Site icon Vistara News

Siddheshwar swamiji | ಸಣ್ಣವರಿದ್ದಾಗಲೇ ಗುಡ್ಡದ ಮೇಲೆ ಹೋಗಿ ಒಬ್ಬರೇ ಧ್ಯಾನ ಮಾಡುತ್ತಿದ್ದರು ಪುಟ್ಟ ಸಿದ್ದು!

siddheshwara sri thande thayi

ವಿಜಯಪುರ: ಸೋಮವಾರ ರಾತ್ರಿ ದೇವರ ಪಾದ ಸೇರಿದ ಇಲ್ಲಿನ ಜ್ಞಾನ ಯೋಗಾಶ್ರಮದ ಶ್ರ್ರೀ ಸಿದ್ದೇಶ್ವರ ಸ್ವಾಮಿಗಳಿಗೆ ಅಧ್ಯಾತ್ಮ ಎನ್ನುವುದು ಸಾಧನಾ ಪಥವೇನೂ ಆಗಿರಲಿಲ್ಲ, ಬದಲಾಗಿ ಅದು ಅಯಾಚಿತವಾಗಿ ಬಂದ ಸಹಜ ಪ್ರಕ್ರಿಯೆಯಾಗಿತ್ತು. ಇದಕ್ಕೆ ಹಲವು ನಿದರ್ಶನಗಳನ್ನು ನೀಡುತ್ತಾರೆ ಅವರ ಬಾಲ್ಯದ ಒಡನಾಡಿಯಾಗಿರುವ ಭೀಮರಾಯ ಶಿವಪ್ಪ ಪಟ್ಟಣ ಅವರು.

ಸಿದ್ದೇಶ್ವರ ಸ್ವಾಮಿಗಳ ಪ್ರಾಥಮಿಕ ಶಿಕ್ಷಣದ ಜತೆಗಾರ, ಗ್ರಾಮ ಸೇವಕರಾಗಿ ನಿವೃತ್ತರಾದ ಭೀಮರಾಯ ಶಿವಪ್ಪ ಪಟ್ಟಣ ಅವರು ಸೋಮವಾರ ಶ್ರೀಗಳ ದರ್ಶನಕ್ಕೆ ಬಂದ ಮೇಲೆ ಬಾಲ್ಯದ ಹಲವು ಕಥೆಗಳನ್ನು ತೆರೆದಿಟ್ಟರು. ಅದರ ಜತೆಗೆ ಒಮ್ಮೆ ಅಧ್ಯಾತ್ಮದ ಕಡೆಗೆ ವಾಲಿದ ಸಿದ್ದೇಶ್ವರರರು ಬಳಿಕ ತಮ್ಮ ಊರಿನ ವ್ಯಾಮೋಹವನ್ನೂ ಹೊಂದಿರಲಿಲ್ಲ ಎನ್ನುವುದನ್ನು ನೆನಪಿಸಿಕೊಂಡರು.

– ಸಹಪಾಠಿಗಳು, ಮನೆಯ ಎಲ್ಲರೂ ಅವರನ್ನು ಪ್ರೀತಿಯಿಂದ ಸಿದ್ದು ಎಂದೇ ಕರೆಯುತ್ತಿದ್ದೆವು. ಶಾಲೆಯಲ್ಲಿ ಒಳ್ಳೆಯ ಹುಡುಗರೊಂದಿಗೆ ಮಾತ್ರ ಬೆರೆಯುತ್ತಿದ್ದರು. ಓದಿನಲ್ಲಿ ಚುರುಕು, ಕೆಲವು ಸಲ ನಮ್ಮೂರಿನ ಗುಡ್ಡದ ಮೇಲೆ ಒಬ್ಬರೇ ಕುಳಿತು ಧ್ಯಾನ ಮಾಡುತ್ತಿದ್ದರು. ಈಗ ಇದನ್ನೆಲ್ಲ ಗಮನಿಸಿದಾಗ ಅವರಿಗೆ ಬಾಲ್ಯದಲ್ಲೇ ಅಧ್ಯಾತ್ಮದ ಒಲವಿತ್ತು ಅನಿಸುತ್ತದೆ.

– 1ರಿಂದ 7ನೇ ತರಗತಿ ತನಕ ಬಿಜ್ಜರಗಿಯ ಸರ್ಕಾರಿ ಗಂಡು ಮಕ್ಕಳ ಶಾಲೆಯಲ್ಲಿ ಕಲಿತೆವು. ಸಿದ್ದುಗಿಂತ ನಾನು 6 ತಿಂಗಳು ದೊಡ್ಡವನು. ಅವರ ತಂದೆ ಓಗೆಪ್ಪಗೌಡ ಬಿರಾದಾರ ಚಿತ್ರಕಲಾವಿದರು. ಅವರ ತಾಯಿ ಸಂಗವ್ವ ಬಸವನಬಾಗೇವಾಡಿ ತಾಲೂಕಿನ ನಂದ್ಯಾಳದವರು. ಆರು ಮಕ್ಕಳಲ್ಲಿ ಸಿದ್ದಗೊಂಡ ಹಿರಿಯವರು.

– ನಾನು ಮತ್ತು ಸಿದ್ದೇಶ್ವರ ಸ್ವಾಮೀಜಿ ಕಲಿಯುವಾಗ ಒಂದೇ ಹಾಸಿಗೆಯಲ್ಲಿ ಮಲಗುತ್ತಿದ್ದೆವು. ಒಂದು ಸಾರಿ ಅವರು ಪರೀಕ್ಷೆಯ ಪೇಪರ್‌ ತುಂಬಾ ಕೇವಲ ಓಂ ನಮಃ ಶಿವಾಯ ಅಂತ ಬರೆದಿಟ್ಟು ಬಂದಿದ್ದರು.

– 1953ರಲ್ಲಿ ಮೂಲ್ಕಿ ಪರೀಕ್ಷೆ ಬರೆಯಲು ನಾವೆಲ್ಲ ಕೆಲ ದಿನ ವಿಜಯಪುರದಲ್ಲೇ ಇದ್ದೆವು. ಆ ವೇಳೆ ವೇದಾಂತ ಕೇಸರಿ ಮಲ್ಲಿಕಾರ್ಜುನ ಶ್ರೀಗಳ ತಿಂಗಳ ಪ್ರವಚನ ನಡೆದಿತ್ತು. ಸಿದ್ದು ನಿತ್ಯ ಪ್ರವಚನ ಕೇಳಲು ಹೋಗುತ್ತಿದ್ದರು. ನಂತರ ಮಲ್ಲಿಕಾರ್ಜುನ ಶ್ರೀಗಳು ವಿಜಯ ಕಾಲೇಜಿನಲ್ಲಿ ವಾಸ್ತವ್ಯ ಮಾಡಿದ್ದರು. ಆಗಲೂ ಇವರು ಅಲ್ಲಿಗೆ ಹೋಗುತ್ತಿದ್ದರು. ಒಂದು ದಿನ ಮಲ್ಲಿಕಾರ್ಜುನ ಶ್ರೀಗಳು ವಿಚಾರಿಸಿದಾಗ ಇವರ ಅಧ್ಯಾತ್ಮದ ಹಸಿವು ಗೊತ್ತಾಗಿ ಜತೆಗಿಟ್ಟುಕೊಂಡು ಓದಿಸುವುದಾಗಿ ಪಾಲಕರಲ್ಲಿ ಹೇಳಿದರು.

– ಒಮ್ಮೆ ಅಧ್ಯಾತ್ಮದತ್ತ ಒಲವು ಮೂಡಿ ಊರು ಬಿಟ್ಟ ಸಿದ್ದೇಶ್ವರ ಅವರು ಕೆಲವೇ ಕಾರ್ಯಕ್ರಮ ಬಿಟ್ಟರೆ ಊರಿಗೆ ಬಂದದ್ದು ಕಡಿಮೆ. ತೀರಾ ಇತ್ತೀಚೆಗೆ ನಮ್ಮೂರಿನ ಹೈಸ್ಕೂಲ್‌ ಕಾರ್ಯಕ್ರಮ, ಮತ್ತೊಂದು ಕಾರ್ಯಕ್ರಮಕ್ಕಷ್ಟೇ ಬಂದಿದ್ದರು. ತಂದೆ, ತಾಯಿ ನಿಧನರಾದಾಗಲೂ ಬಿಜ್ಜರಗಿಗೆ ಬರಲಿಲ್ಲ. ಅವರು ಸನ್ಯಾಸತ್ವದ ತತ್ವ ಮೀರಲಿಲ್ಲ.

– ನಾವು ಭೇಟಿಯಾದಾಗ ಪೂರ್ವಾಶ್ರಮದ ದಿನಗಳನ್ನು ಶ್ರೀಗಳು ಚರ್ಚಿಸುತ್ತಿರಲಿಲ್ಲ. ಹಳೆಯ ಸ್ನೇಹಿತರ ಒಡನಾಟದ ಬಗ್ಗೆಯೂ ಮಾತಾಡುತ್ತಿರಲಿಲ್ಲ.

ಇದನ್ನೂ ಓದಿ | Siddheshwar Swamiji | ವೈಕುಂಠ ಏಕಾದಶಿಯ ಪುಣ್ಯದಿನದಂದೇ ದೇಹ ತ್ಯಜಿಸಿದ ಪುಣ್ಯ ಜೀವಿ

Exit mobile version