ಮಾಸ್ಕೋ: ಬ್ರೆಜಿಲ್(Brazil), ರಷ್ಯಾ(Russia), ಭಾರತ(India), ಚೀನಾ(China) ಮತ್ತು ದಕ್ಷಿಣ ಆಫ್ರಿಕಾ (South Africa) ಸದಸ್ಯರಾಗಿರುವ ಬ್ರಿಕ್ಸ್ ಕೂಟಕ್ಕೆ (BRICS Countries) ಪಾಕಿಸ್ತಾನ ಕೂಡ ಸೇರ್ಪಡೆಯಾಗುವ ಸಾಧ್ಯತೆ ಇದೆ. ಹೌದು, 2024ರಲ್ಲಿ ರಷ್ಯಾ ಬ್ರಿಕ್ಸ್‌ನ ಅಧ್ಯಕ್ಷರಾಗಿರುವುದರಿಂದ ರಷ್ಯಾದ ಸಹಕಾರದೊಂದಿಗೆ ಪಾಕಿಸ್ತಾನವು (Pakistan) ಅಂತರ್ ಸರ್ಕಾರಿ ಜಿಯೋಪೊಲಿಟಿಕಲ್ ಕೂಟ ಬ್ರಿಕ್ಸ್‌ಗೆ ಸೇರಬಹುದು ಎಂದು ಪಾಕಿಸ್ತಾನದ ರಕ್ಷಣಾ ಸಂಸದೀಯ ಸ್ಥಾಯಿ ಸಮಿತಿಯ ಅಧ್ಯಕ್ಷ ಸೆನೆಟರ್ ಮುಶಾಹಿದ್ ಹುಸೇನ್ ಹೇಳಿದ್ದಾರೆ.
ವಿಶೇಷವಾಗಿ ಇಂಧನ, ಸಂಪರ್ಕ, ಶಿಕ್ಷಣ, ಅಫ್ಘಾನಿಸ್ತಾನ ಸೇರಿದಂತೆ ಪ್ರಾದೇಶಿಕ ಭದ್ರತೆ ಮತ್ತು ಎಸ್‌ಸಿಒ ಮತ್ತು ವಿಶ್ವ ಸಂಸ್ಥೆಯ ಸೇರಿದಂತೆ ಬಹುಪಕ್ಷೀಯ ವೇದಿಕೆಗಳಲ್ಲಿ ಸಹಕಾರ ಕ್ಷೇತ್ರದಲ್ಲಿ ಪಾಕಿಸ್ತಾನ ಮತ್ತು ರಷ್ಯಾ ನಡುವೆ ಬೆಳೆಯುತ್ತಿರುವ ಸಂಬಂಧಗಳ ಬಗ್ಗೆ ಸೆನೆಟರ್ ಉಲ್ಲೇಖಿಸಿದರು.
ಪಾಕಿಸ್ತಾನ ಬ್ರಿಕ್ಸ್‌ಗೆ ಸೇರ್ಪಡೆಗೊಳ್ಳುವ ಕುರಿತು ಮಾತನಾಡಿದ ರಕ್ಷಣಾ ಸಮಿತಿಯ ಅಧ್ಯಕ್ಷ ಮುಶಾಹಿದ್, ಭವಿಷ್ಯದಲ್ಲಿ ನಾಲ್ಕು ಮುಸ್ಲಿಂ ರಾಷ್ಟ್ರಗಳಾದ ಪಾಕಿಸ್ತಾನ, ತುರ್ಕಿಯೆ, ಇರಾನ್ ಮತ್ತು ಸೌದಿ ಅರೇಬಿಯಾ ಪ್ರಾದೇಶಿಕ ವ್ಯವಹಾರಗಳಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತವೆ ಎಂದು ಹೇಳಿದರು. ಅವರು ಇಸ್ಲಾಮೋಫೋಬಿಯಾದ ಬಗ್ಗೆ ಅಧ್ಯಕ್ಷ ಪುಟಿನ್ ಅವರ ನಿಲುವನ್ನು ಶ್ಲಾಘಿಸಿದರು ಮತ್ತು ಪಾಕಿಸ್ತಾನದೆಡೆಗೆ ರಷ್ಯಾ ಹೊಂದಿರುವ ಅಭಿಮಾನವನ್ನು ಕೊಂಡಾಡಿದರು.
ಆಡಳಿತಾರೂಢ ಯುನೈಟೆಡ್ ರಷ್ಯಾ ಪಾರ್ಟಿ ಆಹ್ವಾನದ ಮೇರೆಗೆ ಸೆನೆಟರ್ ಹುಸೇನ್ ರಷ್ಯಾಕ್ಕೆ ಭೇಟಿ ನೀಡಿದ್ದು, ಈ ಸಂದರ್ಭದಲ್ಲಿ ಅವರು ರಷ್ಯಾದ ಭದ್ರತಾ ಮಂಡಳಿಯ ಉಪಾಧ್ಯಕ್ಷ ಮತ್ತು ಮಾಜಿ ಅಧ್ಯಕ್ಷ ಡಿಮಿಟ್ರಿ ಮೆಡ್ವೆಡೆವ್ ಮತ್ತು ವಿದೇಶಾಂಗ ಸಚಿವ ಸೆರ್ಗೆ ಲಾವ್ರೊವ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.
ಇಂಟರ್ನ್ಯಾಷನಲ್ ಫೋರಮ್ ಫಾರ್ ಫ್ರೀಡಂ ಆಫ್ ನೇಷನ್ಸ್‌ನ ಅಧಿವೇಶನದಲ್ಲಿ, ಸೆನೆಟರ್ ಹುಸೇನ್ ಮತ್ತು ಮಾಜಿ ಅಧ್ಯಕ್ಷ ಮೆಡ್ವೆಡೆವ್ ಅವರು ಪಾಕಿಸ್ತಾನ-ರಷ್ಯಾ ಸಂಬಂಧಗಳು, ಅಫ್ಘಾನಿಸ್ತಾನದ ಪರಿಸ್ಥಿತಿ, ಗಾಜಾದಲ್ಲಿನ ಯುದ್ಧ ಮತ್ತು ಇಸ್ಲಾಮಾಬಾದ್-ಮಾಸ್ಕೋ ಸಹಯೋಗದ ವಿವಿಧ ಕ್ಷೇತ್ರಗಳಲ್ಲಿ ಚರ್ಚಿಸಿದರು.
ಈ ಸುದ್ದಿಯನ್ನೂ ಓದಿ: BRICS 2024: ರಷ್ಯಾಗೆ ಬ್ರಿಕ್ಸ್ ಅಧ್ಯಕ್ಷ ಜವಾಬ್ದಾರಿ; ಪುಟಿನ್‌ಗೆ ಮೋದಿ ಶುಭಾಶಯ