ವಿಸ್ತಾರ ಸಂಪಾದಕೀಯ: ಮಾಲ್ಡೀವ್ಸ್‌ಗೆ ಪಾಠ ಕಲಿಸಲು ನೂತನ ನೌಕಾನೆಲೆ ಅಗತ್ಯ - Vistara News

ಸಂಪಾದಕೀಯ

ವಿಸ್ತಾರ ಸಂಪಾದಕೀಯ: ಮಾಲ್ಡೀವ್ಸ್‌ಗೆ ಪಾಠ ಕಲಿಸಲು ನೂತನ ನೌಕಾನೆಲೆ ಅಗತ್ಯ

ಮೇ 10ರೊಳಗೆ ಭಾರತದ ಸೇನೆ ವಾಪಸಾಗಲಿದೆ. ಅಲ್ಲಿಂದ ನಂತರ ಮುಯಿಜು ಅವರ ನಡೆ ಇನ್ನಷ್ಟು ಚೀನಾದ ಕಡೆ ಎಂಬಂತಾಗಬಹುದು. ಇದು ಭಾರತಕ್ಕೆ ಈ ಪ್ರಾಂತ್ಯದಲ್ಲಿ ಇನ್ನಷ್ಟು ತಲೆನೋವು ಹಾಗೂ ಎಚ್ಚರಿಕೆಯ ಅವಶ್ಯಕತೆಯನ್ನು ತಂದಿಡುವುದಂತೂ ಖಚಿತ. ಹೀಗಾಗಿ ಭಾರತದ ನೂತನ ನೌಕಾನೆಲೆ ಸೂಕ್ತವಾಗಿದೆ.

VISTARANEWS.COM


on

Mohamed Muizzu And INS Jatayu
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಚೀನಾ ಕೊಡುವ ಸಾಲ, ಮೂಲ ಸೌಕರ್ಯ ಯೋಜನೆಗಳು ಹಾಗೂ ಆರ್ಥಿಕ ನೆರವಿನ ಹಿಂದೆ ಬಿದ್ದಿರುವ ಮಾಲ್ಡೀವ್ಸ್‌, ಭವಿಷ್ಯದ ಅಪಾಯವನ್ನೂ ಲೆಕ್ಕಿಸದೆ ಭಾರತದ ಜತೆ ರಾಜತಾಂತ್ರಿಕ ಸಂಘರ್ಷಕ್ಕೆ (India Maldives Row) ಇಳಿದಿದೆ. ಭಾರತ ವಿರೋಧಿ ಧೋರಣೆ ಅನುಸರಿಸುತ್ತಿರುವ ಮಾಲ್ಡೀವ್ಸ್‌ ಅಧ್ಯಕ್ಷ ಮೊಹಮ್ಮದ್‌ ಮುಯಿಜು, ಇನ್ನಷ್ಟು ಆಕ್ರಮಣಕಾರಿ ನಿಲುವು ತೋರಿಸುತ್ತಿದ್ದಾರೆ. ಭಾರತೀಯ ಸೇನೆಯು ಮೇ 10ರೊಳಗೆ ಮಾಲ್ಡೀವ್ಸ್‌ನಿಂದ ವಾಪಸಾಗುತ್ತಿದೆ ಎಂಬುದಾಗಿ ಭಾರತ ಘೋಷಿಸಿದರೂ, ಮೇ 10ರ ನಂತರ ಮಾಲ್ಡೀವ್ಸ್‌ನಲ್ಲಿ ಭಾರತದ ಒಬ್ಬ ಸೈನಿಕನೂ ಇರಬಾರದು. ಸಾಮಾನ್ಯ ಉಡುಪು ಧರಿಸಿಯೂ ಕೂಡ ಭಾರತದ ಸೈನಿಕರು ಮಾಲ್ಡೀವ್ಸ್‌ನಲ್ಲಿ ಇರಬಾರದು ಎಂದು ಮುಯಿಜು ಕಿರಿಕಿರಿ ಮಾಡಿದ್ದಾರೆ. ಈತನ ಮಾತಿಗೆ ನಮ್ಮ ಪ್ರಧಾನಿಯಾಗಲೀ ವಿದೇಶಾಂಗ ಸಚಿವರಾಗಲೀ ಪ್ರತ್ಯುತ್ತರ ನೀಡುವ ಗೋಜಿಗೂ ಹೋಗಿಲ್ಲ. ಬದಲಾಗಿ, ಭಾರತ ಮುಸುಕಿನ ಗುದ್ದೊಂದನ್ನು ನೀಡಿದೆ. ಮಾಲ್ಡೀವ್ಸ್‌ನಿಂದ ಕೇವಲ 130 ಕಿಲೋಮೀಟರ್‌ ದೂರದಲ್ಲಿರುವ, ಲಕ್ಷದ್ವೀಪದ ಮಿನಿಕಾಯ್‌ ದ್ವೀಪದಲ್ಲಿಯೇ ಭಾರತೀಯ ನೌಕಾಪಡೆಯು (Indian Navy) ‘ಐಎನ್‌ಎಸ್‌ ಜಟಾಯು’ ಎಂಬ (INS Jatayu) ನೌಕಾನೆಲೆಯನ್ನು ಆರಂಭಿಸುವ ಮೂಲಕ ತಿರುಗೇಟು ನೀಡಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಲಕ್ಷದ್ವೀಪಕ್ಕೆ ಭೇಟಿ ಕೊಟ್ಟ ಕ್ಷಣದಿಂದ ಉಭಯ ದೇಶಗಳ ನಡುವಿನ ಈ ಬಿಕ್ಕಟ್ಟು ಉಲ್ಬಣಿಸಿದೆ ಎಂಬಂತೆ ತೋರುತ್ತಾದಾದರೂ, ಅದು ಹಾಗಿಲ್ಲ. ಅಧ್ಯಕ್ಷರಾಗಿ ಮುಯಿಜು ಆಯ್ಕೆಯ ಕ್ಷಣದಿಂದಲೇ ಮಾಲ್ಡೀವ್ಸ್‌ ಈ ಪತನದ, ಸಂಘರ್ಷದ ಹಾದಿ ಹಿಡಿದಿದೆ. ಮುಯಿಜು ಸ್ಪಷ್ಟವಾಗಿ ಭಾರತ ವಿರೋಧಿ ಹಾಗೂ ಚೀನಾ ಪರ ಧೋರಣೆಯುಳ್ಳಾತ. ಚೀನಾ ನೀಡುತ್ತಿರುವ ಹಣಕಾಸಿಗೆ ಬಾಯಿ ಬಾಯಿ ಬಿಡುತ್ತಿರುವ ಈತ ಭಾರತವನ್ನು ಎದುರು ಹಾಕಿಕೊಳ್ಳಲು ಮುಂದಾಗಿರುವುದು ಸಹಜವೇ ಆಗಿದೆ. ಈ ಹಿಂದಿನ ಮಾಲ್ಡೀವ್ಸ್‌ನ ಆಡಳಿತಗಾರರು ಭಾರತಕ್ಕೆ ಸ್ನೇಹಿತರಾಗಿದ್ದರು; ಹೀಗಾಗಿ ಭಾರತದ ಸೇನಾನೆಲೆಗೂ ಅಲ್ಲಿ ಅವಕಾಶ ನೀಡಿದ್ದರು. ಮಾಲ್ಡೀವ್ಸ್‌ ಭಾರತವನ್ನು ಅತ್ಯಾಪ್ತ ರಾಷ್ಟ್ರ ಎಂದು ಕೂಡ ಒಪ್ಪಿಕೊಂಡಿತ್ತು. ಹಿಂದೊಮ್ಮೆ ಇಲ್ಲಿ ಎದ್ದ ಬಂಡಾಯವನ್ನು ಶಮನಿಸಲು ಸಾಧ್ಯವಾಗದೆ ಹೋದಾಗ, ಭಾರತೀಯ ಸೈನ್ಯ ಅಲ್ಲಿಗೆ ಧಾವಿಸಿ ಅಲ್ಲಿನ ಪ್ರಜಾಪ್ರಭುತ್ವವನ್ನು ಉಳಿಸಿಕೊಟ್ಟಿತ್ತು. ಆದರೆ ಮಾಲ್ಡೀವ್ಸ್‌ ಅನ್ನು ಭಾರತದ ವಸಾಹತು ಮಾಡುವ ಉದ್ದೇಶ ಭಾರತಕ್ಕಿಲ್ಲ. ಭಾರತದ ವಿವಿಐಪಿಗಳು, ಬಾಲಿವುಡ್‌ ಸೆಲೆಬ್ರಿಟಿಗಳು ಸದಾ ಮಾಲ್ಡೀವ್ಸ್‌ನ ಬೀಚುಗಳಿಗೆ ಭೇಟಿ ನೀಡುತ್ತ, ಅಲ್ಲಿನ ಪ್ರವಾಸೋದ್ಯಮಕ್ಕೆ ಘನತೆ ತಂದುಕೊಟ್ಟಿದ್ದಾರೆ. ಅಲ್ಲಿನ ಆರ್ಥಿಕತೆಯ ವೃದ್ಧಿಗೆ ಭಾರತದ ಗಣನೀಯ ಕೊಡುಗೆ ಇದೆ. ಆದರೆ ಇದನ್ನೆಲ್ಲ ಮರೆತು, ಕೃತಘ್ನತೆಯ ತುತ್ತ ತುದಿ ತಲುಪಿರುವ ಮುಯಿಜುಗೆ ಪಾಠ ಕಲಿಸಲು ಭಾರತ ಮುಂದಾಗಿದೆ.

ಈಗಾಗಲೇ ಅಂಡಮಾನ್‌ನಲ್ಲಿ ಐಎನ್‌ಎಸ್‌ ಬಾಜ್‌ ಎಂಬ ನೌಕಾನೆಲೆ ಇದೆ. ಲಕ್ಷದ್ವೀಪದ ಕವರಟ್ಟಿಯಲ್ಲೇ ದ್ವೀಪ್ರಕಾಶಕ ಎಂಬ ನೌಕಾನೆಲೆ ಇದೆ. ಇದರ ಬೆನ್ನಲ್ಲೇ, ಲಕ್ಷದ್ವೀಪದಲ್ಲೇ ನೌಕಾಪಡೆಯು ಮತ್ತೊಂದು ನೆಲೆಯನ್ನು ನಿರ್ಮಿಸುವ ಮೂಲಕ ಭಾರತ ವ್ಯೂಹಾತ್ಮಕ ಹಾಗೂ ರಕ್ಷಣಾತ್ಮಕ ಹೆಜ್ಜೆ ಇರಿಸಿದೆ. ಇದು ಅತಿ ಅಗತ್ಯವಾದುದು ಏಕೆಂದರೆ, ಮುಯಿಜು ಆಹ್ವಾನದಂತೆ ಮಾಲ್ಡೀವ್ಸ್‌ನಲ್ಲಿ ಚೀನಾ ಇಷ್ಟರಲ್ಲಿಯೇ ತನ್ನ ಸೇನಾನೆಲೆಯನ್ನು ಸ್ಥಾಪಿಸಬಹುದು. ಈ ಸಾಗರ ಪ್ರದೇಶದಲ್ಲಿ ಹೆಚ್ಚಿನ ನಿಗಾ ಇರಿಸುವುದು ಸೇರಿ ಹಲವು ಕಾರಣಗಳಿಂದಾಗಿ ʼಐಎನ್‌ಎಸ್‌ ಜಟಾಯುʼ ಪ್ರಾಮುಖ್ಯತೆ ಪಡೆದಿದೆ. ಇಲ್ಲಿಂದ ಪಶ್ಚಿಮ ಅರಬ್ಬೀ ಸಮುದ್ರದಲ್ಲಿ ವೈರಿಗಳ ಮೇಲೆ ಹೆಚ್ಚಿನ ನಿಗಾ ಇರಿಸುವುದು, ಸಾಗರ ಪ್ರದೇಶದಲ್ಲಿ ಭಯೋತ್ಪಾದನೆ- ಅಪರಾಧ ತಡೆಗಟ್ಟುವುದು, ಸಮುದ್ರ ಪ್ರದೇಶದಲ್ಲಿ ಮಾದಕವಸ್ತು ಅಕ್ರಮ ಸಾಗಣೆ ನಿಯಂತ್ರಣ ಸಾಧ್ಯ. ಕ್ಷಿಪ್ರವಾಗಿ ಡ್ರೋನ್‌, ಕ್ಷಿಪಣಿ ನಿಗ್ರಹ ಕಾರ್ಯಾಚರಣೆ ಕೈಗೊಳ್ಳಲು ಇದು ಸಹಕಾರಿ. ಸಾಗರ ಪ್ರದೇಶದಲ್ಲಿ ಯಾವುದೇ ದುರಂತ ನಡೆದರೆ ರಕ್ಷಣೆ, ದಾಳಿ ನಡೆದರೆ ವೇಗವಾಗಿ ತಿರುಗೇಟು ನೀಡಬಹುದು. ಸಮುದ್ರ ಪ್ರದೇಶದಲ್ಲಿ ಅಕ್ರಮ ಸಾಗಣೆ, ಹಡಗುಗಳ ಸಂಚಾರದ ಮೇಲೆ ಹದ್ದಿನ ಕಣ್ಣಿಡಬಹುದು. ಚೀನಾದ ಸಂಶೋಧನಾ ಹಡಗುಗಳ ಸಂಚಾರದ ಮೇಲೆ ನಿಗಾ ಇರಿಸಿ, ಕ್ರಮ ತೆಗೆದುಕೊಳ್ಳುವುದು ಸಾಧ್ಯ. ಚೀನಾದ ಕುಮ್ಮಕ್ಕಿನಿಂದ ಸಮುದ್ರ ಪ್ರದೇಶದಲ್ಲಿ ಮಾಲ್ಡೀವ್ಸ್‌ ಆಕ್ರಮಣಕಾರಿ ನೀತಿ ಅನುಸರಿಸಿದರೆ ತಿರುಗೇಟು ನೀಡಲೂಬಹುದು.

ಇದನ್ನೂ ಓದಿ: INS Jatayu: ಮಾಲ್ಡೀವ್ಸ್‌ ಬಳಿಯೇ ನೌಕಾ ನೆಲೆ ನಿರ್ಮಿಸಿದ ಭಾರತ; ಇದು ಹೇಗೆ ಗೇಮ್‌ ಚೇಂಜರ್?

ಮೊಹಮ್ಮದ್‌ ಮುಯಿಜು ಅವರ ಭಾರತ ವಿರೋಧಿ ನೀತಿಗೆ ಮಾಲ್ಡೀವ್ಸ್‌ನಲ್ಲೇ ವಿರೋಧ ವ್ಯಕ್ತವಾಗಿತ್ತು. ಭಾರತದ ಸುಮಾರು 80 ಸೈನಿಕರು ಮಾಲ್ಡೀವ್ಸ್‌ನಲ್ಲಿದ್ದಾರೆ. ಮಾಲ್ಡೀವ್ಸ್‌ನಲ್ಲಿ ಭಾರತದ ಯೋಧರು ರೆಡಾರ್‌ ಹಾಗೂ ನಿಗಾ ಯುದ್ಧವಿಮಾನ ನಿರ್ವಹಣೆ ಮಾಡುತ್ತಿದ್ದಾರೆ. ಮೇ 10ರೊಳಗೆ ಭಾರತದ ಸೇನೆ ವಾಪಸಾಗಲಿದೆ. ಅಲ್ಲಿಂದ ನಂತರ ಮುಯಿಜು ಅವರ ನಡೆ ಇನ್ನಷ್ಟು ಚೀನಾದ ಕಡೆ ಎಂಬಂತಾಗಬಹುದು. ಇದು ಭಾರತಕ್ಕೆ ಈ ಪ್ರಾಂತ್ಯದಲ್ಲಿ ಇನ್ನಷ್ಟು ತಲೆನೋವು ಹಾಗೂ ಎಚ್ಚರಿಕೆಯ ಅವಶ್ಯಕತೆಯನ್ನು ತಂದಿಡುವುದಂತೂ ಖಚಿತ. ಹೀಗಾಗಿ ಭಾರತದ ನೂತನ ನೌಕಾನೆಲೆ ಪ್ರಸ್ತುತವಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಸಂಪಾದಕೀಯ

ವಿಸ್ತಾರ ಸಂಪಾದಕೀಯ: ಶಾಲೆಗಳಿಗೆ ಹುಸಿ ಬಾಂಬ್‌ ಬೆದರಿಕೆ, ಇ-ಮೇಲ್‌ ಕಿಡಿಗೇಡಿಗಳಿಗೆ ಕಠಿಣ ಪಾಠ ಕಲಿಸಬೇಕಿದೆ

ಶಿಕ್ಷಣ ಎಂದರೆ ಮಕ್ಕಳು ನಲಿಯುತ್ತ ಕಲಿಯುವುದು. ಆಡುತ್ತ, ನಲಿಯುತ್ತ, ಎಲ್ಲರೊಂದಿಗೆ ಬೆರೆಯುತ್ತ ಜ್ಞಾನವನ್ನು ವೃದ್ಧಿಸಿಕೊಳ್ಳುವುದು. ಆದರೆ, ಬದಲಾದ ಕಾಲಘಟ್ಟದಲ್ಲಿ ಮಕ್ಕಳು ಅಂಕಗಳ ಹಿಂದೆ ಓಡಬೇಕಿದೆ. ಸ್ಪರ್ಧಾತ್ಮಕ ಜಗತ್ತಿನಲ್ಲಿ ಮುನ್ನಡೆ ಸಾಧಿಸುವ, ಮೊದಲ ರ‍್ಯಾಂಕ್‌ ಪಡೆಯುವ, ಆಟ ಬಿಟ್ಟು ಪಾಠದತ್ತ ಹೆಚ್ಚು ಗಮನ ಹರಿಸುವ, ಎಫರ್ಟ್‌ ಹೆಸರಲ್ಲಿ, ಅಂಕ ಸಾಧನೆ ಹೆಸರಲ್ಲಿ ಇನ್ನಿಲ್ಲದ ಒತ್ತಡ ಅವರ ಮೇಲಿದೆ. ಇಂತಹ ಸಮಸ್ಯೆಗಳ ಮಧ್ಯೆಯೇ, ಶಾಲೆಗಳಿಗೆ ಹುಸಿ ಬಾಂಬ್‌ ಬೆದರಿಕೆ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗಿರುವುದು ಮಕ್ಕಳ ಶೈಕ್ಷಣಿಕ ಏಳಿಗೆ, ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಹಾಗಾಗಿ, ಇ-ಮೇಲ್‌ ಮೂಲಕ ಬೆದರಿಕೆ ಹಾಕುವ, ಭಯವನ್ನು ಹುಟ್ಟಿಸುವ ‘ಭಯೋತ್ಪಾದಕರಿಗೆ’ ತಕ್ಕ ಶಾಸ್ತಿ ಆಗಬೇಕಿದೆ.

VISTARANEWS.COM


on

School Children
Koo

ಶಾಲೆಗಳಲ್ಲಿ ಬಾಂಬ್‌ ಇರಿಸಲಾಗಿದೆ ಎಂದು ಇ-ಮೇಲ್‌ (E-Mail) ಮೂಲಕ ಬೆದರಿಕೆ ಒಡ್ಡುವುದು, ಆ ಮೂಲಕ ಮಕ್ಕಳು, ಪೋಷಕರು, ಶಿಕ್ಷಕರು ಆತಂಕಕ್ಕೀಡಾಗುವುದು, ಇದರಿಂದ ಎಲ್ಲೆಡೆ ಇದು ಸುದ್ದಿಯಾಗುವಂತೆ ಮಾಡುವ ಹೀನಾತಿಹೀನ ಪ್ರಕರಣಗಳು ಇತ್ತೀಚೆಗೆ ಹೆಚ್ಚು ಸುದ್ದಿಯಾಗುತ್ತಿವೆ. ಸೋಮವಾರ (ಮೇ 6) ಅಹಮದಾಬಾದ್‌ನಲ್ಲಿ ಹಲವು ಶಾಲೆಗಳಲ್ಲಿ ಬಾಂಬ್‌ ಇರಿಸಲಾಗಿದೆ ಎಂದು ಇ-ಮೇಲ್‌ ಮೂಲಕ ಬೆದರಿಕೆ ಹಾಕಲಾಗಿದೆ. ಇನ್ನು, ಮೇ 1ರಂದು ದೆಹಲಿ ಹಾಗೂ ರಾಷ್ಟ್ರ ರಾಜಧಾನಿ ವ್ಯಾಪ್ತಿಯ (NRC) ಸುಮಾರು 200ಕ್ಕೂ ಅಧಿಕ ಶಾಲೆಗಳಿಗೆ ಈ ರೀತಿಯ ಹುಸಿ ಬಾಂಬ್‌ ಬೆದರಿಕೆಯ ಮೇಲ್‌ಗಳನ್ನು (Hoax Bomb Threat) ಕಳುಹಿಸಲಾಗಿತ್ತು. ಸಹಜವಾಗಿಯೇ ಇದು ದೇಶಾದ್ಯಂತ ಸುದ್ದಿಯಾಯಿತು. ಶಾಲೆಗಳಿಂದ ಮಕ್ಕಳನ್ನು ಕೂಡಲೇ ಮನೆಗೆ ಕಳುಹಿಸಲಾಯಿತು. ಪೋಷಕರೂ ಶಾಲೆಗಳಿಗೆ ಓಡೋಡಿ ಬಂದು ಮಕ್ಕಳನ್ನು ಕರೆದುಕೊಂಡು ಹೋದರು. ಈಗಲೂ ಪೋಷಕರು ಮಕ್ಕಳನ್ನು ಶಾಲೆಗಳಿಗೆ ಕಳುಹಿಸಲು ಆಗುತ್ತಿಲ್ಲ. ಕರೆಸಿಕೊಳ್ಳಲು ಶಿಕ್ಷಕರಿಗೂ ಧೈರ್ಯ ಸಾಲುತ್ತಿಲ್ಲ. ಒಟ್ಟಿನಲ್ಲಿ ಕಿಡಿಗೇಡಿಗಳು ಮಾಡುವ ಉಪದ್ವ್ಯಾಪದಿಂದ ಶಾಲೆಗಳ ಆಡಳಿತ ಮಂಡಳಿ, ಶಿಕ್ಷಕರು, ಪೋಷಕರು ಹಾಗೂ ಮಕ್ಕಳು ಆತಂಕದಲ್ಲಿಯೇ ಮುಳುಗಿದ್ದಾರೆ. ಹಾಗಾಗಿ, ಇ-ಮೇಲ್‌ ಮೂಲಕ ಹುಸಿ ಬಾಂಬ್ ಬೆದರಿಕೆಯೊಡ್ಡುವ ಕಿಡಿಗೇಡಿಗಳಿಗೆ ತಕ್ಕ ಶಾಸ್ತಿ ಮಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.

ಅನಾಮಧೇಯ ವ್ಯಕ್ತಿಗಳು ಮೇಲ್‌ ಮಾಡುವುದು, ತನಿಖೆ ಬಳಿಕ ಅದು ಹುಸಿ ಬಾಂಬ್‌ ಬೆದರಿಕೆ ಎಂದು ಪೊಲೀಸರು ಸ್ಪಷ್ಟಪಡಿಸುವುದು, ಇಂತಹ ಪ್ರಕರಣಗಳು ದೇಶಾದ್ಯಂತ ನಡೆಯುತ್ತಿರುವುದರಿಂದ ಇದೊಂದು ದೊಡ್ಡ ವಿಷಯ ಅಲ್ಲ, ನಿರ್ಲಕ್ಷಿಸುವುದು ಒಳಿತು ಎಂದು ಎನಿಸಿದರು, ಹುಸಿ ಬೆದರಿಕೆಗಳು ಅತಿ ಹೆಚ್ಚು ಆತಂಕ ಸೃಷ್ಟಿಸುತ್ತಿವೆ, ಮಕ್ಕಳ ಜತೆಗೆ ಪೋಷಕರ ಮೇಲೂ ಪರಿಣಾಮ ಬೀರುತ್ತಿವೆ. ಆಧುನಿಕ ಕಾಲದಲ್ಲಿ ತಂತ್ರಜ್ಞಾನ ತುಂಬ ಮುಂದುವರಿದಿದೆ. ಸೈಬರ್‌ ಅಪರಾಧ ವಿಭಾಗವನ್ನೂ ತೆರೆಯಲಾಗಿದೆ. ಹಾಗಾಗಿ, ಸೈಬರ್‌ ಕ್ರೈಂ ಪೊಲೀಸರು ಇಂತಹ ಇ-ಮೇಲ್‌ ಕಡಿಗೇಡಿಗಳನ್ನು ಮಟ್ಟಹಾಕಬೇಕು. ಬೆಂಗಳೂರು, ಅಹಮದಾಬಾದ್‌, ದೆಹಲಿ ಎನ್ನದೆ, ದೇಶಾದ್ಯಂತ ಇಂತಹ ಪ್ರಕರಣಗಳನ್ನು ತಡೆಯಲು ಕಠಿಣ ಕ್ರಮ ತೆಗೆದುಕೊಳ್ಳಬೇಕು. ಮೇಲ್ನೋಟಕ್ಕೆ ಬೇರೆ ದೇಶದ ವಿಪಿಎನ್‌ (VPN) ಬಳಸಿ ಇ-ಮೇಲ್‌ ಬೆದರಿಕೆ ಒಡ್ಡಲಾಗುತ್ತಿದೆ ಎಂಬುದು ಗೊತ್ತಾದರೂ, ಸುಧಾರಿತ ತಂತ್ರಜ್ಞಾನವನ್ನು ಬಳಸಿ ಉಪದ್ವ್ಯಾಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು.

ಹುಸಿ ಬಾಂಬ್‌ ಬೆದರಿಕೆ ಕರೆಗಳು ಹತ್ತಾರು ಪರಿಣಾಮಗಳನ್ನು ಬೀರುತ್ತಿವೆ. ನಗರಗಳಲ್ಲಿ ಮಕ್ಕಳು ಪ್ರಾಣ ಭಯದಲ್ಲಿಯೇ ಶಾಲೆಗಳಿಗೆ ತೆರಳುವಂತಾಗಿದೆ. ಪೋಷಕರಂತೂ ಜೀವ ಹಿಡಿದುಕೊಂಡು ಮಕ್ಕಳನ್ನು ಶಾಲೆಗಳಿಗೆ ಕಳುಹಿಸುವಂತಾಗಿದೆ. ಕೆಲ ತಿಂಗಳ ಹಿಂದಷ್ಟೇ ಬೆಂಗಳೂರಿನಲ್ಲಿ ಸುಮಾರು 48 ಶಾಲೆಗಳಿಗೆ ಬಾಂಬ್‌ ಬೆದರಿಕೆ ಒಡ್ಡಲಾಗಿತ್ತು. ಇದು ನೂರಾರು ಶಾಲೆಗಳಲ್ಲಿ ಆತಂಕ ಸೃಷ್ಟಿಸಿತ್ತು. ಎಷ್ಟೋ ದಿನಗಳವರೆಗೆ ಪೋಷಕರು ಮಕ್ಕಳನ್ನು ಶಾಲೆಗಳಿಗೇ ಕಳುಹಿಸರಲಿಲ್ಲ. ಶಾಲೆಗಳ ಆಡಳಿತ ಮಂಡಳಿಗಳೂ ಅಷ್ಟೇ, ಸುಮ್ಮನೆ ಅಪಾಯವನ್ನು ಮೇಲೆ ಎಳೆದುಕೊಳ್ಳುವುದು ಬೇಡ ಎಂದು ಮಕ್ಕಳನ್ನು ಹಲವು ದಿನಗಳವರೆಗೆ ಶಾಲೆಗೆ ಕರೆಸಿರಲಿಲ್ಲ. ಈಗ, ದೆಹಲಿ ಹಾಗೂ ಅಹಮದಾಬಾದ್‌ ಶಾಲೆಗಳು, ಮಕ್ಕಳು ಮತ್ತು ಪೋಷಕರ ಪರಿಸ್ಥಿತಿಯೂ ಇದರಿಂದ ಹೊರತಾಗಿಲ್ಲ.

ಮಕ್ಕಳಿಗೆ ಜೀವ ಭಯ, ಪೋಷಕರು ಹಾಗೂ ಶಿಕ್ಷಕರಿಗೆ ಆತಂಕ ಮಾತ್ರವಲ್ಲ, ಹುಸಿ ಬಾಂಬ್‌ ಬೆದರಿಕೆ ಪ್ರಕರಣಗಳು ಮಕ್ಕಳ ಶೈಕ್ಷಣಿಕ ಏಳಿಗೆಯ ಮೇಲೆಯೇ ವ್ಯತಿರಿಕ್ತ ಪರಿಣಾಮಗಳನ್ನು ಬೀರುತ್ತಿದೆ. ಪದೇಪದೆ ಬೆದರಿಕೆ ಒಡ್ಡಿದರೆ ಮಕ್ಕಳು ಶಾಲೆಗಳಿಗೆ ಹೋಗುವುದಿಲ್ಲ. ಇದರಿಂದ ಅವರು ಪಠ್ಯವನ್ನು ಸರಿಯಾಗಿ ಅಭ್ಯಾಸ ಮಾಡಲು ಆಗುವುದಿಲ್ಲ. ಇನ್ನು, ಎಳೆಯ ವಯಸ್ಸಿನಲ್ಲೇ ಅವರು ಆತಂಕದಲ್ಲಿ ಶಾಲೆಗೆ ಹೋದರೆ, ಅದು ಅವರ ಮನಸ್ಸಿನ ಮೇಲೆ ಅಗಾಧವಾದ ಪರಿಣಾಮ ಬೀರುತ್ತದೆ. ಈಗಾಗಲೇ ಅತಿಯಾದ ಹೋಮ್‌ ವರ್ಕ್‌, ಆಟ-ಪಾಠಗಳಿಗೆ ಕಡಿಮೆ ಸಮಯ ಸಿಗುತ್ತಿದೆ. ಅತಿಯಾದ ಸ್ಪರ್ಧೆಯಿಂದ ಮಕ್ಕಳು ಅಂಕಗಳ ಹಿಂದೆ ಓಡಬೇಕಾದ, ರ‍್ಯಾಂಕ್‌ ಪಡೆಯಲೇಬೇಕಾದ ಅನಿವಾರ್ಯಕ್ಕೆ ಸಿಲುಕಿದ್ದಾರೆ. ಇದರಿಂದ ಮಕ್ಕಳು ನಾಲ್ಕೈದು ವರ್ಷದಿಂದಲೇ ಒತ್ತಡಕ್ಕೆ ಸಿಲುಕುತ್ತಿದ್ದಾರೆ.

ಅಷ್ಟಕ್ಕೂ ಶಿಕ್ಷಣ ಎಂದರೆ, ನಲಿಯುತ್ತ ಕಲಿಯುವುದಾಗಿದೆ. ಒತ್ತಡವಿಲ್ಲದೆ, ಆಡುತ್ತ, ನಲಿಯುತ್ತ, ಬೆರೆಯುತ್ತ ಜ್ಞಾನ ಸಂಪಾದಿಸುವುದಾಗಿದೆ. ಆದರೆ, ಈಗ ಬಾಂಬ್‌ ಬೆದರಿಕೆಯ ಆತಂಕವೂ ಮಕ್ಕಳಲ್ಲಿ ಮೂಡಿದರೆ, ಅದು ಸುದೀರ್ಘ ಅವಧಿಗೆ ಅವರನ್ನು ಕಾಡಲಿದೆ. ಶೈಕ್ಷಣಿಕ ಏಳಿಗೆಯ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಮಾನಸಿಕವಾಗಿಯೂ ಅವರು ಕುಗ್ಗಿಹೋಗಲಿದ್ದಾರೆ. ಇದರ ಮಧ್ಯೆಯೇ, ಹುಸಿ ಬಾಂಬ್‌ ಬೆದರಿಕೆ ನಿಗ್ರಹಕ್ಕಾಗಿ ಕೇಂದ್ರ ಸರ್ಕಾರವು ಪ್ರಮಾಣಿತ ಕಾರ್ಯಾಚರಣೆಯ ಕಾರ್ಯವಿಧಾನಗಳನ್ನು (SOP) ರಚಿಸಬೇಕು ಹಾಗೂ ವಿಸ್ತೃತ ಶಿಷ್ಟಾಚಾರಗಳನ್ನು ಸಿದ್ಧಪಡಿಸಬೇಕು ಎಂಬುದಾಗಿ ಆದೇಶ ಹೊರಡಿಸಿರುವುದು ಸ್ವಾಗತಾರ್ಹ ನಿರ್ಧಾರವಾಗಿದೆ. ಆದರೆ, ಈ ಸಮಸ್ಯೆಗೊಂದು ಕ್ಷಿಪ್ರವಾಗಿ ಕಾಯಂ ಪರಿಹಾರವನ್ನು ಕಂಡುಕೊಳ್ಳಬೇಕಿದೆ. ಅದರಲ್ಲೂ, ಶೈಕ್ಷಣಿಕ ವಾತಾವರಣವನ್ನೇ ಹಾಳುತ್ತಿರುವ ‘ಇ-ಮೇಲ್‌ ಭಯೋತ್ಪಾದಕರಿಗೆ’ ಕಠಿಣ ಶಿಕ್ಷೆಯಾಗಬೇಕಿದೆ.

ಇದನ್ನೂ ಓದಿ: ಶಾಲೆಗಳಿಗೆ ಇ-ಮೇಲ್‌ ಮೂಲಕ ಹುಸಿ ಬಾಂಬ್‌ ಬೆದರಿಕೆ; ಕಠಿಣ ಕ್ರಮಕ್ಕೆ ಮುಂದಾದ ಕೇಂದ್ರ ಸರ್ಕಾರ!

Continue Reading

ಸಂಪಾದಕೀಯ

ವಿಸ್ತಾರ ಸಂಪಾದಕೀಯ: ಹಾಸನ ಲೈಂಗಿಕ ದೌರ್ಜನ್ಯ ಪ್ರಕರಣ, ನಿಷ್ಪಕ್ಷಪಾತ ತನಿಖೆಯಾಗಲಿ

ಬಂಧಿತ ರೇವಣ್ಣ ಅವರ ಪುತ್ರ, ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಎರಡನೇ ಆರೋಪಿಯಾಗಿದ್ದಾರೆ. ಇವರು ಇನ್ನೂ ಎಸ್‌ಐಟಿಗೆ ಸಿಕ್ಕಿಲ್ಲ. ಪ್ರಜ್ವಲ್‌ ಅವರ ಸುಳಿವು ಪತ್ತೆ ಹಚ್ಚಲು ಇಂಟರ್‌ಪೋಲ್‌ನಿಂದ ಬ್ಲೂ ಕಾರ್ನರ್‌ ನೋಟಿಸ್ ಪಡೆಯಲು ಎಸ್‌ಐಟಿ ಪ್ರಯತ್ನಿಸುತ್ತಿದೆ.‌ ಪ್ರಭಾವಿಗಳೇ ಭಾಗಿಯಾಗಿರುವ ಆರೋಪವಿರುವ ಪ್ರಕರಣದ ಕುರಿತು ನಿಷ್ಪಕ್ಷಪಾತವಾದ ತನಿಖೆಯಾದರೆ ಮಾತ್ರ ಸಂತ್ರಸ್ತರಿಗೆ ಕನಿಷ್ಠ ನ್ಯಾಯ ಒದಗಿಸಲು ಸಾಧ್ಯವಾಗಲಿದೆ.

VISTARANEWS.COM


on

Vistara Editorial
Koo

ಹಾಸನ ಸಂಸದ ಪ್ರಜ್ವಲ್‌ ರೇವಣ್ಣ (Prajwal Revanna) ಅಶ್ಲೀಲ ವಿಡಿಯೊಗಳು, ಲೈಂಗಿಕ ದೌರ್ಜನ್ಯ, ಸಂತ್ರಸ್ತೆಯ ಅಪಹರಣ ಪ್ರಕರಣದಲ್ಲಿ ಮಾಜಿ ಸಚಿವ, ಜೆಡಿಎಸ್‌ ನಾಯಕ ಎಚ್‌.ಡಿ.ರೇವಣ್ಣ (HD Revanna) ಅವರನ್ನು ಎಸ್‌ಐಟಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಸಂತ್ರಸ್ತೆಯ ಅಪಹರಣ ಪ್ರಕರಣದಲ್ಲಿ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಎಚ್‌.ಡಿ.ರೇವಣ್ಣ (HD Revanna) ಅವರಿಗೆ ಮಧ್ಯಂತರ ನಿರೀಕ್ಷಣಾ ಜಾಮೀನು ನಿರಾಕರಿಸುತ್ತಲೇ ಎಸ್‌ಐಟಿ ಅಧಿಕಾರಿಗಳು ರೇವಣ್ಣ ಅವರನ್ನು ವಶಕ್ಕೆ ಪಡೆದರು. ಕರ್ನಾಟಕ ಸೇರಿ ದೇಶಾದ್ಯಂತ ಸುದ್ದಿಯಾಗಿರುವ ಪೆನ್‌ಡ್ರೈವ್‌ ಕೇಸ್‌ನಲ್ಲಿ (Pendrive Case) ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರ ಪುತ್ರ ಎಸ್‌ಐಟಿ ವಶಕ್ಕೆ ಸೇರಿದ್ದು, ಪ್ರಕರಣಕ್ಕೆ ಮಹತ್ವದ ತಿರುವೊಂದು ಸಿಕ್ಕಿದೆ. ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆಯನ್ನು ಅಪಹರಣ ಮಾಡಿದ ಕೇಸ್‌ನಲ್ಲಿ ಮೊದಲ ಆರೋಪಿಯಾಗಿರುವ ರೇವಣ್ಣ ಅವರನ್ನು ಬಂಧಿಸಿದ 24 ಗಂಟೆಯೊಳಗೆ ನ್ಯಾಯಾಲಯಕ್ಕೆ ಹಾಜರುಪಡಿಸಬೇಕಿದೆ. ಮಾಜಿ ಪ್ರಧಾನಿ ದೇವೇಗೌಡರ ನಿವಾಸದಲ್ಲೇ ಅವರು ಸೆರೆಸಿಕ್ಕಿದ್ದಾರೆ. ಇಲ್ಲಿಗೆ ಪ್ರಕರಣ ಕುತೂಹಲಕಾರಿ ಘಟ್ಟ ಮುಟ್ಟಿದೆ.

ರೇವಣ್ಣ ಅವರ ಪುತ್ರ, ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಎರಡನೇ ಆರೋಪಿಯಾಗಿದ್ದಾರೆ. ಇವರು ಇನ್ನೂ ಎಸ್‌ಐಟಿಗೆ ಸಿಕ್ಕಿಲ್ಲ. ಪ್ರಜ್ವಲ್‌ ಅವರ ಸುಳಿವು ಪತ್ತೆ ಹಚ್ಚಲು ಇಂಟರ್‌ಪೋಲ್‌ನಿಂದ ಬ್ಲೂ ಕಾರ್ನರ್‌ ನೋಟೀಸ್‌ ಪಡೆಯಲು ಎಸ್‌ಐಟಿ ಪ್ರಯತ್ನಿಸುತ್ತಿದೆ. ಅವರು ಎಲ್ಲಿದ್ದಾರೆ ಎಂಬ ಸುಳಿವು ಸಿಕ್ಕಿದ್ದರೆ ಅವರ ಬಂಧನ ಪ್ರಕ್ರಿಯೆ ಸುಲಭವಾಗಲಿದೆ. “ಕಾನೂನು ಪ್ರಕಾರ ಯಾವ ಪ್ರಕ್ರಿಯೆ ಅನುಸರಿಸಬೇಕೋ, ಅದೆಲ್ಲವನ್ನೂ ಅನುಸರಿಸಲಾಗುತ್ತದೆ. ಕಾನೂನು ಪ್ರಕಾರ ರೇವಣ್ಣ ನಡೆದುಕೊಳ್ಳುತ್ತಾರೆ. ಪ್ರಜ್ವಲ್‌ ರೇವಣ್ಣ ಕೂಡ ಆಗಮಿಸಲಿದ್ದಾರೆ. ಅವರು ಪೊಲೀಸರಿಗೆ ಶರಣಾಗಲಿದ್ದಾರೆ” ಎಂಬುದಾಗಿ ಜೆಡಿಎಸ್‌ ನಾಯಕ, ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅವರು ಮಾಹಿತಿ ನೀಡಿದ್ದಾರೆ. ಆದರೆ ಪ್ರಜ್ವಲ್‌ ಯಾವಾಗ ಭಾರತಕ್ಕೆ ವಾಪಸಾಗಲಿದ್ದಾರೆ ಎಂಬುದರ ಕುರಿತು ಅವರು ಮಾಹಿತಿ ನೀಡಿಲ್ಲ.

ಪ್ರಕರಣ ಗಂಭೀರ ಸ್ವರೂಪದ್ದಾಗಿರುವುದರಿಂದ, ಸಂತ್ರಸ್ತರು ತುಂಬಾ ಮಂದಿ ಇರುವುದರಿಂದ, ಎಸ್‌ಐಟಿ ಚುರುಕಾಗಿ ತನಿಖೆ ನಡೆಸುತ್ತಿದೆ. ಇನ್ನು, ಆಡಳಿತ ಪಕ್ಷ ಕಾಂಗ್ರೆಸ್‌ಗೆ ಜೆಡಿಎಸ್‌ ಅನ್ನು ಹಣಿಯಲು ಸಿಕ್ಕಿರುವ ಸುವರ್ಣಾವಕಾಶವೂ ಇದಾಗಿರುವುದರಿಂದ, ಗೃಹ ಇಲಾಖೆಯೂ ಬಹಳ ಚುರುಕಾಗಿಯೇ ಇದರಲ್ಲಿ ತೊಡಗಿಕೊಂಡಿದೆ. ಪೊಲೀಸರ ಚುರುಕುತನಕ್ಕೆ ಕಾನೂನು ಪ್ರಕಾರ ನಡೆದುಕೊಳ್ಳಬೇಕು ಎಂಬ ನ್ಯಾಯನಿಷ್ಪಕ್ಷಪಾತತೆ ಕಾರಣವೋ, ಅಥವಾ ಮೇಲಿನವರ ಒತ್ತಡವೋ ಎಂದು ಕೇಳಿದರೆ ಸರಿಯಾದ ಉತ್ತರ ಸಿಗಲಾರದು. ಪ್ರಭಾವಿಗಳು ಅಪರಾಧ ನಡೆಸಿದಾಗ ಅವರನ್ನು ಹೆಡೆಮುರಿ ಕಟ್ಟುವಲ್ಲಿ ಪೊಲೀಸರು ಇಷ್ಟೊಂದು ಚುರುಕಾಗಿ ಕಾರ್ಯಪ್ರವೃತ್ತರಾಗುವುದನ್ನು ಹಿಂದೆ ಎಂದೂ ಈ ರಾಜ್ಯ ಕಂಡಿರಲಿಲ್ಲ. ಅಷ್ಟರ ಮಟ್ಟಿಗೆ ಪೊಲೀಸ್‌ ಇಲಾಖೆಯನ್ನು ಚುರುಕಾಗಿಸಿದ ಈ ಪ್ರಕರಣ ವಿಶೇಷವೇ ಸರಿ.

ಕಾನೂನಿನ ಕೈಗಳಿಂದ ಯಾರೂ ತಪ್ಪಿಸಿಕೊಳ್ಳುವಂತಿಲ್ಲ. ನ್ಯಾಯದ ಮುಂದೆ ಎಲ್ಲರೂ ಒಂದೇ. ಇವೆರಡೂ ಸುಂದರವಾದ ಹೇಳಿಕೆಗಳು. ಆದರೆ ವಾಸ್ತವದಲ್ಲಿ ಇವು ಎಷ್ಟು ಸತ್ಯವಾಗಿವೆ ಎಂಬುದನು ಪರಿಶೀಲಿಸಬೇಕು. ರೇವಣ್ಣ ಹಾಗೂ ಪ್ರಜ್ವಲ್‌ ಇಬ್ಬರೂ ಪ್ರಭಾವಿಗಳು. ಕೇಂದ್ರದಲ್ಲಿ ಆಡಳಿತದಲ್ಲಿರುವ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್‌ನ ಪ್ರಮುಖ ನಾಯಕರು. ಸಂತ್ರಸ್ತೆ, ದೂರುದಾರರು ಗಟ್ಟಿಯಾಗಿ ನಿಂತು, ಪೊಲೀಸರು ಸಾಕ್ಷ್ಯಗಳನ್ನು ಕರಾರುವಕ್ಕಾಗಿ ಕಲೆಹಾಕಿ ಕೋರ್ಟ್‌ನಲ್ಲಿ ಮಂಡಿಸಿ, ವಿಚಾರಣೆ ಪಾರದರ್ಶಕವಾಗಿ ನಡೆದರೆ ಆರೋಪಿಗಳಿಗೆ ಶಿಕ್ಷೆಯಾಗಬಹುದು. ಇನ್ನು ಮುಂದಿನ ಕೆಲಸ ಪೊಲೀಸರಿಗೂ ಕೋರ್ಟಿಗೂ ಬಿಟ್ಟದ್ದು. ಈ ಹಿಂದಿನ ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ಎಷ್ಟು ಸಾಬೀತಾಗಿದೆ, ಎಷ್ಟರಲ್ಲಿ ಶಿಕ್ಷೆಯಾಗಿದೆ ಎಂಬ ಅಂಕಿಅಂಶಗಳನ್ನು ತೆಗೆದು ನೋಡಿದರೆ ನಿರಾಶೆಯಾಗುತ್ತದೆ. ಈ ಪ್ರಕರಣವೂ ಆ ಸಾಲಿಗೆ ಸೇರದಿರಲಿ.

“ಅಪರಾಧ ನಡೆದಿದ್ದರೆ ಕಾನೂನು ಪ್ರಕಾರ ಶಿಕ್ಷೆಯಾಗಲಿ” ಎಂದು ಜೆಡಿಎಸ್‌ ನಾಯಕ ಕುಮಾರಸ್ವಾಮಿ ಅವರೂ ಹೇಳಿದ್ದಾರೆ; ಬಿಜೆಪಿ ನಾಯಕರೂ ಹೇಳಿದ್ದಾರೆ. ಪ್ರಕರಣದ ಗಂಭೀರತೆ ಅವರನ್ನು ಅಲುಗಾಡಿಸಿರುವುದು ಅವರ ವರ್ತನೆಯಲ್ಲಿ ಗೋಚರಿಸುತ್ತಿದೆ. ಪ್ರಜ್ವಲ್‌ ಹಾಗೂ ರೇವಣ್ಣ ಅವರನ್ನು ಸಮರ್ಥಿಸಿಕೊಳ್ಳಲು ಯಾರೂ ಮುಂದಾಗಿಲ್ಲ, ಅದು ಸಾಧ್ಯವೂ ಇಲ್ಲ. ಆದರೆ ಈ ಚುನಾವಣೆಯ ಸಂದರ್ಭದಲ್ಲಿ ಉಂಟಾದ ಮೈತ್ರಿ ಏನಾಗಲಿದೆ? ಈ ಪ್ರಕರಣದಿಂದ ಜೆಡಿಎಸ್‌ಗಂತೂ ಲಾಭವಿಲ್ಲ. ಬಿಜೆಪಿಗೂ ಇದ್ದಂತಿಲ್ಲ. ರಾಜ್ಯದಲ್ಲಿ ಎರಡನೇ ಹಂತದ ಲೋಕಸಭೆ ಚುನಾವಣೆ ಇದೇ 7ರಂದು ನಡೆಯಲಿದೆ. ಈ ಘಟ್ಟದಲ್ಲೇ ಪ್ರಜ್ವಲ್-‌ ರೇವಣ್ಣ ಪ್ರಕರಣ ಸೃಷ್ಟಿಸಿರುವ ಕೋಲಾಹಲ, ಪಕ್ಷದ ಕಾರ್ಯಕರ್ತರನ್ನು ಹತಾಶೆಗೊಳಿಸಿಲ್ಲ ಅಥವಾ ಮತದಾರರನ್ನು ಜೆಡಿಎಸ್‌ನಿಂದ ವಿಮುಖಗೊಳಿಸಿಲ್ಲ ಎಂದು ಹೇಳುವುದು ಹೇಗೆ? ಇದು ರಾಜ್ಯದ ಚುನಾವಣೆ ಮೇಲೆ ಹೇಗೆ ಪ್ರಭಾವ ಬೀಳುವುದೋ, ಫಲಿತಾಂಶ ಬಂದ ನಂತರವೇ ತಿಳಿಯಬೇಕು. ಆಗ ಬಿಜೆಪಿ- ಜೆಡಿಎಸ್‌ ಮೈತ್ರಿಯ ಕತೆಯೂ ನಿರ್ಧಾರವಾಗಬಹುದು. ಕರ್ನಾಟಕದ ಏಕೈಕ ಪ್ರಬಲ ಪ್ರಾದೇಶಿಕ ಪಕ್ಷವೆನಿಸಿದ್ದ ಜೆಡಿಎಸ್‌ಗೆ ಇದರಿಂದ ಏನಾಗಲಿದೆ? ಅದು ಫೀನಿಕ್ಸ್‌ನಂತೆ ಧೂಳಿನಿಂದ ಮೇಲೆದ್ದು ಬರಲಿದೆಯೋ ಅಥವಾ ಸರ್ವನಾಶವಾಗಲಿದೆಯೋ? ಹೀಗೆ ಹಲವು ಪ್ರಶ್ನೆಗಳು ಮೂಡುತ್ತವೆ.

ಸದ್ಯಕ್ಕಂತೂ ಒಬ್ಬ ಆರೋಪಿಯ ಸೆರೆಯಾಗಿದೆ. ಇನ್ನೊಬ್ಬ ಆರೋಪಿಯ ಬಂಧನವಾಗಬೇಕಿದೆ. ನಿಷ್ಪಕ್ಷಪಾತವಾದ ತನಿಖೆ ನಡೆದು ಸತ್ಯ ಹೊರಬೀಳಲಿ. ನೂರಾರು ಸಂತ್ರಸ್ತೆಯರ ನಿಟ್ಟುಸಿರಿಗೆ ಕಾರಣವಾದವರು ಶಿಕ್ಷೆಗೆ ಒಳಗಾಗಲಿ. ಹಾಗೆಯೇ, ಮುಖ ಬ್ಲರ್‌ ಕೂಡ ಮಾಡದೆ ಸಂತ್ರಸ್ತ ಮಹಿಳೆಯರ ಸಾರ್ವಜನಿಕ ಅವಮಾನಕ್ಕೆ ಕಾರಣವಾದವರಿಗೆ ಕೂಡ ಶಿಕ್ಷೆಯಾಗಲಿ.

ಇದನ್ನೂ ಓದಿ: HD Revanna: ರೇವಣ್ಣ ಬಂಧನದ ಬೆನ್ನಲ್ಲೇ ಪೊಲೀಸರಿಗೆ ಪ್ರಜ್ವಲ್‌ ಶರಣಾಗತಿ? ಸಿ.ಎಸ್.ಪುಟ್ಟರಾಜು ಮಹತ್ವದ ಹೇಳಿಕೆ

Continue Reading

ಸಂಪಾದಕೀಯ

ವಿಸ್ತಾರ ಸಂಪಾದಕೀಯ: ಪಾಕಿಸ್ತಾನ ಮೊದಲು ತನ್ನ ತಟ್ಟೆಯಲ್ಲಿ ಬಿದ್ದಿರುವ ನೊಣ ತೆಗೆಯಲಿ, ಪಾಠ ಕಲಿಯಲಿ

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾಗಿಯಾಗಿದ್ದ ಪಾಕಿಸ್ತಾನದ ಪ್ರತಿನಿಧಿ ಮನೀರ್‌ ಅಕ್ರಮ್‌, ಕಾಶ್ಮೀರ ವಿವಾದ, ಪೌರತ್ವ ತಿದ್ದುಪಡಿ ಕಾಯ್ದೆ (CAA) ಮತ್ತು ಅಯೋಧ್ಯೆಯ ರಾಮ ಮಂದಿರ ಸೇರಿದಂತೆ ಅನೇಕ ವಿಚಾರಗಳನ್ನು ಪ್ರಸ್ತಾಪಿಸಿ ಭಾರತದ ವಿರುದ್ಧ ಗುರುತರ ಆರೋಪಗಳನ್ನು ಮಾಡಿದ್ದರು. ಆದರೆ, ಇದಕ್ಕೆ ಭಾರತವು ಸರಿಯಾಗಿಯೇ ತಿರುಗೇಟು ನೀಡಿದೆ. ಪಾಕಿಸ್ತಾನವು ಪ್ರತಿ ಬಾರಿ ಭಾರತದ ಕಡೆ ಬೆರಳು ತೋರಿಸುವ ಬದಲು ತನ್ನ ದೇಶದ ಸಮಸ್ಯೆಗಳನ್ನು ನಿವಾರಿಸಿದರೆ, ಅಲ್ಲಿನ ಜನ ನೆಮ್ಮದಿಯಿಂದ ನಿದ್ದೆ ಮಾಡಬಹುದು.

VISTARANEWS.COM


on

Pakistan PM
Koo

ಭಾರತದ ಆಂತರಿಕ ವಿಚಾರಗಳ ಬಗ್ಗೆ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ತಗಾದೆ ತೆಗೆದ ಪಾಕಿಸ್ತಾನಕ್ಕೆ ಭಾರತ ಮತ್ತೆ ತಕ್ಕ ಮಾರುತ್ತರ ನೀಡಿದೆ. ಪಾಕಿಸ್ತಾನ ಎಲ್ಲ ಆಯಾಮಗಳಲ್ಲಿ ಅತ್ಯಂತ ಸಂಶಯಾತ್ಮಕ ಚಟುವಟಿಕೆ, ದುಷ್ಕೃತ್ಯಗಳ ಟ್ರ್ಯಾಕ್‌ ರೆಕಾರ್ಡ್‌ಗಳನ್ನು ಹೊಂದಿದೆ ಎಂದು ವಿಶ್ವಸಂಸ್ಥೆಯಲ್ಲಿ ಭಾರತದ ಕಾಯಂ ಪ್ರತಿನಿಧಿ ರುಚಿರಾ ಕಾಂಬೋಜ್‌ ಹೇಳಿದ್ದಾರೆ. ವಿಶ್ವಸಂಸ್ಥೆಯ (United Nations) ಸಾಮಾನ್ಯ ಸಭೆಯಲ್ಲಿ ಭಾಗಿಯಾಗಿದ್ದ ಪಾಕಿಸ್ತಾನದ ಪ್ರತಿನಿಧಿ ಮನೀರ್‌ ಅಕ್ರಮ್‌, ಕಾಶ್ಮೀರ ವಿವಾದ, ಪೌರತ್ವ ತಿದ್ದುಪಡಿ ಕಾಯ್ದೆ(CAA) ಮತ್ತು ಅಯೋಧ್ಯೆಯ ರಾಮ ಮಂದಿರ ಸೇರಿದಂತೆ ಅನೇಕ ವಿಚಾರಗಳನ್ನು ಪ್ರಸ್ತಾಪಿಸಿ ಭಾರತದ ವಿರುದ್ಧ ಗುರುತರ ಆರೋಪಗಳನ್ನು ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ರುಚಿರಾ, ಪಾಕಿಸ್ತಾನ ಸದಾ ಕುಕೃತ್ಯಗಳ ಮೂಲಕವೇ ಕುಖ್ಯಾತಿಯನ್ನು ಪಡೆದಿದೆ ಎಂದು ತಿರುಗೇಟು ಕೊಟ್ಟರು. ಸವಾಲಿನ ಸ್ಥಿತಿಯಲ್ಲೂ ಭಾರತ ಶಾಂತಿ ಕಾಪಾಡಲು ಯತ್ನಿಸುತ್ತಿದೆ. ರಚನಾತ್ಮಕ ಮಾತುಕತೆಗೆ ಹೆಚ್ಚಿನ ಆದ್ಯತೆ ಕೊಡುತ್ತಿದ್ದೇವೆ. ಪಾಕ್‌ ಹೇಳಿಕೆ ಅವರ ವಿನಾಶಕಾರಿ ಮನೋಭಾವವನ್ನು ತೋರಿಸುತ್ತದೆ. ರಾಜತಾಂತ್ರಿಕವಾಗಿ ವಿಷಯಗಳನ್ನು ಚರ್ಚಿಸುವುದಕ್ಕೆ ಭಾರತ ಯಾವಾಗಲೂ ಬೆಂಬಲ ನೀಡುತ್ತದೆ ಎಂದಿದ್ದಾರೆ.

ಭಯೋತ್ಪಾದನೆ ಎಂಬುದು ಎಲ್ಲಾ ಧರ್ಮಗಳು ಪ್ರತಿಪಾದಿಸುವ ಶಾಂತಿ ಮತ್ತು ಸೌಹಾರ್ದತೆಗೆ ನೇರ ತದ್ವಿರುದ್ಧವಾದ ವಿಚಾರವಾಗಿದೆ. ಅದು ಒಳ್ಳೆಯ ವಿಚಾರಗಳಿಗೆ ಅಡ್ಡಿಯಾಗಿ ನಿಂತಿದ್ದು, ಹಗೆತನವನ್ನು ಹುಟ್ಟುಹಾಕುತ್ತದೆ ಮತ್ತು ವಿಶ್ವಾದ್ಯಂತ ಸಾಂಸ್ಕೃತಿಕ ಮತ್ತು ಧಾರ್ಮಿಕ ಸಂಪ್ರದಾಯಗಳ ಆಧಾರವಾಗಿರುವ ಗೌರವ ಮತ್ತು ಸಾಮರಸ್ಯದ ಸಾರ್ವತ್ರಿಕ ಮೌಲ್ಯಗಳನ್ನು ದುರ್ಬಲಗೊಳಿಸುತ್ತದೆ. ಹೀಗಾಗಿ ವಿಶ್ವಸಂಸ್ಥೆಯ ಸದಸ್ಯರು ಒಟ್ಟಾಗಿ ನಿಂತಿ ಪ್ರಪಂಚಾದ್ಯಂತ ಶಾಂತಿ ಸೌಹಾರ್ದತೆ ಕಾಪಾಡಲು ಪಣತೊಡಬೇಕಿದೆ. ಇಡೀ ಪ್ರಪಂಚವೇ ಒಂದು ಕುಟುಂಬ. ನನ್ನ ದೇಶ ಇದರಲ್ಲಿ ನಂಬಿಕೆಯನ್ನಿಟ್ಟುಕೊಂಡಿದೆ ಎಂದು ರುಚಿರಾ ಹೇಳಿದರು. ಧರ್ಮ ಅಥವಾ ನಂಬಿಕೆಯ ಆಧಾರದ ಮೇಲೆ ಹೆಚ್ಚುತ್ತಿರುವ ಅಸಹಿಷ್ಣುತೆ, ತಾರತಮ್ಯ ಮತ್ತು ಹಿಂಸಾಚಾರ ಪಾಕಿಸ್ತಾನದಲ್ಲೇ ಇದೀಗ ಹೆಚ್ಚು ಕಂಡುಬರುತ್ತಿದೆ. ಅಲ್ಲಿನ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ಇನ್ನಿಲ್ಲದ ದೌರ್ಜನ್ಯ ನಡೆಯುತ್ತಿದೆ. ಅಸಹಾಯಕರಾಗಿ ಅವರು ಭಾರತದತ್ತ ರಕ್ಷಣೆಗಾಗಿ ನೋಡುತ್ತಿದ್ದಾರೆ. ಇಸ್ಲಾಂ ಧರ್ಮನಿಂದನೆಯ ಹೆಸರಿನಲ್ಲಿ ಅಲ್ಲಿನ ಹಿಂದೂಗಳನ್ನು ದಮನಿಸಲಾಗುತ್ತಿದೆ. ಇದನ್ನು ವಿಶ್ವಸಂಸ್ಥೆ ಗಮನಿಸಬೇಕಿದೆ.

ಪಾಕಿಸ್ತಾನದ ಹುಳುಕುಗಳು ಲೋಕದ ಕಣ್ಣಿನ ಮುಂದೆ ಸಾಕಷ್ಟು ಸ್ಪಷ್ಟವಾಗಿಯೇ ಇವೆ. ಅದು ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ ಜಿಹಾದಿ ಉಗ್ರರಿಗಾಗಿ ಶಿಬಿರಗಳನ್ನು ನಡೆಸುತ್ತಿದೆ. ಇದನ್ನು ಅಲ್ಲಿನ ಗುಪ್ತಚರ ಸಂಸ್ಥೆ ಐಎಸ್‌ಐ ನಿರ್ವಹಿಸುತ್ತದೆ. ಅಲ್ಲಿಂದ ಕಾಶ್ಮೀರಕ್ಕೆ ಅಕ್ರಮವಾಗಿ ನುಸುಳುವ ಈ ಉಗ್ರರು ಅಲ್ಲಿ ನರಮೇಧ ನಡೆಸುತ್ತಾರೆ. ಇತ್ತೀಚೆಗೆ ಕಾಶ್ಮೀರದಲ್ಲಿ ನಡೆದ ದೀರ್ಘಾವಧಿಯ ಎನ್‌ಕೌಂಟರ್‌ಗಳು ಹಾಗೂ ಅಲ್ಲಿ ಹುತಾತ್ಮರಾದ ಭಾರತೀಯ ಯೋಧರನ್ನು ನೆನಪಿಸಿಕೊಳ್ಳಬಹುದು. ಹಿಂದೂ, ಕ್ರೈಸ್ತ, ಸಿಖ್‌ ಧರ್ಮದ ಮಹಿಳೆಯರ ಮೇಲೆ ಪಾಕ್‌ನಲ್ಲಿ ದೌರ್ಜನ್ಯ ಎಸಗಲಾಗುತ್ತಿದೆ. ಮಾನವ ಹಕ್ಕುಗಳು ಜಗತ್ತಿನಲ್ಲೇ ಕೆಟ್ಟದಾಗಿದ್ದರೆ, ಅದು ಪಾಕಿಸ್ತಾನದಲ್ಲಿ ಮಾತ್ರ. ಪ್ರತಿ ವರ್ಷ ಪಾಕಿಸ್ತಾನದಲ್ಲಿ ಒಂದು ಸಾವಿರ ಅಲ್ಪಸಂಖ್ಯಾತ ಮಹಿಳೆಯರನ್ನು ಅಪಹರಿಸಿ, ಅವರನ್ನು ಬಲವಂತವಾಗಿ ಮತಾಂತರ ಮಾಡಲಾಗುತ್ತಿದೆ.

ಆಸ್ಟ್ರೇಲಿಯಾ ಮೂಲದ ಇನ್‌ಸ್ಟಿಟ್ಯೂಟ್ ಫಾರ್ ಎಕನಾಮಿಕ್ಸ್ ಅಂಡ್ ಪೀಸ್ ಬಿಡುಗಡೆ ಮಾಡಿರುವ ವಾರ್ಷಿಕ ಜಾಗತಿಕ ಭಯೋತ್ಪಾದನಾ ಸೂಚ್ಯಂಕ(ಜಿಟಿಐ) ವರದಿ- 2024ರ ಪ್ರಕಾರ, ಕಳೆದ ವರ್ಷದಲ್ಲಿ ಪಾಕಿಸ್ತಾನ ಮೂರು ಸ್ಥಾನ ಮೇಲಕ್ಕೇರಿ ನಾಲ್ಕನೇ ಸ್ಥಾನಕ್ಕೆ ಏರಿದೆ. ಇಲ್ಲಿ ಬೇರೆ ಯಾವುದೇ ದೇಶಕ್ಕಿಂತ ಅತಿ ಹೆಚ್ಚು ಉಗ್ರ ದಾಳಿ ಘಟನೆಗಳು ನಡೆದಿವೆ. 2023ರಲ್ಲಿ ಇಲ್ಲಿ 490 ದಾಳಿಗಳು ದಾಖಲಾಗಿವೆ. ವರ್ಷದಿಂದ ವರ್ಷಕ್ಕೆ ಇದು ಹೆಚ್ಚಳವನ್ನು ಕಾಣುತ್ತಿದೆ. ಅದರಲ್ಲೂ ಭಯೋತ್ಪಾದನೆಯಿಂದಾಗಿ ಸಾವನ್ನಪ್ಪುತ್ತಿರುವವರಲ್ಲಿ ಶೇ.55 ಮಂದಿ ಸೇನೆಯ ಸಿಬ್ಬಂದಿ. ಪಾಕಿಸ್ತಾನವು ಭಯೋತ್ಪಾದನೆಯ ರಾಜಧಾನಿ ಎನ್ನುವುದು ಸಾಬೀತಾದ ಸಂಗತಿ. ಮತಾಂಧರನ್ನು, ಪ್ರತ್ಯೇಕತಾವಾದಿಗಳನ್ನು ಸೃಷ್ಟಿಸಿ ಅವರಿಗೆ ಆಯುಧಗಳನ್ನೂ ಪೂರೈಸಿ, ಪಂಜಾಬ್‌ನಲ್ಲೂ ಖಲಿಸ್ತಾನ್‌ವಾದಿಗಳಿಗೆ ತೆರೆಮರೆಯ ಬೆಂಬಲ ನೀಡಿ ಅದು ಸೃಷ್ಟಿಸಿದ ಅನಾಹುತ, ಮಾನವ ಹಕ್ಕು ಉಲ್ಲಂಘನೆ ಅಷ್ಟಿಷ್ಟಲ್ಲ. ಇಂಥ ದೇಶಕ್ಕೆ ಭಾರತಕ್ಕೆ ಉಪದೇಶ ಮಾಡುವ ನೈತಿಕ ನೆಲೆಯಿಲ್ಲ. ಕಾಶ್ಮೀರದ ಬಗೆಗೂ ಮಾತಾಡುವ ಹಕ್ಕು ಆ ದೇಶಕ್ಕೆ ಇಲ್ಲ. ಜಮ್ಮು- ಕಾಶ್ಮೀರದಲ್ಲಿ ಆರ್ಟಿಕಲ್‌ 370 ರದ್ದಾಗಿ ಮೂರು ವರ್ಷಗಳಾದವು. ಈ ಸಮಯದಲ್ಲಿ ಅಲ್ಲಿನ ಜನಜೀವನ ಸುಧಾರಿಸಿದೆ. ಪ್ರವಾಸೋದ್ಯಮ ಚಿಗುರಿದೆ. ದೇಶೀಯ ಹಾಗೂ ವಿದೇಶೀಯ ಹೊಸ ಹೂಡಿಕೆಗಳು ಬರುತ್ತಿವೆ. ಇದು ಸಹಜವಾಗಿಯೇ ಇಲ್ಲಿ ಪ್ರತ್ಯೇಕತಾವಾದವನ್ನು ಬಿತ್ತಲು ದಶಕಗಳಿಂದ ಪ್ರಯತ್ನಿಸುತ್ತಿದ್ದ ಪಾಕಿಸ್ತಾನಕ್ಕೆ ಹಿನ್ನಡೆಯಾಗಿದೆ. ಅದಕ್ಕಾಗಿಯೇ ಆ ದೇಶ ಮೈಪರಚಿಕೊಳ್ಳುತ್ತಿದೆ. ಇನ್ನಾದರೂ ಪಾಕ್ ಆಡಳಿತಗಾರರಿಗೆ, ಸೇನಾಧಿಕಾರಿಗಳಿಗೆ ಬುದ್ಧಿ ಬರಲಿ.

ಇದನ್ನೂ ಓದಿ: United Nations: ಪಾಕಿಸ್ತಾನ ದುಷ್ಕೃತ್ಯಗಳ ಟ್ರ್ಯಾಕ್‌ ರೆಕಾರ್ಡ್‌ ಹೊಂದಿದೆ; ವಿಶ್ವಸಂಸ್ಥೆಯಲ್ಲಿ ಗುಡುಗಿದ ಭಾರತ

Continue Reading

ಸಂಪಾದಕೀಯ

ವಿಸ್ತಾರ ಸಂಪಾದಕೀಯ: ಅಮೆರಿಕದ ಬುದ್ಧಿಗೇಡಿಗಳ ವರದಿಯಲ್ಲಿ ಭಾರತದ ಬಗ್ಗೆ ಹಸಿ ಸುಳ್ಳುಗಳು

ಅಲ್ಪಸಂಖ್ಯಾತರಿಗೆ ಇಲ್ಲಿ ರಕ್ಷಣೆಯಿಲ್ಲ ಎಂದು ಹುಯಿಲೆಬ್ಬಿಸುವುದನ್ನೇ ಕಾಯಕ ಮಾಡಿಕೊಂಡ ಕೆಲವರು ಭಾರತದಲ್ಲೂ ಅಮೆರಿಕದಲ್ಲೂ ಇದ್ದಾರೆ. ಇದು ಅವರ ಹೊಟ್ಟೆಪಾಡು ಎಂದು ಸುಮ್ಮನಾಗವಂತೆಯೂ ಇಲ್ಲ. ಯಾಕೆಂದರೆ ಇವರು ಅಂತಾರಾಷ್ಟ್ರೀಯವಾಗಿ ನಮ್ಮ ಮುಖಕ್ಕೆ ಮಸಿ ಬಳಿಯಬಲ್ಲರು. ಇವರನ್ನು ತರಾಟೆಗೆ ತೆಗೆದುಕೊಳ್ಳುವುದೇ ಸರಿಯಾದ ದಾರಿ.

VISTARANEWS.COM


on

Religious Freedom
Koo

ಧಾರ್ಮಿಕ ಸ್ವಾತಂತ್ರ್ಯದ ಕುರಿತು ಅಮೆರಿಕ ಸರ್ಕಾರದ ಕಮಿಷನ್‌ ಆನ್‌ ಇಂಟರ್‌ನ್ಯಾಷನಲ್‌ ರಿಲಿಜಿಯಸ್‌ ಫ್ರೀಡಂ (USCIRF Report) ವರದಿ ಬಿಡುಗಡೆ ಮಾಡಿದೆ. ಭಾರತ ಸೇರಿ 17 ದೇಶಗಳಲ್ಲಿ ಧಾರ್ಮಿಕ ಸ್ವಾತಂತ್ರ್ಯದ (Religious Freedom) ಕುರಿತು ಕಳವಳ ವ್ಯಕ್ತಪಡಿಸಿದೆ. “ಭಾರತ ಸೇರಿ 17 ದೇಶಗಳಲ್ಲಿ ಜನರು ತಮ್ಮ ಧರ್ಮವನ್ನು ಅನುಸರಿಸುವ, ಧಾರ್ಮಿಕ ವಿಚಾರಗಳ ಮೇಲೆ ನಂಬಿಕೆ ಇರಿಸುವ ಸ್ವಾತಂತ್ರ್ಯದ ಉಲ್ಲಂಘನೆಯಾಗುತ್ತಿದೆ. ಧಾರ್ಮಿಕ ಸ್ವಾತಂತ್ರ್ಯಕ್ಕೆ ಧಕ್ಕೆ ತರುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ. ಭಾರತದಲ್ಲಿ ರಾಷ್ಟ್ರೀಯವಾದಿ ನೀತಿಗಳ ಹೇರಿಕೆಯಿಂದಾಗಿ ಇತರ ಧರ್ಮಗಳಲ್ಲಿ ನಂಬಿಕೆ ಇಟ್ಟುಕೊಂಡವರಿಗೆ ಸಮಸ್ಯೆಯಾಗಿದೆ. ದ್ವೇಷ ಕಾರುವ ವಾಕ್ಚಾತುರ್ಯ, ಕೋಮುವಾದದಿಂದ ಕೂಡಿದ ಹಿಂಸಾಚಾರಗಳನ್ನು ನಿಯಂತ್ರಿಸುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ. ಇದು ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯಕ್ಕೆ ಧಕ್ಕೆ ತರುತ್ತಿರುವುದಕ್ಕೆ ಉದಾಹರಣೆಯಾಗಿದೆ” ಎಂದು ಹೇಳಿದೆ. ಇದಕ್ಕೆ ಭಾರತ ಸರ್ಕಾರ ತಿರುಗೇಟು ನೀಡಿದ್ದು, “ಯುಎಸ್‌ಸಿಐಆರ್‌ಎಫ್‌ ವರದಿಯು ಪಕ್ಷಪಾತ ಹಾಗೂ ರಾಜಕೀಯ ಪ್ರೇರಿತವಾಗಿ ತಯಾರಿಸಿದ್ದಾಗಿದೆ” ಎಂಬುದಾಗಿ ಅಸಮಾಧಾನ ವ್ಯಕ್ತಪಡಿಸಿದೆ. “ಇದಕ್ಕೂ ಮೊದಲು ಕೂಡ ಇಂತಹ ವರದಿಗಳನ್ನು ಅದು ಪ್ರಕಟಿಸಿತ್ತು. ಭಾರತದ ಕುರಿತು ಷಡ್ಯಂತ್ರದಿಂದ ಕೂಡಿದ ವರದಿ ಬಿಡುಗಡೆ ಮಾಡುವುದು ಅದಕ್ಕೆ ರೂಢಿಯೇ ಆಗಿದೆ. ಯುಎಸ್‌ಸಿಐಆರ್‌ಎಫ್‌ ವರದಿಯಲ್ಲಿ ಯಾವುದೇ ಹುರುಳಿಲ್ಲ” ಎಂದಿದೆ ಭಾರತ.

ಈ ವರದಿ ಯಾರೋ ಅಡ್ಡಕಸಬಿಗಳು ತಯಾರಿಸಿದ ವರದಿಯಂತೆ ಕಾಣಿಸುತ್ತಿದೆ. ಬಹುಶಃ ಅವರು ಭಾರತಕೆಕ ಬಂದು ಇಲ್ಲಿನ ಧಾರ್ಮಿಕ ಸಹಿಷ್ಣುತೆ, ಸಹಬಾಳ್ವೆ ಇತ್ಯಾದಿಗಳನ್ನು ನೋಡಿದ್ದರೆ ಇಂಥ ವರದಿ ತಯಾರಿಸುತ್ತಿರಲಿಲ್ಲ. ಭಾರತದಿಂದ ಆಚೆಗೆ ಕುಳಿತು ಭಾರತದ ವಿರುದ್ಧವೇ ಯುಟ್ಯೂಬ್‌ ವಿಡಿಯೋ ಮಾಡಿ ಬಿಡುವ ʼಬುದ್ಧಿವಂತʼರ ಮಾತುಗಳನ್ನು ಕೇಳಿಕೊಂಡು ಇದನ್ನು ತಯಾರಿಸಿದಂತೆ ಇದೆ. ಈ ವರದಿಯ ಅಕ್ಷರಕ್ಷರವೂ ಸುಳ್ಳು ಎಂಬುದಕ್ಕೆ ಸಾಕ್ಷಿಗಳನ್ನು ನೀಡಬಹುದು. ಸಿಪಿಎ (ಸೆಂಟರ್ ಫಾರ್ ಪಾಲಿಸಿ ಅನಾಲಿಸಿಸ್) ಎಂಬ ಜಾಗತಿಕ ಸಂಸ್ಥೆ ಕಳೆದ ವರ್ಷ ನೀಡಿರುವ ಜಾಗತಿಕ ವರದಿಯಲ್ಲಿ, ಜಗತ್ತಿನ ಇತರ ದೇಶಗಳಿಗೆ ಹೋಲಿಸಿದರೆ, ಅಲ್ಪಸಂಖ್ಯಾತರನ್ನು ಒಳಗೊಳ್ಳುವ ಕ್ರಮಗಳಲ್ಲಿ ಭಾರತ ನಂ.1 ಸ್ಥಾನದಲ್ಲಿದೆ ಎಂದು ಹೇಳಿದೆ. ಇದೊಂದು ಸ್ವತಂತ್ರ ಅಂತಾರಾಷ್ಟ್ರೀಯ ಸಂಸ್ಥೆ. 110 ರಾಷ್ಟ್ರಗಳಲ್ಲಿ ಸಮೀಕ್ಷೆ ನಡೆಸಿ ಆ ವರದಿ ನೀಡಿತ್ತು. ಭಾರತವೇ ಅಲ್ಪಸಂಖ್ಯಾತರಿಗೆ ಹೆಚ್ಚು ಸುರಕ್ಷಿತ ಜಾಗ. ಬೇರೆ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಅಲ್ಪಸಂಖ್ಯಾತರ ಮೇಲೆ ಯಾವುದೇ ನಿರ್ಬಂಧ ಇಲ್ಲ. ಭಾರತದ ಸಂವಿಧಾನವು ಸಂಸ್ಕೃತಿ ಮತ್ತು ಶಿಕ್ಷಣ ಎರಡರಲ್ಲೂ ಧಾರ್ಮಿಕ ಅಲ್ಪಸಂಖ್ಯಾತರನ್ನು ಪ್ರೋತ್ಸಾಹಿಸುವ ವಿಶಿಷ್ಟ, ವಿಶೇಷ ವಿಧಿಗಳನ್ನು ಹೊಂದಿದೆ ಎಂದೂ ಈ ವರದಿ ಉಲ್ಲೇಖಿಸಿದೆ. ಭಾರತದ ನಂತರದ 4 ಸ್ಥಾನಗಳಲ್ಲಿ ಪನಾಮಾ, ಜಪಾನ್, ದಕ್ಷಿಣ ಕೊರಿಯಾ ಮತ್ತು ನಂತರದ ಸ್ಥಾನದಲ್ಲಿ ಅಮೆರಿಕ ದೇಶ ಇದೆ. ಯುಎಸ್‌ಸಿಐಆರ್‌ಎಫ್‌ ಇದನ್ನು ಗಮನಿಸಿದಂತಿಲ್ಲ.

ನಮ್ಮ ದೇಶದಲ್ಲಿ ಆರು ಧರ್ಮಗಳ (ಮುಸ್ಲಿಂ, ಕ್ರೈಸ್ತ, ಸಿಖ್‌, ಜೈನ, ಬೌದ್ಧ, ಪಾರ್ಸಿ) ಅಲ್ಪಸಂಖ್ಯಾತರು ಒಟ್ಟಾಗಿ ಒಟ್ಟಾರೆ ಜನಸಂಖ್ಯೆಯ 19.3%ದಷ್ಟು ಇದ್ದಾರೆ. ಅಲ್ಪಸಂಖ್ಯಾತರ ಹಿತವನ್ನೂ ಬಹುಸಂಖ್ಯಾತರಂತೆಯೇ ಕಾಯಲು ನಮ್ಮ ಸಂವಿಧಾನದಲ್ಲೂ ʼಧರ್ಮನಿರಪೇಕ್ಷತೆʼಯನ್ನು ಸೇರಿಸಲಾಗಿದೆ. ಅಲ್ಪಸಂಖ್ಯಾತ ಹಿತಚಿಂತನೆ ನೋಡಿಕೊಳ್ಳುವುದಕ್ಕಾಗಿಯೇ ಕೇಂದ್ರದಲ್ಲಿ ʼಅಲ್ಪಸಂಖ್ಯಾತರ ವ್ಯವಹಾರಗಳ ಸಚಿವಾಲಯʼ ಇದೆ. ಈ ದೇಶದ ಮುಖ್ಯಮಂತ್ರಿ, ರಾಜ್ಯಪಾಲ, ರಾಷ್ಟ್ರಪತಿ ಹುದ್ದೆಯನ್ನೂ ಭಾರತೀಯ ಅಲ್ಪಸಂಖ್ಯಾತರು ಜನಮತದಿಂದಲೇ ಅಲಂಕರಿಸಿದ್ದಾರೆ. ಭಾರತದ ಜನಸಂಖ್ಯೆಯ ಸುಮಾರು 14%ದಷ್ಟು, ಅಂದರೆ 20 ಕೋಟಿ ಮಂದಿ ಮುಸ್ಲಿಮರು ಇಲ್ಲಿ ಇದ್ದಾರೆ. ಇದು ದೇಶದ ಎರಡನೇ ಅತಿ ದೊಡ್ಡ ಧಾರ್ಮಿಕ ಸಮುದಾಯ. ಇಂಡೋನೇಷ್ಯಾ ಹಾಗೂ ಪಾಕಿಸ್ತಾನದ ಬಳಿಕ ಅತಿ ಹೆಚ್ಚು ಮುಸ್ಲಿಮರು ಇರುವ ದೇಶ ಎಂದರೆ ಭಾರತ. ಇನ್ನುಳಿದ ಇಸ್ಲಾಮಿಕ್‌ ದೇಶಗಳೆನಿಸಿಕೊಂಡವು ಕೂಡ ಭಾರತದಷ್ಟು ಸಂಖ್ಯೆಯ ಮುಸ್ಲಿಮರನ್ನು ಹೊಂದಿಲ್ಲ. ಭಾರತದಲ್ಲಿ ಎರಡೂ ಧರ್ಮಗಳೂ ಸಾಕಷ್ಟು ಸಾಮರಸ್ಯದಿಂದ ಬಾಳುತ್ತಿವೆ. ಪಾಕಿಸ್ತಾನ, ಇರಾನ್ ಮುಂತಾದ ಅಪ್ಪಟ ಮುಸ್ಲಿಂ ದೇಶಗಳಿಗಿಂತ ಭಾರತೀಯ ಮುಸ್ಲಿಮರು ಹೆಚ್ಚು ಸ್ವಾತಂತ್ರ್ಯ ಮತ್ತು ಸೌಕರ್ಯ ಹೊಂದಿದ್ದಾರೆ. ಹಾಗೆ ನೋಡಿದರೆ ಮುಸ್ಲಿಂ ದೇಶಗಳಲ್ಲೇ ಮುಸ್ಲಿಮರು ಸುರಕ್ಷಿತವಾಗಿಲ್ಲ. ಪಾಕಿಸ್ತಾನ, ಆಫ್ಘಾನಿಸ್ತಾನದ ಮಸೀದಿಗಳಲ್ಲೇ ಬಾಂಬ್ ಇಟ್ಟು ಸ್ಫೋಟಿಸಲಾಗುತ್ತಿದೆ. ಅಲ್ಲಿಯ ಅಲ್ಪಸಂಖ್ಯಾತರು ನಿತ್ಯ ನರಕ ಯಾತನೆ ಅನುಭವಿಸುತ್ತಿದ್ದಾರೆ. ಈ ಸೋಗಲಾಡಿ ವರದಿ ಅದನ್ನೇನಾದರೂ ನೆನಪಿಸಿಕೊಂಡಿದೆಯೇ?

ಈ ವರದಿಯನ್ನು ಹೊರಡಿಸಿದ ಅಮೆರಿಕದ ಬುಡದಲ್ಲಿ ಏನಿದೆ ಎಂದು ಸ್ವಲ್ಪ ನೋಡೋಣ. ಅತಿ ಹಳೆಯ ಪ್ರಜಾಪ್ರಭುತ್ವ ದೇಶ ಎನಿಸಿಕೊಂಡ ಆ ದೇಶದಲ್ಲಿ ಇನ್ನೂವರೆಗೂ ಒಬ್ಬ ಮಹಿಳೆಯೂ ಅಧ್ಯಕ್ಷರಾಗಲು ಸಾಧ್ಯವಾಗಲಿಲ್ಲ. ಬರಾಕ್‌ ಒಬಾಮರಂಥ ಅಲ್ಪಸಂಖ್ಯಾತರು ಅಧ್ಯಕ್ಷರಾಗಲು ಹಲವು ಶತಮಾನಗಳೇ ಬೇಕಾಯಿತು. ಮಹಿಳೆಯರೂ ತಮ್ಮ ಮತದಾನದ ಹಕ್ಕನ್ನು ಪಡೆಯಲು ಬಡಿದಾಡಬೇಕಾಯಿತು. ಇನ್ನು ಅಲ್ಲಿನ ಆಫ್ರಿಕನ್‌ ಸಮುದಾಯ ಅನುಭವಿಸುತ್ತಿರುವ ಸಂಕಷ್ಟವನ್ನು ಹೇಳಬೇಕಾಗಿಯೇ ಇಲ್ಲ. ಇವರನ್ನು ಇಲ್ಲಿ ನೂರಾರು ವರ್ಷಗಳ ಕಾಲ ಜೀತದಾಳುಗಳಾಗಿ ದುಡಿಸಿಕೊಳ್ಳಲಾಗುತ್ತಿತ್ತು. ಇದನ್ನು ಹೋಗಲಾಡಿಸಲು ಲಿಂಕನ್‌ನಂಥ ಮುತ್ಸದ್ಧಿ ಬಲಿದಾನ ಮಾಡಬೇಕಾಯಿತು. ಈಗಲೂ ಅಲ್ಲಿ ಕರಿಯರ ಸಮುದಾಯದ ಮೇಲೆ ದೌರ್ಜನ್ಯ ನಡೆಯುತ್ತಲೇ ಇದೆ. ಇದನ್ನು ವಿರೋಧಿಸಿ ನಡೆಸಲಾಗುತ್ತಿರುವ ʼಬ್ಲ್ಯಾಕ್‌ ಲೈವ್ಸ್‌ ಮ್ಯಾಟರ್ʼ ಚಳವಳಿಯನ್ನೂ ಇಲ್ಲಿ ನೆನಪಿಸಿಕೊಳ್ಳಬಹುದು. ಇನ್ನು ಅಲ್ಲಿನ ಮೂಲವಾಸಿ ಅಮೆರಿಕನ್‌ ಸಮುದಾಯದವರನ್ನು ಯಾವ ರೀತಿ ನಿರ್ಮೂಲನ ಮಾಡಲಾಯಿತು ಎಂಬುದು ಚರಿತ್ರೆಯಲ್ಲಿ ಸೇರಿಹೋಗಿರುವ ಕರಾಳ ಅಧ್ಯಾಯಗಳಲ್ಲೊಂದು. ಇಂದು ಹುಡುಕಿದರೂ ಆ ಜನಾಂಗ ಅಲ್ಲಿ ಸಿಗುವುದಿಲ್ಲ. ಇನ್ನು ಮುಸ್ಲಿಮರ ವಿಷಯಕ್ಕೆ ಬಂದರೆ, 9/11 ಘಟನೆಯ ನಂತರ ಅಲ್ಲಿ ಪ್ರತಿಯೊಬ್ಬ ಮುಸ್ಲಿಮನನ್ನೂ ಶಂಕಿತ ಭಯೋತ್ಪಾದಕನಂತೆಯೇ ನೋಡಲಾಗುತ್ತದೆ. ಮುಸ್ಲಿಮರನ್ನು ಈ ಅನುಮಾನದಿಂದಾಗಿಯೇ ಅಲ್ಲಿನ ಸರ್ಕಾರಿ ಆಡಳಿತಾತ್ಮಕ ಹುದ್ದೆಗಳಲ್ಲಿ ಒಳಬಿಟ್ಟುಕೊಳ್ಳಲಾಗುತ್ತಿಲ್ಲ. ಇಂಥ ದೇಶ, ಭಾರತದಂಥ ʼವಸುಧೈವ ಕುಟುಂಬಕಂʼ ಮಂತ್ರವನ್ನು ಸಾರಿದ ಪುರಾತನ ಸಂಸ್ಕೃತಿಯ ದೇಶಕ್ಕೆ ಬುದ್ಧಿವಾದ ಹೇಳುವುದು ಒಂದು ಕೆಟ್ಟ ಜೋಕ್.‌

ಅಲ್ಪಸಂಖ್ಯಾತರಿಗೆ ಇಲ್ಲಿ ರಕ್ಷಣೆಯಿಲ್ಲ ಎಂದು ಹುಯಿಲೆಬ್ಬಿಸುವುದನ್ನೇ ಕಾಯಕ ಮಾಡಿಕೊಂಡ ಕೆಲವರು ಭಾರತದಲ್ಲೂ ಅಮೆರಿಕದಲ್ಲೂ ಇದ್ದಾರೆ. ಇದು ಅವರ ಹೊಟ್ಟೆಪಾಡು ಎಂದು ಸುಮ್ಮನಾಗವಂತೆಯೂ ಇಲ್ಲ. ಯಾಕೆಂದರೆ ಇವರು ಅಂತಾರಾಷ್ಟ್ರೀಯವಾಗಿ ನಮ್ಮ ಮುಖಕ್ಕೆ ಮಸಿ ಬಳಿಯಬಲ್ಲರು. ಇವರನ್ನು ಚೆನ್ನಾಗಿ ತರಾಟೆಗೆ ತೆಗೆದುಕೊಳ್ಳುವುದೇ ಸರಿಯಾದ ದಾರಿ. ಅಮೆರಿಕ ಇಂಥವರನ್ನು ಹತ್ತಿರಕ್ಕೂ ಬಿಟ್ಟುಕೊಳ್ಳಬಾರದು.

ಇದನ್ನೂ ಓದಿ: ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯದ ಕುರಿತು ಅಮೆರಿಕ ಕಳವಳ; ತಿರುಗೇಟು ಕೊಟ್ಟ ಕೇಂದ್ರ ಸರ್ಕಾರ

Continue Reading
Advertisement
70.94 percent voting in Koppal Lok Sabha constituency says Koppal DC Nalin Atul
ಕೊಪ್ಪಳ2 hours ago

Lok Sabha Election 2024: ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಶೇ 70.94ರಷ್ಟು ಮತದಾನ

Rampura PSI Mahesh Hosapete admitted to the hospital Hanagal village road accident injured persons
ಕರ್ನಾಟಕ2 hours ago

Road Accident: ಅಪಘಾತವಾಗಿ ರಕ್ತದ ಮಡುವಿನಲ್ಲಿ ಬಿದ್ದ ಯುವಕರನ್ನು ಆಸ್ಪತ್ರೆಗೆ ಸೇರಿಸಿದ ಪಿಎಸ್‌ಐ

Lok Sabha Election 2024
ಕರ್ನಾಟಕ3 hours ago

Lok Sabha Election 2024: 2ನೇ ಹಂತದಲ್ಲಿ ಶೇ.70.41 ಮತದಾನ; ಕಳೆದ ಬಾರಿಗಿಂತ ಹೆಚ್ಚು, ಚಿಕ್ಕೋಡಿಯಲ್ಲಿ ಗರಿಷ್ಠ

Mayawati
ಪ್ರಮುಖ ಸುದ್ದಿ3 hours ago

Mayawati: ನೇಮಿಸಿದ 5 ತಿಂಗಳಲ್ಲೇ ಸೋದರಳಿಯನನ್ನು ಉತ್ತರಾಧಿಕಾರಿ ಹುದ್ದೆಯಿಂದ ತೆಗೆದ ಮಾಯಾವತಿ!

IPL 2024
ಪ್ರಮುಖ ಸುದ್ದಿ3 hours ago

IPL 2024 : ರಾಜಸ್ಥಾನ್​ ವಿರುದ್ಧ ಡೆಲ್ಲಿಗೆ 20 ರನ್​ ಗೆಲುವು, ಪ್ಲೇಆಫ್ ಕನಸು ಜೀವಂತ

Music Festival
ಬೆಂಗಳೂರು3 hours ago

Music Festival: ಬೆಂಗಳೂರಿನಲ್ಲಿ ಮೇ 12ರಂದು ಸಪ್ತಕ ʼಸಂಗೀತ ಸಂಭ್ರಮʼ

Amanatullah Khan
ದೇಶ4 hours ago

Amanatullah Khan: ಪೆಟ್ರೋಲ್‌ ಬಂಕ್‌ ಸಿಬ್ಬಂದಿ ಮೇಲೆ ಆಪ್‌ ಎಂಎಲ್‌ಎ ಪುತ್ರನಿಂದ ಹಲ್ಲೆ; ಬಿತ್ತು ಕೇಸ್

Yuzvendra Chahal
ಕ್ರಿಕೆಟ್4 hours ago

Yuzvendra Chahal : ಟಿ20 ವಿಕೆಟ್​​ಗಳ ಗಳಿಕೆಯಲ್ಲಿ ನೂತನ ದಾಖಲೆ ಬರೆದ ಸ್ಪಿನ್ನರ್ ಯಜ್ವೇಂದ್ರ ಚಹಲ್​

Bescom Helpline
ಕರ್ನಾಟಕ4 hours ago

BESCOM Helpline: ಮಳೆ ಹಾನಿ; ದೂರು ಸಲ್ಲಿಸಲು ಬೆಸ್ಕಾಂ ಗ್ರಾಹಕರಿಗೆ ಪರ್ಯಾಯ ವಾಟ್ಸ್‌ಆ್ಯಪ್‌, ದೂರವಾಣಿ ಸಂಖ್ಯೆ

Nissan India
ಆಟೋಮೊಬೈಲ್4 hours ago

Nissan India : ಉಚಿತ ಏಸಿ ರಿಪೇರಿ ಮಾಡಿಸಿಕೊಳ್ಳಲು ನಿಸ್ಸಾನ್ ಕಾರು ಮಾಲೀಕರಿಗೆ ಇಲ್ಲಿದೆ ಅವಕಾಶ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Prajwal Revanna Case HD Revanna has severe chest pain Admission in Victoria
ರಾಜಕೀಯ6 hours ago

Prajwal Revanna Case: ಎಚ್.ಡಿ. ರೇವಣ್ಣಗೆ ಹೆಚ್ಚಾದ ಎದೆ ನೋವು; ಸಲೈನ್‌ ಹಾಕಿ ಕಳಿಸಿದ ವೈದ್ಯರು

Karnataka Weather Forecast
ಮಳೆ9 hours ago

Karnataka Weather : ಹಾಸನ, ಚಿಕ್ಕಮಗಳೂರಲ್ಲಿ ಆಲಿಕಲ್ಲು ಸಹಿತ ಭಾರಿ ಮಳೆ; ನಾಳೆ ಬಿರುಗಾಳಿ ಎಚ್ಚರಿಕೆ

Prajwal Revanna Case Government work against Revanna HD Kumaraswamy gives details of the case
ರಾಜಕೀಯ11 hours ago

Prajwal Revanna Case: ರೇವಣ್ಣರಿಗೆ ಖೆಡ್ಡಾ ತೋಡಿದ್ದು ಸರ್ಕಾರ; ಎಲ್ಲೆಲ್ಲಿ ಏನೇನು ಮಾಡಲಾಯಿತೆಂಬ ಇಂಚಿಂಚು ಡಿಟೇಲ್ಸ್‌ ಕೊಟ್ಟ ಎಚ್‌ಡಿಕೆ!

Prajwal Revanna Case 2nd accused in KR Nagar victim abduction case sent to SIT custody Trouble for Revanna
ಕ್ರೈಂ1 day ago

Prajwal Revanna Case: ಕೆ.ಆರ್.‌ ನಗರ ಸಂತ್ರಸ್ತೆ ಕಿಡ್ನ್ಯಾಪ್‌ ಕೇಸ್‌ನ 2ನೇ ಆರೋಪಿ SIT ಕಸ್ಟಡಿಗೆ; ರೇವಣ್ಣಗೆ ಸಂಕಷ್ಟ?

karnataka weather forecast
ಮಳೆ1 day ago

Karnataka Weather : ಬೆಂಗಳೂರು ಸೇರಿ ಹಲವೆಡೆ ಮತ್ತೆ ಅಬ್ಬರಿಸುತ್ತಿರುವ ಮಳೆ; ಇನ್ನೊಂದು ವಾರ ಅಲರ್ಟ್‌

Prajwal Revanna Case DK Shivakumar behind Prajwal video leak Devaraje Gowda demands CBI probe
ಕ್ರೈಂ1 day ago

Prajwal Revanna Case: ಪ್ರಜ್ವಲ್‌ ವಿಡಿಯೊ ಲೀಕ್‌ ಹಿಂದೆ ಇರೋದು ಡಿಕೆಶಿ; ದಾಖಲೆ ತೋರಿಸಿ, ಸಿಬಿಐಗೆ ಕೇಸ್‌ ವಹಿಸಲು ದೇವರಾಜೇಗೌಡ ಆಗ್ರಹ

Dina bhavishya
ಭವಿಷ್ಯ2 days ago

Dina Bhavishya : ಈ ರಾಶಿಯವರಿಗೆ ಇಂದು ಹುಡುಕಿಕೊಂಡು ಬರಲಿವೆ ಹೊಸ ಅವಕಾಶಗಳು

Prajwal Revanna Case HD Revanna sent to judicial custody Shift to Parappana Agrahara
ಕ್ರೈಂ2 days ago

Prajwal Revanna Case: ಎಸ್‌ಐಟಿ ಕಸ್ಟಡಿಗೆ ಮಾಜಿ ಸಚಿವ ಎಚ್‌.ಡಿ. ರೇವಣ್ಣ; ಮತ್ತೆ ತೀವ್ರ ವಿಚಾರಣೆ

Prajwal Revanna Case No evidence against me its a conspiracy says HD Revanna
ಕರ್ನಾಟಕ2 days ago

Prajwal Revanna Case: ನನ್ನ ವಿರುದ್ಧ ಯಾವುದೇ ಸಾಕ್ಷಿಗಳಿಲ್ಲ, ಇದೊಂದು ಷಡ್ಯಂತ್ರ: ಎಚ್‌.ಡಿ. ರೇವಣ್ಣ ಫಸ್ಟ್‌ ರಿಯಾಕ್ಷನ್‌!

Narendra Modi
ದೇಶ2 days ago

Narendra Modi: ರಾಮನಗರಿ ಅಯೋಧ್ಯೆಯಲ್ಲಿ ಮೋದಿ ಭರ್ಜರಿ ರೋಡ್‌ ಶೋ; ಲೈವ್‌ ಇಲ್ಲಿ ವೀಕ್ಷಿಸಿ

ಟ್ರೆಂಡಿಂಗ್‌