ರಂಗಸ್ವಾಮಿ ಎಂ.ಮಾದಾಪುರ, ಮೈಸೂರು
ಕೊರೊನಾ ಸೋಂಕು ಕಾಲಿಟ್ಟು ಅದೆಷ್ಟೋ ಸಂಭ್ರಮದ ಕ್ಷಣಗಳನ್ನು ಕಳೆದೆರಡು ವರ್ಷಗಳಲ್ಲಿ ಕಿತ್ತುಕೊಂಡಿದೆ. ನಾಡಿಗೆ ನಾಡೇ ಸೇರಿ ಆಚರಿಸುತ್ತಿದ್ದ ಹಬ್ಬ ಮೈಸೂರು ದಸರಾ, ಸೋಂಕಿನ ಕಾರಣದಿಂದ ಮಂಕಾಗಿತ್ತು. ಜನರಿಲ್ಲದೇ ದೇವಸ್ಥಾನ ಹಾಗೂ ಮೈಸೂರು ಅರಮನೆಗೆ ಸೀಮಿತವಾಗಿ ಸರಳವಾಗಿ ಕಳೆದು ಹೋಗಿತ್ತು. ಆದರೆ ಈ ಬಾರಿ ಅದ್ಧೂರಿ ದಸರಾ ಆಚರಣೆಗೆ ಸಕಲ ಸಿದ್ಧತೆ ನಡೆದಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ಮಂಗಳವಾರ (ಜು.19) ದಸರಾ ಉನ್ನತ ಮಟ್ಟದ ಸಮಿತಿ ಸಭೆ ನಡೆಯಲಿದ್ದು, 2022ನೇ ಸಾಲಿನ ವಿಶ್ವವಿಖ್ಯಾತ ದಸರಾ ಮಹೋತ್ಸವವನ್ನು ಅದ್ಧೂರಿಯಾಗಿ ಆಚರಿಸಲು ತೀರ್ಮಾನಿಸುವ ಸಾಧ್ಯತೆಗಳಿವೆ.
ವಿಧಾನಸೌಧದಲ್ಲಿ ಮಂಗಳವಾರ ಸಂಜೆ 4 ಗಂಟೆಗೆ ಹೈ ಪವರ್ ಕಮಿಟಿ ಸಭೆ ನಡೆಯಲಿದೆ. ಸಮಿತಿ ಸದಸ್ಯರಾದ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಸೇರಿ ಒಟ್ಟು 27 ಸದಸ್ಯರು ಸಮಿತಿಯಲ್ಲಿದ್ದಾರೆ. ಸಿಎಂ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಭೆಯಲ್ಲೇ ದಸರಾ ರೂಪುರೇಷೆಗಳು ನಿರ್ಧಾರವಾಗಲಿವೆ. ಸಭೆಯ ತೀರ್ಮಾನದಂತೆ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯ ದಸರಾ ಕಾರ್ಯಕಾರಿ ಸಮಿತಿ ಸಿದ್ಧತೆಗಳನ್ನು ಕೈಗೊಳ್ಳಲಿದೆ.
ಇದನ್ನೂ ಓದಿ | ಮುಂದಿನ ದಸರಾದೊಳಗೆ ಬೆಂಗಳೂರು- ಮೈಸೂರು ದಶಪಥ ಪೂರ್ಣ: ಪ್ರತಾಪ್‌ಸಿಂಹ
ಅದ್ದೂರಿ ದಸರಾ
ಕೋವಿಡ್ ಮಹಾಮಾರಿ 2020 ಮತ್ತು 2021ನೇ ಸಾಲಿನ ದಸರಾ ಸಂಭ್ರಮವನ್ನು ಬಲಿ ಪಡೆದುಕೊಂಡಿತು. ಎರಡೂ ವರ್ಷ ಚಾಮುಂಡಿ ಬೆಟ್ಟದಲ್ಲಿ ನಿರ್ಬಂಧಿತ ಪ್ರವೇಶಾತಿಯೊಂದಿಗೆ ಸರಳವಾಗಿ ದಸರಾ ಉದ್ಘಾಟಿಸಲಾಗಿತ್ತು. ಜಂಬೂ ಸವಾರಿಯನ್ನೂ ಮೈಸೂರು ಅರಮನೆ ಅಂಗಳಕ್ಕೆ ಸೀಮಿತಗೊಳಿಸಲಾಗಿತ್ತು. ಚಿಣ್ಣರ ದಸರಾ, ಯುವ ದಸರಾ, ಮಹಿಳಾ ದಸರಾ, ಗ್ರಾಮೀಣ ದಸರಾ, ದಸರಾ ಕ್ರೀಡಾಕೂಟ ಸೇರಿದಂತೆ ಹತ್ತಾರು ಕಾರ್ಯಕ್ರಮಗಳನ್ನು ರದ್ದುಪಡಿಸಲಾಗಿತ್ತು.
ಸರಳ ದಸರಾದಿಂದ ನಾಡಹಬ್ಬದ ಸೊಬಗು ಕ್ಷೀಣಿಸಿತ್ತು. ಈಗ ಕರೊನಾ ಅಬ್ಬರ ಕಡಿಮೆಯಾಗಿದೆ. ಉತ್ತಮವಾಗಿ ಮಳೆಯಾಗಿದ್ದು, ನಾಡಿನ ಜಲಾಶಯಗಳು ಭರ್ತಿಯಾಗಿವೆ. ಜತೆಗೆ ಸಾರ್ವತ್ರಿಕ ಚುನಾವಣೆಯೂ ಹತ್ತಿರವಾಗುತ್ತಿದೆ. ಈ ಎಲ್ಲ ಕಾರಣಗಳನ್ನೂ ಗಮನದಲ್ಲಿಟ್ಟುಕೊಂಡು ರಾಜ್ಯ ಸರ್ಕಾರ ಅದ್ದೂರಿ ದಸರಾ ಆಚರಿಸಲು ಉತ್ಸುಕವಾಗಿದೆ. ಅದರಲ್ಲೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಅದ್ದೂರಿಯಾಗಿ ನಾಡಹಬ್ಬ ಆಚರಿಸಲು ತುದಿಗಾಲಲ್ಲಿ ನಿಂತಿದ್ದಾರೆ. ಹೀಗಾಗಿ ದಸರಾ ಉನ್ನತ ಮಟ್ಟದ ಸಮಿತಿ ಸಭೆಯಲ್ಲೇ ಈ ಬಗ್ಗೆ ಸ್ಪಷ್ಟ ತೀರ್ಮಾನ ಹೊರಬೀಳಲಿದೆ.
20 ಆನೆಗಳ ಪಟ್ಟಿ ಸಿದ್ದತೆ
ಈಗಾಗಲೇ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳುವ ಆನೆಗಳ ಆಯ್ಕೆ ಪ್ರಕ್ರಿಯೆ ಪೂರೈಸಿರುವ ಅರಣ್ಯ ಇಲಾಖೆ 20 ಆನೆಗಳ ಪಟ್ಟಿ ಸಿದ್ಧಪಡಿಸಿದೆ. ವನ್ಯಜೀವಿ ವಿಭಾಗದ ಡಿಸಿಎಫ್ ಕರಿಕಾಳನ್ ಇತ್ತೀಚೆಗೆ ಮೈಸೂರು, ಚಾಮರಾಜನಗರ ಮತ್ತು ಕೊಡಗು ಜಿಲ್ಲೆಯ ಆನೆ ಶಿಬಿರಗಳಿಗೆ ಭೇಟಿ ನೀಡಿ ಖುದ್ದಾಗಿ ಆನೆಗಳನ್ನು ಪರಿಶೀಲಿಸಿದ್ದಾರೆ. ದಸರಾ ಕಾರ್ಯಕ್ರಮಗಳು ನಿಗದಿಯಾದ ಬಳಿಕ ಆನೆಗಳ ಸಂಖ್ಯೆ ತೀರ್ಮಾನವಾಗಲಿದೆ. 14-15 ಆನೆಗಳನ್ನು ಕಾಡಿನಿಂದ ನಾಡಿಗೆ ಕರೆತರಲು ಚಿಂತನೆ ನಡೆಸಲಾಗಿದೆ. ಕಳೆದ ಎರಡು ಬಾರಿ ಅಂಬಾರಿ ಹೊತ್ತಿರುವ ಕೂಂಬಿಂಗ್ ಸ್ಪೆಷಲಿಸ್ಟ್ ಅಭಿಮನ್ಯು ಹೆಸರಿನ ಆನೆಯೇ ಅಂಬಾರಿ ಗಜಪಡೆಯ ನಾಯಕತ್ವ ವಹಿಸಲಿದೆ. 4 ಹೆಣ್ಣಾನೆ ಹಾಗೂ 2 ಹೊಸ ಆನೆಗಳನ್ನು ತರಲು ಉದ್ದೇಶಿಸಲಾಗಿದೆ. ದಸರಾ ಕಾರ್ಯಕಾರಿ ಸಮಿತಿ ಮುಂದಿನ ವಾರ ಆನೆಗಳ ಪಟ್ಟಿ ಬಿಡುಗಡೆ ಮಾಡಲಿದೆ.
ಪ್ರವಾಸೋದ್ಯಮಕ್ಕೆ ಜೀವ ಕಳೆ
ಕೋವಿಡ್ ನಿಂದ ಕಂಗೆಟ್ಟಿದ್ದ ಪ್ರವಾಸೋದ್ಯಮ ಸ್ವಲ್ಪಮಟ್ಟಿಗೆ ಚೇತರಿಸಿಕೊಂಡಿದೆ. ಮೈಸೂರು ನಗರದ ಸುತ್ತಲಿನ ಪ್ರವಾಸಿ ತಾಣಗಳತ್ತ ಅಂತಾರಾಜ್ಯ, ಅಂತಾರಾಷ್ಟ್ರೀಯ ಪ್ರವಾಸಿಗರು ಬಂದು ಹೋಗುತ್ತಿದ್ದಾರೆ. ಈ ಬಾರಿ ಅದ್ದೂರಿಯಾಗಿ ದಸರಾ ಆಚರಣೆ ಮೂಲಕ ಪ್ರವಾಸೋದ್ಯಮಕ್ಕೆ ಮತ್ತಷ್ಟು ಚೇತರಿಕೆ ನೀಡಬೇಕು. ಹೊರಗಿನ ಪ್ರವಾಸಿಗರು ಮೈಸೂರಿಗೆ ಬರುವಂತಾಗಬೇಕು. ಪ್ರವಾಸಿಗರನ್ನೇ ನೆಚ್ಚಿಕೊಂಡಿರುವ ಹೋಟೆಲ್, ಟ್ರಾವೆಲ್ಸ್, ಅಸಂಘಟಿತ ಉದ್ಯಮಗಳು ಪುಟಿದೇಳುವಂತಾಗಬೇಕು ಎಂಬುದು ಎಲ್ಲರ ನಿರೀಕ್ಷೆಯಾಗಿದೆ.
ಎಲ್ಲ ಸಮಿತಿಗಳಿಗೂ ಅಸ್ತಿತ್ವ
ಕಳೆದ ಬಾರಿ ಕೇವಲ ಆರು ಉಪಸಮಿತಿಗಳಿಗೆ ಮಾತ್ರ ಅವಕಾಶ ನೀಡಲಾಗಿತ್ತು. ಸ್ವಾಗತ ಮತ್ತು ಆಮಂತ್ರಣಗೆ ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ಮಂಜುನಾಥಸ್ವಾಮಿ, ಮೆರವಣಿಗೆ ಸಮಿತಿಗೆ ನಗರ ಪೊಲೀಸ್ ಆಯುಕ್ತ ಡಾ. ಚಂದ್ರಗುಪ್ತ, ಸಾಂಸ್ಕೃತಿಕ ಸಮಿತಿಗೆ ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಯೋಗೀಶ್, ಸ್ತಬ್ಧಚಿತ್ರ ಸಮಿತಿಗೆ ಮುಡಾ ಆಯುಕ್ತ ಟಿ.ಬಿ.ನಟೇಶ್ ವಿಶೇಷ ಅಧಿಕಾರಿಗಳಾಗಿದ್ದರು. ಅವರೊಂದಿಗೆ ಕಾರ್ಯಾಧ್ಯಕ್ಷರು ಮತ್ತು ಕಾರ್ಯದರ್ಶಿಗಳನ್ನು ನೇಮಿಸಲಾಗಿತ್ತು.
ಈ ಬಾರಿ ವಿದ್ಯುತ್ ದೀಪಾಲಂಕಾರ ಸಮಿತಿ, ಸ್ವಚ್ಛತಾ ಸಮಿತಿ, ಕ್ರೀಡಾ ಸಮಿತಿ, ಕುಸ್ತಿ ಸಮಿತಿ ಸೇರಿದಂತೆ ಎಲ್ಲ ಸಮಿತಿಗಳೂ ಅಸ್ತಿತ್ವಕ್ಕೆ ಬರಲಿವೆ. ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರನ್ನು ಪಕ್ಷ ಸಂಘಟನೆಗೆ ತೊಡಗಿಸಿಕೊಳ್ಳುವ ಸಲುವಾಗಿ ಅಧಿಕಾರೇತರ ಸದಸ್ಯರನ್ನೂ ನೇಮಿಸಿಕೊಳ್ಳಲು ಅವಕಾಶ ಸಿಗಬಹುದು ಎಂದು ಅಂದಾಜಿಸಲಾಗಿದೆ.
ಇದನ್ನೂ ಓದಿ | ದಸರಾ ಹಬ್ಬಕ್ಕೆ ಬರಲಿದೆ ರಿಷಭ್ ಶೆಟ್ಟಿಯ ಕಾಂತಾರ, ಕಥೆ ಏನಿರಬಹುದು?