Site icon Vistara News

Bhanu Saptami 2023 : ಇಂದು ವೈವಸ್ವತ ಸಪ್ತಮಿ, ಭಾನು ಸಪ್ತಮಿ; ಬಹಳ ವಿಶೇಷವಾದ ದಿನ ಏಕೆ?

Bhanu Saptami 2023

#image_title

ವಿದ್ವಾನ್ ಶ್ರೀ ನವೀನಶಾಸ್ತ್ರಿ ರಾ. ಪುರಾಣಿಕ
ಭಾರತೀಯ ಪ್ರಾಚೀನ ಋಷಿಪರಂಪರೆಯಲ್ಲಿ ಸಮಸ್ತ ಮನುಕುಲದ ಕಲ್ಯಾಣಕ್ಕಾಗಿ ಅನೇಕ ವ್ರತಗಳ ಬಗ್ಗೆ, ವಿಶೇಷ ಆಚರಣೆಗಳ ಬಗ್ಗೆ ಹೇಳಲಾಗಿದೆ. ಅವುಗಳಲ್ಲಿ ವಿವಸ್ವಾನ್ ಸಪ್ತಮಿ (Vivasvat Saptami 2023) ಅಥವಾ ವೈವಸ್ವತ ಸಪ್ತಮಿ ಕೂಡ ಒಂದು. ಇಂದು ಎಂದರೆ ಆಷಾಢ-ಶುಕ್ಲ-ಸಪ್ತಮಿಯ ದಿನವಾದ ಈ ಭಾನುವಾರ (ಜೂನ್ 25) (Bhanu Saptami 2023) ವಿವಸ್ವಾನ್ ಸಪ್ತಮಿ ಎಂದು ಆಚರಿಸಲ್ಪಡುತ್ತಿದೆ. ಇಂದು ಅನೇಕ ಮಹಾಯೋಗಗಳು ಕೂಡಿ ಬಂದಿದ್ದು ವಿಶೇಷವಾಗಿದೆ.

ಮೊದಲನೆಯದಾಗಿ ಪೂರ್ವಾ ನಕ್ಷತ್ರದಿಂದ ಯುಕ್ತವಾದ ಸಪ್ತಮೀ ಇರುವ ಕಾರಣ ಈ ದಿನ ವಿವಸ್ವಾನ್ ಸಪ್ತಮಿಯ ದಿನವಾಗಿದ್ದು ವಿಶೇಷತೆ ಪಡೆದಿದೆ. ಎರಡನೆಯದಾಗಿ ಭಾನುವಾರ ಸಪ್ತಮೀ (Bhanu Saptami 2023) ಇರುವ ಕಾರಣ ಭಾನು ಸಪ್ತಮೀಯಾಗಿದೆ. ಮೂರನೆಯದಾಗಿ, ವ್ಯತೀಪಾತ ಯೋಗದಿಂದ ಯುಕ್ತವಾದ ಸಪ್ತಮಿ ಇರುವ ಕಾರಣ, ʻಪಾತಾರ್ಕ ಯೋಗʼ ಇಂದು ಸೃಷ್ಟಿಯಾಗಿದೆ. ಈ ಪಾತಾರ್ಕ ಯೋಗ ಮಹಾ ಪರ್ವವು ಬಹಳ ವಿರಳವಾಗಿರುವುದರಿಂದ ಈ ದಿನ ಬಹಳ ವಿಶೇಷವಾದದ್ದು.

ಈ ಪಾತಾರ್ಕ ಯೋಗಕ್ಕೆ ಸಾವಿರ ಸೂರ್ಯಗ್ರಹಣದ ಫಲವನ್ನು ಕೊಡುವಂಥ ಶಕ್ತಿಯಿದೆ ಎಂದು ಜ್ಯೋತಿಷ ಶಾಸ್ತ್ರದಲ್ಲಿ ಹೇಳಲಾಗಿದೆ.
ಭಾನೋರ್ವಾರ ವ್ಯತೀಪಾತ ಯೋಗಃ ಸಂಪದ್ಯತೆ ಯದಿ,
ತದಾ ಪಾತಾರ್ಕ ಯೊಗೋಯಂ ಸಹಸ್ರಾರ್ಕಗ್ರಹೈಃ ಸಮಃ
(ವ್ರತನಿರ್ಣಯಕಲ್ಪವಲ್ಲಿ,)
ವಿಶೇಷವಾಗಿ ಈ ದಿನದಂದು ಸೂರ್ಯಭಗವಂತನಿಗೆ ಪ್ರೀತಿ ಕಾರಕವಾದಂಥ ಸಮುದ್ರ ಸ್ನಾನ, ನದಿ ಸ್ನಾನ, ಸೂರ್ಯ ಮಂತ್ರ ಜಪ, ಸೂರ್ಯ ಸ್ತೋತ್ರ, ಆದಿತ್ಯ ಹೃದಯ, ಅಕ್ಷುಪನಿಷತ್ ಪಾರಾಯಣ, ಸೂರ್ಯ ಯಾಗವನ್ನು ಇನ್ನಿತರ ಸೂರ್ಯ ಮಂತ್ರಗಳ ಪಾರಾಯಣವನ್ನು ಯಥಾಶಕ್ತಿ ಆಚರಿಸಿದಲ್ಲಿ ಪಾಪಕ್ಷಯವು, ಶ್ರೇಯೋಭಿವೃದ್ಧಿಯು ಆಗುತ್ತದೆ. ಜನ್ಮನಕ್ಷತ್ರದವರಿಗೆ ಈ ಸಮಯದಲ್ಲಿ ಗ್ರಹಣದಂತಹ ಯಾವುದೇ ದೋಷಗಳು ಇರುವುದಿಲ್ಲ. ಈ ವಿಶೇಷ ಪುಣ್ಯ ಪರ್ವಕಾಲವು ಸೂರ್ಯೋದಯದಿಂದ ಸೂರ್ಯಸ್ತದ ಸಮಯದವರೆಗೂ ಇರುತ್ತದೆ.

ಜ್ಯೋತಿಷ್ಯಕ್ಕೆ ಸಂಬಂಧಿಸಿದ ವಿಷಯಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ.

ಭಾನು ಸಪ್ತಮಿ ಕೂಡ ಹೌದು!

ಭಾನುವಾರದ ದಿನದಂದು ಸಪ್ತಮಿ ತಿಥಿ ಬಂದರೆ ಅದನ್ನು ಭಾನು ಸಪ್ತಮಿ (Bhanu Saptami 2023) ಎಂದು ಕರೆಯಲಾಗುತ್ತದೆ. ‌ಈ ದಿನ ಸೂರ್ಯ ಏಳು ಕುದುರೆಗಳ ರಥದ ಮೇಲೆ ಮೊದಲ ಬಾರಿಗೆ ಕಾಣಿಸಿಕೊಂಡನು. ಭಾನು ಸಪ್ತಮಿಯನ್ನು ಅತ್ಯಂತ ಮಂಗಳಕರ ಸಪ್ತಮೀ ಎಂದು ಪರಿಗಣಿಸಲಾಗಿದೆ. ಭಾನು ಎನ್ನುವುದು ಸೂರ್ಯನ ಇನ್ನೊಂದು ಹೆಸರು.

ಭಗವಾನ್ ಶ್ರೀ ಸೂರ್ಯನಾರಾಯಣ ಸ್ವಾಮಿ ಎಲ್ಲಾ ಗ್ರಹಗಳ ರಾಜ. ಇದು ಸೌರವ್ಯೂಹದ ಪ್ರಮುಖ ಗ್ರಹವಾಗಿದೆ. ಈ ದಿನದಂದು ಸೂರ್ಯನ ಕಿರಣಗಳು ಸೂರ್ಯ ಯಂತ್ರದ ಮೇಲೆ ಬಿದ್ದ ನಂತರ ಭಗವಾನ್ ಸೂರ್ಯನ ಮಹಾಭಿಷೇಕವನ್ನು ನಡೆಸಲಾಗುತ್ತದೆ. ಆಸ್ತಿಕರು ಈ ದಿನ ಸೂರ್ಯದೇವನನ್ನು ವಿಶೇಷ ರೀತಿಯಲ್ಲಿ ಪೂಜಿಸುತ್ತಾರೆ. ಭಾನು ಸಪ್ತಮಿಯಂದು ಮಹಾಭಿಷೇಕ ಮಾಡುವ ಮೂಲಕ ಸೂರ್ಯನನ್ನು ಪೂಜಿಸಲಾಗುತ್ತಿದೆ. ಶಾಶ್ವತವಾಗಿ ಆರೋಗ್ಯಕರ ಜೀವನವನ್ನು ಪಡೆಯಲು ಸೂರ್ಯ ದೇವನನ್ನು ಮೆಚ್ಚಿಸಲು ಭಕ್ತರು ಆದಿತ್ಯ ಹೃದಯಂ ಮತ್ತು ಇತರ ಸೂರ್ಯ ಸ್ತೋತ್ರಗಳನ್ನು ಪಠಿಸುತ್ತಾರೆ.

ಈ ದಿನದಂದು ಭಕ್ತರು ವಿವಿಧ ಕಾರಣಗಳಿಗಾಗಿ ಉಪವಾಸ ಮಾಡುತ್ತಾರೆ. ಹೆಚ್ಚಾಗಿ ಜ್ಞಾನವನ್ನು ಪಡೆಯಲು ಮತ್ತು ಸದ್ಗುಣಗಳನ್ನು ಪಡೆಯಲು ಮಹಿಳೆಯರು ಉಪವಾಸವನ್ನು ಮಾಡುತ್ತಾರೆ. ಸೂರ್ಯೋದಯಕ್ಕೆ ಮುನ್ನ ಸ್ನಾನ ಮಾಡುವ ಭಕ್ತರು ಗಂಗಾನದಿಯಂತೆ ಪವಿತ್ರರಾಗುತ್ತಾರೆ ಮತ್ತು ಎಂದಿಗೂ ಬಡವರಾಗಲು ಸಾಧ್ಯವಿಲ್ಲ ಎಂದು ನಂಬಲಾಗಿದೆ.

ಆಚರಣೆಗಳೇನು?

ಉತ್ತರ ಭಾರತದಲ್ಲಿ ಇದರ ಆಚರಣೆ ಜೋರಾಗಿದೆ. ಸೂರ್ಯೋದಯಕ್ಕೆ ಮುನ್ನ ಜನರು ನದಿಯಲ್ಲಿ ಸ್ನಾನ ಮಾಡಿ ನಂತರ ಸೂರ್ಯನನ್ನು ಪೂಜಿಸುತ್ತಾರೆ. ‌ ಸೂರ್ಯನ ಕಿರಣಗಳನ್ನು ಸ್ವಾಗತಿಸಲು ಮಹಿಳೆಯರು ತಮ್ಮ ಮನೆಗಳ ಮುಂದೆ ರಂಗೋಲಿಗಳನ್ನು ಬಿಡಿಸುತ್ತಾರೆ. ಮುಖ್ಯ ಬಾಗಿಲಿನ ಮುಂದೆ ರಂಗೋಲಿ ಬಿಡಿಸಿ ಮಧ್ಯದಲ್ಲಿ ದನದ ಸಗಣಿಯನ್ನು ಸುಡಲಾಗುತ್ತದೆ. ‌ ಸೂರ್ಯನ ಕಡೆಗೆ ಮುಖಮಾಡಿದ ಮಣ್ಣಿನ ಪಾತ್ರೆಯಲ್ಲಿ ಹಾಲನ್ನು ಕುದಿಸಲಾಗುತ್ತದೆ. ಹಾಲು ಕುದಿಯುವಾಗ ಅದು ಸೂರ್ಯನನ್ನು ತಲುಪುತ್ತದೆ ಎಂದು ನಂಬಲಾಗಿದೆ.

ಧಾರ್ಮಿಕ ಮತ್ತು ಆಧ್ಯಾತ್ಮಿಕ ಲೇಖನ, ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ.

ನಂತರ, ಪಾಯಸ, ಗೋಧಿ ಮತ್ತು ನವಗ್ರಹಗಳ ಧಾನ್ಯಗಳನ್ನು ಸೂರ್ಯ ದೇವರಿಗೆ ಅರ್ಪಿಸಲಾಗುತ್ತದೆ. ಈ ‌ಧಾನ್ಯಗಳನ್ನು ದಾನ ಮಾಡಲಾಗುತ್ತದೆ.‌ ‌ʻಭವಿಷ್ಯ ಪುರಾಣʼದಲ್ಲಿ ಸೂರ್ಯನ ಆರಾಧನೆಯ ವಿಶೇಷ ಮಹತ್ವವನ್ನು ಹೇಳಲಾಗಿದೆ. ಸೂರ್ಯ ಸಪ್ತಮಿಯ ದಿನದಂದು ಉದಯಿಸುವ ಸೂರ್ಯನಿಗೆ ಅರ್ಘ್ಯವನ್ನು ಅರ್ಪಿಸುವುದರಿಂದ ಉತ್ತಮ ಆರೋಗ್ಯವನ್ನು ಪಡೆದುಕೊಳ್ಳಬಹುದು.

ಇದನ್ನೂ ಓದಿ : Prerane : ಮೋಹ ಮುಕ್ತರಾಗುವುದು ಹೇಗೆ? ಇರುವ ದಾರಿಗಳಾದರೂ ಯಾವುವು?

ಗಾಯತ್ರಿ ಮಂತ್ರದ ಹೊರತಾಗಿ ನೀವು ಸೂರ್ಯನ ಈ ಕೆಳಗಿನ ಹೆಸರುಗಳನ್ನು ಸಹ ಪಠಿಸಬಹುದು:
ಓಂ ಮಿತ್ರಾಯ ನಮಃ, ಓಂ ರವಯೇ ನಮಃ, ಓಂ ಸೂರ್ಯಾಯ ನಮಃ , ಓಂ ಭಾನವೇ ನಮಃ, ಓಂ ಖಗಾಯ ನಮಃ, ಓಂ ಪೂಷ್ಣೇ ನಮಃ, ಓಂ ಹಿರಣ್ಯಗರ್ಭಾಯ ನಮಃ, ಓಂ ಮರೀಚಯೇ ನಮಃ, ಓಂ ಆದಿತ್ಯಾಯ ನಮಃ, ಓಂ ಸವಿತ್ರೇ ನಮಃ, ಓಂ ಅರ್ಕಯಾ ನಮಃ, ಓಂ ಭಾಸ್ಕರಾಯ ನಮಃ, ಓಂ ಸೂರ್ಯಕೃಪಾ ಪ್ರಸಾದ ಸಿದ್ಧಿರಸ್ತು.

ಲೇಖಕರು ಖ್ಯಾತ ಜ್ಯೋತಿಷಿ ಹಾಗೂ ಉಪನ್ಯಾಸಕರು
M: 9481854580 | pnaveenshastri@gmail.com

Exit mobile version