Site icon Vistara News

Ugadi 2023 : ಜಗದ ಆದಿ ಈ ಯುಗಾದಿ!

ugadi 2023 know history significance celebrations and more about the festival in kannada

ugadi

ಸುಬ್ರಹ್ಮಣ್ಯ ಸೋಮಯಾಜಿ
ಶುಭಕೃತ್‌ ಸಂವತ್ಸರವು ಉರುಳಿ ಶೋಭನಕೃತ್‌ ಸಂವತ್ಸರಕ್ಕೆ ತನ್ನ ಒಡೆತನವನ್ನು ವಹಿಸಿದೆ. ಯುಗಾದಿಯು (Ugadi 2023) ಆಸೇತು ಹಿಮಾಲಯ ಆಚರಿಸುವ ನಮ್ಮ ಸಂಭ್ರಮದ ಹಬ್ಬ. ಭಾರತೀಯ ಮಹರ್ಷಿಗಳು ನಿಸರ್ಗದ ಅಧ್ಯಯನದಿಂದ ವಿಶ್ವ ವಿಕಾಸಚಕ್ರದ ಆರಂಭದ ಬಿಂದುವನ್ನು ಗುರುತಿಸಿ ತಂದುಕೊಟ್ಟ ಪರ್ವದಿನ. ಕಾಲಾತೀತನಾದ ಭಗವಂತನು ಕಾಲಚಕ್ರದಲ್ಲೂ ವ್ಯಾಪಿಸಿ ಪ್ರಕೃತಿಮಾತೆಯನ್ನು ಸಸ್ಯಶ್ಯಾಮಲೆಯನ್ನಾಗಿಸುವ ಆರಂಭದ ದಿನ.

ಎಲ್ಲೆಲ್ಲೂ ಕಣ್ಮನಗಳನ್ನು ಸೆಳೆಯುವ ಬಣ್ಣ ಬಣ್ಣದ ಹೊಸ ಚಿಗುರುಗಳು ಹೊಸವರ್ಷದ ಹರ್ಷವನ್ನು ತರುತ್ತಿವೆ. ವಿಕಾಸದ ಹಾದಿಯಲ್ಲಿ ತಮ್ಮ ಕರ್ತವ್ಯವನ್ನು ನಿರ್ವಹಿಸಿ, ನಮ್ಮೆಡೆಗೆ ಬಂದವರಿಗೆಲ್ಲ ತಂಪನ್ನು ನೀಡಿ, ತಾವಿದ್ದ ವೃಕ್ಷದ ಶೋಭೆಯಾಗಿದ್ದು, ಹಣ್ಣಾದ ಎಲೆಗಳು ಯೋಗಿಯಂತೆ ನಿರ್ಲಿಪ್ತ ಭಾವದಿಂದ ಹೊಸ ಚಿಗುರೆಲೆಗೆ ದಾರಿ ಮಾಡಿ ಕೊಟ್ಟು ತಮ್ಮ ಜಾಗದಿಂದ ಕಳಚಿಕೊಂಡಿವೆ. ಆ ಎಡೆಯಲ್ಲಿ ಹೊಸ ತಳಿರುಗಳು ಮುಂದಿನ ವಿಕಾಸದ ಹೊಣೆಹೊತ್ತು ಕರ್ತವ್ಯಪರವಾಗಿ ನಿಂತಿವೆ. ನಿಸರ್ಗವೆಲ್ಲವೂ ಹೊಸಬಗೆಯ ಚೈತನ್ಯದಿಂದ, ಕೋಗಿಲೆಯ ಇಂಚರದಿಂದ, ಸ್ನಾತೆಯಾಗಿ ಶುಭ್ರವಸ್ತ್ರವೇಷ್ಟಿತಳಾಗಿ, ಶುಚಿಸ್ಮಿತೆಯಾಗಿ ಕಂಗೊಳಿಸುವ ಮಹೋತ್ಸವದ ಪರ್ವಕಾಲ.

ಭಾರತೀಯ ಹಬ್ಬಗಳ ಹಿನ್ನೆಲೆ ಏನು?

ಭಾರತೀಯ ಸಂಸ್ಕೃತಿಯಲ್ಲಿ ದಿನಕ್ಕೊಂದು ಹಬ್ಬದಂತೆ ಹಬ್ಬಗಳ ಸಾಲು ಸಾಲು. ಒಂದೊಂದು ಹಬ್ಬದ ಆಚರಣೆ ಒಂದೊಂದು ಬಗೆಯದು. ಅಲ್ಲಿ ಆರಾಧಿಸುವ ಒಂದೊಂದು ದೇವತೆಗೆ ಒಂದೊಂದು ಬಗೆಯ ಭಕ್ಷ್ಯಗಳು. ಇದೆಲ್ಲ ಏಕೆ? ಬೇರೆ ಸಂಸ್ಕೃತಿಗಳಲ್ಲಿ ಇರುವಂತೆ ಕೆಲವೇ ಹಬ್ಬಗಳಿದ್ದರೆ ಅದನ್ನು ಸಂಭ್ರಮದಿಂದ, ವೈಭವದಿಂದ ಆಚರಿಸಬಹುದಲ್ಲವೇ? ಇಷ್ಟಾರು ಬಗೆಯ ಆಚರಣೆಗಳ ವೈವಿಧ್ಯವಾದರೂ ಏಕೆ, ಇನ್ನು ನಾವು ವಿಧ ವಿಧ ಭಕ್ಷ್ಯಗಳನ್ನು ಮಾಡಿ ದೇವರಿಗೆ ಕೊಡಬೇಕೇ? ದೇವರಿಗೆ ನಮ್ಮಂತೆ ನಾಲಿಗೆ ಚಪಲವೇ? ನಾವು ಕೊಟ್ಟ ಭಕ್ಷ್ಯಗಳಿಂದ ತೃಪ್ತಿ ಹೊಂದುವ ದೇವರು, ಸ್ವತಃ ಪರಾವಲಂಬಿ ಆದರೆ ನಮ್ಮನ್ನು ಹೇಗೆ ತಾನೇ ಕಾಪಾಡಿಯಾನು? ಎಂಬೆಲ್ಲ ಪ್ರಶ್ನೆಗಳು ಏಳಬಹುದು.

ಆದರೆ ಭಾರತೀಯ ಮಹರ್ಷಿಗಳು ತಂದ ಹಬ್ಬಗಳು ಕೇವಲ ತಿನ್ನುವ, ಕುಡಿಯುವ ಕುಣಿದಾಡುವ, ಹರಟೆ ಹೊಡೆಯುವ ಸಮಾರಂಭಗಳು ಮಾತ್ರವಲ್ಲ. ಅವು ಪರಮಾತ್ಮನ ಕಾಲ ಶರೀರದಲ್ಲಿ ಗಿಣ್ಣಿನಂತೆ ಇರುವ ಜಾಗಗಳು. ಶಕ್ತಿಯ ಕೆಂದ್ರಸ್ಥಾನಗಳು. “ತನ್ನ ಕಾಲರೂಪವಾದ ಶರೀರದಲ್ಲಿ ಭಗವಂತನು ಗೊತ್ತಾದ ಸ್ಥಾನಗಳಲ್ಲಿ ಜೀವಿಗಳಿಗೆ ಅವುಗಳ ಉದ್ಧಾರಕ್ಕಾಗಿ ಒದಗಿಸಿಕೊಡುವ ಸೌಲಭ್ಯಗಳೇ ಪರ್ವಗಳು; ಆ ಅನುಗ್ರಹದ ಉಪಯೋಗವನ್ನು ಕಳೆದುಕೊಳ್ಳಬಾರದು ” ಎಂಬ ಶ್ರೀರಂಗ ಮಹಾಗುರುಗಳ ಮಾತು ಇಲ್ಲಿ ಸ್ಮರಣೀಯ.

ಕಬ್ಬಿನ ಗಿಣ್ಣುಗಳಲ್ಲಿ ಒಂದೊಂದು ಗಿಣ್ಣೂ ಸಸ್ಯದ ಹೊಸ ಬೆಳವಣಿಗೆಗೆ ಬೀಜಭೂತವಾಗಿರುತ್ತದೆ. ಅಲ್ಲಿ ಎಷ್ಟು ಗಿಣ್ಣುಗಳು ಇರಬೇಕು ಎಂದು ನಿಸರ್ಗವೇ ತೀರ್ಮಾನಿಸುತ್ತದೆ. ಅದರ ಜಾತಿ ಮತ್ತು ಬೆಳವಣಿಗೆಗೆ ತಕ್ಕಂತೆ ಆ ಪರ್ವಗಳ ಸಂಖ್ಯೆ ಪ್ರಕೃತಿಯಲ್ಲಿ ನಿಯತವಾಗಿರುತ್ತದೆ. ಅದರ ಸಂಖ್ಯೆ ಹೆಚ್ಚಾಗಿದ್ದರೆ ಅದನ್ನೆಲ್ಲಾ ನೆಟ್ಟು ಬೆಳೆಸಿ ಗಿಡದ ಸಂತಾನವನ್ನು ವೃದ್ಧಿಪಡಿಸುವುದಕ್ಕೆ ಸಹಾಯವಾಗುತ್ತದೆ. ಅದನ್ನು ನಾವು ಉಪಯೋಗಿಸಲಿ, ಬಿಡಲಿ ಅದರ ಸಂಖ್ಯೆ ಎಷ್ಟಿರಬೇಕೋ ಅಷ್ಟು ಇದ್ದೇ ಇರುತ್ತದೆ. ಹಾಗೆಯೇ ಕಾಲವೃಕ್ಷದಲ್ಲಿರುವ ಹಬ್ಬಗಳಿಗೂ ಇದೇ ನಿಯಮ ಅನ್ವಯಿಸುತ್ತದೆ.

ಒಂದು ದಿನದಲ್ಲಿ ಪ್ರಾತಃಕಾಲ, ಮಧ್ಯಾಹ್ನ ಕಾಲ, ಸಾಯಂಕಾಲ ಇವುಗಳಿರುವುದು ಸ್ಥೂಲ ದೃಷ್ಟಿಗೂ ಗೋಚರವಾಗುತ್ತದೆ. ಅದನ್ನೇನೂ ಬದಲಾಯಿಸಬೇಕು ಎಂದು ನಾವು ಬಯಸದೇ ನಮ್ಮ ಭೌತಿಕ ಪ್ರಯೋಜನಗಳಿಗೆ ಅವನ್ನು ಬಳಸಿಕೊಳ್ಳುತ್ತೇವೆ. ಹಾಗೆಯೇ ಮಹರ್ಷಿಗಳ ಸೂಕ್ಷ್ಮ ದೃಷ್ಟಿಗೆ ಗೋಚರವಾದ ಈ ಪರ್ವಕಾಲ-ಹಬ್ಬಗಳನ್ನು ಹೀಗೆಯೇ ಅರಿತು ಉಪಯೋಗಿಸಿಕೊಳ್ಳುವುದು ಜಾಣತನ. ಈ ಪರ್ವಕಾಲಗಳು ಕೇವಲ ಭೌತಿಕ ಜೀವನಕ್ಕೆ ಮಾತ್ರವೇ ಸಂಬಂಧಿಸದೇ, ದೈವಿಕ- ಆಧ್ಯಾತ್ಮಿಕ ಉನ್ನತಿಗೂ ಕಾರಣವಾಗುವುದನ್ನು ಗುರುತಿಸಿ ಲೋಕಹಿತದ ದೃಷ್ಟಿಯಿಂದ ನಮಗೆ ತಂದುಕೊಟ್ಟಿದ್ದಾರೆ. ಅವು ನಾವು ಹೇಳಿದಾಗ ಬರುವುದಿಲ್ಲ. ಅವು ಬಂದಾಗ ಅವನ್ನು ವ್ಯರ್ಥಗೊಳಿಸದೆ ಉಪಯೋಗಿಸಿಕೊಳ್ಳಬೇಕು. ಹಬ್ಬಗಳ ಸಂಖ್ಯೆಯನ್ನು ನಾವು ತೀರ್ಮಾನ ಮಾಡುವ ಅವೈಜ್ಞಾನಿಕ ಪದ್ಧತಿ ನಮ್ಮಲ್ಲಿಲ್ಲ. ಅದನ್ನು ನಿಸರ್ಗವೇ ತೀರ್ಮಾನಿಸುತ್ತದೆ. ಅದನ್ನು ತಮ್ಮ ತಪಸ್ಯೆಯಿಂದ ಗುರುತಿಸಿ ಜೀವಲೋಕಹಿತದ ದೃಷ್ಟಿಯಿಂದ ತಿಳಿಸುವ ಕೆಲಸವನ್ನು ನಮ್ಮ ಮಹರ್ಷಿಗಳು ಮಾಡಿದ್ದಾರೆ ಎಂಬುದನ್ನು ನಾವು ನೆನಪಿಡಬೇಕು.

ನೈವೇದ್ಯ-ಪ್ರಸಾದಗಳ ಋಷಿ ದೃಷ್ಟಿ

ಹಾಗೆಯೇ ಆಯಾ ದೇವತೆಗಳಿಗೆ ಪ್ರೀತಿಕರವಾದ ಭಕ್ಷ್ಯಗಳ ತಯಾರಿಯೂ ಸಹ ನಮ್ಮ ಅಥವಾ ದೇವತೆಗಳ ನಾಲಿಗೆ ಚಾಪಲ್ಯದಿಂದ ಬಂದ ಪದ್ಧತಿಯಲ್ಲ. ಅಂತಹ ಭಕ್ಷ್ಯವನ್ನು ನಿವೇದಿಸಿ ಪ್ರಸಾದ ರೂಪವಾಗಿ ಸೇವಿಸಿದಾಗ ನಮ್ಮ ದೇಹದಲ್ಲಿ ಆ ದೇವತಾ ಪ್ರಬೋಧಕ್ಕೆ, ದರ್ಶನಕ್ಕೆ ಸಂಬಂಧಿಸಿದ ಕೇಂದ್ರಗಳು ತೆರೆದುಕೊಳ್ಳುತ್ತವೆ ಎಂಬುದು ಮಹರ್ಷಿಗಳು ಕಂಡುಕೊಂಡ ಪದಾರ್ಥ ವಿಜ್ಞಾನ; ವೈಜ್ಞಾನಿಕ ಸತ್ಯ. ಅದಕ್ಕಾಗಿ ಬಂದ ಆಚರಣೆಗಳಿವು ಎಂಬುದು ಜ್ಞಾನಿಜನರ ಮಾತು. ಇಷ್ಟು ಹಿನ್ನೆಲೆಯಲ್ಲಿ ಮತ್ತು ಪರಮ ಪೂಜ್ಯ ಶ್ರೀರಂಗಪ್ರಿಯ ಸ್ವಾಮಿಗಳು ಈ ವಿಷಯವಾಗಿ ಅನುಗ್ರಹಿಸಿದ ವಿಷಯಗಳ ನೋಟದಲ್ಲಿ ಪ್ರಸ್ತುತ ಯುಗಾದಿ ಹಬ್ಬದ ಬಗ್ಗೆ ಆಲೋಚಿಸೋಣ.

ವರ್ಷಾರಂಭ ಯಾವ ದಿನ?

ಯಾವುದಾದರೂ ನಿರ್ದಿಷ್ಟ ದಿನವನ್ನು ವರ್ಷದ ಪ್ರಾರಂಭದ ದಿನವೆಂದು ಭಾವಿಸಿ ಅಂದು ಸಂತೋಷವನ್ನು ಆಚರಿಸುವ ಪದ್ಧತಿಯು ಎಲ್ಲಾ ಜನಾಂಗದಲ್ಲೂ ಇದೆ. ಆದರೆ ಪುರುಷಾರ್ಥ ಸಾಧನೆಗೆ ಪೂರ್ಣವಾಗಿ ಹೊಂದಿಕೊಳ್ಳುವ ಯುಗಾದಿ ಪರ್ವಕ್ಕೆ ತಕ್ಕ ಕಾಲವನ್ನು ಆರಿಸಿಕೊಂಡಿರುವುದು ಈ ದೇಶದ ಮಹರ್ಷಿಗಳ ವಿವೇಕಕ್ಕೆ ಸೇರಿದ್ದು. ಇದಕ್ಕೆ ಅವರು ಆರಿಸಿಕೊಂಡಿರುವ ಅಯನ, ಋತು, ಮಾಸ, ಪಕ್ಷ,ತಿಥಿ ಎಲ್ಲವೂ ಅಂದಿನ ಕರ್ಮ ಮತ್ತು ಉದ್ದೇಶಗಳಿಗೆ ಸಮರ್ಥವಾಗಿ ಹೊಂದಿಕೊಳ್ಳುತ್ತದೆ ಎಂಬುದನ್ನು ನಾವು ಗಮನಿಸಬೇಕು.

ಉತ್ತರಾಯಣ-ವಸಂತ ಋತು

ಉತ್ತರಾಯಣವು ದೇವತೆಗಳ ಹಗಲು. ದೇವತಾರಾಧನೆಗೆ ಪ್ರಶಸ್ತವಾದ ಅಯನ. ಯುಗಾದಿಯು ದೇವತಾರಾಧನೆಗೆ ನಿಯತವಾಗಿರುವ ಶುಭಪರ್ವ. ದೇವಮಾರ್ಗಕ್ಕೆ ಹಿತಕರವಾಗಿರುವ ಉತ್ತರಾಯಣವನ್ನೇ ಈ ಹಬ್ಬಕ್ಕೆ ತೆಗೆದುಕೊಂಡಿರುವುದು ಉಚಿತವಾಗಿದೆ. ವಸಂತ ಋತು, ಋತುಗಳ ರಾಜ. ಮೇಲೆ ತಿಳಿಸಿದಂತೆ ಪ್ರಕೃತಿಯು ಹೊಸ ಹೂವು, ತಳಿರುಗಳಿಂದ ತನ್ನನ್ನು ಸಿಂಗರಿಸಿಕೊಂಡು ಜಗತ್ತಿಗೆ ಹೊಸತನದ ಸಂದೇಶವನ್ನು ಸಾರುವ ಋತು. ಜೀವಲೋಕಕ್ಕೆ ಹಳೆಯ ಹೇವರಿಕೆಯ ಸಂಸ್ಕಾರಗಳನ್ನು ಕೊಡವಿ ಸತ್ಯ-ಶಿವ-ಸುಂದರವಾದ ಧರ್ಮ-ಅರ್ಥ-ಕಾಮಗಳನ್ನು ಪಡೆಯುವ ಸಾಧನೆಯ ಮಾರ್ಗದಲ್ಲಿ ಹೊಸ ಹೆಜ್ಜೆಯನ್ನಿಡಲು ಪ್ರೇರಿಸುವ ಋತುರಾಜ. ಶುಭಾಶಂಸನೆ, ಶುಭ ಪ್ರತಿಜ್ಞೆ, ಶಿವ ಸಂಕಲ್ಪಗಳನ್ನು ಮಾಡಲು ಪ್ರೇರಕವಾದ ಕಾಲ. “ತನ್ಮೇ ಮನಃ ಶಿವ ಸಂಕಲ್ಪಮಸ್ತು” ಎಂಬ ಪಲ್ಲವಿಯ ವೇದಮಂತ್ರಗಳನ್ನುಅರ್ಥಪೂರ್ಣವಾಗಿಸುವ ಕಾಲ.

ಐಹಿಕವಾಗಿ ಈ ಸಂಕಲ್ಪಗಳಾದರೆ, ಪಾರಮಾರ್ಥಿಕವಾಗಿ ಒಳಗಿನ ಪ್ರಕೃತಿಯಲ್ಲೂ ಸಹಜವಾಗಿ ಪ್ರಸನ್ನತೆ ಉಂಟಾಗಿ “ತದೇವ ರಮ್ಯಂ ಪರಮ ನಯನೋತ್ಸವ ಕಾರಣಂ” ಎಂದು ಜ್ಞಾನಿಗಳು ಸ್ವಾನುಭವದಿಂದ ಗಾನಮಾಡುವ ಪರಮಪುರುಷನ ಸೌಂದರ್ಯದ ಅನುಭವಕ್ಕೂ ಒಳಮುಖವಾದ ಆಕರ್ಷಣೆ ಉಂಟಾಗುವ ಪರ್ವಕಾಲ ಎಂಬುದು ಅನುಭವಿಗಳ ಮಾತು. ಅಲ್ಲದೇ ಈ ಋತುವಿನ ಸಮಶೀತೋಷ್ಣವಾದ ವಾತಾವರಣವೂ ದೇವತಾಪೂಜೆಗೆ ಬೇಕಾದ ಅರ್ಥ ಸಂಗ್ರಹ, ಪೂಜಾ ಕಾರ್ಯ ಎಲ್ಲಕ್ಕೂ ಹಿತಕರ.

ವಸಂತವೇ ಮುಂತಾದ ಮೂರು ಋತುಗಳು ಉಷ್ಣತಾ ಪ್ರಧಾನವಾಗಿವೆ. ಅವು ಅಗ್ನಿ ಅಥವಾ ಶಿವ ಸ್ವರೂಪದ ಪ್ರತೀಕ. ಶರತ್ತು ಮುಂತಾದ ಮೂರು ಋತುಗಳು ಶೈತ್ಯ ಪ್ರಧಾನ. ಅವು ಸೋಮ ಅಥವಾ ಶಕ್ತಿಸ್ವರೂಪದ ಪ್ರತೀಕ. ಈ ಅಗ್ನಿ ಮತ್ತು ಸೋಮ ಅಥವಾ ಶಿವ-ಶಕ್ತಿಗಳ ಯೋಗದಿಂದಲೇ ಈ ಜಗತ್ತಿನ ಸೃಷ್ಟಿ ಎಂಬುದನ್ನೇ ಬ್ರಹ್ಮಪುರಾಣವು ಸಾರುತ್ತದೆ. ಅದರಿಂದ ಈ ಶೈತ್ಯ ಉಷ್ಣತೆಗಳ ಸಂಗಮಕಾಲವನ್ನು ಸೃಷ್ಟಿಕರ್ತನು ಸೃಷ್ಟಿಯನ್ನು ಪ್ರಾರಂಭಿಸಿದ ದಿನ ಎಂದು ಭಾವಿಸಿರುವುದೂ ಸಹ ಸರ್ವಥಾ ಉಚಿತವಾಗಿದೆ. ಶಿವ-ಶಕ್ತಿಗಳು ಹೊರಮುಖವಾಗಿ ಸೇರಿದರೆ ಸೃಷ್ಟಿ. ಒಳಮುಖವಾಗಿ ಸೇರಿದರೆ ಸಮಾಧಿ. ಅಂತಹ ಸಮಾಧಿಯೋಗಕ್ಕೂ ಅದಕ್ಕನುಗುಣವಾದ ಲೋಕಯಾತ್ರೆಯ ಆಯೋಜನೆಗೂ ಸ್ಫೂರ್ತಿ ನೀಡುವ ಸಂಧಿಸಮಯ ಇದು.

ಚೈತ್ರಮಾಸ-ಶುಕ್ಲಪಕ್ಷ-ಪ್ರಥಮಾ

ಇನ್ನು ಚೈತ್ರಮಾಸದಲ್ಲೇ ಪುಷ್ಪಪಲ್ಲವಗಳು ಬಿರಿಯುವುದು ಮತ್ತು ಅದಕ್ಕಾಗಿ ಮಧುವು ಸೃಷ್ಟಿಯಾಗುವುದು. ಈ ದೃಷ್ಟಿಯಿಂದಲೂ ವರ್ಷಾರಂಭಕ್ಕೆ ತಕ್ಕುದಾದ ಮಾಸ ಚೈತ್ರಮಾಸ. ಶುಕ್ಲಪಕ್ಷವು ದೇವತಾರಾಧನೆಗೂ ಕೃಷ್ಣ ಪಕ್ಷವು ಪಿತೃಗಳ ಆರಾಧನೆಗೂ ಶ್ರೇಷ್ಠವಾಗಿವೆ. ದೇವತಾರಾಧನೆಯೇ ಪ್ರಧಾನವಾಗಿರುವ ಯುಗಾದಿ ಪರ್ವದ ಆಚರಣೆಗೆ ತಕ್ಕ ಪಕ್ಷವೇ ಶುಕ್ಲಪಕ್ಷ. ಓಷಧಿ-ವನಸ್ಪತಿಗಳ ಅಭಿವೃದ್ಧಿಗೆ, ಅವುಗಳ ರಾಜನಾದ ಸೋಮನ ಅಭ್ಯುದಯಕ್ಕೆ ಕಾರಣವಾದ ಪಕ್ಷವೇ ಶುಕ್ಲಪಕ್ಷ. ಎಂದೇ ಶುಕ್ಲಪಕ್ಷವನ್ನು ಆರಿಸಿರುವುದು ಅತ್ಯಂತ ಉಚಿತವಾಗಿದೆ. ಇನ್ನು ಪ್ರಥಮಾ ತಿಥಿಯು, ಚಂದ್ರನ ಪ್ರಥಮ ಕಲೆಯು ಕಾಣಿಸಿಕೊಳ್ಳುವ ದಿನ. ಅದರಿಂದ ವರ್ಷದ ಪ್ರಥಮ ದಿನವನ್ನಾಗಿ ಅದನ್ನು ಪರಿಗಣಿಸಿರುವುದು ಯುಕ್ತವಾಗಿದೆ. ಇವಿಷ್ಟೂ ಚಾಂದ್ರಮಾನ ಯುಗಾದಿಯನ್ನು ಆಚರಿಸುವ ಕಾಲದ ಮಹತ್ವವಾಯಿತು.

ಸೌರಮಾನ ಯುಗಾದಿ

ಇನ್ನು ಸೌರಮಾನ ಯುಗಾದಿಯ ಕಾಲದ ವಿಷಯ. ಅದಕ್ಕೆ ನಿಯತವಾಗಿರುವ ಕಾಲ ಮೇಷಮಾಸದ ಸಂಕ್ರಮಣ. ಅಯನ, ಮಾಸಗಳು ಚಾಂದ್ರಮಾನ ಯುಗಾದಿಯ ಅಯನ ಮಾಸಗಳೇ. ಇದಲ್ಲದೇ ದಿನದ ವಿಶೇಷವನ್ನು ಗಮನಿಸಿದರೆ ಅದು ಸಂಕ್ರಮಣದ ದಿನ. ಸೂರ್ಯನು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಪ್ರವೇಶಿಸುವ ಕಾಲವನ್ನು ಸಂಕ್ರಮಣ ಎನ್ನುತ್ತಾರೆ. ವರ್ಷದಲ್ಲಿ 12 ಸಂಕ್ರಮಣಗಳು. ಇವೆಲ್ಲವೂ ಪರ್ವ ಕಾಲಗಳೇ. ಮೇಲೆ ತಿಳಿಸಿದಂತೆ ಕಾಲವೃಕ್ಷದಲ್ಲಿರುವ ಗಿಣ್ಣಿನ ಜಾಗಗಳೇ.

ಇವುಗಳಲ್ಲಿ ಮೇಷಸಂಕ್ರಮಣವು “ಮಹಾವಿಷುವ” ಎಂದು ಕರೆಯಲ್ಪಡುವ ವಿಶೇಷ ಪರ್ವಕಾಲ. ಈ ವಿಷುವ ಕಾಲದಲ್ಲಿ ಹೊರಗಿನ ಸೂರ್ಯನು ರಾಶಿಯಲ್ಲಿ ಹೆಜ್ಜೆ ಹಾಕುವಂತೆಯೇ ಸಮಕಾಲದಲ್ಲಿ ಒಳಗಿನ ಜೀವ ಸೂರ್ಯನೂ ಸುಷುಮ್ನೆಯ ಗ್ರಂಥಿಯೊಳಗೆ ಸಂಗಮ ಹೊಂದುತ್ತಾನೆ; ಸಹಜವಾಗಿ ಸಮಾಧಿ ಸ್ಥಿತಿಯಲ್ಲಿ ಅವಗಾಹನೆ ಮಾಡ ತೊಡಗುತ್ತಾನೆ ಎಂಬುದು ಯೋಗಿಗಳ ಅನುಭವವೇದ್ಯವಾದ ವಿಷಯ. ಅದರಿಂದಲೇ ಈ ಸಂಗಮ ಕಾಲವು ಧ್ಯಾನಕ್ಕೆ, ಪೂಜೆ ದಾನಗಳಿಗೆ ಮತ್ತು ತರ್ಪಣಗಳಿಗೆ ಅತ್ಯಂತ ಶ್ರೇಷ್ಠವಾಗಿದೆ.

ಈ “ಸಂಗಮ” “ಸಾಮ್ಯ”ಗಳೆಲ್ಲ ಕೇವಲ ಆಕಸ್ಮಿಕ ಘಟನೆಗಳಲ್ಲ. ಪ್ರಕೃತಿನಿಯಮದಂತೆ ಸಹಜವಾಗಿ ಐಕ್ಯ ಹೊಂದುವ ಒಳ-ಹೊರ ಸಂಗಮ, ಸಾಮ್ಯಗಳು ಅವು. ಪ್ರಾಮಾಣಿಕವಾಗಿ ಧ್ಯಾನಾಭ್ಯಾಸ ಮಾಡುವ ಸಾಧಕರಿಗೆ ಈ ಪರ್ವ ಕಾಲಗಳ ಮಹಾ ಮೌಲ್ಯವು ಅನುಭವಕ್ಕೆ ಬರುವ ವಿಷಯಗಳಾಗಿವೆ. ಹೀಗೆ ಯುಗಾದಿ ಪರ್ವಕ್ಕೆ ಮಹರ್ಷಿಗಳು ನಿಗದಿಸಿರುವ ಕಾಲವಿಶೇಷವು ಆಧಿ ಭೌತಿಕ-ಹೊರಗಿನ ಕ್ಷೇತ್ರಕ್ಕೆಸಂಬಂಧಿಸಿದುದು, ಆಧಿ ದೈವಿಕ-ಒಳಗೆ ನಿಯಾಮಕರಾಗಿರುವ ದೇವತೆಗಳಿಗೆ ಸೇರಿದ್ದು, ಮತ್ತು ಆಧ್ಯಾತ್ಮಿಕ-ಎಲ್ಲಕ್ಕೂ ಅಂತರ್ಯಾಮಿಯಾದ ಆತ್ಮಕ್ಕೆ ಸೇರಿದ್ದು–ಈ ಮೂರೂ ಕ್ಷೇತ್ರಗಳ ಅಭಿವೃದ್ಧಿಗೆ ಕಾರಣವಾಗಿದೆ. ದೇವತಾನುಗ್ರಹದಿಂದ ಮತ್ತು ಪುರುಷ ಪ್ರಯತ್ನದಿಂದ ಈ ಮೂರೂ ಕ್ಷೇತ್ರಗಳಲ್ಲಿ ದೊರೆಯಬಹುದಾದ ಎಲ್ಲಾ ಪುರುಷಾರ್ಥ ಸಾಧನೆಗೂ ಹೊಂದಿಕೆಯಾಗಿ ಮಹರ್ಷಿಗಳ ಅದ್ಭುತವಾದ ಕಾಲವಿಜ್ಞಾನದ ಕೈಗನ್ನಡಿಯಾಗಿದೆ.

ಆಚರಣೆ, ದ್ರವ್ಯ-ಕರ್ಮಗಳ ಔಚಿತ್ಯ

ಈ ದಿನದಲ್ಲಿ ಬಳಸುವ ದ್ರವ್ಯಗಳು ಧರ್ಮ-ಅರ್ಥ-ಕಾಮ-ಮೋಕ್ಷಗಳೆಂಬ ನಾಲ್ಕೂ ಪುರುಷಾರ್ಥಗಳನ್ನು ಪಡೆಯುವ ಸಾಧನಗಳಾಗಿರುವಂತೆ ಜ್ಞಾನಿಗಳು ಅಳವಡಿಸಿದ್ದಾರೆ.

ಅಭ್ಯಂಗ ಸ್ನಾನ

ಅಂದು ಅಭ್ಯಂಗ ಸ್ನಾನ ಮಾಡಬೇಕು. ಅಭ್ಯಂಗ ಸ್ನಾನದಿಂದ ಮುಪ್ಪು, ಆಯಾಸ ಮತ್ತು ವಾತದ ದೋಷಗಳ ನಿವಾರಣೆ, ದೃಷ್ಟಿ ಪಾಟವ, ಪ್ರಸನ್ನತೆ, ಪುಷ್ಟಿ, ಆಯುರ್ವೃದ್ಧಿ, ನಿದ್ರಾ ಸೌಖ್ಯ, ಚರ್ಮದ ಆರೋಗ್ಯ, ಸೌಂದರ್ಯ ವೃದ್ಧಿ ಇತ್ಯಾದಿ ಭೌತಿಕ ಪ್ರಯೋಜನಗಳಂತೂ ಇದ್ದೇ ಇವೆ ಎಂದು ಆಯುರ್ವೇದವು ಸಾರುತ್ತದೆ. ಯುಗಾದಿಯಾದರೋ ಪರ್ವ ಕಾಲ. ಶೀಘ್ರಫಲ ಕೊಡುವ ಶಕ್ತಿಯಿಂದ ಕೂಡಿದ ಕಾಲ.

ಇಂದಿನ ಅಭ್ಯಂಗ ಸ್ನಾನದಿಂದ ಮನೋಬಲವೂ ವೃದ್ಧಿಯಾಗಿ ಫಲವು ವೀರ್ಯವತ್ತರವಾಗುತ್ತದೆ. ಈ ಭೌತಿಕ ಪ್ರಯೋಜನಗಳ ಜೊತೆಗೇ ಒಳಗೆ ಧಾತುಸಾಮ್ಯವೂ ಉಂಟಾದರೆ ದೇವತಾರಾಧನೆಗೆ ಅತ್ಯಂತ ಸಹಕಾರಿಯಾದ ಸ್ಥಿತಿ ನಮಗೆ ಬರುತ್ತದೆ. “ಧಾತುಪ್ರಸಾದಾನ್ಮಹಿಮಾನಮೀಶಂ” ಎಂದು ಉಪನಿಷತ್ತು ಸಾರುವಂತೆ ಧಾತುಗಳ ಪ್ರಸನ್ನತೆ ಇರುವವನು ಒಳಗಿನ ಪ್ರಕಾಶವನ್ನು ಅನುಭವಿಸಲು ಸಮರ್ಥನಾಗುತ್ತಾನೆ.

ಗೃಹಾಲಂಕಾರ

ಅಂದು ತಳಿರು ತೋರಣಗಳಿಂದ ಮನೆಯನ್ನೂ, ಮನೆಯನ್ನೂ ಮನಸ್ಸು ದಿವ್ಯ ಭಾವಕ್ಕೆ ಏರುವಂತೆ ಅಲಂಕರಿಸಬೇಕೆಂದು ಶ್ರೀರಂಗ ಮಹಾಗುರುಗಳ ಅಭಿಪ್ರಾಯವಾಗಿತ್ತು. ಭಗವಂತನ ಚಿಹ್ನೆಗಳಿಂದ ಕೂಡಿದ ಧ್ವಜವನ್ನು ಹಾರಿಸಬೇಕು.”ಆ ಪತಾಕೆಯು ತನ್ನ ಸಂದೇಶಾಮೃತದ ಭಾವದಿಂದ ಭಗವಂತನ ಪರಮೋನ್ನತವಾದ ಪಾದಾರವಿಂದವನ್ನೇ ಮುಟ್ಟಬೇಕು ” ಎಂಬ ಅವರ ಮಾತು ಇಲ್ಲಿ ಸ್ಮರಣೀಯ.

ಸಂಕಲ್ಪ

ವರ್ಷಪ್ರತಿಪತ್ತಿನ ವ್ರತವನ್ನು ನಾನು ಆಚರಿಸುತ್ತೇನೆ ಎಂಬ ಸಂಕಲ್ಪ. “ಹರಿಃ ಓಂ ತತ್ಸತ್” ಎಂದು ದೇಶ-ಕಾಲಾತೀತನಾದ ಪರಮಾತ್ಮನನ್ನು ಸ್ಮರಿಸಿ ನಂತರ ಕಾಲದೇಶಗಳನ್ನೂ, ಕರ್ಮ, ಅದರ ಉದ್ದೇಶಗಳನ್ನೂ ಸ್ಮರಿಸುತ್ತೇವೆ. ಇದರಿಂದ ಭಗವಂತನು ದೇಶಕಾಲಾತೀತನಾಗಿದ್ದರೂ ದೇಶ ಕಾಲಗಳು ಅವನ ಶರೀರವೇ ಆಗಿವೆ ಎಂಬ ತತ್ತ್ವವು ಸ್ಮರಣೆಗೆ ಬರುತ್ತದೆ. ತಾನು ಆಚರಿಸುವ ಕರ್ಮದ ಗೊತ್ತು-ಗುರಿಗಳೂ ಮನಸ್ಸಿನಲ್ಲಿ ಬೇರೂರುತ್ತವೆ. ಇವೆಲ್ಲವುಗಳ ಅರಿವಿನಿಂದ ಮಾಡಿದ ಕರ್ಮವೇ ವೀರ್ಯವತ್ತರವಾಗುವುದು.

“ಯದೇವ ವಿದ್ಯಯಾ ಕರೋತಿ, ತದೇವ ವೀರ್ಯವತ್ತರಂ ಭವತಿ” ಎಂಬಂತೆ. ಯಾವ ಕಾಮನೆಗಳನ್ನೂ ಇಟ್ಟುಕೊಳ್ಳದೇ ಎಲ್ಲವೂ ಭಗವಂತನ ಪ್ರೀತಿಗಾಗಿ ಎಂಬ ಸಂಕಲ್ಪದಿಂದ ವ್ರತವನ್ನು ಆಚರಿಸುವುದು ಉತ್ತಮ ಕಲ್ಪ. ಆದರೂ ಭಗವಂತನ ಪ್ರೀತಿಗೆ ವಿರೋಧವಲ್ಲದ ಒಳ್ಳೆಯ ಕಾಮನೆಯಿಂದ ಕೂಡಿದ ಸಂಕಲ್ಪದಿಂದ ಆಚರಿಸಿದರೂ ಒಳ್ಳೆಯದೇ. ಧರ್ಮಕ್ಕೆ ವಿರೋಧವಲ್ಲದ ಕಾಮವು ಪವಿತ್ರವಾದುದು. ಗೀತೆಯಲ್ಲಿ ಭಗವಂತನು ಅಪ್ಪಣೆ ಕೊಡಿಸಿದಂತೆ-“ಧರ್ಮಾವಿರುದ್ಧೋ ಭೂತೇಷು ಕಾಮೋsಸ್ಮಿ ಭರತರ್ಷಭ” – ಧರ್ಮಕ್ಕೆ ಅವಿರೋಧವಾದ ಕಾಮವೇ ನಾನು ಎಂದಿದ್ದಾನೆ.

ದೇವತಾ ಪೂಜೆ

ಇಷ್ಟದೇವತಾಪೂಜೆಯ ಜೊತೆಗೇ ಇಂದು ಬ್ರಹ್ಮದೇವರ ಮತ್ತು ಅವರ ಶರೀರದಂತಿರುವ ಕಾಲಪುರುಷನ ಆರಾಧನೆಯನ್ನು ವಿಧಿಸಿದ್ದಾರೆ. “ಸತ್ಯಯುಗದ ಸೃಷ್ಟಿಯು ಪ್ರಾರಂಭವಾದ ದಿವಸವಿದು” ಎಂಬ ಮಾತಿನ ತಾತ್ತ್ವಿಕ ಅರ್ಥದಲ್ಲಿಯೂ ಸೃಷ್ಟಿಕರ್ತನನ್ನು ಪೂಜಿಸುವುದು ಉಚಿತವಾಗಿಯೇ ಇದೆ. “ಓ ಭಗವಂತ! ನಿನ್ನ ದೇಹವಾಗಿರುವ ಈ ಕಾಲದಲ್ಲಿರುವ ಪರ್ವಸ್ಥಾನಗಳನ್ನು ಅರಿತು ಅವುಗಳನ್ನು ಧರ್ಮಾರ್ಥಕಾಮಗಳನ್ನು ಸಾಧಿಸುವುದಕ್ಕೂ ಮತ್ತು ಕಾಲವನ್ನೇ ದಾಟಿಬಿಡುವ ಮಹೋದ್ಯಮಕ್ಕೂ ಉಪಯೋಗಿಸಿಕೊಳ್ಳುವ ಶಕ್ತಿಯನ್ನು ದಯಪಾಲಿಸು” ಎಂದು ಅವನಲ್ಲಿ ಪ್ರಾರ್ಥಿಸುತ್ತೇವೆ.

ಹೋಮ

ಹೃದಯದಲ್ಲಿ ಚೆನ್ನಾಗಿ ಭಗವಂತನನ್ನು ಆರಾಧಿಸಿದಮೇಲೆ ಹೊರಗೂ ಪ್ರತಿಮೆ, ತೀರ್ಥ, ಅಗ್ನಿ ಇವುಗಳಲ್ಲಿಯೂ ಅವನನ್ನು ಆವಾಹನೆ ಮಾಡಿ ಪೂಜೆ ಮಾಡುವುದೂ ಆ ಅಂತರಂಗ ಪೂಜೆಯ ವಿಸ್ತಾರವೇ ಆಗಿದೆ. ಅಗ್ನಿಯ ತೇಜೋರೂಪವಾದ ದೇಹ, ಪ್ರಕಾಶಸ್ವರೂಪ, ಎಲ್ಲವೂ ಭಗವಂತನ ಪ್ರತೀಕ, ಪ್ರತಿಮೆ, ಪ್ರತಿನಿಧಿ ಎಲ್ಲವೂ ಆಗಿದೆ. ಈ ಮನೋಧರ್ಮದಿಂದ ಅಂದು ಅಗ್ನಿಯಲ್ಲಿ ಹೋಮಮಾಡಬೇಕು. ಯುಗಾದಿಯಂದು ದೇವರ ಪೂಜೆಯ ಮಾಧ್ಯಮವಾದ ಅಗ್ನಿಯನ್ನು “ಯವಿಷ್ಠ”-ಅತ್ಯಂತ ಕಿರಿಯವನು ಎಂದು ಹೆಸರಿಸಿದ್ದಾರೆ.

ಸೃಷ್ಟಿಯ ಆರಂಭದಲ್ಲಿ ಶಕ್ತಿಯು ಅತ್ಯಂತ ಸೂಕ್ಷ್ಮವೆಂದು ಉಪಾಸಿಸಲ್ಪಡುತ್ತದೆ. ಅದರ ಪ್ರತಿನಿಧಿಯಾದ ಅಗ್ನಿಯನ್ನು ಯುಗಾರಂಭದ ದಿನ ಹಾಗೆ ಪೂಜಿಸುವುದು ಉಚಿತವೇ ಆಗಿದೆ. ಅಣುವಿಗಿಂತಲೂ ಅಣುವಾಗಿ ಮಹತ್ತಿಗಿಂತಲೂ ಮಹತ್ತಾಗಿ ಇರುವವನು ಭಗವಂತ ಎಂಬ ಶ್ರುತಿ ವಾಕ್ಯವನ್ನು ಇಲ್ಲಿ ಸ್ಮರಿಸಬಹುದು.

ಪಂಚಾಂಗ ಶ್ರವಣ

ತಿಥಿ, ವಾರ, ನಕ್ಷತ್ರ, ಯೋಗ, ಕರಣ ಇವು ಕಾಲಕೋಶದ ಪಂಚಾಂಗಗಳು.ಇವುಗಳ ಜ್ಞಾನದೊಡನೆಯೇ ಕರ್ಮಗಳನ್ನು ಮಾಡಬೇಕು. ಯುಗಾದಿಯಂದು ಕಾಲಪುರುಷನ ಆರಾಧನೆಯೇ ಮುಖ್ಯವಾಗಿರುವಾಗ ಅವುಗಳ ಶ್ರವಣ ಮಾಡಿ ಅದರಿಂದ ವರ್ಷದ ಆದಿಮಂಗಲವನ್ನು ಆಚರಿಸುವುದು ಸಹಜವಾಗಿದೆ. ಇಡೀ ಸಂವತ್ಸರದ ಕಾಲದ ಯೋಗವನ್ನು ಕೇಳಿ ತಿಳಿದು ಅದಕ್ಕೆ ತಕ್ಕಂತೆ ವರ್ಷದ ಐಹಿಕ-ಪಾರಮಾರ್ಥಿಕ ಕಾರ್ಯಗಳ ಯೋಜನೆಯನ್ನು ರೂಪಿಸಿಕೊಳ್ಳುವುದಕ್ಕೂ ಇದು ಸಹಕಾರಿ. ಎಂದೇ ಪಂಚಾಗ ಶ್ರವಣ ಈ ಪರ್ವದಿನದ ಒಂದು ಮುಖ್ಯ ಕಲಾಪವಾಗಿದೆ.

ದಾನ

ಎಲ್ಲಾ ಪರ್ವಕಾಲಗಳಲ್ಲೂ ಸತ್ಪಾತ್ರರಿಗೆ ದಾನಮಾಡುವುದು ಶ್ರೇಷ್ಠ ಕರ್ಮವೇ. ಈ ಯುಗಾದಿ ಪರ್ವದಲ್ಲಿ ಅನ್ನದಾನವೇ ಮುಂತಾದ ದಾನಗಳ ಜೊತೆ ಪಂಚಾಂಗ, ಜಲಪಾತ್ರೆ, ವಸ್ತ್ರಭೂಷಣಗಳನ್ನೂ ದಾನ ಮಾಡುವುದನ್ನು ವಿಧಿಸಿದೆ. ಬೇಸಿಗೆ ಕಾಲದ ಆರಂಭವಾಗಿರುವುದರಿಂದ ನೀರಿನ ಪಾತ್ರೆಗಳನ್ನು ದಾನ ಮಾಡುವುದು, ಮತ್ತು ಆ ದಿನದಿಂದ ಆರಂಭಿಸಿ ಬೇಸಿಗೆ ಮುಗಿಯುವವರೆಗೂ ಅರವಟ್ಟಿಗೆಗಳಲ್ಲಿ ಸಿಹಿ ನೀರು,ಮಜ್ಜಿಗೆ,ಪಾನಕಗಳನ್ನು ದಾನಮಾಡುವುದು ಕಾಲೋಚಿತವಾಗಿದೆ. ದಾನ ಮಾಡುವಾಗ-” ವಿಷ್ಣುರ್ದಾತಾ ವಿಷ್ಣುರ್ದ್ರವ್ಯಂ ಪ್ರತಿಗೃಹ್ಣಾಮಿ ವೈ ವದೇತ್ʼʼ-ದಾನ ಮಾಡುವವನು ವಿಷ್ಣು, ದ್ರವ್ಯವೂ ಆ ಭಗವಂತನೇ, ಆ ಭಾವದಿಂದ ಅದನ್ನು ಸ್ವೀಕರಿಸುತ್ತೇನೆ ಎಂಬಂತೆ ಕೊಡುವವನು, ತೆಗೆದುಕೊಳ್ಳುವವನು ಇಬ್ಬರೂ ಈ ಭಾವ ಸಮೃದ್ಧಿಯಿಂದ ಮಾಡಿದಾಗ ಕೆರೆಯ ನೀರನು ಕೆರೆಗೆ ಚೆಲ್ಲಿದಂತೆ ಪುಣ್ಯ-ಪುರುಷಾರ್ಥ ಎರಡೂ ಲಭಿಸುತ್ತದೆ ಎಂಬುದು ಅನುಭವಿಗಳ ಮಾತು.

ನೈವೇದ್ಯ-ಪ್ರಸಾದ

ಯುಗಾದಿಯ ದಿನದ ವಿಶೇಷ ನೈವೇದ್ಯ ಹೂವಿನೊಡನೆ ಕುಡಿದ ಚಿಗುರುಬೇವು-ಬೆಲ್ಲ.
ಶತಾಯು: ವಜ್ರದೇಹಾಯ ಸರ್ವಸಂಪತ್ಕರಾಯಚ |
ಸರ್ವಾರಿಷ್ಟ ವಿನಾಶಾಯ ನಿಂಬಕಂದಲ ಭಕ್ಷಣಮ್ ||

ವಜ್ರ ದೇಹಿಯಾಗಿ, ಶತಾಯುಶಿಯಾಗಿ, ಐಹಿಕ-ಪಾರಮಾರ್ಥಿಕ ಸಂಪತ್ತಿನಿಂದ ಕೂಡಿರಲು ಮತ್ತು ಎಲ್ಲಾ ಅರಿಷ್ಟಗಳ ನಿವಾರಣೆಗಾಗಿ ಈ ಬೇವು -ಬೆಲ್ಲವನ್ನು ಸೇವಿಸುತ್ತೇನೆ ಎಂಬ ಶ್ಲೋಕವು ಪ್ರಸಿದ್ಧವಾಗಿದೆ. ಬೇವು ಅಸ್ಥಿಗತವಾದ ರೋಗವನ್ನೂ ವಿಷದ ಸೋಂಕನ್ನೂ ನಿವಾರಿಸುವ ಮಹೌಷಧಿ. ಬೆಲ್ಲ ಸೇರಿಸಿದಾಗ ಬೇವಿನಲ್ಲಿನ ವಾತ ದೋಷವು ಶಮನವಾಗುತ್ತದೆ. ದೇಹಕ್ಕೆ ಸಂಬಂಧಿಸಿದಂತೆ ಬೇವು-ಬೆಲ್ಲಗಳ ಯೋಗ ಆರೋಗ್ಯವರ್ಧಕವಾಗಿರುವಂತೆ ಜೀವನದ ಸಿಹಿ-ಕಹಿಗಳನ್ನು ಸಮನಾಗಿ ಭಾವಿಸಿ ಜೀವನವನ್ನು ಸಮಾಹಿತಚಿತ್ತದಿಂದ ನಡೆಸುವ ಧೀರಯೋಗಿಯ ಆದರ್ಶವನ್ನೂ ನೆನಪಿಗೆ ತರುವುದಾಗಿದೆ.

ಯೋಗಿಗೆ ಮಾತ್ರವಲ್ಲದೇ ಗಂಭೀರವಾಗಿ ನೆಮ್ಮದಿಯ ಜೀವನ ನಡೆಸುವ ಸಾಮಾನ್ಯರಿಗೂ ಈ ಪಾಠವು ಅವಶ್ಯಕ. ಆ ದಿನದಿಂದ ಆರಂಭಿಸಿ ಇಡೀ ಸಂವತ್ಸರದಲ್ಲೂ ಕಡೆಗೆ ಇಡೀ ಜೀವನದಲ್ಲೂ ಅಂತಹ ಸಮಸ್ಥಿತಿಯನ್ನು ತಂದುಕೊಳ್ಳುವ ಸ್ಪೂರ್ತಿ ಈ ಪ್ರಸಾದ ಸೇವನೆಯಲ್ಲಿದೆ. ಅಲ್ಲದೇ ಯುಗಾದಿಯ ದೇವತೆಯಾದ ಪ್ರಜಾಪತಿ ಕಾಲಪುರುಷನಿಗೆ ಪ್ರಿಯವಾದ ನೈವೇದ್ಯವಾಗಿದೆ. ಕಾಲಪುರುಷನ ಸುಪ್ರಸನ್ನತೆ-ಸಾಕ್ಷಾತ್ಕಾರಗಳಿಗೆ ಅನುಗುಣವಾದ ಕೇಂದ್ರಗಳು ಒಳಗಿನ ಪ್ರಕೃತಿಯಲ್ಲಿ ವಿಕಾಸಗೊಳ್ಳಲು ಈ ಬೇವು-ಬೆಲ್ಲದ ಸೇವನೆ ಸಹಕಾರಿಯಾಗಿದೆ ಎಂಬ ಋಷಿವಿಜ್ಞಾನವನ್ನು ಮನಗಾಣಬೇಕು.

ಧಾರ್ಮಿಕ ಮತ್ತು ಆಧ್ಯಾತ್ಮಿಕ ಲೇಖನ, ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ.

ಉಪಸಂಹಾರ

ಹೀಗೆ ಭಾರತೀಯರ ಬೇರೆ ಹಬ್ಬಗಳಂತೆಯೇ ಯುಗಾದಿ ಪರ್ವವು ಕಾಲದ ದೃಷ್ಟಿಯಿಂದ ವಿಶೇಷ ಪರಿಣಾಮಕಾರಿಯಾಗಿದ್ದು ಜೀವಲೋಕದ ಇಹ-ಪರಗಳ ಬಾಳಾಟಕ್ಕೆ ಸಹಕಾರಿಯಾಗಿದೆ. ಆ ಪರ್ವವಿಶೇಷದಲ್ಲಿ ಉಪಯೋಗಿಸುವ ದ್ರವ್ಯಗಳು, ಮಾಡುವ ದೇವತಾರಾಧನೆಗಳು, ಕರ್ಮ-ಕಲಾಪಗಳು ಎಲ್ಲವೂ ನಮ್ಮ ಒಳ-ಹೊರ ಜೀವನದ ಏಳಿಗೆಗೆ, ಪುರುಷಾರ್ಥ ಪ್ರಾಪ್ತಿಗೆ ಅತ್ಯಂತ ಸಹಾಯಕವಾಗುವಂತೆ ನಮ್ಮ ಮಹರ್ಷಿಗಳು ಯೋಜಿಸಿ ತಂದುಕೊಟ್ಟಿದ್ದಾರೆ. ಯಾವುದೋ ಒಂದು ದಿನವನ್ನು ಸುಮ್ಮನೇ ವರ್ಷಾರಂಭ ಎಂದು ಆಚರಿಸದೇ ಸೃಷ್ಟಿಯ ಆರಂಭದ ನಿಸರ್ಗದ ಹೆಜ್ಜೆಯನ್ನು ಅನುಸರಿಸಿ ಜೀವಲೋಕದ ಮೇಲೆ ಆ ಕಾಲವು ಮಾಡುವ ಪರಿಣಾಮದ ಆಧಾರದ ಮೇಲೆ ತಂದ ಪರ್ವದಿನವಾಗಿದೆ.

ಈ ಸಂಸ್ಕೃತಿಯಲ್ಲಿ ಬಂದ ಯಾವ ಆಚರಣೆಯೂ ಅರ್ಥಹೀನವಾಗಿ ಶುಷ್ಕವಾಗಿ ಬಂದುದಲ್ಲ. ಸ್ಥೂಲ ಜೀವನದ ಹಿಂಬದಿಯ ದೇವತಾ ಶಕ್ತಿಗಳ ಸೂಕ್ಷ್ಮಜೀವನ, ಅದರ ಹಿಂಬದಿಯಲ್ಲಿ ಅಂತರ್ಯಾಮಿಯಾಗಿ ಚೈತನ್ಯಮಯವಾಗಿ ಬೆಳಗುತ್ತಿರುವ ಪರಮಾತ್ಮನ ವರೆಗೂ ದೃಷ್ಟಿಯನ್ನು ಹರಿಸಿ ಸರ್ವಾಂಗ ಸುಂದರವಾದ ಜೀವನವನ್ನು ಸವಿಯಲು ಅನುಗುಣವಾಗಿ ಅವರು ಇಲ್ಲಿನ ಜೀವನವಿಧಾನಗಳನ್ನು, ಹಬ್ಬ ಹರಿದಿನಗಳನ್ನು ಗುರುತಿಸಿ ರೂಪಿಸಿದರು. ಅಂತಹ ಮಹರ್ಷಿಮನೋರಮವಾದ ಹಿನ್ನೆಲೆಯಿಂದ ಈ ಪರ್ವಕಾಲವನ್ನು ಆಚರಿಸಿ ಸಂಭ್ರಮಿಸೋಣ.

ಲೇಖಕರು ಆಧ್ಯಾತ್ಮ ಚಿಂತಕರು ಮತ್ತು ಪ್ರವಚನಕಾರರು
ಅಷ್ಟಾಂಗಯೋಗ ವಿಜ್ಞಾನಮಂದಿರಂ

ಇದನ್ನೂ ಓದಿ : Ugadi Makeup Trend: ಸ್ತ್ರೀಯರ ಯುಗಾದಿ ಸಂಭ್ರಮಕ್ಕೆ ಸ್ಪೆಷಲ್‌ ಫೆಸ್ಟಿವ್ ಮೇಕಪ್‌ ಮಂತ್ರ

Exit mobile version