ಪಾಕಿಸ್ತಾನ: ಭಾರತದಂಥ ನೆರೆಯ ದೇಶಗಳಿಗೆ ಕಿರುಕುಳ ಕೊಡುವುದರಲ್ಲೇ ಸುಖ ಕಾಣುತ್ತಿರುವ ಪಾಕಿಸ್ತಾನ ಈಗ ದಿವಾಳಿಯಾಗಿದೆ. ಅಲ್ಲಿಯ ಜನ ಬಡತನದಿಂದ ಬಸವಳಿದಿದ್ದಾರೆ. ಭಾರತದಲ್ಲಿ ಇರುವಂತೆ ಉದ್ಯಮಕ್ಕೆ ಯಾವ ಬೆಂಬಲವೂ ಅಲ್ಲಿಲ್ಲ. ಸುಮಾರು 25 ಕೋಟಿ ಜನಸಂಖ್ಯೆಯನ್ನು (Population) ಹೊಂದಿರುವ ಪಾಕಿಸ್ತಾನದಲ್ಲಿರುವ ಇರುವುದು ಒಬ್ಬನೇ ಒಬ್ಬ ಬಿಲಿಯನೇರ್ (Pakistan’s first billionaire). ಆತ ಈಗ ವಿಶ್ವದ ಗಮನ ಸೆಳೆದಿದ್ದಾನೆ.
ಸ್ವಾತಂತ್ರ್ಯ ಪಡೆದ ಬಳಿಕವೂ ಪಾಕಿಸ್ತಾನದ ಪರಿಸ್ಥಿತಿ ಹೆಚ್ಚು ಸುಧಾರಣೆಯಾಗಿಲ್ಲ. ಇಲ್ಲಿನ ಭಯೋತ್ಪಾದನಾ ಚಟುವಟಿಕೆಗಳು ದೇಶದ ಪ್ರಗತಿಗೆ ಅಡ್ಡಿಯಾಗುತ್ತಿದೆ. ಇದರೊಂದಿಗೆ ಇತ್ತೀಚೆಗಷ್ಟೇ ಭಾರೀ ಆರ್ಥಿಕ ಕುಸಿತ ಕಂಡು ಚೇತರಿಸಿಕೊಳ್ಳುತ್ತಿರುವ ಪಾಕಿಸ್ತಾನದಲ್ಲಿ ರಾಜಕೀಯ ಅಶಾಂತಿ ಸದಾ ಕಾಡುತ್ತಿರುತ್ತದೆ.
ವಿಶ್ವವನ್ನೇ ಬಾಧಿಸಿದ ಕೋವಿಡ್ -19 ಸಾಂಕ್ರಾಮಿಕದ ಬಳಿಕ ರಾಷ್ಟ್ರದಲ್ಲಿ ಮತ್ತಷ್ಟು ಆರ್ಥಿಕತೆ ಮತ್ತು ಜನಸಂಖ್ಯೆ ಎರಡರಲ್ಲೂ ಗಮನಾರ್ಹ ಕುಸಿತವನ್ನು ಕಂಡಿದೆ. ಇಷ್ಟೆಲ್ಲ ಸಮಸ್ಯೆಗಳ ನಡುವೆಯೂ ರಾಷ್ಟ್ರದಲ್ಲಿ ಒಬ್ಬ ವ್ಯಕ್ತಿ ಜೀವನದಲ್ಲಿ ಯಶಸ್ಸು ಸಾಧಿಸಿದ್ದಾನೆ. ಬಿಲಿಯನೇರ್ ಆಗಿ ವಿಶ್ವದ ಗಮನ ಸೆಳೆದಿದ್ದಾನೆ.
ಇದನ್ನೂ ಓದಿ: Solar Eclipse 2024: ಇಂದು ವರ್ಷದ ಮೊದಲ ಸೂರ್ಯಗ್ರಹಣ; ಎಲ್ಲಿ, ಯಾವಾಗ ಗೋಚರ?
ಪಾಕಿಸ್ತಾನದ ಮೊದಲ ಬಿಲಿಯನೇರ್
ಉದ್ಯಮಿ ಮಿಯಾನ್ ಮೊಹಮ್ಮದ್ ಮನ್ಶಾ (Mian Mohammad Mansha) ಪಾಕಿಸ್ತಾನದ ಮೊದಲ ಬಿಲಿಯನೇರ್. ಪಾಕಿಸ್ತಾನದ ಶ್ರೀಮಂತ ವ್ಯಕ್ತಿಗಳಲ್ಲಿ ಇವರೂ ಒಬ್ಬರು.
1941ರಲ್ಲಿ ಪಾಕಿಸ್ತಾನದ ಪಂಜಾಬ್‌ನ ಚಿನಿಯೋಟ್‌ನಲ್ಲಿ ಜನಿಸಿ ಮಿಯಾನ್ ಮೊಹಮ್ಮದ್ ಮನ್ಶಾ ಅವರ ಕುಟುಂಬವು ಜವಳಿ ಉದ್ಯಮದಲ್ಲಿ ಬೆಳೆದು ಬಂದಿದೆ. ಮೂಲತಃ ಚಿನಿಯೋಟ್ ಪ್ರದೇಶದಿಂದ ಬಂದ ಇವರು ನಿಶಾತ್ ಗ್ರೂಪ್ ಬ್ಯಾಂಕಿಂಗ್, ರಿಯಲ್ ಎಸ್ಟೇಟ್, ಜವಳಿ, ವಿದ್ಯುತ್ ಉತ್ಪಾದನೆ ಮತ್ತು ಸಿಮೆಂಟ್ ತಯಾರಿಕೆ ಸೇರಿದಂತೆ ವಿವಿಧ ಉದ್ಯಮಕ್ಕೆ ಕೈ ಹಾಕಿ ಯಶಸ್ವಿಯಾಗಿದ್ದಾರೆ.
ಆಸ್ತಿ ಎಷ್ಟು?
ಮನ್ಶಾ ಗ್ರೂಪ್‌ನ ಸಂಸ್ಥಾಪಕ ಮತ್ತು ಸಿಇಒ ಆಗಿರುವ ಮನ್ಷಾ ಅವರ ಪ್ರಸ್ತುತ ನಿವ್ವಳ ಮೌಲ್ಯವು ಸುಮಾರು 5 ಬಿಲಿಯನ್ ಡಾಲರ್ ಆಗಿದೆ.
ಲಂಡನ್‌ನಿಂದ ಪದವಿ ಪಡೆದ ಮನ್ಶಾ ಅವರ ತಂದೆ ಹತ್ತಿ ಗಿರಣಿ ಮಾಲೀಕರಾಗಿದ್ದರು. ಅವರು ಅದನ್ನು ಬಿಲಿಯನ್ ಡಾಲರ್ ವ್ಯವಹಾರವಾಗಿ ಬೆಳೆಸಿದ್ದಾರೆ. ಜವಳಿ ಕಂಪನಿಯಾದ ನಿಶಾತ್ ಟೆಕ್ಸ್ ಟೈಲ್ಸ್ ಮಿಲ್ಸ್ ಮಾಲೀಕರಾಗಿರುವ ಮನ್ಶಾ ಜೊತೆಗೆ ಸಿಮೆಂಟ್, ವಿದ್ಯುತ್, ಬ್ಯಾಂಕಿಂಗ್ ಮತ್ತು ವಿಮೆಯಲ್ಲೂ ಆಸಕ್ತಿ ಹೊಂದಿದ್ದಾರೆ.
2010ರಲ್ಲಿ ಫೋರ್ಬ್ಸ್ ಪಟ್ಟಿಗೆ
2005ರಲ್ಲಿ ಅತ್ಯಂತ ಶ್ರೀಮಂತ ಪಾಕಿಸ್ತಾನಿಯಾದ ಅವರು 2010ರ ಫೋರ್ಬ್ಸ್ ಪಟ್ಟಿಯಲ್ಲಿ ಸೇರಿಕೊಂಡರು. ವಿಶ್ವದ 937ನೇ ಶ್ರೀಮಂತ ವ್ಯಕ್ತಿ ಎಂದು ಗುರುತಿಸಲ್ಪಟ್ಟರು.
2008ರಲ್ಲಿ ಎಂಸಿಬಿ ಬ್ಯಾಂಕ್ ಮತ್ತು ಮಲೇಷಿಯಾದ ಮೇಬ್ಯಾಂಕ್ ಅನ್ನು ಮನ್ಶಾ ಸ್ಥಾಪಿಸಿದರು. ಅವರನ್ನು ಪಾಕಿಸ್ತಾನದ ಅಂಬಾನಿ ಎಂದು ಕರೆಯಲಾಗುತ್ತದೆ. ಯಾಕೆಂದರೆ ಅವರು ಶ್ರೀಮಂತ ಪಾಕಿಸ್ತಾನಿ. ಅದೇನೇ ಇದ್ದರೂ, ಅಂಬಾನಿ 80 ಶತಕೋಟಿ ಡಾಲರ್‌ಗಿಂತಲೂ ಹೆಚ್ಚು ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ.
ಹೆಚ್ಚು ತೆರಿಗೆ ಪಾವತಿದಾರರು
ಪಾಕಿಸ್ತಾನದಲ್ಲಿ ಮನ್ಶಾ ಮತ್ತು ಅವರ ಕುಟುಂಬ ಸದಸ್ಯರು ಅತೀ ಹೆಚ್ಚು ತೆರಿಗೆ ಪಾವತಿಸುತ್ತಿದ್ದಾರೆ. ಇವರು ಲಂಡನ್ ಎಸ್ಟೇಟ್ ಸೇರಿದಂತೆ ಹಲವಾರು ಬೆಲೆಬಾಳುವ ಆಸ್ತಿಗಳನ್ನು ಹೊರದೇಶಗಳಲ್ಲೂ ಹೊಂದಿದ್ದಾರೆ.
ಮೂಲತಃ ಕೋಲ್ಕೊತಾದವರು
ಮನ್ಶಾ ಅವರ ಪೂರ್ವಜರು ಸ್ವತಂತ್ರ ಭಾರತದಲ್ಲಿ ಕೋಲ್ಕೊತಾದವರಾಗಿದ್ದರು. ಭಾರತ ವಿಭಜನೆಯ ಬಳಿಕ ಅವರ ಕುಟುಂಬವು ಪಾಕಿಸ್ತಾನದ ಪಂಜಾಬ್‌ಗೆ ಸ್ಥಳಾಂತರಗೊಂಡಿತು. ಅಲ್ಲಿ ಅವರು ಗಿರಣಿಯನ್ನು ಸ್ಥಾಪಿಸಿದರು.
ಮಿಯಾನ್ ಮೊಹಮ್ಮದ್ ಮನ್ಶಾ ಅವರು ಹಲವು ದತ್ತಿ ಚಟುವಟಿಕೆಗಳನ್ನೂ ನಡೆಸುತ್ತಿದ್ದಾರೆ. ಉದ್ಯಮಶೀಲತೆ ಮತ್ತು ತೀಕ್ಷ್ಣವಾದ ವ್ಯಾಪಾರ ಪ್ರಜ್ಞೆಗೆ ಹೆಸರುವಾಸಿಯಾಗಿರುವ ಅವರು ಅನೇಕ ಸಾಮಾಜಿಕ ಅಭಿವೃದ್ಧಿ ಕಾರ್ಯಗಳಿಗೂ ತಮ್ಮದೇ ಆದ ಕೊಡುಗೆಯನ್ನು ನೀಡುತ್ತಿದ್ದಾರೆ.