Site icon Vistara News

ವಿಸ್ತಾರ Explainer | ಏನಿದು ಡಿಜಿಟಲ್ ರೇಪ್? ಶಿಕ್ಷೆಯಾದ ದೇಶದ ಮೊದಲ ಪ್ರಕರಣ ಯಾವುದು?

Rape

ದೇಶದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ರೇಪ್ (Digital Rape) ಅಪರಾಧಕ್ಕಾಗಿ ವ್ಯಕ್ತಿಯೊಬ್ಬನಿಗೆ ಜೀವಾವಧಿ ಶಿಕ್ಷೆಯನ್ನು ನ್ಯಾಯಾಲಯವು ವಿಧಿಸಿದೆ. ಈ ಡಿಜಿಟಲ್ ರೇಪ್ ಬಗ್ಗೆ ಜನರಿಗೆ ಅಷ್ಟೊಂದು ಅರಿವು ಇಲ್ಲ. ಡಿಜಿಟಲ್ ರೇಪ್ ಅಂದರೆ, ವರ್ಚುವಲ್ ಅಥವಾ ಆನ್‌ಲೈನ್ ರೇಪ್ ಅಲ್ಲ. ಪೋಕ್ಸೋ(POCSO)ಮತ್ತು ಐಪಿಸಿ ಸೆಕ್ಷನ್ 375ರಡಿ ದಂಡನಾರ್ಹವಾಗಿರುವ ಈ ಅಪರಾಧ ಬಗ್ಗೆ ಬಹಳಷ್ಟು ಜನರಿಗೆ ಗೊತ್ತಿಲ್ಲ.

ಈ ಡಿಜಿಟಲ್ ರೇಪ್ ಕುರಿತು ಕಾನೂನಿನಲ್ಲಿ ಸ್ಪಷ್ಟ ವ್ಯಾಖ್ಯಾನವಿದೆ. ಸುರಾಜ್‌ಪುರ ಜಿಲ್ಲಾ ಮತ್ತು ಸೆಷನ್ಸ್ ಕೋರ್ಟ್ ನೋಯ್ಡಾದ 65 ವರ್ಷದ ವ್ಯಕ್ತಿಯೊಬ್ಬನಿಗೆ ಶಿಕ್ಷೆಯನ್ನು ಪ್ರಕಟಿಸಿದೆ. ಈ ವ್ಯಕ್ತಿಯು ಮೂರುವರೆ ವರ್ಷದ ಬಾಲಕಿಯ ಮೇಲೆ ಡಿಜಿಟಲ್ ರೇಪ್ ಮಾಡಿದ್ದ. ಈ ಪ್ರಕರಣದ ನೆಲೆಯಲ್ಲಿ, ಏನಿದು ಡಿಜಿಟಲ್ ರೇಪ್, ಈ ಅಪರಾಧಕ್ಕೆ ಶಿಕ್ಷೆ ಏನು, ಯಾವಾಗ ಅಪರಾಧ ಎಂದು ಗುರುತಿಸಲಾಯಿತು… ಎಲ್ಲ ಮಾಹಿತಿ ನಿಮಗಾಗಿ ಇಲ್ಲಿ ಕೊಡಲಾಗಿದೆ… ಓದಿ.

ಸಾಮಾನ್ಯರಿಗೆ ಡಿಜಿಟಲ್ ರೇಪ್ ಎಂಬ ಪದ ಅಪರಿಚಿತವಾಗಿದೆ. ನಿರ್ಭಯಾ ಪ್ರಕರಣದ ಬಳಿಕ ಡಿಜಿಟಲ್ ರೇಪ್ ಅಪರಾಧವನ್ನು ಗುರುತಿಸಲಾಯಿತು. ಲೈಂಗಿಕ ದೌರ್ಜನ್ಯ ವಿರುದ್ಧ ಮಕ್ಕಳ ರಕ್ಷಣೆ(ಪೋಕ್ಸೋ) ಕಾಯಿದೆಯಲ್ಲೂ ಡಿಜಿಟಲ್ ರೇಪ್‌ ಸಂಬಂಧ ಪ್ರತ್ಯೇಕ ಸೆಕ್ಷನ್ ಕೂಡ ಸೇರಿಸಲಾಗಿದೆ. 2013ಕ್ಕಿಂತ ಮುಂಚೆ ದೇಶದಲ್ಲಿ ಡಿಜಿಟಲ್ ರೇಪ್ ಸಂತ್ರಸ್ತರಿಗೆ ನ್ಯಾಯ ಒದಗಿಸುವ ಯಾವುದೇ ಕಾನೂನುಗಳು ಇರಲಿಲ್ಲ. ಈ ರೀತಿಯ ಪ್ರಕರಣಗಳು ದಾಖಲಾಗುತ್ತಿರಲಿಲ್ಲ ಕೂಡ. ಒಂದೊಮ್ಮೆ ದಾಖಲಾದರೂ ಅದನ್ನು ರೇಪ್ ಎಂದು ಪರಿಗಣಿಸುತ್ತಿರಲಿಲ್ಲ. ಆದರೆ, ಡಿಜಿಟಲ್ ರೇಪ್ ಶಿಕ್ಷಾರ್ಹ ಅಪರಾಧವಾಗಿದೆ. ಆ ಮೂಲಕ ಸಂತ್ರಸ್ತರಿಗೆ ನ್ಯಾಯವನ್ನು ಒದಗಿಸಿಕೊಡಲಾಗುತ್ತಿದೆ.

ಏನಿದು ಪ್ರಕರಣ?
ಈ ಅಪರಾಧ ನಡೆದಿದ್ದು 2019ರಲ್ಲಿ. ಪಶ್ಚಿಮ ಬಂಗಾಳ ಮೂಲದ, 65 ವರ್ಷ ವಯಸ್ಸಿನ ಅಕ್ಬರ್ ಅಲಿ ಎಂಬಾತ ತನ್ನ ವಿವಾಹಿತ ಮಗಳನ್ನು ನೋಡಿಕೊಂಡು ಹೋಗಲು ನೋಯ್ಡಾದ ಸೆಕ್ಟರ್ 45ಗೆ ಬಂದಿದ್ದ. ಅಕ್ಬರ್ ಅಲಿ ಪುತ್ರಿ ವಾಸವಿದ್ದ ನೆರೆಹೊರೆಯಲ್ಲಿ ಸಂತ್ರಸ್ತ ಬಾಲಕಿ ಕೂಡ ವಾಸವಾಗಿದ್ದಳು. ಈ ಬಾಲಕಿಗೆ ಕ್ಯಾಂಡಿಯ ಆಸೆ ತೋರಿಸಿದ ಅಕ್ಬರ್ ಅಲಿ, ತಮ್ಮ ಮನೆಗೆ ಕರೆದೊಯ್ದಿದ್ದ. ಬಳಿಕ ಅವಳಿಗೆ ಡಿಜಿಟಲೀ ರೇಪ್ ಮಾಡಿದ್ದ. ಆತನ ಈ ಪೈಶಾಚಿಕ ನಡವಳಿಕೆಗೆ ಬೆಚ್ಚಿದ ಬಾಲಕಿ ಅಳುತ್ತಾ ತನ್ನ ಮನೆಗೆ ಬಂದಿದ್ದಳು. ಸಂತ್ರಸ್ತ ಬಾಲಕಿಯು, ಅಕ್ಬರ್ ಅಳಿ ನಡೆಸಿದ ಪ್ರತಿ ಚಟುವಟಿಕೆಯ ಬಗ್ಗೆಯೂ ತನ್ನ ಪೋಷಕರಿಗೆ ಅಳುತ್ತಾ ತಿಳಿಸಿದಳು. ಕೂಡಲೇ ಸಂತ್ರಸ್ತ ಬಾಲಕಿಯ ಪೋಷಕರು ಹಾಗೂ ನೆರೆಹೊರೆಯವರು ಹತ್ತಿರದ ಪೊಲೀಸ್ ಸ್ಟೇಷನ್‌ಗೆ ತೆರಳಿ, ಆತನ ವಿರುದ್ಧ ದೂರು ನೀಡಿದ್ದರು.

ಪ್ರಕರಣವನ್ನು ದಾಖಲಿಸಿಕೊಂಡ ಪೊಲೀಸರು, ಸಂತ್ರಸ್ತ ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದರು. ಆಗ, ಬಾಲಕಿ ಮೇಲೆ ಡಿಜಿಟಲ್ ರೇಪ್ ನಡೆದಿರುವುದು ಖಚಿತವಾಯಿತು. ಬಳಿಕ ಆರೋಪಿ ಅಕ್ಬರ್ ಅಲಿಯನ್ನು ನೋಯ್ಡಾ ಪೊಲೀಸರು ಬಂಧಿಸಿ ಜೈಲಿಗೆ ಅಟ್ಟಿದರು. 2019ರಿಂದಲೂ ಜಿಲ್ಲಾ ಸೆಷನ್ಸ್ ಜೈಲಿನಲ್ಲಿದ್ದ ಅಕ್ಬರ್ ಅಲಿ, ಮಧ್ಯಂತರ ಜಾಮೀನಿಗಾಗಿ ಹೈಕೋರ್ಟ್‌ಗೆ ಕೂಡ ಮನವಿ ಸಲ್ಲಿಸಿದ್ದ. ಆದರೆ, ಆತನಿಗೆ ಜಾಮೀನು ಸಿಕ್ಕಿರಲಿಲ್ಲ.

ಜೀವಾವಧಿ ಶಿಕ್ಷೆಯಾಯಿತು
ಅಂತಿಮವಾಗಿ ಜಿಲ್ಲಾ ಮತ್ತು ಸೆಷನ್ಸ್ ಕೋರ್ಟ್ ಡಿಜಿಟಲ್ ರೇಪ್ ಅಪರಾಧಕ್ಕೆ ಅಕ್ಬರ್ ಅಲಿಗೆ ಜೀವಾವಧಿಯನ್ನು ಶಿಕ್ಷೆಯನ್ನು ಆ.30ರಂದು ಪ್ರಕಟಿಸಿತು. ಸಾಂದರ್ಭಿಕ ಸಾಕ್ಷ್ಯಗಳು, ವೈದ್ಯಕೀಯ ವರದಿ ಮತ್ತು ವೈದ್ಯರು, ತನಿಖಾಧಿಕಾರಿ, ಪೋಷಕರು ಮತ್ತು ನೆರೆಹೊರೆಯವರ ಸಾಕ್ಷ್ಯಗಳನ್ನು ಆಧರಿಸಿ ಅಪರಾಧಿಗೆ ಜೀವಾವಧಿ ಶಿಕ್ಷೆಯನ್ನು ಕೋರ್ಟ್ ವಿಧಿಸಿತು. ಡಿಜಿಟಲ್ ರೇಪ್ ಅಪರಾಧಕ್ಕಾಗಿ ಜೀವಾವಧಿ ಶಿಕ್ಷೆಗೊಳಗಾದ ಮೊದಲ ಪ್ರಕರಣ ಇದಾಯಿತು.

ಮತ್ತ್ಯಾವ ಪ್ರಕರಣಗಳು?
ಅಕ್ಬರ್ ಅಲಿ ಪ್ರಕರಣಕ್ಕೂ ಮುಂಚೆ ಕೆಲವು ಡಿಜಿಟಲ್ ರೇಪ್ ಪ್ರಕರಣಗಳು ದಾಖಲಾಗಿವೆ. ನೋಯ್ಡಾದ 50 ವರ್ಷದ ವ್ಯಕ್ತಿಯೊಬ್ಬ ಏಳೂವರೆ ತಿಂಗಳ ಹೆಣ್ಣು ಮಗುವಿನ ಮೇಲೆ ಅತ್ಯಾಚಾರ ನಡೆಸಿದ್ದ. ನೋಯ್ಡಾದ್ದೇ ಮತ್ತೊಂದು ಪ್ರಕರಣದಲ್ಲಿ ಆರೋಪಿಯೊಬ್ಬ ತನ್ನ ಐದು ವರ್ಷದ ಮಗುವಿನ ಮೇಲೆ ರೇಪ್ ಮಾಡಿದ್ದ. ಮಗುವಿನ ತಾಯಿ ಎಫ್ಐಆರ್ ದಾಖಲಿಸಿದ್ದಳು. ಹಿಂದಿನ ವರ್ಷ 80 ವರ್ಷದ ವೃದ್ಧ ಕಲಾವಿದನೊಬ್ಬ ಏಳು ವರ್ಷಗಳ ಕಾಲ ಹುಡುಗಿಯೊಬ್ಬಳನ್ನು ಡಿಜಟಲ್ ರೇಪ್ ಮಾಡಿದ್ದ ಎಂದು ದೂರು ದಾಖಲಾಗಿತ್ತು.

ಏನಿದು ಡಿಜಿಟಲ್ ರೇಪ್?
ಡಿಜಿಟಲ್ ರೇಪ್ ಅಂದಾಕ್ಷಣ ಇದು ವರ್ಚುವಲ್ ಇಲ್ಲವೇ ಆನ್‌ಲೈನ್ ರೇಪ್ ಎಂದು ಭಾವಿಸಬೇಕಿಲ್ಲ. ಶಬ್ದಕೋಶದಲ್ಲಿ ಡಿಜಿಟ್ ಎನ್ನುವುದಕ್ಕೆ ಬೆರಳು ಎಂಬ ಅರ್ಥವೂ ಇದೆ. ಅಂದರೆ, ವ್ಯಕ್ತಿಯೊಬ್ಬ ತನ್ನ ಬೆರಳುಗಳು, ಹೆಬ್ಬೆರಳು ಅಥವಾ ಕಾಲ್ಬೆರಳುಗಳನ್ನು ಒತ್ತಾಯ ಪೂರ್ವಕವಾಗಿ ದೇಹದ ಖಾಸಗಿ ಭಾಗಕ್ಕೆ ತುರುಕಿದರೆ ಅಥವಾ ತುರುಕಲೆತ್ನಿಸಿದರೆ ಅಂಥ ಕೃತ್ಯವನ್ನು ಡಿಜಿಟಲ್ ರೇಪ್ ಎಂದು ಪರಿಗಣಿಸಲಾಗುತ್ತದೆ. ಆದರೆ, ಈ ಕೃತ್ಯವನ್ನು 2013ರವರೆಗೂ ಅಪರಾಧ ಕೃತ್ಯ ಎಂದು ಪರಿಗಣಿಸಿರಲಿಲ್ಲ. ಈ ರೀತಿಯ ಕೃತ್ಯಕ್ಕೆ ಬಲಿಯಾಗುವ ಮಹಿಳೆಯರು ಮತ್ತು ಮಕ್ಕಳಿಗೆ ನ್ಯಾಯ ಒದಗಿಸುವುದಕ್ಕಾಗಿ 2013ರ ಬಳಿಕ ಡಿಜಿಟಲ್ ರೇಪ್ ಎಂಬ ಪದವನ್ನು ಠಂಕಿಸಲಾಯಿತು. ಮತ್ತು ಕಾನೂನಿನ ಪ್ರಕಾರ ಶಿಕ್ಷಾರ್ಹ ಅಪರಾಧ ಎಂದು ಗುರುತಿಸಲಾಯಿತು.

ಭಾರತದಲ್ಲಿ ಅತ್ಯಾಚಾರಗಳು
ನಾವು ನಿತ್ಯ ಒಂದಿಲ್ಲ ಒಂದು ಮಹಿಳೆಯರು, ಮಕ್ಕಳ ಮೇಲೆ ಅತ್ಯಾಚಾರದ ಸುದ್ದಿಗಳನ್ನು ಓದಿಯೇ ಓದುತ್ತೇವೆ. ನ್ಯಾಷನಲ್ ಕ್ರೈಮ್ ರೆಕಾರ್ಡ್ಸ್ ಬ್ಯೂರೋ (ಎನ್‌ಸಿಆರ್‌ಬಿ) ಪ್ರಕಾರ, ಕಳೆದ ವಾರವೊಂದರಲ್ಲೇ 31,000 ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. 2021ರಲ್ಲಿ ದಿಲ್ಲಿಯಲ್ಲಿ 1,250 ಪ್ರಕರಣಗಳು ದಾಖಲಾಗಿದ್ದರೆ, ಹರ್ಯಾಣದಲ್ಲಿ 1700 ಮ್ತತು ಉತ್ತರ ಪ್ರದೇಶದಲ್ಲಿ 2,845 ಕೇಸ್‌ಗಳು ರಿಜಿಸ್ಟರ್ ಆಗಿವೆ.

ನಿತ್ಯ 86 ರೇಪ್ ಕೇಸ್
ಮಹಿಳೆಯರ ವಿರುದ್ಧ ಕ್ರೈಮ್‌ಗಳಲ್ಲಿ ಅತ್ಯಾಚಾರಕ್ಕೆ ಭಾರತದಲ್ಲಿ ನಾಲ್ಕನೇ ಸ್ಥಾನವಿದೆ. 2021ರ ಎನ್‌ಸಿಆರ್‌ಬಿ ವರದಿಯ ಪ್ರಕಾರ, ದೇಶದಲ್ಲಿ ಒಟ್ಟು 32,033 ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. ಅಂದರೆ, ಸರಾಸರಿ ದಿನಕ್ಕೆ 89 ರೇಪ್ ಪ್ರಕರಣಗಳು ದೇಶದಲ್ಲಿ ದಾಖಲಾಗುತ್ತಿವೆ. ಆದರೆ, ದೂರು ದಾಖಲಾಗದ ಪ್ರಕರಣಗಳ ಸಂಖ್ಯೆ ದುಪ್ಪಟ್ಟು ಇರಬಹುದು. ಗ್ರಾಮೀಣ ಪ್ರದೇಶದಲ್ಲಿ ನಡೆಯುವ ಈ ಅಪರಾಧಗಳು ಹೊರ ಜಗತ್ತಿಗೇ ಗೊತ್ತೇ ಆಗುವುದಿಲ್ಲ. ಇಲ್ಲವೇ ನ್ಯಾಯ ಪಂಚಾಯ್ತಿಯಲ್ಲಿ ಮುಗಿದು ಹೋಗುತ್ತವೆ. ಆತಂಕದ ಸಂಗತಿ ಏನೆಂದರೆ, ವರ್ಷದಿಂದ ವರ್ಷಕ್ಕೆ ರೇಪ್ ಪ್ರಕರಣಗಳ ಸಂಖ್ಯೆಯೂ ಜಾಸ್ತಿಯಾಗುತ್ತಿದೆ. 2020ರಲ್ಲಿ 28,046 ಇದ್ದ ಅತ್ಯಾಚಾರ ಪ್ರಕರಣಗಳು 2021ರ ಹೊತ್ತಿಗೆ 32,033 ಆಗಿವೆ.

ಇದನ್ನೂ ಓದಿ | ಅಪ್ರಾಪ್ತೆ ಮೇಲೆ ಸಂಬಂಧಿಗಳಿಂದಲೇ ಅತ್ಯಾಚಾರ; ಬಿಡಿಸಲು ಬಂದ ಅಜ್ಜಿಯ ಮೇಲೆಯೂ ರೇಪ್​

Exit mobile version