Site icon Vistara News

ಪುಟಿನ್‌ ಪ್ರೇಯಸಿಯ ಮೇಲೆ ಮುಗಿಬಿದ್ದ ಯುರೋಪ್!‌ ಯಾರೀಕೆ ಕಬಯೇವಾ?

ರಷ್ಯಾ ಮೇಲೆ ಈಗಾಗಲೇ ಅಮೆರಿಕ ಹಾಗೂ ಯುರೋಪ್‌ಗಳು ಭಾರಿ ಪ್ರಮಾಣದ ವಾಣಿಜ್ಯ ನಿರ್ಬಂಧಗಳನ್ನು ವಿಧಿಸಿವೆ. ಇದೀಗ ರಷ್ಯಾದ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಅವರ ಪ್ರೇಯಸಿ ಅಲೀನಾ ಕಬಯೇವಾ ಅವರನ್ನು ಪೂರ್ತಿಯಾಗಿ ನಿರ್ಬಂಧಿಸಲು ಯುರೋಪ್‌ ಮುಂದಾಗಿದೆ.
ಹೀಗೊಬ್ಬಳು ಇದ್ದಾಳೆಂದೇ ಹೆಚ್ಚಿನವರಿಗೆ ಗೊತ್ತಿಲ್ಲ. ಈಕೆ ರಷ್ಯದ ರಾಜಕಾರಣಿ, ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ ಮಾಜಿ ಜಿಮ್ನಾಸ್ಟ್‌. ರೂಮರ್‌ಗಳು ಹೇಳುವುದು ನಿಜವಾದರೆ ಪುಟಿನ್‌ನ ಹಲವು ಮಕ್ಕಳಿಗೆ ಈಗೆ ತಾಯಿ ಕೂಡ.

ಪುಟಿನ್‌ ಅವರ ಆಪ್ತರನ್ನು ಇಬ್ಬಂದಿಗೆ ಸಿಲುಕಿಸಲು ಮುಂದಾಗಿರುವ ಯುರೋಪ್‌ ಹಾಗೂ ಅಮೆರಿಕಗಳು, ಅಂಥವರು ಸಿಕ್ಕಲ್ಲೆಲ್ಲ ನಿರ್ಬಂಧದ ಬೀಗ ಜಡಿಯುತ್ತಿವೆ. ಕಳೆದ ತಿಂಗಳು, ಪುಟಿನ್‌ನ ಮಕ್ಕಳಾದ ಮರಿಯಾ ವೊರೊಂತ್ಸೊವಾ (36), ಕ್ಯಾತೆರಿನಾ ತಿಕೊನೊವಾ (35) ಮೇಲೆ ನಿರ್ಬಂಧಗಳನ್ನು ವಿಧಿಸಲಾಗಿದೆ. ಇವರು ಪುಟಿನ್‌ನ ಮೊದಲ ಹೆಂಡತಿ ಲ್ಯುದ್‌ಮಿಲಾ ಅವರ ಮಕ್ಕಳು.

ಕಳೆದ ತಿಂಗಳ ವರೆಗೂ ಈಕೆ ಸ್ವಿಜರ್‌ಲ್ಯಾಂಡ್‌ನಲ್ಲಿ ವಾಸಿಸಿದ್ದಳು. ಈಗಲೂ ಅಲ್ಲಿದ್ದಾಳೆಯೇ ಅಥವಾ ರಷ್ಯಾಗೆ ಹೋಗಿದ್ದಾಳೆಯೇ ಎಂಬುದು ಗೊತ್ತಾಗಿಲ್ಲ. ಸ್ವಿಜರ್‌ಲ್ಯಾಂಡ್‌ನ ಆಕೆಯ ಮನೆಯಿಂದ ಆಕೆಯನ್ನು ಓಡಿಸಬೇಕು ಎಂದು ಕಳೆದ ತಿಂಗಳಲ್ಲೇ ಆನ್‌ಲೈನ್‌ ಅಭಿಯಾನ ಆರಂಭವಾಗಿತ್ತು. ಪುಟಿನ್‌ ಪರವಾದ ಆನ್‌ಲೈನ್‌ ಅಭಿಯಾನ, ಅಮೆರಿಕ ವಿರೋಧಿ ಪ್ರಚಾರದಲ್ಲೆಲ್ಲ ಮುಂಚೂಣಿಯಲ್ಲಿರುವ ಪುಟಿನ್‌ರ ಆಪ್ತ ಬಳಗದಲ್ಲಿ ಈಕೆಯೂ ಇದ್ದಾಳೆ ಎಂದು ತಿಳಯಲಾಗಿದೆ.

ಪುಟಿನ್‌ ಸ್ವತಃ ತನಗೆ ಕಬಯೇವಾ ಜೊತೆಗೆ ಸಂಬಂಧ ಇರುವುದನ್ನು ಒಪ್ಪಿಕೊಂಡಿಲ್ಲ. ಪುಟಿನ್‌ ತಮ್ಮ ಖಾಸಗಿ ಸಂಗತಿಗಳ ಬಗ್ಗೆ ಅತ್ಯಂತ ಗೌಪ್ಯತೆ ಕಾಪಾಡಿಕೊಳ್ಳುತ್ತಾರೆ. ಕಬಯೇವಾ ಕೂಡ ತಮ್ಮ- ಪುಟಿನ್‌ ಸಂಬಂಧವನ್ನು ದೃಢಪಡಿಸಿಲ್ಲ, ನಿರಾಕರಿಸಿಯೂ ಇಲ್ಲ.

2008ರಲ್ಲಿ ಮಾಸ್ಕೋವಸ್ಕಿ ಕರೆಸ್ಪಾಂಡೆಂಟ್‌ ಪತ್ರಿಕೆಯು, ಪುಟಿನ್‌ ಅವರು ತಮ್ಮ ಪತ್ನಿ ಲ್ಯುದ್‌ಮಿಲಾ ಅವರಿಗೆ ಡೈವೋರ್ಸ್‌ ನೀಡಿ, ಕಬಯೇವಾ ಅವರನ್ನು ವಿವಾವಾಗಲಿದ್ದಾರೆ ಎಂದು ಸುದ್ದಿ ಮಾಡಿತ್ತು. ಇಬ್ಬರೂ ಅದನ್ನು ನಿರಾಕರಿಸಿದ್ದರು. ಇದಾಗಿ ಕೆಲವೇ ತಿಂಗಳಲ್ಲಿ ಆ ಪತ್ರಿಕೆಯನ್ನು ರಷ್ಯ ಸರಕಾರ ಮುಚ್ಚಿಹಾಕಿತ್ತು. ಐದು ವರ್ಷ ಬಳಿಕ ಪುಟಿನ್-‌ ಲ್ಯುದ್‌ಮಿಲಾ ವಿಚ್ಛೇದನವಾಗಿತ್ತು.

ಕಬಯೇವಾಳ ಪರಿಣತಿಯ ಕ್ರೀಡೆ ರಿದ್ಮಿಕ್‌ ಜಿಮ್ನಾಸ್ಟಿಕ್ಸ್.‌ ಈಕೆ ಇದರಲ್ಲಿ ಜಗತ್ತಿನ ಅಗ್ರಗಣ್ಯ ಕ್ರೀಡಾಳು ಆಗಿದ್ದಳು. 2000- 2016ರ ನಡುವಿನ ಪ್ರತಿಯೊಂದು ಒಲಿಂಪಿಕ್ಸ್‌ನ ಜಿಮ್ನಾಸ್ಟಿಕ್‌ ಚಿನ್ನದ ಪದಕವನ್ನೂ ರಷ್ಯಾ ಗೆದ್ದುಕೊಳ್ಳುತ್ತಿತ್ತು. ಈಕೆಯ ಹೆಸರಿನಲ್ಲೇ ಇರುವ ಒಂದು ಜಿಮ್ನಾಸ್ಟಿಕ್‌ ಚಲನೆಯೂ ಇದೆ. ಇದನ್ನು ಈಕೆಯೇ ಆವಿಷ್ಕರಿಸಿದ್ದು ಎನ್ನಲಾಗುತ್ತದೆ.

ಇದನ್ನೂ ಓದಿ: ಪುಟಿನ್‌ಗೆ ಕ್ಯಾನ್ಸರ್:‌ ಬರಲಿದ್ದಾನೆ ಅವನಿಗಿಂತಲೂ ದೊಡ್ಡ ರಾಕ್ಷಸ!

1983ರಲ್ಲಿ ಜನಿಸಿದ ಈಕೆ ನಾಲ್ಕನೇ ವರ್ಷದಲ್ಲೇ ಜಿಮ್ನಾಸ್ಟಿಕ್‌ ಕಲಿಯಲಾರಂಭಿಸಿದಳು. ನಂತರ ಈಕೆ ʼರಷ್ಯಾದ ಅತ್ಯಂತ ಫ್ಲೆಕ್ಸಿಬಲ್‌ ಮಹಿಳೆʼ ಎಂದೇ ಖ್ಯಾತಿ ಪಡೆದಳು. 1998ರಲ್ಲಿ ಯುರೋಪಿಯನ್‌ ಚಾಂಪಿಯನ್ಶಿಪ್‌ನಲ್ಲಿ ಪದಕ ಪಡೆದಳು. ನಂತರ 2004ರಲ್ಲಿ ನಡೆದ ಅಥೆನ್ಸ್‌ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದಳು. ನಂತರ ತನ್ನ ಒಟ್ಟಾರೆ ಕೆರಿಯರ್‌ನಲ್ಲಿ 18 ವಿಶ್ವ ಚಾಂಪಿಯನ್‌ಶಿಪ್‌ಗಳನ್ನು ಗೆದ್ದಳು.

ನಂತರ ರಾಜಕೀಯಕ್ಕೆ ಬಂದಳು. 2007-2014ರ ಅವಧಿಯಲ್ಲಿ ಯುನೈಟೆಡ್‌ ರಷ್ಯಾ ಪಾರ್ಟಿಯಿಂದ ಸ್ಪರ್ಧಿಸಿ ರಷ್ಯದ ಕೆಳಮನೆಯ ಸದಸ್ಯಳಾದಳು. ಅಲ್ಲಿಂದಾಚೆಗೆ ಪುಟಿನ್‌ ಅವರ ಮುಖವಾಣಿಯಾಗಿ ಅಲ್ಲಿನ ಪತ್ರಿಕೆಗಳನ್ನು ರೂಪಿಸುವ ಹೊಣೆ ಹೊಂದಿದ್ದ ನ್ಯಾಷನಲ್‌ ಮೀಡಿಯಾ ಗ್ರೂಪ್‌ನ ಅಧ್ಯಕ್ಷೆಯಾದಳು. ಪುಟಿನ್‌ಗೆ ಸನಿಹವಾಗುತ್ತಾ ಹೋದಳು. ಎಣಿಸಲಾಗದಷ್ಟು ಶ್ರೀಮಂತೆಯೂ ಆದಳು.

ಪುಟಿನ್‌ ಮತ್ತು ಈಕೆಯ ಗೆಳೆತನದ ಬಹುತೇಕ ವಿವರಗಳು ರಹಸ್ಯವಾಗಿವೆ. ಕಬಯೇವಾಗೆ 2015ರಲ್ಲಿ ಗಂಡು ಮಗು ಹಾಗೂ 2019ರಲ್ಲಿ ಅವಳಿ ಮಕ್ಕಳಾಗಿವೆ. ಆದರೆ ಈ ಮಕ್ಕಳ ತಂದೆ ಯಾರು ಎಂದು ಆಕೆ ಹೇಳಿಕೊಂಡಿಲ್ಲ. ಅದು ಪುಟಿನ್‌ ಎಂದು ತರ್ಕಿಸಲಾಗಿದೆ. ರಷ್ಯಾದ ಪತ್ರಿಕೆಗಳು ಪುಟಿನ್-‌ ಕಬಯೇವಾ ಸಂಬಂಧದ ಸುದ್ದಿಗಳನ್ನು ಪ್ರಕಟಿಸಲು ಹೆದರಿಕೊಳ್ಳುತ್ತವೆ. ಆದರೆ ಯುರೋಪಿಯನ್‌ ಮಾಧ್ಯಮಗಳು ರಷ್ಯಾದ ಮೂಲಗಳನ್ನು ಆಧರಿಸಿ ವರದಿ ಮಾಡುತ್ತವೆ. ಅದರ ಪ್ರಕಾರ ಪುಟಿನ್‌ ಕಬಯೇವಾಗೆ ಬೆಲೆಬಾಳುವ ಗಿಫ್ಟ್‌ಗಳನ್ನು ನೀಡುವುದು, ಆಗಾಗ ಕರೆಸಿಕೊಳ್ಳುವುದು ನಡೆದೇ ಇದೆ.

ಇಂಥ ಚೆಲುವೆಗೆ ನಿರ್ಬಂಧ ವಿಧಿಸಲು ಈಗ ಯುರೋಪ್‌ ಒಕ್ಕೂಟ ಮುಂದಾಗಿದೆ. ಇದು ಒಂದು ರೀತಿಯಲ್ಲಿ ಪುಟಿನ್‌ಗೆ ನೀಡುತ್ತಿರುವ ವೈಯಕ್ತಿಕ ತಪರಾಕಿ.

Exit mobile version