Site icon Vistara News

Explainer: ಮೂರೇ ವರ್ಷದಲ್ಲಿ ಲಂಕೆಯನ್ನು ರಾಜಪಕ್ಸ ಕುಟುಂಬ ಮುಳುಗಿಸಿದ್ದು ಹೇಗೆ?

2019ರಲ್ಲಿ ಗೋತಾಬಯ ರಾಜಪಕ್ಸ ಅವರು ಶ್ರೀಲಂಕೆಯ ಅಧ್ಯಕ್ಷ ಚುನಾವಣೆಗೆ ಸ್ಪರ್ಧಿಸಿದಾಗ, ಅಧಿಕಾರಕ್ಕೆ ಬಂದರೆ ದೊಡ್ಡ ಪ್ರಮಾಣದ ತೆರಿಗೆ ವಿನಾಯಿತಿ ನೀಡುವುದಾಗಿ ಘೋಷಿಸಿದ್ದರು. ಅದು ಚುನಾವಣಾ ಪ್ರಚಾರ ಗಿಮಿಕ್‌ ಎಂದು ಭಾವಿಸಲಾಗಿತ್ತು.

ತೆರಿಗೆ ಕಡಿತದ ದುಡುಕು
ಆಗಿನ ವಿತ್ತ ಸಚಿವರಾಗಿದ್ದ ಮಂಗಲ ಸಮರವೀರ ಅವರು, ವ್ಯಾಟ್‌ ಅನ್ನು 15%ದಿಂದ 8%ಗೆ ಇಳಿಸುವುದು, ಲೆವಿಗಳನ್ನು ತೆಗೆಯುವುದು ಅಪಾಯಕಾರಿ ನಡೆ ಎಂದು ಹೇಳಿದ್ದರು. ಯಾಕೆಂದರೆ ದ್ವೀಪರಾಷ್ಟ್ರದ ಸ್ವಂತ ಆದಾಯವೇ ಕಡಿಮೆ. ಅಂತಾರಾಷ್ಟ್ರೀಯ ಸಾಲವೇ ಹೆಚ್ಚು. ಇಂಥ ಹೊತ್ತಿನಲ್ಲಿ ಇದ್ದ ತೆರಿಗೆಯನ್ನೂ ಇಳಿಸಿದರೆ! ʼʼಹಾಗೆಲ್ಲಾದರೂ ಮಾಡಿದರೆ ಇಡೀ ದೇಶವೇ ದಿವಾಳಿಯಾಗಿ, ಇನ್ನೊಂದು ವೆನೆಜುವೆಲಾ ಅಥವಾ ಗ್ರೀಸ್‌ ಆದೀತುʼʼ ಎಂದು ಎಚ್ಚರಿಸಿದ್ದರು. ಇದನ್ನು ಅವರು ಹೇಳಿ ಸರಿಯಾಗಿ 30 ತಿಂಗಳಲ್ಲಿ ಅವರು ಹೇಳಿದಂತೆಯೇ ಆಗಿದೆ.

ನಿರಂಕುಶಾಧಿಕಾರ
2019ರಲ್ಲಿ ಅಧ್ಯಕ್ಷರಾಗಿ ಆಯ್ಕೆಯಾದ ಕೂಡಲೇ ಭಾರಿ ತೆರಿಗೆ ಕಡಿತವನ್ನು ಗೋತಾಬಯ ರಾಜಪಕ್ಸ ಘೋಷಿಸಿದರು. ಇನ್ನಷ್ಟು ಅಧ್ಯಕ್ಷೀಯ ಅಧಿಕಾರಗಳನ್ನು ಕ್ರೋಡೀಕರಿಸಿಕೊಂಡರು. 2015ಕ್ಕೆ ಮುನ್ನ ಅವರ ಸಹೋದರ ಮಹಿಂದ ರಾಜಪಕ್ಸ ಅಧಿಕಾರದಲ್ಲಿದ್ದಾಗ ಪಡೆದುಕೊಂಡಿದ್ದ ನಿರಂಕುಶ ಅಧಿಕಾರಗಳು ಅವು. ದೇಶದ ಅಂತರ್ಯುದ್ಧವನ್ನು ಅಡಗಿಸಲು ಅವರು ಆ ಕ್ರೂರ ಅಧಿಕಾರಗಳನ್ನು ಬಳಸಿಕೊಂಡಿದ್ದರು.

ವಿನಯ, ವಿವೇಕ ಇರಬೇಕಾದ ಜಾಗದಲ್ಲಿ ಹೆಚ್ಚಿನ ಅಧಿಕಾರ, ನಿರಂಕುಶತೆ ಬಂದವು. ತಮ್ಮ ಕುಟುಂಬದ ಜನರನ್ನು ಆಯಕಟ್ಟಿನ ಸ್ಥಾನಗಳಿಗೆ ತಂದರು. ತಮ್ಮ ʼರಾಜಪಕ್ಸʼ ಕುಟುಂಬದ ಬ್ರಾಂಡ್‌ ಅನ್ನು ಹೆಚ್ಚಿಸಿಕೊಳ್ಳಲು ಶ್ರಮಿಸಿದರು. ಸಿಂಹಳೀಯ ಬೌದ್ಧರು ಶೇ.75ರಷ್ಟಿರುವ ಈ ದೇಶದಲ್ಲಿ ಪ್ರಬಲಿಸುತ್ತಿರುವ ರಾಷ್ಟ್ರೀಯವಾದಿ ಮನೋಭಾವದ ಬೆನ್ನೇರಿದರು.

ಅಧಿಕಾರದ ದುರ್ಬಳಕೆ
ಆದರೆ ಶ್ರೀಲಂಕೆಯ ಇಂದಿನ ಪರಿಸ್ಥಿತಿ ದಾರುಣವಾಗಿದೆ. ಪ್ರಧಾನಿ ಮಹಿಂದ ರಾಜಪಕ್ಸ ರಾಜೀನಾಮೆ ನೀಡಿ ಅಡಗಿ ಕುಳಿತಿದ್ದಾರೆ. ಜನತೆಯ ಕೈಗೆ ಸಿಕ್ಕರೆ ಸಿಗಿದುಬಿಡಬಹುದು ಎಂಬ ಭಯವಿದೆ ಅವರಿಗೆ. ಅಧ್ಯಕ್ಷ ಗೋತಾಬಯ ರಾಜಪಕ್ಸ ಅವರ ಅಧಿಕಾರ ಕೂಡ ಯಾವ ಕ್ಷಣದಲ್ಲಿ ಬೇಕಿದ್ದರೂ ʼಗೋತಾʼ ಆಗುವ ಸಂಭವ ಇದೆ. ಆದರೆ ತಾವು ಅಧಿಕಾರದಿಂದ ಇಳಿದ ಕೂಡಲೇ ದುರ್ಬಲರಾಗಿಬಿಡುತ್ತೇವೆ, ಕಾನೂನಿನ ಕೈಗೆ ಸಿಕ್ಕಿಬೀಳಬೇಕಾಗುತ್ತದೆ ಎಂಬುದು ಅವರಿಗೆ ಅರಿವಾಗಿದೆ. ಮಾನವ ಹಕ್ಕುಗಳ ಉಲ್ಲಂಘನೆ, ಬ್ರಹ್ಮಾಂಡ ಭ್ರಷ್ಟಾಚಾರ, ಯುದ್ಧ ಕಾನೂನುಗಳ ಉಲ್ಲಂಘನೆ ಇತ್ಯಾದಿಗಳ ನೂರಾರು ಪ್ರಕರಣಗಳು ಅವರನ್ನು ಮಣಿಸಲು ಕಾದಿವೆ.

ಕಳೆದ ಹನ್ನೆರಡು ವರ್ಷಗಳಿಂದ ರಾಜಪಕ್ಸ ಫ್ಯಾಮಿಲಿಯ ಹಲವರು ಅಧಿಕಾರದ ಆಯಕಟ್ಟಿನ ಜಾಗಗಳಲ್ಲಿ ಇದ್ದಾರೆ. ಮೀಡಿಯಾಗಳು ಹಾಗೂ ಪ್ರತಿಪಕ್ಷಗಳು ಇವರ ಆಡಳಿತವನ್ನು ʼಸರ್ವಾಧಿಕಾರʼ ಎಂದೇ ಕರೆದಿವೆ.

ಎಲ್‌ಟಿಟಿಇಯನ್ನು ಹಸಿಹಸಿಯಾಗಿ ತರಿದುಹಾಕಿದ ಮಿಲಿಟರಿ ಕಾರ್ಯಾಚರಣೆ ನಡೆಸಿದಾಗ ಸೈನ್ಯದ ಮುಖ್ಯಸ್ಥರಾಗಿದ್ದವರು ಇದೇ ಗೋತಾಬಯ. ಈ ರಕ್ತಪಾತದಲ್ಲಿ ಅವರು ಸುಮಾರು ಒಂದು ಲಕ್ಷ ಮಂದಿಯನ್ನು ನಿರ್ದಾಕ್ಷಿಣ್ಯವಾಗಿ ಕೊಲ್ಲಿಸಿದ್ದರು. ಅವರಿಗೀಗ 72 ವರ್ಷ. ಇವರ ಅಣ್ಣ (76) ಮಹಿಂದ ರಾಜಪಕ್ಸ ಈ ಫ್ಯಾಮಿಲಿಯ ರಾಜಕೀಯ ಮಿದುಳು. ಒಮ್ಮೆ ಅಧ್ಯಕ್ಷರಾಗಿ, ಎರಡು ಬಾರಿ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದಾರೆ. ಇವರ ಸಹೋದರರಾದ ಚಮಲ್‌ (79) ಮತ್ತು ಬಸಿಲ್‌ (71) ಇಲ್ಲಿನ ಬಂದರು, ಕೃಷಿ, ಹಣಕಾಸು ಎಲ್ಲವನ್ನೂ ಆವರಿಸಿಕೊಂಡಿದ್ದಾರೆ. ಮಿಲಿಂದ ರಾಜಪಕ್ಸ ಎಂಬಾತ ಸರಕಾರದ ವಕ್ತಾರ. ಕ್ರೀಡಾ ಸಚಿವನಾಗಿದ್ದ ನಮಲ್‌ ರಾಜಪಕ್ಸ ಎಂಬಾತ ಮಹಿಂದರ ಭಾವ, ಇತ್ತೀಚೆಗೆ ರಾಜೀನಾಮೆ ಸಲ್ಲಿಸಿದ್ದಾನೆ.

ಸಾಲದ ಮೇಲೆ ಸಾಲ
ರಾಜಪಕ್ಸ ಕುಟುಂಬ ಅಧಿಕಾರಕ್ಕೆ ಬರುವ ಮುನ್ನವೇ ದೇಶದ ಮೇಲೆ ಸಾಲ ಇತ್ತು. ಆದರೆ ಈ ಸಾಲಕ್ಕೆ ಭ್ರಷ್ಟಾಚಾರವನ್ನೂ ಸೇರಿಸಿ, ಮರುಪಾವತಿ ಅಸಾಧ್ಯವಾಗುವಂತೆ ಮಾಡಿದ ಹೆಗ್ಗಳಿಕೆ ಈ ಕುಟುಂಬದ್ದು. ಹಂಬನ್‌ತೋಟ ಬಂದರನ್ನು ಪೂರ್ತಿಯಾಗಿ ಚೀನಾದ ವಶಕ್ಕೆ ಒಪ್ಪಿಸಿ, ಆ ದೇಶದಿಂದ ಭಾರಿ ಸಾಲವನ್ನು ಪಡೆದದ್ದು ಇದೇ ಕುಟುಂಬ. ಆದರೆ 2010 ಮತ್ತು 2020ರ ನಡುವೆ ದೇಶದ ಸಾಲ ದುಪ್ಪಟ್ಟು ಹೆಚ್ಚಿತು.

2019ರಲ್ಲಿ ದೇಶದಲ್ಲಿ ಈಸ್ಟರ್‌ ಸಂಡೇ ಉಗ್ರ ದಾಳಿಗಳು ನಡೆದವು. ಕುಸಿದ ಪ್ರವಾಸೋದ್ಯಮಕ್ಕೆ ಜೀವ ತುಂಬಲು ಬಡ್ಡಿದರ ಇಳಿಕೆ, ತೆರಿಗೆ ವಿನಾಯಿತಿಗಳು ಅಗತ್ಯ ಎಂದು ರಾಜಪಕ್ಸ ಭಾವಿಸಿದರು. ಆದರೆ ಇದು ನಗದು ಕೊರತೆಯನ್ನು ಮತ್ತಷ್ಟು ಹೆಚ್ಚಿಸಿತು.
ಕೋವಿಡ್‌ ಕಾಲದಲ್ಲಿ ಪ್ರವಾಸೋದ್ಯಮ ಮತ್ತಷ್ಟು ಕುಸಿಯಿತು. ವಿಶ್ವಬ್ಯಾಂಕ್‌, ಹಣಕಾಸು ನಿಧಿ, ಚೀನಾ ಮತ್ತಿತರ ಕಡೆಯಿಂದ ಹಣ ತರಲಾಯಿತು.

ಇದನ್ನೂ ಓದಿ: Explainer: ಶ್ರೀಲಂಕಾದಲ್ಲಿ ಮತ್ತೆ ಎಮರ್ಜೆನ್ಸಿ, ಹಸಿವು, ಪ್ರತಿಭಟನೆ, ಹಾಹಾಕಾರ

ಆಮದಿಗಾಗಿ ವಿದೇಶಿ ವಿನಿಮಯ ಸಂಗ್ರಹವನ್ನು ಬಳಸಿಕೊಳ್ಳಲಾಯಿತು. ಇದರಿಂದ ಸಂಗ್ರಹ ಮೂರನೇ ಎರಡು ಭಾಗದಷ್ಟು ಖಾಲಿಯಾಯಿತು. ಕ್ರೆಡಿಟ್‌ ರೇಟಿಂಗ್‌ ಕಂಪನಿಗಳು ಶ್ರೀಲಂಕೆಗೆ ಕಡಿಮೆ ರೇಟಿಂಗ್‌ ನೀಡಿದವು. ಇದರಿಂದ ಹೊಸ ಸಾಲ ಸಿಗಲಿಲ್ಲ.
ಸರಕಾರ ಇನ್ನಷ್ಟು ನಗದು ಟಂಕಿಸಲು ಮುಂದಾಯಿತು. ಶೇ.42ರಷ್ಟು ಹಣ ಮುದ್ರಿಸಿತು. ಆದರೆ ಇದು ಹಣದುಬ್ಬರವನ್ನು ಹೆಚ್ಚು ಮಾಡಿತು.

ಕೃಷಿ ಕುಸಿತ, ಆಹಾರ ಕೊರತೆ
ಕಳೆದ ಏಪ್ರಿಲ್‌ನಲ್ಲಿ, ಇದ್ದಕ್ಕಿದ್ದಂತೆ ರಸಗೊಬ್ಬರಗಳನ್ನು ನಿಷೇಧಿಸಲಾಯಿತು. ಇದಕ್ಕೆ ನೀಡಿದ ಕಾರಣ- ಶ್ರೀಲಂಕೆಯನ್ನು ಸಾವಯವ ದೇಶವಾಗಿಸಬೇಕು ಹಾಗೂ ರಸಗೊಬ್ಬರ ಮಾಫಿಯಾ ಮಟ್ಟಹಾಕಬೇಕು. ಆದರೆ ನಿಜವಾದ ಕಾರಣವೆಂದರೆ, ಹೊರದೇಶಗಳಿಂದ ರಸಗೊಬ್ಬರ ಖರೀದಿಗೆ ಹಣವಿರಲಿಲ್ಲ. ಈ ರಸಗೊಬ್ಬರ ಬ್ಯಾನ್‌ ತಿರುಗೇಟು ನೀಡಿತು. ಭತ್ತದ ಇಳುವರಿ ಕುಸಿಯಿತು. ಟೀ ಉತ್ಪಾದನೆ ಕುಸಿಯಿತು. ಇಡೀ ಕೃಷಿ ಸರಪಣಿಯೇ ಕುಸಿಯಿತು. ದುಬಾರಿ ಹಣ ನೀಡಿ ಆಹಾರ ಹೊರಗಿನಿಂದ ತರಬೇಕಾಯಿತು. ಇದೊಂದು ಅಪಾಯಕಾರಿ ನೀತಿ ಎಂದು ತಜ್ಞರು ಎಚ್ಚರಿಸಿದರೂ, ರಾಜಪಕ್ಸ ಫ್ಯಾಮಿಲಿ ಕೇಳಲಿಲ್ಲ.

ಸದ್ಯದ ರಾಜಕೀಯ ಜನಪ್ರಿಯತೆ, ಸಮೀಕ್ಷೆಗಳ ಪ್ರಕಾರ ಶೇ.10ಕ್ಕೆ ಇಳಿದಿದೆ. ರಾಜಪಕ್ಸ ಕುಟುಂಬದವರು ಜನರ ಕೈಗೆ ಸಿಗದೆ ಪಾರಾಗಲು ದಾರಿ ಹುಡುಕುತ್ತಿದ್ದಾರೆ.

ಇದನ್ನೂ ಓದಿ: SRILANKA CRISIS: ಮಾಜಿ ಪ್ರಧಾನಿ ಮಹಿಂದ ರಾಜಪಕ್ಸ ನಿವಾಸಕ್ಕೆ ಬೆಂಕಿ

Exit mobile version