ವಿಸ್ತಾರ ಸಂಪಾದಕೀಯ: ಸೈಬರ್‌ ಸುರಕ್ಷತೆಗೆ ಆದ್ಯತೆಯಿರಲಿ - Vistara News

ಸಂಪಾದಕೀಯ

ವಿಸ್ತಾರ ಸಂಪಾದಕೀಯ: ಸೈಬರ್‌ ಸುರಕ್ಷತೆಗೆ ಆದ್ಯತೆಯಿರಲಿ

ದೇಶದಲ್ಲಿ ಆನ್‌ಲೈನ್‌ ವಂಚನೆ, ಸೈಬರ್‌ ಕ್ರೈಂ (Cyber Crime) ಬಗ್ಗೆ ಎಷ್ಟೇ ಜಾಗೃತಿ ಮಾಡಿಸಿದರು ಕೂಡ ಸೈಬರ್‌ ವಂಚನೆ ಪ್ರಕರಣಗಳು ಜಾಸ್ತಿಯಾಗುತ್ತಲೇ ಇವೆ. ಅದರಲ್ಲೂ, ಶಿಕ್ಷಣ ಪಡೆದವರು, ಪದವೀಧರರು, ಉದ್ಯೋಗಿಗಳೇ ಇಂತಹ ವಂಚನೆಗಳಿಗೆ ಬಲಿಯಾಗುತ್ತಿರುವುದು ಆತಂಕ ಹೆಚ್ಚಿಸಿದೆ.

VISTARANEWS.COM


on

Cyber
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಇತ್ತೀಚೆಗೆ ಸೈಬರ್‌ ಕ್ರೈಮ್‌ಗಳು ನಾನಾ ರೂಪವನ್ನು ತಾಳುತ್ತಿವೆ. ಬೆಂಗಳೂರಿನಲ್ಲಿ (Bengaluru) ವಕೀಲೆಯೊಬ್ಬರು ಇಂಥ ಸೈಬರ್‌ ವಂಚನೆಗೆ ತುತ್ತಾಗಿ ಬರೋಬ್ಬರಿ 15 ಲಕ್ಷ ರೂ. ಕಳೆದುಕೊಂಡಿದ್ದಾರೆ. ಕೊರಿಯರ್‌ ಸೇವೆಗಳಿಗೆ ಹೆಸರಾಗಿರುವ ಫೆಡ್‌ಎಕ್ಸ್ (FedEx) ಸಂಸ್ಥೆ ಹಾಗೂ ಸಿಬಿಐ ಅಧಿಕಾರಿಗಳ ಹೆಸರಿನಲ್ಲಿ ಈ ವಂಚನೆ ನಡೆದಿದೆ. ತಾನು ಮುಂಬೈ ಪೊಲೀಸ್‌ ಇಲಾಖೆ ಅಧಿಕಾರಿ ಎಂದು, ನಿಮ್ಮ ಹೆಸರಿನಲ್ಲಿ ಥಾಯ್ಲೆಂಡ್‌ನಿಂದ ಫೆಡ್‌ಎಕ್ಸ್‌ ಮೂಲಕ 140 ಗ್ರಾಂ ಡ್ರಗ್ಸ್‌ (ಮಾದಕವಸ್ತು) ಕೊರಿಯರ್‌ ಮಾಡಲಾಗಿದೆ ಎಂದು ವಕೀಲೆಗೆ ಕರೆ ಮಾಡಿ ಬೆದರಿಸಿ, ನಿಮ್ಮ ವಿರುದ್ಧ ಮಾನವ ಕಳ್ಳಸಾಗಣೆ, ಹವಾಲಾ ದಂಧೆ ಹಾಗೂ ಡ್ರಗ್ಸ್‌ ದಂಧೆಯ ಪ್ರಕರಣಗಳು ದಾಖಲಾಗಿವೆ ಎಂದು ಆತಂಕ ಮೂಡಿಸಲಾಗಿದೆ. ನಂತರ ಈ ಕೇಸ್‌ನಿಂದ ಪಾರುಮಾಡಲು ಡ್ರಗ್ಸ್‌ ಟೆಸ್ಟ್‌ ಎಂಬ ಹೆಸರಿನಲ್ಲಿ ಮಹಿಳೆಯು ಬೆತ್ತಲೆಯಾಗಿ ವೆಬ್‌ ಕ್ಯಾಮ್‌ ಎದುರು ನಿಲ್ಲುವಂತೆ ಮಾಡಿ, ಅದನ್ನು ರೆಕಾರ್ಡ್‌ ಮಾಡಿಕೊಂಡು ಬ್ಲ್ಯಾಕ್‌ಮೇಲ್‌ ಮಾಡಿ ಲಕ್ಷಾಂತರ ಹಣವನ್ನು ಸುಲಿಗೆ ಮಾಡಿದ್ದಾರೆ.

ದೇಶದಲ್ಲಿ ಆನ್‌ಲೈನ್‌ ವಂಚನೆ, ಸೈಬರ್‌ ಕ್ರೈಂ (Cyber Crime) ಬಗ್ಗೆ ಎಷ್ಟೇ ಜಾಗೃತಿ ಮಾಡಿಸಿದರು ಕೂಡ ಸೈಬರ್‌ ವಂಚನೆ ಪ್ರಕರಣಗಳು ಜಾಸ್ತಿಯಾಗುತ್ತಲೇ ಇವೆ. ಅದರಲ್ಲೂ, ಶಿಕ್ಷಣ ಪಡೆದವರು, ಪದವೀಧರರು, ಉದ್ಯೋಗಿಗಳೇ ಇಂತಹ ವಂಚನೆಗಳಿಗೆ ಬಲಿಯಾಗುತ್ತಿರುವುದು ಆತಂಕ ಹೆಚ್ಚಿಸಿದೆ. ವಕೀಲರು, ಪೊಲೀಸರಂಥ, ಜನಸಾಮಾನ್ಯರಿಗೆ ಇಂಥ ಅಪರಾಧಗಳಿಂದ ದೂರವಿರಬೇಕಾದ ಪಾಠ ಹೇಳಬೇಕಾದವರೇ ಇಂಥ ವಂಚನೆಗಳಿಗೆ ತುತ್ತಾಗುತ್ತಾರೆ ಎಂದರೆ, ಚೋರರು ಹೆಣೆಯುವ ಬಲೆ ಎಷ್ಟು ಗಟ್ಟಿಯಾಗಿರುತ್ತದೆ ಎಂದು ನಾವು ಊಹಿಸಬಹುದು. ಇಂದು ಆನ್‌ಲೈನ್‌ ವಂಚನೆಗಳಿಗೆ ಹಲವು ಬಗೆಯ ಸ್ವರೂಪ ಬಂದಿದೆ. ಕರೆ ಮಾಡಿ ಕ್ರೆಡಿಟ್‌- ಡೆಬಿಟ್‌ ಕಾರ್ಡ್‌ಗಳ ಪಾಸ್‌ವರ್ಡ್‌ ಕೇಳುತ್ತಾರೆ; ಒಟಿಪಿ ಕೇಳುತ್ತಾರೆ; ಇದು ಸ್ವಲ್ಪ ಹಳೆಯ ತಂತ್ರ. ಆದರೆ ಈಗಲೂ ಇದಕ್ಕೆ ಮೋಸ ಹೋಗುವವರು ಇದ್ದಾರೆ. ಅಂದರೆ ಸೈಬರ್‌ ಸುರಕ್ಷತೆಯಲ್ಲಿ ನಾವು ಮೂಲಭೂತ ಶಿಕ್ಷಣವನ್ನೇ ಪಡೆದಿಲ್ಲ ಎಂದರ್ಥ. ಹಾಗಿದ್ದ ಮೇಲೆ, ವಂಚಕರು ಹೆಣೆಯು ಅತ್ಯಾಧುನಿಕ ತಂತ್ರಗಳನ್ನು ಎದುರಿಸಲು ಮೂಲಶಿಕ್ಷಣದ ಜೊತೆಗೆ ಜಾಣ್ಮೆ, ಎಚ್ಚರಿಕೆ, ವಿವೇಕ ಎಲ್ಲವೂ ಅಗತ್ಯವಾಗಿವೆ.

ರಾನ್ಸಮ್‌ವೇರ್ ದಾಳಿ, ಆನ್‌ಲೈನ್‌ ಸಾಲದ ಆ್ಯಪ್‌ ವಂಚನೆ, ಸಿಮ್-ಸ್ವಾಪ್‌ ಅಪರಾಧಗಳು, ಆಧಾರ್ ಬಳಸಿಕೊಂಡು ನಡೆಯುತ್ತಿರುವ ಅಪರಾಧಗಳು, ಪ್ಯಾನ್ ಬಳಸಿಕೊಂಡು ನಡೆಯುವ ವಂಚನೆಗಳು, ಸೆಕ್ಸ್‌ಟಾರ್ಶನ್‌, ಪಿಗ್‌ ಬುಚ್ಚರಿಂಗ್‌, ಆನ್‌ಲೈನ್‌ ಆಟಗಳ ಮೂಲಕ ಮೋಸ, ಸೋಗು ಹಾಕುವಿಕೆ, ಗುರುತಿನ ಕಳ್ಳತನ (identity theft), ಕ್ಯೂಆರ್ ಕೋಡ್ ಅಪರಾಧಗಳು, ಮನೆಯಿಂದಲೇ ಕೆಲಸ, ಆನ್ಲೈನ್ ಕೆಲಸದ ಆಮಿಷದ ಮೂಲಕ ವಂಚನೆ, ಗ್ರಾಹಕ ಸಹಾಯವಾಣಿ, ಕೊರಿಯರ್ ಸಂಬಂಧಿತ ಅಪರಾಧಗಳು, ಮಹಿಳೆಯರು, ಹುಡುಗಿಯರು ಮತ್ತು ಮಕ್ಕಳನ್ನು ಗುರಿಯಾಗಿಸಿ ನಡೆಯುವ ಕ್ರೈಮ್‌ಗಳು, ಡೀಪ್‌ಫೇಕ್, ಕ್ರಿಪ್ಟೋಕರೆನ್ಸಿ ಅಥವಾ ಬಿಟ್‌ಕಾಯಿನ್ ವಂಚನೆಗಳು ಮುಂತಾದ ವೈವಿಧ್ಯಮಯ ಅಪರಾಧಗಳು ಈ ಲೋಕದಲ್ಲಿವೆ. ನಮ್ಮ ತಿಳುವಳಿಕೆ, ಅನುಭವವನ್ನು ಮೀರಿ ಬೆಳೆಯುತ್ತಿರುವ ತಂತ್ರಜ್ಞಾನ ಕ್ಷೇತ್ರ ಮತ್ತು ಅದಕ್ಕನುಗುಣವಾಗಿ ರೂಪುಗೊಳ್ಳುವ ಕ್ರಿಮಿನಲ್‌ಗಳ ಕುತಂತ್ರಗಳು ಹೊಸ ಬಗೆಯ ಸವಾಲುಗಳನ್ನು ಒಡ್ಡುತ್ತಿರುತ್ತದೆ.

ಮುಖ್ಯವಾಗಿ ಮಾಡಬೇಕಾದ್ದೇನೆಂದರೆ, ಸೈಬರ್‌ ವಂಚನೆಗೆ ತುತ್ತಾಗುತ್ತಿದ್ದೇನೆ ಅಥವಾ ಆಗಿದ್ದೇನೆ ಎಂಬ ಅನುಮಾನ ಬಂದ ಕೂಡಲೇ ತಡಮಾಡದೇ 1930 ಸೈಬರ್ ಸಹಾಯವಾಣಿಗೆ ಕರೆ ಮಾಡುವುದು ಅಥವಾ https://cybercrime.gov.in/ ನಲ್ಲಿ ದೂರು ಸಲ್ಲಿಸುವುದು. ಮೋಸದಿಂದ ಕಳೆದುಕೊಂಡ ಹಣವನ್ನು ಫ್ರೀಜ್‌ ಮಾಡಲು ಸಂಬಂಧಿಸಿದ ಬ್ಯಾಂಕ್‌ಗೆ ಕರೆ ಮಾಡಿ ತಿಳಿಸುವುದು. ಆಧಾರ್ ಕಾರ್ಡ್‌ನ್ನು ಲಾಕ್‌ ಮಾಡುವುದು. ನಿಮ್ಮ ಬ್ಯಾಂಕ್‌ ಖಾತೆಗಳ ಪಾಸ್‌ವರ್ಡ್/ಪಿನ್‌ಗಳನ್ನು ಬದಲಾಯಿಸುವುದು. ನಿಮ್ಮ ಮೊಬೈಲ್‌ ಅಥವಾ ಲ್ಯಾಪ್‌ಟಾಪ್‌ಗೆ ಏನಾದರೂ ಮಾಲ್‌ವೇರ್ ಅಥವಾ ವೈರಸ್‌ ದಾಳಿಯ ಅನುಮಾನವಿದ್ದರೆ ಫಾರ್ಮ್ಯಾಟ್‌ ಮಾಡುವುದು. ಆಮಿಷಗಳಿಗೆ ಬಲಿಯಾಗಬಾರದು. ಪ್ರತ್ಯಕ್ಷ ಕಂಡರೂ ಪರಾಂಬರಿಸಿ ನೋಡು ಎಂಬ ಗಾದೆ ಮಾತನ್ನು ಸದಾ ನೆನಪಿನಲ್ಲಿಟ್ಟುಕೊಂಡಿದ್ದರೆ ಅಂತರ್ಜಾಲದಲ್ಲಿ ಎದುರಾಗುವ ವಿವಿಧ ಆಮಿಷಗಳಿಗೆ ಬಲಿಯಾಗುವುದು ತಪ್ಪುತ್ತದೆ. ಆನ್‌ಲೈನ್‌ ಬೆದರಿಕೆಗಳಿಗೆ ಜಗ್ಗದೆ ಸೈಬರ್‌ ಪೊಲೀಸರ ಸಹಾಯ ಪಡೆಯುವುದು ಎಷ್ಟೋ ಸುರಕ್ಷಿತ.

ಇದನ್ನೂ ಓದಿ: FedEx Scam: ಬೆಂಗಳೂರು ವಕೀಲೆಗೆ 15 ಲಕ್ಷ ರೂ. ವಂಚನೆ; ವೆಬ್‌ಕ್ಯಾಮ್‌ ಎದುರು ಬೆತ್ತಲೆ ನಿಂತಿದ್ದೇಕೆ?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

ವಿಸ್ತಾರ ಸಂಪಾದಕೀಯ: ಕೋವಿಶೀಲ್ಡ್‌ ಲಸಿಕೆಯ ಅಡ್ಡ ಪರಿಣಾಮ ಆತಂಕಕಾರಿ

ಕೋವಿಡ್‌ ನಂತರದ ದಿನಗಳಲ್ಲಿ ಯುವಜನರಲ್ಲಿಯೂ ವಿವರಿಸಲಾಗದ ತೀವ್ರ ಅಸ್ವಸ್ಥತೆ, ಹೃದಯಸ್ತಂಭನ ಮುಂತಾದವುಗಳು ಕಂಡುಬಂದಿವೆ. ಭಾರತದಲ್ಲಿಯೂ ಹಲವಾರು ಪ್ರಕರಣಗಳು ನಡೆದಿದ್ದು, ಕೋವಿಡ್‌ ಹಾಗೂ ಅದರ ಲಸಿಕೆಯ ಬಗ್ಗೆ ಅನುಮಾನ ಮೂಡಿಸಿದ್ದವು. ಕಳೆದ ವರ್ಷ ಕೇಂದ್ರ ಸರ್ಕಾರ, “ಕೊರೊನಾ ವೇಳೆ ಸಾವು ಗೆದ್ದು ಬಂದವರು ಜಾಸ್ತಿ ಕೆಲಸ ಮಾಡಬಾರದು” ಎಂದು ಸೂಚಿಸಿತ್ತು.

VISTARANEWS.COM


on

Covishield Vaccine
Koo

ಕೊರೊನಾ ಸೋಂಕು (coronavirus, Covid 19) ಎದುರಿಸಲು ನಾವು ನೀವೆಲ್ಲ ತೆಗೆದುಕೊಂಡ ಕೋವಿಶೀಲ್ಡ್‌ ಲಸಿಕೆ (Covishield Vaccine) ಅಡ್ಡ ಪರಿಣಾಮವನ್ನು (Side effects) ಹೊಂದಿದೆ ಎಂದು ಸ್ವತಃ ಅದನ್ನು ತಯಾರಿಸಿದ ಕಂಪನಿಯೇ ಇದೀಗ ಒಪ್ಪಿಕೊಂಡಿದೆ. ಇದರೊಂದಿಗೆ, ಕೊರೊನಾ ನಂತರದ ದಿನಗಳ ಅಸ್ವಸ್ಥತೆ, ಹೃದಯಾಘಾತಗಳ ಬಗ್ಗೆ ಮೂಡಿದ್ದ ಆತಂಕಕ್ಕೆ ಇನ್ನಷ್ಟು ಆಧಾರ ದೊರೆತಿದೆ. ಬ್ರಿಟಿಷ್ ಫಾರ್ಮಾ ದೈತ್ಯ ಅಸ್ಟ್ರಾಜೆನೆಕಾ (AstraZeneca) ತನ್ನ ಕೋವಿಡ್ ಲಸಿಕೆ ಕೋವಿಶೀಲ್ಡ್‌ ಅಪರೂಪವಾಗಿ ಅಡ್ಡ ಪರಿಣಾಮವನ್ನು ಉಂಟುಮಾಡಬಹುದು ಎಂದು ನ್ಯಾಯಾಲಯದಲ್ಲಿ ಒಪ್ಪಿಕೊಂಡಿದೆ. ರಕ್ತ ಹೆಪ್ಪುಗಟ್ಟುವಿಕೆ ಮತ್ತು ರಕ್ತದಲ್ಲಿ ಪ್ಲೇಟ್‌ಲೆಟ್ ಕಡಿಮೆಯಾಗುವ ಪರಿಸ್ಥಿತಿಯನ್ನು ಉಂಟುಮಾಡಬಹುದು ಎಂದು ಲಸಿಕೆ ತಯಾರಕರು ಹೇಳಿದ್ದಾರೆ. ಆದರೆ ಇದು ಅಪರೂಪದ ಸಂದರ್ಭಗಳಲ್ಲಿ ಆಗಬಹುದು ಎಂದಿದ್ದಾರೆ.

ಸಾಂಕ್ರಾಮಿಕ ಸಮಯದಲ್ಲಿ ಅಸ್ಟ್ರಾಜೆನೆಕಾ ಮತ್ತು ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದಿಂದ ಅಭಿವೃದ್ಧಿಪಡಿಸಲಾದ ಕೋವಿಶೀಲ್ಡ್ ಅನ್ನು ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಉತ್ಪಾದಿಸಿತ್ತು. ಭಾರತದಲ್ಲಿ ವ್ಯಾಪಕವಾಗಿ ಬಳಕೆಯಾದ ಲಸಿಕೆ ಇದೇ ಆಗಿದೆ. ಅಸ್ಟ್ರಾಜೆನೆಕಾ ಯುಕೆಯಲ್ಲಿ ತನ್ನ ಲಸಿಕೆಯು ಹಲವಾರು ಪ್ರಕರಣಗಳಲ್ಲಿ ಸಾವುಗಳು ಮತ್ತು ತೀವ್ರ ಅಸ್ವಸ್ಥತೆಗೆ ಕಾರಣವಾಯಿತು ಎಂಬ ಆರೋಪದ ಮೇಲೆ ಮೊಕದ್ದಮೆಯನ್ನು ಎದುರಿಸುತ್ತಿದೆ. 51 ಪ್ರಕರಣಗಳಲ್ಲಿ ಸಂತ್ರಸ್ತರು ಲಕ್ಷಗಟ್ಟಲೆ ಪೌಂಡ್‌ ನಷ್ಟ ಪರಿಹಾರ ಬಯಸಿದ್ದಾರೆ. ಅಸ್ಟ್ರಾಜೆನೆಕಾ ಒಪ್ಪಿಕೊಂಡಿರುವ ಆರೋಗ್ಯ ಸಮಸ್ಯೆಯ ಹೆಸರು ಥ್ರಂಬೋಸಿಸ್ ವಿಥ್ ಥ್ರಂಬೋಸೈಟೋಪೆನಿಯಾ ಸಿಂಡ್ರೋಮ್ (Thrombosis with Thrombocytopenia Syndrome– TTS). ಇದರಲ್ಲಿ ದೇಹದಲ್ಲಿನ ಅಸಾಮಾನ್ಯ ಸ್ಥಳಗಳಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಉಂಟಾಗುತ್ತದೆ. ರಕ್ತದಲ್ಲಿನ ಪ್ಲೇಟ್‌ಲೆಟ್‌ಗಳ ಸಂಖ್ಯೆಯು ಕಡಿಮೆಯಾಗುತ್ತದೆ. ಪ್ಲೇಟ್‌ಲೆಟ್‌ಗಳು ರಕ್ತ ಹೆಪ್ಪುಗಟ್ಟಲು ಸಹಾಯ ಮಾಡುವ ಸಣ್ಣ ಕೋಶಗಳು. ಆದ್ದರಿಂದ ಅವು ತುಂಬಾ ಕಡಿಮೆ ಇರುವುದು ಅಪಾಯಕಾರಿ. ದೇಹದ ರೋಗನಿರೋಧಕ ವ್ಯವಸ್ಥೆಯು ಲಸಿಕೆಗೆ ಪ್ರತಿಕ್ರಿಯಿಸಿ, ರಕ್ತದ ಹೆಪ್ಪುಗಟ್ಟುವಿಕೆಯಲ್ಲಿ ಒಳಗೊಂಡಿರುವ ಪ್ರೋಟೀನ್ ಮೇಲೆ ದಾಳಿ ಮಾಡುವ ಪ್ರತಿಕಾಯಗಳನ್ನು ತಯಾರಿಸುವುದರಿಂದ TTS ಸಂಭವಿಸುತ್ತದೆ.

ಕೋವಿಡ್‌ ನಂತರದ ದಿನಗಳಲ್ಲಿ ಯುವಜನರಲ್ಲಿಯೂ ವಿವರಿಸಲಾಗದ ತೀವ್ರ ಅಸ್ವಸ್ಥತೆ, ಹೃದಯಸ್ತಂಭನ ಮುಂತಾದವುಗಳು ಕಂಡುಬಂದಿವೆ. ಭಾರತದಲ್ಲಿಯೂ ಹಲವಾರು ಪ್ರಕರಣಗಳು ನಡೆದಿದ್ದು, ಕೋವಿಡ್‌ ಹಾಗೂ ಅದರ ಲಸಿಕೆಯ ಬಗ್ಗೆ ಅನುಮಾನ ಮೂಡಿಸಿದ್ದವು. ಕಳೆದ ವರ್ಷ ಕೇಂದ್ರ ಸರ್ಕಾರ, “ಕೊರೊನಾ ವೇಳೆ ಸಾವು ಗೆದ್ದು ಬಂದವರು ಜಾಸ್ತಿ ಕೆಲಸ ಮಾಡಬಾರದು” ಎಂದು ಸೂಚಿಸಿತ್ತು. “ಕೊರೊನಾ ಸೋಂಕು ತಗುಲಿ, ಐಸಿಯುನಲ್ಲಿ ಚಿಕಿತ್ಸೆ ಪಡೆಯುವುದು ಸೇರಿ ಆರೋಗ್ಯ ಸ್ಥಿತಿ ಗಂಭೀರವಾಗಿ, ಬದುಕಿ ಬಂದವರು ಯಾವುದೇ ಕಾರಣಕ್ಕೂ ಹೆಚ್ಚು ದಣಿಯುವ ಕೆಲಸ ಮಾಡಬಾರದು. ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ (ICMR) ಅಧ್ಯಯನ ವರದಿ ಪ್ರಕಾರ, ಹೃದಯಾಘಾತದ ಭೀತಿ ಇರುವ ಕಾರಣ ಒಂದಷ್ಟು ಸಮಯದವರೆಗೆ ಕೊರೊನಾ ಸೋಂಕಿತರು ಹೆಚ್ಚು ಸಮಯದವರೆಗೆ ಅಥವಾ ಹೆಚ್ಚು ಭಾರ ಹೊರುವ ಕೆಲಸ ಮಾಡಬಾರದು. ಒಂದು ವರ್ಷ ಅಥವಾ ಎರಡು ವರ್ಷಗಳವರೆಗೆ ಇಂತಹ ವ್ಯಕ್ತಿಗಳು ಅತಿಯಾದ ವ್ಯಾಯಾಮ, ಜಿಮ್‌ನಲ್ಲಿ ವರ್ಕೌಟ್‌ ಕೂಡ ಮಾಡಬಾರದು” ಎಂದು ಅಧ್ಯಯನ ವರದಿ ಉಲ್ಲೇಖಿಸಿ ಕೇಂದ್ರ ಆರೋಗ್ಯ ಸಚಿವರು ತಿಳಿಸಿದ್ದರು.

ಇದನ್ನೂ ಓದಿ: ವಿಸ್ತಾರ ಸಂಪಾದಕೀಯ: ಭಾರತದ ಉತ್ಪನ್ನಗಳ ರಫ್ತಿಗೆ ಕುಖ್ಯಾತಿ ಅಂಟದಿರಲಿ

ಕೊರೊನಾ ಸೋಂಕಿನ ನಂತರ ಹೃದಯಾಘಾತ ಪ್ರಮಾಣ ಏರಿಕೆಯಾಗಿರುವುದನ್ನು ಜಾಗತಿಕ ವರದಿಗಳೇ ದೃಢಪಡಿಸಿವೆ. ಜಾಗತಿಕ ವರದಿಯೊಂದರ ಪ್ರಕಾರ, ಸಾಂಕ್ರಾಮಿಕದ ನಂತರ 24-45 ವರ್ಷದೊಳಗಿನವರಲ್ಲಿ ಹೃದಯಾಘಾತ ಪ್ರಮಾಣ ಶೇ.30ರಷ್ಟು ಏರಿಕೆಯಾಗಿದೆ. ಆ ಮೂಲಕ ಅಂತಾರಾಷ್ಟ್ರೀಯವಾಗಿಯೂ ಕೊರೊನಾ ನಂತರ ಹೃದಯಾಘಾತ ಪ್ರಮಾಣ ಹೆಚ್ಚಾಗಿದೆ ಎಂಬುದು ದೃಢಪಟ್ಟಿದೆ. ಕೊರೊನಾ ನಂತರ ಹೃದಯಾಘಾತ ಪ್ರಮಾಣ ಶೇ.3ರಿಂದ ಶೇ.5ರಷ್ಟು ಏರಿಕೆಯಾಗಿದೆ ಎಂದು ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ನಿರ್ದೇಶಕರಾಗಿದ್ದ ಡಾ.ಸಿ.ಎನ್.ಮಂಜುನಾಥ್‌ ಕೂಡ ಹೇಳಿದ್ದರು. ಈಗ ಯುವಕರಿಗೂ ಹೃದಯಾಘಾತ ಹೆಚ್ಚುತ್ತಿದೆ. ಅಧಿಕ ಒತ್ತಡ, ಜೀವನ ಶೈಲಿ, ಆಹಾರ ಶೈಲಿ ಇದಕ್ಕೆ ಕಾರಣವಾಗಿದೆ ಎಂದಿದ್ದಾರೆ. ಇದರ ಜೊತೆಗೆ ಕೋವಿಶೀಲ್ಡ್‌ ಲಸಿಕೆಯ ಅಡ್ಡ ಪರಿಣಾಮ ಕೂಡ ಸೇರಿಕೊಂಡಿರುವುದು ಆತಂಕಕಾರಿ.

ಇವೆಲ್ಲ ಕಾರಣಗಳಿಂದಾಗಿ, ಕೊರೊನಾದಿಂದಾಗಿ ಪೀಡಿತರಾದವರು ಈ ಬಗ್ಗೆ ಅತೀವ ಎಚ್ಚರ ವಹಿಸಲೇಬೇಕಿದೆ. ಸೂಕ್ತ ಆಹಾರ ಸೇವನೆ, ವ್ಯಾಯಾಮ ಸೇರಿದಂತೆ ಆರೋಗ್ಯಕರ ಜೀವನಶೈಲಿಯನ್ನು ಬರಮಾಡಿಕೊಳ್ಳಬೇಕು. ಸರ್ಕಾರ ಎಷ್ಟೇ ಆರೋಗ್ಯಸೇವೆ ನೀಡಿದರೂ ವ್ಯಕ್ತಿ ತನ್ನ ಆರೋಗ್ಯವನ್ನು ನೋಡಿಕೊಳ್ಳದಿದ್ದರೆ ಯಾರೂ ಏನೂ ಮಾಡಲು ಸಾಧ್ಯವಿಲ್ಲ. ಕೋವಿಡ್‌ ಹಾಗೂ ಲಸಿಕೆಯಿಂದ ಉಂಟಾಗಿರಬಹುದಾದ ಆರೋಗ್ಯ ಸಮಸ್ಯೆಗಳನ್ನೂ ಇನ್ನೊಂದು ತುರ್ತುಸ್ಥಿತಿ ಎಂದೇ ತಿಳಿದು ಸರ್ಕಾರ ಕೂಡ ಕಾರ್ಯಪ್ರವೃತ್ತವಾಗಬೇಕು.

Continue Reading

ಸಂಪಾದಕೀಯ

ವಿಸ್ತಾರ ಸಂಪಾದಕೀಯ: ಸ್ತ್ರೀಯರ ಘನತೆಗೆ ಹಾನಿ ಎಸಗಿದವರಿಗೆ ಕಠಿಣ ಶಿಕ್ಷೆಯಾಗಲಿ

ಸಂಸದ ಪ್ರಜ್ವಲ್‌ ರೇವಣ್ಣ ಲೈಂಗಿಕ ದೌರ್ಜನ್ಯ ಮಾಡಿದ್ದಾರೆ ಎಂದು ಆರೋಪಿಸಿ ಮಹಿಳೆಯೊಬ್ಬರು ನೀಡಿದ ದೂರಿನ ಅನ್ವಯ ಹೊಳೆನರಸೀಪುರ ಟೌನ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ. ಆರೋಪ ಸಾಬೀತಾದರೆ ಏಳು ವರ್ಷದವರೆಗೂ ಜೈಲು ಶಿಕ್ಷೆ ಹಾಗೂ ದಂಡ ಆಗಬಹುದು. ತನ್ನ ಮೇಲೆ ರೇಪ್‌ ನಡೆದಿದೆ ಎಂದು ಆರೋಪ ನೀಡಿದವರು ಬಲವಾಗಿ ಕೋರ್ಟ್‌ನಲ್ಲಿ ವಾದಿಸಿದರೆ ಆರೋಪಿಯನ್ನು ಯಾರೂ ಕಾಪಾಡಲಾರರು. ಆದರೆ ಅಧಿಕಾರದಲ್ಲಿ ಇರುವವರ ಮುಂದೆ ಬಡ ಆರೋಪಿಗಳು ನಿಲ್ಲಲು ಸಾಧ್ಯವೇ ಎಂಬುದೇ ಆತಂಕದ ಪ್ರಶ್ನೆ.

VISTARANEWS.COM


on

Vistara Editorial
Koo

ಹಾಸನದಲ್ಲಿ ಹುಟ್ಟಿಕೊಂಡು ರಾಜ್ಯಾದ್ಯಂತ, ದೇಶಾದ್ಯಂತ ಸುದ್ದಿಯಾಗುತ್ತಿರುವ ಲೈಂಗಿಕ ದೌರ್ಜನ್ಯದ ಅಶ್ಲೀಲ ವಿಡಿಯೋಗಳ ಪೆನ್‌ಡ್ರೈವ್‌ ಪ್ರಕರಣ ಈಗಾಗಲೇ ಸಾಕಷ್ಟು ರಾಜಕೀಯ ಕೋಲಾಹಲ ಎಬ್ಬಿಸಿದೆ. ಈ ಪ್ರಕರಣವನ್ನು ಸಾರ್ವಜನಿಕಗೊಳಿಸಿದ ಸಂದರ್ಭ, ಇದರ ಹಿಂದೆ ಮುಂದೆ ಇರುವ ರಾಜಕೀಯ ಲೆಕ್ಕಾಚಾರಗಳು, ಈಗ ನಡೆಯುತ್ತಿರುವ ಪ್ರತಿಭಟನೆಗಳು, ಎಲ್ಲವೂ ಕುತೂಹಲಕರವಾಗಿವೆ. ಆರೋಪಿ ಎನಿಸಿಕೊಂಡಿರುವ ಹಾಸನದ ಸಂಸದ ಪ್ರಜ್ವಲ್‌ ರೇವಣ್ಣ, ಈಗಾಗಲೇ ದೇಶ ಬಿಟ್ಟು ಜರ್ಮನಿಗೆ ತೆರಳಿದ್ದಾರೆ. “ತನಿಖೆಗೆ ಕರೆದಾಗ ಬರುತ್ತಾರೆ” ಎಂದು ಅವರ ತಂದೆ ಎಚ್‌ಡಿ ರೇವಣ್ಣ ಹೇಳಿದ್ದಾರೆ. ಆದರೆ ಬಹುಶಃ ನಿರೀಕ್ಷಣಾ ಜಾಮೀನು ದೊರೆಯುವವರೆಗೂ ಪ್ರಜ್ವಲ್‌ ಮರಳುವುದು ಅನುಮಾನವೇ ಅನಿಸುತ್ತದೆ. “ತನಿಖೆ ನಡೆಯಲಿ, ತಪ್ಪು ಮಾಡಿದ್ದರೆ ಶಿಕ್ಷೆಯಾಗಲಿ” ಎಂದು ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಹೇಳಿದ್ದಾರೆ. ಇದು ಎಲ್ಲರ ಮಾತೂ ಹೌದು.

ಸಂಸದ ಪ್ರಜ್ವಲ್‌ ರೇವಣ್ಣ ಲೈಂಗಿಕ ದೌರ್ಜನ್ಯ ಮಾಡಿದ್ದಾರೆ ಎಂದು ಆರೋಪಿಸಿ ಮಹಿಳೆಯೊಬ್ಬರು ನೀಡಿದ ದೂರಿನ ಅನ್ವಯ ಹೊಳೆನರಸೀಪುರ ಟೌನ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ. ಐಪಿಸಿ ಸೆಕ್ಷನ್ 354A, 354D, 506, 509 ಅಡಿ ಕೇಸ್‌ ದಾಖಲಾಗಿದ್ದು, ಆರೋಪ ಸಾಬೀತಾದರೆ ಏಳು ವರ್ಷದವರೆಗೂ ಜೈಲು ಶಿಕ್ಷೆ ಹಾಗೂ ದಂಡ ಆಗಬಹುದು. ತನ್ನ ಮೇಲೆ ರೇಪ್‌ ನಡೆದಿದೆ ಎಂದು ಆರೋಪ ನೀಡಿದವರು ಬಲವಾಗಿ ಕೋರ್ಟ್‌ನಲ್ಲಿ ವಾದಿಸಿದರೆ ಆರೋಪಿಯನ್ನು ಯಾರೂ ಕಾಪಾಡಲಾರರು. ಆದರೆ ಶ್ರೀಮಂತರು, ಪ್ರಭಾವಿಗಳು ಹಾಗೂ ಅಧಿಕಾರದಲ್ಲಿ ಇರುವವರ ಮುಂದೆ ಬಡ ಆರೋಪಿಗಳು ನಿಲ್ಲಲು ಸಾಧ್ಯವೇ? ಇದು ಕಾನೂನು ಹಾಗೂ ನ್ಯಾಯಾಂಗದ ಪಾರದರ್ಶಕತೆ, ತನಿಖಾ ಸಂಸ್ಥೆಗಳ ಪ್ರಾಮಾಣಿಕತೆ ಹಾಗೂ ಸಾಕ್ಷಿಗಳನ್ನು ಕಲೆಹಾಕುವ ಪರಿಶ್ರಮ ಇವುಗಳನ್ನೆಲ್ಲ ಅವಲಂಬಿಸಿದೆ.

ಪ್ರಕರಣದ ತನಿಖೆಗಾಗಿ ಎಸ್‌ಐಟಿ ರಚನೆಗೆ ಸಿಎಂ ಸಿದ್ದರಾಮಯ್ಯ ಅವರು ಆದೇಶಿಸಿದ್ದು, ಅಧಿಕೃತವಾಗಿ ಎಡಿಜಿಪಿ ಬಿ.ಕೆ. ಸಿಂಗ್ ನೇತೃತ್ವದಲ್ಲಿ ಎಸ್‌ಐಟಿ ರಚಿಸಲಾಗಿದೆ. ಇದರಲ್ಲಿ ಇಬ್ಬರು ಮಹಿಳಾ ಐಪಿಎಸ್‌ ಅಧಿಕಾರಿಗಳು ಇದ್ದಾರೆ. ಎಡಿಜಿಪಿ ಬಿ.ಕೆ. ಸಿಂಗ್ ಎಸ್‌ಐಟಿ ಮುಖ್ಯಸ್ಥರಾಗಿದ್ದು, ಎಸ್‌ಪಿ ಸುಮನ್ ಡಿ ಪನ್ನೇಕರ್, ಎಸ್‌ಪಿ ಸೀಮಾ ಲಾಟ್ಕರ್ ಸದಸ್ಯರಾಗಿದ್ದಾರೆ. ಸಿಐಡಿಯಲ್ಲಿ ಎಡಿಜಿಪಿಯಾಗಿರುವ ಬಿ.ಕೆ ಸಿಂಗ್ ಅವರು, ಈ ಹಿಂದೆ ಗೌರಿ ಲಂಕೇಶ್ ಕೊಲೆ ಕೇಸ್‌ ತನಿಖೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಪ್ರಭಾವಿ ರಾಜಕಾರಣಿಗಳು ಅನೇಕ ಮಹಿಳೆಯರನ್ನು ಲೈಂಗಿಕವಾಗಿ ಬಳಸಿಕೊಳ್ಳುತ್ತಿರುವ ಬಗ್ಗೆ ಚಿತ್ರೀಕರಣ ಮಾಡಿದ ವ್ಯಕ್ತಿಗಳು ಮತ್ತು ಅದನ್ನು ಸಾರ್ವಜನಿಕ ಪಡಿಸಿದ ವ್ಯಕ್ತಿಗಳನ್ನು ತನಿಖೆಗೆ ಒಳಪಡಿಸುವ ಮೂಲಕ ಮಹಿಳೆಯರ ಘನತೆ ಹಾಗೂ ಅಸ್ತಿತ್ವಕ್ಕೆ ಹಾನಿ ಉಂಟು ಮಾಡುತ್ತಿರುವವರನ್ನು ಶೀಘ್ರವಾಗಿ ಪತ್ತೆಹಚ್ಚಿ ಆರೋಪಿಗಳ ವಿರುದ್ಧ ಕಠಿಣ ಕಾನೂನಾತ್ಮಕ ಕ್ರಮ ಕೈಗೊಳ್ಳುವಂತೆ ರಾಜ್ಯ ಮಹಿಳಾ ಆಯೋಗ ಕೋರಿದೆ. ಮಹಿಳಾ ಸಂಘಟನೆಗಳು, ಮಹಿಳಾ ಹಕ್ಕುಗಳ ಆಯೋಗ ಕೂಡ ಈ ಪ್ರಕರಣದ ಆರೋಪಿಗಳ ಹೆಡೆಮುರಿ ಕಟ್ಟಲು ಒತ್ತಾಯಿಸಿ ಪ್ರತಿಭಟನೆಗಳನ್ನು ನಡೆಸಿದೆ.

ಇದೆಲ್ಲವೂ ಒಂದು ಕಡೆಗಾದರೆ, ಪ್ರಕರಣದ ಇನ್ನೊಂದು ಆಯಾಮವನ್ನೂ ನೋಡಬೇಕು. ಲೈಂಗಿಕ ಕಿರುಕುಳದ ವಿಡಿಯೋಗಳನ್ನು ಹಾದಿಬೀದಿಯಲ್ಲಿ ಎಲ್ಲರಿಗೂ ಸಿಗುವಂತೆ ಹಂಚಿದವರು ಯಾರು? ಯಾಕೆ ಅದನ್ನು ಚುನಾವಣೆಯ ಸಂದರ್ಭದಲ್ಲಿಯೇ ಹೊರಬಿಡಲಾಯಿತು? ಜೆಡಿಎಸ್‌ ಹಾಗೂ ಬಿಜೆಪಿ ಪಕ್ಷಗಳು ರಾಜಕೀಯ ಮೈತ್ರಿ ಮಾಡಿಕೊಂಡಿರುವ ಸಮಯವನ್ನೇ ಆಯ್ದುಕೊಂಡು ಈ ವಿಡಿಯೋಗಳನ್ನು ಹರಿದಾಡುವಂತೆ ಮಾಡುವ ಹಿನ್ನೆಲೆಯಲ್ಲಿ ಚುನಾವಣಾ ಅಭ್ಯರ್ಥಿಯೊಬ್ಬರ ಸೋಲಿಗಾಗಿ ನಡೆಸಿದ ಸಂಚು ಕೂಡ ಇಲ್ಲವೇ? ಇದು ಸಮಯಸಾಧಕತನವಲ್ಲ, ಇದರ ಹಿಂದೆ ರಾಜಕೀಯ ಇಲ್ಲ ಎನ್ನುವುದು ತೀರಾ ಮುಗ್ಧತೆಯೂ ಅಲ್ಲ, ಭಂಡತನವಾಗುತ್ತದೆ. ಆರೋಪಿಗಳಿಗೆ ಶಿಕ್ಷೆಯಾಗಬೇಕು ನಿಜ; ಆದರೆ ಸಂತ್ರಸ್ತ ಅಮಾಯಕ ಮಹಿಳೆಯರ ಗುರುತನ್ನು ಸಾರ್ವಜನಿಕಗೊಳಿಸಿದವರೂ ಆರೋಪಿಗಳೇ ಅಲ್ಲವೇ? ಅವರಿಗೂ ಶಿಕ್ಷೆಯಾಗಬೇಕಿದೆ. ಇದು ಮಹಿಳೆಯ ಘನತೆಗೆ ಕುಂದು ತರುವ ಸಂಚು.

ಘಟನೆಯ ಹಿನ್ನೆಲೆಯಲ್ಲಿ ಜೆಡಿಎಸ್‌ ಪಕ್ಷದೊಳಗೆ ಪ್ರಜ್ವಲ್‌ ರೇವಣ್ಣ ಅವರ ವಿರುದ್ಧ ಯಾವ ಕ್ರಮ ತೆಗೆದುಕೊಳ್ಳುತ್ತಾರೋ ತಿಳಿಯದು. ಅದು ಪಕ್ಷದ ಆಂತರಿಕ ವಿಚಾರ. ಪಕ್ಷದಿಂದ ಅವರ ಉಚ್ಚಾಟನೆಗೆ ತೀರ್ಮಾನಿಸಲಾಗಿದೆ ಎಂದು ಎಚ್‌ಡಿಕೆ ಹೇಳಿದ್ದಾರೆ. ಹಾಗೆ ಆದರೆ ಪಕ್ಷ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ ಎನ್ನಬೇಕು. ಬಿಜೆಪಿ ಕೂಡ ಜೆಡಿಎಸ್‌ ಜೊತೆಗೆ ಮೈತ್ರಿ ಮಾಡಿಕೊಂಡಿರುವುದರಿಂದ, ಪ್ರಕರಣದ ಬಗ್ಗೆ ಬಿಜೆಪಿ ನಾಯಕರ ನಿಲುವು ಏನಿದೆ ಎಂದು ಸಾರ್ವಜನಿಕರು ತಿಳಿಯಲು ಬಯಸಿದರೆ ತಪ್ಪಾಗದು. ಹಾಗೆಯೇ ಹಾಸನ ಲೋಕಸಭೆ ಕ್ಷೇತ್ರದ ಮತದಾರರ ಮನಸ್ಸಿನಲ್ಲಿ ಈ ಪ್ರಕರಣ ಯಾವ ರೀತಿ ಕೆಲಸ ಮಾಡಿದೆ, ಫಲಿತಾಂಶ ಹೇಗಿದ್ದೀತು ಎಂದು ತಿಳಿಯುವುದಕ್ಕೆ ಫಲಿತಾಂಶದವರೆಗೂ ಕಾಯಬೇಕಾದೀತು. ಬಿಕೆ ಸಿಂಗ್‌ ನೇತೃತ್ವದ ಎಸ್‌ಐಟಿ ಪ್ರಾಮಾಣಿಕವಾಗಿ ಕೆಲಸ ಮಾಡಿದರೆ ಪ್ರಕರಣ ತಾರ್ಕಿಕ ಕೊನೆ ಮುಟ್ಟಬಹುದು. ತನಿಖೆ ನಡೆದು ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ ಎಂದು ಹಾರೈಸೋಣ.

ಇದನ್ನೂ ಓದಿ: DK Shivakumar: ಪ್ರಜ್ವಲ್‌ ರೇವಣ್ಣ ಪ್ರಕರಣದ ಬಗ್ಗೆ ಬಿಜೆಪಿ ನಿಲುವೇನು; ಶಿವಕುಮಾರ್ ಪ್ರಶ್ನೆ

Continue Reading

Latest

ವಿಸ್ತಾರ ಸಂಪಾದಕೀಯ: ಭಾರತದ ಉತ್ಪನ್ನಗಳ ರಫ್ತಿಗೆ ಕುಖ್ಯಾತಿ ಅಂಟದಿರಲಿ

ಕಳೆದ ಕೆಲವು ವರ್ಷಗಳಲ್ಲಿ ಭಾರತದಿಂದ ರಫ್ತಾಗುವ ಹಲವು ಸಾಮಗ್ರಿಗಳಲ್ಲಿ ಕೀಟನಾಶಕಗಳ ಅಂಶ ನಿಗದಿತ ಮಿತಿ ಮೀರಿದೆ ಎಂದು ಕಾರಣ ನೀಡಿ ತಿರಸ್ಕರಿಸಲಾಗಿದೆ. ಅಮೆರಿಕದಲ್ಲಿ ನಮ್ಮ ಬಾಸ್ಮತಿ ಅಕ್ಕಿ, ಪಾಲಿಶ್ಡ್‌ ಅಕ್ಕಿ, ಬೆಂಡೆಕಾಯಿ ಹಾಗೂ ಕ್ಯಾಪ್ಸಿಕಂ, ಯುರೋಪಿನಲ್ಲಿ ಬಾಸ್ಮತಿ ಅಕ್ಕಿ, ಜಪಾನ್‌ನಲ್ಲಿ ಸಿಗಡಿ ಸೇರಿದಂತೆ ಹಲವು ಉತ್ಪನ್ನಗಳನ್ನು ಎತೋಕ್ಸಿಕ್ವಿನ್‌, ಆಕ್ಸಿಟೆಟ್ರಾಸೈಕ್ಲಿನ್‌, ಸಲ್ಫೈಟ್‌, ನೈಟ್ರೋಫರಾನ್‌, ಕ್ಲೋರಾಂಫೆನಿಕಾಲ್‌ ಮುಂತಾದ ಕೀಟನಾಶಕ ಅಂಶಗಳ ಕಾರಣದಿಂದ ತಿರಸ್ಕರಿಸಲಾಗಿತ್ತು. ಇದು ಆತಂಕಕಾರಿ

VISTARANEWS.COM


on

Vistara Editorial
Koo

ಭಾರತದಲ್ಲಿ ತಯಾರಾಗುವ ಒಟ್ಟು 527 ಆಹಾರ ಉತ್ಪನ್ನಗಳಲ್ಲಿ ಕ್ಯಾನ್ಸರ್‌ಕಾರಕ ಎಥಿಲಿನ್‌ ಆಕ್ಸೈಡ್‌ (Ethylene oxide) ಹೆಚ್ಚಿನ ಪ್ರಮಾಣದಲ್ಲಿದೆ ಎಂದು ಯುರೋಪಿಯನ್ ಯೂನಿಯನ್ ಆಹಾರ ಸುರಕ್ಷತಾ ಅಧಿಕಾರಿಗಳು ಹೇಳಿದ್ದಾರೆ. 572 ಉತ್ಪನ್ನಗಳ ಪೈಕಿ 87 ಉತ್ಪನ್ನಗಳ ರಫ್ತನ್ನು ಈಗಾಗಲೇ ಗಡಿಯಲ್ಲಿ ರದ್ದುಗೊಳಿಸಲಾಗಿದೆ. ಎಂಡಿಎಚ್, ಎವರೆಸ್ಟ್ ಮಸಾಲೆ ಸೇರಿದಂತೆ ಜನಪ್ರಿಯ ಕಂಪನಿಗಳ ಆಹಾರ ಪದಾರ್ಥಗಳಲ್ಲಿ ಕ್ಯಾನ್ಸರ್‌ಕಾರಕ ಎಥಿಲೀನ್ ಆಕ್ಸೈಡ್ ಹೆಚ್ಚಿನ ಮಟ್ಟದಲ್ಲಿದೆಯಂತೆ. ಇದರ ಬೆನ್ನಲ್ಲೇ ಎರಡು ಕಂಪನಿಗಳ ಉತ್ಪನ್ನಗಳನ್ನು ಈಗಾಗಲೇ ಹಾಂಗ್ ಕಾಂಗ್ (Hong Kong) ಮತ್ತು ಸಿಂಗಾಪುರ (Singapore)ದಲ್ಲಿ ಸಂಪೂರ್ಣವಾಗಿ ಬ್ಯಾನ್‌ ಮಾಡಲಾಗಿದೆ. ಎಳ್ಳು ಬೀಜಗಳು, ಗಿಡಮೂಲಿಕೆಗಳು, ಮಸಾಲೆಗಳು ಮತ್ತು ಇತರ ಆಹಾರ ಪದಾರ್ಥಗಳಲ್ಲೂ ಅಪಾಯಕಾರಿ ಕೆಮಿಕಲ್‌ಗಳು ಕಂಡು ಬಂದಿವೆ. ಇದು ಭಾರತದ ರಫ್ತು ವಲಯದ ಮಟ್ಟಿಗೆ ಆತಂಕಕಾರಿ ಸಂಗತಿ.

ಹೀಗಾಗುತ್ತಿರುವುದು ಇದೇ ಮೊದಲ ಬಾರಿ ಅಲ್ಲ. ಕಳೆದ ಕೆಲವು ವರ್ಷಗಳಲ್ಲಿ ಭಾರತದಿಂದ ರಫ್ತಾಗುವ ಹಲವು ಸಾಮಗ್ರಿಗಳಲ್ಲಿ ಕೀಟನಾಶಕಗಳ ಅಂಶ ನಿಗದಿತ ಮಿತಿಯನ್ನು ಮೀರಿದೆ ಎಂದು ಕಾರಣ ನೀಡಿ ತಿರಸ್ಕರಿಸಲಾಗಿದೆ. ಅಮೆರಿಕದಲ್ಲಿ ನಮ್ಮ ಬಾಸ್ಮತಿ ಅಕ್ಕಿ, ಪಾಲಿಶ್ಡ್‌ ಅಕ್ಕಿ, ಬೆಂಡೆಕಾಯಿ ಹಾಗೂ ಕ್ಯಾಪ್ಸಿಕಂ, ಯುರೋಪಿನಲ್ಲಿ ಬಾಸ್ಮತಿ ಅಕ್ಕಿ, ಜಪಾನ್‌ನಲ್ಲಿ ಸಿಗಡಿ ಸೇರಿದಂತೆ ಹಲವು ಉತ್ಪನ್ನಗಳನ್ನು ಎತೋಕ್ಸಿಕ್ವಿನ್‌, ಆಕ್ಸಿಟೆಟ್ರಾಸೈಕ್ಲಿನ್‌, ಸಲ್ಫೈಟ್‌, ನೈಟ್ರೋಫರಾನ್‌, ಕ್ಲೋರಾಂಫೆನಿಕಾಲ್‌ ಮುಂತಾದ ಕೀಟನಾಶಕ ಅಂಶಗಳ ಕಾರಣದಿಂದ ತಿರಸ್ಕರಿಸಲಾಗಿತ್ತು. ಅಮೆರಿಕದಲ್ಲಿ ಭಾರತದ ಮಾವು, ಜರ್ಮನಿಯಲ್ಲಿ ಭಾರತದ ಡಾರ್ಜಲಿಂಗ್‌ ಟೀ, ಯುಎಇಯಲ್ಲಿ ನಮ್ಮ ಮಾವು ಹಾಗೂ ತರಕಾರಿ ತಿರಸ್ಕಾರಕ್ಕೊಳಗಾಗಿದ್ದವು. ಇದೀಗ ಮಸಾಲೆ ಉತ್ಪನ್ನಗಳಲ್ಲಿ ಕ್ಯಾನ್ಸರ್‌ಕಾರಕ ಎಥಿಲೀನ್ ಆಕ್ಸೈಡ್ ಅತಿಯಾಗಿ ಕಂಡುಬಂದಿದೆ. ಎಥಿಲೀನ್ ಆಕ್ಸೈಡ್ ಅನ್ನು ಮೂಲತಃ ವೈದ್ಯಕೀಯ ಸಾಧನಗಳನ್ನು ಸ್ವಚ್ಛಗೊಳಿಸುವ ಕ್ರಿಮಿನಾಶಕವಾಗಿ ಬಳಸಲಾಗುತ್ತದೆ. ಈ ರಾಸಾಯನಿಕ ದೇಹಕ್ಕೆ ಸೇರಿದರೆ ಲಿಂಫೋಮಾ ಮತ್ತು ಲ್ಯುಕೇಮಿಯಾ ಸೇರಿದಂತೆ ವಿವಿಧ ಕ್ಯಾನ್ಸರ್‌ಗಳು ಬರುವ ಸಾಧ್ಯತೆ ಹೆಚ್ಚಿದೆ. ಇದು ಈ ಹಿಂದೆ ಕೆಮ್ಮಿನ ಸಿರಪ್‌ಗಳಲ್ಲೂ ಪತ್ತೆಯಾಗಿತ್ತು. ಇದರಿಂದ ಆಫ್ರಿಕಾದ ಕೆಲವು ದೇಶಗಳಲ್ಲಿ ಸಾವಿಗೆ ಕಾರಣವಾಗಿತ್ತು.

ಇದನ್ನೂ ಓದಿ: ವಿಸ್ತಾರ ಸಂಪಾದಕೀಯ: ಗ್ರಾಮಾಂತರ ಜನರ ಮತೋತ್ಸಾಹ ನಗರದ ‘ಬುದ್ಧಿವಂತ’ ಮತದಾರರಲ್ಲಿ ಏಕಿಲ್ಲ?

ಇದಕ್ಕೆ ಕಾರಣ, ನಮ್ಮವರು ಬೆಳೆಯುವ ಬೆಳೆಗೆ ಬಳಸುವ ಕೀಟನಾಶಕ ಹಾಗೂ ರಸಗೊಬ್ಬರದ ಪ್ರಮಾಣದಲ್ಲಿ ಲಂಗುಲಗಾಮೇ ಇಲ್ಲದಿರುವುದು. ಕೀಟನಾಶಕಗಳು ಹಾಗೂ ರಸಗೊಬ್ಬರಗಳಿಗೆ ಅತಿ ಭಾರೀ ಪ್ರಮಾಣದಲ್ಲಿ ಸಬ್ಸಿಡಿಯನ್ನು ಕೊಡುವ ದೇಶವೂ ನಮ್ಮದೇ. ಹೀಗಾಗಿ ಇವು ಅತ್ಯಂತ ಅಗ್ಗವಾಗಿ ಸಿಗುತ್ತವೆ. ಅಮೆರಿಕ ಬಹಳಷ್ಟು ಸಾರಿ ನಮ್ಮಲ್ಲಿ ನೀಡಲಾಗುತ್ತಿರುವ ರಸಗೊಬ್ಬರ ಸಬ್ಸಿಡಿಯ ಬಗ್ಗೆ ತಗಾದೆ ಎತ್ತಿದೆ. ಇದರಲ್ಲಿ ಅಮೆರಿಕದ ಹಿತಾಸಕ್ತಿಯೂ ಇದೆ ಎನ್ನೋಣ. ಆದರೆ ಅಮೆರಿಕದ ಆಕ್ಷೇಪದಲ್ಲಿ ಸತ್ಯವೂ ಇದೆ. ಅಮೆರಿಕ, ಮುಂದುವರಿದ ಯುರೋಪ್ ದೇಶಗಳು, ಸಿಂಗಾಪುರ ಮುಂತಾದೆಡೆಗಳಲ್ಲಿ ಆಹಾರ ವಸ್ತುಗಳ ಗುಣಮಟ್ಟದ ಬಗ್ಗೆ ಕಟ್ಟುನಿಟ್ಟಾದ ನಿಯಮಗಳಿವೆ. ಈ ನಿಯಮ ಮೀರಿದ ಉತ್ಪನ್ನಗಳನ್ನು ಅವು ಸ್ವೀಕರಿಸುವುದಿಲ್ಲ. ಹೀಗಾಗಿ ರಫ್ತಿನ ಮಟ್ಟಿಗೆ ನಾವೂ ಕಠಿಣ ನಿಯಮಗಳನ್ನು ಪಾಲಿಸಬೇಕಾದುದು ಅತ್ಯವಶ್ಯಕ.

ದೇಶದಿಂದ ಕೃಷಿ ಮತ್ತು ಸಂಸ್ಕರಿಸಿದ ಆಹಾರ ಉತ್ಪನ್ನಗಳ ರಫ್ತಿನ ಪ್ರಾಮುಖ್ಯತೆ ಹಾಗೂ ಅದರ ಗುಣಮಟ್ಟ ಕಾಪಾಡಿಕೊಳ್ಳಬೇಕಾದ ಅಗತ್ಯ ಅರಿತುಕೊಂಡ ಕೇಂದ್ರ ಸರ್ಕಾರ 1986ರಲ್ಲಿ ವಾಣಿಜ್ಯ ಸಚಿವಾಲಯದ ಅಡಿಯಲ್ಲಿ ಸಂಸತ್ತಿನ ಕಾಯಿದೆಯ ಮೂಲಕ ಕೃಷಿ ಮತ್ತು ಸಂಸ್ಕರಿಸಿದ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರವನ್ನು (APEDA) ಸ್ಥಾಪಿಸಿತು. ರಫ್ತು ಮಾಡಬೇಕಾದ ಸರಕುಗಳ ಕಡ್ಡಾಯ ಗುಣಮಟ್ಟದ ನಿಯಂತ್ರಣ ಮತ್ತು ಪೂರ್ವ-ರವಾನೆ ತಪಾಸಣೆಯ ಉದ್ದೇಶಕ್ಕಾಗಿ ರಫ್ತು (ಗುಣಮಟ್ಟ ನಿಯಂತ್ರಣ ಮತ್ತು ತಪಾಸಣೆ) ಕಾಯಿದೆ, 1963ರ ಸೆಕ್ಷನ್ 3ರ ಅಡಿಯಲ್ಲಿ ಭಾರತ ಸರ್ಕಾರದಿಂದ ರಫ್ತು ಪರಿಶೀಲನಾ ಮಂಡಳಿ (EIC) ಅನ್ನು ಸ್ಥಾಪಿಸಲಾಯಿತು. ಇದು 1000ಕ್ಕೂ ಹೆಚ್ಚು ಸರಕುಗಳನ್ನು ತಪಾಸಿಸುತ್ತದೆ. ಆಹಾರ ಮತ್ತು ಕೃಷಿ, ಮೀನುಗಾರಿಕೆ, ಖನಿಜಗಳು, ಸಾವಯವ ಮತ್ತು ಅಜೈವಿಕ ರಾಸಾಯನಿಕಗಳು, ರಬ್ಬರ್ ಉತ್ಪನ್ನಗಳು, ಸೆರಾಮಿಕ್ ಉತ್ಪನ್ನಗಳು, ಕೀಟನಾಶಕಗಳು, ಲಘು ಎಂಜಿನಿಯರಿಂಗ್, ಉಕ್ಕಿನ ಉತ್ಪನ್ನಗಳು, ಸೆಣಬು ಉತ್ಪನ್ನಗಳು, ತೆಂಗಿನಕಾಯಿ ಉತ್ಪನ್ನಗಳು, ಪಾದರಕ್ಷೆಗಳು ಇವನ್ನೆಲ್ಲ ಪರಿಶೀಲಿಸುತ್ತದೆ. ಇದಕ್ಕಾಗಿಯೇ ದೊಡ್ಡ ಸಂಖ್ಯೆಯ ಲ್ಯಾಬ್‌ಗಳಿವೆ. ಹೀಗಿದ್ದರೂ ಕಣ್ತಪ್ಪಿಸಿ ವಿಷಕಾರಕ ಅಂಶಗಳಿರುವ ಉತ್ಪನ್ನಗಳು ವಿದೇಶಕ್ಕೆ ಹೋಗುತ್ತವೆ ಎಂದರೇನರ್ಥ?

ಸದ್ಯ ಈ ತಪಾಸಣೆಯನ್ನು ಬಿಗಿ ಮಾಡಬೇಕಿದೆ. ವಿಷಕಾರಕ ಅಂಶಗಳನ್ನು ಹೊಂದಿರುವ ಉತ್ಪನ್ನಗಳನ್ನು ಹಿಂದೆಗೆದುಕೊಳ್ಳುವ, ಪರೀಕ್ಷಿಸುವ, ದೇಶಕ್ಕೆ ಕೆಟ್ಟ ಹೆಸರು ತರುವ ಉತ್ಪನ್ನಗಳ ನಿರ್ಬಂಧಕ್ಕೆ ಕಠಿಣ ಕ್ರಮ ಆಗಬೇಕಿದೆ. ಯಾಕೆಂದರೆ ಇದು ಭಾರತದ ಘನತೆಯನ್ನು ಜಾಗತಿಕವಾಗಿ ಉಳಿಸುವ ಅಥವಾ ನಾಶಮಾಡುವ ಸಂಗತಿಯಾಗಿದೆ.

Continue Reading

ಪ್ರಮುಖ ಸುದ್ದಿ

ವಿಸ್ತಾರ ಸಂಪಾದಕೀಯ: ಗ್ರಾಮಾಂತರ ಜನರ ಮತೋತ್ಸಾಹ ನಗರದ ‘ಬುದ್ಧಿವಂತ’ ಮತದಾರರಲ್ಲಿ ಏಕಿಲ್ಲ?

ಎಷ್ಟೋ ಮಂದಿ ಶತಾಯುಷಿಗಳು, ದುರ್ಬಲರು, ಅಂಗವಿಕಲರು, ಇನ್ನೇನು ಸರ್ಜರಿಗೆ ಒಳಗಾಗಲಿದ್ದವರು ಬಂದು ಮತ ಹಾಕಿದ್ದಾರೆ. ಮುಂಜಾನೆಯೇ ಬಂದು ಮತಹಾಕಿ ಸೀದಾ ಮಂಟಪಕ್ಕೇ ತೆರಳಿದ ಮದುಮಗಳೂ ಕಂಡುಬಂದಿದ್ದಾಳೆ. ಎಲ್ಲ ಸರಿ ಇದ್ದೂ ಮತ ಹಾಕದ ಮಂದಿಗೆ ಏನೆನ್ನೋಣ? ನಗರ ವಾಸಿಗಳು ಈ ಬಾರಿಯೂ ಕಡಿಮೆ ಪ್ರಮಾಣದಲ್ಲಿ ಮತದಾನ ಮಾಡಿದ್ದು ವಿಷಾದನೀಯ.

VISTARANEWS.COM


on

lok sabha election
Koo

ದೇಶದಲ್ಲಿ ಎರಡನೇ ಹಂತದ ಹಾಗೂ ಕರ್ನಾಟಕದಲ್ಲಿ (lok sabha Election) ಮೊದಲ ಹಂತದ ಚುನಾವಣೆ (Lok Sabha Election) ಶುಕ್ರವಾರ ಸಂಜೆ (ಏಪ್ರಿಲ್​ 26) 6 ಗಂಟೆಗೆ ಮುಕ್ತಾಯಗೊಂಡಿದೆ. ರಾಜ್ಯದ ಮೊದಲ ಹಂತದ ಒಟ್ಟಾರೆ ಮತದಾನ 69.23% ದಾಖಲಾಗಿದೆ. ರಾಜ್ಯದ 14 ಕ್ಷೇತ್ರಗಳ ಲೋಕಸಭಾ ಚುನಾವಣೆಯ ಮೊದಲ ಹಂತದಲ್ಲಿ ಮತದಾನಕ್ಕೆ ಮುಂಜಾನೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಆದರೆ ಮಧ್ಯಾಹ್ನದ ನಂತರ ಮತದಾನ ಪ್ರಮಾಣ ಕಡಿಮೆಯಾಯಿತು. ಮಂಡ್ಯ ಜಿಲ್ಲೆಯಲ್ಲಿ ರಾಜ್ಯದಲ್ಲೇ ಅತಿ ಹೆಚ್ಚಿನ ಪ್ರಮಾಣದ (81.48%) ಮತದಾನವಾಗಿದ್ದು, ಬೆಂಗಳೂರು ಸೆಂಟ್ರಲ್‌ ಕ್ಷೇತ್ರದಲ್ಲಿ ಅತಿ ಕಡಿಮೆ (52.81%) ವೋಟಿಂಗ್ ದಾಖಲಾಗಿದೆ. ಮತದಾನದ ಸಮಯ ಮುಕ್ತಾಯಗೊಳ್ಳುತ್ತಿದ್ದಂತೆ ಅಧಿಕಾರಿಗಳು ಇವಿಎಂ ಯಂತ್ರಗಳಿಗೆ ಸೀಲ್ ಮಾಡಿದ್ದು, ಭಾರೀ ಭದ್ರತೆಯೊಂದಿಗೆ ನಿಗದಿತ ಸ್ಟ್ರಾಂಗ್ ರೂಮ್​ಗೆ ರವಾನೆಯಾಗಿವೆ. ಸಂಸದ ಸ್ಥಾನದ ಆಕಾಂಕ್ಷಿಗಳು ಫಲಿತಾಂಶಕ್ಕೆ ಇನ್ನೂ ಒಂದು ತಿಂಗಳು ಕಾಯಬೇಕಿದೆ.

ಮತದಾನ ಪ್ರಮಾಣವನ್ನು ಗಮನಿಸಿದರೆ ಕೆಲವು ಅಂಶಗಳನ್ನು ಹೇಳಬಹುದಾಗಿದೆ. ನಗರಕ್ಕೆ ಹೋಲಿಸಿದರೆ ಗ್ರಾಮಾಂತರ ಪ್ರದೇಶಗಳೇ ಮತದಾನದ ಪ್ರಮಾಣದಲ್ಲಿ ವಾಸಿ. ಬೆಂಗಳೂರು ಗ್ರಾಮಾಂತರದಲ್ಲಿ 67.29% ಮತದಾನವಾಗಿದೆ. ಬೆಂಗಳೂರು ದಕ್ಷಿಣ ಹಾಗೂ ಉತ್ತರಗಳಲ್ಲಿ 53.15% ಹಾಗೂ 54.42% ಮತದಾನವಾಗಿದೆ. ಮಂಡ್ಯದಲ್ಲಿ ಅತ್ಯಧಿಕ ಮತದಾನವಾಗಿರುವುದು ಈ ಪ್ರದೇಶದ ಜನತೆಯ ರಾಜಕೀಯ ಪ್ರಜ್ಞೆಯಿಂದಾಗಿಯೇ ಇರಬಹುದು. ಕೋಲಾರ (78.07%) ಹಾಗೂ ತುಮಕೂರು (77.70%) ಕೂಡ ಹೆಚ್ಚಿನ ಮತದಾನ ದಾಖಲಿಸಿವೆ. ಬೆಂಗಳೂರು ಕೇಂದ್ರ ಕ್ಷೇತ್ರದ ನೀರಸ ಮತದಾನ (52.81%) ಚಿಂತೆಗೆ ಕಾರಣವಾಗಿದೆ. 2019ರ ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಒಟ್ಟಾರೆ ಮತದಾನ ಶೇಕಡಾವಾರು 68.81% ಆಗಿತ್ತು. ಈ ಬಾರಿ ಮೊದಲ ಹಂತದಲ್ಲಿ ಅದಕ್ಕಿಂತ ಸ್ವಲ್ಪ ಹೆಚ್ಚಿಗೆ (69.23%) ಮತದಾನವಾಗಿದೆ. ಆದರೆ ಎರಡನೇ ಹಂತದಲ್ಲಿ ಎಷ್ಟಾಗಲಿದೆ ಎಂಬುದರ ಮೇಲೆ ಒಟ್ಟಾರೆ ಸರಾಸರಿ ನಿರ್ಧಾರವಾಗಲಿದೆ.

ಮೂಲ ಸೌಕರ್ಯ ಸೇರಿದಂತೆ ನಾನಾ ಕಾರಣಗಳಿಗೋಸ್ಕರ ಹಲವೆಡೆ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದು ಹಾಗೂ ಮತದಾನ ಬಹಿಷ್ಕಾರ ಮಾಡಿದ್ದು ಕೂಡ ನಡೆದಿವೆ. ಸಮಾಧಾನ ಮಾಡಲು ಬಂದ ಅಧಿಕಾರಿಗಳ ಮೇಲೆಯೆ ಗ್ರಾಮಸ್ಥರು ಮುಗಿಬಿದ್ದು ಪೊಲೀಸರ ಲಾಠಿ ಏಟು ತಿನ್ನಬೇಕಾದ ಪ್ರಸಂಗವೂ ಎದುರಾಯಿತು. ಸ್ವಾತಂತ್ರ್ಯ ದೊರೆತು ಎಂಟು ದಶಕ ಕಳೆದರೂ ಇನ್ನೂ ಮೂಲಸೌಕರ್ಯ ಕಲ್ಪಿಸದ ನಮ್ಮ ಆಡಳಿತಗಳಿಗೆ ಮತದಾನ ಬಹಿಷ್ಕಾರವೇ ಸೂಕ್ತ ಉತ್ತರ ಎಂದು ಗ್ರಾಮೀಣ ಜನತೆ ಕಂಡುಕೊಂಡರೋ ಗೊತ್ತಿಲ್ಲ. ಇದು ಮೊದಲೇ ಸಾರಿ, ಕಾರಣ ಹೇಳಿ ಮಾಡುವ ಬಹಿಷ್ಕಾರ. ಆದರೆ ವಿದ್ಯಾವಂತ ನಗರವಾಸಿಗಳ ʼಮತದಾನ ಬಹಿಷ್ಕಾರʼಕ್ಕೆ ಕಾರಣವಾದರೂ ಏನು? ನಗರದಲ್ಲಿ ಮತದಾನ ಹೆಚ್ಚಳ ಮಾಡಲು ಚುನಾವಣಾ ಆಯೋಗ ಇನ್ನಿಲ್ಲದ ಪ್ರಯತ್ನಗಳನ್ನು ಮಾಡುತ್ತಿದೆ. ಹೊಸ ಮತದಾರರಿಗಾಗಿಯೇ ಉತ್ತೇಜನದ ಉಪಕ್ರಮಗಳು, ಮಹಿಳೆಯರಿಗಾಗಿಯೇ ಸಖಿ ಮತಗಟ್ಟೆಗಳು, ಸಾರ್ವತ್ರಿಕ ರಜೆ ಎಲ್ಲವನ್ನೂ ಘೋಷಿಸಲಾಗಿದೆ. ಯಾವುದೇ ಕಷ್ಟವಿಲ್ಲದೆ ಮತದಾರರ ಗುರುತಿನ ಚೀಟಿ ಅಪ್‌ಡೇಟ್‌ ಮಾಡುವ, ತಮ್ಮ ಮತಗಟ್ಟೆ ಎಲ್ಲಿ ಎಂದು ತಿಳಿಯಲು ಕ್ಯುಆರ್‌ ಕೋಡ್‌ ಒದಗಿಸುವ ವ್ಯವಸ್ಥೆಯನ್ನೂ ಒದಗಿಸಲಾಗಿದೆ. ಎಷ್ಟೋ ಮಂದಿ ಶತಾಯುಷಿಗಳು, ದುರ್ಬಲರು, ಅಂಗವಿಕಲರು, ಇನ್ನೇನು ಸರ್ಜರಿಗೆ ಒಳಗಾಗಲಿದ್ದವರು ಬಂದು ಮತ ಹಾಕಿದ್ದಾರೆ. ಮುಂಜಾನೆಯೇ ಬಂದು ಮತಹಾಕಿ ಸೀದಾ ಮಂಟಪಕ್ಕೇ ತೆರಳಿದ ಮದುಮಗಳೂ ಕಂಡುಬಂದಿದ್ದಾಳೆ. ಎಲ್ಲ ಸರಿ ಇದ್ದೂ ಮತ ಹಾಕದ ಮಂದಿಗೆ ಏನೆನ್ನೋಣ?

ಇದನ್ನೂ ಓದಿ: ವಿಸ್ತಾರ ಸಂಪಾದಕೀಯ: ಈ ದಿನ ನಮ್ಮದು, ನಮ್ಮ ಅಧಿಕಾರ ಚಲಾಯಿಸೋಣ

ಮತದಾನ ಕಡಿಮೆಯಾದರೆ ತಾಂತ್ರಿಕವಾಗಿ ನಾವು ಸಮರ್ಪಕವಾದ ಸರ್ಕಾರವನ್ನು ಚುನಾಯಿಸುತ್ತಿರುವುದಿಲ್ಲ. ದೇಶದ 60% ಜನ ಮಾತ್ರ ಮತ ಹಾಕಿ, ಅದರಲ್ಲಿ 30% ಮತ ಪಡೆದ ಪಕ್ಷ ಅಧಿಕಾರಕ್ಕೆ ಬಂದರೆ, ಒಟ್ಟಾರೆ ದೇಶದ ಜನತೆಯಲ್ಲಿ ಆ ಪಕ್ಷವನ್ನು ಆಯ್ಕೆ ಮಾಡಿದವರು ಮೂರನೇ ಒಂದು ಭಾಗ ಮಾತ್ರವೇ ಆಗಿರುತ್ತಾರೆ. ಉಳಿದ ಮೂರನೇ ಎರಡು ಭಾಗ ಜನತೆ ಆ ಪಕ್ಷದ ವಿರುದ್ಧ ಇದ್ದಾರೆ ಎಂದು ತಿಳಿಯಬೇಕಾಗುತ್ತದೆ. ವಾಸ್ತವ ಹಾಗಿರುವುದಿಲ್ಲ. ಮತ ಹಾಕದ ಮಂದಿಯಲ್ಲಿ ಎಷ್ಟು ಮತಗಳು ಯಾವ ಪಕ್ಷದ್ದು ಎಂದು ನಿರ್ಣಯಿಸುವ ಯಾವ ವಿಧಾನವೂ ಇಲ್ಲ. ಹೀಗಾಗಿ ಮತದಾನ ಪ್ರಮಾಣ ಕಡಿಮೆ ಬಂದಾಗ, ಬರುವ ಫಲಿತಾಂಶವೂ ಅಷ್ಟರ ಮಟ್ಟಿಗೆ ಅಸಮರ್ಪಕವೇ ಆಗಿರುತ್ತದೆ. ಇನ್ನು ವಿದ್ಯಾವಂತರು, ಪ್ರಜ್ಞಾವಂತರು ಮತದಾನದಿಂದ ಹಿಂದುಳಿದರೆ, ಪ್ರಜ್ಞಾವಂತಿಕೆಯ ಆಯ್ಕೆಯೂ ಇಲ್ಲದಾಗುತ್ತದೆ. ಇದರಿಂದ ನಷ್ಟ ಪ್ರಜೆಗಳಿಗೇ. ಮೂರ್ಖರು ಅಧಿಕಾರಕ್ಕೆ ಆರಿಸಿ ಬರಬಾರದು ಎಂದಿದ್ದರೆ, ಬುದ್ಧಿವಂತರು ಮತ ಹಾಕಬೇಕು. ಮೇ 7ರಂದು ನಡೆಯುವ ಎರಡನೇ ಹಂತದ ಮತದಾನದಲ್ಲಾದರೂ ಹೆಚ್ಚಿನ ಪ್ರಮಾಣದ ಮತದಾನವಾಗಲಿ ಎಂದು ಆಶಿಸೋಣ.

Continue Reading
Advertisement
Goldy Brar
ದೇಶ2 mins ago

Goldy Brar: ಸಿಧು ಮೂಸೆವಾಲಾ ಹತ್ಯೆ ರೂವಾರಿ ಗೋಲ್ಡಿ ಬ್ರಾರ್‌ ಅಮೆರಿಕದಲ್ಲಿ ಕೊಲೆ; ಕೊಂದಿದ್ದು ಯಾರು?

Hassan Pen Drive case Siddaramaiah writes to PM Modi seeking cancellation of Prajwal Revanna diplomatic passport
ಹಾಸನ12 mins ago

Hassan Pen Drive Case: ಪ್ರಜ್ವಲ್‌ ರೇವಣ್ಣರ ಡಿಪ್ಲೊಮ್ಯಾಟಿಕ್‌ ಪಾಸ್‌ಪೋರ್ಟ್‌ ರದ್ದು ಕೋರಿ ಪ್ರಧಾನಿ ಮೋದಿಗೆ ಸಿದ್ದರಾಮಯ್ಯ ಪತ್ರ!

Prajwal Revanna related post By Rashmi Goutham
ಕ್ರೈಂ12 mins ago

Prajwal Revanna: ಮಹಿಳೆ ಹಸಿದಾಗ ಬಾಯಿಗೆ ಆಹಾರ ಹಾಕಿ…ʻಅದಲ್ಲʼ! ನಟಿಯ ಪೋಸ್ಟ್‌ ವೈರಲ್‌!

Diabetic Chutney
ಲೈಫ್‌ಸ್ಟೈಲ್16 mins ago

Diabetic Chutney: ಡಯಬಿಟಿಕ್‌ ಚಟ್ನಿ ನಿಮಗೆ ಗೊತ್ತೆ? ಇದು ಮಧುಮೇಹಿಗಳಿಗೆ ಉಪಯುಕ್ತ

Bathroom Cleaning Tips
ಲೈಫ್‌ಸ್ಟೈಲ್20 mins ago

Bathroom Cleaning Tips: ಬಾತ್‌ರೂಮ್‌ ಕನ್ನಡಿ ಕೊಳಕಾಗಿದೆಯೇ? ಚಿಂತೆ ಬಿಡಿ, ಈ ಟಿಪ್ಸ್ ಬಳಸಿ

Kalamma Devi Pooja Mahotsava in Kampli
ಧಾರ್ಮಿಕ24 mins ago

Ballari News: ಬಾಯಿಯೊಳಗೆ ತ್ರಿಶೂಲ; ಬೆನ್ನಿಗೆ ಕೊಕ್ಕೆ ಕಟ್ಟಿಕೊಂಡು ಕಾರು, ರಿಕ್ಷಾ ಎಳೆದ ಭಕ್ತರು!

Union Minister Pralhad Joshi election campaign in Sattur
ಕರ್ನಾಟಕ36 mins ago

Lok Sabha Election: 60 ವರ್ಷ ದೇಶವಾಳಿದ ನಕಲಿ ಗಾಂಧಿ ಕಂಪನಿಯಲ್ಲಿ ಪ್ರಧಾನಿ ಅಭ್ಯರ್ಥಿಗೆ ಬರ: ಜೋಶಿ ಲೇವಡಿ

IPL 2024
ಕ್ರೀಡೆ39 mins ago

IPL 2024: ನಾಯಕ ಹಾರ್ದಿಕ್​ ಪಾಂಡ್ಯ ಸೇರಿ ಮುಂಬೈ ತಂಡದ ಆಟಗಾರರಿಗೆ ಬಿತ್ತು ಭಾರೀ ದಂಡ

Salman Khan
ಸಿನಿಮಾ47 mins ago

Salman Khan: ಸಲ್ಮಾನ್‌ ಖಾನ್‌ ಮನೆ ಮೇಲೆ ಫೈರಿಂಗ್‌ ಕೇಸ್‌; ಪೊಲೀಸ್‌ ಕಸ್ಟಡಿಯಲ್ಲಿದ್ದ ಆರೋಪಿ ಆತ್ಮಹತ್ಯೆ

Hassan Pen Drive Case HDK behind Prajwal Pen Drive release DK Brothers allegations
ಹಾಸನ49 mins ago

Hassan Pen Drive Case: ಪ್ರಜ್ವಲ್‌ ಪೆನ್‌ಡ್ರೈವ್‌ ರಿಲೀಸ್‌ ಹಿಂದೆ ಎಚ್‌ಡಿಕೆ? ಡಿಕೆ ಬ್ರದರ್ಸ್‌ ಹೇಳಿದ ಸ್ಫೋಟಕ ಮಾಹಿತಿ ಏನು?

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

dina bhavishya read your daily horoscope predictions for April 30 2024
ಭವಿಷ್ಯ1 day ago

Dina Bhavishya: ಈ ರಾಶಿಗಳ ಉದ್ಯೋಗಿಗಳಿಗೆ ಇಂದು ಒತ್ತಡ ಹೆಚ್ಚಲಿದೆ!

PM Narendra modi in Bagalakote and Attack on Congress
Lok Sabha Election 20242 days ago

PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ: ಮೋದಿ ವಾಗ್ದಾಳಿ

PM Narendra modi in Bagalakote for Election Campaign and here is Live telecast
Lok Sabha Election 20242 days ago

PM Narendra Modi Live: ಇಂದು ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಲೈವ್‌ಗಾಗಿ ಇಲ್ಲಿ ವೀಕ್ಷಿಸಿ

dina bhavishya read your daily horoscope predictions for April 29 2024
ಭವಿಷ್ಯ2 days ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

Narendra Modi
Lok Sabha Election 20243 days ago

PM Narendra Modi: ಇವಿಎಂ ದೂರುವ ಕಾಂಗ್ರೆಸ್‌ಗೆ ಸೋಲಿನ ಭೀತಿ; ಕರ್ನಾಟಕದಲ್ಲಿ 1 ಸೀಟನ್ನೂ ಗೆಲ್ಲಲ್ಲವೆಂದ ಮೋದಿ!

PM Narendra Modi in Sirsi
Lok Sabha Election 20243 days ago

PM Narendra Modi: ಕಾಂಗ್ರೆಸ್ ರಾಮ ವಿರೋಧಿ; ಮನೆಗೆ ಹೋಗಿ ಕರೆದರೂ ಮಂದಿರ ಉದ್ಘಾಟನೆಗೆ ಬರಲಿಲ್ಲ: ಮೋದಿ ಟೀಕೆ

If Congress comes to power all your assets will belong to Government says PM Narendra Modi
Lok Sabha Election 20243 days ago

Narendra Modi: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನೀವು ಕಷ್ಟಪಟ್ಟು ಸಂಪಾದಿಸಿದ ಆಸ್ತಿಯೆಲ್ಲ ಅನ್ಯರ ಪಾಲು: ಮೋದಿ ಎಚ್ಚರಿಕೆ

Congress ties with Aurangzeb supporters and Girls killed under his rule says Narendra Modi
Lok Sabha Election 20243 days ago

Narendra Modi: ಔರಂಗಜೇಬ್ ಬೆಂಬಲಿಗರ ಜತೆ ಕಾಂಗ್ರೆಸ್ ದೋಸ್ತಿ; ಇವರ ಆಡಳಿತದಲ್ಲಿ ಹೆಣ್ಣು ಮಕ್ಕಳ ಹತ್ಯೆ: ಮೋದಿ ವಾಗ್ದಾಳಿ

Modi in Karnataka stay in Belagavi tomorrow and Huge gatherings at five places
Latest3 days ago

Narendra Modi Live : ಪ್ರಧಾನಿ ಮೋದಿಯ ಬೆಳಗಾವಿ ಪ್ರಚಾರ ಸಭೆಯ ನೇರ ಪ್ರಸಾರವನ್ನು ಇಲ್ಲಿ ವೀಕ್ಷಿಸಿ…

Dina Bhavishya
ಭವಿಷ್ಯ3 days ago

Dina Bhavishya : ಈ ರಾಶಿಯವರಿಗೆ ದಿನದ ಮಟ್ಟಿಗೆ ಖರ್ಚು ಹೆಚ್ಚು

ಟ್ರೆಂಡಿಂಗ್‌