ಇತ್ತೀಚೆಗೆ ಸೈಬರ್ ಕ್ರೈಮ್‌ಗಳು ನಾನಾ ರೂಪವನ್ನು ತಾಳುತ್ತಿವೆ. ಬೆಂಗಳೂರಿನಲ್ಲಿ (Bengaluru) ವಕೀಲೆಯೊಬ್ಬರು ಇಂಥ ಸೈಬರ್ ವಂಚನೆಗೆ ತುತ್ತಾಗಿ ಬರೋಬ್ಬರಿ 15 ಲಕ್ಷ ರೂ. ಕಳೆದುಕೊಂಡಿದ್ದಾರೆ. ಕೊರಿಯರ್ ಸೇವೆಗಳಿಗೆ ಹೆಸರಾಗಿರುವ ಫೆಡ್‌ಎಕ್ಸ್ (FedEx) ಸಂಸ್ಥೆ ಹಾಗೂ ಸಿಬಿಐ ಅಧಿಕಾರಿಗಳ ಹೆಸರಿನಲ್ಲಿ ಈ ವಂಚನೆ ನಡೆದಿದೆ. ತಾನು ಮುಂಬೈ ಪೊಲೀಸ್ ಇಲಾಖೆ ಅಧಿಕಾರಿ ಎಂದು, ನಿಮ್ಮ ಹೆಸರಿನಲ್ಲಿ ಥಾಯ್ಲೆಂಡ್‌ನಿಂದ ಫೆಡ್‌ಎಕ್ಸ್ ಮೂಲಕ 140 ಗ್ರಾಂ ಡ್ರಗ್ಸ್ (ಮಾದಕವಸ್ತು) ಕೊರಿಯರ್ ಮಾಡಲಾಗಿದೆ ಎಂದು ವಕೀಲೆಗೆ ಕರೆ ಮಾಡಿ ಬೆದರಿಸಿ, ನಿಮ್ಮ ವಿರುದ್ಧ ಮಾನವ ಕಳ್ಳಸಾಗಣೆ, ಹವಾಲಾ ದಂಧೆ ಹಾಗೂ ಡ್ರಗ್ಸ್ ದಂಧೆಯ ಪ್ರಕರಣಗಳು ದಾಖಲಾಗಿವೆ ಎಂದು ಆತಂಕ ಮೂಡಿಸಲಾಗಿದೆ. ನಂತರ ಈ ಕೇಸ್‌ನಿಂದ ಪಾರುಮಾಡಲು ಡ್ರಗ್ಸ್ ಟೆಸ್ಟ್ ಎಂಬ ಹೆಸರಿನಲ್ಲಿ ಮಹಿಳೆಯು ಬೆತ್ತಲೆಯಾಗಿ ವೆಬ್ ಕ್ಯಾಮ್ ಎದುರು ನಿಲ್ಲುವಂತೆ ಮಾಡಿ, ಅದನ್ನು ರೆಕಾರ್ಡ್ ಮಾಡಿಕೊಂಡು ಬ್ಲ್ಯಾಕ್‌ಮೇಲ್ ಮಾಡಿ ಲಕ್ಷಾಂತರ ಹಣವನ್ನು ಸುಲಿಗೆ ಮಾಡಿದ್ದಾರೆ.
ದೇಶದಲ್ಲಿ ಆನ್‌ಲೈನ್ ವಂಚನೆ, ಸೈಬರ್ ಕ್ರೈಂ (Cyber Crime) ಬಗ್ಗೆ ಎಷ್ಟೇ ಜಾಗೃತಿ ಮಾಡಿಸಿದರು ಕೂಡ ಸೈಬರ್ ವಂಚನೆ ಪ್ರಕರಣಗಳು ಜಾಸ್ತಿಯಾಗುತ್ತಲೇ ಇವೆ. ಅದರಲ್ಲೂ, ಶಿಕ್ಷಣ ಪಡೆದವರು, ಪದವೀಧರರು, ಉದ್ಯೋಗಿಗಳೇ ಇಂತಹ ವಂಚನೆಗಳಿಗೆ ಬಲಿಯಾಗುತ್ತಿರುವುದು ಆತಂಕ ಹೆಚ್ಚಿಸಿದೆ. ವಕೀಲರು, ಪೊಲೀಸರಂಥ, ಜನಸಾಮಾನ್ಯರಿಗೆ ಇಂಥ ಅಪರಾಧಗಳಿಂದ ದೂರವಿರಬೇಕಾದ ಪಾಠ ಹೇಳಬೇಕಾದವರೇ ಇಂಥ ವಂಚನೆಗಳಿಗೆ ತುತ್ತಾಗುತ್ತಾರೆ ಎಂದರೆ, ಚೋರರು ಹೆಣೆಯುವ ಬಲೆ ಎಷ್ಟು ಗಟ್ಟಿಯಾಗಿರುತ್ತದೆ ಎಂದು ನಾವು ಊಹಿಸಬಹುದು. ಇಂದು ಆನ್‌ಲೈನ್ ವಂಚನೆಗಳಿಗೆ ಹಲವು ಬಗೆಯ ಸ್ವರೂಪ ಬಂದಿದೆ. ಕರೆ ಮಾಡಿ ಕ್ರೆಡಿಟ್- ಡೆಬಿಟ್ ಕಾರ್ಡ್‌ಗಳ ಪಾಸ್‌ವರ್ಡ್ ಕೇಳುತ್ತಾರೆ; ಒಟಿಪಿ ಕೇಳುತ್ತಾರೆ; ಇದು ಸ್ವಲ್ಪ ಹಳೆಯ ತಂತ್ರ. ಆದರೆ ಈಗಲೂ ಇದಕ್ಕೆ ಮೋಸ ಹೋಗುವವರು ಇದ್ದಾರೆ. ಅಂದರೆ ಸೈಬರ್ ಸುರಕ್ಷತೆಯಲ್ಲಿ ನಾವು ಮೂಲಭೂತ ಶಿಕ್ಷಣವನ್ನೇ ಪಡೆದಿಲ್ಲ ಎಂದರ್ಥ. ಹಾಗಿದ್ದ ಮೇಲೆ, ವಂಚಕರು ಹೆಣೆಯು ಅತ್ಯಾಧುನಿಕ ತಂತ್ರಗಳನ್ನು ಎದುರಿಸಲು ಮೂಲಶಿಕ್ಷಣದ ಜೊತೆಗೆ ಜಾಣ್ಮೆ, ಎಚ್ಚರಿಕೆ, ವಿವೇಕ ಎಲ್ಲವೂ ಅಗತ್ಯವಾಗಿವೆ.
ರಾನ್ಸಮ್‌ವೇರ್ ದಾಳಿ, ಆನ್‌ಲೈನ್ ಸಾಲದ ಆ್ಯಪ್ ವಂಚನೆ, ಸಿಮ್-ಸ್ವಾಪ್ ಅಪರಾಧಗಳು, ಆಧಾರ್ ಬಳಸಿಕೊಂಡು ನಡೆಯುತ್ತಿರುವ ಅಪರಾಧಗಳು, ಪ್ಯಾನ್ ಬಳಸಿಕೊಂಡು ನಡೆಯುವ ವಂಚನೆಗಳು, ಸೆಕ್ಸ್‌ಟಾರ್ಶನ್, ಪಿಗ್ ಬುಚ್ಚರಿಂಗ್, ಆನ್‌ಲೈನ್ ಆಟಗಳ ಮೂಲಕ ಮೋಸ, ಸೋಗು ಹಾಕುವಿಕೆ, ಗುರುತಿನ ಕಳ್ಳತನ (identity theft), ಕ್ಯೂಆರ್ ಕೋಡ್ ಅಪರಾಧಗಳು, ಮನೆಯಿಂದಲೇ ಕೆಲಸ, ಆನ್ಲೈನ್ ಕೆಲಸದ ಆಮಿಷದ ಮೂಲಕ ವಂಚನೆ, ಗ್ರಾಹಕ ಸಹಾಯವಾಣಿ, ಕೊರಿಯರ್ ಸಂಬಂಧಿತ ಅಪರಾಧಗಳು, ಮಹಿಳೆಯರು, ಹುಡುಗಿಯರು ಮತ್ತು ಮಕ್ಕಳನ್ನು ಗುರಿಯಾಗಿಸಿ ನಡೆಯುವ ಕ್ರೈಮ್‌ಗಳು, ಡೀಪ್‌ಫೇಕ್, ಕ್ರಿಪ್ಟೋಕರೆನ್ಸಿ ಅಥವಾ ಬಿಟ್‌ಕಾಯಿನ್ ವಂಚನೆಗಳು ಮುಂತಾದ ವೈವಿಧ್ಯಮಯ ಅಪರಾಧಗಳು ಈ ಲೋಕದಲ್ಲಿವೆ. ನಮ್ಮ ತಿಳುವಳಿಕೆ, ಅನುಭವವನ್ನು ಮೀರಿ ಬೆಳೆಯುತ್ತಿರುವ ತಂತ್ರಜ್ಞಾನ ಕ್ಷೇತ್ರ ಮತ್ತು ಅದಕ್ಕನುಗುಣವಾಗಿ ರೂಪುಗೊಳ್ಳುವ ಕ್ರಿಮಿನಲ್‌ಗಳ ಕುತಂತ್ರಗಳು ಹೊಸ ಬಗೆಯ ಸವಾಲುಗಳನ್ನು ಒಡ್ಡುತ್ತಿರುತ್ತದೆ.
ಮುಖ್ಯವಾಗಿ ಮಾಡಬೇಕಾದ್ದೇನೆಂದರೆ, ಸೈಬರ್ ವಂಚನೆಗೆ ತುತ್ತಾಗುತ್ತಿದ್ದೇನೆ ಅಥವಾ ಆಗಿದ್ದೇನೆ ಎಂಬ ಅನುಮಾನ ಬಂದ ಕೂಡಲೇ ತಡಮಾಡದೇ 1930 ಸೈಬರ್ ಸಹಾಯವಾಣಿಗೆ ಕರೆ ಮಾಡುವುದು ಅಥವಾ https://cybercrime.gov.in/ ನಲ್ಲಿ ದೂರು ಸಲ್ಲಿಸುವುದು. ಮೋಸದಿಂದ ಕಳೆದುಕೊಂಡ ಹಣವನ್ನು ಫ್ರೀಜ್ ಮಾಡಲು ಸಂಬಂಧಿಸಿದ ಬ್ಯಾಂಕ್‌ಗೆ ಕರೆ ಮಾಡಿ ತಿಳಿಸುವುದು. ಆಧಾರ್ ಕಾರ್ಡ್‌ನ್ನು ಲಾಕ್ ಮಾಡುವುದು. ನಿಮ್ಮ ಬ್ಯಾಂಕ್ ಖಾತೆಗಳ ಪಾಸ್‌ವರ್ಡ್/ಪಿನ್‌ಗಳನ್ನು ಬದಲಾಯಿಸುವುದು. ನಿಮ್ಮ ಮೊಬೈಲ್ ಅಥವಾ ಲ್ಯಾಪ್‌ಟಾಪ್‌ಗೆ ಏನಾದರೂ ಮಾಲ್‌ವೇರ್ ಅಥವಾ ವೈರಸ್ ದಾಳಿಯ ಅನುಮಾನವಿದ್ದರೆ ಫಾರ್ಮ್ಯಾಟ್ ಮಾಡುವುದು. ಆಮಿಷಗಳಿಗೆ ಬಲಿಯಾಗಬಾರದು. ಪ್ರತ್ಯಕ್ಷ ಕಂಡರೂ ಪರಾಂಬರಿಸಿ ನೋಡು ಎಂಬ ಗಾದೆ ಮಾತನ್ನು ಸದಾ ನೆನಪಿನಲ್ಲಿಟ್ಟುಕೊಂಡಿದ್ದರೆ ಅಂತರ್ಜಾಲದಲ್ಲಿ ಎದುರಾಗುವ ವಿವಿಧ ಆಮಿಷಗಳಿಗೆ ಬಲಿಯಾಗುವುದು ತಪ್ಪುತ್ತದೆ. ಆನ್‌ಲೈನ್ ಬೆದರಿಕೆಗಳಿಗೆ ಜಗ್ಗದೆ ಸೈಬರ್ ಪೊಲೀಸರ ಸಹಾಯ ಪಡೆಯುವುದು ಎಷ್ಟೋ ಸುರಕ್ಷಿತ.
ಇದನ್ನೂ ಓದಿ: FedEx Scam: ಬೆಂಗಳೂರು ವಕೀಲೆಗೆ 15 ಲಕ್ಷ ರೂ. ವಂಚನೆ; ವೆಬ್‌ಕ್ಯಾಮ್ ಎದುರು ಬೆತ್ತಲೆ ನಿಂತಿದ್ದೇಕೆ?