Site icon Vistara News

ವಿಸ್ತಾರ ಸಂಪಾದಕೀಯ: ಮಾಲ್ಡೀವ್ಸ್‌ಗೆ ಪಾಠ ಕಲಿಸಲು ನೂತನ ನೌಕಾನೆಲೆ ಅಗತ್ಯ

Mohamed Muizzu And INS Jatayu

Naval Base In Lakshadweep Is Much Needed For India To Teach Lesson To Maldives

ಚೀನಾ ಕೊಡುವ ಸಾಲ, ಮೂಲ ಸೌಕರ್ಯ ಯೋಜನೆಗಳು ಹಾಗೂ ಆರ್ಥಿಕ ನೆರವಿನ ಹಿಂದೆ ಬಿದ್ದಿರುವ ಮಾಲ್ಡೀವ್ಸ್‌, ಭವಿಷ್ಯದ ಅಪಾಯವನ್ನೂ ಲೆಕ್ಕಿಸದೆ ಭಾರತದ ಜತೆ ರಾಜತಾಂತ್ರಿಕ ಸಂಘರ್ಷಕ್ಕೆ (India Maldives Row) ಇಳಿದಿದೆ. ಭಾರತ ವಿರೋಧಿ ಧೋರಣೆ ಅನುಸರಿಸುತ್ತಿರುವ ಮಾಲ್ಡೀವ್ಸ್‌ ಅಧ್ಯಕ್ಷ ಮೊಹಮ್ಮದ್‌ ಮುಯಿಜು, ಇನ್ನಷ್ಟು ಆಕ್ರಮಣಕಾರಿ ನಿಲುವು ತೋರಿಸುತ್ತಿದ್ದಾರೆ. ಭಾರತೀಯ ಸೇನೆಯು ಮೇ 10ರೊಳಗೆ ಮಾಲ್ಡೀವ್ಸ್‌ನಿಂದ ವಾಪಸಾಗುತ್ತಿದೆ ಎಂಬುದಾಗಿ ಭಾರತ ಘೋಷಿಸಿದರೂ, ಮೇ 10ರ ನಂತರ ಮಾಲ್ಡೀವ್ಸ್‌ನಲ್ಲಿ ಭಾರತದ ಒಬ್ಬ ಸೈನಿಕನೂ ಇರಬಾರದು. ಸಾಮಾನ್ಯ ಉಡುಪು ಧರಿಸಿಯೂ ಕೂಡ ಭಾರತದ ಸೈನಿಕರು ಮಾಲ್ಡೀವ್ಸ್‌ನಲ್ಲಿ ಇರಬಾರದು ಎಂದು ಮುಯಿಜು ಕಿರಿಕಿರಿ ಮಾಡಿದ್ದಾರೆ. ಈತನ ಮಾತಿಗೆ ನಮ್ಮ ಪ್ರಧಾನಿಯಾಗಲೀ ವಿದೇಶಾಂಗ ಸಚಿವರಾಗಲೀ ಪ್ರತ್ಯುತ್ತರ ನೀಡುವ ಗೋಜಿಗೂ ಹೋಗಿಲ್ಲ. ಬದಲಾಗಿ, ಭಾರತ ಮುಸುಕಿನ ಗುದ್ದೊಂದನ್ನು ನೀಡಿದೆ. ಮಾಲ್ಡೀವ್ಸ್‌ನಿಂದ ಕೇವಲ 130 ಕಿಲೋಮೀಟರ್‌ ದೂರದಲ್ಲಿರುವ, ಲಕ್ಷದ್ವೀಪದ ಮಿನಿಕಾಯ್‌ ದ್ವೀಪದಲ್ಲಿಯೇ ಭಾರತೀಯ ನೌಕಾಪಡೆಯು (Indian Navy) ‘ಐಎನ್‌ಎಸ್‌ ಜಟಾಯು’ ಎಂಬ (INS Jatayu) ನೌಕಾನೆಲೆಯನ್ನು ಆರಂಭಿಸುವ ಮೂಲಕ ತಿರುಗೇಟು ನೀಡಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಲಕ್ಷದ್ವೀಪಕ್ಕೆ ಭೇಟಿ ಕೊಟ್ಟ ಕ್ಷಣದಿಂದ ಉಭಯ ದೇಶಗಳ ನಡುವಿನ ಈ ಬಿಕ್ಕಟ್ಟು ಉಲ್ಬಣಿಸಿದೆ ಎಂಬಂತೆ ತೋರುತ್ತಾದಾದರೂ, ಅದು ಹಾಗಿಲ್ಲ. ಅಧ್ಯಕ್ಷರಾಗಿ ಮುಯಿಜು ಆಯ್ಕೆಯ ಕ್ಷಣದಿಂದಲೇ ಮಾಲ್ಡೀವ್ಸ್‌ ಈ ಪತನದ, ಸಂಘರ್ಷದ ಹಾದಿ ಹಿಡಿದಿದೆ. ಮುಯಿಜು ಸ್ಪಷ್ಟವಾಗಿ ಭಾರತ ವಿರೋಧಿ ಹಾಗೂ ಚೀನಾ ಪರ ಧೋರಣೆಯುಳ್ಳಾತ. ಚೀನಾ ನೀಡುತ್ತಿರುವ ಹಣಕಾಸಿಗೆ ಬಾಯಿ ಬಾಯಿ ಬಿಡುತ್ತಿರುವ ಈತ ಭಾರತವನ್ನು ಎದುರು ಹಾಕಿಕೊಳ್ಳಲು ಮುಂದಾಗಿರುವುದು ಸಹಜವೇ ಆಗಿದೆ. ಈ ಹಿಂದಿನ ಮಾಲ್ಡೀವ್ಸ್‌ನ ಆಡಳಿತಗಾರರು ಭಾರತಕ್ಕೆ ಸ್ನೇಹಿತರಾಗಿದ್ದರು; ಹೀಗಾಗಿ ಭಾರತದ ಸೇನಾನೆಲೆಗೂ ಅಲ್ಲಿ ಅವಕಾಶ ನೀಡಿದ್ದರು. ಮಾಲ್ಡೀವ್ಸ್‌ ಭಾರತವನ್ನು ಅತ್ಯಾಪ್ತ ರಾಷ್ಟ್ರ ಎಂದು ಕೂಡ ಒಪ್ಪಿಕೊಂಡಿತ್ತು. ಹಿಂದೊಮ್ಮೆ ಇಲ್ಲಿ ಎದ್ದ ಬಂಡಾಯವನ್ನು ಶಮನಿಸಲು ಸಾಧ್ಯವಾಗದೆ ಹೋದಾಗ, ಭಾರತೀಯ ಸೈನ್ಯ ಅಲ್ಲಿಗೆ ಧಾವಿಸಿ ಅಲ್ಲಿನ ಪ್ರಜಾಪ್ರಭುತ್ವವನ್ನು ಉಳಿಸಿಕೊಟ್ಟಿತ್ತು. ಆದರೆ ಮಾಲ್ಡೀವ್ಸ್‌ ಅನ್ನು ಭಾರತದ ವಸಾಹತು ಮಾಡುವ ಉದ್ದೇಶ ಭಾರತಕ್ಕಿಲ್ಲ. ಭಾರತದ ವಿವಿಐಪಿಗಳು, ಬಾಲಿವುಡ್‌ ಸೆಲೆಬ್ರಿಟಿಗಳು ಸದಾ ಮಾಲ್ಡೀವ್ಸ್‌ನ ಬೀಚುಗಳಿಗೆ ಭೇಟಿ ನೀಡುತ್ತ, ಅಲ್ಲಿನ ಪ್ರವಾಸೋದ್ಯಮಕ್ಕೆ ಘನತೆ ತಂದುಕೊಟ್ಟಿದ್ದಾರೆ. ಅಲ್ಲಿನ ಆರ್ಥಿಕತೆಯ ವೃದ್ಧಿಗೆ ಭಾರತದ ಗಣನೀಯ ಕೊಡುಗೆ ಇದೆ. ಆದರೆ ಇದನ್ನೆಲ್ಲ ಮರೆತು, ಕೃತಘ್ನತೆಯ ತುತ್ತ ತುದಿ ತಲುಪಿರುವ ಮುಯಿಜುಗೆ ಪಾಠ ಕಲಿಸಲು ಭಾರತ ಮುಂದಾಗಿದೆ.

ಈಗಾಗಲೇ ಅಂಡಮಾನ್‌ನಲ್ಲಿ ಐಎನ್‌ಎಸ್‌ ಬಾಜ್‌ ಎಂಬ ನೌಕಾನೆಲೆ ಇದೆ. ಲಕ್ಷದ್ವೀಪದ ಕವರಟ್ಟಿಯಲ್ಲೇ ದ್ವೀಪ್ರಕಾಶಕ ಎಂಬ ನೌಕಾನೆಲೆ ಇದೆ. ಇದರ ಬೆನ್ನಲ್ಲೇ, ಲಕ್ಷದ್ವೀಪದಲ್ಲೇ ನೌಕಾಪಡೆಯು ಮತ್ತೊಂದು ನೆಲೆಯನ್ನು ನಿರ್ಮಿಸುವ ಮೂಲಕ ಭಾರತ ವ್ಯೂಹಾತ್ಮಕ ಹಾಗೂ ರಕ್ಷಣಾತ್ಮಕ ಹೆಜ್ಜೆ ಇರಿಸಿದೆ. ಇದು ಅತಿ ಅಗತ್ಯವಾದುದು ಏಕೆಂದರೆ, ಮುಯಿಜು ಆಹ್ವಾನದಂತೆ ಮಾಲ್ಡೀವ್ಸ್‌ನಲ್ಲಿ ಚೀನಾ ಇಷ್ಟರಲ್ಲಿಯೇ ತನ್ನ ಸೇನಾನೆಲೆಯನ್ನು ಸ್ಥಾಪಿಸಬಹುದು. ಈ ಸಾಗರ ಪ್ರದೇಶದಲ್ಲಿ ಹೆಚ್ಚಿನ ನಿಗಾ ಇರಿಸುವುದು ಸೇರಿ ಹಲವು ಕಾರಣಗಳಿಂದಾಗಿ ʼಐಎನ್‌ಎಸ್‌ ಜಟಾಯುʼ ಪ್ರಾಮುಖ್ಯತೆ ಪಡೆದಿದೆ. ಇಲ್ಲಿಂದ ಪಶ್ಚಿಮ ಅರಬ್ಬೀ ಸಮುದ್ರದಲ್ಲಿ ವೈರಿಗಳ ಮೇಲೆ ಹೆಚ್ಚಿನ ನಿಗಾ ಇರಿಸುವುದು, ಸಾಗರ ಪ್ರದೇಶದಲ್ಲಿ ಭಯೋತ್ಪಾದನೆ- ಅಪರಾಧ ತಡೆಗಟ್ಟುವುದು, ಸಮುದ್ರ ಪ್ರದೇಶದಲ್ಲಿ ಮಾದಕವಸ್ತು ಅಕ್ರಮ ಸಾಗಣೆ ನಿಯಂತ್ರಣ ಸಾಧ್ಯ. ಕ್ಷಿಪ್ರವಾಗಿ ಡ್ರೋನ್‌, ಕ್ಷಿಪಣಿ ನಿಗ್ರಹ ಕಾರ್ಯಾಚರಣೆ ಕೈಗೊಳ್ಳಲು ಇದು ಸಹಕಾರಿ. ಸಾಗರ ಪ್ರದೇಶದಲ್ಲಿ ಯಾವುದೇ ದುರಂತ ನಡೆದರೆ ರಕ್ಷಣೆ, ದಾಳಿ ನಡೆದರೆ ವೇಗವಾಗಿ ತಿರುಗೇಟು ನೀಡಬಹುದು. ಸಮುದ್ರ ಪ್ರದೇಶದಲ್ಲಿ ಅಕ್ರಮ ಸಾಗಣೆ, ಹಡಗುಗಳ ಸಂಚಾರದ ಮೇಲೆ ಹದ್ದಿನ ಕಣ್ಣಿಡಬಹುದು. ಚೀನಾದ ಸಂಶೋಧನಾ ಹಡಗುಗಳ ಸಂಚಾರದ ಮೇಲೆ ನಿಗಾ ಇರಿಸಿ, ಕ್ರಮ ತೆಗೆದುಕೊಳ್ಳುವುದು ಸಾಧ್ಯ. ಚೀನಾದ ಕುಮ್ಮಕ್ಕಿನಿಂದ ಸಮುದ್ರ ಪ್ರದೇಶದಲ್ಲಿ ಮಾಲ್ಡೀವ್ಸ್‌ ಆಕ್ರಮಣಕಾರಿ ನೀತಿ ಅನುಸರಿಸಿದರೆ ತಿರುಗೇಟು ನೀಡಲೂಬಹುದು.

ಇದನ್ನೂ ಓದಿ: INS Jatayu: ಮಾಲ್ಡೀವ್ಸ್‌ ಬಳಿಯೇ ನೌಕಾ ನೆಲೆ ನಿರ್ಮಿಸಿದ ಭಾರತ; ಇದು ಹೇಗೆ ಗೇಮ್‌ ಚೇಂಜರ್?

ಮೊಹಮ್ಮದ್‌ ಮುಯಿಜು ಅವರ ಭಾರತ ವಿರೋಧಿ ನೀತಿಗೆ ಮಾಲ್ಡೀವ್ಸ್‌ನಲ್ಲೇ ವಿರೋಧ ವ್ಯಕ್ತವಾಗಿತ್ತು. ಭಾರತದ ಸುಮಾರು 80 ಸೈನಿಕರು ಮಾಲ್ಡೀವ್ಸ್‌ನಲ್ಲಿದ್ದಾರೆ. ಮಾಲ್ಡೀವ್ಸ್‌ನಲ್ಲಿ ಭಾರತದ ಯೋಧರು ರೆಡಾರ್‌ ಹಾಗೂ ನಿಗಾ ಯುದ್ಧವಿಮಾನ ನಿರ್ವಹಣೆ ಮಾಡುತ್ತಿದ್ದಾರೆ. ಮೇ 10ರೊಳಗೆ ಭಾರತದ ಸೇನೆ ವಾಪಸಾಗಲಿದೆ. ಅಲ್ಲಿಂದ ನಂತರ ಮುಯಿಜು ಅವರ ನಡೆ ಇನ್ನಷ್ಟು ಚೀನಾದ ಕಡೆ ಎಂಬಂತಾಗಬಹುದು. ಇದು ಭಾರತಕ್ಕೆ ಈ ಪ್ರಾಂತ್ಯದಲ್ಲಿ ಇನ್ನಷ್ಟು ತಲೆನೋವು ಹಾಗೂ ಎಚ್ಚರಿಕೆಯ ಅವಶ್ಯಕತೆಯನ್ನು ತಂದಿಡುವುದಂತೂ ಖಚಿತ. ಹೀಗಾಗಿ ಭಾರತದ ನೂತನ ನೌಕಾನೆಲೆ ಪ್ರಸ್ತುತವಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version