Site icon Vistara News

Explainer: ರಷ್ಯಾಕ್ಕೆ Moskva ನೌಕೆಯ ಮುಳುಗು ತಂದ ಆಘಾತ

ರಷ್ಯಾದ ಪ್ರಮುಖ ಕ್ಷಿಪಣಿ ನೌಕೆ, ಕಪ್ಪು ಸಮುದ್ರದಲ್ಲಿ ರಕ್ಷಣಾ ವ್ಯವಸ್ಥೆ ನೋಡಿಕೊಳ್ಳುತ್ತಿದ್ದ ಹಡಗು ಮೋಸ್ಕ್ವಾ (Moskva) ಉಕ್ರೇನ್‌ ಕ್ಷಿಪಣಿ ದಾಳಿಗೆ ತುತ್ತಾಗಿ ಮುಳುಗಿದೆ. ತನ್ನ ನೆಪ್ಚೂನ್‌ ಕ್ಷಿಪಣಿಗಳ ಮೂಲಕ ಅದನ್ನು ಘಾತಿಸಿರುವುದಾಗಿ ಉಕ್ರೇನ್‌ ಹೇಳಿದೆ. ಮೋಸ್ಕ್ವಾ ಯುದ್ಧನೌಕೆಯಲ್ಲಿ 510 ಸಿಬ್ಬಂದಿ ಇದ್ದರು. ಅವರ ಕತೆ ಏನಾಗಿದೆ ಎಂಬ ಮಾಹಿತಿಯನ್ನು ರಷ್ಯಾ ಮುಚ್ಚಿಟ್ಟಿದೆ.

ಯಾಕೆ ಮಹತ್ವದ್ದು?
ಉಕ್ರೇನ್‌ ಮೇಲೆ ನಡೆದ ಕರಾವಳಿ ಭಾಗದ ದಾಳಿಯ ನೇತೃತ್ವವನ್ನು ಮೋಸ್ಕ್ವಾ ವಹಿಸಿತ್ತು. ಹೀಗಾಗಿ ಅದು ರಷ್ಯಾಗೂ ಮಹತ್ವದ್ದಾಗಿತ್ತು. ಉಕ್ರೇನ್‌ಗೂ ಅದನ್ನು ಉಡಾಯಿಸಿರುವುದು ಪ್ರಮುಖವಾದ ವಿಜಯವಾಗಿದೆ. ಆದರೆ ಉಕ್ರೇನ್‌ನ ಕ್ಷಿಪಣಿಗಳಿಂದ ಹಡಗು ಮುಳುಗಿದೆ ಎಂಬುದನ್ನು ರಷ್ಯಾ ಅಲ್ಲಗಳೆದು, ಸ್ಫೋಟದ ಮೂಲ ತಿಳಿಯದು ಎಂದು ಹೇಳಿದೆ. ಸಿಬ್ಬಂದಿಯನ್ನು ರಕ್ಷಿಸಲಾಗಿದೆ ಎಂದಿದೆ. ಆದರೆ ಸಿಬ್ಬಂದಿ ರಕ್ಷಣೆಯ ಪ್ರಯತ್ನದ ನಡುವೆ ತಾನು ಮತ್ತೆ ಕ್ಷಿಪಣಿ ದಾಳಿ ನಡೆಸಿದ್ದು, ರಕ್ಷಣಾ ಕಾರ್ಯಾಚರಣೆ ಕೈಬಿಟ್ಟು ರಷ್ಯನ್‌ ನೌಕಾಪಡೆ ಪರಾರಿಯಾಗಿರುವುದಾಗಿ ಉಕ್ರೇನ್‌ ಹೇಳಿದೆ.

ಯುದ್ಧ ಆರಂಭವಾದ ಬಳಿಕ ಉಕ್ರೇನ್‌ ಮುಳುಗಿಸಿದ ಎರಡನೇಯ ರಷ್ಯನ್‌ ನೌಕೆ ಇದು. ಈ ನೌಕೆಯ ಜೊತೆಗೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಅವರಿಗೂ ಭಾವನಾತ್ಮಕ ಸಂಬಂಧ ಇದೆ. ಹೀಗಾಗಿ ಪುಟಿನ್‌ ಈ ಸೋಲನ್ನು ವೈಯಕ್ತಿಕವಾಗಿ ತೆಗೆದುಕೊಳ್ಳುವುದು ಖಚಿತ. ರಷ್ಯಾದ ದೇಶೀಯ ಚಾನೆಲ್‌ಗಳಲ್ಲಿ ಮೋಸ್ಕ್ವಾ ಮುಳುಗುವಿಕೆಯಿಂದ ಶೋಕದ ಛಾಯೆ ಹರಡಿದೆ. ಕೆಲವು ಚಾನೆಲ್‌ಗಳಂತೂ ʼಇದು ಮೂರನೇ ಮಹಾಯುದ್ಧದ ಆರಂಭʼ ಎಂದು ಗರ್ಜಿಸುತ್ತಿವೆ. ನ್ಯಾಟೋ ಪಡೆಗಳಿಗೆ ಪಾಠ ಕಲಿಸಲು ಪುಟಿನ್‌ ಮುಂದಾದರೆ ದಾಳಿಯ ಪ್ರಮಾಣವನ್ನು ರಷ್ಯಾ ಹೆಚ್ಚಿಸಬಹುದು.

ಮೂರು ಸುತ್ತಿನ ರಕ್ಷಣೆ
ರಷ್ಯಾದ ನೌಕಾಪಡೆಯಲ್ಲಿದ್ದ ಮೂರನೇ ಅತಿ ದೊಡ್ಡ ನೌಕೆ ಇದು. ಮೂರು ಸುತ್ತಿನ ವಾಯು ರಕ್ಷಣಾ ವ್ಯವಸ್ಥೆಯನ್ನು ಇದು ಹೊಂದಿದ್ದು, ಸರಿಯಾಗಿ ನಿಭಾಯಿಸಿದರೆ ಅಭೇದ್ಯ ನೌಕೆ ಇದಾಗಿತ್ತು. ಮಧ್ಯಮ ದೂರದ ದಾಳಿ ಕ್ಷಿಪಣಿಗಳು, ಅಲ್ಪ ದೂರದ ದಾಳಿ ಕ್ಷಿಪಣಿಗಳ ಜೊತೆಗೆ, ಅಂತಿಮ ಸುತ್ತಿನಲ್ಲಿ ನಿಮಿಷಕ್ಕೆ 5000 ರೌಂಡ್‌ ಅಲ್ಪವ್ಯಾಪ್ತಿಯ ಗುಂಡಿನ ದಾಳಿ ನಡೆಸಬಲ್ಲ ವ್ಯವಸ್ಥೆಯೂ ಇತ್ತು. ಆದರೆ ಯಾವುದೂ ನೌಕೆಯ ರಕ್ಷಣೆಗೆ ನೆರವಾಗಿಲ್ಲ. ಇದು ರಷ್ಯಾದ ನೌಕಾಪಡೆಯ ವೃತ್ತಿಪರತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತಿದೆ.

ಉಕ್ರೇನ್‌ನಲ್ಲೇ ನಿರ್ಮಿಸಿದ್ದು!
ಮೋಸ್ಕ್ವಾ ಯುದ್ಧನೌಕೆಯನ್ನು ಕಟ್ಟಿರುವುದು ಉಕ್ರೇನ್‌ನಲ್ಲೇ ಎಂದು ತಿಳಿದರೆ ನಿಮಗೆ ಅಚ್ಚರಿಯಾದೀತು. ಸೋವಿಯತ್‌ ರಷ್ಯಾದ ಕಾಲದಲ್ಲಿ ಇದನ್ನು ನಿರ್ಮಿಸಲಾಗಿತ್ತು. 1980ರಲ್ಲಿ ಇದು ಸೈನ್ಯಕ್ಕೆ ಸೇರಿತು. ಸಿರಿಯಾ ಯುದ್ಧದ ಸಂದರ್ಭದಲ್ಲಿ ಇದು ಮಹತ್ವದ ಪಾತ್ರ ವಹಿಸಿತ್ತು. ಇದರಲ್ಲಿ ಹನ್ನೆರಡಕ್ಕೂ ಹೆಚ್ಚು ಯುದ್ಧವಿರೋಧಿ ಕ್ಷಿಪಣಿಗಳು, ಸಬ್‌ಮೆರೀನ್‌ ವಿರೋಧಿ ಟಾರ್ಪೆಡೋ ಆಯುಧಗಳು, ಒಂದು ಹೆಲಿಕಾಪ್ಟರ್‌, ಇರುತ್ತಿದ್ದವು.

ನ್ಯಾಟೋ ಪಡೆಗಳ ಬೆಂಬಲ
ಮೋಸ್ಕ್ವಾದ ಉಡಾಯಿಸುವಿಕೆಯ ಹಿನ್ನೆಲೆಯಲ್ಲಿ, ನಿಸ್ಸಂಶಯವಾಗಿ ನ್ಯಾಟೊ ಪಡೆಗಳ ಬೆಂಬಲ ಉಕ್ರೇನ್‌ಗೆ ಇರುವುದನ್ನು ರುಜುವಾತುಪಡಿಸಿದೆ. ಮೋಸ್ಕ್ವಾವನ್ನು ಮುಳುಗಿಸಿದ ನೆಪ್ಚೂನ್‌ ಕ್ಷಿಪಣಿಗಳು ಕಳೆದ ವರ್ಷ ಮಾರ್ಚ್‌ನಲ್ಲಿ ಉಕ್ರೇನ್‌ ಸೇನೆಗೆ ಸರಬರಾಜಾಗಿದ್ದವು. ಇದುವರೆಗೂ 100 ದಶಲಕ್ಷ ಡಾಲರ್‌ ಮೌಲ್ಯದ ವಿಮಾನ ವಿರೋಧಿ, ಟ್ಯಾಂಕ್‌ ವಿರೋಧಿ ಆಯುಧಗಳನ್ನು ಬ್ರಿಟನ್‌ ಉಕ್ರೇನ್‌ಗೆ ಕೊಟ್ಟಿದೆ. ಅಷ್ಟೇ ಅಮೆರಿಕದಿಂದಲೂ ಬಂದಿದೆ.

ಇದನ್ನೂ ಓದಿ: ಅಫ್ಘಾನಿಸ್ತಾನದಲ್ಲಿ ಮತ್ತೆ ಹೆಣ್ಣುಮಕ್ಕಳ ಭೂಗತ ಶಾಲೆಗಳು ಚಾಲೂ: ಹೇಗೆ ನಡೀತಿದೆ?

ಈ ನೌಕೆಯ ನಾಶ, ಕಪ್ಪು ಸಮುದ್ರದಲ್ಲಿ ರಷ್ಯಾದ ಸೇನಾಪಡೆಯ ಇರುವಿಕೆ, ಭದ್ರತಾ ಪ್ರಮಾಣದ ಕೊರತೆಯನ್ನೂ ಸಾರಿದೆ. ಉಕ್ರೇನ್‌ಗಂತೂ ಇದು ಭರ್ಜರಿ ನೈತಿಕ ಹೆಗ್ಗಳಿಕೆ ಹಾಗೂ ಗೆಲುವು. ಮೋಸ್ಕ್ವಾ ಯುದ್ಧನೌಕೆಯನ್ನು ರಷ್ಯನ್‌ ದೌರ್ಜನ್ಯದ ಪ್ರತೀಕವಾಗಿ ಉಕ್ರೇನಿಯನ್ನರು ಪರಿಗಣಿಸುತ್ತಾರೆ. ಹೀಗಾಗಿ ಅವರಲ್ಲಿ ಗೆಲುವಿನ ದೊಡ್ಡ ಭಾವನೆ ಹರಡಿದೆ. ಇದು ಅವರಲ್ಲಿ ಸಮರದ ಹುಮ್ಮಸ್ಸನ್ನು ಇನ್ನಷ್ಟು ಹೆಚ್ಚಿಸಬಹುದು.

Exit mobile version