ಬೆಂಗಳೂರು: ಮೂರುನಾಲ್ಕು ದಿನಗಳ ಹಿಂದೆ ಬೆಂಗಳೂರಿನ ಬೆಳ್ಳಂದೂರಿನಲ್ಲಿ ಅಕ್ರಮವಾಗಿ ವಾಸವಿದ್ದುಕೊಂಡು ಪತ್ತೆಯಾದ, ಭಾರತೀಯ ಯುವಕನನ್ನು ಮದುವೆಯಾಗಿರುವ ಪಾಕಿಸ್ತಾನಿ ಯುವತಿಯ ಪ್ರಕರಣ ತನಿಖಾ ಸಂಸ್ಥೆಗಳಿಗೆ ಇದೀಗ ತಲೆನೋವಾಗಿದೆ. ಹಾಗಿದ್ದರೆ ಪಾಕಿಸ್ತಾನದಿಂದ ಅಕ್ರಮವಾಗಿ ಮಹಿಳೆಯನ್ನು ಕರೆತರುವುದು ಅಷ್ಟು ಸುಲಭವೇ ಎಂಬ ಬೆಚ್ಚಿ ಬೀಳಿಸುವ ಪ್ರಶ್ನೆಯ ಬೆನ್ನು ಬಿದ್ದಿದೆ ತನಿಖಾ ಸಂಸ್ಥೆ.
ಬೆಳ್ಳಂದೂರಿನಲ್ಲಿ ಪತ್ತೆಯಾದ ಪಾಕಿಸ್ತಾನದ ಯುವತಿ ಇಕ್ರಾ ಜೀವನಿ, ತನ್ನ ಪ್ರಿಯಕರ, ಉತ್ತರ ಪ್ರದೇಶ ಮೂಲದ ಮುಲಾಯಂ ಸಿಂಗ್ ಜೊತೆ ವಾಸವಿದ್ದಳು. ಕಳೆದ ಮೂರ್ನಾಲ್ಕು ವರ್ಷಗಳ ಹಿಂದೆ ಆನ್‌ಲೈನ್ ಗೇಮ್ ಮುಖಾಂತರ ಇವರ ಪ್ರೀತಿ ಶುರುವಾಗಿತ್ತು. ಈ ಜೋಡಿಗಳು ಒಂದಾಗಬಯಸಿ ಪ್ಲಾನ್ ಮಾಡಿದ್ದವು.
ಅದರಂತೆ ಆಕೆ ಟೂರಿಸ್ಟ್ ವೀಸಾ ಮುಖಾಂತರ ದುಬೈಗೆ ಹಾರಿ ಬಳಿಕ ವಿಮಾನದಲ್ಲಿ ನೇಪಾಳಕ್ಕೆ ಬಂದಿದ್ದಳು. ಈತನೂ ನೇಪಾಳಕ್ಕೆ ತೆರಳಿ ಆಕೆಯನ್ನು ಭೇಟಿ ಮಾಡಿದ್ದ. ನಂತರ ಇಬ್ಬರೂ ಅಲ್ಲೇ ವಿವಾಹವಾಗಿದ್ದರು. ಬಳಿಕ ಬಿಹಾರದ ಬಿರ್‌ಗಂಜ್ ಗಡಿ ಮೂಲಕ ಸೈಲೆಂಟಾಗಿ ಭಾರತ ಪ್ರವೇಶಿಸಿದ ಜೋಡಿ, ಬೆಂಗಳೂರಿಗೆ ಬಂದಿದ್ದಾರೆ. ಇಲ್ಲಿ ಬಾಡಿಗೆ ಮನೆ ಪಡೆದ ಜೋಡಿ ಕಳೆದ ಐದು ತಿಂಗಳಿಂದ ವಾಸ ಮಾಡುತ್ತಿದ್ದಾರೆ. ಇತ್ತೀಚೆಗೆ ಪಾಕಿಸ್ತಾನದಲ್ಲಿರುವ ತಾಯಿಗೆ ಯುವತಿ ಕರೆ ಮಾಡಲು ಮುಂದಾದಾಗ ತನಿಖಾ ಸಂಸ್ಥೆಗಳಿಗೆ ಇದರ ಪತ್ತೆ ಹತ್ತಿತ್ತು. ವಿಚಾರಿಸಿದಾಗ ಈ ಪ್ರಕರಣ ಬಯಲಾಗಿದೆ.
ಈಗ ತನಿಖಾ ಸಂಸ್ಥೆಗಳಿಗೆ ತಲೆ ಕೆಡಿಸಿರುವ ಪ್ರಶ್ನೆಯೇನೆಂದರೆ, ಪಾಕ್- ಭಾರತ ಗಡಿಯನ್ನು ದಾಟಿ ಬರುವುದು ಅಷ್ಟು ಸುಲಭವೇ ಎಂಬುದು. ಹೀಗಾಗಿ ಗುಪ್ತಚರ ಇಲಾಖೆ, ಐಎಸ್‌ಡಿ ಸೇರಿದಂತೆ ಹಲವು ತನಿಖಾ ಸಂಸ್ಥೆಗಳು ಈ ಜೋಡಿಯ ಹೆಚ್ಚಿನ ತನಿಖೆಗೆ ಮುಂದಾಗಿವೆ. ಒಟ್ಟಿನಲ್ಲಿ ಮೊಬೈಲ್ ಗೇಮ್‌ನಲ್ಲಿ ಶುರುವಾದ ಈ ಜೋಡಿಯ ಪ್ರೀತಿ ಒಂದು ಸಿನಿಮಾ ಕಥೆಯಂತಿದ್ದರೂ ತನಿಖಾ ಸಂಸ್ಥೆಗಳಿಗೆ ತಲೆನೋವಾಗಿದೆ.
ಇದನ್ನೂ ಓದಿ : Pakistan girl: ಬೆಂಗಳೂರಿನಲ್ಲಿ ಅಕ್ರಮವಾಗಿ ವಾಸವಾಗಿದ್ದ ಪಾಕ್ ಯುವತಿ ಬಂಧನ