ಮಾಸ್ಕೋ: ಉಕ್ರೇನ್ (Ukraine) ಮೇಲೆ ದಾಳಿ ಮಾಡಲು ಹೋಗಿ ತದುಕಿಸಿಕೊಡಿರುವ ರಷ್ಯಾದ (Russia) ಅಧ್ಯಕ್ಷ ವ್ಲಾದಿಮಿರ್ ಪುಟಿನ್‌ಗೆ (Vladimir Putin) ಇನ್ನೊಂದು ಸಂಕಷ್ಟ ಎದುರಾಗಿದೆ. ಇದೀಗ ಅವರು ಸಾಕಿದ ಬಾಡಿಗೆ ಕೊಲೆಗಡುಕರ ಸೈನ್ಯವೇ ಅವರಿಗೆ ತಿರುಗಿಬಿದ್ದಿದೆ.
ರಷ್ಯಾದ ದಕ್ಷಿಣ ಮಿಲಿಟರಿ ಕೇಂದ್ರವಾದ ರಾಸ್ತಾವಾನ್ ಡಾನ್ ಪಟ್ಟಣವನ್ನು ಬಾಡಿಗೆ ಸೈನ್ಯ ವಶಪಡಿಸಿಕೊಂಡಿದ್ದು, ಮಾಸ್ಕೋ ಕಡೆಗೆ ಧಾವಿಸುತ್ತಿದೆ ಎನ್ನಲಾಗಿದೆ. ಇದು ರಷ್ಯದ ದೇಶದ ಸೈನ್ಯಕ್ಕೂ ಬಾಡಿಗೆ ಕೊಲೆಗಡುಕರ ಸೈನ್ಯಕ್ಕೂ ನಡುವೆ ನಡೆಯುತ್ತಿರುವ ಸಮರ. ʼವ್ಯಾಗ್ನರ್ ಗ್ರೂಪ್ʼ (Wagner Group) ಎಂಬ ಬಾಡಿಗೆ ಸೈನ್ಯದ ಮುಖ್ಯಸ್ಥ, 62 ವರ್ಷದ ಯೆವ್ಗೆನಿ ಪ್ರಿಗೋಜಿನ್ (Yevgeni Prigoschin) , ʼಅಡ್ಡಗಾಲು ಹಾಕುವ ಎಲ್ಲವನ್ನೂ ನಾಶ ಮಾಡುತ್ತೇನೆʼ ಎಂದು ಗುಡುಗಿದ್ದಾನೆ. ಈತ ಉಕ್ರೇನ್ ಮೇಲಿನ ರಷ್ಯಾದ ದಾಳಿಯ ಬಹುಭಾಗವನ್ನು ಮುನ್ನಡೆಸಿದ್ದ. ಇದೀಗ ರಷ್ಯಾದ ಮಿಲಿಟರಿಯ ವಿರುದ್ಧವೇ ದಂಗೆ ಎದ್ದಿದ್ದಾನೆ. ರಷ್ಯಾದ ಸೇನಾಪಡೆ ತನ್ನ ಸೈನ್ಯದ ಮೇಲೆ ಮಾರಣಾಂತಿಕ ದಾಳಿ ಮಾಡಿದೆ ಎಂಬುದು ಆತನ ಆರೋಪವಾಗಿದೆ.
ಈ ಕುರಿತು ಆತ ಒಂದು ಧ್ವನಿಸಂದೇಶ ಬಿಡುಗಡೆ ಮಾಡಿದ್ದಾನೆ. ʼʼನನ್ನ ಪಡೆಗಳು ನಮ್ಮ ದಾರಿಯಲ್ಲಿ ಅಡ್ಡವಾಗಿ ನಿಂತಿರುವ ಎಲ್ಲವನ್ನೂ ನಾಶಮಾಡಲಿವೆ. ಇದು ಮಿಲಿಟರಿ ದಂಗೆಯಲ್ಲ, ನ್ಯಾಯಕ್ಕಾಗಿ ಹಕ್ಕೊತ್ತಾಯʼʼ ಎಂದು ಹೇಳಿದ್ದಾನೆ. ತನ್ನ ಪಡೆಗಳ ವಿರುದ್ಧ ಕೆಲಸ ಮಾಡದಿರುವಂತೆ, ತನ್ನೊಂದಿಗೆ ಸೇರಿಕೊಳ್ಳುವಂತೆ ರಷ್ಯನ್ನರಿಗೆ ಆತ ಎಚ್ಚರಿಕೆ ನೀಡಿದ್ದಾನೆ. ಹಲವು ತಿಂಗಳುಗಳಿಂದ ರಷ್ಯ ಮಿಲಿಟರಿ ಹಾಗೂ ವ್ಯಾಗ್ನರ್ ಗ್ರೂಪ್ ನಡುವೆ ಮುಂದುವರಿದಿರುವ ಶೀತಲ ಸಮರದ ಪರಿಣಾಮ ಇದಾಗಿದೆ.
ದಕ್ಷಿಣ ಮಿಲಿಟರಿ ಜಿಲ್ಲೆ ಸಮಪೂರ್ಣವಾಗಿ ತನ್ನ ಸೈನ್ಯದ ವಶದಲ್ಲಿದೆ ಎಂದು ಯೆವ್ಗೆನಿ ಹೇಳಿದ್ದಾನೆ. ಇಲ್ಲಿನ ರಾಸ್ತಾವಾನ್ ಡಾನ್ ಪಟ್ಟಣ ಹಾಗೂ ಅಲ್ಲಿನ ಮಿಲಿಟರ ಕೇಂದ್ರ ನೆಲೆ ಈತನ ವಶದಲ್ಲಿದೆ. ಇಡೀ ಉಕ್ರೇನ್‌ನ ಮೇಲೆ ನಡೆದ ದಾಳಿಯನ್ನು ಇಲ್ಲಿಂದಲೇ ಸಂಘಟಿಸಲಾಗಿತ್ತು. ಉಕ್ರೇನ್ ಮೇಲಿನ ದಾಳಿಯ ಸಂದರ್ಭದಲ್ಲಿ ತನ್ನ ಸೈನ್ಯಕ್ಕೆ ಸೇರಿದ ನೂರಾರು ಸೈನಿಕರನ್ನು ರಷ್ಯನ್ ಮಿಲಿಟರಿಯ ಸೂತ್ರಧಾರರು ಕೊಲ್ಲಿಸಿದ್ದಾರೆ ಎಂಬುದು ಪ್ರಿಗೋಜಿನ್‌ನ ಆರೋಪವಾಗಿದೆ.
ಸುಮಾರು 25,000 ಬಾಡಿಗೆ ಸೈನಿಕರು ಈತನ ಸೈನ್ಯದಲ್ಲಿದ್ದು, ಭಾರಿ ಪ್ರಮಾಣದ ಟ್ಯಾಂಕ್, ಶಸ್ತ್ರಾಸ್ತ್ರಗಳನ್ನು ಹೊಂದಿದ್ದಾನೆ. ʼʼರಷ್ಯದ ಸೈನ್ಯದ ಅರ್ಧ ಭಾಗ ಸೈನಿಕರು ನನ್ನೊಂದಿಗೆ ಬರಲು ಸಜ್ಜಾಗಿದ್ದಾರೆʼʼ ಎಂದು ಈತ ಘೋಷಿಸಿದ್ದಾನೆ.
ಪ್ರಿಗೋಜಿನ್ ಹೇಳಿಕೆಯ ನಂತರ ಮಾಸ್ಕೋದಲ್ಲಿ ಭದ್ರತಾ ಕ್ರಮಗಳನ್ನು ಬಿಗಿಗೊಳಿಸಲಾಗಿದೆ. ನಿರ್ಣಾಯಕ ತಾಣಗಳನ್ನು ಇನ್ನಷ್ಟು ರಕ್ಷಣೆಯಲ್ಲಿ ಇರಿಸಲಾಗಿದೆ. ರಷ್ಯಾದ ಪ್ರಮುಖ ಜನರಲ್‌ಗಳು ಹಿಂದೆ ಸರಿಯುವಂತೆ ವ್ಯಾಗ್ನರ್ ಸೇನಾನಾಯಕನನ್ನು ಒತ್ತಾಯಿಸಿದ್ದಾರೆ. ಈ ನಡುವೆ ರಶಿಯಾ ಸೇನೆಯ ಚೀಫ್ ಆಫ್ ಜನರಲ್ ಸ್ಟಾಫ್ ವ್ಯಾಲೆರಿ ಗೆರಾಸಿಮೊವ್ ರೋಸ್ಟೊವ್ ಸೈನ್ಯದ ಪ್ರಧಾನ ಕಚೇರಿಯಿಂದ ಓಡಿಹೋಗಿದ್ದಾನೆ ಹಾಗೂ ಸ್ನೇಹಿತರ ಮನೆಯಲ್ಲಿ ತಲೆಮರೆಸಿಕೊಂಡಿದ್ದಾನೆ ಎಂದು ತಿಳಿದುಬಂದಿದೆ. ಉಕ್ರೇನ್ ಮೇಲಿನ ದಾಳಿಯ ಲಾಭ ಪಡೆಯಲು ಈ ಇಬ್ಬರ ನಡುವೆ ಶೀತಲ ಸಮರ ನಡೆದಿತ್ತು.
ಈ ನಡುವೆ ಮಾಸ್ಕೋದಲ್ಲಿ ನಡೆಯುತ್ತಿರುವ ಆಂತರಿಕ ಕಲಹದ ಮೇಲೆ ಉಕ್ರೇನ್ ನಿಗಾ ಇಟ್ಟಿದ್ದು, ʼʼರಷ್ಯಾದ ಪ್ರತಿಸ್ಪರ್ಧಿ ಬಣಗಳು ಅಧಿಕಾರಕ್ಕಾಗಿ ಪರಸ್ಪರ ಹೊಡೆದಾಡಿಕೊಂಡು ನಾಶವಾಗಲಿವೆʼʼ ಎಂದಿದೆ.
ಇದನ್ನೂ ಓದಿ: Alexander Lukashenko: ಬೆಲಾರಸ್ ಅಧ್ಯಕ್ಷನಿಗೆ ರಷ್ಯಾದಲ್ಲಿ ವಿಷಪ್ರಾಶನ? ಪುಟಿನ್ ಭೇಟಿ ಬಳಿಕ ಅಸ್ವಸ್ಥರಾದ ಲುಕಾಶೆಂಕೋ