ಭಾರತವು (India) 2030ರ ವೇಳೆಗೆ ವಿಶ್ವದಲ್ಲೇ ಮೂರನೇ ಬೃಹತ್ ಆರ್ಥಿಕತೆ ಹೊಂದಿರುವ ದೇಶವಾಗಿ ಹೊರಹೊಮ್ಮಲಿದೆ ಎಂದು ಎಸ್ ಆ್ಯಂಡ್ ಪಿ ಗ್ಲೋಬಲ್ ಮಾರ್ಕೆಟ್ ಇಂಟಲಿಜೆನ್ಸ್ (S&P Global Market Intelligence) ವರದಿ ತಿಳಿಸಿದೆ. ಭಾರತದ ಆರ್ಥಿಕತೆಯು ಜಪಾನ್ ಆರ್ಥಿಕತೆಯನ್ನೇ ಮೀರಿಸಿ ಮೂರನೇ ಸ್ಥಾನಕ್ಕೇರಲಿದೆ. ಸದ್ಯ ಜಪಾನ್ (Japan) ಆರ್ಥಿಕತೆಯ ಮೌಲ್ಯವು 4.2 ಲಕ್ಷ ಕೋಟಿ ಡಾಲರ್ ಇದ್ದರೆ, ಭಾರತದ ಆರ್ಥಿಕತೆಯ ಮೊತ್ತ 3.5 ಲಕ್ಷ ಕೋಟಿ ಡಾಲರ್. ಆದರೆ, 2030ರ ವೇಳೆಗೆ ಭಾರತದ ಆರ್ಥಿಕತೆ ಮೌಲ್ಯವು 7.30 ಲಕ್ಷ ಕೋಟಿ ಡಾಲರ್ಗೆ ಏರಿಕೆಯಾಗಲಿದೆ. ಆ ಮೂಲಕ ಜಪಾನ್ ಆರ್ಥಿಕತೆಯನ್ನೇ ಹಿಂದಿಕ್ಕಿ ಭಾರತವು ಜಗತ್ತಿನೇ ಮೂರನೇ ಬೃಹತ್ ವಿತ್ತೀಯ ರಾಷ್ಟ್ರವಾಗಲಿದೆ ಎಂಬುದು ವರದಿಯ ಸಾರಾಂಶ. ಭಾರತದ ನಿರಂತರ ಬೆಳವಣಿಗೆಯಲ್ಲಿನ ವಿಶ್ರಾಂತ ರಹಿತ ಪಯಣದ ಪರಿಣಾಮವೇ ಇಂಥದೊಂದು ಯಶಸ್ಸು ಕಾಣಲು ಸಾಧ್ಯವಾಗಲಿದೆ. ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರಂತೂ, ಎರಡು ವರ್ಷಗಳಿಂದ ಐದು ಲಕ್ಷ ಕೋಟಿ ಡಾಲರ್ ಆರ್ಥಿಕತೆ ಗುರಿಯ ಕುರಿತು ಹೇಳುತ್ತಲೇ ಬಂದಿದ್ದಾರೆ. ಆ ನಿಟ್ಟಿನಲ್ಲಿ ಕೆಲಸ ಕೂಡ ಮಾಡುತ್ತಿದ್ದಾರೆ(Vistara Editorial).
ಕೊರೊನಾ ತಂದೊಡ್ಡಿದ ಸವಾಲಿನ ಮಧ್ಯೆಯೂ 2023ರಲ್ಲಿ ಭಾರತದ ಆರ್ಥಿಕತೆಯು ಗಣನೀಯವಾಗಿ ಸುಧಾರಣೆಯತ್ತ ಸಾಗುತ್ತಿದೆ. ಭಾರತದ ಜಿಡಿಪಿಯು 2023-24ನೇ ಆರ್ಥಿಕ ವರ್ಷ ಮುಗಿಯುವ ವೇಳೆಗೆ ಶೇ.6.2ರಿಂದ ಶೇ.6.3ಕ್ಕೆ ಬೆಳವಣಿಗೆಯಾಗಲಿದೆ ಎಂದು ಅಂದಾಜಿಸಲಾಗಿದೆ. ಇದೇ ಗತಿಯ ಬೆಳವಣಿಗೆಯಿಂದಾಗಿ ಭಾರತವು ವಿಶ್ವದ ಬಲಾಢ್ಯ ಆರ್ಥಿಕ ರಾಷ್ಟ್ರಗಳ ಸಾಲಿನಲ್ಲಿ ಮುನ್ನಡೆ ಸಾಧಿಸಲಿದೆ. ಭಾರತ ಸರ್ಕಾರ ಕೈಗೊಂಡ ಹಲವು ಆರ್ಥಿಕ ನೀತಿಗಳು ಈ ಬೆಳವಣಿಗೆಗೆ ಕಾರಣವಾಗಿದೆ. 2014ರಲ್ಲಿ ಭಾರತವು ಜಗತ್ತಿನಲ್ಲಿ 10ನೇ ಬೃಹತ್ ಆರ್ಥಿಕತೆ ಹೊಂದಿದ ರಾಷ್ಟ್ರ ಎನಿಸಿತ್ತು. ಈಗ ಜಗತ್ತಿನೇ ಐದನೇ ಬಲಿಷ್ಠ ಆರ್ಥಿಕತೆಯ ರಾಷ್ಟ್ರವಾಗಿದೆ. ಬ್ರಿಟನ್ ಹಾಗೂ ಫ್ರಾನ್ಸ್ ಆರ್ಥಿಕತೆಯನ್ನೂ ಭಾರತ ಹಿಂದಿಕ್ಕಿದೆ. ಜರ್ಮನಿ ಕೂಡ ನಮ್ಮೊಂದಿಗೆ ಜಿದ್ದಾಜಿದ್ದಿಗೆ ಬಿದ್ದಿದೆ ಎಂಬುದನ್ನು ಮರೆಯಬಾರದು.
ಆರ್ಥಿಕತೆಯಲ್ಲಿ ದಾಪುಗಾಲು ಹಾಕುತ್ತಿರುವ ಭಾರತದ ಈ ಯಶಸ್ಸಿನ ಹಿಂದೆ ಎಲ್ಲ ಸರ್ಕಾರಗಳ ಪಾಲಿದೆ. 1990ರ ದಶಕದಲ್ಲಿ ಲೈಸೆನ್ಸ್ ರಾಜ್ಗೆ ಮುಕ್ತಿ ಹಾಡಿ, ಜಾಗತಿಕರಣಕ್ಕೆ ಬಾಗಿಲು ತೆರೆದ ಮೇಲೆ ಭಾರತವು ನಾಗಾಲೋಟದಲ್ಲಿ ಸಾಗುತ್ತಿದೆ. ಇದಕ್ಕೂ ಮೊದಲು, ಭವಿಷ್ಯದ ಭಾರತಕ್ಕೆ ಅಡಿಪಾಯ ಹಾಕಲಾಗಿತ್ತು. ಹಲವು ನೀತಿಗಳು ಜಾರಿ, ಸಂಘ- ಸಂಸ್ಥೆಗಳ ಸ್ಥಾಪನೆ, ಆರ್ಥಿಕ ನೀತಿಗಳ ರಚನೆ ಮತ್ತು ಜಾರಿಯ ಪರಿಣಾಮ ಭಾರತವು ನಿಧಾನವಾಗಿ ಬಡ ರಾಷ್ಟ್ರದಿಂದ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳ ಸಾಲಿಗೆ ಸೇರಿತು. ಈ ಯಶಸ್ಸಿನ ಹಾದಿಯಲ್ಲಿ ಯಾವ ಸರ್ಕಾರದ ಪಾಲನ್ನೂ ನಗಣ್ಯ ಎನ್ನುವಂತಿಲ್ಲ.
ಈ ಸಂಪಾದಕೀಯವನ್ನೂ ಓದಿ: ವಿಸ್ತಾರ ಸಂಪಾದಕೀಯ: ವಾಯು ಮಾಲಿನ್ಯ ನಿಯಂತ್ರಿಸದೇ ಹೋದರೆ ಮಾನವ ಕುಲಕ್ಕೇ ಆಪತ್ತು
ಜಾಗತಿಕರಣಕ್ಕೆ ಮುಕ್ತಗೊಂಡ ಬಳಿಕ ಭಾರತದ ಬೆಳವಣಿಗೆಯ ದಿಕ್ಕೇ ಬದಲಾಯಿತು. ಒಂದು ಹಂತದಲ್ಲಿ ಸಾಲ ಮಾಡಿ ಗೋಧಿ ತರುತ್ತಿದ್ದ ರಾಷ್ಟ್ರ ಇಂದು ಹಲವು ದೇಶಗಳಿಗೆ ನೆರವಿನ ಹಸ್ತ ಚಾಚುವ ಸಾಮರ್ಥ್ಯವನ್ನು ಬೆಳೆಸಿಕೊಂಡಿದೆ. ಕಳೆದ ಒಂದು ದಶಕದಲ್ಲಿ ಪ್ರಗತಿಯ ರಥ ಅತಿವೇಗದಲ್ಲಿ ಸಾಗುತ್ತಿದೆ. 2008ರ ಆರ್ಥಿಕ ಹಿಂಜರಿತಕ್ಕೆ ಜಗತ್ತಿನ ಬಹುತೇಕ ರಾಷ್ಟ್ರಗಳು ಚಿತ್ ಆದರೂ, ಅಂದಿನ ಡಾ.ಮನಮೋಹನ್ ಸಿಂಗ್ ನೇತೃತ್ವದ ಸರ್ಕಾರ ಕೈಗೊಂಡ ನೀತಿಗಳ ಫಲವಾಗಿ ಭಾರತ ಸದೃಢವಾಗಿ ನೆಲೆ ನಿಂತಿತ್ತು. ಬಳಿಕ, ಉದ್ಭವಿಸಿದ ಕೊರೊನಾ ಸಾಂಕ್ರಾಮಿಕ ಪರಿಸ್ಥಿತಿಯಂತೂ ಇಡೀ ಜಗತ್ತಿನ್ನೇ ಹಿಂಡಿ ಹಿಪ್ಪಿ ಮಾಡಿತು. ಆರ್ಥಿಕತೆ ಮಾತ್ರವಲ್ಲ, ಎಲ್ಲ ಕ್ಷೇತ್ರಗಳಲ್ಲೂ ಮುಂದಿದ್ದ ಅಮೆರಿಕ, ಜರ್ಮನಿ, ಇಂಗ್ಲೆಂಡ್, ಚೀನಾದಂಥ ರಾಷ್ಟ್ರಗಳೇ ಭಾರೀ ಹೊಡೆತ ತಿಂದವು. ಆದರೆ, ಭಾರತ ಮಾತ್ರ ಕೊಂಚವು ಅಳುಕದೇ ಪರಿಸ್ಥಿತಿಯನ್ನು ಎದುರಿಸಿ, ಯಶಸ್ವಿಯಾಯಿತು. ಹಾಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಕೈಗೊಂಡ ಆರ್ಥಿಕ ನೀತಿಗಳು ಈ ಯಶಸ್ಸಿಗೆ ಕಾರಣ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಯಾವುದೇ ಒಂದು ದೇಶ ತನಗೆ ದೊರೆತ ಅವಕಾಶಗಳನ್ನು ಪ್ರಾಮಾಣಿಕವಾಗಿ ಬಳಸಿಕೊಂಡು, ಜನ ಹಿತ ನೀತಿಗಳ ಜತೆಗೆ ಸಮಗ್ರ ಅಭಿವೃದ್ಧಿಗೆ ಮುಂದಾದರೆ, ಯಾವ ಸಾಧನೆಯನ್ನಾದರೂ ಮಾಡಬಹುದು ಎಂಬುದಕ್ಕೆ ಭಾರತ ಇಂದು ಉದಾಹರಣೆಯಾಗಿ ನಿಂತಿದೆ. ನಮ್ಮ ಗುರಿ ಕೇವಲ ಮೂರನೇ ಸ್ಥಾನಕ್ಕೆ ಸೀಮಿತವಾಗದೇ, ಜಗತ್ತಿನ ನಂಬರ್ 1 ರಾಷ್ಟ್ರವಾಗುವತ್ತ ಇರಲಿ. ಈ ನಿಟ್ಟಿನಲ್ಲಿ ಸರ್ಕಾರಗಳು ಕೈಗೊಳ್ಳುವ ಪ್ರಯತ್ನಗಳ ಜತೆಗೆ ವೈಯಕ್ತಿಕ ನೆಲೆಯಲ್ಲಿ ನಮ್ಮಿಂದಾಗುವ ಕಾರ್ಯವನ್ನು ಚಾಚೂ ತಪ್ಪದೇ ಮಾಡೋಣ.