ಕೀವ್: ಉಕ್ರೇನ್ ಮೇಲೆ ರಷ್ಯಾ ಆಕ್ರಮಣ ಆರಂಭಿಸಿ ಒಂದು ವರ್ಷ ತುಂಬಲು ಕೆಲವೇ ದಿನ ಬಾಕಿ ಇರುವ ಮೊದಲೇ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರು ಉಕ್ರೇನ್ ರಾಜಧಾನಿ ಕೀವ್‌ಗೆ (Joe Biden Visits Kyiv) ಅಚ್ಚರಿಯ ಭೇಟಿ ನೀಡಿದ್ದಾರೆ. ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಜೆಲೆನ್‌ಸ್ಕಿ ಜತೆ ಹೆಜ್ಜೆಹಾಕಿದ ಬೈಡೆನ್, ಮುಂದಿನ ದಿನಗಳಲ್ಲಿ ಹೆಚ್ಚಿನ ಶಸ್ತ್ರಾಸ್ತ್ರಗಳ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ. ಹಾಗೆಯೇ, ೫೦೦ ದಶಲಕ್ಷ ಡಾಲರ್ ಮೊತ್ತವನ್ನೂ ಬೈಡೆನ್ ಘೋಷಿಸಿದ್ದಾರೆ.
ಉಕ್ರೇನ್ ರಾಜಧಾನಿ ಕೀವ್‌ಗೆ ಜೋ ಬೈಡೆನ್ ಅವರನ್ನು ವೊಲೊಡಿಮಿರ್ ಜೆಲೆನ್‌ಸ್ಕಿ ಸ್ವಾಗತಿಸಿದರು. ಬಳಿಕ ಇಬ್ಬರೂ ಮಾತುಕತೆ ನಡೆಸಿದರು. ಜೋ ಬೈಡೆನ್ ಅವರು ಉಕ್ರೇನ್‌ನಲ್ಲಿ ರಷ್ಯಾ ಆಕ್ರಮಣದ ವಸ್ತುಸ್ಥಿತಿಯನ್ನು ಜೆಲೆನ್‌ಸ್ಕಿ ಅವರಿಂದ ತಿಳಿದುಕೊಂಡರು. ಇತ್ತೀಚೆಗಷ್ಟೇ ಉಕ್ರೇನ್‌ಗೆ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಭೇಟಿ ನೀಡಿ, ನೆರವಿನ ಭರವಸೆ ನೀಡಿದ್ದರು. ಈಗ ಅಮೆರಿಕ ಅಧ್ಯಕ್ಷರೂ ಭೇಟಿ ನೀಡಿರುವುದು ಉಕ್ರೇನ್ ಆತ್ಮವಿಶ್ವಾಸ ಹೆಚ್ಚಾದಂತಾಗಿದೆ.
ಜೆಲೆನ್‌ಸ್ಕಿ ಭೇಟಿ ಬಳಿಕ ಮಾತನಾಡಿದ ಜೋ ಬೈಡೆನ್, “ಮುಂದಿನ ದಿನಗಳಲ್ಲಿ ರಷ್ಯಾ ವಿರುದ್ಧ ಹೋರಾಡಲು ಉಕ್ರೇನ್‌ಗೆ ಹೆಚ್ಚಿನ ಶಸ್ತ್ರಾಸ್ತ್ರಗಳ ನೆರವು ನೀಡಲಾಗುತ್ತದೆ. ಯಾವುದೇ ವಾಯುದಾಳಿಯನ್ನು ನಿಗ್ರಹಿಸುವ ಏರ್ ಸಿಸ್ಟಮ್‌ಗಳು, ರೇಡಾರ್‌ಗಳು ಸೇರಿ ಭಾರಿ ಪ್ರಮಾಣದ ಶಸ್ತ್ರಾಸ್ತ್ರ ನೀಡಲಾಗುವುದು” ಎಂದು ಘೋಷಿಸಿದರು. ಇದಕ್ಕೆ ಸಂತಸ ವ್ಯಕ್ತಪಡಿಸಿದ ಜೆಲೆನ್‌ಸ್ಕಿ, “ಅಮೆರಿಕವು ನಮಗೆ ಬೆಂಬಲ ನೀಡಿರುವುದರಿಂದ ನಮ್ಮ ಆತ್ಮವಿಶ್ವಾಸ ಹೆಚ್ಚಾಗಿದೆ” ಎಂದಿದ್ದಾರೆ. ೨೦೨೨ರ ಫೆಬ್ರವರಿ ೨೪ರಿಂದ ಇದುವರೆಗೆ ರಷ್ಯಾ ಉಕ್ರೇನ್ ಮೇಲೆ ಸತತ ದಾಳಿ ನಡೆಸುತ್ತಿದೆ.
ಉಕ್ರೇನ್‌ಗೆ 500 ದಶಲಕ್ಷ ಡಾಲರ್ ನೆರವು
ದಾಳಿಯಿಂದ ರಷ್ಯಾಗೂ ಹಾನಿ ಎಂದ ಬೈಡೆನ್
ಉಕ್ರೇನ್ ನೆಲದಲ್ಲಿ ನಿಂತು ಜೋ ಬೈಡೆನ್ ಅವರು ರಷ್ಯಾ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. “ಉಕ್ರೇನ್ ತುಂಬ ದುರ್ಬಲ ರಾಷ್ಟ್ರ ಎಂದು ರಷ್ಯಾ ಭಾವಿಸಿತ್ತು. ಆದರೆ, ಕಳೆದ ಒಂದು ವರ್ಷದಿಂದ ಉಕ್ರೇನ್ ಪ್ರಬಲ ಪೈಪೋಟಿ ನೀಡಿದೆ. ಉಕ್ರೇನ್ ನೀಡಿದ ತಿರುಗೇಟಿಗೆ ರಷ್ಯಾದ ಅರ್ಧದಷ್ಟು ಸೈನಿಕರು ಮೃತಪಟ್ಟಿದ್ದಾರೆ. ರಷ್ಯಾದ ವಿತ್ತೀಯ ಸ್ಥಿತಿ ಹದಗೆಟ್ಟಿದೆ” ಎಂದು ಹೇಳಿದರು.
ಇದನ್ನೂ ಓದಿ: Russia: ಉಕ್ರೇನ್-ರಷ್ಯಾ ಯುದ್ಧದ ಬಗ್ಗೆ ವರದಿ ಮಾಡುತ್ತಿದ್ದ ಅತಿ ದೊಡ್ಡ ಮಾಧ್ಯಮ ಸಂಸ್ಥೆಯನ್ನೇ ನಿಷೇಧಿಸಿದ ರಷ್ಯಾ!