ಬೆಂಗಳೂರು: ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ (Prajwal Revanna Case) ಕೇಂದ್ರ ಸರಕಾರದ ವಿರುದ್ಧ ರಾಜತಾಂತ್ರಿಕ ಸಮರದ ಹಾದಿ ಹಿಡಿದಿರುವ ಕರ್ನಾಟಕ ಸರ್ಕಾರ, ಇನ್ನೊಂದು ಪತ್ರವನ್ನು ರವಾನಿಸಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ (PM Narendra Modi) ಅವರಿಗೆ ಮತ್ತೊಂದು ಪತ್ರ ಬರೆದಿರುವ ಸಿಎಂ ಸಿದ್ದರಾಮಯ್ಯ (CM Siddaramaiah), ಪ್ರಜ್ವಲ್ ರೇವಣ್ಣನ ರಾಜತಾಂತ್ರಿಕ ಪಾಸ್ಪೋರ್ಟ್ (Diplomatic passport) ರದ್ದು ಮಾಡಿ ಎಂದು ಮನವಿ ಮಾಡಿದ್ದಾರೆ.
ರಾಜ್ಯ ಸರ್ಕಾರದ ಪತ್ರ ಆಧರಿಸಿ ಕೆಲಸಕ್ಕೆ ಆರಂಬಿಸಿರುವ ಕೇಂದ್ರ ವಿದೇಶಾಂಗ ಇಲಾಖೆ, ಪ್ರಜ್ವಲ್ ರೇವಣ್ಣ ಪಾಸ್ಪೋರ್ಟ್ ರದ್ದು ಮಾಡುವ ಪ್ರಕ್ರಿಯೆ ಆರಂಭಿಸಿದೆ. ಪಾಸ್ಪೋರ್ಟ್ ಆಕ್ಟ್ 1967ರ ಸೆಕ್ಷನ್ 10(3)(h) ಅಡಿ ಪಾಸ್ಪೋರ್ಟ್ ರದ್ದು ಮಾಡಿ. ಭಾರತಕ್ಕೆ ವಾಪಸ್ ಕರೆ ತರಲು ಕ್ರಮ ಕೈಗೊಳ್ಳಿ ಎಂದು ಒತ್ತಾಯಿಸಿ ಪತ್ರದ ಮೂಲಕ ಕೇಂದ್ರದ ಸಹಕಾರವನ್ನು ಸಿಎಂ ಸಿದ್ದರಾಮಯ್ಯ ಕೋರಿದ್ದಾರೆ. ಎಸ್ಐಟಿ ಹೊರಡಿಸಿದ ಆರೆಸ್ಟ್ ವಾರೆಂಟ್ ಸಮೇತ ಪತ್ರದ ಜೊತೆಗೆ ಲಗತ್ತಿಸಲಾಗಿದೆ.
ಪ್ರಕರಣ ಪ್ರಧಾನ ಆರೋಪಿಯಾಗಿರುವ ಪ್ರಜ್ವಲ್ ರೇವಣ್ಣ ಹಾಲಿ ಸಂಸದ ಹಾಗೂ ಮಾಜಿ ಪ್ರಧಾನಿಗಳ ಕುಟುಂಬದ ಸದಸ್ಯನಾಗಿದ್ದು, ರಾಜತಾಂತ್ರಿಕ ಪಾಸ್ಪೋರ್ಟ್ ಬಳಸಿ ಪ್ರಯಾಣ ಮಾಡಿದ್ದಾರೆ. FIR ದಾಖಲಾಗುವ ಕೆಲ ಗಂಟೆಗಳಿಗೆ ಮುನ್ನ ದೇಶ ತೊರೆದಿದ್ದಾರೆ. ಅವರ ಮೇಲೆ ಅತ್ಯಾಚಾರ, ಲೈಂಗಿಕ ದೌರ್ಜನ್ಯ, ಒತ್ತಾಯ ಪೂರ್ವಕವಾಗಿ ವಿಡಿಯೋ ಮಾಡಿರುವ ಆರೋಪಗಳಿವೆ. ಇಂತಹ ಆರೋಪಿ ರಾಜತಾಂತ್ರಿಕ ಪಾಸ್ಪೋರ್ಟ್ ಬಳಸಿ ಕಾನೂನು ಕ್ರಮಗಳಿಂದ ತಪ್ಪಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಆರೋಪಿ ಪ್ರಜ್ವಲ್ ರೇವಣ್ಣ ರಾಜತಾಂತ್ರಿಕ ಪಾಸ್ ಪೋರ್ಟ್ ರದ್ದು ಮಾಡಿ. ಈ ವಿಚಾರವನ್ನು ಅತ್ಯಂತ ಗಂಭೀರ ಎಂದು ಪರಿಗಣಿಸಿ. ಸಾರ್ವಜನಿಕ ಹಿತಾಸಕ್ತಿ ಕಾರಣಕ್ಕಾಗಿ ಪಾಸ್ಪೋರ್ಟ್ ರದ್ದುಗೊಳಿಸಿ ಭಾರತಕ್ಕೆ ಬರುವಂತೆ ಮಾಡಿ ಎಂದು ಪತ್ರದಲ್ಲಿ ಮನವಿ ಮಾಡಲಾಗಿದೆ.
ಇದು ಸಿಎಂ ಕೇಂದ್ರಕ್ಕೆ ಎರಡನೇ ಬಾರಿ ಬರೆಯುತ್ತಿರುವ ಪತ್ರವಾಗಿದೆ. ಈ ಹಿಂದೆಯೂ ಒಮ್ಮೆ ಅವರು ಪತ್ರ ಬರೆದಿದ್ದರು. ಪ್ರಕರಣದ ಪ್ರಮುಖ ಆರೋಪಿ ಜೆಡಿಎಸ್ ಸಂಸದರಾಗಿದ್ದು, ಜೆಡಿಎಸ್ ಜತೆಗೆ ಮೈತ್ರಿ ಮಾಡಿಕೊಂಡಿರುವ ಬಿಜೆಪಿಯನ್ನು ಮುಜುಗರ ಹಾಗೂ ಇಕ್ಕಟ್ಟಿಗೆ ಸಿಕ್ಕಿಸುವುದು ಈ ಪತ್ರಗಳ ಉದ್ದೇಶವಾಗಿದೆ ಎಂದು ವಿಶ್ಲೇಷಿಸಲಾಗಿದೆ.
ಈ ಬಾರಿ ವಿದೇಶಾಂಗ ಇಲಾಖೆ ಪ್ರಕ್ರಿಯೆ ಚುರುಕುಗೊಳಿಸಿರುವುದರಿಂದ, ವಿದೇಶದಲ್ಲಿ ತಲೆಮರೆಸಿಕೊಂಡಿರುವ ಪ್ರಜ್ವಲ್ಗೆ ನಿಜವಾಗಿಯೂ ಸಂಕಷ್ಟ ಎದುರಾಗಿದೆ. ರಾಜತಾಂತ್ರಿಕ ಪಾಸ್ಪೋರ್ಟ್ ರದ್ದು ಮಾಡಿದರೆ ಪ್ರಜ್ವಲ್ ವಿದೇಶ ಯಾನ ಕಷ್ಟವಾಗಲಿದೆ. ಚಾಲ್ತಿಯಲ್ಲಿಲ್ಲದ ಪಾಸ್ಪೋರ್ಟ್ ಬಳಸಿದರೆ ಅಧಿಕಾರಿಗಳು ಅವರನ್ನು ಬಂಧಿಸಿ ಭಾರತಕ್ಕೆ ಹಸ್ತಾಂತರಿಸಲು ಸುಲಭವಾಗಲಿದೆ. ಇದರೊಂದಿಗೆ ಪ್ರಜ್ವಲ್ಗೆ ಪಲಾಯನದ ದಾರಿಗಳು ಬಂದ್ ಆಗಿವೆ.
ವಿದೇಶಾಂಗ ಇಲಾಖೆಗೆ ಎಸ್ಐಟಿ ಪತ್ರ
ಹಾಸನ ಪೆನ್ಡ್ರೈವ್ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಸಂಸದ ಪ್ರಜ್ವಲ್ ರೇವಣ್ಣ (Prajwal Revanna Case) ವಿದೇಶದಲ್ಲಿ ತಲೆಮರೆಸಿಕೊಂಡ ಹಿನ್ನೆಲೆಯಲ್ಲಿ ನಗರದ 42ನೇ ಎಸಿಎಂಎಂ ಕೋರ್ಟ್, ಇತ್ತೀಚೆಗೆ ಸಂಸದನ ವಿರುದ್ಧ ಬಂಧನ ವಾರಂಟ್ ಹೊರಡಿಸಿ, ಪಾಸ್ಪೋರ್ಟ್ ಕ್ಯಾನ್ಸಲ್ ಮಾಡಲು ಅನುಮತಿ ನೀಡಿತ್ತು. ಹೀಗಾಗಿ ಪ್ರಜ್ವಲ್ ಪಾಸ್ ಪೋರ್ಟ್ ರದ್ದು ಮಾಡುವಂತೆ ಕೋರಿ, ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ಎಸ್ಐಟಿ ಪತ್ರ ಬರೆದಿದೆ.
ಈ ಕೂಡಲೇ ಸಂಸದ ಪ್ರಜ್ವಲ್ ರೇವಣ್ಣ ಅವರ ಪಾಸ್ ಪೋರ್ಟ್ ರದ್ದು ಮಾಡಬೇಕು ಎಂದು ಮನವಿ ಮಾಡಿರುವ ಎಸ್ಐಟಿ, ಲುಕ್ ಔಟ್ ನೋಟಿಸ್, ಬ್ಲೂ ಕಾರ್ನರ್ ನೋಟಿಸ್ ಎಲ್ಲವನ್ನೂ ಪತ್ರದ ಜತೆ ಟ್ಯಾಗ್ ಮಾಡಿದೆ. ಜತೆಗೆ ಪ್ರಜ್ವಲ್ ವಿರುದ್ಧದ ಪ್ರಕರಣಗಳ ಬಗ್ಗೆ ವಿದೇಶಾಂಗ ಇಲಾಖೆಗೆ ಮಾಹಿತಿ ನೀಡಿದ್ದು, ಸಂಸದ ಯಾವ ದೇಶದಲ್ಲಿ ಇದ್ದಾನೆ ಎಂಬ ಮಾಹಿತಿ ನೀಡುವಂತೆ ಮನವಿ ಮಾಡಿದೆ.
ಇದನ್ನೂ ಓದಿ: Prajwal Revanna Case: 400 ಮಹಿಳೆಯರ ಮೇಲೆ ಪ್ರಜ್ವಲ್ ಮಾಸ್ ರೇಪ್ ಆರೋಪ; ರಾಹುಲ್ ಗಾಂಧಿ ವಿರುದ್ಧ ಡಿಜಿಗೆ ಜೆಡಿಎಸ್ ದೂರು