಪ್ಪು ಆಕೆಯಲ್ಲೂ ಇದೆʼ ಎಂದು ಹೇಳಿರುವ ಆರೋಪಿ ಫಯಾಜ್ ತಾಯಿಯ ಹೇಳಿಕೆ ಚರ್ಚೆಗೆ ಗ್ರಾಸವಾಗಿದೆ. ವಿಸ್ತಾರ ನ್ಯೂಸ್‌ಗೆ ಹೇಳಿಕೆ ನೀಡಿರುವ ಫಯಾಜ್ ತಾಯಿ, ತಪ್ಪು ಒಬ್ಬರಿಂದ ಆಗಲು ಸಾಧ್ಯವೇ ಇಲ್ಲ. ತಪ್ಪು ಇಬ್ಬರಲ್ಲೂ ಇರುತ್ತೆ. ಅವರಿಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಅದು ಹೇಗೆ ಒನ್ ಸೈಡ್ ಲವ್ ಆಗುತ್ತೆ?” ಎಂದು ಪ್ರಶ್ನಿಸಿದ್ದಾರೆ.
“ಸತ್ಯಾಸತ್ಯತೆ ಪರಿಶೀಲಿಸಿ, ಸಾಧಕ ಬಾಧಕ ನೋಡಿ ಅವನಿಗೆ ಶಿಕ್ಷೆ ನೀಡಬೇಕು. ಏನೇ ಶಿಕ್ಷೆ ಕೊಟ್ಟರೂ ಸಹ ನಾನು ಒಪ್ಪಿಕೊಳ್ಳುತ್ತೇನೆ. ಇಬ್ಬರೂ ಕ್ಲಾಸ್ ಮೇಟ್ ಆಗಿದ್ದವರು. ಮುಂದೆ ಅವರಲ್ಲಿ ಏನು ನಡೆಯಿತು ಅದು ಗೊತ್ತಿಲ್ಲ. ಪೋನ್‌ನಲ್ಲಿ ಅವಳ ಜೊತೆ ಮಾತನಾಡಿದ ಎಲ್ಲ ರೆಕಾರ್ಡ್‌ಗಳಿವೆ. ಇದರ ಮೇಲೆ ಕಾನೂನು ಯಾವ ರೀತಿ ಕ್ರಮ ಕೈಗೊಳ್ಳುತ್ತೋ ಅದು ತೆಗೆದುಕೊಳ್ಳಲಿ” ಎಂದಿದ್ದಾರೆ.
“ಇರುವೆಯನ್ನೂ ಸಹ ಸಾಯಿಸದ ಅವನಿಗೆ ಇಷ್ಟೊಂದು ಧೈರ್ಯ ಹೇಗೆ ಬಂತು ಅಂತ ನಮಗೆ ಗೊತ್ತಿಲ್ಲ. ಜಿಮ್ ಮಾಡಿ ಒಳ್ಳೆಯ ಬಾಡಿ ಇಟ್ಟುಕೊಂಡಿದ್ದ ಅವನು. ಅವಳ ಜೊತೆಗಿನ ಪ್ರೀತಿ ಸ್ನೇಹದಿಂದಲೇ ಅವನು ಡಿಪ್ರೆಶನ್‌ಗೆ ಹೋದ. ಊಟ ಸಹ ಸರಿಯಾಗಿ ಮಾಡುತ್ತಿರಲಿಲ್ಲ” ಎಂದಿದ್ದಾರೆ.
“ನಾವು ನೂರಾರು ಮಕ್ಕಳಿಗೆ ಶಿಕ್ಷಣ ಕೊಟ್ಟಿದ್ದೇವೆ. ಅವರು ತಪ್ಪು ಮಾಡಿದಾಗ ಹೊಡೆದು ಬುದ್ಧಿ ಹೇಳ್ತೀವಿ. ಆದ್ರೆ ನನ್ನ ಮಗನೇ ಈಗ ತಪ್ಪು ಮಾಡಿದ್ದಾನೆ, ಅದು ತಪ್ಪು ತಪ್ಪೇ. ಕಾನೂನು ಪ್ರಕಾರ ಏನು ಶಿಕ್ಷೆ ಆಗಬೇಕೋ ಅದು ಆಗಲಿ. ಘಟನೆ ನಡೆದು ಸಂಜೆ ಗೊತ್ತಾಗಿದೆ. ಎರಡು ದಿನದಿಂದ ನಂಗೆ ಕರೆ ಸಹ ಮಾಡಿಲ್ಲ ಅವನು. ಅವನ ತಪ್ಪಿಗೆ ಶಿಕ್ಷೆ ಆಗಲೇಬೇಕು, ಅದನ್ನು ಅವನು ಅನುಭವಿಸಬೇಕು” ಎಂದು ಹೇಳಿದ್ದಾರೆ.
“ಐಎಎಸ್ ಆಫೀಸರ್ ಆಗುತ್ತಾನೆ ಅಂತ ನಾವು ಅಂದುಕೊಂಡಿದ್ದೆವು. ಒಬ್ಬನೇ ಮಗ ಎಂದು ಉತ್ತಮ ಶಿಕ್ಷಣ ಕೊಡಿಸಿದ್ದೆವು. ಅವನ ತಪ್ಪಿನಿಂದ ನಾವೆಲ್ಲರೂ ತಲೆ ತಗ್ಗಿಸುವಂತೆ ಆಗಿದೆ” ಎಂದು ಹೇಳಿದ್ದಾರೆ. ಆದರೆ ಅವರು ಫಯಾಜ್ ಕೃತ್ಯವನ್ನು ಸಮರ್ಥಿಸಿಕೊಂಡಂತೆ ಮಾತನಾಡಿರುವುದು ಹಾಗೂ ಈ ಕೃತ್ಯದಲ್ಲಿ ನೇಹಾ ಪಾಲೂ ಇದೆ ಎಂಬರ್ಥ ಬರುವಂತೆ ಮಾತನಾಡಿರುವುದು ಎಲ್ಲರ ಹುಬ್ಬೇರುವಂತೆ ಮಾಡಿದೆ.
ಇದನ್ನೂ ಓದಿ: Neha Murder Case: ನೇಹಾ ಹತ್ಯೆ: ಅಪರಾಧಿಗೆ ಶಿಕ್ಷೆ ನೀಡಬೇಕು ಎಂದು ಸಿನಿಮಾ ತಾರೆಯರ ಆಗ್ರಹ