Site icon Vistara News

ವಿಸ್ತಾರ ಸಂಪಾದಕೀಯ: ಆಹಾರ ಸುರಕ್ಷತೆಗಾಗಿ ನಿಷೇಧ ಆದೇಶ ಹೊರಡಿಸಿದರೆ ಸಾಕೆ?

Food Safety

Vistara Editorial: Prohibitory orders not enough for food safety

ಆಹಾರ ಪದಾರ್ಥಗಳಲ್ಲಿ ಲಿಕ್ವಿಡ್ ನೈಟ್ರೋಜನ್ (Liquid Nitrogen) ಬಳಕೆ ಮಾಡಿದರೆ 10 ಲಕ್ಷ ರೂ. ದಂಡ, ಜೀವಾವಧಿ ಶಿಕ್ಷೆ ವಿಧಿಸಲಾಗುತ್ತದೆ. ಈ ಸಂಬಂಧ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯು ಅಧಿಕೃತ ಆದೇಶ ಹೊರಡಿಸಿದೆ. ಇತ್ತೀಚೆಗಂತೂ ಆಹಾರ ಪದಾರ್ಥಗಳಲ್ಲಿ ಲಿಕ್ವಿಡ್ ನೈಟ್ರೋಜನ್ ಬಳಕೆ ಹೆಚ್ಚಾಗುತ್ತಿದೆ. ಜನರು ತಮಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ ಅಪಾಯದ ಬಾಗಿಲು ತಟ್ಟುತ್ತಿದ್ದಾರೆ. ಲಿಕ್ವಿಡ್ ನೈಟ್ರೋಜನ್ ಮೂಲಕ ಸ್ಮೋಕ್‌ ಐಸ್‌ಕ್ರೀಂ, ಸ್ಮೋಕ್‌ ಬಿಸ್ಕತ್ತು, ಬಿಯರ್‌ನಲ್ಲಿ ಬಳಸಲಾಗುತ್ತಿದ್ದು, ಇದು ಜೀವಕ್ಕೆ ಅಪಾಯವನ್ನುಂಟು ಮಾಡುತ್ತಿದೆ. ಸ್ಮೋಕಿಂಗ್ ಲಿಕ್ವಿಡ್ ನೈಟ್ರೋಜನ್ ಸೇವನೆ ಅಂಗಾಂಗಗಳ ಮೇಲೆ ದುಷ್ಪರಿಣಾಮ ಉಂಟು ಮಾಡುತ್ತದೆ. ಮುಖ್ಯವಾಗಿ ಲಿಕ್ವಿಡ್‌ ನೈಟ್ರೋಜನ್‌ ಸೇವನೆಯಿಂದ ಕರಳು, ಗಂಟಲುಗಳಲ್ಲಿ ಹುಣ್ಣಾಗುತ್ತಿದೆ. ಈ ಹಿನ್ನೆಲೆಯಲ್ಲಿ ಲಿಕ್ವಿಡ್ ನೈಟ್ರೋಜನ್ ಬಳಕೆ ನಿರ್ಬಂಧಿಸಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಆದೇಶ ಹೊರಡಿಸಿದೆ. ಇದು ಸ್ವಾಗತಾರ್ಹ ನಿರ್ಧಾರ.

ಕಲರ್ ಕಾಟನ್‌ ಕ್ಯಾಂಡಿ, ಗೋಬಿ ಮಂಚೂರಿಗೆ ಬಳಸುವ ಬಣ್ಣಗಳನ್ನು ಇತ್ತೀಚೆಗೆ ರಾಜ್ಯದಲ್ಲಿ ನಿಷೇಧಿಸಲಾಗಿದೆ. ಕಾಟನ್ ಕ್ಯಾಂಡಿಯಲ್ಲಿ ಪಿಂಕ್ ಕಲರ್ ಬರಲು ರೊಡಮೈನ್ ಬಿ ಬಳಸುತ್ತಾರೆ. ಗೋಬಿ ಮಂಚೂರಿಯಲ್ಲಿ ಟಾರ್ಟ್ರಾಸೈನ್ ಎಂಬ ಕೃತಕ ಬಣ್ಣಕಾರಕವನ್ನು ಬಳಸಲಾಗುತ್ತದೆ. ಕರ್ನಾಟಕ ರಾಜ್ಯ ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ವಿಭಾಗವು, ಕಾಟನ್‌ ಕ್ಯಾಂಡಿ ಮತ್ತು ಗೋಬಿ ಮಂಚೂರಿ ಮಾದರಿಯನ್ನು ಸಂಗ್ರಹಿಸಿತ್ತು. ಪರೀಕ್ಷೆಗೆ ಒಳಪಡಿಸಿದಾಗ ಇವುಗಳಲ್ಲಿ ಕೃತಕ ಬಣ್ಣಗಳ ಬಳಸಿರುವುದು ಪತ್ತೆಯಾಗಿದೆ. ಕಲಬೆರಕೆ ಕಲರ್ ಬಳಕೆ ಮತ್ತು ಕ್ಯಾನ್ಸರ್ ಕಾರಕ ಅಂಶಗಳು ಪತ್ತೆಯಾಗಿದೆ. ಇಂಥ ಆಹಾರ ಈಗ ನಿಷೇಧಿತ. ಇದನ್ನು ಉಲ್ಲಂಘಿಸಿದರೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ 2006ರ ಅಡಿಯಲ್ಲಿ 7 ವರ್ಷ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಜೊತೆಗೆ 10 ಲಕ್ಷ ರೂ. ವರೆಗೆ ದಂಡ ವಿಧಿಸಲಾಗುತ್ತದೆ.

ರೆಸ್ಟೋರಂಟ್‌ಗಳಲ್ಲಿ , ಬೀದಿ ಬದಿಯ ಸ್ಟಾಲ್‌ಗಳಲ್ಲಿ ಫುಡ್‌ ಪ್ರಿಯರನ್ನು ಆಕರ್ಷಿಸಲೆಂದೇ ಈ ಥರದ ಬಣ್ಣಗಳನ್ನು ಬಳಸುವುದು ರೂಢಿಯಾಗಿಬಿಟ್ಟಿದೆ. ಜನರೂ ಇದರ ಅಪಾಯದ ಅರಿವಿಲ್ಲದೆ ಬಳಸುತ್ತಲೇ ಇರುತ್ತಾರೆ. ಈ ನಡುವೆ ಚಿಕನ್‌ ಕಬಾಬ್‌ನಲ್ಲೂ ಕೆಲವರು ಬಣ್ಣಕಾರಕಗಳನ್ನು ಬಳಸುತ್ತಾರೆ. ಇದು ಕೂಡಾ ಅಪಾಯಕಾರಿ. ಆಹಾರ ಇಲಾಖೆಯ ಕಣ್ಣು ಇದರ ಮೇಲೂ ಬಿದ್ದಿದೆ. ಕಬಾಬ್ ಮಾದರಿಗಳನ್ನು ಸಂಗ್ರಹಿಸಲಾಗಿದೆ ಎಂದು ತಿಳಿದುಬಂದಿದೆ.

ಕಾನೂನುಗಳನ್ನೇನೋ ಮಾಡಬಹುದು. ಆದರೆ ಅನುಷ್ಠಾನದ ಕತೆಯೇನು? ನೋಟೀಸ್ ನೀಡಿ ಬಿಟ್ಟುಬಿಟ್ಟರೆ ಜನ ಬಣ್ಣದ ಬಳಕೆ ಬಿಡುತ್ತಾರೆಯೇ? ಬೀದಿ ಬೀದಿಗಳಲ್ಲಿ ಕಲರ್‌ಫುಲ್ ಕಾಟನ್ ಕ್ಯಾಂಡಿಗಳು ಹಾಗೂ ಗೋಬಿ ಮಂಚೂರಿ ಬಳಕೆ ನಡೆದೇ ಇದೆ. ಇದನ್ನು ತಡೆಗಟ್ಟಲು ಕಟ್ಟುನಿಟ್ಟಿನ ನಿಗಾ ವ್ಯವಸ್ಥೆ ಬೇಡವೇ?

1999ರಿಂದ 2016 ರವರೆಗೆ ಪ್ಲಾಸ್ಟಿಕ್ ನಿಷೇಧ ಕುರಿತು ಹಲವು ಕಾನೂನುಗಳು ಬಂದಿವೆ. ಆದರೆ, ಸಂಪೂರ್ಣವಾಗಿ ಬಳಕೆಯನ್ನು ನಿಲ್ಲಿಸಲು ಸಾಧ್ಯವಾಗಿಲ್ಲ. 2022ರ ಜುಲೈ 1ರಿಂದ ದೇಶದಾದ್ಯಂತ ಏಕ ಬಳಕೆಯ ಪ್ಲಾಸ್ಟಿಕ್ ಅನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಅದು ಆರೋಗ್ಯದ ಮೇಲೆ ಮಾಡುವ ದುಷ್ಪರಿಣಾಮದ ಜೊತೆಗೆ ಪರಿಸರದ ಮೇಲೆ ಮಾಡುವ ದಾಳಿಯೂ ಇದಕ್ಕೆ ಕಾರಣ. ಆದರೆ ಅದು ಕಟ್ಟುನಿಟ್ಟಾಗಿ ಜಾರಿಯಾದಂತಿಲ್ಲ. ಏಕಬಳಕೆ ಪ್ಲಾಸ್ಟಿಕ್ ಮುಂದುವರಿದಿರುವುದು ಕಾಣಿಸುತ್ತದೆ.

ಇದೆಲ್ಲದರ ಬಗ್ಗೆ ಕಾನೂನು ಮಾಡಿದರೆ ಸಾಲದು, ದೃಢವಾದ ಜಾರಿ ಮಾಡುವಿಕೆ ಇರಬೇಕು. ಸಾರ್ವಜನಿಕರು ಕೂಡ ಇದನ್ನು ಮನಗಂಡು, ಈ ಹಾನಿಕರ ವಸ್ತುಗಳಿಗೆ ಉತ್ತೇಜನ ನೀಡುವುದು ನಿಲ್ಲಿಸಬೇಕು. ಆಗ ಮಾತ್ರ ತಜ್ಞರ, ಆರೋಗ್ಯ ಇಲಾಖೆಯ ಕಳಕಳಿ ಸಾರ್ಥಕ ಆಗಬಹುದು.

ಇದನ್ನೂ ಓದಿ: Summer Food Tips: ಬೇಸಿಗೆಯಲ್ಲಿ ನಮ್ಮ ದೇಹವನ್ನು ತಂಪಾಗಿರಿಸುವ ಸರಳ ಆಹಾರಗಳಿವು!

Exit mobile version