ರಷ್ಯಾ ರಾಜಧಾನಿ ಮಾಸ್ಕೋದಲ್ಲಿರುವ ಕ್ರೋಕಸ್ ಸಿಟಿ ಕನ್ಸರ್ಟ್ ಹಾಲ್‌ನಲ್ಲಿ ಭೀಕರ ಉಗ್ರರ ದಾಳಿ ನಡೆದಿದೆ. ಇದರಲ್ಲಿ ಮೃತಪಟ್ಟವರ ಸಂಖ್ಯೆ 150ಕ್ಕೆ ಏರಿಕೆಯಾಗಿದೆ. ನೂರಾರು ಜನ ಗಂಭೀರವಾಗಿ ಗಾಯಗೊಂಡಿದ್ದಾರೆ. ಸಾವಿನ ಸಂಖ್ಯೆ ಇನ್ನೂ ಜಾಸ್ತಿಯಾಗುವ ಸಾಧ್ಯತೆ ಇದೆ. ಮಾಸ್ಕೋದಲ್ಲಿ ದಾಳಿ ನಡೆಸಿದ ನಾಲ್ವರು ಉಗ್ರರು ಸೇರಿ ಇದುವರೆಗೆ ಒಟ್ಟು 11 ಉಗ್ರರನ್ನು ಬಂಧಿಸಲಾಗಿದೆ. ಉಕ್ರೇನ್‌ನಿಂದ ರಷ್ಯಾಗೆ ನುಸುಳಿದ ಉಗ್ರರು ದಾಳಿ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. “ತಪ್ಪಿತಸ್ಥರಿಗೆ ತಕ್ಕ ಶಾಸ್ತಿ ಮಾಡದೆ ಬಿಡುವುದಿಲ್ಲ” ಎಂದು ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಘೋಷಿಸಿದ್ದಾರೆ. ದಾಳಿಯ ಹೊಣೆಯನ್ನು ಇಸ್ಲಾಮಿಕ್ ಸ್ಟೇಟ್ ಖೊರಾಸನ್ ಸಂಘಟನೆ ಹೊತ್ತುಕೊಂಡಿದೆ. ಇದು ಅಫ್ಘಾನಿಸ್ತಾನ ಮೂಲದ ಸಂಘಟನೆ; ಇರಾನ್ ಮುಂತಾದ ಕಡೆ ಇದರ ನೆಲೆ ಇದೆ. ಭಾರತ ಸೇರಿದಂತೆ ಹಲವಾರು ದೇಶಗಳು ಈ ಕ್ರೂರ ದಾಳಿಯನ್ನು ಖಂಡಿಸಿವೆ. ಹಲವು ದಶಕಗಳಲ್ಲಿ ರಷ್ಯಾ ಕಂಡಿರುವ ಬರ್ಬರ ಭಯೋತ್ಪಾದಕ ದಾಳಿ ಇದಾಗಿದೆ.
ಸಿರಿಯಾದಲ್ಲಿ ಇಸ್ಲಾಮಿಕ್ ಸ್ಟೇಟ್ ಉಗ್ರ ಭಯೋತ್ಪಾದನೆಯನ್ನು ನ್ಯಾಟೋ ದೇಶಗಳ ಒಗ್ಗಟ್ಟಿನ ದಾಳಿಯಿಂದ ಎರಡು ವರ್ಷಗಳ ಹಿಂದೆ ಮಣಿಸಲಾಗಿತ್ತು. ಸಿರಿಯಾದ ಬಹುಭಾಗವನ್ನು ವಶಪಡಿಸಿಕೊಂಡಿದ್ದ ಐಸಿಸ್ ಉಗ್ರರಲ್ಲಿ ಬಹುತೇಕ ಮಂದಿಯನ್ನು ನಿರ್ನಾಮ ಮಾಡಲಾಗಿತ್ತು. ಆದರೆ ಇಸ್ಲಾಮಿಕ್ ಭಯೋತ್ಪಾದನೆ ಎಂಬುದು ರಕ್ತಬೀಜಾಸುರನ ಹಾಗೆ. ಅದು ತನ್ನ ರಕ್ತದ ಒಂದು ಹನಿ ಬಿದ್ದಲ್ಲಿಂದಲೇ ಸಾವಿರಾರು ಉಗ್ರರನ್ನು ಹುಟ್ಟಿಕೊಳ್ಳುವಂತೆ ಮಾಡಬಲ್ಲುದು ಎಂಬುದು ಮತ್ತೆ ಮತ್ತೆ ರುಜುವಾತಾಗಿದೆ. ಎಲ್ಲ ಶಾಂತವಾಗಿದೆ, ಇನ್ನು ಭಯವಿಲ್ಲ ಎಂದುಕೊಳ್ಳುತ್ತಿರುವಾಗಲೇ ದಿಡೀರ್ ಎಂದು ಎರಗುವುದು, ಗರಿಷ್ಠ ಹಾನಿ ಎಸಗುವುದು ಈ ಉಗ್ರರ ನೀತಿ. ಐಸಿಸ್ ಏನೂ ಕಾರ್ಯಾಚರಣೆ ಮಾಡದೆ ಸುಮ್ಮನಿದೆ ಎಂದಾದರೆ, ಅದು ಯಾವುದೋ ಭಯಾನಕ ದಾಳಿಗೆ ಯೋಜನೆ ಹಾಕುತ್ತಿದೆ ಎಂದೇ ಅರ್ಥ. ಅಲ್ ಕೈದಾ, ಲಷ್ಕರೆ ತಯ್ಬಾ, ಐಸಿಸ್ ಮುಂತಾದ ಸಂಘಟನೆಗಳೆಲ್ಲ ಇಸ್ಲಾಮಿಕ್ ಭಯೋತ್ಪಾದನೆಯ ವಿವಿಧ ರೂಪಗಳೇ ಆಗಿವೆ. 2001ರಲ್ಲಿ ಇವರು ನ್ಯೂಯಾರ್ಕ್ ಮೇಲೆ ದಾಳಿ ನಡೆಸಿದರೆ, 2008ರಲ್ಲಿ ಮುಂಬಯಿಯಲ್ಲಿ ದಾಳಿ ನಡೆಸಿದ್ದರು. ಇದೀಗ ರಷ್ಯಾದ ಸರದಿ. ರಷ್ಯಾದ ವಿರುದ್ಧದ ಐಸಿಸ್ ರೊಚ್ಚಿಗೆ ಕಾರಣ ಏನು ಎಂಬುದು ತನಿಖೆಯಿಂದ ರುಜುವಾತು ಆಗಬೇಕಿದೆ.
ಈ ಎಲ್ಲ ಇಸ್ಲಾಮಿಕ್ ಉಗ್ರರ ಮೂಲ ಬೀಜ ಎಲ್ಲಿದೆ ಎಂದು ನೋಡಬೇಕು. ಅದು ನಮ್ಮ ನೆರೆರಾಷ್ಟ್ರ ಪಾಕಿಸ್ತಾನದಲ್ಲಿದೆ. ಅಫ್ಘಾನಿಸ್ತಾನವೂ ಸೇರಿದಂತೆ ಸುತ್ತಮುತ್ತಲಿನ ದೇಶಗಳಲ್ಲಿ ಹಾವಳಿ ಎಬ್ಬಿಸಿರುವ ಇಸ್ಲಾಮಿಕ್‌ಉಗ್ರರಿಗೆ ಶಸ್ತ್ರಾಸ್ತ್ರಗಳು, ಹಣಕಾಸು ಪೂರೈಕೆಯಾಗುತ್ತಿರುವುದೇ ಪಾಕಿಸ್ತಾನದಿಂದ. ಇದೇ ತಿಂಗಳು ಬೆಂಗಳೂರಿನ ವೈಟ್‌ಫೀಲ್ಡ್‌ನ ರಾಮೇಶ್ವರಂ ಕೆಫೆಯಲ್ಲಿ ನಡೆದ ಬಾಂಬ್ ಸ್ಫೋಟದ ಆರೋಪಿಗಳ ಹಿಂದೆಯೂ ಐಸಿಸ್ ಕೈವಾಡ ಇದ್ದರೆ ಆಶ್ಚರ್ಯಪಡಬೇಕಿಲ್ಲ. ಅಂದರೆ, ಇಂದು ರಷ್ಯಾದಲ್ಲಿ ದಾಳಿ ನಡೆಸಿದವರು, ನಾಳೆ ಇನ್ನೊಂದು ದೇಶದಲ್ಲಿ ನಡೆಸಬಹುದು. ಯಾವ ದೇಶವೂ ಇಂದು ತಾನು ಸುರಕ್ಷಿತ ಎಂದು ಹೇಳಿಕೊಳ್ಳಲು ಸಾಧ್ಯವಿಲ್ಲದ ಸ್ಥಿತಿಯಲ್ಲಿವೆ. ಇಸ್ಲಾಮಿಕ್ ಭಯೋತ್ಪಾದನೆಯ ಕಬಂಧ ಬಾಹುಗಳು ಆ ಪರಿ ಚಾಚಿವೆ. ಇವೆಲ್ಲವನ್ನೂ ಒಂದೇ ಸಂಘಟನೆ ಹ್ಯಾಂಡಲ್ ಮಾಡುತ್ತದೆ ಎಂದೂ ಭಾವಿಸಬೇಕಿಲ್ಲ. ಆದರೆ ಇವೆಲ್ಲವುಗಳ ಮೂಲಭೂತ ಚಿಂತನೆ ಒಂದೇ ಆಗಿದೆ. ಅದು ಇಸ್ಲಾಮಿಕ್ ಮತೀಯವಾದ, ಮತಾಂಧತೆ. ಇಸ್ಲಾಂ ಅನ್ನು ಹೊರತುಪಡಿಸಿದರೆ ಬೇರೆ ಯಾವ ಧರ್ಮವೂ ಈ ಭೂಮಿಯ ಮೇಲೆ ಇರಬಾರದು ಎಂಬುದು ಅವುಗಳ ಮೂಲ ಚಿಂತನೆ. ಹೀಗಾಗಿ ಎಲ್ಲ ಕಡೆಗಳಲ್ಲಿ ಅದು ಆಳವಾಗಿ ಬೇರು ಬಿಡುತ್ತಿದೆ. ಆಧುನಿಕ ಶಿಕ್ಷಣ ಪಡೆದವರಲ್ಲೂ ಈ ಚಿಂತನೆ ಬೇರು ಬಿಡುತ್ತಿರುವುದನ್ನು ಕಾಣಬಹುದಾಗಿದೆ.
ಇದನ್ನೂ ಓದಿ: Moscow Attack: ರಷ್ಯಾದಲ್ಲಿ ಉಗ್ರರ ದಾಳಿ; ಸಾವಿನ ಸಂಖ್ಯೆ 150, ಏನೆಲ್ಲ ಬೆಳವಣಿಗೆ?
ಹಾಗಿದ್ದರೆ ಇದನ್ನು ಎದುರಿಸುವುದು ಹೇಗೆ? ಇದರ ಬಗ್ಗೆ ಮುಂದುವರಿದ ದೇಶಗಳು ವರ್ಷಗಳಿಂದಲೂ ತಲೆ ಕೆಡಸಿಕೊಳ್ಳುತ್ತ ಬಂದಿವೆ. ಒಂದೇ ಮಾರ್ಗ ಪರಿಣಾಮಕಾರಿ ಎನ್ನಲಾಗದು. ಅಮೆರಿಕ ಸಂಶಯಾಸ್ಪದರನ್ನು ತನ್ನ ಒಳಗೆ ಬಿಟ್ಟುಕೊಳ್ಳದ ಕಠಿಣ ನೀತಿಯನ್ನು ರೂಢಿಸಿಕೊಂಡಿದೆ. ಇಸ್ರೇಲ್, ತನ್ನ ವೈರಿಗಳ ಮೇಲೆ ಆಕ್ರಮಣಕಾರಿಯಾಗಿ ಮುಗಿಬಿದ್ದು ಮುಗಿಸುತ್ತದೆ. ಭಾರತ ಜಾತ್ಯತೀತ ಆಡಳಿತ ಹಾಗೂ ನಿರಂತರ ಎಚ್ಚರದ ಮೂಲಕ ಇದನ್ನು ಸಾಧಿಸಲು ಹೆಣಗಾಡುತ್ತಿದೆ. ಕಳೆದ ವರ್ಷ ಭಾರತದಲ್ಲೇ ʼನೋ ಮನಿ ಫಾರ್ ಟೆರರ್ʼ ಎಂಬ ಸಮಾವೇಶ ನಡೆದಿತ್ತು. ʼಭಯೋತ್ಪಾದನೆಗೆ ಎಲ್ಲ ಬಗೆಯ ಹಣಕಾಸು ಪೂರೈಕೆ ತಡೆಯುವುದುʼ ಇದರ ಮೂಲ ಆಶಯ. 72 ದೇಶಗಳ ಪ್ರತಿನಿಧಿಗಳು ಹಾಗೂ 15 ಅಂತಾರಾಷ್ಡ್ರೀಯ ಸಂಘಟನೆಗಳು ಇದರಲ್ಲಿ ಭಾಗವಹಿಸಿದ್ದರು. ಆಗ ಪ್ರಧಾನಿ ಮೋದಿ ಇದರಲ್ಲಿ ಭಾಗವಹಿಸಿ, ʼʼಎಲ್ಲ ಬಗೆಯ ಭಯೋತ್ಪಾದನೆಗೆ ತಡೆ ಹಾಕಲು ಎಲ್ಲ ದೇಶಗಳು ಮುಂದಾಗಬೇಕು. ಕೆಲವು ದೇಶಗಳು ಉಗ್ರಗಾಮಿ ಚಟುವಟಿಕೆಗಳಿಗೆ ನೇರ ಅಥವಾ ಪರೋಕ್ಷವಾಗಿ ಹಣ ಒದಗಿಸುತ್ತಿವೆ. ಅಂಥ ದೇಶಗಳು ತಕ್ಕ ಬೆಲೆ ತೆರುವಂತೆ ಮಾಡಬೇಕುʼʼ ಎಂದು ಕರೆ ನೀಡಿದ್ದರು. ಭಯೋತ್ಪಾದನೆಯನ್ನು ತಡೆಗಟ್ಟಲು ವ್ಯೂಹಾತ್ಮಕ ಮಿತ್ರತ್ವದ ಜತೆಗೆ ಭಯೋತ್ಪಾದಕರಿಗೆ ಹಣಕಾಸಿನ ಪೂರೈಕೆಯನ್ನು ಕತ್ತರಿಸುವುದೂ ಒಂದು ಕ್ರಮ. ಇದಕ್ಕಾಗಿಯೇ ಫೈನಾನ್ಷಿಯಲ್ ಆ್ಯಕ್ಷನ್ ಟಾಸ್ಕ್ ಫೋರ್ಸ್ (ಎಫ್‌ಎಟಿಎಫ್) ಎಂಬ ಅಂತಾರಾಷ್ಟ್ರೀಯ ಸಂಸ್ಥೆ 1989ರಲ್ಲಿ ರಚನೆಯಾಗಿದ್ದು, ಟೆರರಿಸಂಗೆ ಅಧಿಕೃತ ಹಣದ ಪೂರೈಕೆ ತಡೆಗಟ್ಟಲು ಕ್ರಮಗಳನ್ನು ಕೈಗೊಳ್ಳುತ್ತಿದೆ. ಈ ಬಗೆಯ ಸಹಕಾರ ಎಲ್ಲ ದೇಶಗಳ ನಡುವೆ ಸಾಧ್ಯವಾದರೆ, ಭಯೋತ್ಪಾದನೆ ತಡೆಗೆ ಇನ್ನಷ್ಟು ಹೆಜ್ಜೆ ಮುಂದೆ ಹೋಗಲು ಸಾಧ್ಯ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ