ಶೀಲಾ ಸಿ. ಶೆಟ್ಟಿ, ಬೆಂಗಳೂರು
ಪರಿಸರ ಪ್ರೇಮಿಗಳಿಗಾಗಿ ಇಕೋ ಫ್ರೆಂಡ್ಲಿ ಗೌರಿ-ಗಣೇಶನ ಮೂರ್ತಿಗಳು (Eco Friendly Gowri- Ganesha Shopping Trend) ಆನ್‌ಲೈನ್-ಆಫ್‌ಲೈನ್ ಮಾರುಕಟ್ಟೆಗೆ ಈಗಾಗಲೇ ಲಗ್ಗೆ ಇಟ್ಟಿವೆ. ಹೌದು. ಹಬ್ಬ ಸಮೀಪಿಸುತ್ತಿರುವಂತೆ ಎಲ್ಲೆಡೆ ಪರಿಸರ ಸ್ನೇಹಿ ಮಿನಿ ಗೌರಿ-ಗಣೇಶನ ಮೂರ್ತಿಗಳಿಂದಿಡಿದು ಆಳೆತ್ತರದ ಮೂರ್ತಿಗಳು ಎಂಟ್ರಿ ನೀಡಿವೆ. ಅಷ್ಟೇಕೆ! ಇವುಗಳೊಂದಿಗೆ ಹಬ್ದ ದಿನದಂದು ಪೂಜಿಸಲು ಅಗತ್ಯವಿರುವ ಪೂಜಾ ಸಾಮಗ್ರಿಗಳ ಪ್ಯಾಕೇಜ್ ಸೌಲಭ್ಯಗಳು ಜೊತೆಯಾಗಿವೆ.
ಕೆಮಿಕಲ್‌ರಹಿತ ಗೌರಿ-ಗಣೇಶನ ಕಾಲ
ಪರಿಸರಕ್ಕೆ ಧಕ್ಕೆಯಾದಂತೆ ಪೂಜಿಸಲು ಇಚ್ಚಿಸುವವರಿಗೋಸ್ಕರ ಸಾಕಷ್ಟು ಸ್ಥಳೀಯ ಬ್ರಾಂಡ್‌ಗಳ ಹೆಸರಲ್ಲಿ ಇಕೋ ಫ್ರೆಂಡ್ಲಿ ಗೌರಿ-ಗಣೇಶನ ಮೂರ್ತಿಗಳು ಆಗಮಿಸಿವೆ. ಶ್ರಾವಣ ಮಾಸದ ಆರಂಭದಲ್ಲೆ ಇವು ಬಂದವಾದರೂ ಇದೀಗ ಇವುಗಳ ಮಾರಾಟ ಭರದಿಂದ ಸಾಗಿದೆ. ಅಂಗೈಯಲ್ಲಿ ಹಿಡಿಯುವ ಮೈಕ್ರೋ ಶೇಪ್‌ನ ಮಣ್ಣಿನ ಕೆಮಿಕಲ್ ರಹಿತ ಮೂರ್ತಿಗಳಿಂದಿಡಿದು ಬೃಹತ್ ಆಕಾರದವು ಕಲಾವಿದರ ಕೈಗಳಲ್ಲಿ ತಯಾರಾಗಿ ಬಂದಿವೆ ಎನ್ನುತ್ತಾರೆ ಗಾಂಧಿ ಬಜಾರ್‌ನ ಅಂಗಡಿಯೊಂದರ ಮಾರಾಟಗಾರರು.
ಮೂರ್ತಿಗಳ ಹೋಮ್ ಡಿಲಿವರಿ ಸೌಲಭ್ಯ
ಬಹಳಷ್ಟು ದೊಡ್ಡ ಗ್ರಂಥಿಕೆ ಅಂಗಡಿಗಳಲ್ಲಿ ಪೂಜಾ ಸಾಮಗ್ರಿಗಳಿಂದಿಡಿದು ಪೂಜೆಗೆ ಅಗತ್ಯವಿರುವ ಪ್ರತಿಯೊಂದು ಸಾಮಗ್ರಿಗಳನ್ನು ಒಳಗೊಂಡ ಪ್ಯಾಕೇಜ್ ಕೂಡ ಲಭ್ಯ. ಇಂತಿಷ್ಟು ಬೆಲೆಯದನ್ನು ಖರೀದಿಸಿದಲ್ಲಿ ಹೋಮ್ ಡಿಲಿವರಿ ಕೂಡ ನೀಡಲಾಗುತ್ತಿದೆ. ಹಬ್ಬದ ದಿನದಂದು ಫ್ರೆಶ್ ಆಗಿ ಹೂವು-ಹಣ್ಣುಗಳನ್ನು ತಲುಪಿಸುವ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತಿದೆ ಎನ್ನುತ್ತಾರೆ ಗ್ರಂಥಿಕೆ ಶಾಪ್‌ನ ವ್ಯವಸ್ಥಾಪಕರು. ಅವರ ಪ್ರಕಾರ, ಉದ್ಯೋಗಸ್ಥರು ಈ ಸೌಲಭ್ಯವನ್ನು ಕಳೆದ ಬಾರಿಗಿಂತ ಹೆಚ್ಚು ಪಡೆಯುತ್ತಿದ್ದಾರೆ ಎನ್ನುತ್ತಾರೆ.
ಆನ್‌ಲೈನ್ ಮಾರುಕಟ್ಟೆಯಲ್ಲಿ ಪರಿಸರ ಸ್ನೇಹಿ ಸೀಡ್ ಗಣೇಶ
ಇದೀಗ ಆನ್‌ಲೈನ್ ಮಾರುಕಟ್ಟೆಯಲ್ಲೂ ಪರಿಸರ ಸ್ನೇಹಿ ಸೀಡ್ ಗೌರಿ-ಗಣೇಶನ ಮೂರ್ತಿಗಳಿರುವ ಬಾಕ್ಸ್‌ಗಳು ಮಾರಾಟವಾಗುತ್ತಿವೆ. ಇಲ್ಲಿಯೂ ಕೂಡ ನಾನಾ ಬಗೆಯ ಪ್ಯಾಕೇಜ್ ಸೌಲಭ್ಯ ನೀಡಲಾಗುತ್ತಿದೆ. ಆನ್‌ಲೈನ್‌ನಲ್ಲಿ ಗೌರಿ-ಗಣೇಶನನ್ನು ಖರೀದಿಸುವುದು ಇತರೇ ವಸ್ತುಗಳಿಗಾಗಿ ಆನ್‌ಲೈನ್ ಶಾಪಿಂಗ್ ಮಾಡುವಷ್ಟೇ ಸುಲಭವಾಗಿದೆ ಎನ್ನುತ್ತಾರೆ ಪ್ರತಿಬಾರಿ ಆನ್‌ಲೈನ್‌ನಲ್ಲಿ ಖರೀದಿಸುವ ನಾರಾಯಣ ಆಚಾರ್.
ಸಸಿ ಮೊಳಕೆಯೊಡೆಯುವ ಸೀಡ್ ಗಣೇಶ
ಇನ್ನು ಹಬ್ಬಕ್ಕೆ ಪೂರಕ ಎಂಬಂತೆ ಸ್ಥಳೀಯ ಬೆಂಗಳೂರಿನ ಸೀಡ್ ಇಂಡಿಯಾ ಕಂಪನಿಯು ಪ್ರತಿ ಬಾರಿಯಂತೆ ಈ ಬಾರಿಯೂ ಕೂಡ ಪರಿಸರ ಸ್ನೇಹಿ ಗೌರಿ-ಗಣೇಶನ ಮೂರ್ತಿಗಳನ್ನು ನಿರ್ಮಿಸುತ್ತಿದೆ. ಮುಳುಗಿಸಿದ ನಂತರ ಮಣ್ಣಾಗುವ ಗಣಪನಿಂದ ಗಿಡವೊಂದು ಬೆಳೆಯುವ ಟೆಕ್ನಿಕ್ ಬಳಸುತ್ತಿದೆ. ಇದೇ ರೀತಿ ಸಾಕಷ್ಟು ಕಂಪನಿಗಳು ಪರಿಸರಕ್ಕೆ ತಮ್ಮದೇ ಆದ ಕೊಡುಗೆ ನೀಡುತ್ತಿವೆ.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Ganesh Chaturthi: ಗಣೇಶ ಚತುರ್ಥಿ ಆಚರಣೆಗೆ ಸಿದ್ಧತೆ ಶುರು; ಏನು ಈ ಹಬ್ಬದ ಹಿನ್ನೆಲೆ?