Site icon Vistara News

Drone Crashes: ರಷ್ಯಾದ ಬಹುಮಹಡಿ ಕಟ್ಟಡಕ್ಕೆ ಅಪ್ಪಳಿಸಿದ ಉಕ್ರೇನ್‌ನ ಡ್ರೋನ್‌; ಭಯಾನಕ ದಾಳಿಯ ವಿಡಿಯೊ ಇಲ್ಲಿದೆ

Drone Crashes

ಮಾಸ್ಕೋ: ರಷ್ಯಾ-ಉಕ್ರೇನ್‌ ಯುದ್ಧ ಕೊನೆಗಾಣಿಸಲು ಹಲವು ದಿನಗಳಿಂದ ಪ್ರಯತ್ನ ನಡೆಯುತ್ತಲೇ ಇದೆ. ಈ ಮಧ್ಯೆ ಇಂದು (ಆಗಸ್ಟ್‌ 26) ರಷ್ಯಾದ ಬಹುಮಹಡಿ ಕಟ್ಟಡವೊಂದಕ್ಕೆ ಉಕ್ರೇನ್ ಡ್ರೋನ್‌ ಮೂಲಕ ದಾಳಿ ನಡೆಸಿದೆ (Drone Crashes). ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದಾರೆ. ರಷ್ಯಾದ ಸರಟೋವ್‌ (Saratov)ನಲ್ಲಿರುವ 38 ಅಂತಸ್ತಿನ ವೋಲ್ಗಾ ಸ್ಕೈ ಅಪಾರ್ಟ್‌ಮೆಂಟ್‌ ಸಂಕೀರ್ಣ (Volga Sky apartment complex)ಕ್ಕೆ ಡ್ರೋನ್ ಅಪ್ಪಳಿಸಿದ್ದು, ಇಬ್ಬರು ಗಾಯಗೊಂಡು ಮನೆಗಳಿಗೆ ಹಾನಿಯಾಗಿದೆ. ಸೋಮವಾರ ಮುಂಜಾನೆ ಈ ಘಟನೆ ನಡೆದಿದ್ದು, ಸದ್ಯ ಡ್ರೋನ್‌ ಕಟ್ಟಡಕ್ಕೆ ಅಪ್ಪಳಿಸುತ್ತಿರುವ ದೃಶ್ಯ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ (Viral Video).

ಸರಟೋವ್‌ನಲ್ಲಿರುವ 38 ಅಂತಸ್ತಿನ ವೋಲ್ಗಾ ಸ್ಕೈ ವಸತಿ ಸಂಕೀರ್ಣ ನಗರದ ಅತ್ಯಂತ ಎತ್ತರದ ಕಟ್ಟಡವಾಗಿದೆ. 2011ರ 9/11ರಂದು ಅಮೆರಿಕದಲ್ಲಿ ನಡೆದ ದಾಳಿಯನ್ನು ನೆನಪಿಸುವ ಈ ಘಟನೆ ಸದ್ಯ ಸಂಚಲನ ಮೂಡಿಸಿದೆ. ರಷ್ಯಾದ ವಾಯು ರಕ್ಷಣಾ ವ್ಯವಸ್ಥೆಗಳಿಂದ ನಾಶವಾದ ಡ್ರೋನ್‌ಗಳಿಂದ ಬಿದ್ದ ಅವಶೇಷಗಳಿಂದ ಸರಟೋವ್ ನಗರದ ವಸತಿ ಸಂಕೀರ್ಣಕ್ಕೆ ಹಾನಿಯಾಗಿದೆ ಎಂದು ಪ್ರಾದೇಶಿಕ ಗವರ್ನರ್ ರೋಮನ್ ಬಸುರ್ಗಿನ್ ತಿಳಿಸಿದ್ದಾರೆ. “ಘಟನೆಯಿಂದ ಗಾಯಗೊಂಡು ಗಂಭೀರ ಸ್ಥಿತಿಯಲ್ಲಿದ್ದ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ” ಎಂದು ಬಸುರ್ಗಿನ್ ಹೇಳಿದ್ದಾರೆ.

ರಷ್ಯಾ ಹೇಳಿದ್ದೇನು?

ಉಕ್ರೇನ್ ಗಡಿಯಿಂದ ಸುಮಾರು 900 ಕಿಲೋ ಮೀಟರ್ ದೂರದಲ್ಲಿರುವ ಸರಟೋವ್ ಪ್ರದೇಶದ ಮೇಲೆ ಹಾರಾಡುತ್ತಿದ್ದ 9 ಡ್ರೋನ್‌ಗಳನ್ನು ನಾಶಪಡಿಸಲಾಗಿದೆ ಎಂದು ರಷ್ಯಾದ ರಕ್ಷಣಾ ಸಚಿವಾಲಯ ತಿಳಿಸಿದೆ. ಸರಟೋವ್ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಹಾರಾಟವನ್ನು ತಾತ್ಕಾಲಿಕವಾಗಿ ನಿಲುಗಡೆಗೊಳಿಸಲಾಗಿದೆ ಎಂದು ರಷ್ಯಾದ ಆರ್‌ಐಎ ಸುದ್ದಿ ಸಂಸ್ಥೆ ವರದಿ ಮಾಡಿದೆ. 2022ರ ಫೆಬ್ರವರಿಯಲ್ಲಿ ರಷ್ಯಾ-ಉಕ್ರೇನ್‌ ಯುದ್ದ ಆರಂಭವಾಗಿದ್ದು, ಎರಡೂ ದೇಶಗಳು ಪರಸ್ಪರ ದಾಳಿ ನಡೆಸುತ್ತಿವೆ.

ಉತ್ತರ, ಪೂರ್ವ ಮತ್ತು ದಕ್ಷಿಣ ಉಕ್ರೇನ್ ಮೇಲೆ ರಷ್ಯಾ ದಾಳಿ ನಡೆಸಿದ್ದು, ಕನಿಷ್ಠ 4 ಮಂದಿ ಸಾವನ್ನಪ್ಪಿದ್ದಾರೆ ಮತ್ತು 37 ಜನರು ಗಾಯಗೊಂಡಿದ್ದಾರೆ ಎಂದು ಉಕ್ರೇನ್ ಮಿಲಿಟರಿ ಮತ್ತು ಸ್ಥಳೀಯ ಅಧಿಕಾರಿಗಳು ಭಾನುವಾರ ತಿಳಿಸಿದ ನಂತರ ಇಂದು ಈ ಡ್ರೋನ್‌ ದಾಳಿ ನಡೆದಿವೆ. ರಷ್ಯಾದ ನ್ಯೂಸ್ ಶಾಟ್ ಚಾನೆಲ್ ಟೆಲಿಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ ವಿಡಿಯೊದಲ್ಲಿ ದಾಳಿಗೊಳಗಾದ ಸರಟೋವ್‌ನ ಎತ್ತರದ ವಸತಿ ಕಟ್ಟಡ ಸ್ಪಷ್ಟವಾಗಿ ಕಂಡು ಬಂದಿದ್ದು, ಹಾನಿಗೊಳಗಾದ ಭಾಗ ಮತ್ತು ಮೂರು ಮಹಡಿಗಳಲ್ಲಿ ಹಲವು ಕಿಟಕಿಗಳು ಹಾರಿಹೋಗುತ್ತಿರುವುದು ಗುರುತಿಸಬಹುದಾಗಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ಬಹಿರಂಗಗೊಳ್ಳಬೇಕಿದೆ. ಸದ್ಯ ಉಕ್ರೇನ್‌ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಇದನ್ನೂ ಓದಿ: Israel vs Hezbollah War: ಹೆಜ್ಬುಲ್ಲಾ ಉಗ್ರರ ಅಟ್ಟಹಾಸ; ಲೆಬನಾನ್‌ ಮೇಲೆ ರಾಕೆಟ್​ ದಾಳಿ ಆರಂಭಿಸಿದ ಇಸ್ರೇಲ್​; ಭಯಾನಕ ವಿಡಿಯೊ ಇಲ್ಲಿದೆ

ವೈರಲ್‌ ವಿಡಿಯೊ

ತಾವು ನಾಗರಿಕರನ್ನು ಗುರಿಯಾಗಿಸಿ ದಾಳಿ ನಡೆಸುವುದಿಲ್ಲ ಎಂದು ಎರಡೂ ದೇಶಗಳು ಹೇಳುತ್ತಿದ್ದು, ಯುದ್ಧ ಪ್ರಯತ್ನಗಳಿಗೆ ಪ್ರಮುಖವಾದ ಮೂಲಸೌಕರ್ಯಗಳನ್ನು ನಾಶಪಡಿಸುವ ಗುರಿಯನ್ನು ಹೊಂದಿರುವುದಾಗಿ ತಿಳಿಸಿವೆ. ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ವಿಡಿಯೊದಲ್ಲಿ ಡ್ರೋನ್ ಕಟ್ಟಡಕ್ಕೆ ಅಪ್ಪಳಿಸುತ್ತಿರುವುದನ್ನು ಕಂಡುಬಂದಿದೆ.

Exit mobile version