ಬೆಂಗಳೂರು: ನೆರೆಯ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಇನ್ನೊಂದು ವಾರದಲ್ಲಿ ಅಧಿಕಾರ ಕಳೆದುಕೊಳ್ಳುವುದು ಬಹುತೇಕ ಖಚಿತವಾಗಿದೆ. ಪ್ರಧಾನಿ ಇಮ್ರಾನ್ ಖಾನ್ ನೇತೃತ್ವದ ತೆಹರೀಕ್-ಎ-ಪಾಕಿಸ್ತಾನ್ ಕ್ಷದ ನೇತೃತ್ವದ ಸರ್ಕಾರದಲ್ಲಿ ಮಿತ್ರ ಪಕ್ಷವಾಗಿರುವ ಮುಸ್ಲಿಂ-ಲೀಗ್- ಕ್ವೈದ್(ಪಿಎಂಎಲ್-ಕ್ಯೂ) ಹಾಗೂ ಪ್ರತಿಪಕ್ಷ ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಜ್ ಜತೆಗೆ ಒಪ್ಪಂದವಾಗಿದ್ದು, ಸಂಸತ್ತಿನಲ್ಲಿ ಮಂಡಿಸಿರುವ ಅವಿಶ್ವಾಸ ನಿರ್ಣಯಕ್ಕೆ ಅನುಗುಣವಾಗಿ ಸಂಖ್ಯೆಯನ್ನು ಹೊಂದಿಸಲು ಸಫಲವಾಗುವುದು ಖಾತ್ರಿಯಾದಂತಾಗಿದೆ. ಈ ಹಿನ್ನೆಲೆಯಲ್ಲಿ ಇಮ್ರಾನ್ ಖಾನ್ ನೇರವಾಗಿ ರಾಜೀನಾಮೆ ನೀಡುವುದರ ಮೂಲಕ ಅಥವಾ ಅವಿಶ್ವಾಸ ನಿರ್ಣಯವನ್ನು ಸೋಲಿಸಿ ತಮ್ಮ ಪರವಾಗಿ ಸಂಖ್ಯೆಯನ್ನು ತೋರಿಸಲು ವಿಫಲವಾಗುವುದರ ಮೂಲಕ ಅಧಿಕಾರದಿಂದ ವಂಚಿತವಾಗುವುದು ಖಚಿತ ಎಂದು ಹೇಳಲಾಗುತ್ತಿದೆ.
ಶಹಬಾಜ್ ಷರೀಫ್ ಪ್ರಧಾನಿ?
ಸಂಸತ್ತಿನಲ್ಲಿ ವಿರೋಧ ಪಕ್ಷಗಳು ಮಂಡಿಸಿರುವ ಅವಿಶ್ವಾಸ ನಿರ್ಣಯದ ವಿರುದ್ಧ ಸೋಮವಾರ ಬೆಳಗ್ಗೆ ಗುಡುಗಿದ್ದ ಪ್ರದಾನಿ ಇಮ್ರಾನ್ ಖಾನ್, ಇಸ್ಲಾಮಾಬಾದ್‌ನಲ್ಲಿ ಬೃಹತ್ ರ‍್ಯಾಲಿಯನ್ನು ಆಯೋಜಿಸಿ ಭಾವನಾತ್ಮಕ ಮಾತನಾಡಿದ್ದರು. ಈ ಭಾಷಣದಲ್ಲಿ, ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಜ್ ಪಕ್ಷದ ಶಹಬಾಜ್ ಷರೀಫ್ ಸೇರಿ ಮೂವರ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿ, ಈ ಮೂರು ಹೆಗ್ಗಣಗಳು ಕಳೆದ ಮೂವತ್ತು ವರ್ಷದಿಂದ ಪಾಕಿಸ್ತಾನವನ್ನು ಲೂಟಿ ಮಾಡುತ್ತಿವೆ ಎಂದಿದ್ದರು. (ಈ ಕುರಿತ ವಿಸ್ತೃತ ವರದಿ ಓದಲು ಇಲ್ಲಿ ಕ್ಲಿಕ್ ಮಾಡಿ)
ಇದೀಗ ನಡೆಯುತ್ತಿರುವ ಹೊಸ ಬೆಳವಣಿಗೆಯಲ್ಲಿ, ಇಮ್ರಾನ್ ಪದಚ್ಯುತಿಯ ನಂತದ ದೇಶದ ಪ್ರಧಾನಿಯಾಗಿ ಅದೇ ಶಹಬಾಜ್ ಷರೀಫ್ ಪ್ರಧಾನಿಯಾಗುವ ಸಾಧ್ಯತೆ ಹೆಚ್ಚಾಗಿದೆ. ಈ ಶಹಬಾಜ್ ಷರೀಫ್ ಮತ್ಯಾರೂ ಅಲ್ಲ, ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಸಹೋದರ. ಪ್ರಧಾನಿಯಷ್ಟೆ ಅಲ್ಲದೆ, ಪಾಕ್ ರಾಷ್ಟ್ರಪತಿ ಬದಲಾವಣೆ ಕುರಿತ ಮಾತುಕತೆಗಳೂ ಬಲವಾಗಿವೆ. ಮುಸ್ಲಿಂ ಮತೀಯ ಮುಖಂಡರ ಪಕ್ಷ ಎನ್ನಲಾಗುವ ಜಮೈತ್-ಉಲೇಮಾ-ಎ-ಇಸ್ಲಾಂ(ಜೆಯುಐ) ಪಕ್ಷದ ಅಧ್ಯಕ್ಷ ಮೂಲಾನಾ ಫಜಲ್ ಉರ್ ರೆಹಮಾನ್, ಈಗಿನ ರಾಷ್ಟ್ರಪತಿ ಆರಿಫ್ ಅಲ್ವಿ ಅವರನ್ನು ಬದಲಿಸಲಿದ್ದಾರೆ ಎನ್ನಲಾಗುತ್ತಿದೆ.
ಪಾಕ್ ಮಿಲಿಟರಿ ಮುಖ್ಯಸ್ಥ ಜನರಲ್ ಖಮಾರ್ ಜಾವೇದ್ ಬಜ್ವಾ ಹಾಗೂ ಇಮ್ರಾನ್ ಖಾನ್ ನಡುವೆ ಸಮನ್ವಯತೆ ಇದ್ದ ಕಾರಣದಿಂದಾಗಿ ಸರ್ಕಾರ ನಾಲ್ಕು ವರ್ಷ ನಡೆಯಿತು. ಆದರೆ ಇತ್ತೀಚೆಗೆ ಐಎಸ್‌ಐ ಮುಖ್ಯಸ್ಥರ ನೇಮಕದಲ್ಲಿ ತಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂದು ಬಜ್ವಾ ಹಾಗೂ ಇಮ್ರಾನ್ ಖಾನ್ ನಡುವೆ ಆರಂಭವಾದ ಕಂದಕ ಈಗ ಅವಿಶ್ವಾಸ ನಿರ್ಣಯದ ಮಟ್ಟಿಗೆ ಬಂದು ನಿಂತಿದೆ.
ಸೋಮವಾರ ರ‍್ಯಾಲಿಯ ಕುರಿತ ಒಂದು ವಿಡಿಯೋವನ್ನು ಇಮ್ರಾನ್ ಖಾನ್ ಟ್ವೀಟ್ ಮಾಡಿದ್ದಾರೆ. ರ‍್ಯಾಲಿಗೆ ಆಗಮಿಸುತ್ತಿರುವ ಅನೇಕರ ಪೈಕಿ ಒಬ್ಬ ಅಂಗವಿಕಲನೂ ಆಗಮಿಸುತ್ತಿರುವುದು ಆ ವಿಡಿಯೋ. ವಿಡಿಯೋವನ್ನು ಪೋಸ್ಟ್ ಮಾಡಿರುವ ಇಮ್ರಾನ್ ಖಾನ್, ದೇಶದಲ್ಲಿ ಇಂತಹ ಉತ್ಸಾಹ ಇದ್ದರೆ ಸಾಕು, ಎಂತಹದ್ದೇ ಸವಾಲನ್ನೂ ಮೆಟ್ಟಿ ನಿಲ್ಲಬಲ್ಲದು ಎಂದು ಶೀರ್ಷಿಕೆ ನೀಡಿದ್ದಾರೆ.