ನವದೆಹಲಿ: ದೆಹಲಿ-ಎನ್‌ಸಿಆರ್ ಪ್ರದೇಶದಲ್ಲಿ ಕಾರ್ಯನಿರ್ವಹಿಸುವ ಸ್ಕ್ರ್ಯಾಪ್ ಮೆಟಲ್ ಮಾಫಿಯಾ ತಂಡದ ಮುಖ್ಯಸ್ಥ ಮತ್ತು ಗ್ಯಾಂಗ್‌ಸ್ಟರ್ (Noida Scrap Mafia) ರವಿ ಕಾನಾ (Ravi Kana) ಹಾಗೂ ಆತನ ಗೆಳತಿ ಕಾಜಲ್ ಝಾ (Kajal Jha) ಅವರನ್ನು ಥೈಲ್ಯಾಂಡ್‌ನಲ್ಲಿ ಬಂಧಿಸಲಾಗಿದೆ. ನೋಯ್ಡಾ ಪೊಲೀಸರು ಥೈಲ್ಯಾಂಡ್ ಪೊಲೀಸರೊಂದಿಗೆ ನಿರಂತರ ಸಂಪರ್ಕದಲ್ಲಿದ್ದರು. ಕಾನಾಗೆ ಸಂಬಂಧಿಸಿದ ಎಲ್ಲ ವಿವರಗಳನ್ನು ಅವರಿಗೆ ನೀಡಿದ್ದರು. ಈ ಕಾರಣದಿಂದ ಇಬ್ಬರು ಸಿಕ್ಕಿಬಿದ್ದಿದ್ದಾರೆ. ಜನವರಿಯಲ್ಲಿ ಕಾನಾ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಕೂಡ ಜಾರಿ ಮಾಡಲಾಗಿತ್ತು.
ಜನವರಿ 2ರಂದು ಗ್ರೇಟರ್ ನೋಯ್ಡಾದಲ್ಲಿ ಪೊಲೀಸರು ರವಿ ಕಾನಾ ವಿರುದ್ಧ ಪ್ರಕರಣ ದಾಖಲಿಸಿದ್ದರು. ನಂತರ ಆತನ ವಿರುದ್ಧ ಕಠಿಣ ಉತ್ತರ ಪ್ರದೇಶ ಗ್ಯಾಂಗ್‌ಸ್ಟರ್ ಮತ್ತು ಸಾಮಾಜಿಕ ವಿರೋಧಿ ಚಟುವಟಿಕೆಗಳ ತಡೆಗಟ್ಟುವಿಕೆ (Uttar Pradesh Gangsters and Anti-Social Activities (Prevention) Act) ಕಾಯ್ದೆಯಡಿ ದೂರು ದಾಖಲಿಸಲಾಗಿತ್ತು.
ರವಿ ಕಾನಾ ಆಲಿಯಾಸ್ ರವೀಂದ್ರ ನಗರ್ 16 ಸದಸ್ಯರ ಗ್ಯಾಂಗ್ ಹೊಂದ್ದಾನೆ. ಈ ಗ್ಯಾಂಗ್ ರೀಬಾರ್ ಮತ್ತು ಸ್ಕ್ರ್ಯಾಪ್ ವಸ್ತುಗಳ ಅಕ್ರಮ ಸಂಗ್ರಹಣೆ ಮತ್ತು ಮಾರಾಟದಲ್ಲಿ ತೊಡಗಿದೆ. ಸ್ಕ್ರ್ಯಾಪ್ ಡೀಲರ್ ಆಗಿದ್ದ ಕಾನಾ ದೆಹಲಿ-ಎನ್‌ಸಿಆರ್ ಪ್ರದೇಶದಲ್ಲಿ ಸ್ಕ್ರ್ಯಾಪ್ ವಸ್ತುಗಳನ್ನು ಅಕ್ರಮವಾಗಿ ಸ್ವಾಧೀನಪಡಿಸಿಕೊಳ್ಳಲು ಮತ್ತು ಮಾರಾಟ ಮಾಡಲು ಪ್ರಾರಂಭಿಸಿದ ಬಳಿಕ ಕೋಟ್ಯಧಿಪತಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. 2023ರ ಡಿಸೆಂಬರ್ 28ರಂದು ಕಾನಾ ವಿರುದ್ಧ ಸಾಮೂಹಿಕ ಅತ್ಯಾಚಾರ ಪ್ರಕರಣವೂ ದಾಖಲಾಗಿತ್ತು.
ಈ ಮೊದಲೇ ರವಿ ಮತ್ತು ಆತನ ಗುಂಪಿನ ವಿರುದ್ಧ ಸುಮಾರು 11 ಕೇಸ್‌ಗಳು ದಾಖಲಾಗಿದ್ದವು. ಇವರ ವಿರುದ್ಧ ಅಪಹರಣ, ದರೋಡೆ ಸೇರಿದಂತೆ ವಿವಿಧ ಪ್ರಕರಣಗಳಿವೆ ಎಂದು ಗ್ರೇಟರ್ ನೋಯ್ಡಾದ ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಗ್ರೇಟರ್ ನೋಯ್ಡಾ ಮತ್ತು ನೋಯ್ಡಾದಾದ್ಯಂತ ಗ್ಯಾಂಗ್ ಬಳಸುತ್ತಿದ್ದ ಹಲವು ಸ್ಕ್ರ್ಯಾಪ್ ಗೋದಾಮುಗಳ ಮೇಲೆ ಈಗಾಗಲೇ ದಾಳಿ ನಡೆಸಿ ಬೀಗಮುದ್ರೆ ಜಡಿಯಲಾಗಿದೆ.
ಕಾನಾ ಮತ್ತು ಆತನ ಸಹಚರರ 120 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಿರುವುದಾಗಿ ನೋಯ್ಡಾ ಪೊಲೀಸರು ಹೇಳಿದ್ದಾರೆ. ಕಾನಾ ತನ್ನ ಗೆಳತಿ ಕಾಜಲ್ ಝಾಗೆ ದಕ್ಷಿಣ ದೆಹಲಿಯ ಐಷರಾಮಿ ಏರಿಯಾ ನ್ಯೂ ಫ್ರೆಂಡ್ಸ್ ಕಾಲನಿಯಲ್ಲಿ ಮೂರು ಅಂತಸ್ತಿನ ಬಂಗಲೆಯನ್ನು ಉಡುಗೊರೆಯಾಗಿ ಕೊಡಿಸಿದ್ದ. ಅದರ ಬೆಲೆ ಬರೋಬ್ಬರಿ 100 ಕೋಟಿ ರೂ. ಜನವರಿಯಲ್ಲಿ ಪೊಲೀಸರು ಆ ಐಷಾರಾಮಿ ಬಂಗಲೆಯ ಮೇಲೆ ದಾಳಿ ಬೀಗ ಜಡಿದು ಸೀಲ್ ಹಾಕಿದ್ದರು.
ಇದನ್ನೂ ಓದಿ: Kajal Jha: ಕಾಜಲ್‌ಗೆ ಸೇರಿದ 100 ಕೋಟಿ ರೂ. ಮೌಲ್ಯದ ಬಂಗಲೆ ಮೇಲೆ ಪೊಲೀಸರ ದಾಳಿ
ಕಾಜಲ್ ಝಾ ಕೆಲಸ ಹುಡುಕಿಕೊಂಡು ಬಂದು ರವಿ ಕಾನಾ ಗುಂಪು ಸೇರಿದ್ದಳು. ಕೆಲವೇ ದಿನಗಳಲ್ಲಿ ಆ ಗ್ಯಾಂಗ್‌ನ ಮುಖ್ಯ ಅಂಗವಾಗಿ ಬದಲಾದ ರೀತಿಯೇ ರೋಚಕ. ರವಿಗೆ ಸೇರಿದ ಎಲ್ಲ ಬೇನಾಮಿ ಆಸ್ತಿಯ ಲೆಕ್ಕಪತ್ರಗಳನ್ನು ಕಾಜಲ್ ಝಾ ನೋಡಿಕೊಳ್ಳುತ್ತಿದ್ದಳು. ರವಿಯ ಗ್ಯಾಂಗ್ ಜತೆಗೆ ಮನಸ್ಸಿನೊಳಗೂ ಜಾಗ ಪಡೆದಿದ್ದ ಕಾಜಲ್ ಅಪಾರ ಪ್ರಮಾಣದ ಆಸ್ತಿಯ ಒಡತಿಯೂ ಆಗಿದ್ದಳು.