Site icon Vistara News

ವಿಸ್ತಾರ ಸಂಪಾದಕೀಯ: ಶ್ರೀಲಂಕಾಗೆ ಭಾರತವೇ ಪರಮಾಪ್ತ ಎನ್ನುವುದು ಮತ್ತೊಮ್ಮೆ ಸಾಬೀತು

India proves once again that Sri Lanka is supreme

#image_title

ನಮ್ಮ ಅಕ್ಕಪಕ್ಕದ ಎರಡು ದೇಶಗಳು ತಮ್ಮ ತಪ್ಪು ನಿರ್ಧಾರಗಳು, ದುಡುಕಿನ ನೀತಿಗಳಿಂದಾಗಿ ತಮ್ಮ ಆರ್ಥಿಕ ಪರಿಸ್ಥಿತಿಯನ್ನು ಹದಗೆಡಿಸಿಕೊಂಡು ದಿವಾಳಿಯಾಗಿವೆ (Economic Crisis). ಇದರಲ್ಲಿ ಶ್ರೀಲಂಕಾ ಕಳೆದ ವರ್ಷ ಸಂಪೂರ್ಣ ಕುಸಿದುಹೋಗಿ, ಆಹಾರಕ್ಕಾಗಿ ಅಲ್ಲಿನ ಜನ ಪರದಾಡಿದ್ದರು. ಪೆಟ್ರೋಲ್​, ಡೀಸೆಲ್​ ಲಭ್ಯವಿಲ್ಲದೆ ದೇಶದ ಸಾರಿಗೆ ವ್ಯವಸ್ಥೆ ಕಂಗೆಟ್ಟಿತ್ತು. ಜನ ದೊಂಬಿಯೆದ್ದು, ಅಧ್ಯಕ್ಷರೇ ದೇಶ ಬಿಟ್ಟು ಪರಾರಿಯಾಗಿದ್ದೂ ಆಗಿತ್ತು. ಇದೀಗ ಆ ದೇಶ ನಿಧಾನವಾಗಿ ಚೇತರಿಸಿಕೊಳ್ಳುತ್ತಿದೆ. ತಮ್ಮ ಚೇತರಿಕೆಗೆ ಕಾರಣ ಭಾರತದ ಸಹಾಯಹಸ್ತ ಎಂದು ಆ ದೇಶ ಮನದುಂಬಿ ಶ್ಲಾಘಿಸಿದೆ. ನಾವು ಆರ್ಥಿಕವಾಗಿ ಸುಧಾರಿಸಿಕೊಳ್ಳುವುದರ ಹಿಂದೆ ಭಾರತದ ದೊಡ್ಡ ಪಾತ್ರವಿದೆ. ಉಳಿದ ಎಲ್ಲ ದೇಶಗಳು ಕೊಟ್ಟಿರುವ ನೆರವಿಗಿಂತ ಅಧಿಕ ಭಾರತವೊಂದೇ ಸಹಾಯ ಮಾಡಿದೆ. 31,800 ಕೋಟಿ ರೂಪಾಯಿ ಧನ ಸಹಾಯ ನೀಡುವ ಮೂಲಕ ನಮ್ಮ ಹೋರಾಟದಲ್ಲಿ ಕೈ ಜೋಡಿಸಿದೆ ಎಂದು ಶ್ರೀಲಂಕೆಯ ವಿದೇಶಾಂಗ ಸಚಿವ ಎಮ್​ಯುಎಮ್​ ಅಲಿ ಸಬ್ರೆ ಹೇಳಿಕೊಂಡಿದ್ದು, ಭಾರತ ಶ್ರೇಷ್ಠ ದೇಶ ಎಂದು ಕೊಂಡಾಡಿದ್ದಾರೆ. ಅಲ್ಲಿನ ಪ್ರತಿಪಕ್ಷ ಮುಖಂಡರು, ಐಎಂಎಫ್‌ನ ಮುಖ್ಯಸ್ಥರು ಕೂಡ ಭಾರತದ ನೆರವನ್ನು ಸ್ಮರಿಸಿದ್ದಾರೆ.

ದೊಡ್ಡ ಮೊತ್ತದ ಹಣಸಹಾಯವೊಂದು ಕುಸಿದ ದೇಶವನ್ನು ಚೇತರಿಸಿಕೊಳ್ಳುವಂತೆ ಮಾಡಬಲ್ಲುದು. ಆದರೆ ಅದು ಸಕಾಲಕ್ಕೆ ಸಿಗಬೇಕಾದುದು ಅಗತ್ಯ. ಚೀನಾ ಕೂಡ ದೊಡ್ಡ ದೇಶ; ಶ್ರೀಲಂಕೆಗೆ ಅದು ಬೇಕಾದಷ್ಟು ಹಣವನ್ನು ಸಾಲದ ರೂಪದಲ್ಲಿ ನೀಡಿದೆ. ಆದರೆ ಚೀನಾದ ಉದ್ದೇಶ ಬೇರೆಯದೇ ಆಗಿದ್ದು, ದ್ವೀಪರಾಷ್ಟ್ರದಲ್ಲಿ ತನ್ನದೊಂದು ವಸಾಹತುವನ್ನು ಸ್ಥಾಪಿಸುವುದೇ ಅದರ ಗುರಿ. ಶ್ರೀಲಂಕೆಯನ್ನು ಆಳುತ್ತಿರುವ ರಾಜಪಕ್ಸ ಕುಟುಂಬ ಕಳೆದ ಐದಾರು ವರ್ಷಗಳಲ್ಲಿ ಚೀನಾವನ್ನು ಸಾಕಷ್ಟು ಬಳಲಿಸಿದ್ದಾರೆ. ಅಲ್ಲಿನ ಹಂಬನ್‌ಟೋಟ ಬಂದರನ್ನು ಪೂರ್ತಿಯಾಗಿ ಚೀನಾದ ವಶಕ್ಕೆ ಬಿಟ್ಟುಕೊಟ್ಟಿದ್ದಾರೆ. ಚೀನಾ ಅಲ್ಲಿ ತನ್ನ ನಿಗಾ ನೌಕೆಗಳನ್ನು ಇಡತೊಡಗಿದೆ. ಶ್ರೀಲಂಕಾದ ಸಮುದ್ರ ತೀರದ ಸಮೀಪಕ್ಕೆ ಚೀನಾದ ಯುದ್ಧನೌಕೆಗಳು ಬರಲಾರಂಭಿಸಿವೆ. ಇದು ಭಾರತಕ್ಕೆ ಆತಂತ ತರುವ ವಿಷಯ. ಇದೆಲ್ಲವೂ ಸಾಧ್ಯವಾಗಿರುವುದು ಚೀನಾಗೆ ಶ್ರೀಲಂಕಾ ನೀಡಿರುವ ಪ್ರಾಮುಖ್ಯತೆಯಿಂದಾಗಿ. ಚೀನಾ ನೀಡಿದ ಭಾರಿ ಬಡ್ಡಿದರದ ಸಾಲದ ಹಣಕ್ಕೆ ಬಾಯಿ ಬಿಟ್ಟ ಪರಿಣಾಮವೇ ಆ ದೇಶಕ್ಕೆ ಈ ದುಃಸ್ಥಿತಿ. ಚೀನಾ ಎಂದೂ ಉದಾತ್ತ ಉದ್ದೇಶದಿಂದ ಧನಸಹಾಯ ಮಾಡುವುದಿಲ್ಲ. ಆದರೆ ಶ್ರೀಲಂಕೆಯ ಕಷ್ಟದಲ್ಲಿ ಚೀನಾ ಬರಲಿಲ್ಲ; ಸಂಕಷ್ಟದಲ್ಲಿ ಕೈ ಹಿಡಿಯಲು ಭಾರತವೇ ಬರಬೇಕಾಯಿತು.

ಶ್ರೀಲಂಕಾ ಕುಸಿದಾಗ ಎಲ್ಲಕ್ಕಿಂತ ಮೊದಲು ನೆರವಿಗೆ ಧಾವಿಸಿದ್ದು ಭಾರತ. ಅಂತಾರಾಷ್ಟ್ರೀಯ ಹಣಕಾಸು ನಿಧಿಗಿಂತಲೂ ಮುನ್ನವೇ ಶ್ರೀಲಂಕೆಗೆ ಭಾರತ 31,800 ಕೋಟಿ ರೂ.ಗಳನ್ನು ನೀಡಿತ್ತು. ತನ್ನ ಪಕ್ಕದ ದೇಶದ ಸ್ಥಿತಿಗತಿ ಸುಧಾರಿಸುವಂತೆ ತಾನು ಇನ್ನಷ್ಟು ಹಣಕಾಸು ನೀಡಲು ಸಿದ್ಧ; ಬಡ್ಡಿದರಗಳನ್ನು ಮನ್ನಾ ಮಾಡಲೂ ಸಿದ್ಧ ಎಂದು ಐಎಂಎಫ್‌ಗೆ ಭಾರತ ತಿಳಿಸಿದೆ. ಆಹಾರ, ವೈದ್ಯಕೀಯ ಸಾಮಗ್ರಿಗಳು, ರಸಗೊಬ್ಬರ, ರಫ್ತು ಹಾಗೂ ಆಮದಿನಲ್ಲಿ ಸಡಿಲಿಕೆ, ಇಂಧನಗಳ ಮೂಲಕ ನಾವು ಆ ದೇಶಕ್ಕೆ ನೆರವಾಗಿದ್ದೇವೆ. ಇದ್ಯಾವುದನ್ನೂ ನಾವು ಚೀನಾದಂತೆ ದುರುದ್ದೇಶವಿಟ್ಟುಕೊಂಡು ಮಾಡಿಲ್ಲ. ʼʼನೇಬರ್‌ಹುಡ್‌ ಫಸ್ಟ್‌ʼ (ನೆರೆಹೊರೆಯವರೇ ಪ್ರಥಮ) ಎಂಬುದು ಭಾರತದ ವಿದೇಶಾಂಗ ನೀತಿಯಾಗಿದೆ. ಇದಕ್ಕಾಗಿಯೇ ಮಲೇಷಿಯಾ ಮತ್ತಿತರ ದೇಶಗಳನ್ನೂ ಸೇರಿಸಿಕೊಂಡು ಆಗ್ನೇಯ ಈಷ್ಯಾದ ಹಲವು ಸಣ್ಣಪುಟ್ಟ ದ್ವೀಪದೇಶಗಳು ಭಾರತದ ಮೈತ್ರಿಯ ಮಹತ್ವವನ್ನು ಕಂಡುಕೊಂಡಿವೆ. ಇಂದಿಗೂ ಭಾರತದ ಜತೆಗೇ ನಿಂತಿವೆ.

ಇದನ್ನೂ ಓದಿ : ವಿಸ್ತಾರ ಸಂಪಾದಕೀಯ: ಭ್ರಷ್ಟಾಚಾರದ ಕ್ಯಾನ್ಸರ್‌ಗೆ ದುರಾಸೆಯೇ ಮೂಲ

ಇದು ಮಾನವೀಯ ನೆರವು ಮಾತ್ರವಲ್ಲ; ಇದರಲ್ಲಿ ಭಾರತದ ಮುತ್ಸದ್ದಿತನ ಕೂಡ ಇದೆ. ಇಂದು ಶ್ರೀಲಂಕಾ ಸಂಕಷ್ಟದಲ್ಲಿರಬಹುದು; ಆದರೆ ಎಂದಿಗೂ ಅದು ನಮ್ಮ ನೆರೆದೇಶ ಎಂಬುದನ್ನು ಮರೆಯುವಂತಿಲ್ಲ. ಚೀನಾದ ಮೇಲೆ ಅದು ಹೊಂದಿರುವ ಭರವಸೆ ಸುಳ್ಳು ಎಂಬುದು ಮನದಟ್ಟಾಗಿ, ಭಾರತವೇ ತನ್ನ ಪರಮಾಪ್ತ ಎಂಬುದು ಅದಕ್ಕೆ ಸಾಬೀತಾಗಿದೆ. ಹೀಗೇ ಚೀನಾದ ಹಿಡಿತದಲ್ಲಿರುವ ಇತರ ದೇಶಗಳಿಗೂ ಆಗಬೇಕಾಗಿದೆ. ಭಾರತದ ಇನ್ನೊಂದು ನೆರೆರಾಷ್ಟ್ರ ನೇಪಾಳ ಕೂಡ ಇದುವರೆಗೆ ಭಾರತದ ಜತೆ ತಾನು ಹೊಂದಿದ್ದ ಆತ್ಮೀಯ ಸಂಬಂಧವನ್ನು ಮರೆತು ಚೀನಾದ ಜತೆಗೆ ಲಲ್ಲೆ ಹೊಡೆಯತೊಡಗಿದೆ. ಆದರೆ ಚೀನಾದ ಆಕ್ರಮಣಕಾರಿ ಮಿಲಿಟರಿ ವ್ಯಕ್ತಿತ್ವ ಅದಕ್ಕೂ ಬಿಸಿ ಮುಟ್ಟಿಸಿದೆ. ತನ್ನ ಹುಟ್ಟಿನಿಂದಲೇ ಭಾರತದ ಜತೆ ಸದಾಕಾಲ ದ್ವೇಷದ ವರವನ್ನೇ ಪಡೆದುಕೊಂಡು ಬಂದಿರುವ ಪಾಕಿಸ್ತಾನ ತನ್ನ ದ್ವೇಷವನ್ನು ಮರೆತು ಯಾವಾಗ ಭಾರತದ ಜತೆ ಸೌಹಾರ್ದ ಸಂಬಂಧ ಕಲ್ಪಿಸಿಕೊಳ್ಳುತ್ತದೋ ತಿಳಿಯದು. ಸದ್ಯ ಆ ದೇಶ ದಿವಾಳಿಯಾಗಿದೆ. ಶ್ರೀಲಂಕಾ ಕಲಿತ ಪಾಠದಲ್ಲಿ ಪಾಕಿಸ್ತಾನಕ್ಕೂ ಸಂದೇಶವಿದೆ!

Exit mobile version