ಇಸ್ಲಾಮಾಬಾದ್: ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ (Imran Khan) ಆಗಾಗ, ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಹೊಗಳಿ, ತಮ್ಮ ದೇಶದ ನಾಯಕರನ್ನು ಟೀಕಿಸುತ್ತಾರೆ. ಈಗ ಭ್ರಷ್ಟಾಚಾರ ವಿಷಯಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರನ್ನು ಹಿಗ್ಗಾಮುಗ್ಗಾ ಟೀಕಿಸಿ, ಮೋದಿ ಅವರನ್ನು ಮತ್ತೆ ಹೊಗಳಿದ್ದಾರೆ.
ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರನ್ನು ಹೊರತುಪಡಿಸಿದರೆ ಬಹುಶಃ ಜಗತ್ತಿನ ಯಾವುದೇ ನಾಯಕ ಅಥವಾ ರಾಜಕಾರಣಿಯು ವಿದೇಶಗಳಲ್ಲಿ ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಹೊಂದಿಲ್ಲ ಎಂದು ಟೀಕಿಸಿದ್ದಾರೆ. ವಿದೇಶಗಳಲ್ಲಿ ನವಾಜ್ ಎಷ್ಟು ಮೌಲ್ಯದ ಆಸ್ತಿಗಳನ್ನು ಮಾಡಿದ್ದಾರೆಂಬ ಅಂದಾಜು ಯಾರಿಗೂ ಇಲ್ಲ ಎಂದು ಹೇಳಿದ್ದಾರೆ.
ಸಾರ್ವಜನಿಕ ಸಭೆಯಲ್ಲಿ ಮಾತನಾಡುತ್ತಿದ್ದ ಇಮ್ರಾನ್ ಖಾನ್ ಅವರು, ಒಂದು ವೇಳೆ, ದೇಶದಲ್ಲಿ ಯಾವುದೇ ಕಾನೂನುಗಳು ಇಲ್ಲ ಎಂದಾದರೆ ಅಂಥ ದೇಶಕ್ಕೆ ಯಾವುದೇ ಹೂಡಿಕೆ ಬರಲಾರದು. ಕಾನೂನು ಇಲ್ಲದ ದೇಶದಲ್ಲಿ ಭ್ರಷ್ಟಾಚಾರವೇ ತುಂಬಿ ತುಳುಕುತ್ತದೆ. ನೀವು ನನಗೆ ಹೇಳಿ, ಸಾವಿರಾರು ಕೋಟಿ ರೂಪಾಯಿ ಮೌಲ್ಯ ಆಸ್ತಿಯನ್ನು ಯಾವ ದೇಶದ ನಾಯಕ ವಿದೇಶಗಳಲ್ಲಿ ಮಾಡಿರಲು ಸಾಧ್ಯ. ನಮ್ಮ ನೆರೆಯ ದೇಶದಲ್ಲೂ ಇಲ್ಲ. ಪ್ರಧಾನಿ ನರೇಂದ್ರ ಮೋದಿ ಅವರು ವಿದೇಶದಲ್ಲಿ ಎಷ್ಟು ಆಸ್ತಿ ಮಾಡಿದ್ದಾರೆ? ಎಂದು ಪ್ರಶ್ನಿಸಿದರು.
ಇದನ್ನೂ ಓದಿ | Amrit Mahotsav | ತಾಯ್ನಾಡನ್ನು ತೆಗಳಿ ಭಾರತವನ್ನು ಹೊಗಳಿದ ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್!