ಕೇಶವ್ ಪ್ರಸಾದ್ ಬಿ
ಅಮೆರಿಕದ ಇತಿಹಾಸದಲ್ಲೇ ಶಾಲಾ ಮಕ್ಕಳ ಎರಡನೇ ಅತಿ ಭೀಕರ ಹತ್ಯಾಕಾಂಡ ಮೇ 24ರ ಮಂಗಳವಾರ ಬೆಳಗ್ಗೆ ನಡೆದಿದೆ. ಅಲ್ಲಿನ ಟೆಕ್ಸಾಸ್ ರಾಜ್ಯದ ಶಾಲೆಯೊಂದರಲ್ಲಿ ಒಟ್ಟು 19 ಮಂದಿ ಅಮಾಯಕ, ಮುಗ್ಧ ಮಕ್ಕಳು ಗುಂಡೇಟಿಗೆ ಸಾವಿಗೀಡಾಗಿದ್ದಾರೆ. ಇಬ್ಬರು ಶಿಕ್ಷಕರೂ ಪ್ರಾಣ ಕಳೆದುಕೊಂಡಿದ್ದಾರೆ. ವಿಪರ್ಯಾಸ ಏನೆಂದರೆ ಈ ಘಟನೆಯ ಹಂತಕ ಕೂಡ 18 ವರ್ಷ ವಯಸ್ಸಿನ ಹುಡುಗನಾಗಿದ್ದಾನೆ! ಅಮೆರಿಕ ಗುಂಡಿನ ದಾಳಿ ಘಟನೆ ಅಲ್ಲಿಯ ಯುವ ಜನತೆಯ ಮನೋಸ್ಥಿತಿ ಬಗ್ಗೆ ಚಿಂತಿಸುವಂತೆ ಮಾಡಿದೆ.
ಟೆಕ್ಸಾಸ್‌ನ ರೋಬ್ ಎಲಿಮೆಂಟರಿ ಶಾಲೆಗೆ ನುಗ್ಗಿದ ಹಂತಕ ಎಆರ್ 15 ಸೆಮಿ-ಆಟೊಮ್ಯಾಟಿಕ್ ರೈಫಲ್ ಮೂಲಕ ಯದ್ವಾತದ್ವಾ ಮಕ್ಕಳ ಮೇಲೆ ಗುಂಡಿನ ಮಳೆಗೆರೆದಿದ್ದಾನೆ. ಈತ ತನ್ನ ಅಜ್ಜಿಯನ್ನೂ ಇದಕ್ಕೂ ಮುನ್ನ ಸಾಯಿಸಿದ್ದಾನೆ. ದಾಳಿಯ ಸುದ್ದಿ ಕೇಳಿದೊಡನೆ ಧಾವಿಸಿದ ಭದ್ರತಾ ಸಿಬ್ಬಂದಿ ಯುವಕನಿಗೆ ಗುಂಡಿಕ್ಕಿದ್ದಾರೆ.
ಈ ದುರ್ಘಟನೆಗೆ ಅಮೆರಿಕ ಬೆಚ್ಚಿಬಿದ್ದಿದ್ದು, ಮಕ್ಕಳ ಸುರಕ್ಷತೆ ಬಗ್ಗೆ ಆತಂಕ ಮೂಡಿಸಿದೆ. ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರು ದಿಗ್ಭ್ರಮೆ ವ್ಯಕ್ತಪಡಿಸಿದ್ದು, ಇಂಥ ಹತ್ಯಾಕಾಂಡಗಳು ನಡೆಯದಂತೆ ಕಠಿಣ ಕಾನೂನು ಕ್ರಮ ಕೈಗೊಳ್ಳಲು ನಾವು ಕಾರ್ಯಪ್ರವೃತ್ತರಾಗಬೇಕಾಗಿದೆ. ಮುಖ್ಯವಾಗಿ ಬಂದೂಕು ಲಾಬಿಯ ವಿರುದ್ಧ ಸಂಘಟಿತರಾಗಿ ನಿಲ್ಲಬೇಕಾದ ಸಮಯ ಬಂದಿದೆ ಎಂದು ಹೇಳಿದ್ದಾರೆ.
ಅಮೆರಿಕದ ಶಾಲೆಗಳಲ್ಲಿ ಇಂಥ ದುರ್ಘಟನೆಗಳು ನಡೆದಿರುವುದು ಇದೇ ಮೊದಲಲ್ಲ. 2012ರಲ್ಲಿ ನಡೆದ ಇಂಥದ್ದೇ ದಾಳಿಯಲ್ಲಿ 26 ಮಕ್ಕಳು ಮತ್ತು ಕೆಲವು ಶಿಕ್ಷಕರನ್ನು ಗುಂಡಿಕ್ಕಿ ಕೊಲ್ಲಲಾಗಿತ್ತು. ಈ ನಡುವೆ ಹಲವಾರು ಬಾರಿ ಶಾಲೆಯ ಕ್ಯಾಂಪಸ್‌ಗಳಲ್ಲಿ ಗುಂಡಿನ ದಾಳಿಗಳು ನಡೆದಿವೆ. ಎಲ್ಲದರಲ್ಲೂ ಕಿಲ್ಲರ್ ಯಾರೆಂದರೆ 20 ವರ್ಷ ಆಸುಪಾಸಿನ ಹುಡುಗರು!
ಅಮೆರಿಕ ಅಧ್ಯಕ್ಷ ಜೊ ಬೈಡೆನ್ ತಬ್ಬಿಬ್ಬು…
ಅಮೆರಿಕದ ಅಧ್ಯಕ್ಷ ಜೊ ಬೈಡೆನ್ ಕೂಡ, ಅಮೆರಿಕದ ಶಾಲೆಗಳಲ್ಲಿ ಮಾತ್ರ ಇಂಥ ಕೃತ್ಯಗಳು ಆಗುತ್ತಿರುವುದೇಕೆ ಎಂದು ಪ್ರಶ್ನಿಸಿದ್ದಾರೆ. ಅಮೆರಿಕದ ಯುವಕರೇಕೆ ಸಣ್ಣ ವಯಸ್ಸಿನಲ್ಲೇ ಅತ್ಯಾಧುನಿಕ ಬಂದೂಕುಗಳನ್ನು ಕೈಗೆತ್ತಿಕೊಂಡು ಕೊಲೆಗಾರರಾಗುತ್ತಿದ್ದಾರೆ ಎಂಬುದು ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗುತ್ತಿದೆ.
ಬಂದೂಕಿನ ಮೂಲಕ ನಡೆಯುವ ಹಿಂಸಾಚಾರಗಳ ಬಗ್ಗೆ ಸಂಶೋಧನೆ ನಡೆಸುತ್ತಿರುವ ಎವರಿಟೌನ್ ಸಂಸ್ಥೆಯ ವರದಿ ಪ್ರಕಾರ ಅಮೆರಿಕದಲ್ಲಿ ಪ್ರತಿ ವರ್ಷ ಸರಾಸರಿ 40,620 ಮಂದಿ ಗುಂಡೇಟಿನ ಪರಿಣಾಮ ಸಾವಿಗೀಡಾಗುತ್ತಿದ್ದಾರೆ. ಅದು ಆತ್ಮಹತ್ಯೆ, ಗುಂಡಿನ ದಾಳಿಯೂ ಆಗಿರಬಹುದು. ಒಟ್ಟಿನಲ್ಲಿ ಹಿಂಸಾಚಾರಕ್ಕೆ ಗನ್ ಬಳಕೆಯಾಗುತ್ತದೆ. ಮುಖ್ಯವಾಗಿ ಅಮೆರಿಕನ್ನರು ಆತ್ಮಹತ್ಯೆಗೆ ಪ್ರಧಾನವಾಗಿ ಬಳಸುವ ಆಯುಧವೇ ಗನ್. ಗುಂಡೇಟಿನಿಂದ ಉಂಟಾಗುವ ಪ್ರತಿ 10 ಸಾವಿನ ಪ್ರಕರಣಗಳಲ್ಲಿ 6 ಕೇಸ್‌ಗಳು ಆತ್ಮಹತ್ಯೆಯೇ ಆಗಿರುತ್ತವೆ. ಇತರ ಅಭಿವೃದ್ಧಿಹೊಂದಿರುವ ದೇಶಗಳಿಗೆ ಹೋಲಿಸಿದರೆ ಅಮೆರಿಕದಲ್ಲಿ ಬಂದೂಕಿನಿಂದ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಕರಣಗಳು 12 ಪಟ್ಟು ಹೆಚ್ಚು ಎನ್ನುತ್ತದೆ ಎವರಿಟೌನ್ ವರದಿ. ಸುಲಭವಾಗಿ ಶಸ್ತ್ರಾಸ್ತ್ರಗಳು ಅಲ್ಲಿ ಸಿಗುವುದರಿಂದ ಇಂಥ ಅನಾಹುತಗಳು ಹೆಚ್ಚುತ್ತಿವೆ.
ಅಮೆರಿಕಕ್ಕೆ ತಲೆನೋವಾಗಿರುವ ಬಂದೂಕು ಸಂಸ್ಕೃತಿ
ಅಮೆರಿಕದಲ್ಲಿ ಹಿಂದಿನಿಂದಲೂ ಸಾಮಾಜಿಕ ಮತ್ತು ರಾಜಕೀಯ ಜನಜೀವನದಲ್ಲಿ ಗನ್ ಸಂಸ್ಕೃತಿ ಬೆಳೆದು ಬಂದಿದೆ. ವಿಶ್ವದಲ್ಲೇ ಅತಿ ಹೆಚ್ಚು ಗನ್‌ಗಳ ಮಾಲೀಕರು ಅಮೆರಿಕನ್ನರೇ ಆಗಿದ್ದಾರೆ. ಮೂರನೇ ಒಂದರಷ್ಟು ಅಮೆರಿಕನ್ನರು ವೈಯಕ್ತಿಕವಾಗಿ ಗನ್ ಹೊಂದಿರುವುದಾಗಿ ತಿಳಿಸಿದ್ದಾರೆ. ನೀವೇ ಗಮನಿಸಿ, ಭಾರತದಲ್ಲಿ ಗನ್ ಖರೀದಿಸುವುದು ಸುಲಭವಲ್ಲ, ಎಲ್ಲರಿಗೂ ಲೈಸೆನ್ಸ್ ಸಿಗುವುದಿಲ್ಲ. ಬಂದೂಕು ಹಿಡಿದುಕೊಂಡು ಸಾರ್ವಜನಿಕವಾಗಿ ಬೇಕಾಬಿಟ್ಟಿ ತಿರುಗಾಡುವಂತಿಲ್ಲ. ಆದರೆ ಅಮೆರಿಕದಲ್ಲಿ 18 ವರ್ಷ ಮೇಲ್ಪಟ್ಟವರು ಬಂದೂಕುಗಳನ್ನು ಮಾರಾಟ ಮಾಡುವ ಮಳಿಗೆಗಳಿಗೆ ತೆರಳಿ, ಸುಲಭವಾಗಿ ತಮಗೆ ಬೇಕಾದ ಗನ್‌ಗಳನ್ನು ಖರೀದಿಸಬಹುದು. ಜೇಬಿನಲ್ಲಿ ದುಡ್ಡಿದ್ದರೆ ಸಾಕು. ಗನ್ ಶಾಪಿಂಗ್ ಫಟಾಫಟ್ ಮಾಡಬಹುದು. ಭಾರತದ ಹುಡುಗರು ಆಟಿಕೆಯ ಗನ್ ಕೊಂಡರೆ, ಅಮೆರಿಕದ ಹುಡುಗರ ಕೈಗೆ ಮಿಲಿಟರಿ ಪಡೆಗಳಲ್ಲಿ ಬಳಸುವಂಥ ಅಪಾಯಕಾರಿ ಒರಿಜಿನಲ್ ಗನ್‌ಗಳು ಸುಲಭವಾಗಿ ಸಿಗುತ್ತದೆ.
ಆದರೆ ಇದೇ ಗನ್ ಸಂಸ್ಕೃತಿ ಈಗ ಸಾಮೂಹಿಕ ನರಮೇಧಗಳಿಗೆ ಕಾರಣವಾಗುತ್ತಿರುವುದರಿಂದ ಸರಕಾರಗಳಿಗೆ ಭಯೋತ್ಪಾದನೆಯಷ್ಟೇ ತಲೆನೋವಾಗಿದೆ.
ಶಸ್ತ್ರ ಪರವಾನಗಿಗೆ ಇದೆ ಇತಿಹಾಸ…
ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆಯಲು ಹೋರಾಟದ ಕ್ರಾಂತಿಯನ್ನು 1775ರಲ್ಲಿ ಶುರು ಮಾಡಿದಾಗಲೇ ಅಲ್ಲಿ ಗನ್ ಸಂಸ್ಕೃತಿ ಹುಟ್ಟಿಕೊಂಡಿತ್ತು. 1791ರಲ್ಲಿ ಅಮೆರಿಕದ ಸಂವಿಧಾನಕ್ಕೆ ಮಾಡಿದ ಎರಡನೇ ತಿದ್ದುಪಡಿಯಲ್ಲಿ, ಆತ್ಮರಕ್ಷಣೆಗೋಸ್ಕರ ಮನೆಯಲ್ಲಿ ನಾಗರಿಕರು ಬಂದೂಕನ್ನು ಇಟ್ಟುಕೊಳ್ಳಲು ಹಕ್ಕು ನೀಡಲಾಯಿತು. ಆತ್ಮರಕ್ಷಣೆ, ಬೇಟೆ, ಕ್ರೀಡೆ, ಮನರಂಜನೆಯ ಉದ್ದೇಶಕ್ಕಾಗಿ ಶಸ್ತ್ರಾಸ್ತ್ರಗಳನ್ನು ಇಟ್ಟುಕೊಳ್ಳಲು ಅಮೆರಿಕದಲ್ಲಿ ಅನುಮತಿ ಇದೆ. ಜಗತ್ತಿನ ಜನಸಂಖ್ಯೆಯಲ್ಲಿ ಅಮೆರಿಕನ್ನರ ಪಾಲು ಕೇವಲ ಶೇ. 4ರಷ್ಟು ಮಾತ್ರ. ಆದರೆ ಇಡೀ ಜಗತ್ತಿನಲ್ಲಿರುವ 85 ಕೋಟಿ ಬಂದೂಕುಗಳಲ್ಲಿ 39 ಕೋಟಿ ಅಮೆರಿಕನ್ನರ ಬಳಿ ಇದೆ. ಅಂದರೆ 46 ಪರ್ಸೆಂಟ್ ಅವರಲ್ಲಿದೆ. ಪ್ರಪಂಚದ ಟಾಪ್ 25 ದೇಶಗಳ ಜನ ಒಟ್ಟಾಗಿ ಇಟ್ಟುಕೊಂಡಿರುವ ಗನ್‌ಗಳಿಗಿಂತ ಹೆಚ್ಚು ಗನ್‌ಗಳು ಅಮರಿಕದ ಪ್ರಜೆಗಳ ಕೈಯಲ್ಲಿವೆ. 20ನೇ ಶತಮಾನದ ಅಮೆರಿಕನ್ ಸಿನಿಮಾಗಳಲ್ಲಿ ಜನಪ್ರಿಯ ಹೀರೊಗಳ ಆಯುಧವಾಗಿ ಗನ್‌ಗಳೇ ಮಿಂಚುತ್ತಿತ್ತು. ಅಮೆರಿಕದ ರಾಜಕೀಯದಲ್ಲೂ ‘ಗನ್ ಸಂಸ್ಕೃತಿʼ ಆಗಿಂದಾಗ ಚರ್ಚೆಯಾಗುತ್ತಿದೆ. ಸಂಪ್ರದಾಯವಾದಿಗಳು ಗನ್ ಸಂಸ್ಕೃತಿಯ ಪರ ಇದ್ದರೆ, ಉದಾರವಾದಿಗಳು ಇದರ ಅಪಾಯವನ್ನು ಎತ್ತಿ ಹಿಡಿಯುತ್ತಿದ್ದಾರೆ.
ಅಮೆರಿಕದಲ್ಲೇ ಇಂಥ ಕೃತ್ಯ ಹೆಚ್ಚು!
ಇತರ ದೇಶಗಳಿಗೆ ಹೋಲಿಸಿದರೆ ಅಮೆರಿಕದಲ್ಲಿ ಬಂದೂಕಿನ ಹಿಂಸಾಚಾರಕ್ಕೆ ಸಾವಿನ ಪ್ರಕರಣಗಳು 26 ಪಟ್ಟು ಅಧಿಕ. ಅದರಲ್ಲೂ ಅರ್ಧದಷ್ಟು ಕೇಸ್‌ಗಳು ಕೇವಲ 127 ನಗರಗಳಲ್ಲಿ ನಡೆದಿವೆ. ಅದು ಅಮೆರಿಕದ ಕಾಲು ಭಾಗದಷ್ಟು ಜನಸಂಖ್ಯೆಯನ್ನು ಪ್ರತಿನಿಧಿಸುತ್ತದೆ. ಅಂದರೆ ಬಂದೂಕು ಸಂಸ್ಕೃತಿ ನಗರ ಕೇಂದ್ರಿತವಾಗಿದೆ. ಬಹುತೇಕ ಹಿಂಸಾಚಾರ ಹಣಕಾಸು ವಿಷಯಗಳಲ್ಲಿ ಉಂಟಾಗಿರುವುದನ್ನೂ ಗಮನಿಸಬಹುದು.
ಅಮೆರಿಕದ ಮಹಿಳೆಯರೂ ಗನ್ ಹಿಂಸಾಚಾರಕ್ಕೆ ತುತ್ತಾಗಿದ್ದಾರೆ. ಪ್ರತಿ ತಿಂಗಳು ಸರಾಸರಿ 70 ಮಹಿಳೆಯರು ಅಮೆರಿಕದಲ್ಲಿ ಗುಂಡಿನ ದಾಳಿಗೆ ಸಿಲುಕಿ ಜೀವ ಕಳೆದುಕೊಳ್ಳುತ್ತಾರೆ. ಹಲವರು ಗಾಯಗೊಳ್ಳುತ್ತಿದ್ದಾರೆ. ಲಕ್ಷಾಂತರ ಮಹಿಳೆಯರು ತಮ್ಮ ಸಂಗಾತಿಯಿಂದಲೇ ಗುಂಡೇಟಿನ ಬೆದರಿಕೆಯನ್ನು ಎದುರಿಸುತ್ತಿದ್ದಾರೆ. ಶೇ.58ರಷ್ಟು ಅಮೆರಿಕನ್ನು ತಮ್ಮ ಜೀವಮಾನದಲ್ಲಿ ಒಂದಿಲ್ಲೊಂದು ಸಂದರ್ಭದಲ್ಲಿ ಗನ್ ಹಿಂಸಾಚಾರದ ಅಪಾಯಗಳನ್ನು ಎದುರಿಸಿದ್ದಾರೆ.
ಅಮೆರಿಕದ ಯುವಕರು ಕಿಲ್ಲರ್‌ಗಳಾಗಿ ಬದಲಾಗುತ್ತಿರುವುದೇಕೆ?
ಅಮೆರಿಕದಲ್ಲಿ ಹದಿಹರೆಯದ ತರುಣರು ಕೈಯಲ್ಲಿ ರೈಫಲ್ ಹಿಡಿದುಕೊಂಡು ಹಿಂಸಾಚಾರಕ್ಕೆ ಇಳಿಯುವುದೇಕೆ ಎಂಬ ಪ್ರಶ್ನೆ ಈಗ ಕಾಡುತ್ತಿದೆ. ನೆರೆಹೊರೆಯಲ್ಲಿ ಕಾಣುವ ಬಂದೂಕಿನ ಹಿಂಸಾಚಾರ ಹದಿಹರೆಯದವರ ಮೇಲೆ ನಕಾರಾತ್ಮಕ ಪ್ರಭಾವ ಬೀರುತ್ತದೆ. ಶಾಲೆಗಳಲ್ಲಿ ಕಡಿಮೆ ಅಂಕ ಗಳಿಸಿದ ವಿದ್ಯಾರ್ಥಿಗಳಲ್ಲಿ ಮಾನಸಿಕ ಒತ್ತಡ ಉಂಟಾಗುತ್ತದೆ. ಇಂಥ ಹಿಂಸಾಕೃತ್ಯಗಳಲ್ಲಿ ತೊಡಗಿಸಿದ್ದ ಹುಡುಗರಲ್ಲಿ ಬಹುತೇಕ ಮಂದಿ ಕಡಿಮೆ ಅಂಕ ಗಳಿಸಿದವರು, ಕೌಟುಂಬಿಕ ಸಮಸ್ಯೆಗನ್ನು ಎದುರಿಸುತ್ತಿರುವವರೂ ಆಗಿದ್ದಾರೆ ಎಂದು ಅಧ್ಯಯನವೊಂದು ತಿಳಿಸಿದೆ.
ಬೆಚ್ಚಿ ಬಿದ್ದಿದೆ ಅಮೆರಿಕ!
ಈ ದುರ್ಘಟನೆಗೆ ಅಮೆರಿಕ ಬೆಚ್ಚಿಬಿದ್ದಿದ್ದು, ಮಕ್ಕಳ ಸುರಕ್ಷತೆ ಬಗ್ಗೆ ಆತಂಕ ಮೂಡಿಸಿದೆ. ದುರ್ಘಟನೆ ಹಿನ್ನೆಲೆಯಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರು ದಿಗ್ಭ್ರಮೆ ವ್ಯಕ್ತಪಡಿಸಿದ್ದು, ಸಂತ್ರಸ್ತರಿಗೆ ಅಗತ್ಯ ನೆರವನ್ನು ನೀಡಲಾಗುವುದು ಎಂದು ಹೇಳಿದ್ದಾರೆ. ರಾಷ್ಟ್ರವನ್ನು ಉದ್ದೇಶಿಸಿ ಬೈಡೆನ್ ಮಾತನಾಡಿದ್ದು, ಇಂಥ ಹತ್ಯಾಕಾಂಡಗಳು ನಡೆಯದಂತೆ ಕಠಿಣ ಕಾನೂನು ಕ್ರಮ ಕೈಗೊಳ್ಳಲು ನಾವು ಕಾರ್ಯಪ್ರವೃತ್ತರಾಗಬೇಕಾಗಿದೆ. ಮುಖ್ಯವಾಗಿ ಅಮೆರಿಕನ್ನರು ಬಂದೂಕು ಲಾಬಿಯ ವಿರುದ್ಧ ಸಂಘಟಿತರಾಗಿ ನಿಲ್ಲಬೇಕಾದ ಸಮಯ ಬಂದಿದೆ ಎಂದು ಹೇಳಿದ್ದಾರೆ.
ಅಮೆರಿಕದ ಶಾಲೆಗಳಲ್ಲಿ ಗುಂಡಿನ ದಾಳಿ ಇದೇ ಮೊದಲಲ್ಲ
ಅಮೆರಿಕದಲ್ಲಿ ಅಮಾಯಕ, ಮುಗ್ಧ ಶಾಲಾ ಮಕ್ಕಳು ಗುಂಡಿನ ದಾಳಿಗೆ ಬಲಿಯಾಗುತ್ತಿರುವುದು ಇದೇ ಮೊದಲಲ್ಲ. ಕಳೆದ ಕೆಲ ವರ್ಷಗಳಲ್ಲಿ ಡಜನ್ ಗಟ್ಟಲೆ ಇಂಥ ಭೀಕರ ದುರ್ಘಟನೆಗಳು ನಡೆದಿವೆ. ಆದರೆ 1999ರಲ್ಲಿ ಕೊಲೊರಾಡೊದ ಕೊಲಂಬಿಯನ್ ಹೈಸ್ಕೂಲ್ ನಲ್ಲಿ ನರಮೇಧ ನಡೆಯುವ ತನಕ ಒಂದಂಕಿಯಷ್ಟು ಪ್ರಮಾಣದಲ್ಲಿ ಸಾವಿಗೀಡಾಗುತ್ತಿದರು. ಬಳಿಕ ಎರಡಂಕಿಯಷ್ಟು ಹತ್ಯೆಗಳು ನಡೆದಿವೆ. 17 ವರ್ಷದ ಹಂತಕನಿಂದ ಹ್ಯೂಸ್ಟನ್ ವ್ಯಾಪ್ತಿಯ ಸಾಂತಾ ಫೆ ಹೈಸ್ಕೂಲ್‌ನಲ್ಲಿ ೨೦೧೮ರ ಮೇನಲ್ಲಿ 10 ಮಕ್ಕಳ ಹತ್ಯೆಯಾಗಿತ್ತು. ಫ್ಲೊರಿಡಾದ ಪಾರ್ಕ್ ಲ್ಯಾಂಡ್‌ನಲ್ಲಿನ ಮರ್ಜೊರಿ ಸ್ಟೋನ್ ಮ್ಯಾನ್ ಡೋಗ್ಲಸ್ ಪ್ರೌಢಶಾಲೆಯಲ್ಲಿ 2018ರ ಫೆಬ್ರವರಿಯಲ್ಲಿ ನಡೆದ ಗುಂಡಿನ ದಾಳಿಯಲ್ಲಿ 14 ವಿದ್ಯಾರ್ಥಿಗಳ ಜೀವ ಹೋಗಿತ್ತು. 20 ವರ್ಷ ವಯಸ್ಸಿನ ಹಂತಕನಿಂದ ಕೃತ್ಯ ನಡೆದಿತ್ತು.
ರೋಸ್ ಬರ್ಗ್‌ನ ಕಮ್ಯುನಿಟಿ ಕಾಲೇಜ್‌ನಲ್ಲಿ 2015 ರ ಅಕ್ಟೋಬರ್‌ನಲ್ಲಿ ಶಾಲೆಗೆ ಎರಗಿದ ದುಷ್ಕರ್ಮಿಯಿಂದ 9 ವಿದ್ಯಾರ್ಥಿಗಳ ಹತ್ಯೆಯಾಗಿತ್ತು.
ನ್ಯೂಟೌನ್‌ನಲ್ಲಿರುವ ಸ್ಯಾಂಡಿ ಹುಕ್ ಎಲಿಮೆಂಟರಿ ಶಾಲೆಯಲ್ಲಿ 2012ರ ಡಿಸೆಂಬರ್‌ನಲ್ಲಿ 19 ವರ್ಷ ವಯಸ್ಸಿನ ಹಂತಕನಿಂದ ಗುಡಿನ ದಾಳಿಯಾಗಿ 20 ಮಂದಿ ಸಾವಿಗೀಡಾಗಿದ್ದರು. ದಾಳಿಕೋರ ತನಗೂ ಗುಂಡಿಕ್ಕಿ ಸತ್ತು ಹೋಗಿದ್ದ. ವರ್ಜೀನಿಯಾದ ಶಾಲೆಯ ಕ್ಯಾಂಪಸ್‌ನಲ್ಲಿ 2007ರ ಏಪ್ರಿಲ್‌ನಲ್ಲಿ 23 ವರ್ಷ ವಯಸ್ಸಿನ ವಿದ್ಯಾರ್ಥಿಯಿಂದ ಭೀಕರ ಗುಂಡಿನ ದಾಳಿಗೆ 32 ಮಂದಿ ಪ್ರಾಣ ಕಳೆದುಕೊಂಡಿದ್ದರು. ಎರಡು ಡಜನ್ನಿಗೂ ಹೆಚ್ಚು ಮಂದಿ ಗಾಯಾಳುಗಳಾದರು. ಕೊಲಂಬಿಯನ್ ಹೈಸ್ಕೂಲ್‌ನಲ್ಲಿ 1999ರಲ್ಲಿ ಇಬ್ಬರು ವಿದ್ಯಾರ್ಥಿಗಳು ಸೇರಿಕೊಂಡು ತಮ್ಮ 12 ಸಹಪಾಠಿಗಳನ್ನು ಮತ್ತು ಒಬ್ಬ ಶಿಕ್ಷಕರನ್ನು ಗುಂಡಿಕ್ಕಿ ಸಾಯಿಸಿದ್ದರು. ಬಳಿಕ ತಾವೂ ಆತ್ಮಹತ್ಯೆ ಮಾಡಿಕೊಂಡರು.
ಪೂರಕ ಸುದ್ದಿ: ಅಮೆರಿಕದ ಶಾಲೆಗಳಲ್ಲಿ ನಡೆದ ಭೀಕರ ಗುಂಡಿನ ದಾಳಿ ಇದೇ ಮೊದಲಲ್ಲ…
ಬಂದೂಕಿನ ಹಿಂಸಾಚಾರ ಅಂತ್ಯಗೊಳಿಸಲು ಜೋ ಬೈಡೆನ್ ಕರೆ
ಟೆಕ್ಸಾಸ್‌ನ ಶಾಲೆಯಲ್ಲಿ ನಡೆದ ಭೀಕರ ದುರಂತದ ಬಳಿಕ ಅಧ್ಯಕ್ಷ ಜೋ ಬೈಡೆನ್ ಅವರು ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದಾಗ ಭಾವುಕರಾಗಿದ್ದರು. “ಒಂದು ದೇಶವಾಗಿ ನಾವು ನಮ್ಮನ್ನೇ ಕೇಳಿಕೊಳ್ಳಬೇಕಾಗಿದೆ. ಬಂದೂಕು ಲಾಬಿಯ ಎದುರು ದೇವರ ಹೆಸರಿನಲ್ಲಿ ನಾವು ನಿಂತು ಹೋರಾಡುವುದು ಯಾವಾಗ? ನಾವು ಮಾಡಬೇಕಾಗಿರುವುದು ಏನು? ಹಲವಾರು ಪೋಷಕರಿಗೆ ಇನ್ನು ಮುಂದೆ ತಮ್ಮ ಮಕ್ಕಳನ್ನು ಕಾಣಲಾಗದು. ಅವರ ಭವಿಷ್ಯದ ಕನಸುಗಳು ನುಚ್ಚುನೂರಾಗಿವೆ. ನಾವು ಈಗ ಗನ್ ಲಾಬಿ ವಿರುದ್ಧ ಗಟ್ಟಿಯಾಗಿ ನಿಂತು ಹೋರಾಟ ಮಾಡಬೇಕಾಗಿದೆ. ಮಕ್ಕಳನ್ನು ಕಳೆದುಕೊಳ್ಳುವುದು ಎಂದರೆ ಪೋಷಕರಿಗೆ ತಮ್ಮ ಆತ್ಮದ ತುಂಡನ್ನು ಕಿತ್ತು ಹಾಕಿದಂತೆಯೇ ಸರಿ. ಅದು ಹೃದಯದಲ್ಲಿ ಸೃಷ್ಟಿಸುವ ಟೊಳ್ಳು. ಅದು ನಿಮ್ಮನ್ನು ಅದರೊಳಗೆ ಕುಸಿಯುವಂತೆ ಮಾಡುತ್ತದೆ. ಮತ್ತು ಆ ಶೋಕದಿಂದ ಎಂದೂ ಹೊರಬರಲು ಸಾಧ್ಯವಾಗುವುದಿಲ್ಲ. ಅದು ಅತ್ಯಂತ ನೋವು ಕೊಡುವಂಥದ್ದು. ಜಗತ್ತಿನ ಬೇರೆ ಎಲ್ಲೂ ಇಂಥ ಗುಂಡಿನ ದಾಳಿಗಳು ಶಾಲೆಗಳಲ್ಲಿ ನಡೆಯುತ್ತಿಲ್ಲ. ಇಲ್ಲಿ ಮಾತ್ರ ಏಕೆ ಹೀಗಾಗಿದೆ? ನಾವು ಇದನ್ನು ತಡೆಯಲೇಬೇಕುʼʼ ಎಂದು ಬೈಡೆನ್ ಮರುಗಿದ್ದಾರೆ.
10 ದಿನಗಳಲ್ಲಿ ಎರಡನೇ ದಾಳಿ
ಅಮೆರಿಕದಲ್ಲಿ ಮೇನಲ್ಲಿ ಕೇವಲ 10 ದಿನಗಳಲ್ಲಿ ಎರಡನೇ ಬಾರಿಗೆ ಭೀಕರ ಗುಂಡಿನ ದಾಳಿ ನಡೆದಿದೆ. ದೇಶದ ಶಾಲೆಗಳಲ್ಲಿ ಈ ವರ್ಷ ನಡೆದ 27ನೇ ಹಿಂಸಾಚಾರ ಇದಾಗಿದೆ. ಬಫೆಲೊದಲ್ಲಿನ ಸೂಪರ್ ಮಾರ್ಕೆಟ್‌ನಲ್ಲಿ ಇದೇ ಮೇ 14ರಂದು ನಡೆದ ಗುಂಡಿನ ದಾಳಿಗೆ 10 ಮಂದಿ ಮೃತಪಟ್ಟಿದ್ದರು. ಮೇ 24ಕ್ಕೆ ಟೆಕ್ಸಾಸ್ ಶಾಲೆಯಲ್ಲಿ ಮಕ್ಕಳು ಗುಂಡಿಗೆ ಬಲಿಯಾಗಿದ್ದಾರೆ.
18 ವರ್ಷದ ಯುವಜನತೆಗೆ ರೈಫಲ್ ಲೈಸೆನ್ಸ್ ಬೇಕೆ?
ಅಮೆರಿಕದಲ್ಲಿ 18 ವರ್ಷ ವಯಸ್ಸಿನ ಯುವಕರು ರೈಫಲ್‌ಗಳನ್ನು ಖರೀದಿಸಬಹುದು. ಇಷ್ಟು ಸಣ್ಣ ವಯಸ್ಸಿನವರಿಗೆ ಬಂದೂಕು ಲೈಸೆನ್ಸ್ ಕೊಡಬೇಕೆ ಬೇಡವೇ ಎಂಬ ಚರ್ಚೆ ಅಮೆರಿಕದಲ್ಲಿ ನಡೆಯುತ್ತಿದೆ. ಇತ್ತೀಚೆಗೆ ಬಫೆಲೊದಲ್ಲಿ ನಡೆದ ಗುಂಡಿನ ದಾಳಿಯಲ್ಲಿ 18 ವರ್ಷದ ಹಂತಕನಿದ್ದ. ಆತ ಗನ್ ಸ್ಟೋರ್‌ನಿಂದ ಕಾನೂನುಬದ್ಧವಾಗಿಯೇ ಸೆಮಿ-ಆಟೊಮ್ಯಾಟಿಕ್ ರೈಫಲ್ ಬುಷ್ ಮಾಸ್ಟರ್-ಎಕ್ಸ್‌ಎಂ-15 ಅನ್ನು ಖರೀದಿಸಿದ್ದ ಸಂಗತಿ ತನಿಖೆಯ ಬಳಿಕ ಗೊತ್ತಾಗಿತ್ತು. ಇತ್ತೀಚಿನ ವರ್ಷಗಳಲ್ಲಿ ಗನ್ ಶಾಪ್‌ಗಳಲ್ಲಿ 21 ವರ್ಷಕ್ಕಿಂತ ಕೆಳಗಿನವರಿಗೆ ಮಾರಾಟ ಮಾಡುತ್ತಿಲ್ಲ.
ಈ ಹಿಂಸಾಚಾರಕ್ಕೆ ಪರಿಹಾರವೇನು?
ಅಮೆರಿಕದಲ್ಲಿ ಗನ್ ಲಾಬಿಯನ್ನು ಬಲವಾಗಿ ಹತ್ತಿಕ್ಕದೆ ಬೇರೆ ದಾರಿಯಿಲ್ಲ. ಗನ್ ಲೈಸೆನ್ಸ್ ನಿಯಮಗಳನ್ನು ಬಿಗಿಗೊಳಿಸಬೇಕು. ಸಾರ್ವಜನಿಕವಾಗಿ ಬಂದೂಕುಗಳನ್ನು ಕೊಂಡೊಯ್ಯುವುದಕ್ಕೆ ನಿರ್ಬಂಧ ವಿಧಿಸಬೇಕು. ಮಕ್ಕಳು ಮತ್ತು ಹದಿಹರೆಯದವರ ಕೈಗೆ ಶಸ್ತ್ರಾಸ್ತ್ರಗಳು ಸಿಗದಂತೆ ನೋಡಿಕೊಳ್ಳಬೇಕು. ಬಂದೂಕು ಹಿಂಸಾಚಾರಗಳಲ್ಲಿ ಭಾಗವಹಿಸದಿರುವಂತೆ ಯುವಜನತೆಯಲ್ಲಿ ಜಾಗೃತಿ ಮೂಡಿಸಬೇಕು. ಶಸ್ತ್ರಾಸ್ತ್ರ ಉತ್ಪಾದನೆ, ಮಾರಾಟ, ವಿತರಣೆಗೆ ಕಠಿಣ ನಿರ್ಬಂಧಗಳನ್ನು ಜಾರಿಗೊಳಿಸಬೇಕು ಎನ್ನುತ್ತಾರೆ ತಜ್ಞರು. ಆದರೆ ಅಮೆರಿಕದಲ್ಲಿ ಬಂದೂಕು ಸಂಸ್ಕೃತಿಗೆ ತಿಲಾಂಜಲಿ ನೀಡಲು ಸಾಮಾಜಿಕ, ರಾಜಕೀಯ ವಲಯದ ಸಂಘಟಿತ ಯತ್ನ ಅಗತ್ಯ ಎಂದು ಅಮೆರಿಕದ ರಾಜಕೀಯ ಮತ್ತು ಕಾನೂನು ಪರಿಣತರು ಅಭಿಪ್ರಾಯಪಟ್ಟಿದ್ದಾರೆ.
ಮತ್ತಷ್ಟು ಸುದ್ದಿಗಳು: ಅಮೆರಿಕದ ಟೆಕ್ಸಾಸ್ ಶಾಲೆಯಲ್ಲಿ 19 ಮಕ್ಕಳನ್ನು ಗುಂಡಿಕ್ಕಿ ಕೊಂದ ಯುವಕ