Site icon Vistara News

Shakti Peeth: ಪಾಕಿಸ್ತಾನದಲ್ಲೂ ಇದೆ ಹಿಂದೂಗಳ ಶಕ್ತಿ ಪೀಠ; ಅದು ಈಗ ಹೇಗಿದೆ ನೋಡಿ!

Shakti Peeth

ಪುರಾತನ ಹಿಂದೂ ದೇವಾಲಯಗಳು ಭಾರತದಲ್ಲಿ ಮಾತ್ರವಲ್ಲ ಅನೇಕ ಹೊರದೇಶಗಳಲ್ಲೂ ಇದೆ. ಅದರಲ್ಲೂ ನೆರೆಯ ರಾಷ್ಟ್ರವಾದ ಪಾಕಿಸ್ತಾನದಲ್ಲಿ (Pakistan) ಇರುವ ಶಕ್ತಿ ಪೀಠ (Shakti Peeth) ವಿಶ್ವವಿಖ್ಯಾತ ಹಿಂದೂ ದೇವಾಲಯಗಳಲ್ಲಿ ಒಂದಾಗಿದೆ. ಏಪ್ರಿಲ್ 9ರಂದು ಮಂಗಳವಾರ ಚೈತ್ರ ನವರಾತ್ರಿ (Chaitra Navratri) ಪ್ರಾರಂಭವಾಗಲಿದ್ದು, ಈ ಸಂದರ್ಭದಲ್ಲಿ ಈ ದೇವಾಲಯದ ಹಿನ್ನೆಲೆ, ಹಿಂದೆ ಹೇಗಿತ್ತು, ಈಗ ಹೇಗಿದೆ ಎನ್ನುವುದರ ಮಾಹಿತಿ ಇಲ್ಲಿದೆ.

ಶಕ್ತಿ ಪೀಠ ಎಲ್ಲಿದೆ?

18 ಶಕ್ತಿ ಪೀಠಗಳಲ್ಲಿ ಒಂದಾಗಿರುವ ಶಾರದಾ ಶಕ್ತಿಪೀಠ ಪಾಕ್ ಆಕ್ರಮಿತ ಕಾಶ್ಮೀರದಲ್ಲಿದೆ. ಕಾಶ್ಮೀರಿ ಪಂಡಿತರಿಂದ ಹರ್ಮುಖ್ ಪರ್ವತ ಕಣಿವೆ ಎಂದು ಕರೆಯಲ್ಪಡುವ ಪರ್ವತದ ನೀಲಂ ಕಣಿವೆಯಲ್ಲಿ ಈ ಶಕ್ತಿ ಪೀಠವಿದೆ.

ಹಿನ್ನೆಲೆ ಏನು?

ದಕ್ಷನ ಯಜ್ಞದ ವೇಳೆ ಅವಮಾನಿತಳಾದ ಸತಿ ತನ್ನನ್ನು ತಾನು ಯಜ್ಞ ಕುಂಡದಲ್ಲಿ ದಹಿಸಿಕೊಳ್ಳುತ್ತಾಳೆ. ದಕ್ಷನಿಗೆ ಶಿಕ್ಷೆ ಕೊಟ್ಟ ಬಳಿಕ ಶಿವನು ಸತಿಯ ದೇಹದೊಂದಿಗೆ ಅಲ್ಲಿಇಲ್ಲಿ ಸುತ್ತುತ್ತಾ ದುಃಖಿಸುತ್ತಿರುತ್ತಾನೆ. ಆಗ ವಿಷ್ಣುವು ಸುದರ್ಶನ ಚಕ್ರದಿಂದ ಸತಿಯ ದೇಹವನ್ನು ತುಂಡರಿಸಿ ಶಿವನ ದುಃಖದಿಂದ ಹೊರಬರಲು ಸಹಕರಿಸುತ್ತಾನೆ. ವಿಷ್ಣುವು ಸತಿಯ ದೇಹವನ್ನು ತುಂಡರಿಸಿದಾಗ ಆಕೆಯ ದೇಹದ ಭಾಗಗಳು ಬಿದ್ದಿರುವ ಸ್ಥಳಗಳು ಶಕ್ತಿ ಪೀಠಗಳಾಗಿವೆ. ಹೀಗೆ 18 ಶಕ್ತಿ ಪೀಠಗಳಲ್ಲಿ ಹರ್ಮುಖ್ ಪರ್ವತ ಕಣಿವೆಯಲ್ಲಿರುವ ಶಾರದಾ ಪೀಠವೂ ಒಂದಾಗಿದೆ. ಕಾಶ್ಮೀರಿ ಪಂಡಿತರ ಪವಿತ್ರ ಕ್ಷೇತ್ರಗಳಲ್ಲಿ ಒಂದಾಗಿರುವ ಈ ಶಾರದ ಪೀಠಕ್ಕೆ ಸರಸ್ವತಿ ದೇವಿಯ ಹೆಸರನ್ನು ಇಡಲಾಗಿತ್ತು. ಶಕ್ತಿ ಪೀಠಕ್ಕೆ ಸೇರಿದ ಮೊದಲ ದೇವಾಲಯ ಇದು. ಬಳಿಕ ಖೀರ್ ಭವಾನಿ ಮತ್ತು ವೈಷ್ಣೋದೇವಿ ದೇವಾಲಯಗಳಾದವು ಎಂದು ನಂಬಲಾಗಿದೆ.

ಇತಿಹಾಸದಲ್ಲಿ ಏನಿದೆ ?

6 ಮತ್ತು 12ನೇ ಶತಮಾನದಲ್ಲಿ ಇದು ಅತೀ ದೊಡ್ಡ ದೇವಾಲಯವಾಗಿತ್ತು. ಉಪಖಂಡದಲ್ಲಿ ವಿಶ್ವವಿದ್ಯಾಲಯಗಳಲ್ಲಿ ಬಳಸಲಾಗುತ್ತಿದ್ದ ಶಾರದ ಲಿಪಿ ಮತ್ತು ನಾಗರಿ ಲಿಪಿಯನ್ನು ಇಲ್ಲಿ ಅಭಿವೃದ್ಧಿಪಡಿಸಿದ್ದು, ಬಳಿಕ ಜನಪ್ರಿಯಗೊಳಿಸಲಾಯಿತು. 8ನೇ ಶತಮಾನದಲ್ಲಿ ಶಾರದ ಪೀಠ ಎಂದೇ ಪ್ರಸಿದ್ಧಿ ಪಡೆದ ಈ ದೇವಾಲಯ ಹಿಂದೂ ಯಾತ್ರಾರ್ಥಿಗಳಿಗೆ ಗಮ್ಯಸ್ಥಾನವಾಗಿತ್ತು. ಇರಾನಿನ ವಿದ್ವಾಂಸ ಅಲ್-ಬಿರುನಿ 11 ನೇ ಶತಮಾನದಲ್ಲಿ ಭಾರತಕ್ಕೆ ಬಂದಿದ್ದು, ಈ ದೇವಾಲಯದ ಬಗ್ಗೆ ತನ್ನ ಬರವಣಿಗೆ ಮೂಲಕ ಪರಿಚಯಿಸಿದ.

ಇದನ್ನೂ ಓದಿ: Lakshadweep Tourism: ಮೋದಿ ಭೇಟಿ ಬಳಿಕ ಲಕ್ಷದ್ವೀಪಕ್ಕೆ ಲಕ್;‌ ಪ್ರವಾಸಿಗರ ಸಂಖ್ಯೆ ಡಬಲ್!

ಕಥೆಯಲ್ಲಿ ಏನಿದೆ ?

ಕಾಶ್ಮೀರಿ ಇತಿಹಾಸಕಾರ ಮತ್ತು ಕವಿ ಜೋನರಾಜ ಹೇಳುವಂತೆ ಕಾಶ್ಮೀರದ ಶಾರದಾದೇವಿ ಪೀಠಕ್ಕೆ ಮುಸ್ಲಿಂ ಸುಲ್ತಾನ್ ಜೈನ್-ಉಲ್-ಅಬಿದಿನ್ 1422ರಲ್ಲಿ ಭೇಟಿ ನೀಡಿದ್ದ. ದೇವಿಯು ತನ್ನನ್ನು ನೋಡಲು ಬಾರದೆ ಇರುವ ಕಾರಣಕ್ಕೆ ಸುಲ್ತಾನನಿಗೆ ಸಿಟ್ಟು ಬಂದು ದೇವಾಲಯದ ಅಂಗಳದಲ್ಲಿ ಮಲಗಲು ನಿರ್ಧರಿಸಿದ. ಆತನ ಕನಸಿನಲ್ಲಿ ದೇವತೆ ಕಾಣಿಸಿಕೊಂಡಳು ಎಂದು ಹೇಳಿದ್ದಾರೆ.

ಈಗ ಹೇಗಿದೆ ?

ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಈ ಶಕ್ತಿ ಪೀಠ ಸದ್ಯ ಶಿಥಿಲಾವಸ್ಥೆಯಲ್ಲಿದೆ. ಇತಿಹಾಸ ಪ್ರಸಿದ್ಧ ಈ ದೇವಾಲಯದ ಪರಿಸ್ಥಿತಿ ಅತ್ಯಂತ ದುಃಖ ತರಿಸುವಂತಿದೆ. ಪಾಕಿಸ್ತಾನದಲ್ಲಿ ಉಂಟಾಗುವ ಗಲಭೆಗಳಿಂದ ಸಾಂಸ್ಕೃತಿಕ ಪರಂಪರೆಯ ಈ ದೇವಾಲಯದ ಗೋಡೆಗಳಿಗೆ ಹಾನಿಯಾಗಿದೆ.

ಏನು ಕ್ರಮ ?

ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ‘ಶಾರದಾ ಪೀಠ’ ದ ಸುರಕ್ಷತೆಗೆ ಕ್ರಮ ಕೈಗೊಳ್ಳುವಂತೆ ಪಾಕ್ ಸರ್ಕಾರಕ್ಕೆ ಯುನೆಸ್ಕೋ ಆಗ್ರಹಿಸಿದೆ. ಶಾರದಾ ಪೀಠದ ಕೆಲವು ಗೋಡೆಗಳನ್ನು ಉದ್ದೇಶಪೂರ್ವಕವಾಗಿ ಹಾನಿಗೊಳಿಸಲಾಗಿದೆ ಎಂದು ಮೊಹಮ್ಮದ್ ಅಮೀರ್ ರಶೀದ್ ಎಂಬವರು ಯುನೆಸ್ಕೊಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಈ ನಿಟ್ಟಿನಲ್ಲಿ ಯುನೆಸ್ಕೋ ಕ್ರಮ ಕೈಗೊಳ್ಳಬೇಕು ಮತ್ತು ಶಾರದಾ ಶಕ್ತಿ ಪೀಠದ ಸಂರಕ್ಷಣೆಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಶಾರದಾ ಶಕ್ತಿ ಪೀಠವನ್ನು ದುರಸ್ತಿ ಮಾಡಿ ಹಿಂದುಗಳಿಗೆ ಇಲ್ಲಿ ಪ್ರವೇಶಕ್ಕೆ ಅನುಮತಿ ನೀಡಲು “ಶಾರದಾವನ್ನು ಉಳಿಸಿ” ಸಮಿತಿಯನ್ನು ಕಾಶ್ಮೀರದಲ್ಲಿ ರಚಿಸಲಾಗಿದೆ.

Exit mobile version