Site icon Vistara News

Russia Ukraine War: ರಷ್ಯಾ ಸೇನೆಯಲ್ಲಿರುವ ಭಾರತೀಯರು ಶೀಘ್ರ ತಾಯ್ನಾಡಿಗೆ; ವಿದೇಶಾಂಗ ಸಚಿವಾಲಯದ ಭರವಸೆ

Russia Ukraine War

Russia Ukraine War

ನವದೆಹಲಿ: ರಷ್ಯಾ-ಉಕ್ರೇನ್‌ ಯುದ್ಧ (Russia Ukraine War) ಮುಂದುವರಿದಿದೆ. ಈ ಮಧ್ಯೆ ರಷ್ಯಾ ಸೇನೆಯಲ್ಲಿ ಕನಿಷ್ಠ 20 ಭಾರತೀಯರಿದ್ದು ಅವರನ್ನು ತಾಯ್ನಾಡಿಗೆ ಮರಳಿ ಕರೆತರುವ ಪ್ರಯತ್ನ ನಡೆಸುತ್ತಿದ್ದೇವೆ ಎಂದು ವಿದೇಶಾಂಗ ಸಚಿವಾಲಯ (Ministry of External Affairs) ಗುರುವಾರ ತಿಳಿಸಿದೆ. ʼʼಈ ಎಲ್ಲ ಭಾರತೀಯರನ್ನು ಕರೆತರಲು ಭಾರತ ಸರ್ಕಾರ ರಷ್ಯಾದ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಮಾತುಕತೆ ನಡೆಸುತ್ತಿದೆʼʼ ಎಂದು ವಕ್ತಾರ ರಣಧೀರ್ ಜೈಸ್ವಾಲ್ ತಿಳಿಸಿದರು.

ʼʼಈ ಭಾರತೀಯರನ್ನು ಶೀಘ್ರವಾಗಿ ಬಿಡುಗಡೆಗೊಳಿಸಲು ಭಾರತ ಸರ್ಕಾರ ತೀವ್ರವಾಗಿ ಶ್ರಮಿಸುತ್ತಿದೆʼʼ ಎಂದು ಒತ್ತಿ ಹೇಳಿದ ರಣಧೀರ್ ಜೈಸ್ವಾಲ್, ʼʼರಷ್ಯಾದಲ್ಲಿರುವ ಭಾರತೀಯರಿಗೆ ಯುದ್ಧ ವಲಯಕ್ಕೆ ಹೋಗದಂತೆ ಎಚ್ಚರಿಕೆ ನೀಡಲಾಗಿದೆʼʼ ಎಂದು ಹೇಳಿದರು. “ರಷ್ಯಾದ ಸೈನ್ಯದಲ್ಲಿ ಸಹಾಯಕ ಸಿಬ್ಬಂದಿಯಾಗಿ ಅಥವಾ ಸಹಾಯಕರಾಗಿ ಕೆಲಸ ಮಾಡಲು ಈ 20 ಮಂದಿ ಅಲ್ಲಿಗೆ ಹೋಗಿದ್ದರು. ಇವರು ನಮ್ಮನ್ನು ಸಂಪರ್ಕಿಸಿ ತಾಯ್ನಾಡಿಗೆ ಮರಳಲು ಸಹಾಯ ಕೋರಿದ್ದಾರೆ” ಎಂದು ಮಾಹಿತಿ ನೀಡಿದರು.

ಫೆಬ್ರವರಿ 26ರಂದು, 2022ರ ರಷ್ಯಾ-ಉಕ್ರೇನ್‌ ಯುದ್ಧದಲ್ಲಿ ಸಿಕ್ಕಿಬಿದ್ದ ಹಲವು ಭಾರತೀಯರನ್ನು ಈಗಾಗಲೇ ರಷ್ಯಾದ ಸೈನ್ಯದಿಂದ ಬಿಡುಗಡೆ ಮಾಡಲಾಗಿದೆ ಎಂದು ಎಂಇಎ ಹೇಳಿದೆ. “ಮಾಸ್ಕೋದಲ್ಲಿರುವ ಭಾರತೀಯ ರಾಯಭಾರ ಕಚೇರಿ ಮತ್ತು ನವದೆಹಲಿಯ ರಷ್ಯಾ ರಾಯಭಾರ ಕಚೇರಿಯೊಂದಿಗೆ ಫಲಪ್ರದ ಮಾತುಕತೆ ನಡೆಸಿದ ಪರಿಣಾಮ ಹಲವು ಭಾರತೀಯರನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ” ಎಂದು ಎಂಇಎ ತಿಳಿಸಿದೆ. ರಷ್ಯಾದ ಸೈನಿಕರಾಗಿ ನಿಯುಕ್ತಿಗೊಂಡ ಜಮ್ಮು ಮತ್ತು ಕಾಶ್ಮೀರಕ್ಕೆ ಸೇರಿದ ಇಬ್ಬರು ಯುವಕರ ಕುಟುಂಬಗಳು ಇತ್ತೀಚೆಗೆ ಅವರನ್ನು ಮರಳಿ ಕರೆತರಲು ಸಹಾಯ ಮಾಡುವಂತೆ ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ಮನವಿ ಸಲ್ಲಿಸಿತ್ತು.

ಪೋಷಕರು ಹೇಳಿದ್ದೇನು?

ʼʼಭಾರತೀಯ ಯುವಕರಿಗೆ ಹಣದ ಆಮಿಷವೊಡ್ಡಿ, ಅವರನ್ನು ಸೇನೆಯ ಏಜೆಂಟ್‌ಗಳನ್ನಾಗಿ ರಷ್ಯಾ ನೇಮಕ ಮಾಡಿಕೊಂಡಿದೆ. ಇವರನ್ನು ರಕ್ಷಿಸಿ, ಭಾರತಕ್ಕೆ ಕಳುಹಿಸಬೇಕುʼʼ ಎಂದು ಯುವಕರ ಪೋಷಕರು ಹೇಳಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿದ್ದ ರಣಧೀರ್ ಜೈಸ್ವಾಲ್, “ರಷ್ಯಾ ಸೇನೆಯ ಸಹಾಯಕರಾಗಿ ಭಾರತದ ಕೆಲ ಯುವಕರನ್ನು ನೇಮಿಸಲಾಗಿದೆ ಎಂಬುದು ಗೊತ್ತಾಗಿದೆ. ರಷ್ಯಾ ಅಧಿಕಾರಿಗಳ ಜತೆ ಈ ಕುರಿತು ಭಾರತದ ಅಧಿಕಾರಿಗಳು ಮಾತುಕತೆ ನಡೆಸುತ್ತಿದ್ದಾರೆ. ಭಾರತದ ಯುವಕರು ರಷ್ಯಾ ಸೇನೆಗೆ ನೆರವು ನೀಡುವ ಮುನ್ನ ಎಚ್ಚರದಿಂದ ಇರಬೇಕು” ಎಂದು ಹೇಳಿದ್ದರು.

ಇದನ್ನೂ ಓದಿ: ರಷ್ಯಾ-ಉಕ್ರೇನ್​ ನಾಯಕರ ನಡುವೆ ಶಾಂತಿ ಮಾತುಕತೆ ಸಾಧ್ಯವಾಗಿಸಲು ಭಾರತದ ಪ್ರಧಾನಿಯಿಂದ ಮಾತ್ರ ಸಾಧ್ಯ ಎಂದ ಫ್ರೆಂಚ್​ ಪತ್ರಕರ್ತೆ

ವಾಯು ದಾಳಿಗೆ ಭಾರತದ ಯುವಕ ಬಲಿ

ರಷ್ಯಾದಲ್ಲಿ ಉಕ್ರೇನ್‌ ಮಾಡಿದ ಡ್ರೋನ್‌ ದಾಳಿಯಲ್ಲಿ 4 ದಿನಗಳ ಹಿಂದೆ ಭಾರತ ಮೂಲದ ಯುವಕನೊಬ್ಬ ಮೃತಪಟ್ಟಿದ್ದಾನೆ. ರಷ್ಯಾ ಹಾಗೂ ಉಕ್ರೇನ್‌ ಗಡಿಯಲ್ಲಿ ನಡೆದ ಈ ದಾಳಿಯಲ್ಲಿ ಭಾರತದ 23 ವರ್ಷದ ಯುವಕ ಮೃತಪಟ್ಟಿದ್ದಾನೆ ಎಂದು ಮೂಲಗಳು ತಿಳಿಸಿವೆ. ಮೃತನನ್ನು ಗುಜರಾತ್‌ನ ಸೂರತ್‌ ಜಿಲ್ಲೆಯ ಹೇಮಿಲ್‌ ಅಶ್ವಿನ್‌ಭಾಯಿ ಮಂಗುಕಿಯಾ ಎಂದು ಗುರುತಿಸಲಾಗಿದೆ. ರಷ್ಯಾದ ಸೇನೆಯ ಸಹಾಯಕನಾಗಿ 2023ರ ಡಿಸೆಂಬರ್‌ನಲ್ಲಿ ಈತ ಸೇರ್ಪಡೆಯಾಗಿದ್ದ. ಈತನು ಸೇನೆಯ ಏಜೆಂಟ್‌ ಆಗಿ ಕೆಲಸ ಮಾಡುತ್ತಿದ್ದ ಎಂದು ಮೂಲಗಳು ತಿಳಿಸಿವೆ. ರಷ್ಯಾದಲ್ಲಿ ನಿಗದಿತ ಗುರಿಗಳ ಮೇಲೆ ಉಕ್ರೇನ್‌ ವಾಯುದಾಳಿ ನಡೆಸಿದೆ. ದಾಳಿಯಲ್ಲಿ ಭಾರತದ ಹಲವರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎನ್ನಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version