ಧಾರ್ಮಿಕ ಸ್ವಾತಂತ್ರ್ಯದ ಕುರಿತು ಅಮೆರಿಕ ಸರ್ಕಾರದ ಕಮಿಷನ್ ಆನ್ ಇಂಟರ್‌ನ್ಯಾಷನಲ್ ರಿಲಿಜಿಯಸ್ ಫ್ರೀಡಂ (USCIRF Report) ವರದಿ ಬಿಡುಗಡೆ ಮಾಡಿದೆ. ಭಾರತ ಸೇರಿ 17 ದೇಶಗಳಲ್ಲಿ ಧಾರ್ಮಿಕ ಸ್ವಾತಂತ್ರ್ಯದ (Religious Freedom) ಕುರಿತು ಕಳವಳ ವ್ಯಕ್ತಪಡಿಸಿದೆ. “ಭಾರತ ಸೇರಿ 17 ದೇಶಗಳಲ್ಲಿ ಜನರು ತಮ್ಮ ಧರ್ಮವನ್ನು ಅನುಸರಿಸುವ, ಧಾರ್ಮಿಕ ವಿಚಾರಗಳ ಮೇಲೆ ನಂಬಿಕೆ ಇರಿಸುವ ಸ್ವಾತಂತ್ರ್ಯದ ಉಲ್ಲಂಘನೆಯಾಗುತ್ತಿದೆ. ಧಾರ್ಮಿಕ ಸ್ವಾತಂತ್ರ್ಯಕ್ಕೆ ಧಕ್ಕೆ ತರುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ. ಭಾರತದಲ್ಲಿ ರಾಷ್ಟ್ರೀಯವಾದಿ ನೀತಿಗಳ ಹೇರಿಕೆಯಿಂದಾಗಿ ಇತರ ಧರ್ಮಗಳಲ್ಲಿ ನಂಬಿಕೆ ಇಟ್ಟುಕೊಂಡವರಿಗೆ ಸಮಸ್ಯೆಯಾಗಿದೆ. ದ್ವೇಷ ಕಾರುವ ವಾಕ್ಚಾತುರ್ಯ, ಕೋಮುವಾದದಿಂದ ಕೂಡಿದ ಹಿಂಸಾಚಾರಗಳನ್ನು ನಿಯಂತ್ರಿಸುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ. ಇದು ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯಕ್ಕೆ ಧಕ್ಕೆ ತರುತ್ತಿರುವುದಕ್ಕೆ ಉದಾಹರಣೆಯಾಗಿದೆ” ಎಂದು ಹೇಳಿದೆ. ಇದಕ್ಕೆ ಭಾರತ ಸರ್ಕಾರ ತಿರುಗೇಟು ನೀಡಿದ್ದು, “ಯುಎಸ್‌ಸಿಐಆರ್‌ಎಫ್ ವರದಿಯು ಪಕ್ಷಪಾತ ಹಾಗೂ ರಾಜಕೀಯ ಪ್ರೇರಿತವಾಗಿ ತಯಾರಿಸಿದ್ದಾಗಿದೆ” ಎಂಬುದಾಗಿ ಅಸಮಾಧಾನ ವ್ಯಕ್ತಪಡಿಸಿದೆ. “ಇದಕ್ಕೂ ಮೊದಲು ಕೂಡ ಇಂತಹ ವರದಿಗಳನ್ನು ಅದು ಪ್ರಕಟಿಸಿತ್ತು. ಭಾರತದ ಕುರಿತು ಷಡ್ಯಂತ್ರದಿಂದ ಕೂಡಿದ ವರದಿ ಬಿಡುಗಡೆ ಮಾಡುವುದು ಅದಕ್ಕೆ ರೂಢಿಯೇ ಆಗಿದೆ. ಯುಎಸ್‌ಸಿಐಆರ್‌ಎಫ್ ವರದಿಯಲ್ಲಿ ಯಾವುದೇ ಹುರುಳಿಲ್ಲ” ಎಂದಿದೆ ಭಾರತ.
ಈ ವರದಿ ಯಾರೋ ಅಡ್ಡಕಸಬಿಗಳು ತಯಾರಿಸಿದ ವರದಿಯಂತೆ ಕಾಣಿಸುತ್ತಿದೆ. ಬಹುಶಃ ಅವರು ಭಾರತಕೆಕ ಬಂದು ಇಲ್ಲಿನ ಧಾರ್ಮಿಕ ಸಹಿಷ್ಣುತೆ, ಸಹಬಾಳ್ವೆ ಇತ್ಯಾದಿಗಳನ್ನು ನೋಡಿದ್ದರೆ ಇಂಥ ವರದಿ ತಯಾರಿಸುತ್ತಿರಲಿಲ್ಲ. ಭಾರತದಿಂದ ಆಚೆಗೆ ಕುಳಿತು ಭಾರತದ ವಿರುದ್ಧವೇ ಯುಟ್ಯೂಬ್ ವಿಡಿಯೋ ಮಾಡಿ ಬಿಡುವ ʼಬುದ್ಧಿವಂತʼರ ಮಾತುಗಳನ್ನು ಕೇಳಿಕೊಂಡು ಇದನ್ನು ತಯಾರಿಸಿದಂತೆ ಇದೆ. ಈ ವರದಿಯ ಅಕ್ಷರಕ್ಷರವೂ ಸುಳ್ಳು ಎಂಬುದಕ್ಕೆ ಸಾಕ್ಷಿಗಳನ್ನು ನೀಡಬಹುದು. ಸಿಪಿಎ (ಸೆಂಟರ್ ಫಾರ್ ಪಾಲಿಸಿ ಅನಾಲಿಸಿಸ್) ಎಂಬ ಜಾಗತಿಕ ಸಂಸ್ಥೆ ಕಳೆದ ವರ್ಷ ನೀಡಿರುವ ಜಾಗತಿಕ ವರದಿಯಲ್ಲಿ, ಜಗತ್ತಿನ ಇತರ ದೇಶಗಳಿಗೆ ಹೋಲಿಸಿದರೆ, ಅಲ್ಪಸಂಖ್ಯಾತರನ್ನು ಒಳಗೊಳ್ಳುವ ಕ್ರಮಗಳಲ್ಲಿ ಭಾರತ ನಂ.1 ಸ್ಥಾನದಲ್ಲಿದೆ ಎಂದು ಹೇಳಿದೆ. ಇದೊಂದು ಸ್ವತಂತ್ರ ಅಂತಾರಾಷ್ಟ್ರೀಯ ಸಂಸ್ಥೆ. 110 ರಾಷ್ಟ್ರಗಳಲ್ಲಿ ಸಮೀಕ್ಷೆ ನಡೆಸಿ ಆ ವರದಿ ನೀಡಿತ್ತು. ಭಾರತವೇ ಅಲ್ಪಸಂಖ್ಯಾತರಿಗೆ ಹೆಚ್ಚು ಸುರಕ್ಷಿತ ಜಾಗ. ಬೇರೆ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಅಲ್ಪಸಂಖ್ಯಾತರ ಮೇಲೆ ಯಾವುದೇ ನಿರ್ಬಂಧ ಇಲ್ಲ. ಭಾರತದ ಸಂವಿಧಾನವು ಸಂಸ್ಕೃತಿ ಮತ್ತು ಶಿಕ್ಷಣ ಎರಡರಲ್ಲೂ ಧಾರ್ಮಿಕ ಅಲ್ಪಸಂಖ್ಯಾತರನ್ನು ಪ್ರೋತ್ಸಾಹಿಸುವ ವಿಶಿಷ್ಟ, ವಿಶೇಷ ವಿಧಿಗಳನ್ನು ಹೊಂದಿದೆ ಎಂದೂ ಈ ವರದಿ ಉಲ್ಲೇಖಿಸಿದೆ. ಭಾರತದ ನಂತರದ 4 ಸ್ಥಾನಗಳಲ್ಲಿ ಪನಾಮಾ, ಜಪಾನ್, ದಕ್ಷಿಣ ಕೊರಿಯಾ ಮತ್ತು ನಂತರದ ಸ್ಥಾನದಲ್ಲಿ ಅಮೆರಿಕ ದೇಶ ಇದೆ. ಯುಎಸ್‌ಸಿಐಆರ್‌ಎಫ್ ಇದನ್ನು ಗಮನಿಸಿದಂತಿಲ್ಲ.
ನಮ್ಮ ದೇಶದಲ್ಲಿ ಆರು ಧರ್ಮಗಳ (ಮುಸ್ಲಿಂ, ಕ್ರೈಸ್ತ, ಸಿಖ್, ಜೈನ, ಬೌದ್ಧ, ಪಾರ್ಸಿ) ಅಲ್ಪಸಂಖ್ಯಾತರು ಒಟ್ಟಾಗಿ ಒಟ್ಟಾರೆ ಜನಸಂಖ್ಯೆಯ 19.3%ದಷ್ಟು ಇದ್ದಾರೆ. ಅಲ್ಪಸಂಖ್ಯಾತರ ಹಿತವನ್ನೂ ಬಹುಸಂಖ್ಯಾತರಂತೆಯೇ ಕಾಯಲು ನಮ್ಮ ಸಂವಿಧಾನದಲ್ಲೂ ʼಧರ್ಮನಿರಪೇಕ್ಷತೆʼಯನ್ನು ಸೇರಿಸಲಾಗಿದೆ. ಅಲ್ಪಸಂಖ್ಯಾತ ಹಿತಚಿಂತನೆ ನೋಡಿಕೊಳ್ಳುವುದಕ್ಕಾಗಿಯೇ ಕೇಂದ್ರದಲ್ಲಿ ʼಅಲ್ಪಸಂಖ್ಯಾತರ ವ್ಯವಹಾರಗಳ ಸಚಿವಾಲಯʼ ಇದೆ. ಈ ದೇಶದ ಮುಖ್ಯಮಂತ್ರಿ, ರಾಜ್ಯಪಾಲ, ರಾಷ್ಟ್ರಪತಿ ಹುದ್ದೆಯನ್ನೂ ಭಾರತೀಯ ಅಲ್ಪಸಂಖ್ಯಾತರು ಜನಮತದಿಂದಲೇ ಅಲಂಕರಿಸಿದ್ದಾರೆ. ಭಾರತದ ಜನಸಂಖ್ಯೆಯ ಸುಮಾರು 14%ದಷ್ಟು, ಅಂದರೆ 20 ಕೋಟಿ ಮಂದಿ ಮುಸ್ಲಿಮರು ಇಲ್ಲಿ ಇದ್ದಾರೆ. ಇದು ದೇಶದ ಎರಡನೇ ಅತಿ ದೊಡ್ಡ ಧಾರ್ಮಿಕ ಸಮುದಾಯ. ಇಂಡೋನೇಷ್ಯಾ ಹಾಗೂ ಪಾಕಿಸ್ತಾನದ ಬಳಿಕ ಅತಿ ಹೆಚ್ಚು ಮುಸ್ಲಿಮರು ಇರುವ ದೇಶ ಎಂದರೆ ಭಾರತ. ಇನ್ನುಳಿದ ಇಸ್ಲಾಮಿಕ್ ದೇಶಗಳೆನಿಸಿಕೊಂಡವು ಕೂಡ ಭಾರತದಷ್ಟು ಸಂಖ್ಯೆಯ ಮುಸ್ಲಿಮರನ್ನು ಹೊಂದಿಲ್ಲ. ಭಾರತದಲ್ಲಿ ಎರಡೂ ಧರ್ಮಗಳೂ ಸಾಕಷ್ಟು ಸಾಮರಸ್ಯದಿಂದ ಬಾಳುತ್ತಿವೆ. ಪಾಕಿಸ್ತಾನ, ಇರಾನ್ ಮುಂತಾದ ಅಪ್ಪಟ ಮುಸ್ಲಿಂ ದೇಶಗಳಿಗಿಂತ ಭಾರತೀಯ ಮುಸ್ಲಿಮರು ಹೆಚ್ಚು ಸ್ವಾತಂತ್ರ್ಯ ಮತ್ತು ಸೌಕರ್ಯ ಹೊಂದಿದ್ದಾರೆ. ಹಾಗೆ ನೋಡಿದರೆ ಮುಸ್ಲಿಂ ದೇಶಗಳಲ್ಲೇ ಮುಸ್ಲಿಮರು ಸುರಕ್ಷಿತವಾಗಿಲ್ಲ. ಪಾಕಿಸ್ತಾನ, ಆಫ್ಘಾನಿಸ್ತಾನದ ಮಸೀದಿಗಳಲ್ಲೇ ಬಾಂಬ್ ಇಟ್ಟು ಸ್ಫೋಟಿಸಲಾಗುತ್ತಿದೆ. ಅಲ್ಲಿಯ ಅಲ್ಪಸಂಖ್ಯಾತರು ನಿತ್ಯ ನರಕ ಯಾತನೆ ಅನುಭವಿಸುತ್ತಿದ್ದಾರೆ. ಈ ಸೋಗಲಾಡಿ ವರದಿ ಅದನ್ನೇನಾದರೂ ನೆನಪಿಸಿಕೊಂಡಿದೆಯೇ?
ಈ ವರದಿಯನ್ನು ಹೊರಡಿಸಿದ ಅಮೆರಿಕದ ಬುಡದಲ್ಲಿ ಏನಿದೆ ಎಂದು ಸ್ವಲ್ಪ ನೋಡೋಣ. ಅತಿ ಹಳೆಯ ಪ್ರಜಾಪ್ರಭುತ್ವ ದೇಶ ಎನಿಸಿಕೊಂಡ ಆ ದೇಶದಲ್ಲಿ ಇನ್ನೂವರೆಗೂ ಒಬ್ಬ ಮಹಿಳೆಯೂ ಅಧ್ಯಕ್ಷರಾಗಲು ಸಾಧ್ಯವಾಗಲಿಲ್ಲ. ಬರಾಕ್ ಒಬಾಮರಂಥ ಅಲ್ಪಸಂಖ್ಯಾತರು ಅಧ್ಯಕ್ಷರಾಗಲು ಹಲವು ಶತಮಾನಗಳೇ ಬೇಕಾಯಿತು. ಮಹಿಳೆಯರೂ ತಮ್ಮ ಮತದಾನದ ಹಕ್ಕನ್ನು ಪಡೆಯಲು ಬಡಿದಾಡಬೇಕಾಯಿತು. ಇನ್ನು ಅಲ್ಲಿನ ಆಫ್ರಿಕನ್ ಸಮುದಾಯ ಅನುಭವಿಸುತ್ತಿರುವ ಸಂಕಷ್ಟವನ್ನು ಹೇಳಬೇಕಾಗಿಯೇ ಇಲ್ಲ. ಇವರನ್ನು ಇಲ್ಲಿ ನೂರಾರು ವರ್ಷಗಳ ಕಾಲ ಜೀತದಾಳುಗಳಾಗಿ ದುಡಿಸಿಕೊಳ್ಳಲಾಗುತ್ತಿತ್ತು. ಇದನ್ನು ಹೋಗಲಾಡಿಸಲು ಲಿಂಕನ್‌ನಂಥ ಮುತ್ಸದ್ಧಿ ಬಲಿದಾನ ಮಾಡಬೇಕಾಯಿತು. ಈಗಲೂ ಅಲ್ಲಿ ಕರಿಯರ ಸಮುದಾಯದ ಮೇಲೆ ದೌರ್ಜನ್ಯ ನಡೆಯುತ್ತಲೇ ಇದೆ. ಇದನ್ನು ವಿರೋಧಿಸಿ ನಡೆಸಲಾಗುತ್ತಿರುವ ʼಬ್ಲ್ಯಾಕ್ ಲೈವ್ಸ್ ಮ್ಯಾಟರ್ʼ ಚಳವಳಿಯನ್ನೂ ಇಲ್ಲಿ ನೆನಪಿಸಿಕೊಳ್ಳಬಹುದು. ಇನ್ನು ಅಲ್ಲಿನ ಮೂಲವಾಸಿ ಅಮೆರಿಕನ್ ಸಮುದಾಯದವರನ್ನು ಯಾವ ರೀತಿ ನಿರ್ಮೂಲನ ಮಾಡಲಾಯಿತು ಎಂಬುದು ಚರಿತ್ರೆಯಲ್ಲಿ ಸೇರಿಹೋಗಿರುವ ಕರಾಳ ಅಧ್ಯಾಯಗಳಲ್ಲೊಂದು. ಇಂದು ಹುಡುಕಿದರೂ ಆ ಜನಾಂಗ ಅಲ್ಲಿ ಸಿಗುವುದಿಲ್ಲ. ಇನ್ನು ಮುಸ್ಲಿಮರ ವಿಷಯಕ್ಕೆ ಬಂದರೆ, 9/11 ಘಟನೆಯ ನಂತರ ಅಲ್ಲಿ ಪ್ರತಿಯೊಬ್ಬ ಮುಸ್ಲಿಮನನ್ನೂ ಶಂಕಿತ ಭಯೋತ್ಪಾದಕನಂತೆಯೇ ನೋಡಲಾಗುತ್ತದೆ. ಮುಸ್ಲಿಮರನ್ನು ಈ ಅನುಮಾನದಿಂದಾಗಿಯೇ ಅಲ್ಲಿನ ಸರ್ಕಾರಿ ಆಡಳಿತಾತ್ಮಕ ಹುದ್ದೆಗಳಲ್ಲಿ ಒಳಬಿಟ್ಟುಕೊಳ್ಳಲಾಗುತ್ತಿಲ್ಲ. ಇಂಥ ದೇಶ, ಭಾರತದಂಥ ʼವಸುಧೈವ ಕುಟುಂಬಕಂʼ ಮಂತ್ರವನ್ನು ಸಾರಿದ ಪುರಾತನ ಸಂಸ್ಕೃತಿಯ ದೇಶಕ್ಕೆ ಬುದ್ಧಿವಾದ ಹೇಳುವುದು ಒಂದು ಕೆಟ್ಟ ಜೋಕ್.
ಅಲ್ಪಸಂಖ್ಯಾತರಿಗೆ ಇಲ್ಲಿ ರಕ್ಷಣೆಯಿಲ್ಲ ಎಂದು ಹುಯಿಲೆಬ್ಬಿಸುವುದನ್ನೇ ಕಾಯಕ ಮಾಡಿಕೊಂಡ ಕೆಲವರು ಭಾರತದಲ್ಲೂ ಅಮೆರಿಕದಲ್ಲೂ ಇದ್ದಾರೆ. ಇದು ಅವರ ಹೊಟ್ಟೆಪಾಡು ಎಂದು ಸುಮ್ಮನಾಗವಂತೆಯೂ ಇಲ್ಲ. ಯಾಕೆಂದರೆ ಇವರು ಅಂತಾರಾಷ್ಟ್ರೀಯವಾಗಿ ನಮ್ಮ ಮುಖಕ್ಕೆ ಮಸಿ ಬಳಿಯಬಲ್ಲರು. ಇವರನ್ನು ಚೆನ್ನಾಗಿ ತರಾಟೆಗೆ ತೆಗೆದುಕೊಳ್ಳುವುದೇ ಸರಿಯಾದ ದಾರಿ. ಅಮೆರಿಕ ಇಂಥವರನ್ನು ಹತ್ತಿರಕ್ಕೂ ಬಿಟ್ಟುಕೊಳ್ಳಬಾರದು.
ಇದನ್ನೂ ಓದಿ: ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯದ ಕುರಿತು ಅಮೆರಿಕ ಕಳವಳ; ತಿರುಗೇಟು ಕೊಟ್ಟ ಕೇಂದ್ರ ಸರ್ಕಾರ