Site icon Vistara News

Prajwal Revanna Case: ಪ್ರಜ್ವಲ್‌ ರೇವಣ್ಣ ಅಜ್ಞಾತವಾಸಕ್ಕೆ ಒಂದು ತಿಂಗಳು, ಎಲ್ಲಿದ್ದೀಯಪ್ಪಾ ಪ್ರಜ್ವಲ್?

Prajwal Revanna Case

ಹಾಸನ: ಹಾಸನ ಸಂಸದ ಪ್ರಜ್ವಲ್ ರೇವಣ್ಣ (Hassan MP Prajwal Revanna Case) ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋ ವೈರಲ್ (pen drive case video viral) ಪ್ರಕರಣಕ್ಕೆ ಸಂಬಂಧಿಸಿ ತನಿಖೆಯಿಂದ ತಪ್ಪಿಸಿಕೊಳ್ಳಲು ವಿದೇಶಕ್ಕೆ ಹಾರಿರುವ ಪ್ರಜ್ವಲ್ ರೇವಣ್ಣ ಅವರ ದೇಶಾಂತರ ವಾಸಕ್ಕೆ ಒಂದು ತಿಂಗಳು ಪೂರ್ಣವಾಗಿದೆ. ಇನ್ನೂ ಅವರು ದೇಶಕ್ಕೆ ಹಿಂದಿರುಗುವ ಯಾವ ಸುಳಿವನ್ನೂ ಕಾಣಿಸಿಲ್ಲ.

ಏಪ್ರಿಲ್ 26ರಂದು ನಡೆದ ಎರಡನೇ ಹಂತದ ಮತದಾನ ಮುಗಿಸಿ ಪ್ರಜ್ವಲ್‌ ಮಾರನೇ ದಿನ ಮುಂಜಾನೆ ದೇಶ ಬಿಟ್ಟು ಎಸ್ಕೇಪ್ ಆಗಿದ್ದರು. ತಲೆ ಮರೆಸಿಕೊಂಡು ತಿಂಗಳು ಕಳೆದರೂ ಅವರ ಸುಳಿವು ಪತ್ತೆಯಾಗಿಲ್ಲ. ಒಂದು ತಿಂಗಳಿನಿಂದ ಎಸ್‌ಐಟಿಗೆ (SIT) ಚಳ್ಳೆ ಹಣ್ಣು ತಿನ್ನಿಸಿ ತಲೆ ಮರೆಸಿಕೊಂಡಿರುವ ಪ್ರಜ್ವಲ್‌ ವಿರುದ್ಧ ಮೂರು ಅತ್ಯಾಚಾರ ಆರೋಪ ಕೇಸ್‌ಗಳಿವೆ.

ಮೂರು ಕೇಸ್ ದಾಖಲಾದರೂ ತಲೆ ಕೆಡಿಸಿಕೊಳ್ಳದ ಪ್ರಜ್ವಲ್ ತಂದೆ ಎಚ್‌.ಡಿ ರೇವಣ್ಣ (HD revanna) ಅವರ ಬಂಧನವಾದ್ರೂ ಹಿಂದಿರುಗಿಲ್ಲ. ಚಿಕ್ಕಪ್ಪ, ಮಾಜಿ ಸಿಎಂ‌ ಎಚ್‌.ಡಿ ಕುಮಾರಸ್ವಾಮಿ (HD Kumaraswami) ಮನವಿಗೂ ಡೋಂಟ್ ಕೇರ್ ಮಾಡಿದ್ದಾರೆ. ತಾತ, ಮಾಜಿ ಪ್ರಧಾನಿ ಎಚ್‌.ಡಿ ದೇವೇಗೌಡರ (HD Deve gowda) ಎಚ್ಚರಿಕೆಗೂ ಸೊಪ್ಪುಹಾಕಿಲ್ಲ. ʼಕೂಡಲೇ ಹಿಂದಿರುಗಿ ಬಾರದಿದ್ದರೆ ಕುಟುಂಬದಲ್ಲಿ ಒಂಟಿಯಾಗಬೇಕಾಗುತ್ತದೆʼ ಎಂದು ದೇವೇಗೌಡರು ಎಚ್ಚರಿಸಿದ್ದರೂ ಪ್ರಜ್ವಲ್‌ ತುಟಿ ಪಿಟಕ್‌ ಎಂದಿಲ್ಲ.

ಪ್ರಜ್ವಲ್ ಎಲ್ಲಿದ್ದಾನೆಂಬ ಖಚಿತ ಮಾಹಿತಿ ಎಸ್ಐಟಿಗೆ ದೊರೆತಿಲ್ಲ. ಜರ್ಮನಿ, ದುಬೈ, ಹಂಗೇರಿ, ಇಂಗ್ಲೆಂಡ್ ಹೀಗೆ ಹಲವು ದೇಶಗಳಲ್ಲಿ ಓಡಾಡಿದ್ದಾರೆ ಎಂದು ಹೇಳಲಾಗಿದೆ. ಜರ್ಮನಿಯಿಂದ ಹಿಂದಿರುಗುವ ಟಿಕೆಟ್‌ ರಿಸರ್ವ್‌ ಮಾಡಿಸಿ ನಂತರ ಕೊನೆಯ ಕ್ಷಣದಲ್ಲಿ ರದ್ದುಪಡಿಸಿದ್ದು ಗೊತ್ತಾಗಿದೆ. ಪ್ರಜ್ವಲ್‌ ಎಲ್ಲಿದ್ದಾರೆ ಎಂಬ ಸುಳಿವು ಹೊಂದಿರಬಹುದಾದ ಭವಾನಿ ರೇವಣ್ಣ (Bhavani revanna) ಕೂಡ ವಿಚಾರಣೆಗೆ ಹಾಜರಾಗಿಲ್ಲ.

ಪ್ರಜ್ವಲ್ ಹೊಂದಿರುವ ಡಿಪ್ಲೊಮ್ಯಾಟಿಕ್ ಪಾಸ್‌ಪೋರ್ಟ್ ರದ್ದುಗೊಳಿಸಲು ಕೋರಿ ಕೇಂದ್ರ ವಿದೇಶಾಂಗ ಇಲಾಖೆಗೆ ರಾಜ್ಯ ಸರ್ಕಾರ ಎರಡೆರಡು ಸಲ ಪತ್ರ ಬರೆದಿದೆ. ಈ ವಾರ ಪಾಸ್‌ಪೋರ್ಟ್ ರದ್ದಾದರೆ ಪ್ರಜ್ವಲ್ ವಾಪಸ್ ಮರಳಬೇಕಾದ ಅನಿವಾರ್ಯತೆ ಸೃಷ್ಟಿಯಾಗುತ್ತದೆ. ಹೀಗಾಗಿ ಕೇಂದ್ರ ಗೃಹ ಇಲಾಖೆ ನಡೆ ಏನು ಎಂಬುದು ಕುತೂಹಲ ಮೂಡಿಸಿದೆ.

ಇನ್ನೊಂದು ಕಡೆ, ಪ್ರಜ್ವಲ್‌ನ ಕರೆಸಿ ಅಂತ ಪುತ್ರ ರೇವಣ್ಣಗೆ ದೇವೇಗೌಡರು ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ. ವಾರ್ನಿಂಗ್ ಬೆನ್ನಲ್ಲೇ ಪ್ರಜ್ವಲ್ ವಾಪಸ್ ಕರೆಸಲು ಕಸರತ್ತು ಜೋರಾಗಿದೆ. ಪ್ರಜ್ವಲ್ ಸಂಪರ್ಕಕ್ಕೆ ರೇವಣ್ಣ ಕುಟುಂಬಸ್ಥರು ಯತ್ನಿಸುತ್ತಿದ್ದು, ಪ್ರಜ್ವಲ್ ತಾಯಿ ಕಡೆಯ ಸಂಬಂಧಿಕರ ಮೂಲಕ ಹಾಗೂ ವಿದೇಶದಲ್ಲಿರುವ ಪ್ರಜ್ವಲ್ ಸ್ನೇಹಿತರ ಮೂಲಕವೂ ಸಂಪರ್ಕಕ್ಕೆ ತೀವ್ರ ಪ್ರಯತ್ನ ನಡೆಯುತ್ತಿದೆ.

ಇನ್ನು ಎರಡು ಮೂರು ದಿನಗಳಲ್ಲಿ ಪ್ರಜ್ವಲ್‌ನನ್ನು ಕರೆಸಿ ಎಸ್ಐಟಿ ಮುಂದೆ ಹಾಜರು ಮಾಡಿಸಲು ಶತ ಪ್ರಯತ್ನ ಮಾಡಲಾಗುತ್ತಿದೆ. ಈಗಾಗಲೇ ಪ್ರಜ್ವಲ್ ರೇವಣ್ಣಗೆ ವಿದೇಶಾಂಗ ಸಚಿವಾಲಯ ಶೋಕಾಸ್ ನೋಟಿಸ್ ನೀಡಿದೆ. ಒಂದು ವೇಳೆ ಪ್ರಜ್ವಲ್ ರಾಜತಾಂತ್ರಿಕ ಪಾಸ್‌ಪೋರ್ಟ್ ರದ್ದಾದರೆ ಪ್ರಕರಣದಲ್ಲಿ ಪ್ರಜ್ವಲ್‌ಗೆ ಸಂಕಷ್ಟ ಎದುರಾಗಲಿದೆ. ಆಗ ಕುಟುಂಬಕ್ಕೆ ಮತ್ತಷ್ಟು ಮುಜುಗರ ಉಂಟಾಗುತ್ತದೆ. ತೀವ್ರ ಸ್ವರೂಪದ ಮುಜುಗರ ತಪ್ಪಿಸಿಕೊಳ್ಳಲು ಪ್ರಜ್ವಲ್ ವಿದೇಶದಿಂದ ಕರೆಸಲು ರೇವಣ್ಣ ಕುಟುಂಬಸ್ಥರು ಎಲ್ಲಾ ಆಯಾಮದಲ್ಲೂ ಪ್ರಯತ್ನ ಮಾಡುತ್ತಿದ್ದಾರೆ.

ಚುನಾವಣೆ ಫಲಿತಾಂಶ ಜೂನ್‌ 4ರಂದು ಬರಲಿದ್ದು, ಅದಕ್ಕೂ ಮುನ್ನ ಪ್ರಜ್ವಲ್‌ ದೇಶಕ್ಕೆ ಮರಳುವುದು ಅಸಂಭವ ಎನ್ನಲಾಗುತ್ತಿದೆ. ಈ ಸಲದ ಚುನಾವಣೆಯಲ್ಲಿ ಸೋತರೆ ಅನಿವಾರ್ಯವಾಗಿ ಶರಣಾಗಬೇಕಾಗುತ್ತದೆ. ಗೆದ್ದರೆ ಸಂಸದೀಯ ಸ್ಥಾನದ ಪ್ರಭಾವ ಬಳಸುವ ಸಾಧ್ಯತೆಯಿದೆ.

ಇದನ್ನೂ ಓದಿ: Prajwal Revanna Case: ವಿಡಿಯೊ ವೈರಲ್ ಅಪರಾಧದ ಸೆಕ್ಷನ್ ಹೇಳಿದ ಎಚ್‌ಡಿಕೆ; ಸಿಎಂ ಕುರ್ಚಿಯಲ್ಲಿ ಊಸರವಳ್ಳಿ ಎಂದು ಕಿಡಿ

Exit mobile version