ಮಾಸ್ಕೋ: ರಷ್ಯಾದಿಂದ ಸತತ ದಾಳಿ ಎದುರಿಸಿರುವ ಉಕ್ರೇನ್ ಇದೀಗ ರಷ್ಯಾ (Russia-Ukraine war) ವಿರುದ್ಧ ತಿರುಗಿ ಬಿದ್ದಿದೆ. ತನ್ನ ಗಡಿ ಭಾಗದಲ್ಲಿರುವ ಬ್ರಿಯಾನ್ಸ್ಕ್ ಪ್ರದೇಶದ ಮೇಲೆ ಸೋಮವಾರ ಮುಂಜಾನೆ ಡ್ರೋನ್ ಮೂಲಕ ದಾಳಿ ನಡೆಸಿದೆ. ದಾಳಿಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಬ್ರಿಯಾನ್ಸ್ಕ್ ನ ಗವರ್ನರ್ ಅಲೆಕ್ಸಾಂಡರ್ ಬೊಗೊಮ್ಯಾಜ್ ತಿಳಿಸಿದ್ದಾರೆ.
“ಉಕ್ರೇನ್‌ನ ದಕ್ಷಿಣ ಭಾಗದ ಗಡಿಯ ಬಳಿಯಿರುವ ಕ್ಲಿಮೋವ್ಸ್ಕಿ ಜಿಲ್ಲೆಯಲ್ಲಿ ಡ್ರೋನ್ ದಾಳಿ (Russia-Ukraine war) ನಡೆದಿದೆ. ವಿದ್ಯುತ್ ಸ್ಥಾವರಗಳಿಗೆ ಹಾನಿಯುಂಟಾಗಿರುವ ಕಾರಣ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಉಳಿದಂತೆ ಬೇರೆ ತೊಂದರೆಗಳಾಗಿಲ್ಲ. ಎಲ್ಲ ರೀತಿಯ ತುರ್ತು ಸೇವೆಗಳನ್ನು ಕೈಗೊಳ್ಳುತ್ತಿದ್ದೇವೆ” ಎಂದು ಅಲೆಕ್ಸಾಂಡರ್ ಬೊಗೊಮ್ಯಾಜ್ ಅವರು ಟೆಲಿಗ್ರಾಂನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಈ ದಾಳಿಯ ಬಗ್ಗೆ ಉಕ್ರೇನ್ ಇನ್ನೂ ಯಾವುದೇ ಮಾಹಿತಿ ಕೊಟ್ಟಿಲ್ಲ.
ಪುಟಿನ್ ಘೋಷಣೆ ಬೆನ್ನಿಗೇ ಉಕ್ರೇನ್ ಅಟ್ಯಾಕ್?
ಭಾನುವಾರ ಹೊಸ ವರ್ಷಾಚರಣೆ ವೇಳೆ ಮಾತನಾಡಿದ್ದ ರಷ್ಯಾ ಅದ್ಯಕ್ಷ ವ್ಲಾದಿಮಿರ್ ಪುಟಿನ್ ಅವರು, ಉಕ್ರೇನ್ ವಿರುದ್ಧದ ಸೇನಾ ಸಂಘರ್ಷವನ್ನು ಹೆಚ್ಚಿಸುವ ಸುಳಿವನ್ನು ನೀಡಿದ್ದರು. ಜನವರಿ 5ರಿಂದ ಎಲ್ಲ ಸೇನೆಗಳನ್ನು ಸೇರಿಸಿ ದಾಳಿ ನಡೆಯಲಿದೆ ಎಂದಿದ್ದರು. ಇದರ ಬೆನ್ನಿಗೇ ಉಕ್ರೇನ್ ದಾಳಿಗೆ ಇಳಿದಿದೆ.
ತಮ್ಮ 9 ನಿಮಿಷಗಳ ಹೊಸ ವರ್ಷದ ಆಚರಣೆಯ ಭಾಷಣದಲ್ಲಿ ಪುಟಿನ್, ಪಾಶ್ಚಿಮಾತ್ಯ ದೇಶಗಳು ರಷ್ಯಾವನ್ನು ನಾಶಪಡಿಸುವುದಕ್ಕೋಸ್ಕರ ಉಕ್ರೇನ್ ಅನ್ನು ದಾಳದಂತೆ ಪ್ರಯೋಗಿಸುತ್ತಿವೆ. ಆದರೆ ಇದಕ್ಕೆ ನಾವು ಆಸ್ಪದ ನೀಡುವುದಿಲ್ಲ ಎಂದರು. ಉಕ್ರೇನ್‌ನಲ್ಲಿ ರಷ್ಯಾ ಮಿಲಿಟರಿ ಕಾರ್ಯಾಚರಣೆ ನಡೆಸಲು ಕಾರಣ ಪಶ್ಚಿಮದ ರಾಷ್ಟ್ರಗಳಾಗಿವೆ. ಶಾಂತಿಯ ಹೆಸರಿನಲ್ಲಿ ಅವುಗಳು ಭಯೋತ್ಪಾದನೆಯನ್ನೇ ನಡೆಸಿವೆ ಎಂದು ಗುಡುಗಿದ್ದರು ಪುಟಿನ್.
ಎಂಟು ವರ್ಷಗಳಿಂದಲೇ ಸಂಘರ್ಷ
ರಷ್ಯಾ ೨೦೧೪ರಿಂದಲೇ ಉಕ್ರೇನ್‌ನ ಮೇಲೆ ನಿರಂತರ ಹುನ್ನಾರ ನಡೆಸುತ್ತಿದೆ. ಉಕ್ರೇನ್‌ಗೆ ಸೇರಿದ ಕೆಲವು ಪ್ರಾಂತ್ಯಗಳಿಗೆ ತಾನೇ ಸ್ವಾಯತ್ತೆ ಘೋಷಣೆ ಮಾಡಿ ಪ್ರತ್ಯೇಕವಾಗಿ ವ್ಯವಹಾರ ಶುರು ಮಾಡಿತ್ತು. ಇದರಿಂದ ಕೆರಳಿದ ಉಕ್ರೇನ್ ರಕ್ಷಣಾಕ್ರಮವಾಗಿ ನ್ಯಾಟೋವನ್ನು ಸೇರಲು ಮುಂದಾದದ್ದು ರಷ್ಯಾಕ್ಕೆ ಬೆಂಕಿ ಹಚ್ಚಿದಂತಾಯಿತು.
ಹೀಗಾಗಿ ಕಳೆದ 2022ರ ಫೆಬ್ರವರಿ ತಿಂಗಳಿನಿಂದ ತನ್ನ ದಾಳಿಯನ್ನು ರಷ್ಯಾ ತೀವ್ರಗೊಳಿಸಿದೆ. ಅದಕ್ಕೆ ಪ್ರತಿಯಾಗಿ ಉಕ್ರೇನ್ ಕೂಡ ರಷ್ಯಾದ ಮೇಲೆ ಹಲವು ದಾಳಿಗಳನ್ನು ನಡೆಸಿದೆ. ಈ ಯುದ್ಧದಲ್ಲಿ (Russia-Ukraine war) ಸಾವಿರಾರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
ಇದನ್ನೂ ಓದಿ: Russia-Ukraine war | ಹೊಸ ವರ್ಷ ಉಕ್ರೇನ್ ವಿರುದ್ಧ ಸಂಘರ್ಷ ತೀವ್ರಗೊಳಿಸುವ ಸಂಕಲ್ಪ ಮಾಡಿದ ಪುಟಿನ್