Site icon Vistara News

Sara Sidner: ತನ್ನ ಸ್ತನ ಕ್ಯಾನ್ಸರ್‌ ಬಗ್ಗೆ ಲೈವ್‌ನಲ್ಲೇ ಮಾಹಿತಿ ನೀಡಿದ ಸುದ್ದಿ ನಿರೂಪಕಿ

Sara Sidner

Sara Sidner

ನ್ಯೂಯಾರ್ಕ್‌: ಅಮೆರಿಕದ ಅಟ್ಲಾಂಟದಲ್ಲಿ ಕೇಂದ್ರ ಕಚೇರಿ ಹೊಂದಿರುವ ಬಹುಭಾಷಾ ಸುದ್ದಿ ವಾಹಿನಿ ಸಿಎನ್‌ಎನ್‌ನ (CNN) ಸುದ್ದಿ ನಿರೂಪಕಿ, ಅಮೆರಿಕದ ಸಾರಾ ಸಿಡ್ನರ್ (Sara Sidner) ಸೋಮವಾರ (ಜನವರಿ 8) ತನಗೆ 3ನೇ ಹಂತದ ಸ್ತನ ಕ್ಯಾನ್ಸರ್ (Stage 3 breast cancer) ಇರುವುದಾಗಿ ತಿಳಿಸಿದ್ದಾರೆ. ಸದ್ಯ ಚಿಕಿತ್ಸೆ ಪಡೆಯುತ್ತಿರುವುದಾಗಿ 51ರ ಹರೆಯದ ಈ ಪ್ರಶಸ್ತಿ ವಿಜೇತ ಪತ್ರಕರ್ತೆ ಮಾಹಿತಿ ನೀಡಿದ್ದಾರೆ.

ಸಾರಾ ಸಿಡ್ನರ್ ಹೇಳಿದ್ದೇನು?

ತಾನು ಇದುವರೆಗೆ ಒಂದು ದಿನವೂ ಅನಾರೋಗ್ಯಕ್ಕೆ ಒಳಗಾಗಿರಲಿಲ್ಲ. ಧೂಮಪಾನ ಮಾಡುವುದಿಲ್ಲ. ವಿರಳವಾಗಿ ಮದ್ಯ ಸೇವಿಸುತ್ತೇನೆ. ಆದರೂ ಕ್ಯಾನ್ಸರ್‌ ಕಂಡು ಬಂದಿದೆ. ಇದುವರೆಗೆ ನಮ್ಮ ಕುಟುಂಬದ ಯಾರೊಬ್ಬರಿಗೂ ಸ್ತನ ಕ್ಯಾನ್ಸರ್ ಬಾಧಿಸಿರಲಿಲ್ಲ. ಇದೀಗ ತಾನು ಸ್ತನ ಕ್ಯಾನ್ಸರ್‌ನ 3ನೇ ಹಂತದಲ್ಲಿರುವುದಾಗಿ ಭಾವುಕರಾಗಿ ನುಡಿದಿದ್ದಾರೆ. ಸಿಡ್ನರ್ ಅವರು ಕೀಮೋಥೆರಪಿಗೆ ಒಳಗಾಗಿದ್ದಾರೆ.

“ಕ್ಯಾನ್ಸರ್‌ನ 3ನೇ ಹಂತವು ಬಹುಪಾಲು ಮಹಿಳೆಯರಿಗೆ ಮರಣದಂಡನೆಯಲ್ಲ ಎನ್ನುವುದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. ಎದೆಗುಂದದೆ ಸೂಕ್ತ ಚಿಕಿತ್ಸೆ ಪಡೆಯುವತ್ತ ಗಮನ ಹರಿಸಬೇಕು. ಸ್ತನ ಕ್ಯಾನ್ಸರ್ ಹೊಂದಿರುವ ಕಪ್ಪು ಮಹಿಳೆಯರು ಬಿಳಿ ಮಹಿಳೆಯರಿಗಿಂತ ಸಾಯುವ ಸಾಧ್ಯತೆ ಶೇ. 41ರಷ್ಟು ಹೆಚ್ಚು ಎನ್ನುವುದು ಸಂಶೋಧನೆಯಲ್ಲಿ ಕಂಡು ಬಂದಿದೆ. ಈ ಬಗ್ಗೆ ಎಚ್ಚರ ವಹಿಸಬೇಕುʼʼ ಎಂದೂ ಸಿಡ್ನರ್ ಕಿವಿ ಮಾತು ಹೇಳಿದ್ದಾರೆ.

ʼʼಎಲ್ಲ ಮಹಿಳೆಯರು ಪ್ರತಿವರ್ಷ ನಿಯಮಿತವಾಗಿ ಆರೋಗ್ಯ ಪರೀಕ್ಷೆ ಮಾಡಿಸಿಕೊಳ್ಳಬೇಕು. ಆರಂಭಿಕ ಹಂತದಲ್ಲೇ ರೋಗ ಪತ್ತೆ ಹಚ್ಚಲು ಇದರಿಂದ ಸಾಧ್ಯವಾಗುತ್ತದೆʼʼ ಎಂದು ಅವರು ಸಲಹೆ ನೀಡಿದ್ದಾರೆ. “ನನ್ನನ್ನು ಆಯ್ಕೆ ಮಾಡಿದ್ದಕ್ಕಾಗಿ ನಾನು ಕ್ಯಾನ್ಸರ್‌ಗೆ ಧನ್ಯವಾದ ಹೇಳುತ್ತೇನೆ. ನಾವು ಎಷ್ಟೇ ಕಷ್ಟ ಅನುಭವಿಸಿದರೂ ಮತ್ತೂ ಜೀವನವನ್ನು ಗಾಢವಾಗಿ ಪ್ರೀತಿಸುತ್ತೇವೆ ಎನ್ನುವುದು ನನ್ನ ಅನುಭವಕ್ಕೆ ಬಂದಿದೆʼʼ ಎಂದು ಅವರು ಹನಿಗೂಡಿದ ಕಣ್ಣುಗಳಿಂದ ಹೇಳಿದ್ದಾರೆ.

“ಈಗ ನಿಜವಾಗಿಯೂ ನಾನು ಸಂತೋಷದಿಂದಿದ್ದೇನೆ. ಕಿರಿಕಿರಿ ಉಂಟು ಮಾಡುತ್ತಿದ್ದ ಸಣ್ಣ ವಿಷಯಗಳ ಬಗ್ಗೆ ನಾನು ತಲೆ ಕೆಡಿಸಿಕೊಂಡಿಲ್ಲ. ಹೀಗಾಗಿ ಸಂತಸದಿಂದ ಇರಲು ನನಗೆ ಸಾಧ್ಯವಾಗಿದೆʼʼ ಎಂದು ಅವರು ಹೇಳಿದ್ದಾರೆ. ಆಫ್ರಿಕನ್-ಅಮೆರಿಕನ್ ತಂದೆ ಮತ್ತು ಬ್ರಿಟಿಷ್ ತಾಯಿಗೆ ಅಮೆರಿಕದಲ್ಲಿ ಜನಿಸಿದ ಸಿಡ್ನರ್ ಫ್ಲೋರಿಡಾದಲ್ಲಿ ಬೆಳೆದರು. ಅಲ್ಲಿ ತಮ್ಮ ಶಾಲಾ ಮತ್ತು ಕಾಲೇಜು ಶಿಕ್ಷಣವನ್ನು ಮುಗಿಸಿದರು.

ಇದನ್ನೂ ಓದಿ: PM Narendra Modi: ಪಾಕಿಸ್ತಾನದತ್ತ ಗುರಿಯಿಟ್ಟ 9 ಕ್ಷಿಪಣಿ! ಭಯಭೀತ ಇಮ್ರಾನ್‌ ಖಾನ್‌ ಫೋನ್‌ ತೆಗೆಯಲೇ ಇಲ್ಲ ಮೋದಿ!

ಅಮೆರಿಕದ ಒಳಗೆ ಮತ್ತು ಹೊರಗಿನ ಸುದ್ದಿಗಳನ್ನು ವರದಿ ಮಾಡುತ್ತ ಅವರು ದಶಕಗಳಿಂದ ಪ್ರೇಕ್ಷಕರಿಗೆ ಪರಿಚಿತರಾಗಿದ್ದಾರೆ. 2008ರಲ್ಲಿ ನಡೆದ ಮುಂಬೈ ಭಯೋತ್ಪಾದಕ ದಾಳಿಯ ಬಗ್ಗೆ ಸಿಎನ್ಎನ್‌ ಸುದ್ದಿ ಪ್ರಸಾರ ಮಾಡುವಾಗ ಸಿಡ್ನರ್ ಕೂಡ ಇದ್ದರು. ಸಿಡ್ನರ್ ಅನೇಕ ಪತ್ರಿಕೋದ್ಯಮ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಇವುಗಳಲ್ಲಿ ಪ್ರಾದೇಶಿಕ ಎಮ್ಮಿ ಪ್ರಶಸ್ತಿ, ಲೋನ್ ಸ್ಟಾರ್ ಪ್ರಶಸ್ತಿ ಮತ್ತು ಹಲವಾರು ಅಸೋಸಿಯೇಟೆಡ್ ಪ್ರೆಸ್ ಪ್ರಶಸ್ತಿಗಳು ಸೇರಿವೆ. ಅವರು ಪ್ರಸ್ತುತ ಸಿಎನ್ಎನ್ ನ್ಯೂಸ್ ಸೆಂಟ್ರಲ್ ಅನ್ನು ನಿರೂಪಿಸುತ್ತಿದ್ದಾರೆ. ಈ ವೇಳೆ ಅವರು ನೇರ ಪ್ರಸಾರದಲ್ಲಿ ತಮ್ಮ ಸ್ತನ ಕ್ಯಾನ್ಸರ್ ಬಗ್ಗೆ ಹೇಳಿಕೊಂಡಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

Exit mobile version