Site icon Vistara News

Solar Eclipse 2022 | ಮೈಸೂರು ಚಾಮುಂಡೇಶ್ವರಿ, ಸಿಗಂಧೂರು ಚೌಡೇಶ್ವರಿ, ಶ್ರೀರಂಗಪಟ್ಟಣದ ರಂಗನಾಥ, ಮೇಲುಕೋಟೆ ಚಲುವನಾರಾಯಣನ ದರ್ಶನವಿಲ್ಲ

chamundeshwari mysuru

ಬೆಂಗಳೂರು: 27 ವರ್ಷಗಳ ನಂತರ ಬಂದಿರುವ ಸೂರ್ಯಗ್ರಹಣದ (Solar Eclipse 2022) ಹಿನ್ನೆಲೆಯಲ್ಲಿ ರಾಜ್ಯ ವಿವಿಧ ದೇಗುಲಗಳಲ್ಲಿ ಗ್ರಹಣ ಕಾಲದಲ್ಲಿ ಪೂಜೆ, ಪುನಸ್ಕಾರಗಳನ್ನು ಬಂದ್‌ ಮಾಡಲಾಗಿದೆ. ಇನ್ನು ಕೆಲವು ಕಡೆ ಎಂದಿನಂತೆ ಧಾರ್ಮಿಕ ಕಾರ್ಯಗಳಿಗೆ ವ್ಯವಸ್ಥೆಕಲ್ಪಿಸಲಾಗಿದೆ. ಇವುಗಳಲ್ಲಿ ಮೈಸೂರಿನ ಚಾಮುಂಡೇಶ್ವರಿ, ಮಂಡ್ಯ ಜಿಲ್ಲೆಯ ಪ್ರಮುಖ ದೇಗುಲಗಳಲ್ಲಿ ಗ್ರಹಣಕ್ಕಿಂತ ಮುಂಚಿತವಾಗಿ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದ್ದರೆ, ಶಿವಮೊಗ್ಗದ ಸಿಗಂಧೂರು ಚೌಡೇಶ್ವರಿ ದೇವಸ್ಥಾನದಲ್ಲಿ ಮಂಗಳವಾರ (ಅ.೨೫) ಭಕ್ತರಿಗೆ ಪ್ರವೇಶವನ್ನೇ ನಿರ್ಬಂಧ ಮಾಡಲಾಗಿದೆ.

ಮಂಡ್ಯ ಜಿಲ್ಲೆಯ ಪ್ರಮುಖ ದೇವಾಲಯಗಳಲ್ಲಿ ಮಂಗಳವಾರ ಗ್ರಹಣ ಕಾಲದಲ್ಲಿ ಪೂಜಾ ಕೈಂಕರ್ಯಗಳನ್ನು ಬಂದ್‌ ಮಾಡಲಾಗಿದೆ. ಆದರೆ, ಬೆಳಗ್ಗೆ 7 ರಿಂದ ಮಧ್ಯಾಹ್ನ 12 ಗಂಟೆವರೆಗೆ ಎಂದಿನಂತೆ ಪೂಜೆಗೆ ಸಾರ್ವಜನಿಕರ ದರ್ಶನಕ್ಕೆ ಅವಕಾಶ. ಆದರೆ, ಮಧ್ಯಾಹ್ನ 12 ಗಂಟೆಯಿಂದ ರಾತ್ರಿ 7ರವರೆಗೆ ದೇವಾಲಯಗಳಲ್ಲಿ ಪೂಜೆ ಸೇರಿದಂತೆ ಎಲ್ಲ ರೀತಿಯ ಚಟುವಟಿಕೆಯೂ ಸ್ಥಗಿತಗೊಂಡಿದೆ. ರಾತ್ರಿ 7 ಗಂಟೆ ಮೇಲೆ ಸೂರ್ಯಗ್ರಹಣ ಕಳೆಯುತ್ತಿರುವ ಹಿನ್ನೆಲೆಯಲ್ಲಿ ಆ ನಂತರ ದೇವಾಲಯಗಳಲ್ಲಿ ಶುದ್ಧೀಕರಣ ಕಾರ್ಯಕ್ಕೆ ಚಾಲನೆ ನೀಡಲಾಗುವುದು. ಇದರಿಂದಾಗಿ ಈ ವೇಳೆ ಯಾವುದೇ ರೀತಿಯ ಪೂಜೆಗಳನ್ನು ನೆರವೇರಿಸಲಾಗುವುದಿಲ್ಲ ಎಂದು ಹೇಳಲಾಗಿದೆ.

ಶ್ರೀರಂಗಪಟ್ಟಣದಲ್ಲಿರುವ ಶ್ರೀರಂಗನಾಥಸ್ವಾಮಿ ದೇವಾಲಯ, ಗಂಜಾಂನಲ್ಲಿರೊ ನಿಮಿಷಾಂಭ ದೇವಾಲಯ, ಪಾಂಡವಪುರ ತಾಲೂಕಿನ ಮೇಲುಕೋಟೆಯಲ್ಲಿರುವ ಶ್ರೀ ಚೆಲುವನಾರಾಯಣಸ್ವಾಮಿ ದೇವಾಲಯ ಹಾಗೂ ಯೋಗಾನರಸಿಂಹ ಸ್ವಾಮಿ ದೇವಾಲಯಗಳಲ್ಲಿ ಈ ಮೇಲನಂತೆ ನಿರ್ಬಂಧ ವಿಧಿಸಲಾಗಿದೆ.

ಚಾಮುಂಡಿಬೆಟ್ಟದಲ್ಲಿ ಭಕ್ತರಿಗೆ ನಿರ್ಬಂಧ
ಮೈಸೂರಿನ ಚಾಮುಂಡಿಬೆಟ್ಟದಲ್ಲಿ ಕೇತುಗ್ರಸ್ತ ಸೂರ್ಯಗ್ರಹಣ ಹಿನ್ನೆಲೆಯಲ್ಲಿ ಮಂಗಳವಾರ ಚಾಮುಂಡೇಶ್ವರಿ ದರ್ಶನಕ್ಕೆ ಸಂಬಂಧಪಟ್ಟಂತೆ ಮಧ್ಯಾಹ್ನ 1 ಗಂಟೆ ವರೆಗೆ ಮಾತ್ರ ಸಾರ್ವಜನಿಕರಿಗೆ ದರ್ಶನ‌ ವ್ಯವಸ್ಥೆ ಕಲ್ಪಿಸಲಾಗಿದೆ. ಗ್ರಹಣದ ಸ್ಪರ್ಶಕಾಲ ಮತ್ತು ಮೋಕ್ಷ ಕಾಲದಲ್ಲಿ ಯಾವುದೇ ರೀತಿಯ ಧಾರ್ಮಿಕ ಚಟುವಟಿಕೆ ಇರುವುದಿಲ್ಲ ಎಂದು ತಿಳಿಸಲಾಗಿದ್ದು, ಮಧ್ಯಾಹ್ನದ ನಂತರ ಚಾಮುಂಡೇಶ್ವರಿ ದರ್ಶನಕ್ಕೆ ಅವಕಾಶವನ್ನು ನಿರಾಕರಿಸಲಾಗಿದೆ.

ಚೌಡೇಶ್ವರಿ ದೇಗುಲದಲ್ಲಿ ಪ್ರವೇಶ ನಿರ್ಬಂಧ
ಸೂರ್ಯಗ್ರಹಣ ಹಿನ್ನೆಲೆಯಲ್ಲಿ ಚೌಡೇಶ್ವರಿ ದೇಗುಲದಲ್ಲಿ ಪ್ರವೇಶ ಕಾರ್ಯವನ್ನು ನಿರ್ಬಂಧ ಮಾಡಲಾಗಿದೆ. ಅ.25ರಂದು ಬೆಳಗ್ಗೆ 9 ಗಂಟೆಯಿಂದ ಸಂಜೆಯವರೆಗೆ ದೇಗುಲವನ್ನು ಬಂದ್ ಮಾಡಲಾಗುತ್ತಿದ್ದು, ಈ ವೇಳೆ ಯಾವುದೇ ಪೂಜೆ, ದರ್ಶನಕ್ಕೆ ಅವಕಾಶವಿಲ್ಲ ಎಂದು ದೇವಸ್ಥಾನದ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.

ಇದನ್ನೂ ಓದಿ | Solar Eclipse 2022 | ಗೋಕರ್ಣ ಮಹಾಬಲೇಶ್ವರ ದೇಗುಲದಲ್ಲಿ ಆತ್ಮಲಿಂಗ ಸ್ಪರ್ಶ, ದರ್ಶನಕ್ಕೆ ಅವಕಾಶ

ಮಲೆಮಹದೇಶ್ಚರ ಬೆಟ್ಟದಲ್ಲಿದೆ ಪೂಜೆ-ಪ್ರಸಾದ
ಚಾಮರಾಜನಗರ ಮಲೆಮಹದೇಶ್ಚರ ಬೆಟ್ಟದಲ್ಲಿದೆ ಎಂದಿನಂತೆ ಧಾರ್ಮಿಕ ಪೂಜಾ ವಿಧಿವಿಧಾನಗಳು ನೆರವೇರಲಿದ್ದು, ಪ್ರಸಾದ ವ್ಯವಸ್ಥೆಯೂ ಇರಲಿದೆ. ದೇಗುಲವನ್ನು ಬಂದ್‌ ಮಾಡುವುದಿಲ್ಲ. ಭಕ್ತರಿಗೆ ಎಂದಿನಂತೆ ದರ್ಶನಾವಕಾಶವನ್ನು ಕಲ್ಪಿಸಲಾಗಿದೆ ಎಂದು ಮಲೆಮಹದೇಶ್ವರ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಕಾತ್ಯಾಯಿನಿದೇವಿ ತಿಳಿಸಿದ್ದಾರೆ. ಗ್ರಹಣ ಸಂದರ್ಭದಲ್ಲಿ ಹಿಂದೆಐೂ ಸಹ ದೇವಾಲಯವನ್ನು ಬಂದ್ ಮಾಡಿದ ಇತಿಹಾಸವಿಲ್ಲ. ಹೀಗಾಗಿ ಅದೇ ಸಂಪ್ರದಾಯ ಮುಂದುವರಿಯಲಿದೆ. ಯಾವುದೇ ಸೇವೆಗಳಲ್ಲಿ ವ್ಯತ್ಯಯ ಇರುವುದಿಲ್ಲ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.

ಮಂತ್ರಾಲಯದಲ್ಲಿ ದರ್ಶನಕ್ಕೆ ಎಂದಿನಂತೆ ಅವಕಾಶ
ಮಂತ್ರಾಲಯದಲ್ಲಿ ದರ್ಶನಕ್ಕೆ ಎಂದಿನಂತೆ ಅವಕಾಶವನ್ನು ಕಲ್ಪಿಸಲಾಗಿದ್ದು, ರಾಯರ ದರ್ಶನಕ್ಕೆ ಯಾವುದೇ ರೀತಿಯ ನಿರ್ಬಂಧ ಇಲ್ಲ. ದಿನನಿತ್ಯದ ಪೂಜೆ ಮತ್ತು ಸೇವೆಗಳಿಗೆ ಮಾತ್ರ ನಿರ್ಬಂಧ ವಹಿಸಲಾಗಿದೆ. ಹೀಗಾಗಿ ಈ ಮೊದಲು ದಿನವಿಡೀ ನಡೆಯುತ್ತಿದ್ದ ಪೂಜೆಗಳು ಮಂಗಳವಾರ ನಡೆಯುವುದಿಲ್ಲ. ಆದರೆ, ಗ್ರಹಣ ಹಿನ್ನೆಲೆಯಲ್ಲಿ ಮಠದಲ್ಲಿ ಗ್ರಹಣ ಶಾಂತಿ-ಹೋಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಠದ ಆಡಳಿತ ಮಂಡಳಿ ಮಾಹಿತಿ ನೀಡಿದೆ.

ಇದನ್ನೂ ಓದಿ | Solar Eclipse 2022 | ಗ್ರಹಣದ ಸಂದರ್ಭದಲ್ಲಿ ಸೂರ್ಯನನ್ನು ಕೇತು ನುಂಗುತ್ತಾನಾ? ಈ ಪುರಾಣ ಕಥೆ ಓದಿ

Exit mobile version