Site icon Vistara News

Chandra Grahan 2022 | ಚಂದ್ರ ಗ್ರಹಣ ಕಾಲದಲ್ಲಿ ದೇವರಿಗಿಲ್ಲ ಪೂಜೆ-ಪುನಸ್ಕಾರ; ಭಕ್ತರಿಗಿಲ್ಲ ದರ್ಶನ ಭಾಗ್ಯ

Chandra Grahan 2022

ಬೆಂಗಳೂರು: ವರ್ಷದ ಎರಡನೇ ಹಾಗೂ ಕೊನೆಯ ಚಂದ್ರ ಗ್ರಹಣ ಸೋಮವಾರ ಸಂಭವಿಸಲಿದೆ. ಸೂರ್ಯ ಗ್ರಹಣ ನಡೆದು 15 ದಿನಗಳ ಅಂತರದಲ್ಲಿ ಈಗ ಚಂದ್ರ ಗ್ರಹಣ ನಡೆಯುತ್ತಿರುವುದು ವಿಶೇಷ. ನವೆಂಬರ್‌ 8 ರಂದು ಅಂದರೆ ಕಾರ್ತಿಕ ಮಾಸ ಶುಕ್ಲ ಪಕ್ಷದ ಹುಣ್ಣಿಮೆಯಂದು ಭರಣಿ ನಕ್ಷತ್ರದ ಮೇಷ ರಾಶಿಯಲ್ಲಿ ಚಂದ್ರನಿಗೆ ರಾಹುಗ್ರಸ್ತ ಪೂರ್ಣಗ್ರಾಸ ಗ್ರಸ್ತೋದಯ ಗ್ರಹಣವು (Chandra Grahan 2022) ಸಂಭವಿಸಲಿದೆ.

ಚಂದ್ರ ಗ್ರಹಣದ ಸಮಯದಲ್ಲಿ ಕೆಲ ದೇಗುಲಗಳು ಬಾಗಿಲು ಮುಚ್ಚಿದ್ದರೆ ಮತ್ತೆ ಕೆಲವು ದೇಗುಲದಲ್ಲಿ ವಿಶೇಷ ಹೋಮ-ಹವನವನ್ನು ನಡೆಸಲಾಗುತ್ತಿದೆ. ಹಾಗಾದರೆ ಯಾವ್ಯಾವ ದೇಗುಲದಲ್ಲಿ ಯಾವ ಸಮಯದಲ್ಲಿ ಪೂಜೆ-ಪುನಸ್ಕಾರ ಇರಲಿದೆ, ಯಾವ ದೇವಸ್ಥಾನಗಳಲ್ಲಿ ಇರುವುದಿಲ್ಲ ಎಂಬುದರ ಮಾಹಿತಿ ಇಲ್ಲಿದೆ.

ದೇವರಾಯನದುರ್ಗ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನ ಬಾಗಿಲು ಬಂದ್
ಮಂಗಳವಾರ ರಾಹುಗ್ರಸ್ಥ ಚಂದ್ರಗ್ರಹಣದ ಹಿನ್ನೆಲೆಯಲ್ಲಿ ತುಮಕೂರು ಜಿಲ್ಲೆಯ ದೇವರಾಯನ ದುರ್ಗದಲ್ಲಿರುವ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನ ಬಾಗಿಲು ಬಂದ್‌ ಆಗಲಿದೆ. ಮಂಗಳವಾರ ಮಧ್ಯಾಹ್ನ 1 ಗಂಟೆಗೆ ಬಾಗಿಲು ಮುಚ್ಚಿದ್ದರೆ ಬುಧವಾರ ಮುಂಜಾನೆವರೆಗೂ ದೇವಾಲಯದ ಬಾಗಿಲು ಬಂದ್ ಆಗಲಿದೆ ಎಂದು ದೇವಸ್ಥಾನ ಆಡಳಿತ ಮಂಡಳಿಯಿಂದ ಪ್ರಕಟಣೆ ಹೊರಡಿಸಿದೆ.

ಮೈಲಾರ ಲಿಂಗೇಶ್ವರ ದೇಗುಲಕ್ಕೆ ಇಲ್ಲ ಭಕ್ತರ ಪ್ರವೇಶ
ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಸುಕ್ಷೇತ್ರ ಮೈಲಾರ ಲಿಂಗೇಶ್ವರ ದೇವಾಲಯದಲ್ಲಿ ಮಧ್ಯಾಹ್ನದ ನಂತರ ಭಕ್ತರಿಗೆ ಪ್ರವೇಶ ಇರುವುದಿಲ್ಲ. ಮಂಗಳವಾರ ಬೆಳಗ್ಗೆ 6-30 ರಿಂದ 2 ಗಂಟೆಯವರೆಗೆ ಮಾತ್ರ ಭಕ್ತರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಿದ್ದು, ಮಧ್ಯಾಹ್ನ 2 ಗಂಟೆಯಿಂದ ಸಂಜೆಯವರೆಗೆ ದರ್ಶನ ನಿಷೇಧ ಮಾಡಲಾಗಿದೆ. ಸಂಜೆ 6-30 ರಿಂದ ಮತ್ತೆ ದರ್ಶನಕ್ಕೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.

ಇದನ್ನೂ ಓದಿ | Chandra Grahan 2022 | ಚಂದ್ರ ಗ್ರಹಣ ಎಷ್ಟು ಹೊತ್ತಿಗೆ ಸಂಭವಿಸಲಿದೆ? ಆಹಾರ ಸೇವನೆ ಯಾವಾಗ?

ಸ್ಪರ್ಶಕಾಲ ಹಾಗೂ ಮೋಕ್ಷ ಕಾಲದಲ್ಲಿ ಚಾಮುಂಡೇಶ್ವರಿಗೆ ವಿಶೇಷ ಪೂಜೆ
ಮೈಸೂರಿನಲ್ಲಿ ಚಾಮುಂಡಿ ಬೆಟ್ಟದ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಭಕ್ತರಿಗೆ ನಿರ್ಬಂಧಿಸಲಾಗಿದೆ. ಮಂಗಳವಾರ ಮಧ್ಯಾಹ್ನ 1 ಗಂಟೆವರೆಗೆ ಭಕ್ತರಿಗೆ ದರ್ಶನಕ್ಕೆ ಅವಕಾಶ ಇರಲಿದ್ದು, ಸ್ಪರ್ಶಕಾಲ ಹಾಗೂ ಮೋಕ್ಷ ಕಾಲದಲ್ಲಿ ವಿಶೇಷ ಪೂಜೆ ಸಲ್ಲಿಕೆ ಆಗಲಿದೆ. ಇನ್ನು ನಂಜನಗೂಡಿನ ಶ್ರೀಕಂಠೇಶ್ವರ ದೇವಸ್ಥಾನ ಎಂದಿನಂತೆ ಪೂಜೆ ಮುಂದುವರಿಯಲಿದೆ.

ಕೋಲಾರಮ್ಮ, ಚಿಕ್ಕತಿರುಪತಿ ದೇಗುಲವೂ ಬಂದ್‌
ರಾಹುಗ್ರಸ್ತ ಚಂದ್ರಗ್ರಹಣ ಹಿನ್ನೆಲೆಯಲ್ಲಿ ಕೋಲಾರದ ಬಹುತೇಕ ದೇವಾಲಯಗಳಲ್ಲಿ ಭಕ್ತರಿಗೆ ನಿರ್ಬಂಧ ಹೇರಲಾಗಿದೆ. ಮಂಗಳವಾರ ಮಧ್ಯಾಹ್ನ 12.30 ರಿಂದ ಸಂಜೆ 7.30ರ ವರೆಗೆ ದೇವಾಲಯಗಳು ಬಂದ್ ಆಗಲಿದೆ. ಕೋಲಾರಮ್ಮ, ಚಿಕ್ಕತಿರುಪತಿ ವೆಂಕಟರಮಣಸ್ವಾಮಿ ದೇವಾಲಯ, ಕುರುಡುಮಲೆ‌ ವಿನಾಯಕ, ಬಂಗಾರತಿರುಪತಿ ಸೇರಿದಂತೆ ಎಲ್ಲಾ ದೇವಾಲಯಗಳ ಬಾಗಲು ಮುಚ್ಚಲಿವೆ. ಸಂಜೆ 7.30ರ ನಂತರ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಮುಜರಾಯಿ ತಹಸೀಲ್ದಾರ್ ನಾಗವೇಣಿ ಮಾಹಿತಿ ನೀಡಿದ್ದಾರೆ.

ಹುಲಿಗೆಮ್ಮದೇವಿ ದೇವಸ್ಥಾನ, ಅಂಜನಾದ್ರಿ ಆಂಜನೇಯ ದರ್ಶನವಿಲ್ಲ
ಕೊಪ್ಪಳ ಜಿಲ್ಲೆಯ ಪ್ರಮುಖ ದೇವಾಲಯಗಳು ಮಧ್ಯಾಹ್ನದಿಂದ ಬಂದ್ ಆಗಲಿವೆ. ತಾಲೂಕಿನ ಹುಲಿಗಿಯ ಶ್ರೀಹುಲಿಗೆಮ್ಮದೇವಿ ದೇವಸ್ಥಾನ, ಅಂಜನಾದ್ರಿಯ ಆಂಜನೇಯ ದೇವಸ್ಥಾನ ಮಧ್ಯಾಹ್ನದ ಬಳಿಕ ಬಂದ್ ಆಗಲಿದೆ. ಮಂಗಳವಾರ ಮಧ್ಯಾಹ್ನ 1 ಗಂಟೆಯಿಂದ ಸಂಜೆ 8 ಗಂಟೆಯವರೆಗೂ ಹುಲಿಗೆಮ್ಮದೇವಿ ದೇವಸ್ಥಾನ ಬಂದ್ ಆದರೆ, ಅಂಜನಾದ್ರಿಯಲ್ಲಿ ಬೆಳಿಗ್ಗೆ 7 ಗಂಟೆಯಿಂದ ಮಧ್ಯಾಹ್ನ 1 ಗಂಟೆಗೆವರೆಗೆ ಮಾತ್ರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಸಾಮಾನ್ಯವಾಗಿ ಹುಣ್ಣಿಮೆ ಹಾಗೂ ಮಂಗಳವಾರದಂದು ಹುಲಗಿಯ ಶ್ರೀ ಹುಲಿಗೆಮ್ಮದೇವಿ ದೇವಸ್ಥಾನಕ್ಕೆ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಗ್ರಹಣದಿಂದಾಗಿ ಮಧ್ಯಾಹ್ನದವರೆಗೆ ಮಾತ್ರ ದೇವಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.

ಗೋಕರ್ಣ ಮಹಾಬಲೇಶ್ವರ ದರ್ಶನದ ಸಮಯ ಬದಲಾವಣೆ
ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣ ಮಹಾಬಲೇಶ್ವರ ದೇವಸ್ಥಾನದಲ್ಲಿ ಭಕ್ತರಿಗೆ ದರ್ಶನದ ಸಮಯವನ್ನು ಬದಲಾವಣೆ ಮಾಡಲಾಗಿದೆ. ನವೆಂಬರ್ 8ರ ಮುಂಜಾನೆ 6ರಿಂದ ಬೆಳಿಗ್ಗೆ 9 ಗಂಟೆಯವರೆಗೆ ಆತ್ಮಲಿಂಗ ಸ್ಪರ್ಶಕ್ಕೆ ಅವಕಾಶ ಕಲ್ಪಿಸಲಾಗಿದೆ. ಮಧ್ಯಾಹ್ನ 2.30ರಿಂದ ಸಂಜೆ 6.30ರ ವರೆಗೆ ಆತ್ಮಲಿಂಗ ಸ್ಪರ್ಶಕ್ಕೆ ಅವಕಾಶ ಇರುವುದಿಲ್ಲ. ಜತೆಗೆ ದೇವಸ್ಥಾನದಲ್ಲಿ ಮಧ್ಯಾಹ್ನ ಹಾಗೂ ಸಂಜೆ ಪ್ರಸಾದ ಭೋಜನ ವ್ಯವಸ್ಥೆ ಇರುವುದಿಲ್ಲ.

ದಿನಪೂರ್ತಿ ಇರಲಿದೆ ದೇವಿಯ ದರ್ಶನ
ಬೆಳಗಾವಿ ಜಿಲ್ಲೆಯ ಸವದತ್ತಿಯಲ್ಲಿರುವ ಪ್ರಸಿದ್ಧ ಯಲ್ಲಮ್ಮ ದೇವಸ್ಥಾನ ಎಂದಿನಂತೆ ತೆರದಿರಲಿದೆ. ಚಂದ್ರಗ್ರಹಣ ಸಂದರ್ಭದಲ್ಲಿ ಮಾತ್ರ ತೀರ್ಥ ಪ್ರಸಾದ ವಿನಿಯೋ‌‌ಗ ಇರುವುದಿಲ್ಲ ಎಂದು ಯಲ್ಲಮ್ಮ ದೇವಸ್ಥಾನ ಆಡಳಿತ ಮಂಡಳಿ ತಿಳಿಸಿದೆ.

ತಲಕಾವೇರಿಗೆ ಪ್ರವೇಶವಿಲ್ಲ
ಮಂಗಳವಾರ ಮಧ್ಯಾಹ್ನ 2.39 ನಿಮಿಷಕ್ಕೆ ಗ್ರಸ್ತೋದಯ ಖಗ್ರಾಸ ಚಂದ್ರಗ್ರಹಣ ಪ್ರಾರಂಭಗೊಂಡು ಸಾಯಂಕಾಲ 6.19 ನಿಮಿಷಕ್ಕೆ ಗ್ರಹಣ ಅಂತ್ಯವಾಗುತ್ತದೆ. ಈ ಅವಧಿಯಲ್ಲಿ ಮಡಿಕೇರಿ ನಗರದ ಓಂಕಾರೇಶ್ವರ, ಭಾಗಮಂಡಲದ ಭಗಂಡೇಶ್ವರ ಹಾಗೂ ತಲಕಾವೇರಿಯ ಕ್ಷೇತ್ರದ ದೇವಾಲಯಗಳು ಮುಚ್ಚಿರುತ್ತವೆ. ಹಾಗೆ ಗ್ರಹಣದ ಪ್ರಯುಕ್ತ ವಿಶೇಷ ಪೂಜೆಗಳು ಇರುವುದಿಲ್ಲ.

ಗ್ರಹಣ ಸಮಯದಲ್ಲೂ ಈಶ್ವರನ ದರ್ಶನಕ್ಕೆ ಭಕ್ತರಿಗೆ ಅವಕಾಶ
ಉತ್ತರಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಮುರ್ಡೇಶ್ವರ ಈಶ್ವರ ದೇವಸ್ಥಾನ ಪೂಜಾ ವಿಧಾನದಲ್ಲಿ ಬದಲಾವಣೆ ಇರಲಿದೆ. ಬೆಳಗ್ಗೆ 9 ಗಂಟೆಯೊಳಗೆ ಮಧ್ಯಾಹ್ನದ ಪೂಜೆ ಕಾರ್ಯ ಸಹ ಮುಗಿಸಲಾಗುತ್ತದೆ. ಪೂಜಾ ಕಾರ್ಯ ಮುಗಿದ ನಂತರ ಎಂದಿನಂತೆ ಭಕ್ತರಿಗೆ ದರ್ಶನದ ಅವಕಾಶ ಕಲ್ಪಿಸಲಾಗಿದೆ. ಗ್ರಹಣ ಸಮಯದಲ್ಲಿ ಈಶ್ವರನಿಗೆ ಮೃತ್ಯುಂಜಯ, ರುದ್ರ ಹೋಮ ಸೇರಿ ಗ್ರಹಣ ಪರಿಹಾರ ಪೂಜೆ, ಕುಂಭಾಭಿಷೇಕ ನಡೆಯಲಿದೆ. ಸೂರ್ಯಾಸ್ತದ ನಂತರ ಬಲಿ ಉತ್ಸವ ನೆರವೇರಲಿದೆ.

ಯಡೂರು ಕಾಡಸಿದ್ದೇಶ್ವರ ಹಾಗೂ ಚಿಂಚಲಿ ಮಾಯಕ್ಕ ದೇವಸ್ಥಾನ ಓಪನ್‌
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯಡೂರು ಗ್ರಾಮದ ವೀರಭದ್ರೇಶ್ವರ ದೇವಸ್ಥಾನ, ಯಡೂರು ಕಾಡಸಿದ್ದೇಶ್ವರ ಹಾಗೂ ಚಿಂಚಲಿ ಮಾಯಕ್ಕ ದೇವಸ್ಥಾನದಲ್ಲಿ ಎಂದಿನಂತೆ ಭಕ್ತರಿಗೆ ದೇವರ ದರ್ಶನ ಸಿಗಲಿದೆ.

ರಾಜಧಾನಿ ಬೆಂಗಳೂರಿನಲ್ಲೂ ದೇಗುಲಗಳಿಗೆ ಗ್ರಹಣ
ಬೆಂಗಳೂರಿನ ಪ್ರಸಿದ್ಧ ದೇವಸ್ಥಾನವಾದ ಬನಶಂಕರಿ ದೇಗುಲದಲ್ಲಿ ಬೆಳಗ್ಗೆ 5 ಗಂಟೆಯಿಂದ 10 ಗಂಟೆವರೆಗೂ ಪೂಜಾ ಕೈಂಕರ್ಯ ಮುಗಿಸಲಾಗುತ್ತದೆ. 10 ಗಂಟೆಯ ನಂತರ ದೇಗುಲದ ಬಾಗಿಲು ಮುಚ್ಚಲಾಗುತ್ತದೆ. ಮಧ್ಯಾಹ್ನ 2.39 ರಿಂದ 6.19 ರವರೆಗೆ ಗ್ರಹಣದ ನಿಮಿತ್ತ ಸಾರ್ವಜನಿಕರಿಗೆ ಪ್ರವೇಶ ನಿಷೇಧ ಮಾಡಲಾಗಿದೆ. ಗ್ರಹಣ ಮೋಕ್ಷ ನಂತರ ದೇಗುಲ ಶುಚಿಗೊಳಿಸಿ 7.30ರ ನಂತರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ.

ಬಂಡಿ ಮಹಾಕಾಳಿ ದೇವಾಲಯದಲ್ಲಿ ಗ್ರಹಣ ಹಿನ್ನೆಲೆ ವಿಶೇಷ ಪೂಜೆ
ಬೆಂಗಳೂರಿನ ಶ್ರೀ ಕ್ಷೇತ್ರ ಬಂಡಿ ಮಹಾಕಾಳಿ ದೇವಾಲಯದಲ್ಲಿ ಗ್ರಹಣ ಹಿನ್ನೆಲೆ ವಿಶೇಷ ಪೂಜೆ ಇರಲಿದೆ. ಪ್ರತಿ ಹುಣ್ಣಿಮೆಯಂದು ಸತ್ಯ ನಾರಾಯಣ ಪೂಜೆ ಇರಲಿದ್ದು, ಮಧ್ಯಾಹ್ನ 2.35 ರಿಂದ ಗಣ, ನವಗ್ರಹ ಹೋಮ, ನವಗ್ರಹ, ಮೃತುಂಜಯ ಶಾಂತಿ ಪೂಜಾ ಕೈಂಕರ್ಯ ಇರಲಿದೆ. ಈ ಎಲ್ಲ ಹೋಮಗಳು ಸಂಜೆ 6 ಗಂಟೆವರೆಗೂ ನಡೆಯುತ್ತದೆ. ನಂತರ ಪೂರ್ಣಾಹುತಿ ಮಾಡಿ, ದೇವಿಗೆ ಅಭಿಷೇಕ ಮಾಡಿ ಭಕ್ತಾದಿಗಳಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ.

ಇದನ್ನೂ ಓದಿ | Chandra Grahan 2022 | ನಾಳೆ ಚಂದ್ರ ಗ್ರಹಣ; ಯಾವ ರಾಶಿಯ ಮೇಲೆ ಏನು ಪರಿಣಾಮ?

Exit mobile version