Site icon Vistara News

Deepavali 2023: ಭಾರತ ಮಾತ್ರವಲ್ಲ, ಈ ದೇಶಗಳಲ್ಲೂ ದೀಪಾವಳಿ ಸಂಭ್ರಮ ಜೋರು!

deepavali

deepavali

ಬೆಂಗಳೂರು: ಹಿಂದೂಗಳ ಪಾಲಿನ ಪ್ರಮುಖ ಹಬ್ಬ ದೀಪಾವಳಿ (Deepavali) ಸಮೀಪಿಸುತ್ತಿದ್ದು, ವಿವಿಧೆಡೆ ಸಂಭ್ರಮ ಮನೆ ಮಾಡಿದೆ. ಖರೀದಿ ಭರಾಟೆಯ ಜತೆಗೆ ಎಲ್ಲೆಡೆ ತಯಾರಿ ಜೋರಾಗಿದೆ. ವಿಶೇಷ ಎಂದರೆ ಈ ಬೆಳಕಿನ ಹಬ್ಬವನ್ನು ಭಾರತ ಮಾತ್ರವಲ್ಲ, ಜಗತ್ತಿನ ವಿವಿಧ ಕಡೆ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಹಾಗಾದರೆ ಯಾವೆಲ್ಲ ದೇಶಗಳಲ್ಲಿ ದೀಪಾವಳಿ ಆಚರಿಸುತ್ತಾರೆ ಎನ್ನುವುದನ್ನು ನೋಡೋಣ.

ಇಂಡೋನೇಷ್ಯಾ

ಇಂಡೋನೇಷ್ಯಾದಲ್ಲಿಯೂ ದೀಪಾವಳಿಯನ್ನು ಪ್ರಮುಖ ಹಬ್ಬ ಎಂದೇ ಪರಿಗಣಿಸಲಾಗುತ್ತದೆ. ಭಾರತದಂತೆ ಇಲ್ಲೂ ಸಂಪ್ರದಾಯಬದ್ಧವಾಗಿ ದೀಪಾವಳಿಯನ್ನು ಆಚರಿಸಲಾಗುತ್ತದೆ. ವಿಶೇಷ ಎಂದರೆ ದೀಪಾವಳಿಯಂದು ಇಲ್ಲೂ ಸಾರ್ಜನಿಕ ರಜೆ ಇರುತ್ತದೆ. ಪ್ರತಿಯೊಬ್ಬರೂ ಪ್ರೀತಿ ಪಾತ್ರರೊಂದಿಗೆ, ಕುಟುಂಬದ ಸದಸ್ಯರೊಂದಿಗೆ ಕಲೆತು ಹಬ್ಬದ ಕ್ಷಣವನ್ನು ಖುಷಿಯಿಂದ ಕಳೆಯುತ್ತಾರೆ.

ಫಿಜಿ

ಫಿಜಿ ಕೂಡ ದೀಪಾವಳಿಯಂದು ದೀಪಗಳ ಬೆಳಕಿನಲ್ಲಿ ಹೊಳೆಯುತ್ತದೆ. ಫಿಜಿಯಲ್ಲಿ ಭಾರತೀಯರು ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ದೀಪಾವಳಿಯನ್ನು ಬಹಳ ಉತ್ಸಾಹದಿಂದ ಕೊಂಡಾಡುತ್ತಾರೆ. ಅಲ್ಲದೆ ಇದು ಸಾರ್ವಜನಿಕ ರಜಾ ದಿನವಾಗಿರುವುದರಿಂದ ಎಲ್ಲರೂ ಸಂಭ್ರದಲ್ಲಿ ಭಾಗಿಯಾಗುತ್ತಾರೆ.

ಮಾರಿಷಸ್

ಇಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಭಾರತೀಯರಿದ್ದಾರೆ. ಮಾರಿಷಸ್‌ನ ಜನಸಂಖ್ಯೆಯಲ್ಲಿ ಹಿಂದೂ ಸಮುದಾಯವು ಸುಮಾರು ಶೇ. 50ರಷ್ಟು ಇರುವುದರಿಂದ ದೀಪಾವಳಿಯನ್ನು ಹೆಚ್ಚು ಸಡಗರದಿಂದ ಆಚರಿಸಲಾಗುತ್ತದೆ. ಜನರು ತಮ್ಮ ಮನೆಗಳ ಮುಂದೆ ದೀಪಗಳನ್ನು ಹಚ್ಚಿಡುತ್ತಾರೆ. ದೀಪಾವಳಿ ಸಮಯದಲ್ಲಿ ಈ ದ್ವೀಪ ರಾಷ್ಟ್ರವು ಬೆಳಕಿನಿಂದ ಹೊಳೆಯುತ್ತದೆ.

ಮಲೇಷ್ಯಾ

ದೀಪಾವಳಿಯನ್ನು ಸಂಭ್ರಮದಿಂದ ಎದುರುಗೊಳ್ಳುವ ಇನ್ನೊಂದು ರಾಷ್ಟ್ರ ಮಲೇಷ್ಯಾ. ಇಲ್ಲಿ ಈ ಹಬ್ಬವನ್ನು ʼಹರಿ ದೀಪಾವಳಿʼ ಎಂದು ಕರೆಯಲಾಗುತ್ತದೆ. ಭಾರತೀಯ ಸಂಪ್ರದಾಯಕ್ಕೂ ಇಲ್ಲಿ ಆಚರಿಸಲ್ಪಡುವ ರೀತಿಗೂ ಸ್ವಲ್ಪ ವ್ಯತ್ಯಾಸವನ್ನು ಕಾಣಬಹುದು. ಇಲ್ಲಿನವರು ಹಬ್ಬದ ದಿನ ಬೆಳಗ್ಗೆ ಬೇಗ ಎದ್ದು ಎಣ್ಣೆ ಸ್ನಾನ ಮಾಡಿ ದೇವಸ್ಥಾನಕ್ಕೆ ತೆರಳುತ್ತಾರೆ. ಮಲೇಷ್ಯಾದಲ್ಲಿ ಪಟಾಕಿ ಮಾರಾಟವನ್ನು ನಿಷೇಧಿಸಿರುವುದರಿಂದ ಇಲ್ಲಿನ ಜನರು ಸಿಹಿತಿಂಡಿಗಳು, ಉಡುಗೊರೆಗಳು ಮತ್ತು ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳುವ ಮೂಲಕ ಈ ಹಬ್ಬವನ್ನು ಸ್ಮರಣೀಯವಾಗಿಸುತ್ತಾರೆ.

ಶ್ರೀಲಂಕಾ

ಭಾರತದಂತೆ ಈ ದ್ವೀಪ ರಾಷ್ಟ್ರದಲ್ಲೂ ದೀಪಾವಳಿಯನ್ನು ಪ್ರಮುಖ ಹಬ್ಬವಾಗಿ ಪರಿಗಣಿಸಲಾಗುತ್ತದೆ. ಇಲ್ಲೂ ಹಬ್ಬದಂದು ಸಾರ್ವಜನಿಕ ರಜೆ ಇರುತ್ತದೆ. ಜನರು ತಮ್ಮ ಮನೆ ಮುಂದೆ ದೀಪಗಳನ್ನು ಬೆಳಗುತ್ತಾರೆ. ಉತ್ತಮ ಭವಿಷ್ಯದ ದ್ಯೋತಕವಾಗಿ ಇಲ್ಲಿ ಜ್ಯೋತಿಯನ್ನು ಬೆಳಗಲಾಗುತ್ತದೆ.

ನೇಪಾಳ

ಒಂದು ಕಾಲದಲ್ಲಿ ಹಿಂದೂ ರಾಷ್ಟ್ರವಾಗಿದ್ದ ನೇಪಾಳಕ್ಕೂ ಭಾರತಕ್ಕೂ ಬಿಡಿಸಲಾಗದ ನಂಟಿದೆ. ಇಲ್ಲಿ ಹಿಂದೂಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು ದೀಪಾವಳಿಯನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ. ಇಲ್ಲಿ ದೀಪಾವಳಿಯನ್ನು ʼತಿಹಾರ್ʼ ಎಂದೂ ಕರೆಯಲಾಗುತ್ತದೆ. ಲಕ್ಷ್ಮೀ ದೇವಿಯನ್ನು ಆರಾಧಿಸುವುದು, ಉಡುಗೊರೆಗಳನ್ನು ವಿನಿಮಯ ಮಾಡಿಕೊಳ್ಳುವುದು ಮತ್ತು ಮನೆಗಳನ್ನು ದೀಪಗಳಿಂದ ಅಲಂಕರಿಸುವುದು ಇಲ್ಲಿ ಹಬ್ಬದ ಸಂದರ್ಭದಲ್ಲಿ ಕಂಡುಬರುವ ಸಾಮಾನ್ಯ ದೃಶ್ಯಗಳು. ದಶೈನ್ ನಂತರ ನೇಪಾಳದ ಎರಡನೇ ಅತಿದೊಡ್ಡ ಹಬ್ಬ ದೀಪಾವಳಿ.

ಸಿಂಗಾಪುರ

ದೀಪಾವಳಿ ಹಬ್ಬದ ಸಂದರ್ಭದಲ್ಲಿ ನೀವೇನಾದರೂ ಸಿಂಗಾಪುರದಲ್ಲಿದ್ದರೆ ಭಾರತದಲ್ಲಿದ್ದಂತೆ ಭಾಸವಾಗಬಹುದು. ಅಷ್ಟು ವಿಜೃಂಭಣೆಯಿಂದ ಇಲ್ಲಿ ಬೆಳಕಿನ ಹಬ್ಬವನ್ನು ಆಚರಿಸಲಾಗುತ್ತದೆ. ಇಲ್ಲಿ ʼಲಿಟಲ್‌ ಇಂಡಿಯಾʼ ಎನ್ನುವ ಪ್ರದೇಶವಿದೆ. ಇಲ್ಲಿನ ಜನರು ಪಟಾಕಿ ಸಿಡಿಸದೆ, ದೀಪಗಳನ್ನು ಬೆಳಗಿ ಹಬ್ಬ ಆಚರಿಸುತ್ತಾರೆ.

ಕೆನಡಾ

ಕೆನಡಾದಲ್ಲಿ ದೀಪಾವಳಿಯಂದು ರಾಷ್ಟ್ರವ್ಯಾಪಿ ರಜಾದಿನ ಎಂದು ಘೋಷಿಸಿಲ್ಲ. ಆದರೆ ಅನೇಕ ಪಟ್ಟಣಗಳು ಮತ್ತು ನಗರಗಳಲ್ಲಿ ಸಂಭ್ರಮದಿಂದ ದೀಪಾವಳಿ ಹಬ್ಬವನ್ನು ಆಚರಿಸಲಾಗುತ್ತದೆ.

ಇಂಗ್ಲೆಂಡ್‌

ಇಂಗ್ಲೆಂಡ್‌ನ ಲೀಚೆಸ್ಟರ್ ಮತ್ತು ಬರ್ಮಿಂಗಲ್‌ಗಳಲ್ಲಿ ವಿಶೇಷವಾಗಿ ದೀಪಾವಳಿಯನ್ನು ಸಡಗರದಿಂದ ಆಚರಿಸಲಾಗುತ್ತದೆ. ಈ ಪ್ರದೇಶಗಳಲ್ಲಿ ಹೆಚ್ಚಿನ ಸಂಖ್ಯೆಯ ಭಾರತೀಯರು ನೆಲೆಸಿರುವುದು ಇದಕ್ಕೆ ಮುಖ್ಯ ಕಾರಣ.

ಥೈಲ್ಯಾಂಡ್‌

ದೀಪಾವಳಿಯನ್ನು ಕೊಂಡಾಡುವ ಇನ್ನೊಂದು ದೇಶ ಥೈಲ್ಯಾಂಡ್‌. ದೀಪಾವಳಿಯನ್ನು ಇಲ್ಲಿ ʼಲಾಮ್ ಕ್ರಿಯೋಂಗ್ʼ ಎಂದು ಆಚರಿಸಲಾಗುತ್ತದೆ. ಥಾಯ್ ಕ್ಯಾಲೆಂಡರ್ ಪ್ರಕಾರ ಇದನ್ನು 12ನೇ ತಿಂಗಳ ಹುಣ್ಣಿಮೆಯ ದಿನದಂದು ಬರುತ್ತದೆ. ಈ ಸಮಯದಲ್ಲಿ ಪಟಾಕಿಗಳ ಅತಿರಂಜಿತ ಪ್ರದರ್ಶನ ಎಲ್ಲೆಡೆ ಕಂಡುಬರುತ್ತದೆ.

ಇದನ್ನೂ ಓದಿ: Deepavali 2023: ಅರ್ಥಪೂರ್ಣ ಉಡುಗೊರೆ ನೀಡಿ, ಪ್ರೀತಿಪಾತ್ರರ ದೀಪಾವಳಿ ಸ್ಮರಣೀಯವಾಗಿಸಿ!

Exit mobile version