ಹೆಚ್ಚೇನೂ ದೂರವಿಲ್ಲ, ಕರ್ನಾಟಕದ ಚಿಕ್ಕಬಳ್ಳಾಪುರದ ಮುದ್ದೇನಹಳ್ಳಿ ಎಂಬಲ್ಲಿ ಸದ್ಗುರು ಮಧುಸೂದನ ಸಾಯಿ ಅವರ ನೂರಾರು ಎಕರೆ ವಿಸ್ತೀರ್ಣದ ಆಶ್ರಮವಿದೆ. ಅವರು ಮತ್ತು ಅವರ ನೂರಾರು ಭಕ್ತರು ಹೇಳುವ ಪ್ರಕಾರ, ಅವರ ಮೈಮೇಲೆ ಶ್ರೀ ಸಾಯಿಬಾಬಾ ಅವರ ಆವಾಹನೆ ಆಗುತ್ತದೆ. ಆದರೆ ಪುಟ್ಟಪರ್ತಿಯ ಮೂಲ ಸಾಯಿಬಾಬಾ ಆಶ್ರಮದವರ ಪ್ರಕಾರ ಈ ವ್ಯಕ್ತಿ ನಕಲಿ. ಹಾಗಿದ್ದರೆ ನಿಜವೇನು?
ಒಂದು ಕಾಲದಲ್ಲಿ ಸತ್ಯನಾರಾಯಣ ರಾಜು ಅವರು ಸತ್ಯಸಾಯಿ ಬಾಬಾ ಆದಂತೆ, ಇಂದು ಮಧುಸೂದನ ನಾಯ್ಡು ಅವರು ತಮ್ಮ ಭಕ್ತಾದಿಗಳ ಬೆಂಬಲದಿಂದ ʼಸದ್ಗುರು ಶ್ರೀ ಮಧುಸೂದನ ಸಾಯಿʼ ಆಗಿದ್ದಾರೆ. ಸಾಯಿಬಾಬಾ ಅವರಂತೆಯೇ ಬಟ್ಟೆ ಧರಿಸುತ್ತಾರೆ. ಅವರಂತೆಯೇ ಗಾಳಿಯಿಂದ ವಿಭೂತಿ ಸೃಷ್ಟಿಸುವುದು, ಶೂನ್ಯದಿಂದ ಉಂಗುರ ಸೃಷ್ಟಿಸುವುದು ಮುಂತಾದ ಪವಾಡಗಳನ್ನು ಮಾಡುತ್ತಾರೆ. ಪುಟ್ಟಪರ್ತಿಯಿಂದ ನೂರು ಕಿಲೋಮೀಟರ್ ದೂರದಲ್ಲಿರುವ ಮುದ್ದೇನಹಳ್ಳಿಯಲ್ಲಿ ತಮ್ಮದೇ ಆದ ವ್ಯವಸ್ಥಿತ ಬೃಹತ್ ಆಶ್ರಮ ಸಾಮ್ರಾಜ್ಯವನ್ನು ಕಟ್ಟಿಕೊಂಡಿದ್ದಾರೆ.
ಸಾಯಾಬಾಬಾ ನನ್ನ ಜೊತೆ ಮಾತಾಡ್ತಾರೆ!
2011ರಲ್ಲಿ ಸಾಯಿಬಾಬಾ ಅವರು ನಿಧನ ಹೊಂದಿದರು. ಆಗ ಮಧುಸೂದನ ಅವರು ʼʼನನ್ನ ಜೊತೆ ಸಾಯಿಬಾಬಾ ಮಾತಾಡುತ್ತಾರೆʼʼ ಎಂದು ಹೇಳಿಕೊಂಡಿದ್ದರು. ಈಗ ʼʼಅವರೇ ನನ್ನ ಮೇಲೆ ಆವಾಹನೆಯಾಗುತ್ತಾರೆʼʼ ಎಂದು ಹೇಳಿಕೊಳ್ಳುತ್ತಾರೆ. ʼʼನನಗೆ ದೇಹವಿಲ್ಲ. ಆದರೆ ನಾನು ನಿಮ್ಮ ದೇಹಗಳ ಮೂಲಕ ಪವಾಡ ಮಾಡುತ್ತೇನೆʼʼ ಎಂದು ಸಾಯಿಬಾಬಾ ಅವರು ಮಧುಸೂದನ ಸಾಯಿ ಅವರಿಗೆ ಹೇಳಿದ್ದನ್ನು ತಮ್ಮ ಲೇಖನದಲ್ಲಿ ಬರೆದುಕೊಂಡಿದ್ದಾರೆ ಅವರು.
ಮುದ್ದೇನಹಳ್ಳಿಯ ಆಶ್ರಮ ಕಾರ್ಪೊರೇಟ್ ಮಾದರಿಯಲ್ಲಿದೆ. ಪಿಆರ್ ವ್ಯವಸ್ಥೆ ಕೂಡ ಅದ್ಭುತವಾಗಿದೆ. ಪುಟ್ಟಪರ್ತಿಯಿಂದ ಕೆಲವು ಭಕ್ತರು ಕೂಡ ಮುದ್ದೇನಹಳ್ಳಿಯ ಆಶ್ರಮಕ್ಕೆ ಶಿಫ್ಟ್ ಆಗಿದ್ದಾರೆ, ನಿಷ್ಠ ಬದಲಾಯಿಸಿದ್ದಾರೆ. ಆದರೆ ಪುಟ್ಟಪರ್ತಿಯ ಆಶ್ರಮದವರಿಗೆ ಮಧೂಸೂದನ ಸಾಯಿಯ ನೂತನ ಅವತಾರದ ಮೇಲೆ ಸಿಟ್ಟಿದೆ. ʼʼಅದು ನಕಲಿ, ನಾಟಕʼʼ ಎಂಬುದು ಅವರ ಅಭಿಪ್ರಾಯ.
2011ರ ಏಪ್ರಿಲ್‌ನಲ್ಲಿ ಸಾಯಿಬಾಬಾ ನಿರ್ವಾಣ ಹೊಂದಿದರು. ತಾನು 96 ವರ್ಷದವರೆಗೆ ಬದುಕುತ್ತೇನೆ, ನಂತರ ಕರ್ನಾಟಕದ ಮಂಡ್ಯದಲ್ಲಿ ಪ್ರೇಮಸಾಯಿಯಾಗಿ ಜನಿಸುತ್ತೇನೆ ಎಂದು ಅವರು ಹೇಳಿಕೊಂಡಿದ್ದರು. ಆದರೆ ಬದುಕಿದ್ದು 84 ವರ್ಷ ಮಾತ್ರ.
ಬಾಬಾರ ನಿಕಟ ಅನುಯಾಯಿ
ಮಧುಸೂದನ ಸಾಯಿ ಅವರಿಗೆ ಈಗ 43 ವರ್ಷ. ಸಾಯಿಬಾಬಾ ತೀರಿಕೊಂಡ ಬಳಿಕ ಪುಟ್ಟಪರ್ತಿಯಲ್ಲಿದ್ದ ನರಸಿಂಹ ಮೂರ್ತಿ, ಸಿ.ಶ್ರೀನಿವಾಸ್, ಐಸಾಕ್ ಟಿಗ್ರೆಟ್ ಎಂಬ ದೊಡ್ಡ ಭಕ್ತರೆಲ್ಲ ಮಧುಸೂದನರ ಜೊತೆಗೆ ಸೇರಿಕೊಂಡರು. ಕೆಮಿಸ್ಟ್ರಿಯಲ್ಲಿ ಬಿಎ ಮತ್ತು ಎಂಎ ಡಿಗ್ರಿ ಮಾಡಿದ ಮಧುಸೂದನ, ಎಂಬಿಎಯನ್ನು ಪುಟ್ಟಪರ್ತಿಯಲ್ಲಿ ಮಾಡಿದರು. ಆಗಲೇ ಅದ್ಭುತವಾಗಿ ಮಾತನಾಡುತ್ತಿದ್ದರು, ಸ್ಟಡಿಯಲ್ಲಿ ಪಾರಂಗತ. ಸಂಗೀತ, ನಾಟಕ, ಪೇಂಟಿಂಗ್‌ಗಳಲ್ಲಿ ಪ್ರತಿಭಾವಂತ. ಸಾಯಿಬಾಬಾ ಅವರ ಹತ್ತಿರದ ಒಡನಾಟ ಹೊಂದಿದ್ದರು. ಆಗಲೇ ಹಾಸ್ಟೆಲ್‌ನಲ್ಲಿ ಸಾಯಿಬಾಬಾ ಅವರ ಮಾತು, ಕೈಕರಣಗಳನ್ನು ಅನುಕರಿಸಿ ಗೆಳೆಯರನ್ನು ಆಕರ್ಷಿಸುತ್ತಿದ್ದರು. ಸಾಯಿಬಾಬಾರಿಂದ ಕೆರಿಯರ್ ಮಾರ್ಗದರ್ಶನ ಪಡೆಯುತ್ತಿದ್ದರು. ಬಾಬಾ ಅವರ ತಂದೆತಾಯಿಗಳ ಪೇಟಿಂಗ್ ಮಾಡಿಕೊಟ್ಟಿದ್ದರು.
ಇದನ್ನೂ ಓದಿ: Explainer: ಕಾಶಿ ಮಾದರಿ ಸಮೀಕ್ಷೆಯತ್ತ ಮಥುರಾ ಶ್ರೀ ಕೃಷ್ಣ ಜನ್ಮಭೂಮಿ ?
2003ರಲ್ಲಿ ಎಂಬಿಎ ಮಾಡಿದ ಬಳಿಕ, ಬ್ಯಾಂಕಿಂಗ್‌ನತ್ತ ಹೋದರು. ಆದರೆ ಪುಟ್ಟಪರ್ತಿಗೆಗೆ ಆಗಾಗ ಬರುತ್ತಿದ್ದರು. ಸಾಯಿಬಾಬಾ ತೀರಿಕೊಂಡ ನಂತರ ಮಧುಸೂದನರ ವರ್ತನೆಗಳು ಬದಲಾದವು. ʼʼಸಮಾಧಿ ಒಡೆದು ಬಾಬಾ ಹೊರಗೆ ಬರುತ್ತಾರೆʼʼ ಎನ್ನುತ್ತಿದ್ದರು. ಪುಟ್ಟಪರ್ತಿಗೆ ಬಂದು ಭಕ್ತರನ್ನೆಲ್ಲ ಒಂದೆಡೆ ಸೇರಿಸಿ, ಅವರನ್ನು ದಿಟ್ಟಿಸಿ ನೋಡಿ, ʼʼಅದೋ ಬಾಬಾ ಬಂದರುʼʼ ಎನ್ನುತ್ತಿದ್ದರು. ಬಾಬಾ ನನ್ನ ಜೊತೆ ಮಾತಾಡುತ್ತಿದ್ದಾರೆ ಎನ್ನುತ್ತಿದ್ದರು. ಬಾಬಾ ಸಾವಿನ ಶಾಕ್‌ಗೆ ಮಧುಸೂದನ ಒಳಗಾಗಿದ್ದಾರೆ ಎಂದು ಪುಟ್ಟಪರ್ತಿ ಆಶ್ರಮದವರು ಇದನ್ನು ನಿರ್ಲಕ್ಷಿಸಿದರು.
ಸಾಯಿಬಾಬಾ ತಮ್ಮ ಕೊನೆಗಾಲದಲ್ಲಿ ಯಾವುದೇ ಉಯಿಲು ಇತ್ಯಾದಿ ಏನೂ ಬರೆದಿಟ್ಟಿರಲಿಲ್ಲ. ಹೀಗಾಗಿ ಪುಟ್ಟಪರ್ತಿಯ ಉತ್ತರಾಧಿಕಾರದ ಕುರಿತ ಗೊಂದಲ ಮುಂದುವರಿದಿತ್ತು. ಪುಟ್ಟಪರ್ತಿಗೇ ಸಂಬಂಧಿಸಿದ ಮುದ್ದೇನಹಳ್ಳಿಯ 120 ಎಕರೆ ಆಶ್ರಮ ಕೂಡ ಮುಂದೇನು ಎಂಬ ಇತ್ಯರ್ಥ ಇಲ್ಲದೇ ಹೋಗಿತ್ತು. ಅದೇ ಸಂದರ್ಭದಲ್ಲಿ ಮಧುಸೂದನ ಅಲ್ಲಿಗೆ ಬಂದು ಝಂಡಾ ಊರಿದರು.
ಅಲ್ಲಿಂದಾಚೆಗೆ ಮುದ್ದೇನಹಳ್ಳಿ ಆಶ್ರಮದ ಲುಕ್ಕೇ ಬದಲಾಗಿ ಹೋಯಿತು. ಹೊಸ ಆಶ್ರಮ ಬಂತು. ʼಸತ್ಯಸಾಯಿ ಗ್ರಾಮʼ ಎಂದು ಕರೆಯಲಾಯಿತು. ಅಗಲ ಬೀದಿಗಳು, ದೊಡ್ಡ ಕಟ್ಟಡಗಳು, ಸೊಗಸಾದ ಲಾನ್‌ಗಳು, ಫುಡ್ ಔಟ್‌ಲೆಟ್‌ಗಳು, ಶಾಪಿಂಗ್ ಮಾಲ್‌ಗಳು ಬಂದವು. ನಿತ್ಯ ಧ್ಯಾನದ ಶೆಡ್ಯೂಲ್‌ಗಳು ಹಾಗೂ ಸಾರಿಗೆ ಸಂಪರ್ಕವಿದೆ. ಸ್ಟೇಡಿಯಂ ಮತ್ತು ಗೋಶಾಲೆ ನಿರ್ಮಾಣವಾಗುತ್ತಿದೆ. ಕೋಟ್ಯಂತರ ರೂಪಾಯಿ ಹಣ ದೇಶ ವಿದೇಶದ ಭಕ್ತಾದಿಗಳಿಂದ ಹರಿದು ಬರುತ್ತಿದೆ.
ಬಾಬಾ ಸಂದೇಶವಾಹಕ
2011ರ ನಂತರ ʼʼನಾನು ಸತ್ಯಸಾಯಿ ಬಾಬಾ ಅವರ ಸಂದೇಶವಾಹಕʼʼ ಎಂದು ಮಧುಸೂದನ ಹೇಳಿಕೊಂಡರು. ಸರಳ ಬಟ್ಟೆ ತೊಡುತ್ತಿದ್ದರು. ತಮ್ಮ ಗುರುವಿಗಾಗಿ ಮೀಸಲಾದ ಒಂದು ಕುರ್ಚಿಯನ್ನು ಮುಂದಿಟ್ಟುಕೊಂಡು ಅದರ ಮುಂದೆ ಕುಳಿತಿರುತ್ತಿದ್ದರು. ಸ್ವಲ್ಪ ಕಾಲದ ನಂತರ ʼʼನಾನು ಸಾಯಿಬಾಬಾ ಅವರನ್ನು ನೋಡಬಲ್ಲೆʼʼ ಎನ್ನತೊಡಗಿದರು. ಮರ್ಸಿಡಿಸ್ ಕಾರಿನ ಬಾಗಿಲು ತೆರೆದು, ಹಿಂದಿನ ಸೀಟಿನಿಂದ ಇಳಿದು ಬರುತ್ತಿರುವ ಸಾಯಿಬಾಬಾ ಅವರನ್ನ ಸ್ವಾಗತಿಸಿದಂತೆ, ಅವರ ಮಾತನ್ನು ಆಲಿಸಿದಂತೆ, ತಾನೂ ಅವರೊಂದಿಗೆ ಮಾತಾಡಿದಂತೆ ಅಭಿನಯಿಸಿದರು.
ಇದೆಲ್ಲ ಬಾಬಾ ಅವರ ಭಕ್ತರನ್ನು ಆಕರ್ಷಿಸಿತು. ಪುಟ್ಟಪರ್ತಿಯ ಅನೇಕ ಸಾಂಪ್ರದಾಯಿಕ ಭಕ್ತರು ಕೂಡ ಇತ್ತ ಸೆಳೆತಕ್ಕೊಳಗಾದರು. ವಿದೇಶಗಳ ಭಕ್ತರೂ ಬರತೊಡಗಿದರು. ಕೆಲವು ವಿದೇಶಿ ಭಕ್ತರ ಹಿಂದಿನ ಜೀವನದ ವಿವರಗಳನ್ನು ಕರಾರುವಕ್ಕಾಗಿ ಹೇಳಿ, ಅವರನ್ನು ಮತ್ತಷ್ಟು ಇಂಪ್ರೆಸ್ ಮಾಡಿದರು. ಕೆಲವರು ಪರ್ಮನೆಂಟಾಗಿ ತಮ್ಮ ತಾಣವನ್ನು ಪುಟ್ಟಪರ್ತಿಯಿಂದ ಇಲ್ಲಿಗೆ ಬದಲಾಯಿಸಿದರು.
ನಾನೇ ಬಾಬಾ!
ನಿಧಾನವಾಗಿ ಮಧುಸೂದನ ಇನ್ನಷ್ಟು ಬದಲಾದರು. ಸತ್ಯಸಾಯಿ ಬಾಬಾ ಅವರಂತೆಯೇ ಉಡುಪು ಧರಿಸತೊಡಗಿದರು. 2019ರ ಜುಲೈ 16ರಂದು, ಸಾಯಿಬಾಬಾ ಅವರಿಗೆ ಮೀಸಲಿಟ್ಟ ಆಸನದಲ್ಲಿ ತಾವೇ ಕುಳಿತರು. ʼʼಗುರುಪೂರ್ಣಿಮೆಯಂದು ನಾನು ಎಲ್ಲವನ್ನೂ ಮಧುಸೂದನ್‌ಗೆ ಒಪ್ಪಿಸಿಕೊಟ್ಟಿದ್ದೇನೆ. ಅಗತ್ಯವಿದ್ದರೆ ಅವನು 24 ಗಂಟೆಯೂ ನನ್ನ ಆವಾಹನೆಯನ್ನು ಹೊಂದಿ ಇರಬಹುದುʼʼ ಎಂದು ಸಾಯಿಬಾಬಾ ಅವರ ಧ್ವನಿಯಲ್ಲಿ ಮಧುಸೂದನ ಹೇಳಿದರು.
ಇದನ್ನೂ ಓದಿ: Explainer: ಜ್ಞಾನವಾಪಿ ಮಸೀದಿ ವಿವಾದ: ಹಿಂದೂಗಳಿಗೆ ಅಡ್ಡಿಯಾಗುತ್ತಾ ಪೂಜಾ ಸ್ಥಳಗಳ ಕಾಯಿದೆ ?
ಇದೆಲ್ಲವೂ ಅತ್ತ ಪುಟ್ಟಪರ್ತಿಯ ಆಶ್ರಮದಲ್ಲಿ ಒಂದು ಬಗೆಯ ಕೋಲಾಹಲವನ್ನೇ ಸೃಷ್ಟಿಸಿವೆ. ಮಧುಸೂದನ ಅವರ ಬೋಧನೆ, ಮಾತುಗಳಿಂದ ಆಕರ್ಷಿತರಾಗಿ ಇತ ಬಂದವರು ಹಲವರಿದ್ದಾರೆ. ಅವರನ್ನು ಪುಟ್ಟಪರ್ತಿಯ ಆಶ್ರಮದವರು ಮರಳಿ ಸೇರಿಸಿಕೊಂಡಿಲ್ಲ. ʼʼಮಧುಸೂದನ ಮಾಡುತ್ತಿರುವುದೆಲ್ಲಾ ನಾಟಕʼʼ ಎಂದೇ ಅವರು ಪ್ರತಿಪಾದಿಸುತ್ತಾ ಬಂದಿದ್ದಾರೆ. ಆಶ್ರಮದ ಜಾಗದ ತಗಾದೆ ಸೇರಿದಂತೆ ಹಲವಾರು ಕೋರ್ಟ್ ಪ್ರಕರಣಗಳು ಸಾಯಿಬಾಬಾ ಟ್ರಸ್ಟ್ ಹಾಗೂ ಮುದ್ದೇನಹಳ್ಳಿ ಆಶ್ರಮದ ನಡುವೆ ಇವೆ. ಮಧುಸೂದನ ಅವರ ಪುಸ್ತಕ ಅಥವಾ ಇನ್ಯಾವುದೇ ಪ್ರಭಾವಗಳು ಕಂಡುಬಂದಲ್ಲಿ ಅಂಥವರ ಮೇಲೆ ಪುಟ್ಟಪರ್ತಿ ಆಶ್ರಮ ಕಠಿಣ ಕ್ರಮ ಕೈಗೊಳ್ಳುತ್ತದೆ.
ಕೆಲವು ದಾಖಲೆಗಳ ಪ್ರಕಾರ ಇತ್ತೀಚೆಗೆ ಪುಟ್ಟಪರ್ತಿಗಿಂತಲೂ ಅಧಿಕ ವಿದೇಶಿ ಹಣ ಮುದ್ದೇನಹಳ್ಳಿ ಆಶ್ರಮಕ್ಕೆ ಹರಿದುಬರುತ್ತಿದೆ. ಆದರೆ ಪುಟ್ಟಪರ್ತಿಯ ಸಾಮ್ರಾಜ್ಯ ಇಂದಿಗೂ ಅಖಂಡಿತವಾಗಿಯೇ ಇದೆ. 114 ದೇಶಗಳಲ್ಲಿ ಹರಡಿಕೊಂಡಿರುವ ಸಾಯಿಬಾಬಾ ಕೇಂದ್ರಗಳು, ಶಿಕ್ಷಣಕೇಂದ್ರಗಳು, ಸುಸಜ್ಜಿತ ಏರ್‌ಪೋರ್ಟ್ ಎಲ್ಲ ಇವೆ.
ಸಾಯಿಬಾಬಾ ಅವರು ಮಧುಸೂದನ ಸಾಯಿ ಅವರ ದೇಹದಲ್ಲಿ ಇದ್ದಾರೆ ಎಂಬುದರ ಬಗ್ಗೆ ಅವರ ಭಕ್ತರಿಗೆ ಅಪನಂಬಿಕೆಯಿಲ್ಲ. ಆದರೆ ಪುಟ್ಟಪರ್ತಿಯವರಿಗೆ ಇದರ ಬಗ್ಗೆ ನಂಬಿಕೆಯಿಲ್ಲ. ಇಬ್ಬರಿಗೂ ತಮ್ಮ ತಮ್ಮ ಸಾಮ್ರಾಜ್ಯವನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯವಂತೂ ಇದ್ದೇ ಇದೆ.