Site icon Vistara News

Crime News: ತಂದೆಯ ಶಿರಚ್ಛೇದ ಮಾಡಿ ಯೂಟ್ಯೂಬ್‌ನಲ್ಲಿ ವಿಡಿಯೊ ಅಪ್‌ಲೋಡ್‌ ಮಾಡಿದ ಪಾಪಿ ಮಗ!

crime news

crime news

ನ್ಯೂಯಾರ್ಕ್‌: ಅಮೆರಿಕದಲ್ಲಿ ಬೆಚ್ಚಿ ಬೀಳಿಸುವ ಕ್ರೈಂ ನಡೆದಿದ್ದು, ತನ್ನ ತಂದೆಯ ಶಿರಚ್ಛೇದ ಮಾಡಿದ 33 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ. ತಂದೆಯನ್ನು ಕೊಲೆ ಮಾಡಿ ಆ ವಿಡಿಯೊವನ್ನು ಆತ ಯೂಟ್ಯೂಬ್‌ನಲ್ಲಿ ಅಪ್‌ಲೋಡ್‌ ಮಾಡಿದ್ದ. ಜಸ್ಟಿನ್ ಮೊಹ್ನ್ (Justin Mohn) ತಂದೆಯನ್ನೇ ಕೊಲೆಗೈದ ವ್ಯಕ್ತಿ. ತನ್ನ 68 ವರ್ಷದ ತಂದೆ ಮೈಕೆಲ್ ಮೊಹ್ನ್ (Michael Mohn) ಅವರನ್ನು ಪೆನ್ಸಿಲ್ವೇನಿಯಾದ ತಮ್ಮ ಮನೆಯಲ್ಲಿ ಶಿರಚ್ಛೇದನ ಮಾಡಿ ವಿಡಿಯೊವನ್ನು ಅಪ್‌ಲೋಡ್‌ ಮಾಡಿದ್ದ. ಸದ್ಯ ಜಸ್ಟಿನ್ ಮೊಹ್ನ್‌ನನ್ನು ವಶಕ್ಕೆ ಪಡೆಯಲಾಗಿದೆ (Crime News).

ಘಟನೆಯ ಹಿನ್ನೆಲೆ ಏನು?

ಜಸ್ಟಿನ್ ಮೊಹ್ನ್‌ನ ತಾಯಿ ಡೆನಿಸ್ ಅವರು ಮನೆಯಲ್ಲಿ ಪತಿಯ ಮೃತದೇಹವನ್ನು ನೋಡಿ ಕೂಡಲೇ ಪೊಲೀಸರಿಗೆ ಕರೆ ಮಾಡಿದ್ದರು. ʼʼಹೊರ ಹೋಗಿದ್ದ ತಾನು ಮರಳಿ ಮನೆಗೆ ಬಂದಾಗ ತನ್ನ ಮಗ ಮತ್ತು ತನ್ನ ಪತಿಯ ಕಾರು ಎಲ್ಲಿಯೂ ಕಂಡುಬಂದಿರಲಿಲ್ಲ. ಅನುಮಾನಗೊಂಡು ಪರಿಶೀಲಿಸಿದಾಗ ಮೈಕೆಲ್ ಮೊಹ್ನ್ ಅವರ ಶಿರ ಇಲ್ಲದ ಮೃತದೇಹ ಪತ್ತೆಯಾಗಿತ್ತುʼʼ ಎಂದು ಡೆನಿಸ್ ತಿಳಿಸಿದ್ದರು. “ಕೂಡಲೇ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದರು. ಈ ವೇಳೆ ಬಾತ್‌ರೂಮ್‌ನಲ್ಲಿ ಮೈಕೆಲ್ ಮೊಹ್ನ್ ಅವರ ಶವ ಕಂಡು ಬಂದಿತ್ತು. ಆ ಸಮಯದಲ್ಲಿ ಜಸ್ಟಿನ್ ಮೊಹ್ನ್ ಸ್ಥಳದಲ್ಲಿ ಇರಲಿಲ್ಲʼʼ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪ್ಲಾಸ್ಟಿಕ್ ಕವರ್‌ನಲ್ಲಿತ್ತು ತಲೆ!

ಪರಿಶೀಲನೆ ವೇಳೆ ಪೊಲೀಸರು ಬಾತ್‌ಟಬ್‌ನಲ್ಲಿ ಮಚ್ಚು ಮತ್ತು ದೊಡ್ಡ ಚಾಕುವನ್ನು ಪತ್ತೆ ಹಚ್ಚಿದ್ದರು. ಜತೆಗೆ ಮೊದಲ ಮಹಡಿಯ ಮಲಗುವ ಕೋಣೆಯಲ್ಲಿ ಪ್ಲಾಸ್ಟಿಕ್ ಕವರ್‌ನೊಳಗೆ ಮೈಕೆಲ್ ಮೊಹ್ನ್‌ ಅವರ ತಲೆಯೂ ಪತ್ತೆಯಾಗಿತ್ತು. ಕಸದ ತೊಟ್ಟಿಯಲ್ಲಿ ರಕ್ತಸಿಕ್ತ ರಬ್ಬರ್ ಗ್ವೌಸ್‌ ಕೂಡ ಕಂಡು ಬಂದಿತ್ತು. ಈ ಮಧ್ಯೆ ಜಸ್ಟಿನ್ ಮೊಹ್ನ್ ಯೂಟ್ಯೂಬ್‌ನಲ್ಲಿ ಪೋಸ್ಟ್ ಮಾಡಿದ ವಿಡಿಯೊ ಪತ್ತೆಯಾಗಿತ್ತು. ಇದರಲ್ಲಿ ಆತ ಪ್ಲಾಸ್ಟಿಕ್ ಕವರ್‌ನಲ್ಲಿ ರಕ್ತಸಿಕ್ತ ತಲೆಯನ್ನು ಹಿಡಿದುಕೊಂಡಿರುವುದು ಕಂಡು ಬಂದಿದೆ.

20 ವರ್ಷಗಳಿಂದ ಫೆಡರಲ್ ಉದ್ಯೋಗಿಯಾಗಿದ್ದ ತನ್ನ ತಂದೆ ದೇಶ ದ್ರೋಹಿ ಎಂದು ಜಸ್ಟಿನ್ ಮೊಹ್ನ್ ಹೇಳಿದ್ದಾನೆ. ಅಮೆರಿಕ ಅಧ್ಯಕ್ಷ ಜೋ ಬೈಡನ್, ಬ್ಲ್ಯಾಕ್ ಲೈವ್ಸ್ ಮ್ಯಾಟರ್ ಮೂವ್‌ಮೆಂಟ್‌ ಮತ್ತು ಎಲ್‌ಬಿಟಿಕ್ಯೂ ಸಮುದಾಯವನ್ನು ವಿಡಿಯೊದಲ್ಲಿ ನಿಂದಿಸುವುದು ಕಂಡು ಬಂದಿದೆ. ಫೆಡರಲ್ ಕಾರ್ಮಿಕರು, ಪತ್ರಕರ್ತರು ಮತ್ತು ಫೆಡರಲ್ ಕಾನೂನು ಜಾರಿದಾರರ ಮೇಲೆ ದಾಳಿ ನಡೆಸುವಂತೆಯೂ ಅವನು ವಿಡಿಯೊದಲ್ಲಿ ಹೇಳಿದ್ದಾನೆ ಎಂದು ಮೂಲಗಳು ತಿಳಿಸಿವೆ. ಸದ್ಯ ವಿಡಿಯೊವನ್ನು ಡಿಲೀಟ್‌ ಮಾಡಲಾಗಿದೆ. “ನಮ್ಮ ನೀತಿಯನ್ನು ಉಲ್ಲಂಘಿಸಿದ್ದಕ್ಕಾಗಿ ವಿಡಿಯೊವನ್ನು ಡಿಲೀಟ್‌ ಮಾಡಲಾಗಿದೆ. ಜಸ್ಟಿನ್ ಮೊಹ್ನ್‌ ಚಾನೆಲ್ ಅನ್ನು ಬ್ಲಾಕ್‌ ಮಾಡಲಾಗಿದೆʼʼ ಎಂದು ಯೂಟ್ಯೂಬ್ ವಕ್ತಾರರು ಹೇಳಿದ್ದಾರೆ.

ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಅಪರಾಧಿಯನ್ನು ಪತ್ತೆ ಹಚ್ಚಲಾಗಿದೆ. ಬಳಿಕ ವಿಚಾರಣೆಗೆ ಒಳಪಡಿಸಲಾಗಿದ್ದು, ನ್ಯಾಯಾಧೀಶರು ಆತನ ಬಂಧನಕ್ಕೆ ಆದೇಶ ನೀಡಿದ್ದಾರೆ. ಮುಂದಿನ ವಿಚಾರಣೆ ಫೆಬ್ರವರಿ 8ರಂದು ನಡೆಯಲಿದೆ.

Exit mobile version