ಶೋಭಕೃತು ನಾಮ ಸಂವತ್ಸರ ಆರಂಭವಾಗಿದೆ (Ugadi Horoscope 2023). ಮುಂದಿನ ವರ್ಷದ ಅಂದರೆ 2024ರ ಏಪ್ರಿಲ್ 8ರ ವರೆಗೆ ಈ ಸಂವತ್ಸರ ಇರಲಿದೆ. ಈ ನವ ಸಂವತ್ಸರದಲ್ಲಿ ಶನಿ ಗ್ರಹವು ಯುಗಾದಿ ಆರಂಭದಿಂದ ಸಂವತ್ಸರದ ಅಂತ್ಯದ ತನಕ ಈಗಿರುವ ಕುಂಭ ರಾಶಿಯಲ್ಲಿಯೇ ಸಂಚಾರ ಮುಂದುವರಿಸಲಿದೆ. ಇನ್ನು ಗುರು ಗ್ರಹವು ಇದೇ ಏಪ್ರಿಲ್ 22 ತನಕ ಮೀನ ರಾಶಿಯಲ್ಲಿದ್ದು, ಏಪ್ರಿಲ್ 22 ನಂತರ ಈ ಸಂವತ್ಸರದ ಅಂತ್ಯದ ತನಕ ಮೇಷ ರಾಶಿಯಲ್ಲಿ ಸಂಚಾರ ನಡೆಸಲಿದೆ.
ಯುಗಾದಿ ಆರಂಭದಿಂದ ಅಕ್ಟೋಬರ್ 30ರವರೆಗೆ ರಾಹು ಮೇಷದಲ್ಲಿ, ತುಲಾದಲ್ಲಿ ಕೇತು ಇದ್ದು, ಅಕ್ಟೋಬರ್ 30 ರಿಂದ ಸಂವತ್ಸರದ ಕೊನೆ ತನಕ ಮೀನದಲ್ಲಿ ರಾಹು, ಕನ್ಯಾದಲ್ಲಿ ಕೇತು ಸಂಚಾರ ನಡೆಸಲಿವೆ. ಈ ಸಂವತ್ಸರದಲ್ಲಿ ಮೇಷದಿಂದ ಮೀನದ ತನಕ ದ್ವಾದಶ ರಾಶಿಗಳ ಗೋಚಾರ ಫಲ ಹೇಗಿರುತ್ತದೆ ಎಂಬುದನ್ನು ನೋಡೋಣ;
ಮೇಷ: ಸ್ವತಂತ್ರ ಗುರುವಿನಿಂದ ರಕ್ಷಣೆ
ಮೇಷ ರಾಶಿಯವರಿಗೆ ಗುರು ದ್ವಾದಶದಲ್ಲಿದ್ದು, ಏಕಾದಶ ಶನಿ ಇದ್ದಾನೆ. ಏಪ್ರಿಲ್ 21ನಂತರ ಗುರು ವೃಷಭಕ್ಕೆ ಹೋದಾಗ ಬೃಹಸ್ಪತಿ ಸಂಧಿ (ರಾಹು ದಶೆಯು ಮುಗಿದು ಗುರು ದಶೆಯು ಶುರುವಾಗಿದ್ದರಿಂದ ರಾಹು- ಬೃಹಸ್ಪತಿ ಸಂಧಿ) ಸಂಭವಿಸುತ್ತದೆ. ಈ ಸಂದರ್ಭದಲ್ಲಿ ನೀವು ಎಚ್ಚರ ವಹಿಸದಿದ್ದರೆ ಕಾರ್ಯದಲ್ಲಿ ಅಲ್ಪ ತೊಡಕು, ವಿಘ್ನ ಉಂಟಾಗುವ ಸಾಧ್ಯತೆ ಇರುತ್ತದೆ. ಮೇ15ರವರೆಗೂ ಎಚ್ಚರಿಕೆಯಿಂದ ಹೆಜ್ಜೆ ಹಾಕಿ. ಸ್ವತಂತ್ರ ಗುರುವು ನಿಮ್ಮನ್ನು ಸಂರಕ್ಷಣೆ ಮಾಡುತ್ತಾನೆ. ಮಾತಿನಲ್ಲಿ ಎಚ್ಚರ ಇರಲಿ. ಗುರು -ರಾಹುವಿಗಾಗಿ ನಾಡಿನ ಅತ್ಯಂತ ಪ್ರಸಿದ್ಧ ದೇವರಾದ ಕುಕ್ಕೆ ಸುಬ್ರಹ್ಮಣ್ಯನನ್ನು ಆರಾಧಿಸಿ ಬನ್ನಿ. ಈ ಸಂವತ್ಸರದಲ್ಲಿ ನೀವು ಸಮನಾದ ಶುಭ-ಅಶುಭ ಫಲಗಳನ್ನು ಪಡೆಯುತ್ತೀರಿ.
ವೃಷಭ: ಆರೋಗ್ಯದ ಕಡೆ ಗಮನ ನೀಡಿ
ಹತ್ತನೇಯ ಮನೆಯಲ್ಲಿ ಶನಿ ಇದ್ದಾನೆ. ದ್ವಾದಶಕ್ಕೆ ಗುರು ಏಪ್ರಿಲ್ 21ರಿಂದ ಬರುತ್ತಾನೆ. ಈ ಸಂದರ್ಭದಲ್ಲಿ ಸುಲಭ ನಡೆ ಇಲ್ಲ. ಎಚ್ಚರಿಕೆಯಿಂದ ಹೆಜ್ಜೆ ಹಾಕಬೇಕು. ಗುರುವಿನ ಗುಲಾಮರಾಗದೇ ನಿಮಗೆ ತೊಂದರೆ ತಪ್ಪದು. ಗುರು ಸಮಾನರಾದ ಮಾತಾಪಿತೃ ಹಾಗೂ ಗುರವರ್ಯರನ್ನು ಪೂಜಿಸಿ, ಅವರ ಮಾರ್ಗದರ್ಶನವನ್ನು ಅನುಸರಿಸಿ ನಡೆದರೆ ಒಳ್ಳೆಯದು. ದುರ್ಗೆಯನ್ನು ಪೂಜಿಸಿದರೆ ಸಮಾಧಾನವಾಗಿ ನಿಮ್ಮೆಲ್ಲ ಕಷ್ಟಗಳು ದೂರವಾಗುತ್ತವೆ. ಈ ಸಂವತ್ಸರದಲ್ಲಿ ನೀವು ಆರೋಗ್ಯದ ಕಡೆಗೆ ಹೆಚ್ಚಿನ ಗಮನ ನೀಡಬೇಕು. ಏಕೆಂದರೆ ಆರೋಗ್ಯಕ್ಕೆ ಹಾನಿಯಾಗುವ ಸಾಧ್ಯತೆ ಇರುತ್ತದೆ. ದುಷ್ಟರಿಂದ ದೂರವಿರಿ. ಹನ್ನೆರಡರಲ್ಲಿ ಸಂಚರಿಸುವ ರಾಹು, ಆರನೇ ಮನೆಯಲ್ಲಿ ಕೇತು ಆದಾಯ- ವ್ಯಯದ ವಿಷಯದಲ್ಲಿ ನಿಮ್ಮ ಲೆಕ್ಕಾಚಾರವನ್ನು ಬುಡಮೇಲು ಮಾಡಬಹುದು. ಕೊಲ್ಲೂರು ಮೂಕಾಂಬಿಕೆ, ಶೃಂಗೇರಿಯ ಶಾರದೆಯ ದರ್ಶನ ಮಾಡಿ, ಒಳ್ಳೆಯ ಫಲಗಳನ್ನು ಪಡೆಯಬಹುದು.
ಮಿಥುನ : ಸುಬ್ರಹ್ಮಣ್ಯನನ್ನು ಅನನ್ಯವಾಗಿ ಪ್ರಾರ್ಥಿಸಿ
ಎಂಟನೇ ಮನೆಯಲ್ಲಿ ಶನಿ ಹಾಗೂ ಹನ್ನೊಂದನೇ ಮನೆಯಲ್ಲಿ ಗುರು ಸಂಚಾರವಿರುತ್ತದೆ. ಏಕಾದಶದ ಗುರುವಿಗೆ ರಾಹು ಸಂಪರ್ಕವಿರುವುದರಿಂದ ಸದಾಕಲಾ ಸುಬ್ರಹ್ಮಣ್ಯನನ್ನು ಪ್ರಾರ್ಥಿಸುವುದರಿಂದ, ನಿಮ್ಮ ಬುದ್ಧಿಯನ್ನು ನೆಟ್ಟಗಿಟ್ಟು, ಆತನೇ ನಿಮಗೆ ಮಾರ್ಗದರ್ಶನ ನೀಡುತ್ತಾನೆ. ನಿಮ್ಮ ಕಷ್ಟಗಳನ್ನು ದೂರಮಾಡುತ್ತಾನೆ. ಹಾನಿಯುಂಟು ಮಾಡದ ವಿಷಯಗಳಲ್ಲಿ ಅನಾವಶ್ಯಕವಾಗಿ ನಿಮ್ಮ ತಲೆ ತೂರಿಸಲು ಹೋಗಬೇಡಿ. ನಿಮ್ಮೆಲ್ಲಾ ಕೆಲಸಗಳು ನಡೆಯ ಬೇಕಾದರೆ 11ರ ರಾಹುವಿಗಾಗಿ ಚಂಡಿಕಾ ಪರಮೇಶ್ವರಿಯನ್ನು ಪೂಜಿಸಿ. ಶತ್ರು ಕಾಟ ತಪ್ಪಿಸಲು ಭಗಳಮುಖಿ ಸಂದರ್ಶಿಸಿ. ಅಕ್ಟೋಬರ್ ತಿಂಗಳ ನಂತರದಲ್ಲಿ ರಾಹು ಹತ್ತನೇ ಮನೆಗೆ, ಕೇತು ನಾಲ್ಕನೇ ಮನೆಗೆ ಬರುತ್ತಾರೆ. ಆ ನಂತರ ಉದ್ಯೋಗದಲ್ಲಿ ಮತ್ತು ಕೆಲಸ ಕಾರ್ಯಗಳಲ್ಲಿ ಎಚ್ಚರಿಕೆ ವಹಿಸಿ.
ಕಟಕ: ದೇವತಾನುಗ್ರಹದಿಂದ ಮಾತ್ರ ಕಷ್ಟ ದೂರ
ಶನಿಯು ಎಂಟನೇ ಮನೆಯಲ್ಲಿ ಸಂಚರಿಸುವುದರಿಂದ ಹೆಚ್ಚಿನ ಎಚ್ಚರಿಕೆ ಅಗತ್ಯ. ಅಕ್ಟೋಬರ್ ತನಕ ರಾಹು ಹತ್ತನೇ ಮನೆಯಲ್ಲಿ, ಕೇತು ನಾಲ್ಕನೇ ಮನೆಯಲ್ಲಿ ಸಂಚರಿಸುವಾಗ ಉದ್ಯೋಗ ಸ್ಥಳದಲ್ಲಿ ಕೂಡ ನೀವು ಎಚ್ಚರಿಕೆ ವಹಿಸಬೇಕಾಗುತ್ತದೆ. ಸಂಸಾರದಲ್ಲಿ ಒಡಹುಟ್ಟಿದವರೊಂದಿಗೆ ಅಸಮಾಧನ ಉಂಟಾಗಲಿದೆ. ಇದು ನಿಮ್ಮ ಮೆದುಳಿಗೆ ಸಾಕಷ್ಟು ಕೆಲಸವನ್ನು ಕೊಡಲಿದೆ. ನಿಮ್ಮ ದೇವತಾನುಗ್ರಹದಿಂದ ನೀವು ನಿಮ್ಮೆಲ್ಲ ಕಷ್ಟಗಳಿಂದ ಪಾರಾಗಬಹುದು. ಒಂಬತ್ತರ ಗುರುವು ದಶಮಕ್ಕೆ ಬರುತ್ತಾನೆ. ಗುರು ಬಲವು ತಪ್ಪಿದ ಸಂದರ್ಭ ಇದಾಗಿದೆ. ಸಾಕ್ಷಾತ್ ಪಾರ್ವತಿ ಪರಮೇಶ್ವರರೇ ಗುರುವೆಂದು ಭಾವಿಸಿ, ಅವರನ್ನು ಪೂಜಿಸದೇ, ಹಿರಿಯರನ್ನು, ಮನೆಯ ಯಜಮಾನರನ್ನು ಕೇಳದೇ ಯಾವ ಕೆಲಸವನ್ನೂ ಮಾಡಬೇಡಿ. ಈ ಸಂವತ್ಸರದಲ್ಲಿ ಮನಸ್ಸನ್ನು ಶುದ್ಧವಾಗಿಟ್ಟುಕೊಳ್ಳಿ. ಸಂವತ್ಸರ ದೇವತೆಯಾದ ಕರ್ಕಾಟಕ ರಾಶಿಯಲ್ಲಿ ಜನಿಸಿದ ಶ್ರೀ ರಾಮಚಂದ್ರನನ್ನು ಪೂಜಿಸಿ, ಒಂದು ಸಂವತ್ಸರದ ಕಾಲ ಸುಂದರಕಾಂಡವನ್ನು ಪಾರಾಯಣ ಮಾಡಿ. ಜೀವನವನ್ನು ಜಯಿಸಿ, ಗುರುವು ಏಕದಶಕ್ಕೆ ಬಂದಾಗ ನಿಮ್ಮೆಲ್ಲ ಕೋರಿಕೆ ಈಡೇರಲಿದೆ.
ಸಿಂಹ: ಒಳ್ಳೆಯ ಹೆಸರು ಮಾಡುವ ಸಮಯ
ಏಳನೇ ಮನೆಯಲ್ಲಿ ಶನಿ ಸಂಚರಿಸುವಾಗ ನಿಮ್ಮ ಜೀವನವನ್ನು ದೇವರೇ ಪರೀಕ್ಷಿಸುತ್ತಿದ್ದಾನೆ ಎಂದು ಭಾವಿಸಬೇಕು. ಮಕ್ಕಳು ಪರೀಕ್ಷೆಗೆ ಓದುವಾಗ ಪಾಠವನ್ನು ಅರ್ಥೈಸಿಕೊಳ್ಳುವಂತೆ, ನೀವು ಜೀವನ ಪಾಠವನ್ನು ಅರ್ಥೈಸಿಕೊಂಡು, ಸನ್ನಿವೇಶ, ಸಂದರ್ಭಗಳಿಗೆ ತಕ್ಕಂತೆ, ವಿಚಾರ ಧಾರೆಗಳನ್ನು ಬದಲಾಯಿಸಿಕೊಂಡು, ಯಾರಿಗೂ ಹಾನಿಯಾಗದಂತೆ, ಯಾರ ಮನಸ್ಸಿಗೂ ನೋವುಂಟಾಗದಂತೆ ಮುನ್ನೆಡೆಯಬೇಕು. ಒಂಬತ್ತರ ಗುರುವು ಬಾಗಿಲು ತಟ್ಟಿ ಬಂದು ನಿಮಗೆ ಒಳ್ಳೆಯದನ್ನು ಮಾಡುತ್ತಾನೆ. ಒಂಬತ್ತನೇ ಮನೆಯಲ್ಲಿರುವ ರಾಹು ಮತ್ತು ಮೂರನೇ ಮನೆಯಲ್ಲಿರುವ ಕೇತು ಅಕ್ಟೋಬರ್ 30ರ ನಂತರ ನಿಮ್ಮೆಲ್ಲಾ ಕೆಲಸ ಕಾರ್ಯಗಳಲ್ಲಿ ಯಶಸ್ಸು, ಕೀರ್ತಿ ತರುತ್ತಾರೆ. ನೀವು ಒಳ್ಳೆಯ ಹೆಸರು ಸಂಪಾದನೆ ಮಾಡುವ ಕಾಲ ಈ ಸಂವತ್ಸರ. ಆರೋಗ್ಯದ ಕಡೆಗೆ ಹೆಚ್ಚು ಗಮನ ನೀಡಿ. ನಿತ್ಯವೂ ಸರಸ್ವತಿ ಪೂಜೆ, ಆರೋಗ್ಯಕ್ಕಾಗಿ ಶನಿ ಪ್ರಾರ್ಥನೆ ಇರಲಿ.
ಕನ್ಯಾ : ಶನಿಯಿಂದ ಸಂಪತ್ತು, ಸೌಕರ್ಯ ಲಭ್ಯ
ಇದೇ ಏಪ್ರಿಲ್‌ನಲ್ಲಿ ಅಷ್ಟಮಕ್ಕೆ ಬರುವ ಗುರುವು ರಾಹುವಿನ ಜತೆಗೂಡಿ, ನೀವು ಇದುವರೆಗೆ ಮಾಡಿದ ಪುಣ್ಯ-ಪಾಪಗಳಿಗೆ ತಕ್ಕ ಪ್ರತಿಫಲ ನೀಡುತ್ತಾರೆ. ʻಗುರುದ್ರೋಹಂ ಕುಲ ನಾಶನಂʼ ಎಂಬ ಮಾತಿನಂತೆ ನೀವು ಗುರುಗಳಿಗೆ ದ್ರೋಹ ಮಾಡಿದ್ದರೆ ಅದರ ಪರಿಣಾಮ ಎದುರಿಸಬೇಕಾಗುತ್ತದೆ. ಆರನೇ ಮನೆಯಲ್ಲಿರುವ ಶನಿಯು ನಿಮಗೆ ಈ ಸಂವತ್ಸರದಲ್ಲಿ ಸಾಕಷ್ಟು ಸಂಪತ್ತು, ಸೌಕಯರ್ಯಗಳನ್ನು ಒದಗಿಸುತ್ತಾನೆ. ಆದರೆ ನಿಮಗೆ ಶಾಶ್ವತವಾಗಿ ಇವೆಲ್ಲವೂ ದೊರೆಯಬೇಕಾದರೆ ಗುರು ವೊಬ್ಬನೇ ಕಾರಣಕರ್ತನು. ಅವನ ಕೃಪೆ ಇರಲೇಬೇಕು. ಗುರು ರಾಹು ಸಂಪರ್ಕದಿಂದ ಜಟರದಲ್ಲಿ ತೊಂದರೆ ಕಾಣಿಸಿಕೊಳ್ಳಬಹುದು. ಸೂಕ್ತ ವೈದ್ಯರ ಮಾರ್ಗದರ್ಶನ ಪಡೆದು ಮುಂದುವರಿಯಿರಿ. ಅಷ್ಟಮ ಗುರುವು ಆರೋಗ್ಯ ದೃಷ್ಟಿಯಿಂದ ಹಿತಕರ ಸೂಚನೆ ಕೊಡುವುದಿಲ್ಲ. ಹೀಗಾಗಿ ಶ್ರೀ ಗುರು ದತ್ತಾತ್ರೇಯನನ್ನು, ನಂಜನ ಗೂಡಿನ ಶ್ರೀ ನಂಜುಂಡೇಶ್ವರನನ್ನು ಅನನ್ಯವಾಗಿ ಪೂಜಿಸಿ.
ತುಲಾ: ಮಾತಿನ ಮೇಲೆ ಹಿಡಿತವಿರಲಿ
ರಾಶಿಯವರಿಗೆ ಸಪ್ತಮದಲ್ಲಿ ಗುರು ಹಾಗೂ ಪಂಚಮದಲ್ಲಿ ಶನಿ ಇರುತ್ತಾರೆ. ಸ್ವಕ್ಷೇತ್ರದಲ್ಲಿ ಶನಿ ಇದ್ದಾನೆ. ತುಲಾ ರಾಶಿಯ ಅಧಿಪತಿಯ ಕಾರಣಕ್ಕೆ ಆತ ಕಷ್ಟಕಾರ್ಪಣ್ಯಗಳನ್ನು ನೀಡುವುದಿಲ್ಲ. ಸಂತೋಷವನ್ನು, ಅದ್ಭುತವಾದ ವಿಚಾರಗಳಲ್ಲಿ ಜಯವನ್ನು ಹಾಗೂ ಅದ್ದೂರಿಯಾದ ಜೀವನವನ್ನು ಕೊಟ್ಟು ಸಹಕರಿಸುತ್ತಾನೆ. ಜನ್ಮ ರಾಶಿಯಲ್ಲಿಯೇ ಕೇತು ಇರುವುದರಿಂದ ನಿಮ್ಮ ಮಾತು ಹರಿತವಾದ ಚಾಕುವಿನಂತಹ ಆಯುಧವಾಗದಿರಲಿ. ಮಾತಿನ ಮೇಲೆ ಹಿಡಿತವಿರಲಿ. ಸೌಮ್ಯತೆಯಿಂದ ಕೂಡಿರಲಿ. ಮಾತಿನಿಂದ ಯಾರನ್ನೂ ಗೆಲ್ಲಬಹುದು. ಅದೇ ನಿಮ್ಮ ಜೀವನದ ಅಡಿಪಾಯವಾಗಿರಲಿ. ಗುರುವು ಕನ್ಯಾ ರಾಶಿಗೆ ಹೋದ ಮೇಲೆ ಸ್ವತಂತ್ರ ಗುರುವು ನಿಮ್ಮ ಜೀವನದಲ್ಲಿ ಮತ್ತಷ್ಟು ಶೋಭೆಯನ್ನು, ಲಾಭವನ್ನು, ಧೈರ್ಯವನ್ನು, ಕೀರ್ತಿಯನ್ನು ತಂದುಕೊಂಡುತ್ತಾನೆ. ನೆನಪಿರಲಿ ನಿಮ್ಮದು ತಕ್ಕಡಿಯ ರಾಶಿ. ನಿಮ್ಮ ತುಲಭಾರ ಮಾಡುವವರು ಪರಮಾತ್ಮನ ಸ್ವರೂಪಿಯಾದ ನಿಮ್ಮ ತಂದೆ-ತಾಯಿಯರು. ಅವರನ್ನು ಅನುಗ್ರಹವನ್ನು, ಆಶೀರ್ವಾದವನ್ನು ಪಡೆದರೆ, ಜಗತ್ತನ್ನೇ ಗೆದ್ದು, ಕೀರ್ತಿವಂತರಾಗಿ ಬದುಕಬಹುದು. ಕೋರ್ಟ್, ಕಚೇರಿ, ವ್ಯವಹಾರ, ಸಂಧಾನ ಎಲ್ಲದರಲ್ಲಿಯೂ ನಿಮಗೆ ಜಯ ಸಿಗುತ್ತದೆ.
ವೃಶ್ಚಿಕ : ಭಕ್ತಿಯಿಂದ ಜೀವನ ಗೆಲ್ಲಿ!
ಈ ಸಂವತ್ಸರದಲ್ಲಿ ನಾಲ್ಕರಲ್ಲಿ ಶನಿ ಸಂಚಾರ ಇರುತ್ತದೆ. ಹಾಗೆಯೇ ಸಂವತ್ಸರದ ಆರಂಭದಲ್ಲಿ ಗುರು ಬಲವು ಸಂಪೂರ್ಣವಾಗಿದ್ದು, ಅದೃಷ್ಟವನ್ನು ನೀಡುತ್ತಾನೆ. ಸರಿಯಾದ ಪ್ರಯತ್ನವನ್ನು ಮಾಡಿದಲ್ಲಿ, ಸರಿಯಾದ ಮಾರ್ಗದಲ್ಲಿ ಹೋದರೆ ಏನನ್ನು ಬೇಕಾದರೂ ಸಾಧಿಸಬಹುದು. ಪರಮಾತ್ಮನು ಕಣ್ಣು ಬಿಟ್ಟರೆ ಒಂದೇ ಕ್ಷಣದಲ್ಲಿ ನಿಮ್ಮ ಜೀವನದಲ್ಲಿ ಯಾವ ರೀತಿಯ ಬದಲಾವಣೆಯನ್ನಾದರೂ ತರಬಲ್ಲನು. ಭಕ್ತಿಯೊಂದಿದ್ದರೆ ಜೀವನವನ್ನೇ ಗೆಲ್ಲಬಹುದು. ಶತ್ರುಗಳನ್ನು ಕೂಡ ಗೆದ್ದು ಯಶಸ್ಸಿನ ಮೆಟ್ಟಿಲೇರಹುದು. ಏಪ್ರಿಲ್ 21 ರ ನಂತರ ಗುರುವು ಆರನೇ ಮನೆಯಲ್ಲಿ ಸಂಚಾರ ನಡೆಸಲಿದ್ದು, ಈ ಸಂದರ್ಭದಲ್ಲಿ ಉದ್ಯೋಗದಲ್ಲಿ, ವ್ಯವಹಾರದಲ್ಲಿ ಎಚ್ಚರಿಕೆ ವಹಿಸಬೇಕಿರುತ್ತದೆ. ಹನ್ನೆರಡನೇ ಮನೆ ಕೇತು ವ್ಯಯಕ್ಕೆ ಕಾರಣನಾದರೂ ದೈವ ಭಕ್ತಿಯನ್ನು ಮೂಡಿಸುತ್ತಾನೆ. ನಾಲ್ಕನೆ ಮನೆಯ ಶನಿ ಸಂಚಾರದಿಂದಾಗಿ ಆರೋಗ್ಯದಲ್ಲಿ ಏರು ಪೇರು ಉಂಟಾಗಬಹುದು. ಆದರೆ ಶುದ್ಧ ಮನಸ್ಸು ನೀಡುತ್ತಾನೆ. ಒಟ್ಟಾರೆಯಾಗಿ ಈ ಸಂವತ್ಸರದಲ್ಲಿ ಈ ರಾಶಿಯವರಿಗೆ ಶೇ. 50 ರಷ್ಟು ಶುಭ ಫಲವಿದ್ದರೆ, ಶೇ. 50ರಷ್ಟು ಅಶುಭ ಫಲಗಳನ್ನು ಕಾಣಬಹುದು.
ಧನಸ್ಸು: ಸುಖ ಸಂತೋಷದ ಸಮಯ
ಏಳೂವರೆ ವರ್ಷ ನಿಮ್ಮನ್ನು ಕಾಡಿದ ಸಾಡೇಸಾತ್ ಶನಿ ದೋಷವು ಸಂಪೂರ್ಣವಾಗಿ ನಿಮ್ಮಿಂದ ದೂರವಾಗುವ ಸಮಯ ಇದು. ಈ ಸಂವತ್ಸರದಲ್ಲಿ ಮೂರನೇ ರಾಶಿಯಲ್ಲಿ ಶನಿ ಸಂಚಾರ ಇರಲಿದೆ. ಹೀಗಾಗಿ ಆರ್ಥಿಕವಾಗಿ ಒಳ್ಳೆಯ ಫಲಗಳನ್ನು ನೀವು ಪಡೆದುಕೊಳ್ಳಬಹುದು. ಹೊಸ ವ್ಯಾಪಾರ-ವ್ಯವಹಾರ ಶುರು ಮಾಡಬಹುದು. ಗುರುವು ಸಂವತ್ಸರದ ಮೊದಲ ಒಂದು ತಿಂಗಳು, ಮೀನಾ ರಾಶಿಯಲ್ಲಿರುವಾಗ ಮನೆ ಕಟ್ಟುವ, ವಾಹನ ಕೊಳ್ಳುವ ಯೋಗವಿದೆ. ಏಪ್ರಿಲ್‌ನಲ್ಲಿ ಗುರುವು ಐದನೇ ಮನೆಗೆ ಹೋಗುತ್ತಾನೆ. ಆಗಲೂ ನಿಮಗೆ ಲಾಭದ ಸಂದರ್ಭವಿದೆ. ಈ ಸಂವತ್ಸರದಲ್ಲಿ ನೀವು ಸುಖ-ಸಂತೋಷವನ್ನು ಕಾಣಬಹುದು. ನಿಮಗೆ ಅಕಸ್ಮಿಕವಾಗಿ ಧನಲಾಭವಾದರೆ ಆರ್ಥಿಕ ವಿಷಯದಲ್ಲಿ ಮಿಂಚಿನಂತೆ ಓಡುವ ಕಾಲವಿದು.
ಮಕರ: ಪಾಪ-ಪುಣ್ಯಗಳಿಗೆ ತಕ್ಕ ಫಲ
ಈ ಸಂವತ್ಸರದಲ್ಲಿ ಕುಂಭದಲ್ಲಿನ ಶನಿ ಎರಡನೇ ಮನೆಯಲ್ಲಿ ಹಾಗೂ ಯುಗಾದಿಯಿಂದ ಒಂದು ತಿಂಗಳ ತನಕ ಗುರು ಮೂರನೇ ಮನೆಯಲ್ಲಿ ಮತ್ತು ಆ ನಂತರ ಸಂವತ್ಸರದ ಕೊನೆಯ ತನಕ ನಾಲ್ಕನೇ ಮನೆಯಲ್ಲಿ ಸಂಚಾರ ಮಾಡಲಿವೆ. ಸಾಡೇಸಾತಿ ಶನಿ ಸಂಚಾರವು ಕೊನೆಯ ಹಂತದಲ್ಲಿದ್ದು, ನಿಮ್ಮನ್ನು ಬಿಡುವ ಕಾಲ ಇದು. ನಾವು ಮಾಡಿದ ಪಾಪ-ಪುಣ್ಯಗಳಿಗೆ ತಕ್ಕ ಪ್ರತಿಫಲವನ್ನು ಪಡೆಯುತ್ತೇವೆ. ನೀವು ವ್ಯಾಕುಲ ಬುದ್ಧಿಯನ್ನು ಬಿಟ್ಟು, ಮನಸ್ಸನ್ನು ಬಿಗಿಯಾಗಿ ಹತೋಟಿಯಲ್ಲಿಟ್ಟುಕೊಂಡರೆ ಅಂದುಕೊಂಡಿದ್ದನ್ನು ಸಾಧಿಸಬಹುದು. ನಾಲ್ಕನೇ ಮನೆಯಲ್ಲಿ ಗುರುವಿನೊಂದಿಗೆ ರಾಹು ಕೂಡ ಇರುವುದು ಅಷ್ಟು ಶುಭಕರವಲ್ಲ. ಹೀಗಾಗಿ ಗುರು ದಕ್ಷಿಣಾಮೂರ್ತಿಯನ್ನು ಪೂಜಿಸಿ. ಪ್ರತಿ ಗುರುವಾರ ಕಡಲೆಬೆಳೆಯನ್ನು ದಾನ ಮಾಡಿ. ಸಾಧ್ಯವಾಗದೇ ಇದ್ದರೆ, ಕಡಲೆಬೆಳೆಯ ಕೋಸಂಬರಿ ಮಾಡಿ ದೇವರಿಗೆ ನೈವೇದ್ಯ ಮಾಡಿ, ಸುಖವನ್ನು ಕಾಣಬಹುದು. ನೀವು ಕಷ್ಟಪಡುತ್ತಿರುವ ಕೆಲವು ಕೆಲಸಗಳು ತನ್ನಿಂದ ತಾನೇ ವೇಗವನ್ನು ಪಡೆದು, ಮುಕ್ತಾಯದ ಹಂತಕ್ಕೆ ಬರುತ್ತವೆ. ಹತ್ತನೇ ಮನೆಯಲ್ಲಿ ಕೇತು ಇರುವುದರಿಂದ ಉದ್ಯೋಗ, ವ್ಯಾಪಾರ, ವಹಿವಾಟುಗಳಲ್ಲಿ ನೀವು ನಿರೀಕ್ಷೆ ಮಾಡಿರಿದ ತಿರುವುಗಳನ್ನು ಎದುರಿಸಬೇಕಾಗಿ ಬರಬಹುದು.
ಭವಿಷ್ಯ ಮತ್ತು ಜ್ಯೋತಿಷ್ಯಕ್ಕೆ ಸಂಬಂಧಿಸಿದ ಲೇಖನ/ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ (Click Here) ಮಾಡಿ
ಕುಂಭ : ಗುರು ಚರಿತ್ರೆಯ ಪಾರಾಯಣ ಮಾಡಿ
ಈ ಸಂವತ್ಸರದಲ್ಲಿ ದ್ವಾದಶದಿಂದ ಜನ್ಮ ರಾಶಿಗೆ, ಸ್ವಕ್ಷೇತ್ರಕ್ಕೆ ಶನಿ ಗ್ರಹವು ಬಂದಿರುವುದರಿಂದ ಸಾಡೇಸಾತ್ ಎರಡನೇ ಹಂತವು ಆರಂಭ ಆಗುತ್ತದೆ. ಎರಡರಲ್ಲಿರುವ ಗುರು ಶನಿಯ ಈ ಸಂಚಾರದಿಂದ ಯಾವುದೇ ರೀತಿಯ ತೊಂದರೆಯಾಗದಂತೆ ನಿಮ್ಮನ್ನು ಸಂರಕ್ಷಿಸಿದ್ದಾನೆ. ಏಪ್ರಿಲ್‌ನಲ್ಲಿ ಗುರುವು ಮೂರನೇ ಮನೆಗೆ ಸಂಚಾರ ನಡೆಸಿ, ಅಲ್ಲಿ ರಾಹು ಸಂಪರ್ಕಕ್ಕೆ ಬಂದನಂತರ ನಿಮಗೆ ಗುರುಬಲವು ತನ್ನಿಂದ ತಾನೇ ಕುಗ್ಗುತ್ತದೆ. ಈ ಸಂವತ್ಸರದಲ್ಲಿ ನೀವು ಗುರು ಚರಿತ್ರೆಯ 14 ಮತ್ತು 18 ನೇ ಅಧ್ಯಯನವನ್ನು ನಿತ್ಯ ಪರಾಯಣ ಮಾಡುವುದರಿಂದ ಶನಿಯ ಅವಕೃಪೆಯಿಂದ ಪಾರಾಗಬಹದು ಹಾಗೂ ದೈವಕೃಪೆಯೂ ದೊರೆಯುತ್ತದೆ. ನಿಮಗೆ ರಕ್ಷಣೆ ದೊರೆಯುತ್ತದೆ. ಅಧಿಕವಾದ ವೆಚ್ಚಗಳನ್ನು ಮಾಡಿ, ಮನೆ ಇತ್ಯಾದಿ ವ್ಯಪಾರಗಳಲ್ಲಿ ಹಣವನ್ನು ಹೂಡದೇ ಜೋಪಾನವಾಗಿ ಸಾಗಿರಿ. ಒಂಬತ್ತರ ಕೇತುವಿನಿಂದಾಗಿ ಅಕ್ಟೋಬರ್ ನಂತರದಲ್ಲಿ ಎಷ್ಟೇ ಹಣ ಬಂದರೂ ಉಳಿತಾಯ ಮಾಡಲಾಗದು. ಇಡೀ ಸಂವತ್ಸರದಲ್ಲಿ ಆಂಜನೇಯನನ್ನು ಪೂಜಿಸಿ.
ಮೀನ: ಮೊಂಡುತನ ಬಿಟ್ಟರೆ ಗೆಲ್ಲಬಹುದು!
ಶನಿ ಸಂಚಾರ ನಿಮ್ಮ ವ್ಯಯ ಸ್ಥಾನದಲ್ಲಿ, ಅಂದರೆ ಹನ್ನೆರಡನೇ ಮನೆಯಲ್ಲಿ ಇರಲಿದೆ. ಸಂವತ್ಸರದ ಮೊದಲ ಒಂದು ತಿಂಗಳ ನಂತರ ಗುರುವು ದ್ವಿತೀಯಕ್ಕೆ ಬರುತ್ತಾನೆ. ಆ ನಂತರ ನಿಮಗೆ ಗುರುಬಲವು ಚೆನ್ನಾಗಿದ್ದರೂ, ನಿಮ್ಮ ಕೆಟ್ಟ ಸ್ವಭಾವ, ಮೊಂಡುತನವನ್ನು ಬಿಡಬೇಕು. ನಾನು ಹೇಳಿದಂತೆಯೇ ಎಲ್ಲವೂ ನಡೆಯಬೇಕು ಎಂಬುದನ್ನು ಬಿಟ್ಟು ಎಲ್ಲರ ಅಭಿಪ್ರಾಯಗಳಿಗೆ ಗೌರವ ನೀಡಿದರೆ ಗುರುವು ನಿಮ್ಮನ್ನು ಮುನ್ನೆಡೆಸುತ್ತಾನೆ. ಗುರುವಿಗೆ ರಾಹುವಿನಿಂದ ಗ್ರಹಣ ಉಂಟಾಗಿ, ರಾಹು-ಬೃಹಸ್ಪತಿ ಸಂಧಿಕಾಲದಲ್ಲಿ ಸಿಕ್ಕಿಹಾಕಿಕೊಂಡು ಪರಿಪೂರ್ಣವಾದ ಯಾವ ಕೆಲಸವನ್ನೂ ಮಾಡುವುದಿಲ್ಲ. ಆರೋಗ್ಯಕ್ಕೂ ತೊಂದರೆ ಇಲ್ಲ. ಆದರೆ ವಿಶಾಲವಾದ ಮನಸ್ಸಿರಬೇಕು, ದೇವತಾರಾಧನೆಯಿರಬೇಕು, ನೀವು ಈವರೆಗೆ ಮಾಡಿದ ತಪ್ಪುಗಳನ್ನು ತಿದ್ದುಕೊಂಡಲ್ಲಿ ಎರಡನೇ ಗುರುವು ನಿಮ್ಮನ್ನು ಇಡೀ ಸಂವತ್ಸರ ಸಂರಕ್ಷಿಸುತ್ತಾನೆ. ರಾಹುಗೆ ಸುಬ್ರಹ್ಮಣ್ಯ ದೇವರನ್ನು ಪೂಜಿಸಿ, ಗುರು ಮೇಷರಾಶಿಯಲ್ಲಿರುವುದರಿಂದ ಈಶ್ವರನ ಪುತ್ರನಾದ ಷಣ್ಮುಖನನ್ನು ಪ್ರಾರ್ಥಿಸಿದರೆ ಎಲ್ಲವೂ ಕೈ ಸೇರಿ ಸಂತೋಷ ಉಂಟಾಗುತ್ತದೆ.
ನಮ್ಮ ಆರಾಧ್ಯದೈವ ಸುಬ್ರಹ್ಮಣ್ಯ ದೇವರನ್ನು ಪ್ರಾರ್ಥಿಸಿ, ಶ್ರೀ ಗುರು ದತ್ತತ್ರೇಯ ದೇವರಿಗೆ ನಮಿಸಿ, ನಮ್ಮ ಕುಲಗುರುಗಳಾದ ಜಗದ್ಗುರು ಶ್ರೀ ಶ್ರೀ ಭಾರತೀತೀರ್ಥ ಮಹಾಸ್ವಾಮಿಗಳು, ಜಗದ್ಗುರು ಶ್ರೀ ಶ್ರೀ ವಿಧುಶೇಖರ ಭಾರತೀ ಮಹಾಸ್ವಾಮಿಗಳಿಗೆ ವಂದಿಸಿ ಈ ರಾಶಿ ಫಲವನ್ನು ಇಲ್ಲಿ ದಾಖಲಿಸಿದ್ದೇನೆ.
ಎಲ್ಲರಿಗೂ ಈ ನವ ಸಂತ್ಸರವು ಶುಭವನ್ನು, ಸುಖವನ್ನು, ಸಂಭ್ರಮವನ್ನು ಎಲ್ಲದಕ್ಕಿಂತ ಮುಖ್ಯವಾಗಿ ಆರೋಗ್ಯವನ್ನು ಕೊಡಲಿ ಎಂದು ಪ್ರಾರ್ಥಿಸುತ್ತೇನೆ.
ಇದನ್ನೂ ಓದಿ: Ugadi 2023 : ಜಗದ ಆದಿ ಈ ಯುಗಾದಿ!