Site icon Vistara News

ರಾಜ್ಯದಿಂದ ಕಾಶಿಗೆ ಹೋಗುವ ಯಾತ್ರಾರ್ಥಿಗಳಿಗೆ ಸಿದ್ಧವಾಗುತ್ತಿದೆ ಭಾರತ್‌ ಗೌರವ್‌ ರೈಲು

ಭಾರತ್‌ ಗೌರವ್‌ ರೈಲು

ಬೆಂಗಳೂರು: ಶ್ರಾವಣ ಮಾಸದ ಕೊನೆಯ ವಾರದಲ್ಲಿ ರಾಜ್ಯದಿಂದ ಕಾಶಿಗೆ ʼಭಾರತ್‌ ಗೌರವ್‌ ರೈಲು ಯೋಜನೆʼ ಮೂಲಕ ಯಾತ್ರೆ ಪ್ರಾರಂಭವಾಗಲಿದೆ ಎಂದು ಮುಜರಾಯಿ, ಹಜ್‌ ಮತ್ತು ವಕ್ಫ್‌ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದ್ದಾರೆ.

ಸೋಮವಾರ ಬೆಂಗಳೂರಿನ ಬೈಯ್ಯಪ್ಪನಹಳ್ಳಿಯಲ್ಲಿರುವ ಸರ್‌.ಎಂ.ವಿಶ್ವೇಶ್ವರಯ್ಯ ರೈಲು ನಿಲ್ದಾಣದಲ್ಲಿ ಕಾಶಿ ಯಾತ್ರೆಗೆ ಕಾಯ್ದಿರಿಸಲಾಗಿರುವ ರೈಲಿನ ಪರಿಶೀಲನೆ ಹಾಗೂ ರೈಲ್ವೇ ಅಧಿಕಾರಿಗಳೊಂದಿಗೆ ಸಭೆ ನಡೆಸಿ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.

ಜೀವನದಲ್ಲಿ ಒಮ್ಮೆಯಾದರೂ ಕಾಶಿ ಯಾತ್ರೆಯನ್ನು ಕೈಗೊಳ್ಳಬೇಕು ಎನ್ನುವುದು ಬಹುಪಾಲು ಹಿಂದೂಗಳ ಆಸೆಯಾಗಿರುತ್ತದೆ. ಇದನ್ನು ಪೂರೈಸುವ ನಿಟ್ಟಿನಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದಕ್ಕೆ ಬೆನ್ನೆಲುಬಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಿಂತು ಎಲ್ಲಾ ರೀತಿಯ ಸಹಕಾರ ನೀಡಿದ್ದಾರೆ ಎಂದವರು ಹೇಳಿದ್ದಾರೆ.

ಇದನ್ನೂ ಓದಿ | ಕಾಶಿಗೆ ಹೋಗಲು ಸರ್ಕಾರದಿಂದ 5,000 ರೂ. ಧನಸಹಾಯ: ಹಣ ಪಡೆಯುವ ಕುರಿತು ಮಾಹಿತಿ ಇಲ್ಲಿದೆ

ಕಾಶಿಯಾತ್ರೆಗೆ ಯಾತ್ರಾರ್ಥಿಗಳನ್ನು ಕೊಂಡೊಯ್ಯುವ ಭಾರತ್‌ ಗೌರವ್‌ ರೈಲನ್ನು ಸಿದ್ದಪಡಿಸಲು ರೈಲ್ವೆ ಇಲಾಖೆಯು ಅನುಮತಿ ನೀಡಿದ್ದು, ಶ್ರಾವಣ ಮಾಸದ ಕೊನೆಯ ವಾರದಲ್ಲಿ ಯಾತ್ರೆ ಪ್ರಾರಂಭವಾಗಲಿದೆ. ಈ ಮೂಲಕ ಭಾರತ್‌ ಗೌರವ್‌ ರೈಲು ಸೇವೆಯನ್ನು ಯಾತ್ರಾರ್ಥಿಗಳಿಗೆ ಒದಗಿಸುತ್ತಿರುವ ದೇಶದ ಮೊದಲ ರಾಜ್ಯ ಹಾಗೂ ಇಲಾಖೆ ಎನ್ನುವ ಹೆಗ್ಗಳಿಕೆ ನಾವು ಪಾತ್ರರಾಗಲಿದ್ದೇವೆ ಎಂದರು.

ಪುಣ್ಯ ಕ್ಷೇತ್ರಗಳಿಗೆ ಕಡಿಮೆ ಖರ್ಚಿನಲ್ಲಿ ಪ್ರವಾಸ ಕೈಗೊಳ್ಳಲು ಅನುಕೂಲವಾಗುವಂತೆ ಪ್ಯಾಕೇಜುಗಳನ್ನು ರೂಪಿಸುವ ನಿಟ್ಟಿನಲ್ಲಿ ಮುಜರಾಯಿ ಇಲಾಖೆ ಮಹತ್ವದ ಹೆಜ್ಜೆಯನ್ನಿಟ್ಟಿದೆ. ಭಾರತ್‌ ಗೌರವ್‌ ರೈಲು ಯೋಜನೆಯ ಅಡಿಯಲ್ಲಿ ರಾಜ್ಯ ಮುಜರಾಯಿ ಇಲಾಖೆಯ ವತಿಯಿಂದ ರೈಲನ್ನು ಬಾಡಿಗೆಗೆ ಪಡೆದು ಕಾಶಿಗೆ ಸಂಚಾರ ಆರಂಭಿಸಲಾಗುತ್ತಿದೆ. ಇದಕ್ಕಾಗಿ ಎಲ್ಲ ರೀತಿಯ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ. ರೈಲನ್ನು ಮಾರ್ಪಾಡಿಸುವ ಹಾಗೂ ಇನ್ನಿತರೆ ಅಗತ್ಯ ಕ್ರಮಗಳ ಬಗ್ಗೆ ರೈಲ್ವೇ ಅಧಿಕಾರಿಗಳೊಂದಿಗೆ ಚರ್ಚಿಸಿದ್ದೇನೆ ಎಂದ ಶಶಿಕಲಾ ಜೊಲ್ಲೆ ವಿವರಿಸಿದ್ದಾರೆ.

ರಿಯಾಯಿತಿ ದರದಲ್ಲಿ 7 ದಿನಗಳ ಪ್ರವಾಸ ಕಾರ್ಯಕ್ರಮ ಏರ್ಪಡಿಸಲಾಗಿದೆ. ಇದಕ್ಕಾಗಿ ಈಗಾಗಲೇ 1 ಕೋಟಿ ರೂಪಾಯಿಗಳ ಭೌತಿಕ ಬ್ಯಾಂಕ್‌ ಗ್ಯಾರಂಟಿಯನ್ನು ನೀಡಿ ರೈಲನ್ನು ಬಾಡಿಗೆಗೆ ತಗೆದುಕೊಳ್ಳಲಾಗಿದೆ ಎಂದು ಅವರು ಹೇಳಿದರು.

ಹೇಗಿರಲಿದೆ ಈ ರೈಲು?

ಬೆಂಗಳೂರು-ವಾರಣಾಸಿ-ಅಯೋಧ್ಯೆ-ಪ್ರಯಾಗರಾಜ್‌-ಬೆಂಗಳೂರು ಮಾರ್ಗದಲ್ಲಿ ರೈಲು 7 ದಿನಗಳಲಿ 4,161 ಕಿ.ಮೀಗಳಷ್ಟು ದಾರಿ ಕ್ರಮಿಸಲಿದೆ. 14 ಬೋಗಿಗಳನ್ನು ಈ ರೈಲು ಒಳಗೊಂಡಿರಲಿದ್ದು, 11 ಬೋಗಿಗಳನ್ನು ಪ್ರಯಾಣಿಕರ ಪ್ರವಾಸಕ್ಕೆ ಅಣಿ ಮಾಡಲಾಗುತ್ತಿದೆ. 3 ಟಯರ್‌ ಎಸಿಯ ವ್ಯವಸ್ಥೆ ಇರಲಿದೆ. ಒಂದು ಬೋಗಿಯನ್ನು ದೇವಸ್ಥಾನವಾಗಿ ಪರಿವರ್ತಿಸಿ ಯಾತ್ರಾರ್ಥಿಗಳ ಭಜನೆಗೆ ಅವಕಾಶ ನೀಡಲಾಗುವುದು. ಅಲ್ಲದೇ, ನಮ್ಮ ರಾಜ್ಯದ ಪ್ರಮುಖ ದೇವಸ್ಥಾನಗಳ ಬ್ರಾಂಡಿಂಗ್‌ ಮಾಡುವ ಉದ್ದೇಶದಿಂದ 11 ಬೋಗಿಗಳ ಮೇಲೆ ರಾಜ್ಯದ ಪ್ರಮುಖ 11 ದೇವಸ್ಥಾನಗಳ ಮಾಹಿತಿಯನ್ನು ಅಳವಡಿಸಲಾಗುವುದು.

ಆಹಾರ, ನೀರು, ವಸತಿ, ಸ್ಥಳೀಯ ಸಾರಿಗೆ ಮತ್ತು ಇತರೆ ಮೂಲಭೂತ ಸೌಕರ್ಯಗಳಿಗೆ ರೈಲ್ವೇಯ ಅಧೀನ ಸಂಸ್ಥೆ ಐಆರ್‌ಸಿಟಿಸಿ ಜೊತೆಗೆ ಒಪ್ಪಂದ ಮಾಡಿಕೊಳ್ಳಲಾಗುವುದು. 7 ದಿನಗಳ ಪ್ರವಾಸಕ್ಕೆ ಅಂದಾಜು 15 ಸಾವಿರ ರೂಪಾಯಿ ವೆಚ್ಚವಾಗಲಿದ್ದು, ಇದರಲ್ಲಿ 5 ಸಾವಿರ ರೂಗಳನ್ನು ಸಹಾಯಧನವನ್ನಾಗಿ ನೀಡಲಾಗುವುದು ಎಂದು ಸಚಿವರು ತಿಳಿಸಿದರು.

ಈ ಸಂಧರ್ಭದಲ್ಲಿ ಮುಜರಾಯಿ ಇಲಾಖೆಯ ಆಯುಕ್ತೆ ರೋಹಿಣಿ ಸಿಂಧೂರಿ, ಸೌತ್‌ ವೆಸ್ಟರ್ನ್‌ ರೈಲ್ವೇಯ ಚೀಪ್‌ ಕಮರ್ಷಿಯಲ್‌ ಮ್ಯಾನೇಜರ್‌ ಡಾ ಅನೂಪ್‌ ದಯಾನಂದ್‌ ಹಾಗೂ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.

ಇದನ್ನೂ ಓದಿ | ಉತ್ತರ ಕಾಶಿಯಲ್ಲಿ ಕಮರಿಗೆ ಉರುಳಿದ ಬಸ್‌, 25 ಮಂದಿ ಚಾರ್‌ ಧಾಮ್‌ ಯಾತ್ರಿಕರು ಮೃತ್ಯು

Exit mobile version