ಕಾಠ್ಮಂಡು: ಕ್ಯಾನ್ಸರ್ ಉಂಟು ಮಾಡುವ ಕೀಟ ನಾಶಕವನ್ನು ಒಳಗೊಂಡಿದೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಇದೀಗ ಜನಪ್ರಿಯ ಭಾರತೀಯ ಮಸಾಲೆ ಬ್ರ್ಯಾಂಡ್‌ಗಳಾದ ಎಂಡಿಎಚ್ ಮತ್ತು ಎವರೆಸ್ಟ್ ಗ್ರೂಪ್‌ನ ಉತ್ಪನ್ನ (MDH, Everest Spices)ಗಳನ್ನು ನೇಪಾಳ ನಿಷೇಧಿಸಿದೆ. ಈ ಹಿಂದೆ ಇದೇ ಕಾರಣಕ್ಕೆ ಈ ಉತ್ಪನ್ನಗಳನ್ನು ಸಿಂಗಾಪುರ, ಹಾಂಕಾಂಗ್ ಮುಂತಾದೆಡೆ ಬ್ಯಾನ್ ಮಾಡಲಾಗಿತ್ತು. ಕ್ಯಾನ್ಸರ್‌ಗೆ ಕಾರಣವಾಗಬಹುದಾದ ಎಥಿಲೀನ್ ಆಕ್ಸೈಡ್ (Ethylene Oxide) ಅಂಶ ಇದೆ ಎನ್ನುವ ದೂರು ಕೇಳಿ ಬಂದ ಕಾರಣಕ್ಕೆ ಈ ಉತ್ಪನ್ನಗಳ ಆಮದು, ಮಾರಾಟ ಮತ್ತು ಬಳಕೆಯನ್ನು ನೇಪಾಳದಲ್ಲಿ ನಿಷೇಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಈ ಎರಡು ನಿರ್ದಿಷ್ಟ ಬ್ರ್ಯಾಂಡ್‌ಗಳ ಮಸಾಲೆಗಳಲ್ಲಿನ ರಾಸಾಯನಿಕಗಳ ಬಗ್ಗೆ ಪರೀಕ್ಷೆಗಳು ನಡೆಯುತ್ತಿವೆ. ಅಂತಿಮ ವರದಿ ಬರುವವರೆಗೆ ನಿಷೇಧವು ಜಾರಿಯಲ್ಲಿರುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ʼʼಈ ಮಸಲಾ ಪದಾರ್ಥಗಳಲ್ಲಿ ಹಾನಿಕಾರಕ ರಾಸಾಯನಿಕಗಳಿವೆ ಬಗ್ಗೆ ಸುದ್ದಿ ಬಂದ ನಂತರ ಒಂದು ವಾರದ ಹಿಂದೆ ಆಮದನ್ನು ನಿಷೇಧಿಸಲಾಗಿದೆ. ಜತೆಗೆ ನಾವು ಮಾರುಕಟ್ಟೆಯಲ್ಲಿ ಅದರ ಮಾರಾಟವನ್ನು ನಿಲ್ಲಿಸಿದ್ದೇವೆ” ಎಂದು ನೇಪಾಳದ ಆಹಾರ ತಂತ್ರಜ್ಞಾನ ಮತ್ತು ಗುಣಮಟ್ಟ ನಿಯಂತ್ರಣ ಇಲಾಖೆಯ ವಕ್ತಾರ ಮೋಹನ್ ಕೃಷ್ಣ ಮಹರ್ಜನ್ ತಿಳಿಸಿದ್ದಾರೆ.
“ಹಾಂಗ್‌ಕಾಂಗ್ ಮತ್ತು ಸಿಂಗಾಪುರ್ ಈಗಾಗಲೇ ಈ ಉತ್ಪನ್ನಗಳಿಗೆ ನಿಷೇಧ ಹೇರಿವೆ. ಅಮೆರಿಕ ಹಾಗೂ ಆಸ್ಟ್ರೇಲಿಯಾ ಕೂಡ ಈ ಬಗ್ಗೆ ಪರಿಶೀಲನೆ ನಡೆಸುತ್ತಿದೆ. ಹೀಗಾಗಿ ನಾವು ಕೂಡ ಪರೀಕ್ಷೆ ನಡೆಸಲು ಮುಂದಾಗಿದ್ದೇವೆʼʼ ಎಂದು ಅವರು ವಿವರಿಸಿದ್ದಾರೆ. ಈ ಮಧ್ಯೆ ರಫ್ತಾಗುವ ಭಾರತೀಯ ಮಸಾಲೆಗಳ ಸುರಕ್ಷತೆ ಮತ್ತು ಗುಣಮಟ್ಟವನ್ನು ಖಚಿತಪಡಿಸಿಕೊಳ್ಳಲು ಭಾರತೀಯ ಸ್ಪೈಸ್ ಮಂಡಳಿ ಕ್ರಮ ಕೈಗೊಂಡಿದೆ. ಮಂಡಳಿ ಟೆಕ್ನೋ-ಸೈಂಟಿಫಿಕ್ ಸಮಿತಿಯ ಶಿಫಾರಸುಗಳನ್ನು ಜಾರಿಗೆ ತಂದಿದೆ. ಜತೆಗೆ ಪರೀಕ್ಷೆಗಾಗಿ ಮಾದರಿಗಳನ್ನು ಸಂಗ್ರಹಿಸಿದೆ.
ಅಖಿಲ ಭಾರತ ಸಾಂಬಾರ ಪದಾರ್ಥಗಳ ರಫ್ತುದಾರರ ವೇದಿಕೆ ಮತ್ತು ಭಾರತೀಯ ಮಸಾಲೆ ಮತ್ತು ಆಹಾರ ಪದಾರ್ಥ ರಫ್ತುದಾರರ ಸಂಘದಂತಹ 130ಕ್ಕೂ ಹೆಚ್ಚು ಸಂಘಗಳೊಂದಿಗೆ ಭಾರತೀಯ ಸ್ಪೈಸ್ ಮಂಡಳಿ ಸಮಾಲೋಚನೆಯನ್ನೂ ನಡೆಸಿದೆ. ಮಂಡಳಿಯು ಎಲ್ಲ ರಫ್ತುದಾರರಿಗೆ ಎಥಿಲೀನ್ ಆಕ್ಸೈಡ್ ಬಳಕೆ ಬಗ್ಗೆ ಎಚ್ಚರಿಕೆ ನೀಡಿದೆ.
ಕೆಲವು ದಿನಗಳ ಹಿಂದೆ ಎಂಡಿಎಚ್, ಎವರೆಸ್ಟ್ ಮಸಾಲೆ ಸೇರಿದಂತೆ ಭಾರತದ ಒಟ್ಟು 527 ಉತ್ಪನ್ನಗಳಲ್ಲಿ ಕ್ಯಾನ್ಸರ್‌ಕಾರಕ ಎಥಿಲಿನ್ ಆಕ್ಸೈಡ್ ಹೆಚ್ಚಿನ ಪ್ರಮಾಣದಲ್ಲಿದೆ ಎಂಬುದನ್ನು ಯುರೋಪಿಯನ್ ಯೂನಿಯನ್ ಆಹಾರ ಸುರಕ್ಷತಾ ಅಧಿಕಾರಿಗಳು ಬಹಿರಂಗಪಡಿಸಿದ್ದರು. ಹೀಗಾಗಿ 572 ಉತ್ಪನ್ನಗಳ ಪೈಕಿ 87 ಉತ್ಪನ್ನಗಳ ರಫ್ತನ್ನು ಈಗಾಗಲೇ ಗಡಿಯಲ್ಲಿ ರದ್ದುಗೊಳಿಸಲಾಗಿದೆ.
ಇನ್ನು ಅಪಾಯಕಾರಿ ರಾಸಾಯನಿಕಗಳು ಎಳ್ಳು ಬೀಜಗಳು, ಗಿಡಮೂಲಿಕೆಗಳು, ಮಸಾಲೆಗಳು ಮತ್ತು ಇತರ ಆಹಾರ ಪದಾರ್ಥಗಳಲ್ಲೂ ಕಂಡು ಬಂದಿವೆ. ಇನ್ನು ಎಥಿಲೀನ್ ಆಕ್ಸೈಡ್ ಅನ್ನು ಮೂಲತಃ ವೈದ್ಯಕೀಯ ಸಾಧನಗಳನ್ನು ಸ್ವಚ್ಛಗೊಳಿಸ ಬಳಸುವ ಕ್ರಿಮಿನಾಶಕವಾಗಿ ಬಳಸಲಾಗುತ್ತದೆ. ಈ ರಾಸಾಯನಿಕ ದೇಹಕ್ಕೆ ಸೇರಿದರೆ ಲಿಂಫೋಮಾ ಮತ್ತು ಲ್ಯುಕೇಮಿಯಾ ಸೇರಿದಂತೆ ವಿವಿಧ ಕ್ಯಾನ್ಸರ್‌ಗಳು ಬರು ಸಾಧ್ಯತೆ ಅತಿ ಹೆಚ್ಚಿದೆ.
ಇದನ್ನೂ ಓದಿ: MDH, Everest Spices: ಎವರೆಸ್ಟ್, ಎಂಡಿಎಚ್ ಮಸಾಲೆ ಪೌಡರ್‌ಗಳ ಗುಣಮಟ್ಟ ತಪಾಸಣೆಗೆ ಸೂಚನೆ